ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತ ಮತ್ತು ಕೆನಡಾ ಉಭಯ ದೇಶಗಳಿಗೆ ಸಂಬಂಧಿಸಿದ ಎರಡು ಸ್ಮರಣಾರ್ಥ ಅಂಚೆಚೀಟಿಗಳನ್ನು ಜಂಟಿಯಾಗಿ ಹೊರತರಲು ಪರಸ್ಪರ ಸಮ್ಮತಿಸಿರುವ ವಿಷಯವನ್ನು ತಿಳಿಸಲಾಯಿತು. ಜಂಟಿ ಅಂಚೆಚೀಟಿಗಳನ್ನು 2017ರ ಸೆಪ್ಟೆಂಬರ್ 21ರಂದು ಬಿಡುಗಡೆಮಾಡಲಾಗುವುದು. ಈ ಸಂಬಂಧ ಅಂಚೆ ಇಲಾಖೆ ಹಾಗೂ ಕೆನಡಾ ಪೋಸ್ಟ್ ನಡುವೆ ಈಗಾಗಲೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ.
ಪ್ರಜಾಪ್ರಭುತ್ವ, ಬಹುತ, ಎಲ್ಲರಿಗೂ ಸಮಾನತೆ ಹಾಗೂ ದೇಶದಲ್ಲಿನ ಕಾನೂನು – ಈ ವಿಚಾರಗಳಲ್ಲಿನ ಸಮಾನ ಮೌಲ್ಯಗಳನ್ನು ಆಧರಿಸಿ ಭಾರತ ಮತ್ತು ಕೆನಡಾ ದೀರ್ಘಾವಧಿಯಿಂದ ನಿಕಟ ಸಂಬಂಧ ಹೊಂದಿವೆ. ಜನತೆ ಮತ್ತು ಜನತೆಯ ನಡುವಿನ ಸದೃಢ ಸಂಪರ್ಕ ಮತ್ತು ಕೆನಡಾದಲ್ಲಿ ಭಾರತೀಯ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವುದು ಉಭಯ ದೇಶಗಳ ನಡುವಿನ ಬಾಂಧವ್ಯಕ್ಕೆ ಭದ್ರ ಬುನಾದಿ ಕಲ್ಪಿಸಿವೆ.
ಈ ಜಂಟಿ ಅಂಚೆಚೀಟಿ ಬಿಡುಗಡೆಗೆ “ದೀಪಾವಳಿ” ಎರಡೂ ದೇಶಗಳಿಗೆ ಸಾಂಸ್ಕೃತಿಕ ವಿಷಯವಾಗಿ ಆಯ್ಕೆಯಾಗಿದೆ. ಕೆನಡಾದಲ್ಲಿ ಭಾರತೀಯ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ಪರಿಗಣಿಸಿ ಈ ವಿಷಯವನ್ನು ಆರಿಸಲಾಗಿದೆ.