Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ವಸತಿ ಯೋಜನೆ – ಗ್ರಾಮೀಣ (ಪಿಎಂಎವೈ-ಜಿ)ಮುಂದುವರಿಕೆಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಗ್ರಾಮೀಣಾಭಿವೃದ್ಧಿ ಇಲಾಖೆ ಸಲ್ಲಿಸಿದ್ದ ಪ್ರಧಾನ ಮಂತ್ರಿ ವಸತಿ ಯೋಜನೆ – ಗ್ರಾಮೀಣ (ಪಿಎಂ.ಎ.ವೈ. -ಜಿ) ಯನ್ನು ಮಾರ್ಚ್ 2021ರ ನಂತರವೂ ಮುಂದುವರಿಸುವ ಪ್ರಸ್ತಾವನೆಗೆ ತನ್ನ ಅನುಮೋದನೆ ನೀಡಿದೆ. ಇದರಲ್ಲಿ ಯೋಜನೆಯಡಿ ಹಾಕಿಕೊಂಡಿದ್ದ ಒಟ್ಟು 2.95 ಕೋಟಿ ಮನೆಗಳ ನಿರ್ಮಾಣದ ಗುರಿಯ ಪೈಕಿ 2021ರ ಮಾರ್ಚ್ 31ಕ್ಕೆ ಬಾಕಿ ಉಳಿದಿರುವ 155.75 ಲಕ್ಷ ಮನೆಗಳ ನಿರ್ಮಾಣಕ್ಕೆ ಆರ್ಥಿಕ ನೆರವು ಒದಗಿಸಲಾಗುವುದು.

ಸಂಪುಟ ನೀಡಿರುವ ಅನುಮೋದನೆಯ ವಿವರ ಈ ಕೆಳಕಂಡಂತಿದೆ: 

• ಒಟ್ಟು 2.95 ಕೋಟಿ ಮನೆಗಳ ಗುರಿಯ ಪೈಕಿ ಬಾಕಿ ಉಳಿದಿರುವ ಮನೆಗಳನ್ನು ಪೂರ್ಣಗೊಳಿಸಲು ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಮಾರ್ಚ್ 2021ರ ನಂತರ ಮಾರ್ಚ್ 2024ರವರೆಗೆ ಪಿಎಂ.ಎ.ವೈ.-ಜಿ ಅನ್ನು ಮುಂದುವರಿಸಲಾಗುವುದು.

• ಪಿಎಂಎವೈ-ಜಿ ಅಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 2.95 ಕೋಟಿ ಮನೆಗಳ ಒಟ್ಟು ಗುರಿಗಳನ್ನು ಸಾಧಿಸಲು ಬಾಕಿ ಉಳಿದ 155.75 ಲಕ್ಷ ಮನೆಗಳ ನಿರ್ಮಾಣಕ್ಕೆ ಒಟ್ಟು ಆರ್ಥಿಕ ಪರಿಣಾಮವು 2,17,257 ಕೋಟಿ ರೂ.ಗಳಾಗಿದೆ, (ಕೇಂದ್ರ ಪಾಲು 1,25,106 ಕೋಟಿ ರೂ. ಮತ್ತು ರಾಜ್ಯದ ಪಾಲು ರೂ. 73,475 ಕೋಟಿ ರೂ.ಗಳು) ಜೊತೆಗೆ ನಬಾರ್ಡ್ ಗೆ ಬಡ್ಡಿ ಮರುಪಾವತಿಗೆ ಹೆಚ್ಚುವರಿಯಾಗಿ 18,676 ಕೋಟಿ ರೂ. ಆಗುತ್ತದೆ.

• ಇ.ಬಿ.ಆರ್. ಅನ್ನು ಹಂತಹಂತವಾಗಿ ಹೊರಹಾಕುವುದು ಮತ್ತು ಒಟ್ಟು ಬಜೆಟ್ ಬೆಂಬಲ (ಜಿಬಿಎಸ್) ಮೂಲಕ ಸಂಪೂರ್ಣ ಯೋಜನೆಯ ಆರ್ಥಿಕ ನೆರವನ್ನು ಹಣಕಾಸು ಸಚಿವಾಲಯದೊಂದಿಗೆ ಸಮಾಲೋಚಿಸಿ ನಿರ್ಧರಿಸಲಾಗುವುದು.

• ವಾರ್ಷಿಕವಾಗಿ ಹೆಚ್ಚುವರಿ 45 ಲಕ್ಷ ರೂ. ಆಡಳಿತಾತ್ಮಕ ನಿಧಿಯನ್ನು ಪ್ರತಿ ಚಿಕ್ಕ ರಾಜ್ಯಕ್ಕೆ ಅಂದರೆ ಹಿಮಾಚಲ ಪ್ರದೇಶ, ಹರಿಯಾಣ, ಗೋವಾ, ಪಂಜಾಬ್, ಉತ್ತರಾಖಂಡ, ಅಸ್ಸಾಂ ಮತ್ತು ತ್ರಿಪುರಾ ಹೊರತುಪಡಿಸಿ ಈಶಾನ್ಯ ರಾಜ್ಯಗಳು ಮತ್ತು ಜೆ ಮತ್ತು ಕೆ ಹೊರತುಪಡಿಸಿ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳು ಶೇ.1.70ಕ್ಕಿಂತ ಹೆಚ್ಚಿನ ಆಡಳಿತಾತ್ಮಕ ನಿಧಿಗಳನ್ನು ಈ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಆಡಳಿತಾತ್ಮಕ ನಿಧಿಗಳ ಕೇಂದ್ರ ಪಾಲಿನಿಂದ (ಒಟ್ಟು ಶೇ.2ರ ಆಡಳಿತ ನಿಧಿಯ ಪೈಕಿ ಶೇ.0.3) ಬಿಡುಗಡೆ ಮಾಡುವುದು.

• ಕಾರ್ಯಕ್ರಮ ನಿರ್ವಹಣೆ ಘಟಕ (ಪಿಎಂ.ಯು.) ಮತ್ತು ರಾಷ್ಟ್ರೀಯ ತಾಂತ್ರಿಕ ಬೆಂಬಲ ಸಂಸ್ಥೆ (ಎನ್.ಟಿ.ಎಸ್.ಎ.)ಯನ್ನು 2023-24ರ ಹಣಕಾಸು ವರ್ಷದವರೆಗೆ ಮುಂದುವರಿಸಲಾಗುವುದು.

ಪ್ರಯೋಜನಗಳು:

ಮಾರ್ಚ್, 2024ರವರೆಗೆ ಯೋಜನೆಯ ಮುಂದುವರಿಕೆಯು ಪಿಎಂಎವೈ-ಜಿ ಅಡಿಯಲ್ಲಿ 2.95 ಕೋಟಿ ಮನೆಗಳ ಒಟ್ಟಾರೆ ಗುರಿಯ ಪೈಕಿ ಬಾಕಿ ಉಳಿದಿರುವ 155.75 ಲಕ್ಷ ಕುಟುಂಬಗಳಿಗೆ ಗ್ರಾಮೀಣ ಪ್ರದೇಶದಲ್ಲಿ “ಸರ್ವರಿಗೂ ಸೂರು” ಉದ್ದೇಶವನ್ನು ಸಾಧಿಸಲು ಮೂಲ ಸೌಕರ್ಯಗಳೊಂದಿಗೆ ಪಕ್ಕಾ ಮನೆಗಳ ನಿರ್ಮಾಣಕ್ಕೆ ನೆರವು ನೀಡಲಾಗುತ್ತದೆ ಎಂದು ಖಚಿತಪಡಿಸುತ್ತದೆ. 

2.95 ಕೋಟಿ ಮನೆಯ ಗುರಿಯ ಪೈಕಿ 2021ರ ನವೆಂಬರ್ 29ರಲ್ಲಿದ್ದಂತೆ 1.65 ಕೋಟಿ ಪಿಎಂಎವೈ-ಜಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಎಸ್ಇಸಿಸಿ 2011 ದತ್ತಾಂಶ ಆಧಾರಿತವಾಗಿ 2.02 ಕೋಟಿ ಮನೆಗಳು 2022ರ ಆಗಸ್ಟ್ 15ರ ಗಡುವಿನೊಳಗೆ ಪೂರ್ಣಗೊಳ್ಳಲಿವೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ, ಒಟ್ಟು 2.95 ಕೋಟಿ ಮನೆಗಳ ಗುರಿಯನ್ನು ಸಾಧಿಸಲು, ಯೋಜನೆಯನ್ನು ಮಾರ್ಚ್, 2024 ರವರೆಗೆ ಮುಂದುವರಿಸಬೇಕಾಗಿದೆ.

***