Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಜುಲೈ, 2024 ರಿಂದ ಡಿಸೆಂಬರ್, 2028 ರವರೆಗೆ ಉಚಿತ ಪೋಷಕಾಂಶ ವರ್ಧಿತ ಅಕ್ಕಿ ಪೂರೈಕೆಯನ್ನು ಮುಂದುವರಿಸಲು ಸಂಪುಟ ಅನುಮೋದಿಸಿದೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಜುಲೈ, 2024 ರಿಂದ ಡಿಸೆಂಬರ್, 2028 ರವರೆಗೆ ಉಚಿತ ಪೋಷಕಾಂಶ ವರ್ಧಿತ ಅಕ್ಕಿಯ ಸಾರ್ವತ್ರಿಕ ಪೂರೈಕೆಯನ್ನು ಪ್ರಸ್ತುತ ರೂಪದಲ್ಲಿಯೇ ಮುಂದುವರಿಸಲು ಅನುಮೋದನೆ ನೀಡಿದೆ.

ಅಕ್ಕಿಯ ಪೋಷಕಾಂಶ ವರ್ಧನೆ ಉಪಕ್ರಮವು ಪಿಎಂಜಿಕೆಎವೈ (ಆಹಾರ ಸಬ್ಸಿಡಿ)ಯ ಭಾಗವಾಗಿ ಭಾರತ ಸರ್ಕಾರದಿಂದ ಶೇ.100 ರಷ್ಟು ಧನಸಹಾಯದೊಂದಿಗೆ ಕೇಂದ್ರ ವಲಯದ ಉಪಕ್ರಮವಾಗಿ ಮುಂದುವರಿಯುತ್ತದೆ, ಹೀಗಾಗಿ ಅನುಷ್ಠಾನಕ್ಕೆ ಏಕೀಕೃತ ಸಾಂಸ್ಥಿಕ ಕಾರ್ಯವಿಧಾನವನ್ನು ಒದಗಿಸುತ್ತದೆ.

ಅದರಂತೆ, ದೇಶದಲ್ಲಿ ಪೌಷ್ಟಿಕಾಂಶದ ಭದ್ರತೆಯ ಅಗತ್ಯತೆಯ ಕುರಿತು 75 ನೇ ಸ್ವಾತಂತ್ರ್ಯ ದಿನದಂದು ಪ್ರಧಾನ ಮಂತ್ರಿಯವರು ಮಾಡಿದ ಭಾಷಣಕ್ಕೆ ಅನುಗುಣವಾಗಿ, “ರಕ್ತಹೀನತೆ ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ಪರಿಹರಿಸಲು ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ (ಟಿಪಿಡಿಎಸ್), ಇತರ ಕಲ್ಯಾಣ ಯೋಜನೆಗಳು, ಸಮಗ್ರ ಶಿಶು ಅಭಿವೃದ್ಧಿ ಸೇವೆಗಳು (ಐಸಿಡಿಎಸ್). ಪ್ರಧಾನಮಂತ್ರಿ ಪೋಷಣಾ (ಹಿಂದಿನ ಎಂಡಿಎಂ) ಇತ್ಯಾದಿ ಮೂಲಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೋಷಕಾಂಶ ವರ್ಧಿತ ಅಕ್ಕಿ ಸರಬರಾಜು ಉಪಕ್ರಮವನ್ನು ಪ್ರಾರಂಭಿಸಲಾಯಿತು. ಏಪ್ರಿಲ್ 2022 ರಲ್ಲಿ, ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು  ಮಾರ್ಚ್ 2024 ರ ವೇಳೆಗೆ ದೇಶದಾದ್ಯಂತ ಹಂತ ಹಂತವಾಗಿ ಅಕ್ಕಿಯ ಪೋಷಕಾಂಶ ವರ್ಧನೆ ಉಪಕ್ರಮವನ್ನು ಜಾರಿಗೆ ತರಲು ನಿರ್ಧರಿಸಿತು. ಎಲ್ಲಾ ಮೂರು ಹಂತಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ ಮತ್ತು ಮಾರ್ಚ್ 2024 ರೊಳಗೆ ಸರ್ಕಾರದ ಎಲ್ಲಾ ಯೋಜನೆಗಳಾದ್ಯಂತ ಪೋಷಕಾಂಶ ವರ್ಧಿತ ಅಕ್ಕಿ ಪೂರೈಕೆಯಲ್ಲಿ ಸಾರ್ವತ್ರಿಕ ವ್ಯಾಪ್ತಿಯ ಗುರಿಯನ್ನು ಸಾಧಿಸಲಾಗಿದೆ.

2019 ಮತ್ತು 2021 ರ ನಡುವೆ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5) ಪ್ರಕಾರ, ರಕ್ತಹೀನತೆಯು ಭಾರತದಲ್ಲಿ ವ್ಯಾಪಕವಾದ ಸಮಸ್ಯೆಯಾಗಿ ಉಳಿದಿದೆ, ಇದು ವಿವಿಧ ವಯಸ್ಸಿನ ಗುಂಪುಗಳು ಮತ್ತು ಆದಾಯ ಮಟ್ಟಗಳಲ್ಲಿ ಮಕ್ಕಳು, ಮಹಿಳೆಯರು ಮತ್ತು ಪುರುಷರ ಮೇಲೆ ಪರಿಣಾಮ ಬೀರಿದೆ. ಕಬ್ಬಿಣದ ಕೊರತೆಯ ಜೊತೆಗೆ, ವಿಟಮಿನ್ ಬಿ 12 ಮತ್ತು ಫೋಲಿಕ್ ಆಮ್ಲದಂತಹ ಇತರ ವಿಟಮಿನ್ ಮತ್ತು ಖನಿಜಗಳ ಕೊರತೆಯು ಸಹ ಮುಂದುವರಿದಿದೆ, ಇದು ಜನಸಂಖ್ಯೆಯ ಒಟ್ಟಾರೆ ಆರೋಗ್ಯ ಮತ್ತು ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ.

ದುರ್ಬಲ ಜನಸಂಖ್ಯೆಯಲ್ಲಿ ರಕ್ತಹೀನತೆ ಮತ್ತು ಸೂಕ್ಷ್ಮ ಪೋಷಕಾಂಶಗಳ ಅಪೌಷ್ಟಿಕತೆಯನ್ನು ಪರಿಹರಿಸಲು ಆಹಾರದಲ್ಲಿ ಪೋಷಕಾಂಶ ಬಲವರ್ಧನೆಯು ಜಾಗತಿಕವಾಗಿ ಸುರಕ್ಷಿತ ಮತ್ತು ಪರಿಣಾಮಕಾರಿ ಕ್ರಮವಾಗಿ ಬಳಸಲಾಗುತ್ತದೆ. ಭಾರತದ ಸಂದರ್ಭದಲ್ಲಿ ಶೇ.65 ರಷ್ಟು ಜನಸಂಖ್ಯೆಯು ಅಕ್ಕಿಯನ್ನು ಪ್ರಧಾನ ಆಹಾರವಾಗಿ ಸೇವಿಸುವುದರಿಂದ ಅಕ್ಕಿಯು ಸೂಕ್ಷ್ಮ ಪೋಷಕಾಂಶಗಳನ್ನು ಪೂರೈಸಲು ಸೂಕ್ತವಾದ ಸಾಧನವಾಗಿದೆ. ಸಾಮಾನ್ಯ ಅಕ್ಕಿಗೆ (ಕಸ್ಟಮ್ ಮಿಲ್ಡ್ ರೈಸ್) ಎಫ್‌ ಎಸ್‌ ಎಸ್‌ ಎ ಐ ಸೂಚಿಸಿದ ಮಾನದಂಡಗಳ ಪ್ರಕಾರ ಮೈಕ್ರೊನ್ಯೂಟ್ರಿಯೆಂಟ್‌ ಗಳಿಂದ (ಕಬ್ಬಿಣ, ಫೋಲಿಕ್ ಆಮ್ಲ, ವಿಟಮಿನ್ ಬಿ 12) ಸಮೃದ್ಧವಾಗಿರುವ ಪೋಷಕಾಂಶ ವರ್ಧಿತ ಅಕ್ಕಿ ಕಾಳುಗಳನ್ನು (ಎಫ್‌ ಆರ್‌ ಕೆ) ಸೇರಿಸುವುದನ್ನು ಅಕ್ಕಿ ಸಾರವರ್ಧನೆ ಒಳಗೊಂಡಿರುತ್ತದೆ.

 

*****