Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ) ಯನ್ನು ಇನ್ನೂ ನಾಲ್ಕು ತಿಂಗಳವರೆಗೆ (ಡಿಸೆಂಬರ್ 2021-ಮಾರ್ಚ್ 2022) ವಿಸ್ತರಿಸಲು ಸಂಪುಟ ಅನುಮೋದನೆ


ಪ್ರಧಾನಮಂತ್ರಿಯವರು 07.06.2021ರಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಕಟಿಸಿದ ಜನಪರ ಘೋಷಣೆಯ ಅನುಸಾರ ಮತ್ತು ಕೋವಿಡ್ -19ರ ಆರ್ಥಿಕ ಸಂಕಷ್ಟ ಸ್ಪಂದನೆಯ ಭಾಗವಾಗಿ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ-ಹಂತ 5) ಅನ್ನು ಇನ್ನೂ 4 ತಿಂಗಳ ಅವಧಿಗೆ ಅಂದರೆ 2021 ಡಿಸೆಂಬರ್ ನಿಂದ 2022 ಮಾರ್ಚ್ ವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ ಎಫ್ ಎಸ್ ಎ) [ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತೆಯ ಕುಟುಂಬಗಳು] ಮತ್ತು ನೇರ ಸವಲತ್ತು ಯೋಜನೆ ವ್ಯಾಪ್ತಿಗೆ ಬರುವವರು (ಡಿಬಿಟಿ) ಸೇರಿದಂತೆ ವ್ಯಾಪ್ತಿಗೆ ಬರುವ ಎಲ್ಲಾ ಫಲಾನುಭವಿಗಳಿಗೆ ತಿಂಗಳಿಗೆ ಪ್ರತಿ ವ್ಯಕ್ತಿಗೆ 5 ಕೆಜಿಯಂತೆ ಉಚಿತವಾಗಿ ಆಹಾರ ಧಾನ್ಯ ನೀಡಲು ಕೇಂದ್ರ ಸಚಿವ ಸಂಪುಟವು ತನ್ನ ಅನುಮೋದನೆ ನೀಡಿದೆ. 

ಈ ಯೋಜನೆಯ ಹಂತ-1 ಮತ್ತು ಹಂತ-2 ಕ್ರಮವಾಗಿ ಏಪ್ರಿಲ್ ನಿಂದ ಜೂನ್, 2020 ಮತ್ತು ಜುಲೈ ನಿಂದ ನವೆಂಬರ್, 2020 ರವರೆಗೆ ಕಾರ್ಯಗತವಾಗಿತ್ತು. ಯೋಜನೆಯ ಮೂರನೇ ಹಂತವು ಮೇ ನಿಂದ ಜೂನ್, 2021 ರವರೆಗೆ ಕಾರ್ಯಗತವಾಗಿತ್ತು. ಯೋಜನೆಯ ನಾಲ್ಕನೇ ಹಂತವು ಪ್ರಸ್ತುತ ಜುಲೈ-ನವೆಂಬರ್, 2021ರವರೆಗಿನ ತಿಂಗಳುಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

2021ರ ಡಿಸೆಂಬರ್ ನಿಂದ 2022ರ ಮಾರ್ಚ್ ವರೆಗೆ 5ನೇ ಹಂತದ ಪಿಎಂಜಿಕೆಎವೈ ಯೋಜನೆಯು ಅಂದಾಜು 53344.52 ಕೋಟಿ ರೂ.ಗಳ ಹೆಚ್ಚುವರಿ ಆಹಾರ ಸಬ್ಸಿಡಿಯನ್ನು ಒಳಗೊಂಡಿರುತ್ತದೆ.

ಪಿಎಂಜಿಕೆಎವೈ ಹಂತ 5 ರಲ್ಲಿ ಸುಮಾರು ಒಟ್ಟು 163 ಎಲ್.ಎಂ.ಟಿ ಆಹಾರ-ಧಾನ್ಯಗಳು ಹೊರಹೋಗುವ ನಿರೀಕ್ಷೆ ಇದೆ.

ಕಳೆದ ವರ್ಷ ಹಿಂದೆಂದೂ ಕಂಡರಿಯದ ರೀತಿಯಲ್ಲಿ ದೇಶದಲ್ಲಿ ಕೋವಿಡ್-19 ಕಾಣಿಸಿಕೊಂಡಾಗ ಉಂಟಾದ ಆರ್ಥಿಕ ಅಡಚಣೆಗಳ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂ-ಜಿಕೆಎವೈ) ಅಡಿಯಲ್ಲಿ ತಿಂಗಳಿಗೆ ಪ್ರತಿ ವ್ಯಕ್ತಿಗೆ 5 ಕೆ.ಜಿ.ಯಂತೆ ಸುಮಾರು 80 ಕೋಟಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್.ಎಫ್.ಎಸ್.ಎ) ಫಲಾನುಭವಿಗಳಿಗೆ ಹೆಚ್ಚುವರಿಯಾಗಿ ಉಚಿತ ಆಹಾರ ಧಾನ್ಯಗಳನ್ನು (ಅಕ್ಕಿ/ಗೋಧಿ) ವಿತರಿಸುವುದಾಗಿ ಸರ್ಕಾರ 2020ರ ಮಾರ್ಚ್ ನಲ್ಲಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದು ಎನ್.ಎಫ್.ಎಸ್.ಎ. ಅಡಿಯಲ್ಲಿ ಮಾಸಿಕ ನೀಡಲಾಗುವ ನಿಯಮಿತ ಆಹಾರಧಾನ್ಯಕ್ಕಿಂತ ಅಂದರೆ, ಅವರ ಪಡಿತರ ಚೀಟಿಯ ನಿಯಮಿತ ಅರ್ಹತೆಗಿಂತ ಹೆಚ್ಚುವರಿಯಾಗಿದೆ. ಹೀಗಾಗಿ,ಬಡವರು ಮತ್ತು ಅಗತ್ಯ ಇರುವವರು ದುರ್ಬಲ ಕುಟುಂಬದ/ ಫಲಾನುಭವಿಗಳು ಆರ್ಥಿಕ ಸಂಕಷ್ಟದ ಕಾಲದಲ್ಲಿ ಸೂಕ್ತ ಪ್ರಮಾಣದ ಆಹಾರಧಾನ್ಯ ಸಿಗದೆ ಪರಿತಪಿಸದಂತೆ ಮಾಡಲಾಯಿತು. ಈವರೆಗೆ ಪಿಎಂಜಿಕೆಎವೈ (ಹಂತ I ರಿಂದIVರವರೆಗೆ) ಇಲಾಖೆಯು ಒಟ್ಟು ಸುಮಾರು 600 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸುಮಾರು 2.07ಲಕ್ಷ ಕೋಟಿ ರೂಪಾಯಿ ಆಹಾರ ಸಬ್ಸಿಡಿಗೆ ಸಮನಾದ ಆಹಾರಧಾನ್ಯ ಹಂಚಿಕೆ ಮಾಡಿದೆ. 

ಪಿಎಂಜಿಕೆಎವೈ-4 ರ ಅಡಿಯಲ್ಲಿ ವಿತರಣೆಯು ಪ್ರಸ್ತುತ ನಡೆಯುತ್ತಿದ್ದು, ಇಲ್ಲಿಯವರೆಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಲಭ್ಯವಿರುವ ವರದಿಗಳ ಪ್ರಕಾರ, ಶೇ. 93.8 ಆಹಾರ ಧಾನ್ಯಗಳನ್ನು ಎತ್ತವಳಿ ಮಾಡಲಾಗಿದೆ ಮತ್ತು ಸುಮಾರು 37.32 ಎಲ್.ಎಂಟಿ (ಜುಲೈ 21 ರಲ್ಲಿ ಶೇ.93.9 ), 37.20 ಎಲ್.ಎಂಟಿ (ಆಗಸ್ಟ್ 21 ರಲ್ಲಿ ಶೇ.93.6), 36.87 ಎಲ್.ಎಂಟಿ (ಸೆಪ್ಟಂಬರ್ 21ರಲ್ಲಿ ಶೇ.92.8), 35.4 ಎಲ್.ಎಂ.ಟಿ (ಅಕ್ಟೋಬರ್ 21ರಲ್ಲಿ ಶೇ.89) ಮತ್ತು 17.9 ಎಲ್.ಎಂ.ಟಿ (ನವೆಂಬರ್ 21ರಲ್ಲಿ ಶೇ.45) ಆಹಾರ ಧಾನ್ಯಗಳನ್ನು ಸುಮಾರು 74.64 ಕೋಟಿಯಷ್ಟು ವಿತರಿಸಲಾಗಿದೆ. 74.4 ಕೋಟಿ, 73.75 ಕೋಟಿ, 70.8 ಕೋಟಿ ಮತ್ತು 35.8 ಕೋಟಿ ಫಲಾನುಭವಿಗಳು ಅನುಕ್ರಮವಾಗಿ ಪ್ರಯೋಜನ ಪಡೆದಿದ್ದಾರೆ. 

ಹಿಂದಿನ ಹಂತಗಳ ಅನುಭವದ ಪ್ರಕಾರ, ಪಿಎಂಜಿಕೆಎವೈ-5ರ ಕಾರ್ಯಕ್ಷಮತೆಯೂ ಈ ಮೊದಲು ಸಾಧಿಸಿದ ಅದೇ ಉನ್ನತ ಮಟ್ಟದಲ್ಲಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಒಟ್ಟಾರೆಯಾಗಿ, ಪಿಎಂಜಿಕೆಎವೈ ಹಂತ 1- 5ರಲ್ಲಿ ಸುಮಾರು 2.60 ಲಕ್ಷ ಕೋಟಿ ರೂ.ಗಳ ವೆಚ್ಚವನ್ನು ಸರ್ಕಾರ ಭರಿಸಲಿದೆ.

***