ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ [ಹಂತ 4] ಯಡಿ 2021 ರ ಜುಲೈ ನಿಂದ ನವೆಂಬರ್ ವರೆಗೆ ಮತ್ತೆ ಐದು ತಿಂಗಳ ಅವಧಿಗೆ ಹೆಚ್ಚುವರಿ ಆಹಾರ ಧಾನ್ಯ ಮಂಜೂರು ಮಾಡುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. 81.35 ಕೋಟಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ [ಎನ್.ಎಫ್.ಎಸ್.ಎ] [ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಕುಟುಂಬಗಳಿಗೆ] ನೇರ ಸೌಲಭ್ಯ ವರ್ಗಾವಣೆ ವ್ಯವಸ್ಥೆಗೆ ಒಳಪಡುವ ಪ್ರತಿಯೊಬ್ಬರಿಗೂ ತಲಾ 5 ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ.
81,35 ಕೋಟಿ ವ್ಯಕ್ತಿಗಳಿಗೆ ಟಿಪಿಡಿಎಸ್ ನಡಿ ತಲಾ 5 ಕೆ.ಜಿ.ಯಂತೆ ಐದು ತಿಂಗಳ ಅವಧಿಗೆ ಹೆಚ್ಚುವರಿಯಾಗಿ ಉಚಿತ ಆಹಾರ ಧಾನ್ಯ ಮಂಜೂರು ಮಾಡುತ್ತಿದ್ದು, ಆಹಾರ ಸಬ್ಸಿಡಿಗಾಗಿ 64,031 ಕೋಟಿ ರೂಪಾಯಿ ಅಂದಾಜು ಮಾಡಲಾಗಿದೆ.
ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತಿದ್ದು, ಇದರಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಯಾವುದೇ ಕೊಡುಗೆ ಇಲ್ಲ. ಆಹಾರ ಧಾನ್ಯಗಳ ಸಾಗಾಣಿಕೆ, ನಿರ್ವಹಣೆ ಮತ್ತು ಇಪಿಎಸ್ ಡೀಲರ್ ಗಳಿಗೆ ಅಂಚು ನೆರವು ನೀಡುವ ಉದ್ದೇಶದಿಂದ ಸರ್ಕಾರಕ್ಕೆ ಹೆಚ್ಚುವರಿಯಾಗಿ 3,234,85 ಕೋಟಿ ರೂಪಾಯಿ ಹೊರೆ ಬೀಳಲಿದೆ. ಇದರಿಂದಾಗಿ ಕೇಂದ್ರ ಸರ್ಕಾರ ಒಟ್ಟು ಅಂದಾಜು 62,266.44 ಕೋಟಿ ರೂಪಾಯಿ ಭರಿಸಲಿದೆ.
ಗೋಧಿ/ ಅಕ್ಕಿ ಯಾವ ಆಹಾರ ಧಾನ್ಯ ಮಂಜೂರು ಮಾಡಬೇಕು ಎನ್ನುವುದನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತೀರ್ಮಾನಿಸಲಿದೆ. ಇದಲ್ಲದೇ ಹಂತ 3 ಮತ್ತು ಹಂತ 4 ರಡಿ ಆಹಾರ ಧಾನ್ಯ ಎತ್ತುವಳಿ/ ಪೂರೈಕೆ, ಕಾರ್ಯಾಚರಣೆಯ ಅಗತ್ಯಗಳು, ಮುಂಗಾರು, ಹಿಮಪಾತದಂತಹ ಪ್ರತಿಕೂಲ ಹವಾಮಾನ ಪರಿಸ್ಥಿತಿ, ಕೋವಿಡ್ ಪ್ರೇರಿತ ನಿರ್ಬಂಧಗಳು, ಪೂರೈಕೆ ಸರಪಳಿ ಕುರಿತು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಗತ್ಯಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಲಿದೆ.
ಒಟ್ಟು ಅಂದಾಜು 204 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದೆ. ಕೊರೋನಾ ಸೋಂಕಿನಿಂದಾಗಿ ಉಂಟಾಗುವ ಆರ್ಥಿಕ ಅಡ್ಡಿಗಳಿಂದಾಗಿ ಬಡವರು ಎದುರಿಸುತ್ತಿರುವ ಕಷ್ಟಗಳನ್ನು ನಿವಾರಿಸಲು ಹೆಚ್ಚುವರಿ ಆಹಾರ ಧಾನ್ಯ ಮಂಜೂರು ಮಾಡಲಾಗಿದೆ. ಯಾವುದೇ ಬಡ ಕುಟುಂಬ ಆಹಾರ ಧಾನ್ಯಗಳು ಲಭ್ಯವಿಲ್ಲದ ಕಾರಣ ತೊಂದರೆ ಎದುರಿಸಬಾರದು ಎನ್ನುವ ಕಾರಣದಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
****