Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಅವರು ಕೋವಿಡ್ -19 ವಿರುದ್ಧದ ಭಾರತದ ಹೋರಾಟಕ್ಕೆ ಸಂಬಂಧಿಸಿದವರೊಡನೆ ಸಮಾಲೋಚನೆಗಳನ್ನು ಮುಂದುವರಿಸಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೋವಿಡ್ -19 ವಿರುದ್ಧದ ಭಾರತದ ಹೋರಾಟಕ್ಕೆ ಸಂಬಂಧಿಸಿದವರೊಡನೆ ಸಮಾಲೋಚನೆಗಳನ್ನು ಮುಂದುವರಿಸಲಿದ್ದಾರೆ.

ಶ್ರೀ ಮೋದಿ ಅವರು, ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ನಾನಾ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಭಾರತದ ಕಂಪನಿಗಳ ಜೊತೆ ಸೋಂಕು ನಿಯಂತ್ರಣ ಕುರಿತ ಪ್ರಯತ್ನಗಳ ಬಗ್ಗೆ ಚರ್ಚಿಸಿದರು.

ನಿರಂತರ ಸಂವಾದಗಳು ಮತ್ತು ಸಭೆಗಳು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜನವರಿಯಿಂದೀಚೆಗೆ ಕೋವಿಡ್ -19 ವಿರುದ್ಧ ಹೋರಾಡುವ ಮಾರ್ಗೋಪಾಯಗಳ ಬಗ್ಗೆ ಅಧಿಕಾರಿಗಳು ಮತ್ತು ಸಮಾಜದ ನಾನಾ ವರ್ಗದ ಜನರೊಂದಿಗೆ ಹಲವು ಸುತ್ತಿನ ಸಭೆಗಳು ಮತ್ತು ಸಮಾಲೋಚನೆಗಳನ್ನು ನಡೆಸಿದ್ದಾರೆ.
ಪ್ರಧಾನಮಂತ್ರಿ ಅವರು, ಪ್ರತಿ ದಿನವೂ ಸಭೆಗಳನ್ನು ನಡೆಸುತ್ತಿದ್ದು, ಅಲ್ಲಿ ಅವರು ನಿರಂತರವಾಗಿ ಸಂಪುಟ ಕಾರ್ಯದರ್ಶಿಗಳಿಂದ ಮತ್ತು ಪ್ರಧಾನಮಂತ್ರಿ ಕಾರ್ಯಾಲಯದ ಪ್ರಧಾನ ಕಾರ್ಯದರ್ಶಿಗಳಿಂದ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತಿದ್ದಾರೆ.

ಪ್ರಧಾನಮಂತ್ರಿ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಚಿವರ ಉನ್ನತ ಮಟ್ಟದ ಸಮಿತಿಯಿಂದ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದಾರೆ.

ಉದಾಹರಣೆ ಮೂಲಕ ಮಾದರಪ್ರಧಾನಮಂತ್ರಿ ಅವರು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಾಗಿ ಈ ಬಾರಿಯ ಹೋಳಿ ಆಚರಣೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾಗಿ ಪ್ರಕಟಿಸಿದರು.

ರಾಷ್ಟ್ರವನ್ನುದ್ದೇಶಿಸಿ ಭಾಷಣ – ಜನತಾ ಕರ್ಫ್ಯೂ

ಕೋವಿಡ್ -19 ವಿರುದ್ಧ ಹೋರಾಡಲು ದೇಶವನ್ನು ಸಜ್ಜುಗೊಳಿಸುವ ಸಲುವಾಗಿ ಪ್ರಧಾನಮಂತ್ರಿ ಶ್ರೀ ಅವರು, 2020ರ ಮಾರ್ಚ್ 19ರಂದು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿ, 2020ರ ಮಾರ್ಚ್ 22ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ 14 ಗಂಟೆಗಳ ಕಾಲ ಜನತಾ ಕರ್ಫ್ಯೂ ನಲ್ಲಿ ಜನರು ಸ್ವಯಂ ಪ್ರೇರಿತವಾಗಿ ಭಾಗವಹಿಸಬೇಕೆಂದು ಕರೆ ನೀಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದೇಶಕ್ಕೆ ಎರಡು ಮಂತ್ರಗಳನ್ನು ನೀಡಿದರು, ಕೊರೋನಾ ವಿರುದ್ಧ ಹೋರಾಟಕ್ಕೆ “ನಿಶ್ಚಯಿಸಿ ಮತ್ತು ಸಂಯಮ ಕಾಯ್ದುಕೊಳ್ಳಿ” ಎಂದರು.

ಪ್ರಧಾನಮಂತ್ರಿ ಅವರು, ತಮ್ಮ ಭಾಷಣದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಆತಂಕಪಡಬೇಡಿ ಎಂದು ಜನತೆಗೆ ಮನವಿ ಮಾಡಿದರು ಮತ್ತು ಅಗತ್ಯ ವಸ್ತುಗಳ ಪೂರೈಕೆ ನಿರಂತರವಾಗಿರಲಿದೆ ಎಂದು ಭರವಸೆ ನೀಡಿದರು.

ಕೋವಿಡ್ -19 ಆರ್ಥಿಕ ಪ್ರತಿಸ್ಪಂದನಾ ಕಾರ್ಯಪಡೆ

ಈ ಸಾಂಕ್ರಾಮಿಕ ರೋಗದಿಂದ ಆಗುವ ಆರ್ಥಿಕ ಸವಾಲುಗಳನ್ನು ಎದುರಿಸಲು ಪ್ರಧಾನಮಂತ್ರಿ ಶ್ರೀ ಅವರು, ಕೇಂದ್ರ ಹಣಕಾಸು ಸಚಿವರ ನೇತೃತ್ವದಲ್ಲಿ ‘ಕೋವಿಡ್ -19 ಆರ್ಥಿಕ ಪ್ರತಿಸ್ಪಂದನಾ ಕಾರ್ಯಪಡೆ’ ರಚಿಸಲಾಗುವುದು ಎಂದು ಪ್ರಕಟಿಸಿದರು. ಈ ಕಾರ್ಯಪಡೆ ಸಂಬಂಧಿಸಿದ ಎಲ್ಲರೊಡನೆ ಸಮಾಲೋಚನೆ ನಡೆಸಿ, ಅವರ ಪ್ರತಿಕ್ರಿಯೆ ಪಡೆದು, ಅವುಗಳನ್ನು ಆಧರಿಸಿ ಸವಾಲುಗಳನ್ನು ಎದುರಿಸಲು ನಿರ್ಧಾರಗಳನ್ನು ಕೈಗೊಳ್ಳಲಿದೆ. ಅಲ್ಲದೆ ಕಾರ್ಯಪಡೆ ಸವಾಲುಗಳನ್ನು ಎದುರಿಸಲು ಕೈಗೊಳ್ಳುವ ನಿರ್ಧಾರಗಳನ್ನು ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಿದೆ.

ಪ್ರಧಾನಮಂತ್ರಿ ಅವರು, ವ್ಯಾಪಾರಿ ಸಮುದಾಯ ಮತ್ತು ಉತ್ತಮ ಆದಾಯವಿರುವಂತಹ ಕುಟುಂಬಗಳು ಸಮಾಜದ ಕೆಳಸ್ತರದ ಹಾಗೂ ಅನೇಕ ಸೇವೆಗಳನ್ನು ಪಡೆಯುವವರ ಆರ್ಥಿಕ ಅಗತ್ಯತೆಗಳನ್ನು ನೋಡಿಕೊಳ್ಳುವಂತೆ ಪ್ರಧಾನಿ ಕರೆ ನೀಡಿದರು. ಅಲ್ಲದೆ ದುಡಿಯುವ ಸ್ಥಳಕ್ಕೆ ಬರಲು ಸಾಧ್ಯವಾಗದೇ ಇದ್ದವರ ಸೇವೆಗೆ ವೇತನವನ್ನೂ ಕಡಿತಗೊಳಿಸಬಾರದು ಎಂದು ಅವರು ಆಗ್ರಹಿಸಿದರು. ಇಂತಹ ಸಮಯದಲ್ಲಿ ಮಾನವೀಯತೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಅವರು ಪ್ರತಿಪಾದಿಸಿದರು.

ಫಾರ್ಮ ವಲಯದೊಂದಿಗೆ ಸಭೆ

ನಿರಂತರ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಪೂರೈಕೆಯನ್ನೂ ಕಾಯ್ದುಕೊಳ್ಳುವ ಪ್ರಯತ್ನವಾಗಿ ಪ್ರಧಾನಮಂತ್ರಿ ಅವರು, 2020ರ ಮಾರ್ಚ್ 21ರಂದು ಫಾರ್ಮ ವಲಯದ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಪ್ರಧಾನಿ ಅವರು ತಮ್ಮ ಸಂವಾದದಲ್ಲಿ ಕೋವಿಡ್ -19 ವಿರುದ್ಧ ಸಮರೋಪಾದಿಯಲ್ಲಿ ಹೋರಾಡಲು ಆರ್ ಎನ್ ಎ ಪರೀಕ್ಷಾ ಕಿಟ್ ಗಳನ್ನು ಉತ್ಪಾದಿಸಲು ಫಾರ್ಮ ಉದ್ಯಮದವರನ್ನು ಕೋರಿದರು. ದೇಶದಲ್ಲಿ ಎಪಿಐಗಳ ಉತ್ಪಾದನೆ ಮತ್ತು ಪೂರೈಕೆಯನ್ನು ಕಾಯ್ದುಕೊಳ್ಳಲು ಸರ್ಕಾರ ಬದ್ಧವಿದೆ ಎಂದು ಪ್ರಧಾನಿ ಭರವಸೆ ನೀಡಿದರು.

ಅಗತ್ಯ ಔಷಧಗಳ ಪೂರೈಕೆಯನ್ನು ಕಾಯ್ದುಕೊಳ್ಳುವುದು ಮತ್ತು ಕಾಳಸಂತೆಯಲ್ಲಿ ಔಷಧಗಳ ಮಾರಾಟ ಮತ್ತು ದಾಸ್ತಾನು ತಪ್ಪಿಸುವುದು ಅತ್ಯಂತ ಪ್ರಮುಖವಾದುದು ಎಂದು ಅವರು ನಿರ್ದೇಶಿಸಿದರು.

ರಾಜ್ಯಗಳ ಜೊತೆ ಒಗ್ಗೂಡಿ ಕೆಲಸ

ಪ್ರಧಾನಮಂತ್ರಿ ಅವರು ಮಾರ್ಚ್ 20ರಂದು ದೇಶದ ಎಲ್ಲ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ, ಸವಾಲನ್ನು ಎದುರಿಸಲು ಎಲ್ಲರೂ ಒಗ್ಗೂಡಿ ಹೋರಾಟ ನಡೆಸಲು ಕರೆ ನೀಡಿದರು. ಸೋಂಕು ಹರಡುವುದನ್ನು ತಡೆಯಲು ನಿರಂತರ ನಿಗಾ ಮತ್ತು ಮೇಲ್ವಿಚಾರಣೆಗೆ ಕರೆ ನೀಡಿದ ಪ್ರಧಾನಮಂತ್ರಿ ಅವರು, ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ರಾಜ್ಯಗಳು ಒಗ್ಗೂಡಿ ಕೆಲಸ ಮಾಡಬೇಕು ಎಂದು ಹೇಳಿದರು.

ಸೋಂಕು ಹರಡುವುದನ್ನು ತಡೆಯುವ ಕಠಿಣ ಹಂತದಲ್ಲಿ ದೇಶವಿದೆ, ರಾಜ್ಯಗಳು ಈ ವಿಷಯದಲ್ಲಿ ಗಂಭೀರವಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನೆನಪು ಮಾಡಿದ ಪ್ರಧಾನಮಂತ್ರಿ ಅವರು, ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಭರವಸೆಯನ್ನೂ ಸಹ ನೀಡಿದರು.

ಕೇಂದ್ರ ಸರ್ಕಾರ ಈವರೆಗೆ ಕೈಗೊಂಡಿರುವ ಕ್ರಮಗಳನ್ನು ಮುಖ್ಯಮಂತ್ರಿಗಳಿಗೆ ವಿವರಿಸಿದರು ಮತ್ತು ಪ್ರಧಾನಮಂತ್ರಿ ಅವರು ಖುದ್ದು ಹೇಗೆ ದೇಶದ ಒಟ್ಟಾರೆ ಸ್ಥಿತಿಗತಿಯನ್ನು ಅವಲೋಕಿಸುತ್ತಿದ್ದಾರೆ ಎಂಬುದನ್ನು ತಿಳಿಸಲಾಯಿತು.

ಪ್ರಾತ್ಯಕ್ಷಿಕೆ ವೇಳೆ ಮುಖ್ಯಮಂತ್ರಿಗಳು, ಪ್ರಯೋಗಾಲಯಗಳ ಸೌಕರ್ಯವನ್ನು ಹೆಚ್ಚಿಸಬೇಕು ಮತ್ತು ಸಮಾಜದ ದುರ್ಬಲ ವರ್ಗದವರಿಗೆ ಹೆಚ್ಚಿನ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಪ್ರಧಾನಮಂತ್ರಿ ಅವರು, ರಾಜ್ಯಗಳಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು ಮತ್ತು ಆರೋಗ್ಯ ರಕ್ಷಣೆ, ಮೂಲಸೌಕರ್ಯ ವೃದ್ಧಿ ಮತ್ತು ಆರೋಗ್ಯ ರಕ್ಷಣೆ ಕಾರ್ಯಕರ್ತರ ಸಾಮರ್ಥ್ಯವೃದ್ಧಿ ತುರ್ತು ಅಗತ್ಯವಿದೆ ಎಂದು ಹೇಳಿದರು. ಔಷಧಗಳು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಲು ಮತ್ತು ದುಬಾರಿ ಬೆಲೆ ನಿಗದಿಯನ್ನು ತಪ್ಪಿಸಲು ಮುಖ್ಯಮಂತ್ರಿಗಳು, ಔಷಧ ವ್ಯಾಪಾರಿ ಸಂಘಟನೆಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಬೇಕು ಎಂದು ಪ್ರಧಾನಿ ಅವರು ಸಲಹೆ ನೀಡಿದರು. ಅಗತ್ಯಬಿದ್ದರೆ ಕಾನೂನು ಅಂಶಗಳ ಜೊತೆಗೆ ಕಠಿಣ ಶಕ್ತಿಯನ್ನು ಸಹ ಬಳಸುವಂತೆ ಅವರು ಆಗ್ರಹಿಸಿದರು.

ಒಗ್ಗೂಡಿದ ಸಾರ್ಕ್

ಪ್ರಧಾನಮಂತ್ರಿ ಅವರು, ಪ್ರಾದೇಶಿಕ ಸಮಾಲೋಚನೆಗೆ ಸಲಹೆ ನೀಡಿದ ಮೊದಲ ನಾಯಕರು. ಅವರು ವಿಶ್ವದ ಜನಸಂಖ್ಯೆಯ ಮಹತ್ವದ ಭಾಗವಾಗಿರುವ ಸಾರ್ಕ್ ರಾಷ್ಟ್ರಗಳ ನಾಯಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ನ ಅಗತ್ಯತೆಗೆ ಅವರು ಕರೆ ನೀಡಿದ್ದರು. ಭಾರತದ ನಾಯಕತ್ವದಲ್ಲಿ 2020ರ ಮಾರ್ಚ್ 15ರಂದು ಸಾರ್ಕ್ ನಾಯಕರ ಜೊತೆ ಮಾತುಕತೆ ನಡೆಯಿತು.

ಮೋದಿ ಅವರ ನಾಯಕತ್ವದಲ್ಲಿ ಎಲ್ಲ ರಾಷ್ಟ್ರಗಳು ಸ್ವಯಂ ದೇಣಿಗೆಯ ಮೂಲಕ ಕೋವಿಡ್-19 ತುರ್ತು ನಿಧಿ ಸ್ಥಾಪನೆ ಮತ್ತು ಸಹಭಾಗಿತ್ವದ ಬಗ್ಗೆ ಚರ್ಚಿಸಲಾಯಿತು. ಭಾರತ ಆರಂಭಿಕವಾಗಿ 10 ಮಿಲಿಯನ್ ಡಾಲರ್ ನೆರವು ನೀಡುವುದಾಗಿ ಘೋಷಿಸಿತು. ಆ ನಿಧಿಯನ್ನು ಎಲ್ಲ ಪಾಲುದಾರ ರಾಷ್ಟ್ರಗಳು ತಕ್ಷಣದ ಕ್ರಮಗಳಿಗೆ ಬಳಸಿಕೊಳ್ಳಬಹುದಾಗಿದೆ.

ಇತರೆ ಸಾರ್ಕ್ ರಾಷ್ಟ್ರಗಳಾದ ನೇಪಾಳ, ಭೂತಾನ್ ಮತ್ತು ಮಾಲ್ಡವೀಸ್ ಕೂಡ ತುರ್ತು ನಿಧಿಗೆ ನೆರವು ನೀಡಿವೆ.

ಅಂತಾರಾಷ್ಟ್ರೀಯ ಪ್ರಯತ್ನಗಳು

ಪ್ರಧಾನಮಂತ್ರಿ ಅವರು, ಬ್ರಿಟನ್ನಿನ ಪ್ರಧಾನಮಂತ್ರಿ ಗೌರವಾನ್ವಿತ ಬೋರಿಸ್ ಜಾನ್ಸನ್, ಇಸ್ರೇಲ್ ನ ಪ್ರಧಾನಮಂತ್ರಿ ಗೌರವಾನ್ವಿತ ಬೆಂಜಮಿನ್ ನೇತನ್ಯಾಹು ಅವರೊಂದಿಗೆ 2020ರ ಮಾರ್ಚ್ 12ರಂದು ಮತ್ತು ಸೌದಿ ಅರೆಬಿಯಾದ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ 2020ರ ಮಾರ್ಚ್ 17ರಂದು ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು.

ಸಂಕಷ್ಟದಲ್ಲಿರುವ ನಾಗರಿಕರ ಜೊತೆ

ಪ್ರಧಾನಮಂತ್ರಿ ಅವರ ನಾಯಕತ್ವದಲ್ಲಿ ಭಾರತ, ಚೈನಾದಂತೆ ಕೊರೋನಾ ಸೋಂಕಿಗೆ ತುತ್ತಾಗಿರುವ ರಾಷ್ಟ್ರಗಳಾದ ಇಟಲಿ, ಇರಾನ್ ಮತ್ತು ಜಗತ್ತಿನ ಇತರೆಡೆಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಸುಮಾರು 2000 ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತಂದಿದೆ.