ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಸೋನಾಲ್ ಮಾತಾ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಆಯಿ ಶ್ರೀ ಸೋನಲ್ ಮಾತಾ ಅವರ ಜನ್ಮಶತಮಾನೋತ್ಸವವು ಪವಿತ್ರವಾದ ಪೌಷ ಮಾಸದಲ್ಲಿ ನಡೆಯುತ್ತಿದ್ದು, ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು, ಸೋನಲ್ ಮಾತಾ ಅವರ ಆಶೀರ್ವಾದಕ್ಕೆ ಪಾತ್ರರಾಗಿರುವುದು ಒಂದು ಸೌಭಾಗ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಇಡೀ ಚರಣ್ ಸಮುದಾಯ ಮತ್ತು ಎಲ್ಲಾ ಆಡಳಿತಗಾರನ್ನು ಅಭಿನಂದಿಸಿದ ಪ್ರಧಾನಿ ಮೋದಿ, “ಮದಡಾ ಧಾಮವು ಚರಣ್ ಸಮುದಾಯದ ಶ್ರದ್ಧೆ, ಶಕ್ತಿ, ಆಚರಣೆ ಮತ್ತು ಸಂಪ್ರದಾಯಗಳ ಕೇಂದ್ರವಾಗಿದೆ. ನಾನು ಶ್ರೀ ಆಯಿಯ ಪಾದಗಳಿಗೆ ನಮಸ್ಕರಿಸುತ್ತೇನೆ ಮತ್ತು ನನ್ನ ನಮನವನ್ನು ಸಲ್ಲಿಸುತ್ತೇನೆ” ಎಂದರು.
ಸೋನಾಲ್ ಮಾತೆಯ ಮೂರು ದಿನಗಳ ಜನ್ಮಶತಮಾನೋತ್ಸವದ ನೆನಪುಗಳು ಇನ್ನೂ ಹಸಿರಾಗಿವೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತವು ಯಾವುದೇ ಯುಗದಲ್ಲೂ ಅವತಾರ ಆತ್ಮಗಳಿಂದ ದೂರವಾಗಿಲ್ಲ ಎಂಬುದಕ್ಕೆ ಭಗವತಿ ಸ್ವರೂಪರಾದ ಸೋನಾಲ್ ಮಾತೆ ಜೀವಂತ ಉದಾಹರಣೆಯಾಗಿದ್ದಾರೆ ಎಂದು ಹೇಳಿದರು. ನಿರ್ದಿಷ್ಟವಾಗಿ ಗುಜರಾತ್ ಮತ್ತು ಸೌರಾಷ್ಟ್ರವು ಮಹಾನ್ ಸಂತರು ಮತ್ತು ಮಹಾನ್ ಆತ್ಮಗಳ ಭೂಮಿಯಾಗಿದೆ, ಈ ಪ್ರದೇಶದ ಅನೇಕ ಸಂತರು ಮತ್ತು ಮಹಾನ್ ವ್ಯಕ್ತಿತ್ವಗಳು ಇಡೀ ಮಾನವಕುಲಕ್ಕೆ ತಮ್ಮ ಬೆಳಕು ನೀಡಿದ್ದಾರೆ ಎಂದು ಅವರು ಹೇಳಿದರು. ಪವಿತ್ರ ಗಿರ್ನಾರ್ ಪ್ರದೇಶವು ಭಗವಾನ್ ದತ್ತಾತ್ರೇಯ ಮತ್ತು ಅಸಂಖ್ಯಾತ ಸಂತರ ತಾಣವಾಗಿದೆ ಎಂದು ಅವರು ಹೇಳಿದರು. ಸೌರಾಷ್ಟ್ರದ ಈ ಸನಾತನ ಸಂತ ಸಂಪ್ರದಾಯದಲ್ಲಿ, ಶ್ರೀ ಸೋನಾಲ್ ಮಾತಾ ಅವರು ಆಧುನಿಕ ಯುಗಕ್ಕೆ ಜ್ಯೋತಿಯಂತಿದ್ದರು. ಅವರ ಆಧ್ಯಾತ್ಮಿಕ ಶಕ್ತಿ, ಮಾನವೀಯ ಬೋಧನೆಗಳು ಮತ್ತು ತಪಸ್ಸು ಅವರ ವ್ಯಕ್ತಿತ್ವದಲ್ಲಿ ಅದ್ಭುತವಾದ ದೈವಿಕತೆಯನ್ನು ಜಾಗೃತಗೊಳಿಸಿತು. ಜುನಾಗಢ ಮತ್ತು ಮದ್ಧಾದ ಸೋನಾಲ್ ಧಾಮ್ ನಲ್ಲಿ ಇಂದಿಗೂ ಇದನ್ನು ಅನುಭವಿಸಬಹುದು ಎಂದು ಪ್ರಧಾನಿ ಹೇಳಿದರು.
ಭಗತ್ ಬಾಪು, ವಿನೋಬಾ ಭಾವೆ, ರವಿಶಂಕರ್ ಮಹಾರಾಜ್, ಕನ್ಭಾಯ್ ಲಹೇರಿ, ಕಲ್ಯಾಣ್ ಶೇಠ್ ಅವರಂತಹ ಮಹಾನ್ ವ್ಯಕ್ತಿಗಳೊಂದಿಗೆ ಕೆಲಸ ಮಾಡಿದ ಸೋನಾಲ್ ಮಾ ಅವರು ತಮ್ಮ ಇಡೀ ಜೀವನವನ್ನು ಸಾರ್ವಜನಿಕ ಕಲ್ಯಾಣ, ದೇಶ ಮತ್ತು ಧರ್ಮದ ಸೇವೆಗೆ ಮುಡಿಪಾಗಿಟ್ಟರು ಎಂದು ಪ್ರಧಾನಿ ಹೇಳಿದರು. ಚರಣ್ ಸಮುದಾಯದ ವಿದ್ವಾಂಸರಲ್ಲಿ ಅವರು ವಿಶೇಷ ಸ್ಥಾನವನ್ನು ಹೊಂದಿದ್ದರು ಮತ್ತು ಅವರಿಗೆ ಮಾರ್ದರ್ಶನ ನೀಡುವ ಮೂಲಕ ಅನೇಕ ಯುವಕರ ಜೀವನವನ್ನು ಬದಲಾಯಿಸಿದರು ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಸಮಾಜಕ್ಕೆ ಅವರ ಕೊಡುಗೆಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸಮಾಜದಲ್ಲಿ ಶಿಕ್ಷಣ ಮತ್ತು ವ್ಯಸನಮುಕ್ತತೆಯ ನಿಟ್ಟಿನಲ್ಲಿ ಅವರ ಅದ್ಭುತ ಕಾರ್ಯವನ್ನು ಪ್ರಸ್ತಾಪಿಸಿದರು. ಸಮಾಜವನ್ನು ಅನಿಷ್ಟ ಪದ್ಧತಿಗಳಿಂದ ಪಾರು ಮಾಡಲು ಸೋನಲ್ ಮಾತೆ ಶ್ರಮಿಸಿದರು, ಜಾನುವಾರುಗಳನ್ನು ಸಂರಕ್ಷಿಸುವ ಮೂಲಕ ಸ್ವಾವಲಂಬಿಗಳಾಗಲು ಒತ್ತು ನೀಡುವ ಬೃಹತ್ ಪ್ರತಿಜ್ಞೆ ಅಭಿಯಾನವನ್ನು ಕಛ್ ನ ವೋವರ್ ಗ್ರಾಮದಿಂದ ಆರಂಭಿಸಿದರು ಎಂದು ಪ್ರಧಾನಿ ಹೇಳಿದರು.
ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಾರ್ಯಗಳ ಜೊತೆಗೆ ಸೋನಾಲ್ ಮಾ ಅವರು ದೇಶದ ಏಕತೆ ಮತ್ತು ಸಮಗ್ರತೆಯ ಬಲವಾದ ಕಾವಲುಗಾರರಾಗಿದ್ದರು ಮತ್ತು ವಿಭಜನೆಯ ಸಮಯದಲ್ಲಿ ಜುನಾಗಢವನ್ನು ಒಡೆಯಲು ನಡೆದ ಷಡ್ಯಂತ್ರಗಳ ವಿರುದ್ಧ ಮಾತೆಯು ಚಂಡಿಯಂತೆ ಎದ್ದು ನಿಂತ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದರು.
“ಶ್ರೀ ಸೋನಾಲ್ ಮಾತೆ ಅವರು ದೇಶಕ್ಕೆ ಚರಣ್ ಸಮುದಾಯದ ಕೊಡುಗೆಗಳ ಒಂದು ದೊಡ್ಡ ಸಂಕೇತವಾಗಿದೆ” ಎಂದು ಪ್ರಧಾನಿ ಹೇಳಿದರು. ಭಾರತದ ಧರ್ಮಗ್ರಂಥಗಳಲ್ಲಿಯೂ ಈ ಸಮಾಜಕ್ಕೆ ವಿಶೇಷ ಸ್ಥಾನ ಮತ್ತು ಗೌರವವನ್ನು ನೀಡಲಾಗಿದೆ. ಭಗವತ್ ಪುರಾಣದಂತಹ ಪವಿತ್ರ ಗ್ರಂಥಗಳು ಚರಣ್ ಸಮುದಾಯವನ್ನು ಶ್ರೀಹರಿಯ ನೇರ ವಂಶಸ್ಥರು ಎಂದು ಉಲ್ಲೇಖಿಸುತ್ತವೆ ಎಂದು ಅವರು ತಿಳಿಸಿದರು. ಸರಸ್ವತಿ ಮಾತೆಯೂ ಈ ಸಮಾಜಕ್ಕೆ ವಿಶೇಷವಾದ ಅನುಗ್ರಹವನ್ನು ಮಾಡಿದ್ದಾರೆ. ಆದ್ದರಿಂದ, ಈ ಸಮಾಜದಲ್ಲಿ ಅನೇಕ ವಿದ್ವಾಂಸರು ಹುಟ್ಟಿದ್ದಾರೆ ಎಂದರು. ಪೂಜ್ಯ ತರಣ್ ಬಾಪು, ಪೂಜ್ಯ ಇಸಾರ್ ದಾಸ್ ಜಿ, ಪಿಂಗಲ್ಶಿ ಬಾಪು, ಪೂಜ್ಯ ಕಾಗ್ ಬಾಪು, ಮೇರುಭಾ ಬಾಪು, ಶಂಕರದನ್ ಬಾಪು, ಶಂಭುದನ್ ಜಿ, ಭಜನಿಕ್ ನರನಸ್ವಾಮಿ, ಹೇಮುಭಾಯ್ ಗಧ್ವಿ, ಪದ್ಮಶ್ರೀ ಕವಿ ದದ್ ಮತ್ತು ಪದ್ಮಶ್ರೀ ಭಿಖುದನ ಗಧ್ವಿ ಅವರಂತಹ ಚರಣ ಸಮಾಜವನ್ನು ಶ್ರೀಮಂತಗೊಳಿಸಿದ ಅನೇಕ ವ್ಯಕ್ತಿಗಳ ಉದಾಹರಣೆಗಳನ್ನು ಎಂದು ಪ್ರಧಾನಿ ನೀಡಿದರು.
“ಅಗಾಧವಾದ ಚರಣ್ ಸಾಹಿತ್ಯವು ಈ ಶ್ರೇಷ್ಠ ಸಂಪ್ರದಾಯಕ್ಕೆ ಸಾಕ್ಷಿಯಾಗಿದೆ. ಅದು ದೇಶಭಕ್ತಿ ಗೀತೆಗಳಾಗಲಿ ಅಥವಾ ಆಧ್ಯಾತ್ಮಿಕ ಉಪದೇಶಗಳಾಗಲಿ, ಚರಣ್ ಸಾಹಿತ್ಯವು ಶತಮಾನಗಳಿಂದ ಪ್ರಮುಖ ಪಾತ್ರವನ್ನು ವಹಿಸಿದೆ”ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು, ಶ್ರೀ ಸೋನಾಲ್ ಮಾತೆ ಅವರ ಶಕ್ತಿಯುತ ಭಾಷಣ ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ಶ್ರೀ ಸೋನಾಲ್ ಮಾತೆ ಸಾಂಪ್ರದಾಯಿಕ ವಿಧಾನಗಳ ಮೂಲಕ ಶಿಕ್ಷಣವನ್ನು ಪಡೆಯದಿದ್ದರೂ, ಅವರು ಸಂಸ್ಕೃತದಂತಹ ಭಾಷೆಗಳ ಮೇಲೆ ಬಲವಾದ ಹಿಡಿತವನ್ನು ಹೊಂದಿದ್ದರು ಮತ್ತು ಧರ್ಮಗ್ರಂಥಗಳ ಆಳವಾದ ಜ್ಞಾನವನ್ನು ಹೊಂದಿದ್ದರು ಎಂದು ಅವರು ತಿಳಿಸಿದರು. “ಅವರಿಂದ ರಾಮಾಯಣದ ಕಥೆಯನ್ನು ಕೇಳಿದವರು ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ” ಎಂದು ಪ್ರಧಾನಿ ಹೇಳಿದರು. ಜನವರಿ 22 ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ಪ್ರಾಣಪ್ರತಿಷ್ಠಾ ಸಮಾರಂಭದ ಬಗ್ಗೆ ತಿಳಿದಿದ್ದರೆ ಸೋನಾಲ್ ಮಾತೆಯ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ ಎಂದ ಪ್ರಧಾನಿ, ಜನವರಿ 22 ರ ಶುಭ ಸಂದರ್ಭದಲ್ಲಿ ಶ್ರೀರಾಮ ಜ್ಯೋತಿಯನ್ನು ಬೆಳಗಿಸುವಂತೆ ಎಲ್ಲರಿಗೂ ಮನವಿ ಮಾಡಿದರು. ನಿನ್ನೆ ಆರಂಭವಾದ ದೇಶದ ದೇವಾಲಯಗಳ ಸ್ವಚ್ಛತಾ ಅಭಿಯಾನದ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನಿ, ನಾವು ಈ ದಿಶೆಯಲ್ಲಿಯೂ ಒಟ್ಟಾಗಿ ಕೆಲಸ ಮಾಡಬೇಕು. ಅಂತಹ ಪ್ರಯತ್ನಗಳಿಂದ ಶ್ರೀ ಸೋನಾಲ್ ಮಾತೆ ಅವರ ಸಂತೋಷವು ಹೆಚ್ಚಾಗುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದರು.
ಭಾರತವು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ರಾಷ್ಟ್ರವಾಗಲು ಕೆಲಸ ಮಾಡಲು ಶ್ರೀ ಸೋನಾಲ್ ಮಾತೆಯವರ ಸ್ಫೂರ್ತಿ ನಮಗೆ ಹೊಸ ಶಕ್ತಿಯನ್ನು ನೀಡುತ್ತದೆ ಎಂದು ಪ್ರಧಾನಿ ಹೇಳಿದರು. ಈ ಗುರಿಗಳನ್ನು ಸಾಧಿಸುವಲ್ಲಿ ಚರಣ್ ಸಮಾಜದ ಪಾತ್ರವನ್ನು ಅವರು ಪ್ರಸ್ತಾಪಿಸಿದರು. ಶ್ರೀ ಸೋನಲ್ ಮಾ ಅವರು ನೀಡಿದ 51 ಆಜ್ಞೆಗಳು ಚರಣ್ ಸಮಾಜಕ್ಕೆ ದಿಕ್ಸೂಚಿಯಾಗಿವೆ, ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವುದನ್ನು ಮುಂದುವರಿಸುವಂತೆ ಚರಣ್ ಸಮುದಾಯವನ್ನು ಪ್ರಧಾನಿ ಒತ್ತಾಯಿಸಿದರು. ಸಾಮಾಜಿಕ ಸೌಹಾರ್ದತೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮದಡಾ ಧಾಮದಲ್ಲಿ ನಿರಂತರವಾಗಿ ನಡೆಯುತ್ತಿರುವ ಸದಾವ್ರತ ಯಾಗವನ್ನು ಶ್ಲಾಘಿಸಿದ ಅವರು, ಮುಂದೆಯೂ ಇಂತಹ ಅಸಂಖ್ಯಾತ ರಾಷ್ಟ್ರ ನಿರ್ಮಾಣದ ಆಚರಣೆಗಳಿಗೆ ಮದಡಾ ಧಾಮ ಚಾಲನೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿಯವರು ತಮ್ಮ ಭಾಷಣವನ್ನು ಮುಕ್ತಾಯಮಾಡಿದರು.
*****
My message for birth centenary celebrations of Aai Shree Sonal Ma in Junagadh. https://t.co/mrbCOGkx73
— Narendra Modi (@narendramodi) January 13, 2024