Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಅಕ್ಟೋಬರ್ 13ರಂದು ಹಿಮಾಚಲಪ್ರದೇಶದ ಉನಾ ಮತ್ತು ಚಂಬಾಗೆ ಭೇಟಿ  


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 13ರಂದು ಹಿಮಾಚಲಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಉನಾದಲ್ಲಿ ಪ್ರಧಾನಿ ಅವರು ಉನಾ ಹಿಮಾಚಲ ರೈಲು ನಿಲ್ದಾಣದಿಂದ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ರೈಲಿಗೆ ಚಾಲನೆ ನೀಡಲಿದ್ದಾರೆ. ಆನಂತರ ಸಾರ್ವಜನಿಕ ಸಮಾರಂಭದಲ್ಲಿ, ಪ್ರಧಾನಮಂತ್ರಿ ಅವರು ಐಐಐಟಿ ಉನಾವನ್ನು ರಾಷ್ಟ್ರಕ್ಕೆ ಸಮರ್ಪಿಸುವರು ಮತ್ತು ಉನಾದಲ್ಲಿ ಬೃಹತ್ ಔಷಧ ಪಾರ್ಕ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಚಂಬಾದ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿ ಎರಡು ಜಲವಿದ್ಯುತ್ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸುವರು ಮತ್ತು ಹಿಮಾಚಲಪ್ರದೇಶದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್ ವೈ)-III ಕ್ಕೆ ಚಾಲನೆ ನೀಡುವರು. 

ಉನಾದಲ್ಲಿ ಪ್ರಧಾನಿ 

ಪ್ರಧಾನಮಂತ್ರಿ ಆತ್ಮನಿರ್ಭರ ಭಾರತಕ್ಕಾಗಿ ಸ್ಪಷ್ಟ ಕರೆ ನೀಡಿದ ನಂತರ ಸರ್ಕಾರದ ನಾನಾ ಹೊಸ ಉಪಕ್ರಮಗಳ ಬೆಂಬಲದ ಮೂಲಕ ದೇಶವು ಹಲವು ವಲಯಗಳಲ್ಲಿ ಸ್ವಾವಲಂಬನೆ ಸಾಧಿಸುವತ್ತ ಕ್ಷಿಪ್ರವಾಗಿ ಸಾಗುತ್ತಿದೆ. ಅಂತಹ ಒಂದು ಪ್ರಮುಖ ವಲಯವೆಂದರೆ ಔಷಧ ವಲಯ ಮತ್ತು ಈ ವಲಯದಲ್ಲಿ ಆತ್ಮನಿರ್ಭರ ಭಾರತ ಸಾಧಿಸುವ ಸಲುವಾಗಿ ಉನಾ ಜಿಲ್ಲೆಯ ಹರೋಲಿಯಲ್ಲಿ 1900 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಿರುವ ಬೃಹತ್ ಔಷಧ ಪಾರ್ಕ್‌ಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪಾರ್ಕ್  ಎಪಿಐ ಆಮದುಗಳ ಮೇಲಿನ ಅವಲಂಬನೆ ತಗ್ಗಿಸಲು ಸಹಾಯ ಮಾಡಲಿದೆ. ಇದು ಸುಮಾರು 10,000 ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಿಸುವ ನಿರೀಕ್ಷೆಯಿದೆ ಮತ್ತು 20,000 ಕ್ಕೂ ಅಧಿಕ ಜನರಿಗೆ ಉದ್ಯೋಗಾವಕಾಶವನ್ನು ಒದಗಿಸುತ್ತದೆ. ಇದು ಆ ಪ್ರದೇಶದ ಆರ್ಥಿಕ ಚಟುವಟಿಕೆಗಳನ್ನು ಮತ್ತಷ್ಟು ಉತ್ತೇಜಿಸುತ್ತದೆ. 

ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಉನಾವನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 2017ರಲ್ಲಿ ಪ್ರಧಾನಮಂತ್ರಿ ಅವರೇ ಇದಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಸದ್ಯ 530ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. 

ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ರೈಲಿನ ಸಂಚಾರಕ್ಕೂ ಪ್ರಧಾನಮಂತ್ರಿ ಚಾಲನೆ ನೀಡಲಿದ್ದಾರೆ. ಅಂಬ ಅಂದ್ವೌರಾದಿಂದ ನವದೆಹಲಿಗೆ ಸಂಚರಿಸಲಿರುವ ಇದು ದೇಶದಲ್ಲಿ ಹೊಸದಾಗಿ ಆರಂಭಿಸಿರುವ ನಾಲ್ಕನೇ ವಂದೇ ಭಾರತ್ ರೈಲು ಆಗಿದೆ ಮತ್ತು ಹಿಂದಿನ ರೈಲುಗಳಿಗೆ ಹೋಲಿಸಿದರೆ ಇದು ಸುಧಾರಿತ ಆವೃತ್ತಿಯಾಗಿದೆ, ಇದು ಹೆಚ್ಚು ಹಗುರವಾಗಿರುತ್ತದೆ ಮತ್ತು ಕಡಿಮೆ ಅವಧಿಯಲ್ಲಿ ಹೆಚ್ಚಿನ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಇದು ಗಂಟೆಗೆ 100 ಕಿ,ಮೀ ಕ್ರಮಿಸುವ ಸಾಮರ್ಥ್ಯ ಹೊಂದಿದ್ದು,ಕೇವಲ 52 ಸೆಕೆಂಡುಗಳಲ್ಲಿ ವೇಗವನ್ನು ಪಡೆಯುತ್ತದೆ. ಈ ರೈಲು ಸೇವೆ ಆರಂಭವು ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಹೆಚ್ಚಿನ ಸಹಾಯ ಮಾಡುತ್ತದೆ ಮತ್ತು ಆರಾಮದಾಯಕ ಮತ್ತು ವೇಗದ ಪ್ರಯಾಣ ಸೌಕರ್ಯವನ್ನು ಒದಗಿಸುತ್ತದೆ. 

ಚಂಬಾದಲ್ಲಿ ಪ್ರಧಾನಿ 

ಪ್ರಧಾನಮಂತ್ರಿ ಅವರು ಎರಡು ಜಲವಿದ್ಯುತ್ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ- ಅವುಗಳೆಂದರೆ 48 ಮೆಗಾವ್ಯಾಟ್ ಸಾಮರ್ಥ್ಯದ ಚಂಜು-III ಜಲವಿದ್ಯುತ್ ಯೋಜನೆ ಮತ್ತು 30 ಮೆಗಾವ್ಯಾಟ್ ಸಾಮರ್ಥ್ಯದ ಡಿಯೋಥಾಲ್ ಚಂಜು ಜಲವಿದ್ಯುತ್ ಯೋಜನೆ. ಈ ಎರಡೂ ಯೋಜನೆಗಳು ವಾರ್ಷಿಕ 270 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸುತ್ತವೆ ಮತ್ತು ಈ ಯೋಜನೆಗಳಿಂದ ಹಿಮಾಚಲ ಪ್ರದೇಶ ವಾರ್ಷಿಕ ಸುಮಾರು 110 ಕೋಟಿ ರೂ. ಆದಾಯಗಳಿಸುವ ನಿರೀಕ್ಷೆ ಇದೆ. 

ಹಿಮಾಚಲಪ್ರದೇಶ ರಾಜ್ಯದಲ್ಲಿ ಸುಮಾರು 3125 ಕಿಲೋಮೀಟರ್ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ  ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್ ವೈ) -III ಗೆ ಪ್ರಧಾನಮಂತ್ರಿ ಚಾಲನೆ ನೀಡಲಿದ್ದಾರೆ. ರಾಜ್ಯದ 15 ಗಡಿ ಮತ್ತು ದೂರದ ಬ್ಲಾಕ್‌ಗಳಲ್ಲಿ 440 ಕಿ.ಮೀ ಉದ್ದದ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಈ ಹಂತದ ಕಾಮಗಾರಿ ಕೇಂದ್ರ ಸರ್ಕಾರ 420 ಕೋಟಿ ರೂ. ಹಣ ಮಂಜೂರು ಮಾಡಿದೆ. 

*****