Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಯವರು ನೈಸರ್ಗಿಕ ಕೃಷಿ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು

ಪ್ರಧಾನಮಂತ್ರಿಯವರು ನೈಸರ್ಗಿಕ ಕೃಷಿ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಾಸ್ತವೋಪಮವಾಗಿ ನೈಸರ್ಗಿಕ ಕೃಷಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಗುಜರಾತ್ನ ಸೂರತ್ನಲ್ಲಿ ಆಯೋಜಿಸಲಾದ ಸಮಾವೇಶದಲ್ಲಿ ಸಾವಿರಾರು ರೈತರು ಮತ್ತು ಸೂರತ್ನಲ್ಲಿ ಸ್ವಾಭಾವಿಕ ಕೃಷಿಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿರುವ ಇತರ ಎಲ್ಲ ಪಾಲುದಾರರು ಭಾಗವಹಿಸುತ್ತಿದ್ದಾರೆ. ಈ ಸಮಾವೇಶದಲ್ಲಿ ಗುಜರಾತ್ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳೂ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದಿನ ಕಾರ್ಯಕ್ರಮವು ಅಮೃತ ಕಾಲದ ಗುರಿಗಳನ್ನು ಸಾಧಿಸುವ ದೇಶದ ನಿರ್ಣಯವನ್ನು ಗುಜರಾತ್ ಹೇಗೆ ಮುನ್ನಡೆಸುತ್ತಿದೆ ಎನ್ನುವುದರ ಸೂಚನೆಯಾಗಿದೆ ಎಂದು ಹೇಳಿದರು. “ಪ್ರತಿ ಪಂಚಾಯತ್ನ 75 ರೈತರನ್ನು ನೈಸರ್ಗಿಕ ಕೃಷಿಯೊಂದಿಗೆ ಜೋಡಿಸುವಲ್ಲಿ ಸೂರತ್ನ ಯಶಸ್ಸು ಇಡೀ ದೇಶಕ್ಕೆ ಉದಾಹರಣೆಯಾಗಲಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು. ಸರಪಂಚರ ಪಾತ್ರವನ್ನು ಎತ್ತಿ ಹಿಡಿದ ಅವರು, ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಮುನ್ನಡೆಯುತ್ತಿರುವ ರೈತರನ್ನು ಅಭಿನಂದಿಸಿದರು.

ಪ್ರಧಾನಮಂತ್ರಿಯವರು “ಸ್ವಾತಂತ್ರ್ಯದ 75 ವರ್ಷಗಳ ಸಂಬಂಧದಲ್ಲಿ, ದೇಶವು ಅನೇಕ ಗುರಿಗಳ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದೆ, ಇದು ಮುಂಬರುವ ದಿನಗಳಲ್ಲಿ ಪ್ರಮುಖ ಬದಲಾವಣೆಗಳಿಗೆ ಆಧಾರವಾಗಲಿದೆ. ನಮ್ಮ ಈ ಅಭಿವೃದ್ಧಿ ಪಯಣವನ್ನು ಮುನ್ನಡೆಸುತ್ತಿರುವ ‘ಸಬ್ಕಾ ಪ್ರಯಾಸ್’ನ ಸ್ಪೂರ್ತಿಯೇ ದೇಶದ ಪ್ರಗತಿ ಮತ್ತು ಆದರ ವೇಗದ ಆಧಾರವಾಗಿದೆ. ಅದಕ್ಕಾಗಿಯೇ ಬಡವರು ಮತ್ತು ವಂಚಿತರ ಕಲ್ಯಾಣ ಯೋಜನೆಗಳಲ್ಲಿ ಗ್ರಾಮ ಪಂಚಾಯಿತಿಗಳಿಗೆ ಪ್ರಮುಖ ಪಾತ್ರ ವಹಿಸಲಾಗಿದೆ ಎಂದು ಹೇಳಿದರು.

ಪ್ರತಿ ಪಂಚಾಯಿತಿಯಿಂದ 75 ರೈತರನ್ನು ಆಯ್ಕೆ ಮಾಡುವಲ್ಲಿ ಸ್ಥಳೀಯ ಸಂಸ್ಥೆಗಳು ಸಂಘಟಿತ ಪಾತ್ರ ವಹಿಸಿ ತರಬೇತಿ ಮತ್ತು ಇತರ ಸಂಪನ್ಮೂಲಗಳೊಂದಿಗೆ ಕೈ ಜೋಡಿಸಿವೆ ಎಂದು ಹೇಳಿದರು. ಇದರಿಂದ 550 ಪಂಚಾಯಿತಿಗಳಲ್ಲಿ 40 ಸಾವಿರಕ್ಕೂ ಹೆಚ್ಚು ರೈತರು ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಸ್ಥಿತಿಗೆ ಉತ್ತೇಜನ ನೀಡಿದೆ. ಇದು ಉತ್ತಮ ಆರಂಭ ಮತ್ತು ತುಂಬಾ ಉತ್ತೇಜನಕಾರಿಯಾಗಿದೆ. ಸೂರತ್ ಮಾದರಿಯ ನೈಸರ್ಗಿಕ ಕೃಷಿ ಇಡೀ ದೇಶಕ್ಕೆ ಮಾದರಿಯಾಗಬಲ್ಲದು ಎಂದರು.

ಜನರ ಸಹಭಾಗಿತ್ವದ ಶಕ್ತಿಯಿಂದ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಂಡಾಗ ಅವುಗಳ ಯಶಸ್ಸನ್ನು ದೇಶದ ಜನತೆಯೇ ಖಾತ್ರಿಪಡಿಸುತ್ತಾರೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಜಲ ಜೀವನ್ ಮಿಷನ್ ಯೋಜನೆಯಲ್ಲಿ ಜನರಿಗೆ ಪ್ರಮುಖ ಪಾತ್ರವನ್ನು ನೀಡಿದ ಉದಾಹರಣೆಯನ್ನು ಶ್ರೀ ಮೋದಿ ಉ‍ಲ್ಲೇಖಿಸಿದರು. ಅದೇ ರೀತಿ “ಗ್ರಾಮದಲ್ಲಿ ಬದಲಾವಣೆ ತರುವುದು ಸುಲಭವಲ್ಲ ಎಂದು ಹೇಳುತ್ತಿದ್ದವರಿಗೆ ಡಿಜಿಟಲ್ ಇಂಡಿಯಾ ಮಿಷನ್ನ ಅಸಾಧಾರಣ ಯಶಸ್ಸು ದೇಶದ ಉತ್ತರವಾಗಿದೆ. ಗ್ರಾಮಗಳು ಬದಲಾವಣೆಯನ್ನು ತರಲು ಮಾತ್ರವಲ್ಲದೆ ಬದಲಾವಣೆಗೆ ಕಾರಣವಾಗುತ್ತವೆ ಎನ್ನುವುದನ್ನು ನಮ್ಮ ಗ್ರಾಮಗಳು ತೋರಿಸಿಕೊಟ್ಟಿವೆ. ಮುಂದಿನ ದಿನಗಳಲ್ಲಿ ನೈಸರ್ಗಿಕ ಕೃಷಿಗೆ ಸಂಬಂಧಿಸಿದಂತೆ ಜನ ಆಂದೋಲನ (ಜನರ ಆಂದೋಲನ) ಕೂಡ ದೊಡ್ಡ ಯಶಸ್ಸು ಕಾಣಲಿದೆ ಎಂದು ಪ್ರಧಾನಮಂತ್ರಿಯವರು ವಿಶ್ವಾಸ ವ್ಯಕ್ತಪಡಿಸಿದರು. ಈ ಆಂದೋಲನದಲ್ಲಿ ಬೇಗನೆ ತೊಡಗಿಸಿಕೊಂಡ ರೈತರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯವರು “ನಮ್ಮ ಜೀವನ, ನಮ್ಮ ಆರೋಗ್ಯ, ನಮ್ಮ ಸಮಾಜವು ನಮ್ಮ ಕೃಷಿ ವ್ಯವಸ್ಥೆಗೆ ಆಧಾರವಾಗಿದೆ. ಭಾರತವು ಪ್ರಕೃತಿ ಮತ್ತು ಸಂಸ್ಕೃತಿಯಿಂದ ಕೃಷಿ ಆಧಾರಿತ ದೇಶವಾಗಿದೆ. ಆದ್ದರಿಂದ, ನಮ್ಮ ರೈತ ಪ್ರಗತಿ ಹೊಂದುತ್ತಿದ್ದಂತೆ, ನಮ್ಮ ಕೃಷಿ ಪ್ರಗತಿ ಮತ್ತು ಸಮೃದ್ಧಿ ಹೊಂದಿದಂತೆ, ನಮ್ಮ ದೇಶವೂ ಪ್ರಗತಿ ಹೊಂದುತ್ತದೆ. ನೈಸರ್ಗಿಕ ಕೃಷಿಯು ಸಮೃದ್ಧಿಯ ಸಾಧನವಾಗಿದೆ ಎಂದು ಅವರು ರೈತರಿಗೆ ನೆನಪಿಸಿದರು, ಜೊತೆಗೆ ಭೂತಾಯಿಯನ್ನು ಗೌರವಿಸಿ ಸೇವೆ ಸಲ್ಲಿಸುತ್ತಾರೆ. “ನೀವು ನೈಸರ್ಗಿಕ ಕೃಷಿ ಮಾಡುವಾಗ, ನೀವು ಭೂತಾಯಿಗೆ ಸೇವೆ ಸಲ್ಲಿಸುತ್ತೀರಿ, ಮಣ್ಣಿನ ಗುಣಮಟ್ಟ, ಅದರ ಉತ್ಪಾದಕತೆಯನ್ನು ರಕ್ಷಿಸುತ್ತೀರಿ. ನೀವು ನೈಸರ್ಗಿಕ ಕೃಷಿ ಮಾಡುವಾಗ ನೀವು ಪ್ರಕೃತಿ ಮತ್ತು ಪರಿಸರಕ್ಕೆ ಸೇವೆ ಸಲ್ಲಿಸುತ್ತೀರಿ. ನೀವು ನೈಸರ್ಗಿಕ ಕೃಷಿಗೆ ಸೇರಿದಾಗ, ಗೋಮಾತೆಯ ಸೇವೆ ಮಾಡುವ ಸೌಭಾಗ್ಯವೂ ಸಿಗುತ್ತದೆ,” ಎಂದರು.

ಇಡೀ ಜಗತ್ತು ಸುಸ್ಥಿರ ಜೀವನಶೈಲಿಯ ಬಗ್ಗೆ ಮಾತನಾಡುತ್ತಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. “ಇದು ಶತಮಾನಗಳಿಂದ ಭಾರತವು ಜಗತ್ತನ್ನು ಮುನ್ನಡೆಸಿರುವ ಒಂದು ಕ್ಷೇತ್ರವಾಗಿದೆ, ಆದ್ದರಿಂದ ನಾವು ನೈಸರ್ಗಿಕ ಕೃಷಿಯ ಹಾದಿಯಲ್ಲಿ ಮುನ್ನಡೆಯುವ ಸಮಯ ಮತ್ತು ಹೊರಹೊಮ್ಮುತ್ತಿರುವ ಜಾಗತಿಕ ಅವಕಾಶಗಳ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವ ಸಮಯ” ಎಂದು ಅವರು ಹೇಳಿದರು. ಸಾಂಪ್ರದಾಯಿಕ ಕೃಷಿಗೆ ಸಂಪನ್ಮೂಲಗಳು ಮತ್ತು ತರಬೇತಿಯನ್ನು ಒದಗಿಸುವ ‘ಪರಂಪರಾಗತ ಕೃಷಿ ವಿಕಾಸ ಯೋಜನೆ’ಯಂತಹ ಯೋಜನೆಗಳ ರೂಪದಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಶ್ರೀ ಮೋದಿ ಮಾತನಾಡಿದರು. ಲಕ್ಷಾಂತರ ರೈತರ ಅನುಕೂಲಕ್ಕಾಗಿ ಯೋಜನೆಯಡಿ ದೇಶದಾದ್ಯಂತ 30 ಸಾವಿರ ಕ್ಲಸ್ಟರ್ಗಳನ್ನು ರಚಿಸಲಾಗಿದೆ. 10 ಲಕ್ಷ ಹೆಕ್ಟೇರ್ಗಳನ್ನು ‘ಪರಂಪರಾಗತ ಕೃಷಿ ವಿಕಾಸ ಯೋಜನೆ’ ಅಡಿಯಲ್ಲಿ ಒಳಪಡಿಸಲಾಗುವುದು. ಗಂಗಾ ನದಿಯ ಉದ್ದಕ್ಕೂ ನೈಸರ್ಗಿಕ ಕೃಷಿ ಕಾರಿಡಾರ್ ರಚಿಸಲು ಪ್ರತ್ಯೇಕ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದ್ದು, ನೈಸರ್ಗಿಕ ಕೃಷಿಯನ್ನು ನಮಾಮಿ ಗಂಗೆ ಯೋಜನೆಯೊಂದಿಗೆ ಜೋಡಿಸಲಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ನೈಸರ್ಗಿಕ ಕೃಷಿ ಉತ್ಪನ್ನಗಳ ಪ್ರಮಾಣೀಕರಣಕ್ಕೆ ಗುಣಮಟ್ಟದ ಭರವಸೆ ವ್ಯವಸ್ಥೆಯ ಬಗ್ಗೆಯೂ ಪ್ರಧಾನಮಂತ್ರಿ ಮಾಹಿತಿ ನೀಡಿದರು. ಪ್ರಮಾಣೀಕೃತ ನೈಸರ್ಗಿಕ ಕೃಷಿ ಉತ್ಪನ್ನಗಳನ್ನು ರೈತರು ರಫ್ತು ಮಾಡಿದಾಗ ಉತ್ತಮ ಬೆಲೆ ಸಿಗುತ್ತದೆ ಎಂದು ಅವರು ಹೇಳಿದರು. .

ಭಾರತದ ಧರ್ಮಗ್ರಂಥಗಳು ಮತ್ತು ಜನಪ್ರಿಯ ಸಂಸ್ಕೃತಿಯಲ್ಲಿ ಅಡಗಿರುವ ನೈಸರ್ಗಿಕ ಕೃಷಿ ಜ್ಞಾನವನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಪುರಾತನ ಜ್ಞಾನ ಮತ್ತು ಆಧುನಿಕ ಕಾಲದ ಬೇಡಿಕೆಗೆ ಅನುಗುಣವಾಗಿ ರೈತರಿಗೆ ಹೇಗೆ ತಿಳಿಸಬಹುದು ಎನ್ನುವುದರ ಕುರಿತು ಸಂಸ್ಥೆಗಳು, ಎನ್ಜಿಒಗಳು ಮತ್ತು ತಜ್ಞರು ಸಂಶೋಧನೆ ನಡೆಸುವಂತೆ ವಿನಂತಿಸಿದರು. ಈ ರಾಸಾಯನಿಕ ಮುಕ್ತ ನೈಸರ್ಗಿಕ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಾಗುವುದರಿಂದ ಪ್ರತಿ ಪಂಚಾಯತ್ನಲ್ಲಿ 75 ರೈತರು ನೈಸರ್ಗಿಕ ಕೃಷಿಯನ್ನು ಕೈಗೊಳ್ಳುವ ಪ್ರಾರಂಭವು ಶೀಘ್ರದಲ್ಲೇ ಹಲವಾರು ಪಟ್ಟು ಹೆಚ್ಚಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ, 2022ರ ಮಾರ್ಚ್ನಲ್ಲಿ ಗುಜರಾತ್ ಪಂಚಾಯತ್ ಮಹಾಸಮ್ಮೇಳನದಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಮಂತ್ರಿ ಪ್ರತಿ ಹಳ್ಳಿಯಲ್ಲಿ ಕನಿಷ್ಠ 75 ರೈತರನ್ನು ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದರು. ಪ್ರಧಾನಮಂತ್ರಿಯವರ ಈ ದೃಷ್ಟಿಕೋನದ ಮಾರ್ಗದರ್ಶನದಿಂದ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳಲು ರೈತರಿಗೆ ಸಹಾಯ ಮಾಡಲು ಸೂರತ್ ಜಿಲ್ಲೆಯು ರೈತ ಗುಂಪುಗಳು, ಚುನಾಯಿತ ಪ್ರತಿನಿಧಿಗಳು, ತಲಾಥಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿಗಳು), ಸಹಕಾರಿ ಸಂಸ್ಥೆಗಳು, ಬ್ಯಾಂಕ್ಗಳು ಮುಂತಾದ ವಿವಿಧ ಪಾಲುದಾರರು ಮತ್ತು ಸಂಸ್ಥೆಗಳನ್ನು ಉತ್ತೇಜಿಸಲು ಸಂಘಟಿತ ಪ್ರಯತ್ನವನ್ನು ಕೈಗೊಂಡಿದೆ. ಪರಿಣಾಮವಾಗಿ, ಪ್ರತಿ ಗ್ರಾಮ ಪಂಚಾಯತ್ನಲ್ಲಿ ಕನಿಷ್ಠ 75 ರೈತರನ್ನು ಗುರುತಿಸಲಾಯಿತು ಮತ್ತು ನೈಸರ್ಗಿಕ ಕೃಷಿ ಕೈಗೊಳ್ಳಲು ಪ್ರೇರೇಪಣೆ ಮತ್ತು ತರಬೇತಿ ನೀಡಲಾಯಿತು. ರೈತರಿಗೆ 90 ವಿವಿಧ ಕ್ಲಸ್ಟರ್ಗಳಲ್ಲಿ ತರಬೇತಿ ನೀಡಲಾಗಿದ್ದು, ಜಿಲ್ಲೆಯಾದ್ಯಂತ 41,000 ಕ್ಕೂ ಹೆಚ್ಚು ರೈತರಿಗೆ ತರಬೇತಿ ನೀಡಲಾಗಿದೆ.

 

 

***************