ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಕ್ರವಾರ ನವದೆಹಲಿಯಲ್ಲಿ ಶ್ರೀ ಬಿಲ್ ಗೇಟ್ಸ್ ಅವರನ್ನು ಭೇಟಿ ಮಾಡಿದರು.
ಶ್ರೀ ಬಿಲ್ ಗೇಟ್ಸ್ ಅವರು ತಮ್ಮ ಇತ್ತೀಚಿನ ಭಾರತ ಭೇಟಿಯ ಕುರಿತು ಹಂಚಿಕೊಂಡ ತಮ್ಮ ಟ್ವೀಟ್ ಸಂದೇಶಕ್ಕೆ ಸ್ಪಂದಿಸಿದ ಪ್ರಧಾನಮಂತ್ರಿಯವರು ಈ ರೀತಿ ಟ್ವೀಟ್ ಮಾಡಿದ್ದಾರೆ:
“@BillGates ಅವರನ್ನು ಭೇಟಿ ಮಾಡಲು ಮತ್ತು ಪ್ರಮುಖ ವಿಷಯಗಳ ಬಗ್ಗೆ ವ್ಯಾಪಕವಾದ ಚರ್ಚೆಗಳನ್ನು ನಡೆಸಲು ಸಾಧ್ಯವಾಗಿರುವುದು ಸಂತೋಷ ತಂದಿದೆ. ಉತ್ತಮ ಹಾಗೂ ಹೆಚ್ಚು ಸಮರ್ಥನೀಯ ಪರಿಸರಸ್ನೇಹಿ ಗ್ರಹವನ್ನು ಸೃಷ್ಟಿಸುವ ಕುರಿತು ಅವರ ನಮ್ರತೆ ಮತ್ತು ಉತ್ಸಾಹವು ಸ್ಪಷ್ಟವಾಗಿ ಗೋಚರಿಸುತ್ತದೆ.”
ಶ್ರೀ ಬಿಲ್ ಗೇಟ್ಸ್ ಅವರು ತಮ್ಮ ‘ಸಂದೇಶ’ದಲ್ಲಿ, “ನಾನು ಈ ವಾರ ಭಾರತದಲ್ಲಿದ್ದಿದ್ದೇನೆ. ಆರೋಗ್ಯ, ಹವಾಮಾನ ಬದಲಾವಣೆ ಮತ್ತು ಇತರ ನಿರ್ಣಾಯಕ ಕ್ಷೇತ್ರಗಳಲ್ಲಿ ಇಲ್ಲಿ ನಡೆಯುತ್ತಿರುವ ನವೀನ ಕೆಲಸದ ಬಗ್ಗೆ ಕಲಿಯುತ್ತಿದ್ದೇನೆ. ಜಗತ್ತು ಹಲವಾರು ಸವಾಲುಗಳನ್ನು ಹೊಂದಿರುವ ಸಮಯದಲ್ಲಿ, ಭಾರತದಂತಹ ಕ್ರಿಯಾತ್ಮಕ ಮತ್ತು ಸೃಜನಶೀಲ ಸ್ಥಳಕ್ಕೆ ಭೇಟಿ ನೀಡುವುದು ಸ್ಫೂರ್ತಿದಾಯಕವಾಗಿದೆ.” ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿಯವರೊಂದಿಗಿನ ಭೇಟಿಯನ್ನು ಅವರ ಪ್ರವಾಸದ ಪ್ರಮುಖ ಅಂಶವೆಂದು ಹೇಳಿದ ಶ್ರೀ ಬಿಲ್ ಗೇಟ್ಸ್, “ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ನಾನು ಸಂಪರ್ಕದಲ್ಲಿದ್ದೆವು, ವಿಶೇಷವಾಗಿ ಕೋವಿಡ್-19 ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಭಾರತದ ಆರೋಗ್ಯ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಬಗ್ಗೆ ಮಾತುಕತೆ ನಡೆಸುತ್ತಿದ್ದೆವು. ಭಾರತವು ಸಾಕಷ್ಟು ಸುರಕ್ಷಿತ, ಪರಿಣಾಮಕಾರಿ ಮತ್ತು ಕೈಗೆಟುಕುವ ಲಸಿಕೆಗಳನ್ನು ತಯಾರಿಸುವ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ, ಅವುಗಳಲ್ಲಿ ಕೆಲವು ಗೇಟ್ಸ್ ಫೌಂಡೇಶನ್ ನಿಂದ ಬೆಂಬಲಿತವಾಗಿದೆ. ಭಾರತದಲ್ಲಿ ತಯಾರಾದ ಲಸಿಕೆಗಳು ಸಾಂಕ್ರಾಮಿಕ ಸಮಯದಲ್ಲಿ ಲಕ್ಷಾಂತರ ಜೀವಗಳನ್ನು ಉಳಿಸಿವೆ ಮತ್ತು ಪ್ರಪಂಚದಾದ್ಯಂತ ಇತರ ರೋಗಗಳನ್ನು ತಡೆಗಟ್ಟುಲು ಸಹಾಯ ಮಾಡಿದೆ.” ಎಂದು ಹೇಳಿದ್ದಾರೆ
“ಹೊಸ ಜೀವ ಉಳಿಸುವ ಸಾಧನಗಳನ್ನು ಉತ್ಪಾದಿಸುವುದರ ಜೊತೆಗೆ, ಭಾರತವು ಅವುಗಳನ್ನು ತಲುಪಿಸುವಲ್ಲಿಯೂ ಉತ್ತಮ ವ್ಯವಸ್ಥೆ ಹೊಂದಿದೆ – ಭಾರತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು 2.2 ಶತಕೋಟಿಗೂ ಹೆಚ್ಚು ಪ್ರಮಾಣದ ಕೋವಿಡ್ ಲಸಿಕೆಗಳನ್ನು ಸಕಾಲಿಕವಾಗಿ ತಲುಪಿಸಿದೆ. ಅವರು ಕೊ-ವಿನ್ ಎಂಬ ಓಪನ್ ಸೋರ್ಸ್ ಪ್ಲಾಟ್ಫಾರ್ಮ್ ಅನ್ನು ರಚಿಸಿದರು, ಇದು ಜನರಿಗೆ ಶತಕೋಟಿ ಲಸಿಕೆ ನೇಮಕಾತಿ, ದಾಖಲಾತಿ ಮತ್ತು ದೃಢೀಕರಣಗಳನ್ನು ನಿಗದಿಪಡಿಸಲು ಅವಕಾಶ ಮಾಡಿಕೊಟ್ಟಿತು. ಲಸಿಕೆ ಹಾಕಿದವರಿಗೆ ಡಿಜಿಟಲ್ ಪ್ರಮಾಣೀಕರಣಗಳನ್ನು ವಿತರಿಸಿತು. ಭಾರತದ ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮವನ್ನು ಬೆಂಬಲಿಸಲು ಈ ವೇದಿಕೆಯನ್ನು ಈಗ ವಿಸ್ತರಿಸಲಾಗುತ್ತಿದೆ. ಕೊ-ವಿನ್ ವಿಶ್ವಕ್ಕೆ ಮಾದರಿ ಎಂದು ಪ್ರಧಾನಮಂತ್ರಿ ಮೋದಿ ನಂಬಿದ್ದಾರೆ ಮತ್ತು ನಾನು ಅದನ್ನು ಒಪ್ಪುತ್ತೇನೆ.” ಎಂದು ಭಾರತವು ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದ ಬಗ್ಗೆ ಶ್ರೀ ಬಿಲ್ ಗೇಟ್ಸ್ ಅವರು ವಿವರಿಸಿದ್ದಾರೆ.
ಶ್ರೀ ಬಿಲ್ ಗೇಟ್ಸ್ ಅವರು ಡಿಜಿಟಲ್ ಪಾವತಿಯಲ್ಲಿ ಭಾರತದ ಪ್ರಗತಿಯನ್ನು ಶ್ಲಾಘಿಸಿದರು ಮತ್ತು “ಸಾಂಕ್ರಾಮಿಕ ಸಮಯದಲ್ಲಿ 200 ಮಿಲಿಯನ್ ಮಹಿಳೆಯರು ಸೇರಿದಂತೆ 300 ಮಿಲಿಯನ್ ಜನರಿಗೆ ತುರ್ತು ಡಿಜಿಟಲ್ ಪಾವತಿಗಳನ್ನು ವರ್ಗಾಯಿಸಲು ಭಾರತಕ್ಕೆ ಸಾಧ್ಯವಾಯಿತು. ಭಾರತವು ಆರ್ಥಿಕ ಸೇರ್ಪಡೆಗೆ ಆದ್ಯತೆ ನೀಡಿರುವುದರಿಂದ ಹಾಗೂ ಡಿಜಿಟಲ್ ಗುರುತುಚೀಟಿ ವ್ಯವಸ್ಥೆಯಲ್ಲಿ (ಆಧಾರ್ ಎಂದು ಕರೆಯಲ್ಪಡುತ್ತದೆ) ಹೂಡಿಕೆ ಮಾಡುವುದು ಮತ್ತು ಡಿಜಿಟಲ್ ಬ್ಯಾಂಕಿಂಗ್ಗಾಗಿ ನವೀನ ವೇದಿಕೆಗಳನ್ನು ರಚಿಸುವುದು ಮುಂತಾದ ಸಕಾರಾತ್ಮಕ ಪ್ರಕ್ರಿಯೆಗಳಿಂದ ಮಾತ್ರ ಇದು ಸಾಧ್ಯವಾಯಿತು. ಹಣಕಾಸಿನ ಸೇರ್ಪಡೆಯು ಅದ್ಭುತ ಹೂಡಿಕೆಯಾಗಿದೆ ಎಂಬುದನ್ನು ಇದು ನೆನಪಿಸುತ್ತದೆ. ” ಎಂದು ಹೇಳಿದ್ದಾರೆ
ಬೃಹತ್ ಸಾಮಾಜಿಕ ಯೋಜನೆಗಳ ನಿಟ್ಟಿನಲ್ಲಿ ಭಾರತದ ಸಾಧನೆಗಳಾದ ಪ್ರಧಾನಮಂತ್ರಿ ಗತಿಶಕ್ತಿ ಮಹಾಯೋಜನೆ, ಜಿ20 ಅಧ್ಯಕ್ಷತೆ, ಶಿಕ್ಷಣ, ನಾವೀನ್ಯತೆ, ರೋಗಗಳ ವಿರುದ್ಧ ಹೋರಾಡುವುದು ಮತ್ತು ಸಿರಿಧಾನ್ಯಗಳಿಗೆ ಪ್ರಧಾನ್ಯತೆ ನೀಡುವುದು ಮುಂತಾದವುಗಳ ಬಗ್ಗೆ ಶ್ರೀ ಬಿಲ್ ಗೇಟ್ಸ್ ಅವರು ತಮ್ಮ’ಸಂದೇಶ’ದಲ್ಲಿ ಹೇಳಿದ್ದಾರೆ
“ಪ್ರಧಾನಮಂತ್ರಿ ಅವರೊಂದಿಗಿನ ನನ್ನ ಸಂಭಾಷಣೆಯು ಆರೋಗ್ಯ, ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಭಾರತ ಮಾಡುತ್ತಿರುವ ಪ್ರಗತಿಯ ಬಗ್ಗೆ ಪ್ರಾಮುಖ್ಯತೆ ಪಡೆದ ಕಾರಣದಿಂದ, ನನಗೆ ಎಂದಿಗಿಂತಲೂ ಹೆಚ್ಚು ಆಶಾದಾಯಕವಾಗಿ ಕಂಡಿದೆ. ನಾವು ನಾವೀನ್ಯತೆಗೆ ಹೂಡಿಕೆ ಮಾಡಿದಾಗ ಏನು ಸಾಧ್ಯ ಎಂಬುದನ್ನು ಭಾರತ ದೇಶವು ತೋರಿಸುತ್ತಿದೆ. ಭಾರತವು ಈ ಪ್ರಗತಿಯನ್ನು ಮುಂದುವರಿಸುತ್ತದೆ ಮತ್ತು ಅದರ ಆವಿಷ್ಕಾರಗಳನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ.” ಎಂದು ಶ್ರೀ ಬಿಲ್ ಗೇಟ್ಸ್ ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
****
Delighted to meet @BillGates and have extensive discussions on key issues. His humility and passion to create a better as well as more sustainable planet are clearly visible. https://t.co/SYfOZpKwx8 pic.twitter.com/PsoDpx3vRG
— Narendra Modi (@narendramodi) March 4, 2023