Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಗಳ ಕಾರ್ಯಾಲಯದ (ಪಿಎಂಒ) ಅಧಿಕಾರ ವಹಿಸಿಕೊಂಡ ಪ್ರಧಾನ ಮಂತ್ರಿ

ಪ್ರಧಾನಮಂತ್ರಿಗಳ ಕಾರ್ಯಾಲಯದ (ಪಿಎಂಒ) ಅಧಿಕಾರ ವಹಿಸಿಕೊಂಡ ಪ್ರಧಾನ ಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಧಾನಮಂತ್ರಿ ಕಾರ್ಯಾಲಯದ(ಪಿಎಂಒ) ಅಧಿಕಾರ ವಹಿಸಿಕೊಂಡರು. ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ಪ್ರಧಾನಮಂತ್ರಿ ಕಾರ್ಯಾಲಯವನ್ನು ಮೊದಲಿನಿಂದಲೂ ಒಂದು ಸೇವಾ ಸಂಸ್ಥೆ ಮತ್ತು ʻಜನರ ಪ್ರಧಾನ ಮಂತ್ರಿ ಕಾರ್ಯಾಲಯʼವನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು. “ನಾವು ಪ್ರಧಾನಮಂತ್ರಿಗಳ ಕಾರ್ಯಾಲಯವನ್ನು ವೇಗವರ್ಧಕ ಸಾಧನವನ್ನಾಗಿ ಅಭಿವೃದ್ಧಿಪಡಿಸಲು ಪ್ರಯತ್ನಿಸಿದ್ದೇವೆ, ಇದು ಹೊಸ ಶಕ್ತಿ ಮತ್ತು ಸ್ಫೂರ್ತಿಯ ಮೂಲವಾಗಿದೆ”, ಎಂದು ಪ್ರಧಾನಿ ಹೇಳಿದರು.

ಸರ್ಕಾರ ಎಂದರೆ ಹೊಸ ಶಕ್ತಿ, ಸಮರ್ಪಣೆ ಮತ್ತು ಸಂಕಲ್ಪ ಎಂದು ಹೇಳಿದ ಪ್ರಧಾನಿ ಮೋದಿ, ಪ್ರಧಾನಮಂತ್ರಿ ಕಾರ್ಯಾಲಯವು ಸಮರ್ಪಣಾ ಭಾವದಿಂದ ಜನರ ಸೇವೆ ಮಾಡಲು ಸಜ್ಜಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸರ್ಕಾರವನ್ನು ನಡೆಸುವುದು ಮೋದಿ ಒಬ್ಬರೇ ಅಲ್ಲ, ಸಾವಿರಾರು ಮನಸ್ಸುಗಳು ಒಗ್ಗೂಡಿ ಜವಾಬ್ದಾರಿಗಳನ್ನು ಹೊರುತ್ತವೆ ಮತ್ತು ಇದರ ಪರಿಣಾಮವಾಗಿ, ನಾಗರಿಕರು ಅದರ ಅಗಾಧತೆಗೆ ಸಾಕ್ಷಿಯಾಗುತ್ತಾರೆ ಎಂದು ಅವರು ಒತ್ತಿ ಹೇಳಿದರು.

ತಮ್ಮ ತಂಡದಲ್ಲಿರುವವರಿಗೆ ಯಾವುದೇ ಸಮಯದ ನಿರ್ಬಂಧಗಳಿಲ್ಲ, ಚಿಂತನೆಗೆ ಮಿತಿಗಳಿಲ್ಲ ಅಥವಾ ಪ್ರಯತ್ನಕ್ಕೆ ಯಾವುದೇ ನಿರ್ದಿಷ್ಟ ಮಾನದಂಡಗಳಿಲ್ಲ ಎಂದು ಶ್ರೀ ಮೋದಿ ಒತ್ತಿ ಹೇಳಿದರು. “ಇಡೀ ರಾಷ್ಟ್ರವು ಈ ತಂಡದ ಮೇಲೆ ನಂಬಿಕೆ ಇಟ್ಟಿದೆ” ಎಂದು ಪ್ರಧಾನಿ ಒತ್ತಿ ಹೇಳಿದರು.

ತಮ್ಮ ತಂಡದ ಭಾಗವಾಗಿರುವವರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿಯವರು, ಮುಂದಿನ 5 ವರ್ಷಗಳ ಕಾಲ ʻವಿಕಸಿತ ಭಾರತʼದ ಪ್ರಯಾಣದ ಭಾಗವಾಗಲು ಮತ್ತು ರಾಷ್ಟ್ರ ನಿರ್ಮಾಣ ಕೆಲಸಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವಂತೆ ಕರೆ ನೀಡಿದರು. “ನಾವೆಲ್ಲರೂ ಒಟ್ಟಾಗಿ, ʻವಿಕಸಿತ ಭಾರತ 2047ʼ ಸಾಧನೆಯ ಉದ್ದೇಶದೊಂದಿಗೆ ‘ರಾಷ್ಟ್ರ ಮೊದಲು’ ಗುರಿಯನ್ನು ಸಾಧಿಸುತ್ತೇವೆ,” ಎಂದು ಪ್ರಧಾನಿ ಹೇಳಿದರು. ತಮ್ಮ ಪ್ರತಿ ಕ್ಷಣವೂ ದೇಶಕ್ಕೆ ಸಮರ್ಪಿತ ಎಂದು ಅವರು ಪುನರುಚ್ಚರಿಸಿದರು.

ಅಭಿಲಾಷೆ ಮತ್ತು ಸ್ಥಿರತೆಯ ಸಂಯೋಜನೆಯು ದೃಢನಿಶ್ಚಯವನ್ನು ಮೂಡಿಸುತ್ತದೆ ಮತ್ತು ದೃಢನಿಶ್ಚಯಕ್ಕೆ ಪೂರಕವಾಗಿ ಕಠಿಣ ಪರಿಶ್ರಮವು ಸೇರಿದಾಗ ಯಶಸ್ಸು ಕೈಗೂಡುತ್ತದೆ ಎಂದು ಪ್ರಧಾನಿ ಮೋದಿ ವಿವರಿಸಿದರು. ಯಾವುದೇ ವ್ಯಕ್ತಿಯ ಬಯಕೆ ಸ್ಥಿರವಾಗಿದ್ದರೆ, ಅದು ನಿರ್ಣಯದ ರೂಪವನ್ನು ತೆಗೆದುಕೊಳ್ಳುತ್ತದೆ, ಆದರೆ ನಿರಂತರವಾಗಿ ಹೊಸ ರೂಪಗಳನ್ನು ಪಡೆಯುವ ಬಯಕೆ ಕೇವಲ ಒಂದು ಅಲೆಯಾಗಿರುತ್ತದೆ ಎಂದು ಅವರು ಹೇಳಿದರು.

ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಬಯಕೆಯನ್ನು ವ್ಯಕ್ತಪಡಿಸಿದ ಪ್ರಧಾನಿ, ಕಳೆದ 10 ವರ್ಷಗಳಿಂದ ಮಾಡಿದ ಕೆಲಸವನ್ನು ಮೀರಿಸುವ ಮೂಲಕ ಭವಿಷ್ಯದಲ್ಲಿ ಜಾಗತಿಕ ಮಾನದಂಡವನ್ನು ಮೀರುವಂತೆ ತಮ್ಮ ತಂಡಕ್ಕೆ ಕರೆ ನೀಡಿದರು. “ನಾವು ದೇಶವನ್ನು ಬೇರೆ ಯಾವುದೇ ರಾಷ್ಟ್ರವು ಸಾಧಿಸಲಾಗದಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು” ಎಂದು ಶ್ರೀ ಮೋದಿ ಉದ್ಗರಿಸಿದರು.

ಚಿಂತನೆಯಲ್ಲಿ ಸ್ಪಷ್ಟತೆ, ದೃಢನಿಶ್ಚಯ, ನಂಬಿಕೆ ಹಾಗೂ ಕಾರ್ಯಪ್ರವೃತ್ತರಾಗುವ ಗುಣವು ಯಶಸ್ಸಿನ ಪೂರ್ವಾಪೇಕ್ಷಿತ ಅಂಶಗಳು ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. “ನಾವು ಈ ಮೂರು ವಿಷಯಗಳನ್ನು ಹೊಂದಿದ್ದರೆ, ವೈಫಲ್ಯವು ಹತ್ತಿರಕ್ಕೂ ಸುಳಿಯುವುದಿಲ್ಲ ಎಂಬುದು ನನ್ನ ನಂಬಿಕೆ,ʼʼ ಎಂದು ಅವರು ಹೇಳಿದರು.

ದೇಶದ ಭವಿಷ್ಯಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ಭಾರತ ಸರ್ಕಾರದ ನೌಕರರನ್ನು ಶ್ಲಾಘಿಸಿದ ಪ್ರಧಾನಿ, ಈ ನೌಕರರು ಸರ್ಕಾರದ ಸಾಧನೆಗಳಲ್ಲಿ ದೊಡ್ಡ ಪಾಲನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಹೇಳಿದರು. “ಈ ಚುನಾವಣೆಗಳು ಸರ್ಕಾರಿ ನೌಕರರ ಪ್ರಯತ್ನಗಳಿಗೆ ಅನುಮೋದನೆಯ ಮುದ್ರೆ ಒತ್ತುತ್ತವೆ,” ಎಂದು ಪ್ರಧಾನಿ ಮೋದಿ ಹೇಳಿದರು. ಹೊಸ ಆಲೋಚನೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಮಾಡುತ್ತಿರುವ ಕೆಲಸದ ಪ್ರಮಾಣವನ್ನು ಹೆಚ್ಚಿಸಲು ಅವರು ತಂಡವನ್ನು ಉತ್ತೇಜಿಸಿದರು. ತಮ್ಮೊಳಗಿನ ವಿದ್ಯಾರ್ಥಿಯನ್ನು ಜೀವಂತವಾಗಿರಿಸುವವರಷ್ಟೇ ಯಶಸ್ವಿ ವ್ಯಕ್ತಿಗಳಾಗಬಲ್ಲರು ಎಂದು ತಮ್ಮ ಶಕ್ತಿಯ ಹಿಂದಿನ ರಹಸ್ಯವನ್ನು ಬಹಿರಂಗಪಡಿಸುವ ಮೂಲಕ ಪ್ರಧಾನಮಂತ್ರಿಯವರು ಭಾಷಣವನ್ನು ಮುಕ್ತಾಯಗೊಳಿಸಿದರು.

 

 

*****