Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಗತಿ ಮೂಲಕ ಪ್ರಧಾನಮಂತ್ರಿ ಸಂವಾದ


ಎರಡನೇ  ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಪ್ರಧಾನಮಂತ್ರಿ ಶ್ರೀನರೇಂದ್ರ ಮೋದಿ ಅವರು ಪ್ರಗತಿ ಸಂವಾದ ನಡೆಸಿ, 2022ರವೇಳೆಗೆ ‘ಸರ್ವರಿಗೂ ಸೂರು’ ಒದಗಿಸುವ ಬದ್ಧತೆಯನ್ನು ಪುನರ್ ಪ್ರತಿಪಾದಿಸಿದರು.

 

ಅಲ್ಲದೆ,ಪ್ರಧಾನಿ ಅವರು ಮಹತ್ವಾಕಾಂಕ್ಷೆಯ ಯೋಜನೆಗಳಾದ ಆಯುಷ್ಮಾನ್ ಭಾರತ್ ಮತ್ತು ಸುಗಮ್ಯ ಭಾರತ್ ಅಭಿಯಾನ ಪ್ರಗತಿಯನ್ನು ಪರಾಮರ್ಶಿಸಿದರು.

 

ಪ್ರಧಾನಮಂತ್ರಿಗಳು ಜಲ ಸಂರಕ್ಷಣೆಗೆ ವಿಶೇಷವಾಗಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಗರಿಷ್ಠ ಪ್ರಯತ್ನಗಳನ್ನು ನಡೆಸಬೇಕು ಎಂದು ರಾಜ್ಯಗಳಿಗೆ ಕರೆ ನೀಡಿದರು.

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಐಸಿಟಿ ಆಧಾರಿತ ಬಹುಹಂತದ ಕ್ರೀಯಾಶೀಲ ಆಡಳಿತ ಮತ್ತು ಸಕಾಲದಲ್ಲಿ ಅನುಷ್ಠಾನ –ಪ್ರಗತಿ ಕುರಿತ 30ನೇ ಸಂವಾದ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

 

ಕೇಂದ್ರ ಸರ್ಕಾರದ ಎರಡನೇ ಅವಧಿಯಲ್ಲಿ ನಡೆದ ಮೊದಲ ಪ್ರಗತಿ ಸಭೆ ಇದಾಗಿದೆ.

 

ಸರ್ಕಾರದ ಹಿಂದಿನ ಅವಧಿಯಲ್ಲಿ 29 ಪ್ರಗತಿ ಸಭೆಗಳು ನಡೆದಿದ್ದವು, ಅವುಗಳಲ್ಲಿ ಒಟ್ಟು ಸುಮಾರು 12 ಲಕ್ಷ  ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯ 257 ಯೋಜನೆಗಳ ಪ್ರಗತಿ ಪರಾಮರ್ಶಿಸಲಾಗಿತ್ತು ಮತ್ತು 47 ಕಾರ್ಯಕ್ರಮಗಳು/ಯೋಜನೆಗಳ ಪ್ರಗತಿ ಅವಲೋಕಿಸಲಾಗಿತ್ತು. 17 ವಲಯಗಳಲ್ಲಿನ (21 ವಿಷಯಗಳ) ಸಾರ್ವಜನಿಕ ದೂರು ಇತ್ಯರ್ಥ ವ್ಯವಸ್ಥೆಯನ್ನೂ ಸಹ ಪರಾಮರ್ಶಿಸಲಾಯಿತು.

 

ಪ್ರಧಾನಮಂತ್ರಿಗಳು ಇಂದು ಪ್ರಧಾನಮಂತ್ರಿ ಆವಾಸ್ ಯೋಜನಾ (ನಗರ) ಪ್ರಗತಿಗೆ ಇರುವ ಸಮಸ್ಯೆಗಳ ಪರಿಹಾರ ಕುರಿತು ಪರಾಮರ್ಶೆ ನಡೆಸಿದರು. 2022ರ ವೇಳೆಗೆ ದೇಶದ ಯಾವೊಂದು ಕುಟುಂಬವೂ ವಸತಿ ಸೌಕರ್ಯವಿಲ್ಲದಂತೆ ಇರಬಾರದೆಂಬುದನ್ನು ಖಾತ್ರಿಪಡಿಸಬೇಕು ಎಂದು ಬಲವಾಗಿ ಪ್ರತಿಪಾದಿಸಿದ ಅವರು, ಆ ಗುರಿ ಸಾಧನೆಗಾಗಿ ಅಧಿಕಾರಿಗಳು ದೃಢತೆಯಿಂದ ಕೆಲಸ ಮಾಡಬೇಕು ಮತ್ತು ಅದಕ್ಕೆ ಅಡ್ಡಿಯಾಗುವ ಎಲ್ಲ ಅಡೆತಡೆಗಳನ್ನು ನಿವಾರಿಸಬೇಕೆಂದರು. ಆ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು ಹಣಕಾಸು ಸೇವೆಗಳ ಇಲಾಖೆಗೆ ಸಂಬಂಧಿಸಿದಂತೆ ದೂರು ಇತ್ಯರ್ಥ ವ್ಯವಸ್ಥೆಯನ್ನು ಪರಾಮರ್ಶಿಸಿದರು.

 

ಪ್ರಧಾನಮಂತ್ರಿಗಳು ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆ ವಿಸೃತವಾಗಿ ಪರಾಮರ್ಶೆ ನಡೆಸಿದರು. ಈವರೆಗೆ ಯೋಜನೆಗೆ ಸುಮಾರು 16ಸಾವಿರ ಆಸ್ಪತ್ರೆಗಳು ಸೇರ್ಪಡೆಯಾಗಿವೆ ಮತ್ತು ಸುಮಾರು 35 ಲಕ್ಷ ಫಲಾನುಭವಿಗಳು ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಪ್ರಧಾನಿ ಅವರಿಗೆ ತಿಳಿಸಲಾಯಿತು. ರಾಜ್ಯಗಳು ಸಂವಾದ ಮೂಲಕ ಉತ್ತಮ ಪದ್ದತಿಗಳ ಅಳವಡಿಸಲು ಸಹಾಯ ಮತ್ತು ಯೋಜನೆಯಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರಬೇಕಿದ್ದರೆ ಅವುಗಳನ್ನು ತಿಳಿಸಬೇಕು ಎಂದು ಪ್ರಧಾನಿ ಕರೆ ನೀಡಿದರು. ಯೋಜನೆಯಿಂದ ಆಗಿರುವ ಪ್ರಯೋಜನಗಳು, ವಿಶೇಷವಾಗಿ ಆಶೋತ್ತರ ಜಿಲ್ಲೆಗಳಲ್ಲಿ ಮತ್ತು ಯೋಜನೆಯ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಬೇಕು ಎಂದು ಪ್ರಧಾನಿ ಹೇಳಿದರು. ಯೋಜನೆಯಲ್ಲಿ ಅಗ್ಗಾಗ್ಗೆ ಆಗುವ ದುರುಪಯೋಗ ಮತ್ತು ವಂಚನೆ ಪ್ರಕರಣಗಳನ್ನು ತಡೆಯಲು ಏನೇನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಕೇಳಿದರು.   

 

ಸುಗಮ್ಯ ಭಾರತ್ ಅಭಿಯಾನ ಯೋಜನೆಯ ಪ್ರಗತಿ ಪರಾಮರ್ಶಿಸಿದ ಪ್ರಧಾನಮಂತ್ರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ದಿವ್ಯಾಂಗ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಹತ್ತಿಕ್ಕಲು, ಅವರಿಂದ ಅಗತ್ಯ ಮಾಹಿತಿ ಪಡೆದು ತಂತ್ರಜ್ಞಾನ ಬಳಸಿಕೊಡು ಕಾರ್ಯತಂತ್ರ ರೂಪಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ದಿವ್ಯಾಂಗ ಜನರಿಗೆ ಸುಲಭವಾಗಿ ತಲುಪುವಂತಾಗಲು ಪರಿಹಾರಗಳನ್ನು ಕಂಡುಹಿಡಿಯಬೇಕು ಮತ್ತು ಇನ್ನೂ ಹೆಚ್ಚಿನ ಸಾರ್ವಜನಿಕ ಸಹಭಾಗಿತ್ವ ಅಗತ್ಯವಿದೆ ಎಂದರು.

 

ಜಲ ಶಕ್ತಿಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಗಳು, ರಾಜ್ಯ ಸರ್ಕಾರಗಳು ಜಲ ಸಂರಕ್ಷಣೆಗೆ ವಿಶೇಷವಾಗಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ನೀರಿನ ಸಂರಕ್ಷಣೆಗೆ ಗರಿಷ್ಠ ಪ್ರಯತ್ನಗಳನ್ನು ನಡೆಸಬೇಕು ಎಂದು ಕರೆ ನೀಡಿದರು.

 

ಪ್ರಧಾನಮಂತ್ರಿಗಳು ಇದೇ ವೇಳೆ ರೈಲ್ವೆ ಮತ್ತು ರಸ್ತೆ ಅಭಿವೃದ್ಧಿ ಸೇರಿದಂತೆ ಎಂಟು ಪ್ರಮುಖ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಪರಾಮರ್ಶೆ ನಡೆಸಿದರು. ಈ ಯೋಜನೆಗಳು ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಸೇರಿ ಮತ್ತಿತರ ಹಲವು ರಾಜ್ಯಗಳಿಗೆ ಸೇರಿದವುಗಳಾಗಿವೆ.