Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಗತಿಯ ಮೂಲಕ ಪ್ರಧಾನಮಂತ್ರಿ ಸಂವಾದ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಡಳಿತ ಪರವಾದ ಮತ್ತು ಸಕಾಲದ   ಅನುಷ್ಠಾನ ಕುರಿತ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆ ಪ್ರಗತಿಯ ಮೂಲಕ 31ನೇ   ಸಂವಾದದ ಅಧ್ಯಕ್ಷತೆ ವಹಿಸಿದ್ದರು.

 

ಹಿಂದಿನ ಪ್ರಗತಿ ಸಭೆಗಳಲ್ಲಿ 12.15 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯ ಒಟ್ಟು 265 ಯೋಜನೆಗಳು, 47 ಕಾರ್ಯಕ್ರಮಗಳು/ಯೋಜನೆಗಳು ಮತ್ತು 17 ವಲಯಗಳಿಗೆ (22 ವಿಷಯ) ಸಂಬಂಧಿಸಿದ ಕುಂದುಕೊರತೆಗಳ ಬಗ್ಗೆ ಪರಾಮರ್ಶಿಸಲಾಗಿದೆ.

 

ಪ್ರಗತಿ ಸಭೆಯಲ್ಲಿಂದು 16 ರಾಜ್ಯಗಳು ಮತ್ತು ಜಮ್ಮು ಹಾಗೂ ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ 61 ಸಾವಿರ ಕೋಟಿ ರೂಪಾಯಿ  ಮೊತ್ತದ 9 ಯೋಜನೆಗಳ ಪರಿಶೀಲನೆ ನಡೆಸಲಾಯಿತು. ರಾಷ್ಟ್ರೀಯ ಕೃಷಿ ಮಾರುಕಟ್ಟೆ ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದಂತಹ ವಿಷಯಗಳ ಜೊತೆಗೆ ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಪ್ರಜೆಗಳ ಕುಂದುಕೊರತೆ ಬಗ್ಗೆಯೂ ಚರ್ಚಿಸಲಾಯಿತು.

 

ಆಶೋತ್ತರಗಳ ಈಡೇರಿಕೆ

 

ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ಪ್ರಗತಿ ಪರಿಶೀಲಿಸಿದ ಪ್ರಧಾನಮಂತ್ರಿಯವರಿಗೆ 49 ಕಾರ್ಯಕ್ಷಮತೆ ಸೂಚಕಗಳ ಆಧಾರಿತ ಡ್ಯಾಷ್ ಬೋರ್ಡ್ ಕುರಿತು ಮಾಹಿತಿ ನೀಡಲಾಯಿತು. ಪೌಷ್ಟಿಕಾಂಶದ ಸ್ಥಿತಿಗತಿಯಂತಹ ನಿಧಾನವಾಗಿ ಸಾಗುವ ಸೂಚಕಗಳು ಸಹ ಅದ್ಭುತ ಪ್ರಗತಿಯನ್ನು ತೋರಿಸಿವೆ. ಉತ್ತರ ಪ್ರದೇಶದ ಕೆಲವು ಜಿಲ್ಲೆಗಳು ಸುಧಾರಿತ ಬೆಳವಣಿಗೆಯನ್ನು ತೋರಿಸಿವೆ ಎಂಬುದನ್ನು ಪರಿಗಣಿಸಲಾಗಿದೆ.

 

ಇದನ್ನು ರಾಷ್ಟ್ರೀಯ ಸೇವೆಯ ಕ್ರಮ ಎಂದು ಕರೆದಿರುವ ಪ್ರಧಾನಮಂತ್ರಿ, ಬುಡಕಟ್ಟು ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಬೇಕಾದ ಮಹತ್ವವನ್ನು ಪ್ರತಿಪಾದಿಸಿದರು. ಹಿಂದುಳಿದ ಜಿಲ್ಲೆಗಳನ್ನು ರಾಷ್ಟ್ರೀಯ ಸರಾಸರಿಯ ಮಟ್ಟಕ್ಕೆ ತರಲು ಕಾಲಮಿತಿಯನ್ನು ನಿರ್ಧರಿಸುವ ಅಗತ್ಯವನ್ನೂ ಅವರು ಒತ್ತಿ ಹೇಳಿದರು. ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಯುವ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಅವರು ಪ್ರತಿಪಾದಿಸಿದರು.

 

ಕೃಷಿ ಮತ್ತು ಪೂರಕ ಚಟುವಟಿಕೆಗಳು

 

ಪ್ರಧಾನಮಂತ್ರಿಯವರಿಗೆ ಉತ್ತಮ ಬೆಲೆ ಶೋಧನೆಗೆ ನೆರವಾಗುತ್ತಿರುವ ರಾಷ್ಟ್ರೀಯ ಕೃಷಿ ಮಾರುಕಟ್ಟೆ ವೇದಿಕೆಯ ಪ್ರಗತಿಯ ಬಗ್ಗೆ ಮಾಹಿತಿ ನೀಡಲಾಯಿತು. ರೈತರ ಖಾತೆಗಳಿಗೆ ಈಗ ನೇರವಾಗಿ ಇ ಪಾವತಿ ಮಾಡಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಏಕೀಕೃತ ಇ ಮಂಡಿಗಳ ಅಭಿವೃದ್ಧಿ ಪ್ರಗತಿಯಲ್ಲಿದ್ದು ಅದನ್ನೂ ಪರಿಶೀಲಿಸಲಾಯಿತು.

 

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಿಶೇಷವಾಗಿ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಸಂಬಂಧಿಸಿದಂತೆ ಬೇಡಿಕೆ ಒಗ್ಗೂಡಿಸುವಿಕೆಯ ಇ-ಮಾದರಿಗಳ ಆಧಾರದ ಮೇಲೆ, ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯಗಳು ಹೊಸ ನವೋದ್ಯಮ ಮಾದರಿ ಸಾರಿಗೆ ಬೆಂಬಲಕ್ಕಾಗಿ ಒಗ್ಗೂಡಿ ಕಾರ್ಯ ನಿರ್ವಹಿಸಬೇಕು ಎಂದು ಪ್ರಧಾನಮಂತ್ರಿಯವರು ನಿರ್ದೇಶನ ನೀಡಿದರು. ಸುಗಮ ಕಾರ್ಯಾಚರಣೆಗಾಗಿ ಸಾಮಾನ್ಯ, ಏಕೀಕೃತ ವೇದಿಕೆಯ ಬಳಕೆಗೆ ಎಲ್ಲ ರಾಜ್ಯಗಳೂ ಒಂದಾಗಬೇಕು ಎಂದು ಅವರು ಹೇಳಿದರು.

 

ಕೃಷಿ ತ್ಯಾಜ್ಯ ಸುಡುವ ವಿಚಾರಕ್ಕೆ ಸಂಬಂಧಿಸಿದಂತೆ, ಕೃಷಿ ಸಚಿವಾಲಯಕ್ಕೆ  ಆದ್ಯತೆಯ ಮೇಲೆ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣದ ರೈತರಿಗೆ ಇಂಥ ಕಾರ್ಯ ತಡೆಯಲು ಸಲಕರಣೆಗಳನ್ನು ವಿತರಿಸುವಂತೆ ಪ್ರಧಾನಮಂತ್ರಿಯವರು ನಿರ್ದೇಶಿಸಿದರು.

 

ಸಂಪರ್ಕ ಮೂಲಸೌಕರ್ಯ ಅಭಿವೃದ್ಧಿ

 

ಕತ್ರಾ – ಬನಿಹಾಲ್ ರೈಲು ಮಾರ್ಗ ಸೇರಿದಂತೆ ಸಂಪರ್ಕ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಪ್ರಧಾನಮಂತ್ರಿಯವರು ಪರಿಶೀಲಿಸಿದರು. ಮುಂದಿನವರ್ಷದೊಳಗೆ ಯೋಜನೆ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

 

ಈಶಾನ್ಯ ಭಾಗದ ಹಲವು ಯೋಜನೆಗಳು ಅಂದರೆ ಐಜ್ವಾಲ್ – ತುಯ್ ಪಾಂಗ್ ಹೆದ್ದಾರಿಯ ಅಗಲೀಕರಣ ಮತ್ತು ಮೇಲ್ದರ್ಜೀಕರಣದ ಬಗ್ಗೆಯೂ ಚರ್ಚಿಸಲಾಯಿತು. ಮೀರಟ್ ಮತ್ತು ದೆಹಲಿ ನಡುವೆ ಸುರಕ್ಷಿತ ಮತ್ತು ತ್ವರಿತ ಸಂಪರ್ಕ ಕಲ್ಪಿಸಲು ದೆಹಲಿ – ಮೀರಟ್ ಎಕ್ಸ್ ಪ್ರೆಸ್ ಹೆದ್ದಾರಿಯನ್ನು ಪರಿಷ್ಕೃತ ಕಾಲಮಿತಿಯಂತೆ 2020ರ ಮೇ ಒಳಗೆ ಪೂರ್ಣಗೊಳಿಸಬೇಕೆಂದರು. ಆಯಾ ರಾಜ್ಯ ಸರ್ಕಾರಗಳು ದೀರ್ಘ ಕಾಲದಿಂದ ವಿಳಂಬವಾಗಿರುವ ಯೋಜನೆಗಳಿಗೆ ವೇಗ ನೀಡಬೇಕು ಎಂದು ಪ್ರಧಾನಮಂತ್ರಿ ಆಶಿಸಿದರು. ಇಂಥ ಯೋಜನೆಗಳ ಪ್ರಗತಿಯ ಕುರಿತಂತೆ ನಿಯಮಿತವಾಗಿ ವರದಿಗಳನ್ನು ತಮ್ಮ ಕಚೇರಿಗೆ ಕಳುಹಿಸುವಂತೆಯೂ ಅವರು ನಿರ್ದೇಶಿಸಿದರು.

 

ಇಂಧನ ಬೇಡಿಕೆ ಪೂರೈಸಲು

 

ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದಂತೆ  ನವೀಕರಿಸಬಹುದಾದ ಇಂಧನ ಸಮೃದ್ಧ 8 ರಾಜ್ಯಗಳಾದ ತಮಿಳುನಾಡು,  ರಾಜಾಸ್ತಾನ, ಆಂಧ್ರಪ್ರದೇಶ, ಕರ್ನಾಟಕ, ಹಿಮಾಚಲ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ  ಅಂತರ ರಾಜ್ಯ ವಿತರಣಾ ವ್ಯವಸ್ಥೆ ಕಲ್ಪಿಸುವ ಕುರಿತ ಚರ್ಚೆಯ ಸಭೆಯ ಅಧ್ಯಕ್ಷತೆಯನ್ನೂ ಪ್ರಧಾನಮಂತ್ರಿಯವರು ವಹಿಸಿದ್ದರು. ಸೌರ ಮತ್ತು ಪವನ ವಿದ್ಯುತ್ ಕಂಪನಿಗಳು ಹೊಸ ಯೋಜನೆ ಆರಂಭಿಸಲು ಭೂ ಸ್ವಾಧೀನ ಸೇರಿದಂತೆ ಎದುರಿಸುತ್ತಿರುವ ತೊಡಕುಗಳ ಬಗ್ಗೆ ಅವರು ವಿಚಾರಿಸಿದರು.

 

ವೇಮಗಿರಿಯಾಚೆ ಪ್ರಸರಣ ವ್ಯವಸ್ಥೆಯನ್ನು ಬಲಪಡಿಸುವ ಕುರಿತ ಯೋಜನೆಯನ್ನು ಸಕಾಲದಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರಗತಿ ಸಾಧಿಸಿರುವ ಕರ್ನಾಟಕ ಮತ್ತು ಆಂಧ್ರಪ್ರದೇಶದ ರಾಜ್ಯ ಸರ್ಕಾರಗಳನ್ನು ಪ್ರಧಾನಮಂತ್ರಿ ಅಭಿನಂದಿಸಿದರು.