ಗೌರವಾನ್ವಿತ ಅಧ್ಯಕ್ಷ ಮ್ಯಾಕ್ರನ್,
ಇಲ್ಲಿ ಉಪಸ್ಥಿತರಿರುವ ಭಾರತ ಮತ್ತು ಫ್ರಾನ್ಸ್ ನ ಕೈಗಾರಿಕಾ ನಾಯಕರೇ,
ನಮಸ್ಕಾರ, ಶುಭೋದಯ!
ಈ ಕೋಣೆಯಲ್ಲಿ ನನಗೆ ಅದ್ಭುತವಾದ ಶಕ್ತಿ, ಉತ್ಸಾಹ ಮತ್ತು ಚೈತನ್ಯದ ಅನುಭವವಾಗುತ್ತಿದೆ. ಇದು ಕೇವಲ ಸಾಮಾನ್ಯ ವ್ಯವಹಾರದ ಕಾರ್ಯಕ್ರಮವಲ್ಲ.
ಇದು ಭಾರತ ಮತ್ತು ಫ್ರಾನ್ಸ್ ನ ಅತ್ಯುತ್ತಮ ವ್ಯಾಪಾರ ಮನಸ್ಸುಗಳ ಸಂಗಮ. ಇದೀಗ ಮಂಡಿಸಲಾದ ಸಿಇಒ ವೇದಿಕೆಯ ವರದಿ ಸ್ವಾಗತಾರ್ಹ.
ನಾನು ನೀವೆಲ್ಲರೂ ನಾವೀನ್ಯತೆ, ಸಹಯೋಗ ಮತ್ತು ಉನ್ನತೀಕರಣದ ಮಂತ್ರದೊಂದಿಗೆ ಮುಂದುವರಿಯುತ್ತಿರುವುದನ್ನು ನೋಡುತ್ತೇನೆ. ನೀವು ಕೇವಲ ಬೋರ್ಡ್ರೂಮ್ ಸಂಪರ್ಕಗಳನ್ನು ಮಾಡುತ್ತಿಲ್ಲ. ನೀವೆಲ್ಲರೂ ಇಂಡೋ-ಫ್ರೆಂಚ್ ಕಾರ್ಯತಂತ್ರದ ಪಾಲುದಾರಿಕೆಯನ್ನೂ ಸಹ ಬಲಪಡಿಸುತ್ತಿದ್ದೀರಿ.
ಮಿತ್ರರೇ,
ನನ್ನ ಸ್ನೇಹಿತ ಅಧ್ಯಕ್ಷ ಮ್ಯಾಕ್ರನ್ ಅವರೊಂದಿಗೆ ಈ ವೇದಿಕೆಯಲ್ಲಿ ಕುಳಿತುಕೊಳ್ಳಲು ನನಗೆ ಸಂತೋಷವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಇದು ನಮ್ಮ ಆರನೇ ಸಭೆಯಾಗಿದೆ, ಕಳೆದ ವರ್ಷ, ಅಧ್ಯಕ್ಷ ಮ್ಯಾಕ್ರನ್ ನಮ್ಮ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು.
ಇಂದು ಬೆಳಿಗ್ಗೆ ನಾವು ಒಟ್ಟಾಗಿ ಕೃತಕ ಬುದ್ಧಿಮತ್ತೆ (AI) ಕ್ರಿಯಾ ಶೃಂಗಸಭೆಯ ಅಧ್ಯಕ್ಷತೆ ವಹಿಸಿದ್ದೆವು. ಈ ಯಶಸ್ವಿ ಶೃಂಗಸಭೆಗಾಗಿ ನಾನು ಅಧ್ಯಕ್ಷ ಮ್ಯಾಕ್ರನ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ಮಿತ್ರರೇ,
ಭಾರತ ಮತ್ತು ಫ್ರಾನ್ಸ್ ಕೇವಲ ಪ್ರಜಾಪ್ರಭುತ್ವ ಮೌಲ್ಯಗಳಿಂದ ಮಾತ್ರ ಸಂಬಂಧ ಹೊಂದಿಲ್ಲ. ನಮ್ಮ ಸ್ನೇಹ ಬಾಂಧವ್ಯದ ಅಡಿಪಾಯವು ಆಳವಾದ ನಂಬಿಕೆ, ನಾವೀನ್ಯತೆ ಮತ್ತು ಸಾರ್ವಜನಿಕ ಕಲ್ಯಾಣದ ಮನೋಭಾವವನ್ನು ಆಧರಿಸಿದೆ.
ನಮ್ಮ ಪಾಲುದಾರಿಕೆ ಕೇವಲ ಎರಡು ದೇಶಗಳಿಗೆ ಸೀಮಿತವಾಗಿಲ್ಲ. ಜಾಗತಿಕ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಲು ನಾವು ಒಗ್ಗೂಡಿ ಸಹಕರಿಸುತ್ತಿದ್ದೇವೆ. ನನ್ನ ಕೊನೆಯ ಭೇಟಿಯ ವೇಳೆ, ನಮ್ಮ ಪಾಲುದಾರಿಕೆಗಾಗಿ 2047 ರ ನೀಲನಕ್ಷೆಯನ್ನು ನಾವು ರೂಪಿಸಿದ್ದೇವೆ. ಅದನ್ನು ಅನುಸರಿಸಿ, ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಸಮಗ್ರ ಪ್ರಗತಿಗಾಗಿ ಸಹಕಾರ ತಂತ್ರವನ್ನು ಅನುಸರಿಸುತ್ತಿದ್ದೇವೆ.
ಮಿತ್ರರೇ,
ನಿಮ್ಮ ಬಹುತೇಕ ಕಂಪನಿಗಳು ಈಗಾಗಲೇ ಭಾರತದಲ್ಲಿ ನೆಲೆಯೂರಿವೆ. ನೀವು ವೈಮಾನಿಕ, ಬಂದರು, ರಕ್ಷಣಾ, ಎಲೆಕ್ಟ್ರಾನಿಕ್ಸ್, ಹೈನುಗಾರಿಕೆ, ರಾಸಾಯನಿಕ ಮತ್ತು ಗ್ರಾಹಕ ಉತ್ಪನ್ನಗಳನ್ನು ಸೇರಿದಂತೆ ಹಲವು ವಲಯಗಳಲ್ಲಿ ಸಕ್ರೀಯವಾಗಿದ್ದೀರಿ.
ಭಾರತದಲ್ಲಿಯೂ ಸಹ ಅನೇಕ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು (ಸಿಇಒಗಳನ್ನು) ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿದೆ. ಕಳೆದ ದಶಕದಲ್ಲಿ ಭಾರತದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ. ನಾವು ಸ್ಥಿರವಾದ ರಾಜಕೀಯ ವ್ಯವಸ್ಥೆ ಮತ್ತು ನಿರೀಕ್ಷಿತ ನೀತಿ ಪೂರಕ ವ್ಯವಸ್ಥೆಯನ್ನು ಸ್ಥಾಪಿಸಿದ್ದೇವೆ.
ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯ ಹಾದಿಯನ್ನು ಅನುಸರಿಸಿ, ಇಂದು ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಲ್ಲಿ ಒಂದಾಗಿದೆ.
ಇದು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಭಾರತದ ಕೌಶಲ್ಯಪೂರ್ಣ ಯುವ ಪ್ರತಿಭಾ ಸಂಪನ್ಮೂಲ ಮತ್ತು ನಾವೀನ್ಯತೆ ಮನೋಭಾವವು ಜಾಗತಿಕ ವೇದಿಕೆಯಲ್ಲಿ ನಮ್ಮ ಹೆಗ್ಗುರುತಾಗಿದೆ.
ಭಾರತ ಇಂದು ಅತಿ ವೇಗದ ಜಾಗತಿಕ ಹೂಡಿಕೆಯ ನೆಚ್ಚಿನ ತಾಣವಾಗಿ ರೂಪುಗೊಂಡಿದೆ.
ನಾವು ಭಾರತದಲ್ಲಿ AI, ಸೆಮಿಕಂಡಕ್ಟರ್ ಮತ್ತು ಕ್ವಾಂಟಮ್ ಮಿಷನ್ ಗಳನ್ನು ಆರಂಭಿಸಿದ್ದೇವೆ. ರಕ್ಷಣೆಯಲ್ಲಿ, ನಾವು ಮೇಕ್ ಇನ್ ಇಂಡಿಯಾ ಮತ್ತು ಮೇಕ್ ಫಾರ್ ದಿ ವರ್ಲ್ಡ್ ಅನ್ನು ಉತ್ತೇಜಿಸುತ್ತಿದ್ದೇವೆ. ನಿಮ್ಮಲ್ಲಿ ಹಲವರು ಇದರೊಂದಿಗೆ ಸಂಬಂಧ ಹೊಂದಿದ್ದೀರಿ. ನಾವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೊಸ ಎತ್ತರಕ್ಕೆ ಏರುತ್ತಿದ್ದೇವೆ. ಈ ವಲಯವನ್ನು ವಿದೇಶಿ ನೇರ ಬಂಡವಾಳ (ಎಫ್ ಡಿಐಗೆ)ಕ್ಕೆ ಮುಕ್ತಗೊಳಿಸಲಾಗಿದೆ. ನಾವು ಭಾರತವನ್ನು ಕ್ಷಿಪ್ರವಾಗಿ ಜಾಗತಿಕ ಜೈವಿಕ ತಂತ್ರಜ್ಞಾನ ಶಕ್ತಿ ತಾಣವನ್ನಾಗಿ ಮಾಡುತ್ತಿದ್ದೇವೆ.
ಮೂಲಸೌಕರ್ಯ ಅಭಿವೃದ್ಧಿ ನಮಗೆ ಆದ್ಯತೆಯ ವಿಷಯವಾಗಿದೆ. ಮತ್ತು ಇದರ ಮೇಲೆ, ನಾವು ವರ್ಷಕ್ಕೆ $114 ಶತಕೋಟಿ ಡಾಲರ್ ಗಿಂತ ಅಧಿಕ ಸಾರ್ವಜನಿಕ ವೆಚ್ಚವನ್ನು ಮಾಡುತ್ತಿದ್ದೇವೆ. ರೈಲ್ವೆಗಳನ್ನು ಆಧುನೀಕರಿಸಲು ಮತ್ತು ನವೀಕರಿಸಲು ತಂತ್ರಜ್ಞಾನವನ್ನು ಬಳಸಿಕೊಂಡು ನಾವು ಬೃಹತ್ ಪ್ರಮಾಣದಲ್ಲಿ ರೈಲ್ವೆ ಹಳಿಗಳನ್ನು ಹಾಕಿದ್ದೇವೆ.
2030ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಗುರಿಯತ್ತ ನಾವು ವೇಗವಾಗಿ ಸಾಗುತ್ತಿದ್ದೇವೆ. ಅದಕ್ಕಾಗಿ ನಾವು ಸೌರ ಫಲಕಗಳ ಉತ್ಪಾದನೆಯನ್ನು ಉತ್ತೇಜಿಸಿದ್ದೇವೆ. ನಾವು ನಿರ್ಣಾಯಕ ಖನಿಜ ಮಿಷನ್ ಅನ್ನು ಸಹ ಆರಂಭಿಸಿದ್ದೇವೆ.
ನಾವು ಹೈಡ್ರೋಜನ್ ಮಿಷನ್ ಅನ್ನು ಸಹ ಕೈಗೆತ್ತಿಕೊಂಡಿದ್ದೇವೆ. ಅದಕ್ಕಾಗಿ, ಎಲೆಕ್ಟ್ರೋಲೈಸರ್ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ. 2047ರ ವೇಳೆಗೆ, ನಾವು 100 ಗಿಗಾವ್ಯಾಟ್ ಅಣು ವಿದ್ಯುತ್ ಅನ್ನು ಉತ್ಪಾದಿಸುವ ಗುರಿಯನ್ನು ಹೊಂದಿದ್ದೇವೆ. ಈ ವಲಯವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಲಾಗುತ್ತಿದೆ ಎಂಬ ವಿಷಯವನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ನಾವು ಎಸ್ ಎಂಆರ್ ಮತ್ತು ಎಎಂಆರ್ ತಂತ್ರಜ್ಞಾನಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತಿದ್ದೇವೆ.
ಮಿತ್ರರೇ,
ಭಾರತವು ಇಂದು ವೈವಿಧ್ಯತೆ ಮತ್ತು ಅಪಾಯ ಮುಕ್ತಗೊಳಿಸುವಿಕೆಯ ಅತಿದೊಡ್ಡ ಕೇಂದ್ರವಾಗುತ್ತಿದೆ. ಕೆಲವು ದಿನಗಳ ಹಿಂದೆ ನಮ್ಮ ಬಜೆಟ್ನಲ್ಲಿ ಹೊಸ ಪೀಳಿಗೆಯ ಸುಧಾರಣೆಗಳನ್ನು ವಿವರಿಸಲಾಗಿದೆ.
ವ್ಯಾಪಾರಕ್ಕೆ ಸುಗಮ ಮತ್ತು ಸುಲಭ ವಾತಾವರಣ ಸೃಷ್ಟಿಸಲು ನವೀನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ನಾವು 40 ಸಾವಿರಕ್ಕೂ ಅಧಿಕ ಪಾಲನೆಗಳನ್ನು ಏಕರೂಪಗೊಳಿಸಿದ್ದೇವೆ. ವಿಶ್ವಾಸ ಆಧರಿತ ಆರ್ಥಿಕ ಆಡಳಿತವನ್ನು ಉತ್ತೇಜಿಸಲು, ನಿಯಂತ್ರಕ ಸುಧಾರಣೆಗಳಿಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಕಸ್ಟಮ್ ದರ ವ್ಯವಸ್ಥೆಯನ್ನು ಏಕರೂಪಗೊಳಿಸಲಾಗಿದೆ.
ಅಂತಾರಾಷ್ಟ್ರೀಯ ವ್ಯಾಪಾರವನ್ನು ಸುಗಮಗೊಳಿಸಲು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಸಹಾಯದಿಂದ “ಇಂಡಿಯಾ ಟ್ರೇಡ್ ನೆಟ್” ಅನ್ನು ಪರಿಚಯಿಸಲಾಗುತ್ತಿದೆ. ನಾವು ಸುಲಭ ಜೀವನಕ್ಕಾಗಿ ಹೊಸ ಸರಳೀಕೃತ ಆದಾಯ ತೆರಿಗೆ ಸಂಹಿತೆಯನ್ನು ಜಾರಿಗೆ ತರುತ್ತಿದ್ದೇವೆ.
ರಾಷ್ಟ್ರೀಯ ಉತ್ಪಾದನಾ ಮಿಷನ್ ಅನ್ನು ಘೋಷಿಸಲಾಗಿದೆ. ಮತ್ತು ವಿಮಾ ವಲಯದಂತಹ ಹೊಸ ವಲಯಗಳನ್ನು ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ ಡಿ ಐ)ಗೆ ಮುಕ್ತಗೊಳಿಸಲಾಗುತ್ತಿದೆ.ನೀವು ಈ ಎಲ್ಲಾ ಉಪಕ್ರಮಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕು.
ನಾನು ನಿಮಗೆಲ್ಲರಿಗೂ ಹೇಳುವುದೇನೆಂದರೆ, ಭಾರತಕ್ಕೆ ಆಗಮಿಸಲು ಸೂಕ್ತ ಕಾಲ. ಪ್ರತಿಯೊಬ್ಬರ ಪ್ರಗತಿಯು ಭಾರತದ ಪ್ರಗತಿಗೆ ಸಂಬಂಧಿಸಿದೆ. ಇದಕ್ಕೆ ಒಂದು ಉದಾಹರಣೆ ವೈಮಾನಿಕ ವಲಯದಲ್ಲಿ ಕಾಣಬಹುದು, ಭಾರತೀಯ ಕಂಪನಿಗಳು ವಿಮಾನಗಳಿಗೆ ದೊಡ್ಡ ಬೇಡಿಕೆಗಳನ್ನು ನೀಡುತ್ತಿವೆ. ಮತ್ತು ಇದೀಗ ನಾವು 120 ಹೊಸ ವಿಮಾನ ನಿಲ್ದಾಣಗಳನ್ನು ತೆರೆಯಲಿದ್ದೇವೆ, ಭವಿಷ್ಯದ ಸಾಧ್ಯತೆಗಳನ್ನು ನೀವೇ ಊಹಿಸಿಕೊಳ್ಳಬಹುದು.
ಮಿತ್ರರೇ,
ಭಾರತದ 1.4 ಶತಕೋಟಿ ಜನರು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಸಂಕಲ್ಪ ಮಾಡಿದ್ದಾರೆ. ಅದು ರಕ್ಷಣೆ ಅಥವಾ ಮುಂದುವರಿದ ತಂತ್ರಜ್ಞಾನ, ಫಿನ್ಟೆಕ್ ಅಥವಾ ಔಷಧ, ತಂತ್ರಜ್ಞಾನ ಅಥವಾ ಜವಳಿ, ಕೃಷಿ ಅಥವಾ ವೈಮಾನಿಕ, ಆರೋಗ್ಯ ರಕ್ಷಣೆ ಅಥವಾ ಹೆದ್ದಾರಿಗಳು, ಬಾಹ್ಯಾಕಾಶ ಅಥವಾ ಸುಸ್ಥಿರ ಅಭಿವೃದ್ಧಿ ಸೇರಿ ಎಲ್ಲಾ ವಲಯಗಳಲ್ಲೂ. ಈ ಎಲ್ಲಾ ಕ್ಷೇತ್ರಗಳಲ್ಲಿ ನಿಮ್ಮೆಲ್ಲರಿಗೂ ಹೂಡಿಕೆ ಮತ್ತು ಸಹಯೋಗಕ್ಕೆ ವಿಪುಲ ಅವಕಾಶಗಳಿವೆ.
ಭಾರತದ ಅಭಿವೃದ್ಧಿ ಪಯಣದಲ್ಲಿ ನೀವೆಲ್ಲರೂ ಸೇರ್ಪಡೆಯಾಗಿ ಎಂದು ನಾನು ಎಲ್ಲರನ್ನೂ ಸ್ವಾಗತಿಸುತ್ತೇನೆ.
ಫ್ರಾನ್ಸ್ನ ಕೌಶಲ್ಯ ಮತ್ತು ಭಾರತದ ವಿಸ್ತಾರವು ಒಗ್ಗೂಡಿದಾಗ…
ಭಾರತದ ವೇಗ ಮತ್ತು ಫ್ರಾನ್ಸ್ ನ ನಿಖರತೆ ಸೇರಿದಾಗ…
ಫ್ರಾನ್ಸ್ ನ ತಂತ್ರಜ್ಞಾನ ಮತ್ತು ಭಾರತದ ಪ್ರತಿಭೆ ಒಂದಾದಾಗ…
ನಂತರ, ಕೇವಲ ವ್ಯವಹಾರದ ಚಿತ್ರಣವಲ್ಲ ಇಡೀ ಜಾಗತಿಕ ಪರಿವರ್ತನೆ ಸಂಭವಿಸುತ್ತದೆ.
ಮತ್ತೊಮ್ಮೆ ನಿಮ್ಮ ಅಮೂಲ್ಯ ಸಮಯವನ್ನು ಮಾಡಿಕೊಂಡು ಇಲ್ಲಿಗೆ ಬಂದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.
ಘೋಷಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದ. ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.
*****
Addressing the India-France CEO Forum in Paris. https://t.co/S9GWeDS9My
— Narendra Modi (@narendramodi) February 11, 2025
The India-France CEO Forum plays a key role in strengthening economic ties and fostering innovation. It is gladdening to see business leaders from both nations collaborate and create new opportunities across key sectors. This drives growth, investment and ensures a better future… pic.twitter.com/gSImOqAcEZ
— Narendra Modi (@narendramodi) February 11, 2025
Le Forum des chefs d'entreprise Inde-France joue un rôle clé dans le renforcement des liens économiques et la promotion de l'innovation. Il est réjouissant de voir des chefs d'entreprise des deux pays collaborer et créer de nouvelles opportunités dans des secteurs clés. Cela… pic.twitter.com/mkOrTQTr6z
— Narendra Modi (@narendramodi) February 11, 2025
Boosting India-France business ties!
— PMO India (@PMOIndia) February 11, 2025
PM @narendramodi and President @EmmanuelMacron attended the India-France CEO Forum in Paris. The PM highlighted India's rise as a global economic powerhouse fueled by stability, reforms and innovation. pic.twitter.com/cr6Ge3MmlT