Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ಯಾರಿಸ್ ನಲ್ಲಿ ಅನಿವಾಸಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

ಪ್ಯಾರಿಸ್ ನಲ್ಲಿ ಅನಿವಾಸಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ ಜೈ,

ನಮಸ್ಕಾರ್, ಬೊಂಜೂರ್

ವಣಕ್ಕಂ, ಸತ್ ಶ್ರೀ ಅಕಲ್,

ಕೇಂ ಛೋ!

ಈ ದೃಶ್ಯವು ನಿಜಕ್ಕೂ ಅದ್ಭುತವಾಗಿದೆ. ಈ ಉತ್ಸಾಹವು ಅಭೂತಪೂರ್ವವಾಗಿದೆ ಮತ್ತು ಈ ಮಿತಿಯಿಲ್ಲದ ವಾತ್ಸಲ್ಯವು ಹೃದಯಸ್ಪರ್ಶಿಯಾಗಿದೆ. ಈ ಆತಿಥ್ಯವು ತುಂಬಾ ಸಂತೋಷಕರವಾಗಿದೆ. ನಾನು ದೇಶದಿಂದ ದೂರದಲ್ಲಿರುವಾಗ ಮತ್ತು ‘ಭಾರತ್ ಮಾತಾ ಕಿ ಜೈ’ ಎಂಬ ಕೂಗು ಕೇಳಿದಾಗ ಅಥವಾ ಯಾರಾದರೂ ‘ನಮಸ್ಕಾರ’ ಎಂದು ಹೇಳಿದಾಗ, ನಾನು ಮನೆಯಲ್ಲಿದ್ದಂತೆ ಭಾಸವಾಗುತ್ತದೆ. ನಾವು ಭಾರತೀಯರು ಎಲ್ಲಿಗೆ ಹೋದರೂ ಅಲ್ಲಿ ಮಿನಿ ಭಾರತ ನಿರ್ಮಿಸಲು ನಾವು ಯಾವಾಗಲೂ ಕಾರ್ಯ ನಿರ್ವಹಿಸುತ್ತೇವೆ. ಇಂದು ಇಲ್ಲಿರಲು 11 ಅಥವಾ 12 ಗಂಟೆಗಳ ಕಾಲ ಪ್ರಯಾಣಿಸಿದ ಅನೇಕ ಜನರು ಈ ಕೂಟದಲ್ಲಿದ್ದಾರೆ ಎಂಬುದು ನನಗೆ ತಿಳಿದುಬಂದಿದೆ. ಅದಕ್ಕಿಂತ ಹೆಚ್ಚಿನ ಪ್ರೀತಿ ಇನ್ನೇನು ಬೇಕು!

ತಂತ್ರಜ್ಞಾನದ ಈ ಯುಗದಲ್ಲಿ, ಯಾರಾದರೂ ತಮ್ಮ ಮೊಬೈಲ್ ಫೋನ್‌ಗಳಲ್ಲಿ ತಮ್ಮ ಮನೆಯ ಸೌಕರ್ಯದಿಂದ ನೇರ ಪ್ರಸಾರದಿಂದ ಆಲಿಸುವುದು ಕಷ್ಟದ ಕೆಲಸವಲ್ಲ ಎಂಬುದು ನಮಗೆ ತಿಳಿದಿದೆ. ಆದರೆ, ಇಷ್ಟು ದೂರದಿಂದಲೂ ತಮ್ಮ ಸಮಯ ವ್ಯಯಿಸಿ ಎಷ್ಟೋ ಜನರು ಬಂದಿದ್ದಾರೆ ಎಂದರೆ ನಿಮ್ಮೆಲ್ಲರನ್ನೂ ನೋಡುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ದೊಡ್ಡ ಸೌಭಾಗ್ಯ. ಇಲ್ಲಿಗೆ ಬಂದಿದ್ದಕ್ಕಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

 

ಸ್ನೇಹಿತರೆ,

ನಾನು ಈ ಹಿಂದೆಯೂ ಹಲವಾರು ಬಾರಿ ಫ್ರಾನ್ಸ್‌ಗೆ ಬಂದಿದ್ದೇನೆ. ಆದರೆ, ಈ ಬಾರಿ ನನ್ನ ಫ್ರಾನ್ಸ್ ಭೇಟಿ ಇನ್ನಷ್ಟು ವಿಶೇಷವಾಗಿದೆ. ನಾಳೆ ಫ್ರಾನ್ಸ್‌ನ ರಾಷ್ಟ್ರೀಯ ದಿನ. ನಾನು ಫ್ರಾನ್ಸ್ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಮಹತ್ವದ ಸಂದರ್ಭದಲ್ಲಿ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಾನು ಫ್ರಾನ್ಸ್‌ನ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ಹಿಂದಿನ ದಿನ, ಪ್ರಧಾನಿ ಎಲಿಸಬೆತ್ ಬೋರ್ನ್ ನನ್ನನ್ನು ವಿಮಾನ ನಿಲ್ದಾಣಕ್ಕೆ ಬರಮಾಡಿಕೊಳ್ಳಲು ಬಂದರು. ನಾಳೆ ನಾನು ನನ್ನ ಸ್ನೇಹಿತ ಅಧ್ಯಕ್ಷ ಮ್ಯಾಕ್ರನ್ ಅವರೊಂದಿಗೆ ರಾಷ್ಟ್ರೀಯ ದಿನದ ಪರೇಡ್‌ನ ಭಾಗವಾಗುತ್ತೇನೆ. ಈ ಒಡನಾಟ ಕೇವಲ ಎರಡು ದೇಶಗಳ ನಾಯಕರ ನಡುವೆ ಅಲ್ಲ, ಆದರೆ ಇದು ಭಾರತ ಮತ್ತು ಫ್ರಾನ್ಸ್ ಜನರ ನಡುವಿನ ಅವಿನಾಭಾವ ಸ್ನೇಹದ ಪ್ರತಿಬಿಂಬವಾಗಿದೆ. ಫ್ರಾನ್ಸ್ ನ ರಾಷ್ಟ್ರಗೀತೆ ಹೇಳುತ್ತದೆ, ‘ಮಾರ್ಚನ್ಸ್, ಮಾರ್ಚನ್ಸ್ …’ ಅಂದರೆ ‘ಮಾರ್ಚ್ ಮಾಡೋಣ, ಲೆಟ್ಸ್ ಮಾರ್ಚ್’. ಹಾಗೆಯೇ, ನಮ್ಮ ಪ್ರಾಚೀನ ವೈದಿಕ ಗ್ರಂಥಗಳಲ್ಲಿ, ನಮಗೆ ಯಾವಾಗಲೂ ಸ್ಫೂರ್ತಿ ನೀಡುವ ಮಂತ್ರವೆಂದರೆ ‘ಚರೈವೇತಿ, ಚರೈವೇತಿ, ಅಂದರೆ ‘ಚಲಿಸುತ್ತಿರಿ, ಚಲಿಸುತ್ತಲೇ ಇರಿ; ಲೆಟ್ಸ್ ಮಾರ್ಚ್, ಲೆಟ್ಸ್ ಮಾರ್ಚ್’. ನಾಳೆ ರಾಷ್ಟ್ರೀಯ ದಿನಾಚರಣೆಯ ಪರೇಡ್‌ನಲ್ಲಿ ನಾವು ಅದೇ ಉತ್ಸಾಹವನ್ನು ನೋಡುತ್ತೇವೆ. ಭೂಮಿ, ಸಮುದ್ರ ಮತ್ತು ಆಕಾಶದಲ್ಲಿ ಭಾರತವನ್ನು ರಕ್ಷಿಸುವ ಭಾರತೀಯ ಸಶಸ್ತ್ರ ಪಡೆಗಳ ಎಲ್ಲಾ ಮೂರು ವಿಭಾಗಗಳ ಸೈನಿಕರು ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ನಾವು ಹೊಂದಿರುವ ಈ ಏಕತೆ, ಇದು ನಿಜವಾಗಿಯೂ ವಿಶೇಷವಾಗಿದೆ. ಏಕತೆ ಇದೆ; ವಿವಿಧ ಬಣ್ಣಗಳಿವೆ ಮತ್ತು ಸುತ್ತಲೂ ಉತ್ಸಾಹವಿದೆ. ಇದು ನಿಜವಾಗಿಯೂ ಅದ್ಭುತವಾಗಿದೆ. ಭಾರತ ಮತ್ತು ಫ್ರಾನ್ಸ್ ನಡುವಿನ 25 ವರ್ಷಗಳ ಕಾರ್ಯತಂತ್ರ ಪಾಲುದಾರಿಕೆಯನ್ನು ಆಚರಿಸಲು ಇದಕ್ಕಿಂತ ಉತ್ತಮವಾದ ಮಾರ್ಗ ಯಾವುದು?

ಸ್ನೇಹಿತರೆ,

ಇಂದು ಜಗತ್ತು ಹೊಸ ವಿಶ್ವ ಕ್ರಮದತ್ತ ಸಾಗುತ್ತಿದೆ. ಭಾರತದ ಶಕ್ತಿ ಮತ್ತು ಪಾತ್ರ ವೇಗವಾಗಿ ಬದಲಾಗುತ್ತಿದೆ. ಭಾರತ ಪ್ರಸ್ತುತ ಜಿ-20 ಅಧ್ಯಕ್ಷತೆ ವಹಿಸಿದೆ. ದೇಶದ ಮೂಲೆ ಮೂಲೆಯಲ್ಲಿ 200ಕ್ಕೂ ಹೆಚ್ಚು ಸಭೆಗಳು ನಡೆಯುತ್ತಿರುವುದು ದೇಶದ ಅಧ್ಯಕ್ಷ ಸ್ಥಾನಕ್ಕೆ ಸಾಕ್ಷಿಯಾಗುತ್ತಿರುವುದು ಇದೇ ಮೊದಲು. ಇಡೀ ಜಿ-20 ಗುಂಪು ಭಾರತದ ಸಾಮರ್ಥ್ಯವನ್ನು ಗಮನಿಸುತ್ತಿದೆ, ಅದಕ್ಕೆ ಮಂತ್ರಮುಗ್ಧವಾಗಿದೆ. ಹವಾಮಾನ ಬದಲಾವಣೆ, ಜಾಗತಿಕ ಪೂರೈಕೆ ಸರಪಳಿಗಳು, ಭಯೋತ್ಪಾದನೆ ಅಥವಾ ಉಗ್ರವಾದವೇ ಆಗಿರಲಿ, ಪ್ರತಿಯೊಂದು ಸವಾಲನ್ನು ಎದುರಿಸುವಲ್ಲಿ ಭಾರತದ ಅನುಭವ ಮತ್ತು ಪ್ರಯತ್ನಗಳು ಜಗತ್ತಿಗೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ.

ಭಾರತ ಹೇಳುತ್ತದೆ, ‘ಏಕಂ ಸತ್ ವಿಪ್ರಾ ಬಹುಧಾ ವದಂತಿ’ ಅಂದರೆ ‘ಸತ್ಯವು ಒಂದೇ, ಆದರೆ ಅದನ್ನು ವ್ಯಕ್ತಪಡಿಸುವ ವಿಧಾನಗಳು ವಿಭಿನ್ನವಾಗಿರಬಹುದು’. ಭಾರತವು ಹೇಳುತ್ತದೆ, ‘ಆತ್ಮವತ್ ಸರ್ವ ಭೂತೇಷು’ ಅಂದರೆ ‘ನಾವು ನಮಗಾಗಿ ತೋರುವ ಸಹಾನುಭೂತಿ ಮತ್ತು ಸೌಹಾರ್ದತೆಯನ್ನು ನಾವು ಇತರರಿಗೂ ಪ್ರದರ್ಶಿಸಬೇಕು’. ಭಾರತ ಹೇಳುತ್ತದೆ, ‘ಸಮಗಚ್ಛಧ್ವಂ ಸಂವದಧ್ವಂ ಸಂ ವೋ ಮನಾಂಸಿ ಜನತಾಂ’ ಅಂದರೆ ‘ಒಟ್ಟಿಗೆ ನಡೆಯೋಣ, ಜೊತೆಯಾಗಿ ಮಾತನಾಡೋಣ, ನಮ್ಮ ಮನಸ್ಸುಗಳು ಒಂದಾಗಲಿ’ ಎಂದು. ಭಾರತ ಹೇಳುತ್ತದೆ, ‘ವಸುಧೈವ ಕುಟುಂಬಕಂ’ ಅಂದರೆ ‘ಇಡೀ ಜಗತ್ತು ಒಂದೇ ಕುಟುಂಬ’. ಈ ಭಾವನೆಯಿಂದ ನಾವು ಉತ್ತಮ ಸಮಾಜವನ್ನು, ಉತ್ತಮ ಜಗತ್ತನ್ನು ನಿರ್ಮಿಸಬಹುದು. ಇದೇ ಉತ್ಸಾಹದಲ್ಲಿ ಭಾರತ ಮತ್ತು ಫ್ರಾನ್ಸ್ 21ನೇ ಶತಮಾನದ ಹಲವು ಸವಾಲುಗಳನ್ನು ಎದುರಿಸುತ್ತಿವೆ.

ಆದ್ದರಿಂದ, ಈ ನಿರ್ಣಾಯಕ ಸಮಯದಲ್ಲಿ ಫ್ರಾನ್ಸ್ ಮತ್ತು ಭಾರತದ ನಡುವಿನ ಕಾರ್ಯತಂತ್ರ ಪಾಲುದಾರಿಕೆ ಮಹತ್ವವು ಇನ್ನಷ್ಟು ಹೆಚ್ಚಾಗಿದೆ. ಈ ಭಾರತ-ಫ್ರಾನ್ಸ್ ಪಾಲುದಾರಿಕೆಯನ್ನು ಯಾರು ನಿರಂತರವಾಗಿ ಬಲಪಡಿಸುತ್ತಿದ್ದಾರೆಂದು ನಿಮಗೆ ತಿಳಿದಿದೆಯೇ … ಯಾರು ಅದನ್ನು ಬಲಪಡಿಸುತ್ತಿದ್ದಾರೆ … ಯಾರು ಮಾಡುತ್ತಿದ್ದಾರೆ …? ಉಭಯ ದೇಶಗಳ ಸಂಬಂಧಕ್ಕೆ ಹೊಸ ಆಯಾಮ ನೀಡುತ್ತಿರುವವರು ಯಾರು? ನಿಮ್ಮ ಉತ್ತರ ಸರಿಯಿಲ್ಲ. ಮಾಡುತ್ತಿರುವುದು ಮೋದಿಯಲ್ಲ, ನೀವೆಲ್ಲರೂ. ನಮ್ಮ ಜನರಿಂದ ಜನರ ಸಂಪರ್ಕವು ಈ ಪಾಲುದಾರಿಕೆಯಲ್ಲಿ ಎರಡೂ ದೇಶಗಳ ಜನರ ನಡುವಿನ ಪರಸ್ಪರ ನಂಬಿಕೆಯ ಬಲವಾದ ಅಡಿಪಾಯವಾಗಿದೆ.

ಇಲ್ಲಿ, ನಮಸ್ತೆ ಫ್ರಾನ್ಸ್ ಉತ್ಸವ ನಡೆಯುತ್ತದೆ. ಭಾರತದಲ್ಲಿನ ಜನರು ಬೊಂಜೌರ್ ಇಂಡಿಯಾ ಫೆಸ್ಟಿವಲ್ ಆನಂದಿಸುತ್ತಾರೆ. ಅದು ನಮ್ಮ ಎರಡೂ ದೇಶಗಳ ಪರಂಪರೆ ಅಥವಾ ಇತಿಹಾಸ, ಕಲೆ ಅಥವಾ ಸೌಂದರ್ಯಶಾಸ್ತ್ರ, ಕರಕುಶಲತೆ ಅಥವಾ ಸೃಜನಶೀಲತೆ, ಪಾಕ ಪದ್ಧತಿ ಅಥವಾ ಸಂಸ್ಕೃತಿ, ಫ್ಯಾಷನ್ ಅಥವಾ ಚಲನಚಿತ್ರಗಳು ಆಗಿರಲಿ, ಅವೆಲ್ಲವೂ ನಮ್ಮನ್ನು ಒಟ್ಟಿಗೆ ಸೇರಿಸುತ್ತವೆ. ಅವುಗಳು ನಮ್ಮನ್ನು ಒಂದುಗೂಡಿಸುತ್ತವೆ. ಫ್ರೆಂಚ್ ಫುಟ್ಬಾಲ್ ಆಟಗಾರರ ಜನಪ್ರಿಯತೆ ವೀಕ್ಷಿಸಲು ನೀವು ಭಾರತಕ್ಕೆ ಬರಬೇಕು. ಫ್ರಾನ್ಸ್‌ನಲ್ಲಿ ಕೈಲಿಯನ್ ಎಂಬಾಪ್ಪೆ ಹೊಂದಿರುವ ಅಭಿಮಾನಿಗಳ ಸಂಖ್ಯೆಯು ಭಾರತದ ಯುವಕರಲ್ಲಿ ಅವರು ಹೊಂದಿರುವ ಜನಪ್ರಿಯತೆಗೆ ಸರಿಸಾಟಿಯಿಲ್ಲ.

ಸ್ನೇಹಿತರೆ,

ಫ್ರಾನ್ಸ್ ಬಗ್ಗೆ ನನ್ನ ವೈಯಕ್ತಿಕ ಬಾಂಧವ್ಯ ಬಹಳ ಹಿಂದಿನಿಂದಲೂ ಇದ, ನಾನು ಅದನ್ನು ಎಂದಿಗೂ ಮರೆಯಲಾರೆ. ಸುಮಾರು 40 ವರ್ಷಗಳ ಹಿಂದೆ, ಅಲಯನ್ಸ್ ಫ್ರಾಂಚೈಸ್ ಎಂಬ ಫ್ರೆಂಚ್ ಸಾಂಸ್ಕೃತಿಕ ಕೇಂದ್ರವನ್ನು ಗುಜರಾತ್‌ನ ಅಹಮದಾಬಾದ್‌ನಲ್ಲಿ ಸ್ಥಾಪಿಸಲಾಯಿತು. ಇಂದು ನಿಮ್ಮೊಂದಿಗೆ ಸಂವಾದ ನಡೆಸುತ್ತಿರುವ ಆ ಸಾಂಸ್ಕೃತಿಕ ಕೇಂದ್ರದ ಭಾರತದ ಮೊದಲ ಸದಸ್ಯ ನಾನು. ಕುತೂಹಲಕಾರಿಯಾಗಿ, ಫ್ರೆಂಚ್ ಸರ್ಕಾರವು ತಮ್ಮ ಹಳೆಯ ದಾಖಲೆಗಳಿಂದ ನನ್ನ ಗುರುತಿನ ಚೀಟಿಯನ್ನು ತೆಗೆದು, ಅದರ ಜೆರಾಕ್ಸ್ ಪ್ರತಿಯನ್ನು ಮಾಡಿ, ಕೆಲವು ವರ್ಷಗಳ ಹಿಂದೆ ನನಗೆ ನೀಡಿತು. ಆ ಉಡುಗೊರೆ ನನಗೆ ಇಂದಿಗೂ ಅತ್ಯಮೂಲ್ಯ.

ಸ್ನೇಹಿತರೆ,

ಭಾರತ ಮತ್ತು ಫ್ರಾನ್ಸ್ ನಡುವಿನ ಐತಿಹಾಸಿಕ ಸಂಬಂಧವನ್ನು ನಾನು ಪರಿಶೀಲಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹಾಗಾದರೆ ನಿಮ್ಮ ಬಗ್ಗೆ ಏನು? ನಾನು 2015 ರಲ್ಲಿ ಫ್ರಾನ್ಸ್ ಗೆ ಭೇಟಿ ನೀಡಿದ್ದಾಗ, ನಾನು ನ್ಯೂವ್-ಚಾಪೆಲ್ ಗೆ ಹೋಗಿದ್ದೆ. ಅಲ್ಲಿ ಮೊದಲ ಮಹಾಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ಸಾವಿರಾರು ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿದ್ದೆ. ಈ ಭಾರತೀಯ ಸೈನಿಕರು 100 ವರ್ಷಗಳ ಹಿಂದೆ ಫ್ರಾನ್ಸ್‌ನ ಹೆಮ್ಮೆಯನ್ನು ರಕ್ಷಿಸುತ್ತಾ ತಮ್ಮ ಕರ್ತವ್ಯವನ್ನು ಪೂರೈಸಿದರು, ಫ್ರಾನ್ಸ್‌ನ ನೆಲದಲ್ಲಿ ತಮ್ಮ ಪ್ರಾಣ ಅರ್ಪಿಸಿದರು. ಇದು ನಿಜಕ್ಕೂ ಭಾವನಾತ್ಮಕ ಕ್ಷಣ.

ನನ್ನ ಸ್ನೇಹಿತರೆ.

ಆ ಸೈನಿಕರು ಇಲ್ಲಿ ಯುದ್ಧದಲ್ಲಿ ಭಾಗವಹಿಸಿದ ರೆಜಿಮೆಂಟ್, ಅವುಗಳಲ್ಲಿ ಒಂದು ಪಂಜಾಬ್ ರೆಜಿಮೆಂಟ್, ಈಗ ನಾಳೆ ಇಲ್ಲಿ ನಡೆಯುವ ರಾಷ್ಟ್ರೀಯ ದಿನದ ಪರೇಡ್‌ನಲ್ಲಿ ಭಾಗವಹಿಸಲಿದ್ದೇನೆ. ಸ್ನೇಹಿತರೆ, ಈ 100 ವರ್ಷಗಳ ಹಿಂದಿನ ಭಾವನಾತ್ಮಕ ಸಂಬಂಧ ಮತ್ತು ಇತರರ ಕಲ್ಯಾಣಕ್ಕಾಗಿ ಸರ್ವೋಚ್ಚ ತ್ಯಾಗ ಮಾಡುವ ಸಂಪ್ರದಾಯವು ನಿಜಕ್ಕೂ ಸ್ಫೂರ್ತಿಯಾಗಿದೆ. ಭಾರತದಲ್ಲಿ ಯಾರು ತಾನೇ ಇದರ ಬಗ್ಗೆ ಹೆಮ್ಮೆ ಪಡುವುದಿಲ್ಲ? ಆ ಸಮಯದಲ್ಲಿ ಭಾರತೀಯ ಸೈನಿಕರು ನಿರ್ವಹಿಸಿದ ಕರ್ತವ್ಯಗಳು ಮತ್ತು ಅವರ ಸಮರ್ಪಣಾ ಮನೋಭಾವವನ್ನು ಇಂದು ಈ ನೆಲದ ಮೇಲೆ ತುಂಬಾ ಹೆಮ್ಮೆ ಮತ್ತು ಗೌರವದಿಂದ ಸ್ಮರಿಸಿಕೊಳ್ಳಲಾಗುತ್ತಿದೆ. ಧನ್ಯವಾದಗಳು, ಫ್ರಾನ್ಸ್!

ಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಲು ನೀವು ನೀಡುತ್ತಿರುವ ಕೊಡುಗೆ ಅಪಾರ ಎಂದು ನಾನು ನಂಬುತ್ತೇನೆ. ನಾನು ನಿಮಗೆ ಹೇಳುತ್ತಿದ್ದೇನೆ, ನಾನು ನಿಮಗೆ ಹೇಳುತ್ತಿದ್ದೇನೆ… ನೀವು ಇಂದು ಕರ್ತವ್ಯ ಪ್ರಜ್ಞೆಯಿಂದ ಮಾಡುತ್ತಿರುವುದನ್ನು ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲಾಗುತ್ತದೆ.

ಸ್ನೇಹಿತರೆ,

ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಧ್ಯೇಯವಾಕ್ಯದೊಂದಿಗೆ ಫ್ರಾನ್ಸ್, ಈ 3 ಪದಗಳ ಶಕ್ತಿಯನ್ನು ಉದಾಹರಿಸುವ ದೇಶ ಎಂದು ಮಹಾತ್ಮ ಗಾಂಧಿ ಅವರು ಪ್ರಶಂಸಿಸಿದ್ದರು. ಇದನ್ನು ಮಹಾತ್ಮ ಗಾಂಧಿ ಅವರೇ ಹೇಳಿದ್ದರು. ಹೆಚ್ಚಿನ ದೇಶಗಳು ಭಾರತವನ್ನು ಕೇವಲ ವಸಾಹತುಶಾಹಿ ಪ್ರಾಬಲ್ಯದ ದೃಷ್ಟಿಕೋನದಿಂದ ನೋಡುತ್ತಿದ್ದ ಸಮಯದಲ್ಲಿ, ನೊಬೆಲ್ ಪ್ರಶಸ್ತಿ ವಿಜೇತ ರೊಮೈನ್ ರೋಲ್ಯಾಂಡ್, ‘ಭಾರತ ನಮ್ಮ ನಾಗರಿಕತೆಯ ತಾಯಿ’ ಎಂದು ಘೋಷಿಸಿದ್ದರು. ಭಾರತದ ಸಾವಿರಾರು ವರ್ಷಗಳ ಇತಿಹಾಸ, ಅದರ ಅನುಭವಗಳು ಮತ್ತು ಪ್ರಪಂಚದ ಕಲ್ಯಾಣಕ್ಕಾಗಿ ಅದರ ಪ್ರಯತ್ನಗಳು ವಿಶಾಲ ವ್ಯಾಪ್ತಿ ಹೊಂದಿವೆ. ಭಾರತವು ಪ್ರಜಾಪ್ರಭುತ್ವದ ತಾಯಿ ಮತ್ತು ವೈವಿಧ್ಯತೆಯ ಮಾದರಿಯಾಗಿದೆ. ಇದು ನಮ್ಮ ಅಗಾಧ ಶಕ್ತಿ, ದೊಡ್ಡ ಶಕ್ತಿ. ಒಂದು ಉದಾಹರಣೆ ಕೊಡುತ್ತೇನೆ.

ಸ್ನೇಹಿತರೆ,

ಪ್ರತಿ ಕೆಲವು ಮೈಲುಗಳಿಗೊಮ್ಮೆ ನೀರಿನ ರುಚಿ ಬದಲಾಗುತ್ತದೆ, ಪ್ರತಿ 4 ಮೈಲಿಗೊಮ್ಮೆ ಭಾಷೆ ಬದಲಾಗುತ್ತದೆ ಎಂಬ ಗಾದೆ ನಮ್ಮ ದೇಶದಲ್ಲಿದೆ. ಅದು ನೀರಿನ ರುಚಿ ಮತ್ತು ಭಾರತದಲ್ಲಿ ಸ್ವಲ್ಪ ದೂರದ ನಂತರ ಭಾಷೆ ಕೂಡ ಬದಲಾಗುತ್ತದೆ. ಭಾರತವು 100ಕ್ಕೂ ಹೆಚ್ಚು ಭಾಷೆಗಳಿಗೆ ಮತ್ತು 1,000ಕ್ಕೂ ಹೆಚ್ಚು ಉಪಭಾಷೆಗಳಿಗೆ ನೆಲೆಯಾಗಿದೆ. ಪ್ರತಿದಿನ, ಈ 100 ಭಾಷೆಗಳನ್ನು 32,000ಕ್ಕೂ ಹೆಚ್ಚು ವಿವಿಧ ಪತ್ರಿಕೆಗಳನ್ನು ಮುದ್ರಿಸಲಾಗುತ್ತದೆ. ಈ 100ಕ್ಕೂ ಹೆಚ್ಚು ಭಾಷೆಗಳಲ್ಲಿ, 900ಕ್ಕೂ ಹೆಚ್ಚು ಸುದ್ದಿ ವಾಹಿನಿಗಳು ಮತ್ತು ದೂರದರ್ಶನ ಸುದ್ದಿ ಪ್ರಸಾರವಾಗುತ್ತಿವೆ. ಹೆಚ್ಚುವರಿಯಾಗಿ, ಸುಮಾರು 400 ರೇಡಿಯೊ ಚಾನೆಲ್‌ಗಳು 100ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರಸಾರ ಮಾಡುತ್ತಿವೆ.

ಇಂದಿಗೂ ಸಹ, ಭಾರತದಲ್ಲಿ ಅನೇಕ ಲಿಪಿಗಳು ಮತ್ತು ಬರವಣಿಗೆ ವ್ಯವಸ್ಥೆಗಳನ್ನು ಬಳಸಲಾಗುತ್ತದೆ. ಭಾರತವು ಈ ಭವ್ಯ ಸಂಪ್ರದಾಯವನ್ನು ಜೀವಂತವಾಗಿರಿಸಿಕೊಂಡಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಭಾರತೀಯ ಶಾಲೆಗಳು ಮತ್ತು ಭಾರತದ ವಿವಿಧ ಪ್ರದೇಶಗಳಲ್ಲಿ ಸುಮಾರು 100 ಭಾಷೆಗಳನ್ನು ಕಲಿಸಲಾಗುತ್ತದೆ. ತಮಿಳು ಪ್ರಪಂಚದ ಅತ್ಯಂತ ಹಳೆಯ ಭಾಷೆ ಎಂಬುದು ಅನೇಕರಿಗೆ ತಿಳಿದಿಲ್ಲದಿರಬಹುದು. ಪ್ರಪಂಚದ ಅತ್ಯಂತ ಹಳೆಯ ಭಾಷೆಯಾದ ತಮಿಳು ಭಾರತದ ಭಾಷೆ, ಭಾರತೀಯರಾದ ನಮ್ಮ ಭಾಷೆ ಎಂದು ತಿಳಿದುಕೊಳ್ಳುವುದಕ್ಕಿಂತ ಹೆಚ್ಚಿನ ಹೆಮ್ಮೆ ಇನ್ನೇನಿದೆ.

ಸ್ನೇಹಿತರೆ,

ಈಗ ವಿಶ್ವವೂ ಭಾರತೀಯ ಭಾಷೆಗಳ ವೈವಿಧ್ಯತೆಯನ್ನು ಆನಂದಿಸುತ್ತಿದೆ. ಕೆಲವೇ ದಿನಗಳ ಹಿಂದೆ, ಟೆನಿಸ್ ದಂತಕಥೆ ರೋಜರ್ ಫೆಡರರ್ ಅವರನ್ನು ವಿಂಬಲ್ಡನ್‌ನಿಂದ “ತಲೈವಾ” ಎಂದು ಕರೆಯುವುದನ್ನು ನೀವು ನೋಡಿರಬಹುದು. ಈ ವೈವಿಧ್ಯತೆಯು ನಮ್ಮ ಪ್ರಜಾಪ್ರಭುತ್ವದ ದೊಡ್ಡ ಶಕ್ತಿಯಾಗಿದೆ. ಇಂದು ಈ ಶಕ್ತಿಯಿಂದ, ಪ್ರತಿಯೊಬ್ಬ ಭಾರತೀಯನು ತನ್ನ ಕನಸುಗಳನ್ನು ನನಸಾಗಿಸಿಕೊಳ್ಳುತ್ತಿದ್ದಾನೆ, ದೇಶ ಮತ್ತು ಜಗತ್ತನ್ನು ಮುನ್ನಡೆಸುತ್ತಿದ್ದಾನೆ. ಕೇವಲ 10 ವರ್ಷಗಳಲ್ಲಿ ಭಾರತವು 10ನೇ ಸ್ಥಾನದಿಂದ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಕೇಳಿದಾಗ ಯಾರು ಹೆಮ್ಮೆ ಪಡುವುದಿಲ್ಲ ಹೇಳಿ? ಈ ಹೆಮ್ಮೆ ಕೇವಲ ಭಾರತೀಯರಷ್ಟೇ ಅಲ್ಲ, ಇಂದು ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಇಡೀ ಜಗತ್ತು ನಂಬಲು ಪ್ರಾರಂಭಿಸಿದೆ.

ನೀವು ಇತ್ತೀಚೆಗೆ ವಿಶ್ವಸಂಸ್ಥೆ ವರದಿಯನ್ನು ನೋಡಿರಬೇಕು. ಆ ವರದಿಯಲ್ಲಿ, ಭಾರತವು ಸರಿಸುಮಾರು 415 ದಶಲಕ್ಷ ಜನರನ್ನು ಅಂದರೆ ಸುಮಾರು 42 ಕೋಟಿ ಜನರನ್ನು ಕೇವಲ 10-15 ವರ್ಷಗಳಲ್ಲಿ ಬಡತನ ರೇಖೆಯಿಂದ ಮೇಲೆತ್ತಿದೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ. ಯುರೋಪಿನ ಸಂಪೂರ್ಣ ಜನಸಂಖ್ಯೆಗಿಂತ 415 ದಶಲಕ್ಷ ಹೆಚ್ಚು ಎಂದು ನೀವೇ ಊಹಿಸಬಹುದು. ಇದು ಇಡೀ ಅಮೆರಿಕದ ಜನಸಂಖ್ಯೆಗಿಂತ ಹೆಚ್ಚು.

ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಅಧ್ಯಯನವು ಭಾರತವು ಕಡು ಬಡತನ ನಿರ್ಮೂಲನೆ ಮಾಡುವ ಅಂಚಿನಲ್ಲಿದೆ ಎಂದು ಸೂಚಿಸಿದೆ. ಭಾರತವು ಅಂತಹ ಮಹತ್ವದ ಸಾಧನೆ ಮಾಡಿದಾಗ, ಅದು ನಮಗೆ ಮಾತ್ರವಲ್ಲದೆ ಇಡೀ ಮಾನವಕುಲಕ್ಕೆ ಪ್ರಯೋಜನ ನೀಡುತ್ತದೆ. ಭಾರತದ ಪ್ರಗತಿಯು ಪ್ರಪಂಚದ ಅಭಿವೃದ್ಧಿಯ ನಿಯತಾಂಕಗಳಲ್ಲಿ ಬದಲಾವಣೆಯನ್ನು ತರುತ್ತದೆ, ಒಟ್ಟಾರೆ ಸುಧಾರಣೆಗೆ ಕಾರಣವಾಗುತ್ತದೆ. ಇದು ಪರಿಸ್ಥಿತಿಯನ್ನು ಬದಲಾಯಿಸಬಹುದು ಮತ್ತು ಬಡತನವನ್ನು ನಿವಾರಿಸಬಹುದು ಎಂದು ಇತರೆ ಬಡ ದೇಶಗಳಲ್ಲಿ ಆತ್ಮವಿಶ್ವಾಸ ತುಂಬುತ್ತದೆ.

ಸ್ನೇಹಿತರೆ,

ದೇಶದ ಯಾವುದೇ ಪರಿವರ್ತನೆಯ ಹಿಂದೆ ಕಠಿಣ ಪರಿಶ್ರಮ ಮತ್ತು ನಾಗರಿಕರ ಬೆವರು ಇದೆ ಎಂಬುದಕ್ಕೆ ಫ್ರಾನ್ಸ್ ಭೂಮಿ ಸಾಕ್ಷಿಯಾಗಿದೆ. ಇಂದು ಭಾರತದ ನೆಲವೂ ಮಹತ್ವದ ಪರಿವರ್ತನೆಗೆ ಸಾಕ್ಷಿಯಾಗುತ್ತಿದೆ. ಈ ಪರಿವರ್ತನೆಯ ಹಿಡಿತವು ಭಾರತದ ಜನರು, ಭಾರತದ ಸಹೋದರಿಯರು ಮತ್ತು ಹೆಣ್ಣು ಮಕ್ಕಳು, ಭಾರತದ ಯುವಕರ ಕೈಯಲ್ಲಿದೆ. ಇಂದು ಇಡೀ ಜಗತ್ತು ಭಾರತದ ಬಗ್ಗೆ ಹೊಸ ಭರವಸೆ ಮತ್ತು ಆಕಾಂಕ್ಷೆಗಳಿಂದ ತುಂಬಿ ತುಳುಕುತ್ತಿದೆ. ಈ ಭರವಸೆ, ಈ ನಿರೀಕ್ಷೆಯು ಮೂರ್ತ ಫಲಿತಾಂಶಗಳಾಗಿ ಬದಲಾಗುತ್ತಿದೆ. ಇದರ ಹಿಂದಿರುವ ನಿರ್ಣಾಯಕ ಶಕ್ತಿ ಭಾರತದ ಮಾನವ ಸಂಪನ್ಮೂಲವಾಗಿದೆ. ಈ ಮಾನವ ಸಂಪನ್ಮೂಲವು ದೃಢಸಂಕಲ್ಪದಿಂದ, ಧೈರ್ಯದ ಮನೋಭಾವದಿಂದ ತುಂಬಿದೆ. ಇದು ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳೊಂದಿಗೆ ಮತ್ತು ಮಾನವೀಯತೆಯ ಸುಧಾರಣೆಗಾಗಿ ದೃಢವಾಗಿ ಮುನ್ನಡೆಯುತ್ತಿದೆ.

ಸ್ನೇಹಿತರೆ,

ಇಂದಿನ ಭಾರತವು ತನ್ನ ಪ್ರಸ್ತುತ ಸವಾಲುಗಳು ಮತ್ತು ದೀರ್ಘಕಾಲದ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳುತ್ತಿದೆ. ಭಾರತ ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ ಮತ್ತು ಒಂದು ಕ್ಷಣವನ್ನೂ ವ್ಯರ್ಥ ಮಾಡುವುದಿಲ್ಲ ಎಂದು ದೃಢ ನಿರ್ಧಾರ ಮಾಡಿದೆ. ನಮ್ಮ ದೇಶದ ಭವಿಷ್ಯ ಉಜ್ವಲಗೊಳಿಸಲು ಮತ್ತು ಭವಿಷ್ಯದ ಪೀಳಿಗೆಗೆ ದಾರಿ ತೋರಲು ನಾವು ಸಂಪೂರ್ಣವಾಗಿ ಸಮರ್ಪಿತರಾಗಿದ್ದೇವೆ. ನನ್ನ ಸಹ ನಾಗರಿಕರೇ, ನಾನು ನನ್ನ ಸಂಕಲ್ಪ ತೊಡುತ್ತೇನೆ ಎಂದು ಹೇಳಲು ಬಯಸುತ್ತೇನೆ. ನನ್ನ ಜೀವಿಯ ಪ್ರತಿಯೊಂದು ಕಣವೂ, ನನ್ನ ಸಮಯದ ಪ್ರತಿ ಕ್ಷಣವೂ ನಿಮಗಾಗಿ, ಈ ದೇಶದ ಪ್ರಜೆಗಳಿಗಾಗಿ ಮಾತ್ರ.

ಸ್ನೇಹಿತರೆ,

ಇಂದು ನಮ್ಮ ಜೀವನದ ಪ್ರತಿ ಕ್ಷಣದಲ್ಲಿ ತಂತ್ರಜ್ಞಾನದ ಪ್ರಭಾವವನ್ನು ನಾವು ಅನುಭವಿಸಬಹುದು. ಜಗತ್ತು ತಂತ್ರಜ್ಞಾನ ಆಧಾರಿತವಾಗಿದೆ. ಇಂದು, ಭಾರತದ 25,000ಕ್ಕೂ ಹೆಚ್ಚು ಶಾಲೆಗಳಲ್ಲಿ 80 ಲಕ್ಷಕ್ಕೂ ಹೆಚ್ಚು ಮಕ್ಕಳು ಅಟಲ್ ಟಿಂಕರಿಂಗ್ ಲ್ಯಾಬ್ಸ್‌ನಲ್ಲಿ ಹೊಸತನದ ಎಬಿಸಿಡಿ ಕಲಿಯುತ್ತಿದ್ದಾರೆ. 21ನೇ ಶತಮಾನದ ಅಗತ್ಯಗಳನ್ನು ಪರಿಗಣಿಸಿ ನಾವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದೇವೆ. ಪ್ರಸ್ತುತ ಭಾರತವು ಮಹಿಳಾ ನೇತೃತ್ವದ ಅಭಿವೃದ್ಧಿಯ ಅಡಿಪಾಯದೊಂದಿಗೆ ಪ್ರಗತಿಯಲ್ಲಿದೆ. ಕೇವಲ ಒಬ್ಬ ಬುಡಕಟ್ಟು ಮಹಿಳೆಯು ಭಾರತದ ರಾಷ್ಟ್ರಪತಿಯಾಗಿ ನಮ್ಮೆಲ್ಲರನ್ನು ಮುನ್ನಡೆಸುತ್ತಿದ್ದಾರೆ ಎಂಬುದು ಮಾತ್ರವಲ್ಲ; ನಮ್ಮ ನಾಯಕತ್ವವು ಅದನ್ನು ಮೀರಿ ವಿಸ್ತರಿಸಿದೆ. ಇಂದು ಭಾರತದಲ್ಲಿ ಹೆಣ್ಣು ಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲೂ ನಾಯಕತ್ವದ ಪಾತ್ರಗಳನ್ನು ಪ್ರದರ್ಶಿಸುತ್ತಿದ್ದಾರೆ. ಉನ್ನತ ಶಿಕ್ಷಣಕ್ಕೆ ಹೆಣ್ಣು ಮಕ್ಕಳ ದಾಖಲಾತಿ ನಿರಂತರವಾಗಿ ಹೆಚ್ಚುತ್ತಿದೆ. ರಾಷ್ಟ್ರೀಯ ದಿನಾಚರಣೆಯ ಪರೇಡ್‌ನಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿರುವ ತುಕಡಿಯಲ್ಲಿ ಅನೇಕ ಮಹಿಳಾ ಅಧಿಕಾರಿಗಳು ಮತ್ತು ಮಹಿಳಾ ಪೈಲಟ್‌ಗಳನ್ನು ನೋಡಲು ನನಗೆ ಸಂತೋಷವಾಗಿದೆ.

ಸ್ನೇಹಿತರೆ,

21ನೇ ಶತಮಾನದ ಜಗತ್ತು ತಂತ್ರಜ್ಞಾನ ಮತ್ತು ಪ್ರತಿಭೆಯ ಆಧಾರದ ಮೇಲೆ ಪ್ರಗತಿ ಹೊಂದಲಿದೆ. ಭಾರತ ಮತ್ತು ಫ್ರಾನ್ಸ್ ನಡುವಿನ ಪಾಲುದಾರಿಕೆಯು ಇದಕ್ಕೆ ಬಲವಾದ ಅಡಿಪಾಯ ಹಾಕುತ್ತದೆ, ಅದಕ್ಕೆ ನಮ್ಮ ಬಾಹ್ಯಾಕಾಶ ಕಾರ್ಯಕ್ರಮವೇ ಸಾಕ್ಷಿ. ತುಂಬ ಸೌಂಡಿಂಗ್ ರಾಕೆಟ್ ನಿಲ್ದಾಣವನ್ನು ಸ್ಥಾಪಿಸುವ ಚರ್ಚೆ ಬಂದಾಗ, ನೆರವು ನೀಡಲು ಮುಂದಾಯಿತು ಫ್ರಾನ್ಸ್. ಅಂದಿನಿಂದ, ನಮ್ಮ ಎರಡೂ ದೇಶಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ದೀರ್ಘ ಪ್ರಯಾಣ ಆರಂಭಿಸಿವೆ. ಇಂದು ನಾವು ಪರಸ್ಪರ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದ್ದೇವೆ, ನಾನು ಈಗ ನಿಮ್ಮೊಂದಿಗೆ ಮಾತನಾಡುತ್ತಿರುವಾಗ, ಚಂದ್ರಯಾನ-3ರ ಉಡಾವಣೆಗೆ ರಿವರ್ಸ್ ಕೌಂಟ್‌ಡೌನ್‌ ಪ್ರತಿಧ್ವನಿಯನ್ನು ಭಾರತದಲ್ಲಿ ಕೇಳಬಹುದು ಎಂದು ತಿಳಿಯಲು ನಿಮಗೆ ಸಂತೋಷವಾಗುತ್ತದೆ. ಇನ್ನು ಕೆಲವೇ ಗಂಟೆಗಳಲ್ಲಿ ಭಾರತದ ಶ್ರೀಹರಿಕೋಟಾದಿಂದ ಈ ಐತಿಹಾಸಿಕ ಉಡಾವಣೆ ನಡೆಯಲಿದೆ.

ಸ್ನೇಹಿತರೆ,

ಬಾಹ್ಯಾಕಾಶ ಕ್ಷೇತ್ರದಂತೆಯೇ, ಭಾರತ ಮತ್ತು ಫ್ರಾನ್ಸ್ ನಡುವಿನ ಪಾಲುದಾರಿಕೆಯು ಜಗತ್ತಿಗೆ ಹೊಸ ದಿಕ್ಕು ತೋರಲು ಕೊಡುಗೆ ನೀಡುವ ಹಲವಾರು ಕ್ಷೇತ್ರಗಳಿವೆ. ಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟವು ಜಗತ್ತಿಗೆ ಬಹಳಷ್ಟು ನೀಡುವ ಸಾಮರ್ಥ್ಯ  ಹೊಂದಿದೆ. ಈಗ, ಸ್ವಚ್ಛ ಇಂಧನ, ನಿರ್ಣಾಯಕ ಮತ್ತು ಕಾರ್ಯತಂತ್ರ ತಂತ್ರಜ್ಞಾನಗಳು, ಸ್ವಚ್ಛ ಸರಕು ಸಾಗಣೆ, ವಿದ್ಯುನ್ಮಾನ ಮತ್ತು ಸಂಪರ್ಕ, ಪರಿಸರಸ್ನೇಹಿ ಆರ್ಥಿಕತೆ(ಸರ್ಕ್ಯುಲರ್ ಎಕಾನಮಿ), ಆರೋಗ್ಯ ಮತ್ತು  ಪೌಷ್ಟಿಕತೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅಂತಹ ಪಾಲುದಾರಿಕೆಗಳನ್ನು ಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಭಾರತ ಮತ್ತು ಫ್ರಾನ್ಸ್ ಪುರಾತತ್ತ್ವ ಶಾಸ್ತ್ರದ ಕಾರ್ಯಾಚರಣೆಗಳಲ್ಲಿ ದೀರ್ಘಕಾಲ ಒಟ್ಟಿಗೆ ಕೆಲಸ ಮಾಡುತ್ತಿವೆ. ಅದರ ವ್ಯಾಪ್ತಿಯು ಚಂಡೀಗಢದಿಂದ ಲಡಾಖ್‌ವರೆಗೆ ವಿಸ್ತರಿಸಿದೆ ಎಂದು ಕೆಲವೇ ಜನರಿಗೆ ತಿಳಿದಿರಬಹುದು.

ಸ್ನೇಹಿತರೆ,

ಭಾರತ-ಫ್ರಾನ್ಸ್ ಪಾಲುದಾರಿಕೆ ಬಲಪಡಿಸುವ ಮತ್ತೊಂದು ಕ್ಷೇತ್ರವೆಂದರೆ ಡಿಜಿಟಲ್ ಮೂಲಸೌಕರ್ಯ. ಉದ್ಯಮ 4.0 ಈ ವಲಯದಲ್ಲಿ ಗಮನಾರ್ಹ ಅಡಿಪಾಯ ಹೊಂದಿದೆ. ಇಂದು ಪ್ರಪಂಚದ 46% ನೈಜ-ಸಮಯದ ಡಿಜಿಟಲ್ ವಹಿವಾಟುಗಳು ಭಾರತದಲ್ಲಿ ನಡೆಯುತ್ತಿವೆ ಎಂದು ತಿಳಿದರೆ ನೀವು ಹೆಮ್ಮೆಪಡುತ್ತೀರಿ. ಮುಂದಿನ ಬಾರಿ ನೀವು ಭಾರತಕ್ಕೆ ಭೇಟಿ ನೀಡಿದಾಗ, ನಿಮ್ಮ ಜೇಬುಗಳನ್ನು ಖಾಲಿ ಇಟ್ಟುಕೊಳ್ಳಿ, ಕೈಯಲ್ಲಿ ಯಾವುದೇ ಹಣವಿಲ್ಲದೆ, ಮತ್ತು ನಿಮ್ಮ ಮೊಬೈಲ್ ಫೋನ್‌ನಲ್ಲಿ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಎಂದು ನಾನು ನಿಮಗೆ ಸವಾಲು ಹಾಕುತ್ತೇನೆ. ನೀವು ಭೌತಿಕ ನಗದು ಅಗತ್ಯವಿಲ್ಲದೆ ಇಡೀ ರಾಷ್ಟ್ರದಾದ್ಯಂತ ಪ್ರಯಾಣಿಸಬಹುದು, ನಿಮ್ಮ ಖರ್ಚುಗಳನ್ನು ನಿರ್ವಹಿಸಬಹುದು. ಇಂದು ಭಾರತದಲ್ಲಿ ಬ್ಯಾಂಕಿಂಗ್ ಸೇವೆಗಳು 24×7, ಯಾವುದೇ ಸಮಯದಲ್ಲಿ ಮತ್ತು ಎಲ್ಲಿಯಾದರೂ, ಜನರ ಬೆರಳ ತುದಿಯಲ್ಲಿ ಲಭ್ಯವಿದೆ. ನೇರ ನಗದು ವರ್ಗಾವಣೆಯು ಆಡಳಿತದ ಒಂದು ಭಾಗವಾಗಿದೆ. ಅದು ಭಾರತದ ಯುಪಿಐ ಆಗಿರಲಿ ಅಥವಾ ಇತರ ಡಿಜಿಟಲ್ ವೇದಿಕೆಗಳಾಗಿರಲಿ, ಅವು ದೇಶದಲ್ಲಿ ಗಮನಾರ್ಹ ಸಾಮಾಜಿಕ ಪರಿವರ್ತನೆ ತಂದಿವೆ. ಭಾರತ ಮತ್ತು ಫ್ರಾನ್ಸ್ ಈ ದಿಶೆಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿರುವುದು ನನಗೆ ಸಂತಸ ತಂದಿದೆ. ಫ್ರಾನ್ಸ್‌ನಲ್ಲಿ ಭಾರತದ ಯುಪಿಐ ಬಳಕೆಗೆ ಸಂಬಂಧಿಸಿದಂತೆ ಒಪ್ಪಂದವಾಗಿದೆ. ಈಗ ಈ ಒಪ್ಪಂದ ಮಾಡಿಕೊಂಡ ನಂತರ ನಾನು ನನ್ನ ದೇಶಕ್ಕೆ ಹೋಗುತ್ತೇನೆ, ಆದರೆ ಈ ಕೆಲಸವನ್ನು ಮುಂದುವರಿಸುವುದು ನಿಮಗೆ ಬಿಟ್ಟದ್ದು.

ಸ್ನೇಹಿತರೆ,

ಮುಂದಿನ ದಿನಗಳಲ್ಲಿ ಇದನ್ನು ಐಫೆಲ್ ಟವರ್‌ನಿಂದ ಪ್ರಾರಂಭಿಸಲಾಗುವುದು, ಅಂದರೆ ಈಗ ಭಾರತೀಯ ಪ್ರವಾಸಿಗರು ಐಫೆಲ್ ಟವರ್‌ನಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ರೂಪಾಯಿಗಳಲ್ಲಿ ಪಾವತಿ ಮಾಡಲು ಸಾಧ್ಯವಾಗುತ್ತದೆ.

ಸ್ನೇಹಿತರೆ,

ಇಂದಿನಿಂದ ಕೆಲವೇ ಗಂಟೆಗಳಲ್ಲಿ ಅಥವಾ ಕೆಲವು ವಾರಗಳು ಅಥವಾ ತಿಂಗಳುಗಳು ತೆಗೆದುಕೊಳ್ಳಬಹುದು, ಮಹಾನ್ ಭಾರತೀಯ ಸಂತ ತಿರುವಳ್ಳುವರ್ ಜಿ ಅವರ ಪ್ರತಿಮೆಯ ಸ್ಥಾಪನೆಯು ಸೆರ್ಗಿ ಪ್ರಿಫೆಕ್ಚರ್‌ನಲ್ಲಿ ನಡೆಯುತ್ತಿದೆ. ಸಂತ ತಿರುವಳ್ಳುವರ್ ಜೀ ಅವರು, ‘ಈಂದ್ರ ಪೊಝುದಿನ್ ಪೆರಿದುವಕ್ಕುಂ ಅಣ್ಮಕನೈಚ್ ಚಂದ್ರೋನ್ ಎನಕ್ಕೆಟ್ಟ ತಾಯಿ’ ಎಂದು ಹೇಳಿದ್ದರು.

ತಮಿಳು ಭಾಷಿಕ ಗೆಳೆಯರಿಗೆ ಅರ್ಥವಾಗಿರಬಹುದು, ನಾನು ಅದನ್ನು ಇತರರಿಗೆ ವಿವರಿಸುತ್ತೇನೆ. ಇದರ ಅರ್ಥ ಆಳವಾದದ್ದು. ಸಂತ ತಿರುವಳ್ಳುವರ್ ಜೀ ಶತಮಾನಗಳ ಹಿಂದೆ ನಮಗೆ ಈ ಜ್ಞಾನ ನೀಡಿದರು. ಅಂದರೆ ತಾಯಿಯು ತನ್ನ ಮಗುವನ್ನು ವಿದ್ವಾಂಸ ಎಂದು ಹೊಗಳಿದಾಗ, ಮಗುವಿನ ಜನನ ದಿನಕ್ಕಿಂತ ಹೆಚ್ಚಿನ ಸಂತೋಷ ಅನುಭವಿಸುತ್ತಾಳೆ. ಅಂದರೆ ಮಗುವಿನ ಜನನವಾದಾಗ ಎಷ್ಟು ಸಂತೋಷವಾಗುತ್ತದೆಯೋ, ಅದೇ ರೀತಿ ಮಗುವಿನ ಯಶಸ್ಸಿನಿಂದಲೂ ಮತ್ತಷ್ಟು  ಸಂತೋಷವಾಗುತ್ತದೆ. ಇದನ್ನು ತಾಯಂದಿರಿಗಾಗಿ ಹೇಳಲಾಗುತ್ತದೆ. ಆದ್ದರಿಂದ, ನೀವು ವಿದೇಶದಲ್ಲಿ ಮನ್ನಣೆ ಗಳಿಸಿದಾಗ, ಜಗತ್ತು ನಿಮ್ಮನ್ನು ಹೊಗಳಿದಾಗ, ತಾಯಿ ಭಾರತಿ (ಭಾರತ ಮಾತೆ) ಸಹ ಅದೇ ಸಂತೋಷ ಅನುಭವಿಸುತ್ತಾಳೆ. ವಿದೇಶಿ ನೆಲದಲ್ಲಿ  ತಾಯಿ ಭಾರತಿಯನ್ನು ತನ್ನ ಹೃದಯದಲ್ಲಿ ಹಿಡಿದಿರುವವನಾಗಿ, ನಾನು ತಾಯಿ ಭಾರತಿಯ ಪ್ರತಿ ಮಗುವನ್ನು ಭಾರತದ ಬ್ರಾಂಡ್ ಅಂಬಾಸಿಡರ್ ಎಂದು ಪರಿಗಣಿಸುತ್ತೇನೆ.

ನೀವು ಭಾರತದ ರಾಯಭಾರಿ. ಭಾರತೀಯರನ್ನು ಎಲ್ಲಿ ಬೇಕಾದರೂ ಕಾಣಬಹುದು ಎಂದು ನನಗೆ ತಿಳಿದಿದೆ, ಆದರೆ ಅವರ ಹೃದಯವು ಭಾರತಕ್ಕಾಗಿ ಮಿಡಿಯುತ್ತಿದೆ. ನಾನು ಬಾಹ್ಯಾಕಾಶದ ಬಗ್ಗೆ ಚರ್ಚಿಸುತ್ತಿದ್ದೆ, ನೀವು “ಚಂದ್ರಯಾನ, ಚಂದ್ರಯಾನ, ಚಂದ್ರಯಾನ!” ಅರ್ಥ, ನೀವು ಇಲ್ಲಿದ್ದೀರಿ, ಆದರೆ ನಿಮ್ಮ ಹೃದಯವು ಚಂದ್ರಯಾನದಲ್ಲಿ (ಭಾರತೀಯ ಚಂದ್ರನ ಮಿಷನ್) ತೊಡಗಿಸಿಕೊಂಡಿದೆ. ಅದಕ್ಕಾಗಿಯೇ ಫ್ರಾನ್ಸ್ ಸೇರಿದಂತೆ ವಿಶ್ವಾದ್ಯಂತ ಹರಡಿರುವ ನಮ್ಮ ಭಾರತೀಯ ಸಮುದಾಯ ಹಣ ರವಾನೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ನೀವು ಹೊಸ ದಾಖಲೆಯನ್ನು ನಿರ್ಮಿಸಿದ್ದೀರಿ. ನಾನು ನಿಮಗೆ ಹೇಳಲೇ? ನಾನು ನಿಮಗೆ ಎಲ್ಲವನ್ನೂ ಹೇಳಬೇಕೇ? ನಿಮಗೆ ಗೊತ್ತಿಲ್ಲ, ಸರಿ! ಚಿಂತಿಸಬೇಡಿ, ನಾನು ನಿಮ್ಮ ಸಾಧನೆಗಳ ಹಾಡುಗಳನ್ನು ಹಾಡುತ್ತಲೇ ಇರುತ್ತೇನೆ.

ವಿದೇಶದಲ್ಲಿ ನೆಲೆಸಿರುವ ಭಾರತೀಯ ವಲಸಿಗರು ವಾರ್ಷಿಕವಾಗಿ 100 ಶತಕೋಟಿ ಡಾಲರ್‌ ಆದಾಯ ದಾಟುವ ಮೂಲಕ ವಿಶ್ವದ ಮೊದಲ ದೇಶ ಭಾರತವಾಗಿದೆ. ನಿಮ್ಮ ಈ ಕೊಡುಗೆ ನಿರಂತರವಾಗಿ ಹೆಚ್ಚುತ್ತಿರುವುದು ತುಂಬಾ ಸಂತೋಷದ ವಿಷಯ. ಆದರೆ ನಾನು ನಿಮಗೆ ಇನ್ನೊಂದು ವಿನಂತಿ ಮಾಡುತ್ತೇನೆ. ನಾನು ನಿಮಗೆ ವಿನಂತಿ ಮಾಡಬಹುದೇ? ಸರಿ, ಕೇಳುವುದರಲ್ಲಿ ಕಳೆದುಕೊಳ್ಳಲು ಏನೂ ಇಲ್ಲ. ಮೋದಿ ಮತ್ತೆ ನಿಮ್ಮನ್ನು ಕೇಳಲು ಬರುವುದಿಲ್ಲ. ನಿಮ್ಮಲ್ಲಿ ನನ್ನ ವಿನಂತಿ ಏನೆಂದರೆ, ಈಗ ನೀವು ಭಾರತದಲ್ಲಿಯೂ ಹೂಡಿಕೆ ಮಾಡಲು ಪೂರ್ಣ ಉತ್ಸಾಹದಿಂದ ಮುಂದೆ ಬರಬೇಕಾಗಿದೆ. ಮುಂದಿನ 25 ವರ್ಷಗಳಲ್ಲಿ ಭಾರತ ಅಭಿವೃದ್ಧಿ ಹೊಂದುವ ಗುರಿಯೊಂದಿಗೆ ಕೆಲಸ ಮಾಡುತ್ತಿದೆ. ಇದರಲ್ಲಿ ನಿಮ್ಮ ಪಾತ್ರ ಮಹತ್ವದ್ದು. ನೀವು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರಿ, ಭಾರತದಲ್ಲಿ ಅದಕ್ಕೆ ಸಂಬಂಧಿಸಿದ ಸಾಧ್ಯತೆಗಳನ್ನು ನೀವು ಅನ್ವೇಷಿಸಬೇಕು. ಇಂದು ಪ್ರತಿ ಅಂತಾರಾಷ್ಟ್ರೀಯ ಸಂಸ್ಥೆಯು ಭಾರತವು ಪ್ರಗತಿಯಲ್ಲಿದೆ ಮತ್ತು ಭಾರತವು ಪ್ರಕಾಶಮಾನವಾಗಿದೆ ಎಂದು ಹೇಳುತ್ತಿದೆ.

ಭಾರತವು ಅಭೂತಪೂರ್ವ ಹೂಡಿಕೆ ಅವಕಾಶಗಳಿಗೆ ಸಾಕ್ಷಿಯಾಗಿದೆ. ಭಾರತದಲ್ಲಿ ಹೂಡಿಕೆ ಮಾಡಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನಾನು ಈಗ ಹೇಳಿದಾಗ, ಮೋದಿ ಅದರ ಬಗ್ಗೆ ನಿಮಗೆ ತಿಳಿಸಲಿಲ್ಲ ಎಂದು ನಂತರ ದೂರು ನೀಡಬೇಡಿ. ಅವಕಾಶ ಇಲ್ಲಿದೆ, ಮತ್ತು ನಾನು ಕೆಂಪುಕೋಟೆಯಿಂದ ಹೇಳಿದಂತೆ, ಇದು ಸಮಯ, ಸರಿಯಾದ ಸಮಯ, ಮತ್ತು ಬೇಗ ಹೂಡಿಕೆ ಮಾಡುವವರು ಹೆಚ್ಚಿನ ಲಾಭ ಗಳಿಸುತ್ತಾರೆ. ತಡವಾಗಿ ಬರುವವರು ಕಾಯಬೇಕು. ಈಗ ಅವಕಾಶ ಸದುಪಯೋಗ ಪಡಿಸಿಕೊಳ್ಳುವ ಸಮಯ, ನೀವು ಅದನ್ನು ಎಷ್ಟು ಬೇಗನೆ ಪಡೆದುಕೊಳ್ಳಲು ಬಯಸುತ್ತೀರಿ ಎಂಬುದು ನಿಮಗೆ ಬಿಟ್ಟದ್ದು.

ಸ್ನೇಹಿತರೆ,

ಆದ್ದರಿಂದ ಭಾರತಕ್ಕೆ ಬಂದು ಹೂಡಿಕೆ ಮಾಡಿ. ವಿದೇಶದಲ್ಲಿ ಕೆಲಸ ಮಾಡುವ ಭಾರತೀಯರಿಗೆ ಅನುಕೂಲ ಮತ್ತು ಭದ್ರತೆ ಒದಗಿಸಲು ಭಾರತ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಅದು ಯುದ್ಧಭೂಮಿಯಾಗಿರಲಿ ಅಥವಾ ನೈಸರ್ಗಿಕ ವಿಕೋಪವೇ ಆಗಿರಲಿ, ಭಾರತವು ತನ್ನ ನಾಗರಿಕರನ್ನು ಸಂಕಷ್ಟದಲ್ಲಿ ನೋಡಿದಾಗ ಮೊದಲು ಕ್ರಮ ತೆಗೆದುಕೊಳ್ಳುತ್ತದೆ. ಅದು ಉಕ್ರೇನ್ ಅಥವಾ ಸುಡಾನ್, ಯೆಮೆನ್ ಅಥವಾ ಅಫ್ಘಾನಿಸ್ತಾನ್, ಇರಾಕ್ ಅಥವಾ ನೇಪಾಳ ಆಗಿರಲಿ, ನಾವು ಭಾರತೀಯರ ಸುರಕ್ಷತೆಗಾಗಿ ನಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ. ವಿದೇಶದಲ್ಲಿ ನೆಲೆಸಿರುವ ಪ್ರತಿಯೊಬ್ಬ ಭಾರತೀಯನೂ ಭಾರತದಲ್ಲಿ ನೆಲೆಸಿರುವ ನನ್ನ ಸಹ ದೇಶವಾಸಿಗಳಿಗೆ ಸಮಾನವಾದ ಆದ್ಯತೆ ಹೊಂದಿದ್ದಾರೆ. ಕೆಲವು ವರ್ಷಗಳ ಹಿಂದೆ ನೀತಿ ಆಯೋಗವನ್ನು ಸ್ಥಾಪಿಸಿದಾಗ, ನಾವು ಭಾರತೀಯ ಸಮುದಾಯದ ಸಾಮರ್ಥ್ಯಗಳು ಮತ್ತು ಕೊಡುಗೆಗಳಿಗೆ ಸರಿಯಾದ ಪ್ರಾಮುಖ್ಯತೆ ನೀಡಿದ್ದೇವೆ. ರಿಯೂನಿಯನ್ ದ್ವೀಪದಲ್ಲಿ ಒಸಿಐ ಕಾರ್ಡ್‌ಗೆ ಸಂಬಂಧಿಸಿದ ತೊಂದರೆಗಳನ್ನು ಪರಿಹರಿಸಲಾಗಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಈಗ ಅಲ್ಲಿ ಒಸಿಐ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ನಾವು ಈಗ ಮಾರ್ಟಿನಿಕ್ ಮತ್ತು ಗ್ವಾಡೆಲೋಪ್‌ಗೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ.

ಸ್ನೇಹಿತರೆ,

ಫ್ರಾನ್ಸ್‌ನಲ್ಲಿ ನಮಗೆ ಅನೇಕ ಸ್ನೇಹಿತರಿದ್ದಾರೆ. ಅವರು ಶೈಕ್ಷಣಿಕ ಮತ್ತು ಸಂಶೋಧನೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಶಿಕ್ಷಕರು ಮತ್ತು ಪ್ರಾಧ್ಯಾಪಕರು. ನಾನು ವಿದೇಶದಲ್ಲಿ ಅಂತಹ ಶಿಕ್ಷಣ ತಜ್ಞರು ಮತ್ತು ವೃತ್ತಿಪರರನ್ನು ಭೇಟಿಯಾದಾಗ, ಅವರು ತಮ್ಮ ಅನುಭವ, ಜ್ಞಾನ ಮತ್ತು ಪರಿಣತಿಯನ್ನು ಭಾರತದೊಂದಿಗೆ ಸಂಪರ್ಕಿಸಲು ತಮ್ಮ ಬಯಕೆ ವ್ಯಕ್ತಪಡಿಸುತ್ತಾರೆ. ನಾನು ನಿಮಗಾಗಿ ಒಳ್ಳೆಯ ಸುದ್ದಿ ಹೇಳುತ್ತೇನೆ. ಅವರ ಆಸೆಗೆ ನಾವೂ ಮನ್ನಣೆ ನೀಡಿದ್ದೇವೆ. ಅಂತಹ ಸ್ನೇಹಿತರಿಗೆ ಭಾರತೀಯ ಸಂಸ್ಥೆಗಳಲ್ಲಿ ಕಲಿಸಲು ಈಗ ಸುಲಭವಾಗಿದೆ. ಕಳೆದ ಬಾರಿ ನಾನು ಫ್ರಾನ್ಸ್‌ಗೆ ಭೇಟಿ ನೀಡಿದಾಗ, ಫ್ರಾನ್ಸ್‌ನಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ 2 ವರ್ಷಗಳ ನಂತರದ ಕೆಲಸದ ವೀಸಾ ನೀಡಲು ನಿರ್ಧರಿಸಲಾಯಿತು. ಈಗ ಫ್ರಾನ್ಸ್‌ನಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ 5 ವರ್ಷಗಳ ದೀರ್ಘಾವಧಿಯ ನಂತರದ ಅಧ್ಯಯನ ವೀಸಾ ನೀಡಲು ನಿರ್ಧರಿಸಲಾಗಿದೆ. ಫ್ರೆಂಚ್ ಸರ್ಕಾರದ ನೆರವಿನೊಂದಿಗೆ ಭಾರತ ಸರ್ಕಾರವು ಮಾರ್ಸೆಲ್ಲೆಯಲ್ಲಿ ಹೊಸ ರಾಯಭಾರ ಕಚೇರಿ(ಕಾನ್ಸುಲೇಟ್) ತೆರೆಯಲು ನಿರ್ಧರಿಸಿದೆ. ಇದು ನಿಮ್ಮ ಅನುಕೂಲತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಸ್ನೇಹಿತರೆ,

ಫ್ರಾನ್ಸ್‌ನಲ್ಲಿರುವ ನನ್ನ ಸ್ನೇಹಿತರಿಗೆ ಮತ್ತು ಇಲ್ಲಿನ ನಾಗರಿಕರಿಗೆ ನಾನು ಇನ್ನೊಂದು ವಿನಂತಿ ಮಾಡುತ್ತೇನೆ. ಭಾರತವು ಎಷ್ಟು ವಿಶಾಲವಾಗಿದೆ ಮತ್ತು ವೈವಿಧ್ಯತೆಗಳಿಂದ ಕೂಡಿದೆ ಎಂದರೆ ಭಾರತೀಯರಾದ ನಮಗೂ, ಅದನ್ನು ಸಂಪೂರ್ಣವಾಗಿ ಅನ್ವೇಷಿಸಲು ಮತ್ತು ಅರ್ಥ ಮಾಡಿಕೊಳ್ಳಲು ಜೀವಮಾನದ ಅಗತ್ಯವಿದೆ. ಇಂತಹ ವಿಶಾಲವಾದ ಭಾರತದ ಭವ್ಯತೆಯನ್ನು ಕಣ್ತುಂಬಿಕೊಳ್ಳಲು ಜಗತ್ತು ಉತ್ಸುಕವಾಗಿದೆ. ನೀವು ಖಂಡಿತವಾಗಿಯೂ ಭಾರತದಲ್ಲಿ ನಿಮ್ಮ ಆಸಕ್ತಿಯನ್ನು ಕಂಡುಕೊಳ್ಳುವಿರಿ. ಭಾರತದಲ್ಲಿ ಪ್ರವಾಸೋದ್ಯಮವು ದೃಶ್ಯವೀಕ್ಷಣೆ ಮೀರಿ ವಿಸ್ತರಿಸಿದೆ. ಒಮ್ಮೆ ನೀವು ಭಾರತದ ವೈವಿಧ್ಯತೆ ಅನುಭವಿಸಿದರೆ, ನೀವು ನಮ್ಮ ದೇಶದ ಕಟ್ಟಾ ಅಭಿಮಾನಿಗಳಾಗುತ್ತೀರಿ. ಹಿಮಾಲಯದ ಎತ್ತರದ ಪರ್ವತಗಳಿಂದ ದಟ್ಟವಾದ ಕಾಡುಗಳವರೆಗೆ, ಸುಡುವ ಮರುಭೂಮಿಗಳಿಂದ ಸುಂದರವಾದ ಕರಾವಳಿಗಳವರೆಗೆ, ಸಾಹಸ ಕ್ರೀಡೆಗಳಿಂದ ಧ್ಯಾನ ಮತ್ತು ಯೋಗದ ಕೇಂದ್ರಗಳವರೆಗೆ, ಭಾರತವು ಎಲ್ಲರಿಗೂ ನೀಡಲು ಏನನ್ನಾದರೂ ಹೊಂದಿದೆ. ಈ ವೈವಿಧ್ಯತೆಯನ್ನು ಅನುಭವಿಸಲು ಮತ್ತು ಅರ್ಥ ಮಾಡಿಕೊಳ್ಳಲು ನಮ್ಮ ಫ್ರೆಂಚ್ ಸ್ನೇಹಿತರನ್ನು ಭಾರತಕ್ಕೆ ಕರೆತರುವುದು ನಿಮ್ಮ ಜವಾಬ್ದಾರಿಯಾಗಿದೆ. ನೀವು ಅವರಿಗೆ ಹೆಚ್ಚಿನ ಸಹಾಯ ನೀಡಿದರೆ, ಅವರು ಭಾರತಕ್ಕೆ ಬರುತ್ತಾರೆ. ನನ್ನ ಭಾರತೀಯ ವಲಸಿಗರು, ಫ್ರಾನ್ಸ್‌ನಲ್ಲಿರುವ ನನ್ನ ಸಹೋದರರು ಮತ್ತು ಸಹೋದರಿಯರು ಈ ಪ್ರಯತ್ನಕ್ಕೆ ಹೆಚ್ಚಿನ ಕೊಡುಗೆ ನೀಡಬಹುದು. ಮೊಬೈಲ್ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಪ್ರವೇಶ ಕೋಡ್ ಅಥವಾ ಪಾಸ್‌ವರ್ಡ್ ಅನ್ನು ನಮೂದಿಸುವುದು ಹೊಸ ಜಗತ್ತನ್ನು ತೆರೆಯುವಂತೆಯೇ. ಅನಿವಾಸಿ ಭಾರತೀಯ ಸಮುದಾಯ ಭಾರತಕ್ಕೆ ಪ್ರವೇಶ ಕೋಡ್, ಪಾಸ್‌ವರ್ಡ್ ಆಗಿದೆ. ಭಾರತದಲ್ಲಿಯೂ ಪ್ರವಾಸೋದ್ಯಮ ಉತ್ತೇಜಿಸುವುದನ್ನು ನಿಮ್ಮ ಧ್ಯೇಯವನ್ನಾಗಿ ಮಾಡಿಕೊಳ್ಳಿ. ಭಾರತಕ್ಕೆ ಭೇಟಿ ನೀಡುವುದು ಎಂದರೆ ಸಾವಿರಾರು ವರ್ಷಗಳ ಪರಂಪರೆಯನ್ನು ಅನುಭವಿಸುವುದು ಮತ್ತು ಇತಿಹಾಸವನ್ನು ಅನುಭವಿಸುವುದಾಗಿದೆ. ನೀವು ಭಾರತಕ್ಕೆ ಬಂದಾಗ, ನೀವು ಪರಂಪರೆ ಮಾತ್ರವಲ್ಲದೆ ಅಭಿವೃದ್ಧಿಯ ವೇಗವನ್ನು ಸಹ ವೀಕ್ಷಿಸುತ್ತೀರಿ.

 

ಸ್ನೇಹಿತರೆ,

ನಮ್ಮ ಪೂರ್ಣ ಸಾಮರ್ಥ್ಯ, ನಮ್ಮ ಅನುಭವಗಳು, ನಮ್ಮ ಸಂಪರ್ಕಗಳು ಮತ್ತು ನಮ್ಮ ಸಂಬಂಧಗಳೊಂದಿಗೆ ಫ್ರಾನ್ಸ್‌ ನಾಗರಿಕರನ್ನು ಭಾರತದೊಂದಿಗೆ ಮಹತ್ವದ ರೀತಿಯಲ್ಲಿ ಸಂಪರ್ಕಿಸಲು ಸಂಕಲ್ಪ ಮಾಡೋಣ. ನೀವು ಬಂದಾಗ ಅವರನ್ನು ಭಾರತಕ್ಕೆ ಕರೆದುಕೊಂಡು ಬನ್ನಿ. ಭಾರತವನ್ನು ಅನ್ವೇಷಿಸಲು ಅವರನ್ನು ಪ್ರೇರೇಪಿಸಿ. ನಮ್ಮ ಜನರಿಂದ ಜನರ ಸಂಪರ್ಕ ಹೆಚ್ಚಾದಾಗ, ಪ್ರವಾಸೋದ್ಯಮ ಬೆಳೆಯುವ ಜತೆಗೆ, ಪರಿಚಿತತೆಯ ಬಲವು ಹುಟ್ಟುತ್ತದೆ, ಮುಂದಿನ ಪೀಳಿಗೆಗೆ ಅಮೂಲ್ಯ ಪರಂಪರೆಯಾಗುತ್ತದೆ. ಸ್ನೇಹಿತರೆ, ಈ ಪ್ರಯತ್ನದಲ್ಲಿ ನೀವು ಎಂದಿಗೂ ಹಿಂದೆ ಬೀಳುವುದಿಲ್ಲ ಎಂದು ನಾನು ನಂಬುತ್ತೇನೆ. ನೀವು ಅಪಾರ ಸಂಖ್ಯೆಯಲ್ಲಿ ಬಂದಿದ್ದೀರಿ ಮತ್ತು ನಿಮ್ಮೆಲ್ಲರನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿದೆ. ನಾನು ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ತುಂಬಾ ತುಂಬಾ ಧನ್ಯವಾದಗಳು.

ನನ್ನೊಂದಿಗೆ ಸೇರಿ ಭಾರತ್ ಮಾತಾ ಕಿ ಜೈ ಎಂದು ಹೇಳಿ!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಧನ್ಯವಾದಗಳು!