ಆಸ್ಪತ್ರೆಗಳಲ್ಲಿ ಆಕ್ಸಿಜನ್ ಲಭ್ಯತೆಯನ್ನು ಹೆಚ್ಚಳ ಮಾಡಬೇಕೆಂಬ ಪ್ರಧಾನಮಂತ್ರಿಗಳ ನಿರ್ದೇಶನದಂತೆ, ದೇಶಾದ್ಯಂತ ಸಾರ್ವಜನಿಕ ಆರೋಗ್ಯ ಸೌಕರ್ಯಗಳೊಳಗೆ 551 ಪ್ರಜರ್ ಸ್ವಿಂಗ್ ಅಡ್ಸಾರ್ಪಷನ್ (ಪಿಎಸ್ಎ) ವೈದ್ಯಕೀಯ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪನೆಗೆ ನಿಧಿ ಹಂಚಿಕೆ ಮಾಡಲು ಪಿಎಂ ಕೇರ್ಸ್ ನಿಧಿ ತಾತ್ವಿಕ ಅನುಮೋದನೆ ನೀಡಿದೆ. ಎಷ್ಟು ಸಾಧ್ಯವೋ ಅಷ್ಟು ಶೀಘ್ರ ಈ ಘಟಕಗಳು ಕಾರ್ಯಾರಂಭ ಮಾಡಬೇಕು ಎಂದು ಪ್ರಧಾನಮಂತ್ರಿಗಳು ನಿರ್ದೇಶನ ನೀಡಿದ್ದಾರೆ. ಈ ಘಟಕಗಳಿಂದ ಜಿಲ್ಲಾ ಮಟ್ಟದಲ್ಲಿ ಆಕ್ಸಿಜನ್ ಲಭ್ಯತೆ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.
ಈ ನಿರ್ದಿಷ್ಟ ಘಟಕಗಳನ್ನು ನಾನಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾ ಕೇಂದ್ರಗಳಲ್ಲಿ ಗುರುತಿಸಲಾಗಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಾಪನೆ ಮಾಡಲಾಗುವುದು. ಇವುಗಳಿಗೆ ಆರೋಗ್ಯ ಕುಟುಂಬ ಕಲ್ಯಾಣ ಸಚಿವಾಲಯದ ಮೂಲಕ ಖರೀದಿ ಪ್ರಕ್ರಿಯೆ ನಡೆಸಲಾಗುವುದು.
ಪಿಎಂ ಕೇರ್ಸ್ ನಿಧಿ ಮೂಲಕ ಈ ವರ್ಷದ ಆರಂಭದಲ್ಲಿ ದೇಶದ ಸಾರ್ವಜನಿಕ ಆರೋಗ್ಯ ಸೌಕಯರ್ಗಳಲ್ಲಿ ಹೆಚ್ಚುವರಿಯಾಗಿ 162 ನಿರ್ದಿಷ್ಟ ಪ್ರೆಶರ್ ಸ್ವಿಂಗ್ ಅಡ್ಸಾರ್ಪ್ಷನ್ (ಪಿಎಸ್ಎ) ವೈದ್ಯಕೀಯ ಆಕ್ಸಿಜನ್ ಉತ್ಪಾದನಾ ಘಟಕಗಳ ಸ್ಥಾಪನೆಗೆ 201.58 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು.
ಜಿಲ್ಲಾ ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಪಿಎಸ್ಎ ಆಕ್ಸಿಜನ್ ಉತ್ಪಾದನಾ ಘಟಕಗಳ ಸ್ಥಾಪನೆ ಹಿಂದಿನ ಮುಖ್ಯ ಗುರಿ ಎಂದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಮತ್ತು ಇಂತಹ ಪ್ರತಿಯೊಂದು ಆಸ್ಪತ್ರೆಗಳೂ ಆಕ್ಸಿಜನ್ ಉತ್ಪಾದನಾ ಸೌಕರ್ಯಗಳನ್ನು ಹೊಂದಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಆಸ್ಪತ್ರೆಗಳೊಳಗಿನ ಇಂತಹ ಕ್ಯಾಪ್ಟಿವ್ ಆಕ್ಸಿಜನ್ ಉತ್ಪಾದನಾ ಸೌಕರ್ಯ ಆಸ್ಪತ್ರೆಗಳಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತಿ ದಿನದ ಆಕ್ಸಿಜನ್ ಅಗತ್ಯಗಳನ್ನು ಪೂರೈಸಲಿದೆ. ಅಲ್ಲದೆ ಈ ಕ್ಯಾಪ್ಟಿವ್ ಆಕ್ಸಿಜನ್ ಉತ್ಪಾದನೆಯ ಜೊತೆಗೆ ಹೆಚ್ಚುವರಿಯಾಗಿ ದ್ರವೀಕೃತ ವೈದ್ಯಕೀಯ ಆಕ್ಸಿಜನ್(ಎಲ್ಎಂಒ) ‘ಟಾಪ್ ಅಪ್’ ರೀತಿಯಲ್ಲಿ ಲಭ್ಯವಾಗುತ್ತದೆ. ಇಂತಹ ವ್ಯವಸ್ಥೆ ಜಿಲ್ಲಾ ಮಟ್ಟದಲ್ಲಿನ ಆಸ್ಪತ್ರೆಗಳು ದಿಢೀರನೆ ಆಕ್ಸಿಜನ್ ಪೂರೈಕೆ ವ್ಯತ್ಯಯವಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ದೀರ್ಘಾವಧಿಯಲ್ಲಿ ನೆರವಾಗುತ್ತದೆ ಮತ್ತು ಕೋವಿಡ್-19 ರೋಗಿಗಳು ಮತ್ತು ಆಮ್ಲಜನಕ ಅಗತ್ಯವಿರುವ ರೋಗಿಗಳಿಗೆ ಅಗತ್ಯ ಆಕ್ಸಿಜನ್ ಪೂರೈಕೆ ಯಾವುದೇ ಅಡೆತಡೆ ಇಲ್ಲದೆ ಲಭ್ಯವಾಗಲಿದೆ.
***