Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಿಎಂ-ಕಿಸಾನ್ ನಿಧಿಯ 10ನೇ ಕಂತು ಬಿಡುಗಡೆ ಮಾಡಿದ ಪ್ರಧಾನಮಂತ್ರಿ

ಪಿಎಂ-ಕಿಸಾನ್ ನಿಧಿಯ 10ನೇ ಕಂತು ಬಿಡುಗಡೆ ಮಾಡಿದ ಪ್ರಧಾನಮಂತ್ರಿ


ತಳಮಟ್ಟದ ರೈತರ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಬದ್ಧತೆ ಹಾಗೂ ಸಂಕಲ್ಪವನ್ನು ಮುಂದುವರಿಸುವ ಭಾಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿ ಆರ್ಥಿಕ ನೆರವಿನ 10ನೇ ಕಂತನ್ನು ಬಿಡುಗಡೆ ಮಾಡಿದರು. ಇದರಿಂದಾಗಿ 10 ಕೋಟಿಗೂ ಅಧಿಕ ಫಲಾನುಭವಿ ರೈತ ಕುಟುಂಬಗಳಿಗೆ 20,000 ಕೋಟಿಗೂ ಅಧಿಕ ಹಣ ವರ್ಗಾವಣೆಯಾಗಿದೆ. ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ಅವರು, ಸುಮಾರು 351 ರೈತ ಉತ್ಪನ್ನ ಸಂಸ್ಥೆಗಳು(ಎಫ್ ಪಿಒ)ಗಳಿಗೆ 14 ಕೋಟಿ ರೂ.ಗಳಿಗೂ ಅಧಿಕ ಈಕ್ವಿಟಿ ಅನುದಾನವನ್ನು ಬಿಡುಗಡೆ ಮಾಡಿದರು. ಇದರಿಂದ 1.24 ಲಕ್ಷಕ್ಕೂ ಅಧಿಕ ರೈತರಿಗೆ ಪ್ರಯೋಜನವಾಗಲಿದೆ. ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ಅವರು, ಎಫ್ ಪಿಒಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ಕೇಂದ್ರ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಮತ್ತು ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್ ಗಳು, ಕೃಷಿ ಸಚಿವರುಗಳು ಹಾಗೂ ರೈತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಉತ್ತರಾಖಂಡದ ಎಫ್ ಪಿಒದ ಜತೆ ಸಂವಾದ ನಡೆಸಿದ ಪ್ರಧಾನಮಂತ್ರಿ, ರೈತರು ಸಾವಯವ ಕೃಷಿ ಆಯ್ಕೆ ಮಾಡಿಕೊಂಡಿರುವ ಕುರಿತು ವಿಚಾರಿಸಿದರು ಮತ್ತು ಸಾವಯವ ಉತ್ಪನ್ನಗಳ ಪ್ರಮಾಣೀಕರಣ ವಿಧಾನಗಳ ಕುರಿತು ಆಲಿಸಿದರು. ಅಲ್ಲದೆ ಅವರು ಎಫ್ ಪಿಒಗಳ ಸಾವಯವ ಉತ್ಪನ್ನಗಳ ಮಾರುಕಟ್ಟೆ ಕುರಿತು ಮಾತನಾಡಿದರು. ಎಫ್ ಪಿಒ ತಾವು ಹೇಗೆ ರಾಸಾಯನಿಕ ಗೊಬ್ಬರಗಳನ್ನು ಹೊಂದಿಸಿಕೊಳ್ಳುತ್ತೇವೆ ಎಂಬ ಕುರಿತು ಪ್ರಧಾನಿ ಅವರಿಗೆ ವಿವರಿಸಿತು. ಪ್ರಧಾನ ಮಂತ್ರಿ ಅವರು, ಸರ್ಕಾರ ನೈಸರ್ಗಿಕ ಮತ್ತು ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲು ಪ್ರಯತ್ನಗಳನ್ನು ನಡೆಸುತ್ತಿದೆ. ಏಕೆಂದರೆ ಇದು ರಾಸಾಯನಿಕ ಗೊಬ್ಬರದ ಮೇಲಿನ ಅವಲಂಬನೆ ತಗ್ಗಿಸುವುದರ ಜತೆಗೆ ರೈತರ ಆದಾಯವನ್ನು ವೃದ್ಧಿಸುತ್ತದೆ ಎಂದು ಹೇಳಿದರು.

ಕೃಷಿ ತ್ಯಾಜ್ಯವನ್ನು ಸುಡದೆ ಹೇಗೆ ತಾವು ವಿಲೇವಾರಿ ಮಾಡುತ್ತಿದ್ದೇವೆ ಎಂಬ ವಿಧಾನಗಳ ಕುರಿತು ಪಂಜಾಬ್ ನ ಎಫ್ ಪಿ ಒ ಪ್ರಧಾನ ಮಂತ್ರಿ ಅವರಿಗೆ ಮಾಹಿತಿ ನೀಡಿದರು. ಅಲ್ಲದೆ ಅವರು, ಸೂಪರ್ ಸೀಡರ್ ಮತ್ತು ಸರ್ಕಾರಿ ಸಂಸ್ಥೆಗಳ ಸಹಾಯದ ಕುರಿತು ಮಾತನಾಡಿದರು. ಪ್ರಧಾನಮಂತ್ರಿ ಅವರು, ಕೃಷಿ ತ್ಯಾಜ್ಯ ನಿರ್ವಹಣೆಯ ಅವರ ಅನುಭವ ಎಲ್ಲೆಡೆ ಹರಡಲಿ ಎಂದು ಪ್ರಧಾನಮಂತ್ರಿ ಆಶಿಸಿದರು.

ರಾಜಸ್ಥಾನದ ಎಫ್ ಪಿಒ ಜೇನು ಕೃಷಿ ಕುರಿತು ಮಾತನಾಡಿದರು. ಅವರು, ನಾಫೆಡ್ ಸಹಾಯದಿಂದ ತಾವು ಆರಂಭಿಸಿದ ಎಫ್ ಪಿಒ ಪರಿಕಲ್ಪನೆ ತುಂಬಾ ಉಪಯುಕ್ತವಾಗಿದೆ ಎಂದು ಹೇಳಿದರು.

ಉತ್ತರ ಪ್ರದೇಶದ ಎಫ್ ಪಿಒ, ರೈತರ ಅಭ್ಯುದಯಕ್ಕಾಗಿ ಫೌಂಡೇಷನ್ ರೂಪದಲ್ಲಿ ಎಫ್ ಪಿಒಗಳನ್ನು ಆರಂಭಿಸುತ್ತಿರುವುದಕ್ಕೆ ಪ್ರಧಾನಮಂತ್ರಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಅಲ್ಲದೆ ಅವರು, ತಮ್ಮ ಸದಸ್ಯರಿಗಾಗಿ ಕೈಗೊಂಡಿರುವ ಬೀಜ ಮತ್ತು ಸಾವಯವ ಗೊಬ್ಬರ, ತೋಟಗಾರಿಕಾ ಬೆಳೆಗಳ ಸಂಸ್ಕರಣೆ ಕುರಿತು ಮಾಹಿತಿ ನೀಡಿದರು. ಜತೆಗೆ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ರೈತರಿಗೆ ಸಹಾಯ ನೀಡುತ್ತಿರುವುದಾಗಿ ಅವರು ಹೇಳಿದರು. ಅವರು ಇ-ನ್ಯಾಮ್ ಸೌಕರ್ಯಗಳ ಲಾಭವನ್ನು ಪಡೆಯುತ್ತಿದ್ದಾರೆ. ಅವರು ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಧಾನಮಂತ್ರಿ ಅವರ ಕನಸನ್ನು ಸಾಕಾರಗೊಳಿಸುವುದಾಗಿ ಭರವಸೆ ನೀಡಿದರು. ಪ್ರಧಾನಮಂತ್ರಿ ಅವರು, ದೇಶದ ರೈತರ ವಿಶ್ವಾಸ, ದೇಶದ ಪ್ರಮುಖ ಶಕ್ತಿಯಾಗಿದೆ ಎಂದು ಹೇಳಿದರು.

ತಮಿಳುನಾಡಿನ ಎಫ್ ಪಿಒ, ತಾನು ನಬಾರ್ಡ್ ಬೆಂಬಲದೊಂದಿಗೆ ಉತ್ತಮ ಬೆಲೆಗಳನ್ನು ಪಡೆಯಲು ಸಂಸ್ಥೆಯನ್ನು ಆರಂಭಿಸಲಾಯಿತು ಮತ್ತು ಈ ಎಫ್ ಪಿಒ ಸಂಪೂರ್ಣವಾಗಿ ಮಹಿಳಾ ಮಾಲಿಕತ್ವವಿದ್ದು, ಅವರೇ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. ಪ್ರದೇಶದ ಹವಾಗುಣಕ್ಕೆ ಅನುಗುಣವಾಗಿ ಬೇಳೆ-ಕಾಳುಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ಅವರು ಪ್ರಧಾನಮಂತ್ರಿ ಅವರಿಗೆ ತಿಳಿಸಿದರು. ನಾರಿಶಕ್ತಿಯ ಯಶಸ್ಸು ಅವರ ದೃಢಶಕ್ತಿಯ ಸೂಚಕವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಲ್ಲದೆ ಅವರು ಸಿರಿಧಾನ್ಯಗಳ ಕೃಷಿಯಿಂದ ಪ್ರಯೋನಗಳನ್ನು ಪಡೆದುಕೊಳ್ಳುವಂತೆ ರೈತರಿಗೆ ಕರೆ ನೀಡಿದರು.

ಗುಜರಾತ್ ನ ಎಫ್ ಪಿಒ ಪ್ರತಿನಿಧಿಗಳು, ನೈಸರ್ಗಿಕ ಕೃಷಿ ಮತ್ತು ಗೋವು ಆಧಾರಿತ ಕೃಷಿಯಿಂದ ವೆಚ್ಚ ತಗ್ಗಿಸಿರುವುದು ಮತ್ತು ಮಣ್ಣಿನ ಮೇಲೆ ಒತ್ತಡ ತಗ್ಗಿಸಿರುವ ಕುರಿತು ಮಾತನಾಡಿದರು. ಈ ಕಲ್ಪನೆಯಿಂದ ಆ ಭಾಗದ ಬುಡಕಟ್ಟು ಸಮುದಾಯಗಳಿಗೂ ಕೂಡ ಪ್ರಯೋಜನವಾಗುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಮಾತಾ ವೈಷ್ಣೋದೇವಿ ಸನ್ನಿಧಿಯಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟ ಸಂತ್ರಸ್ತರಿಗೆ ಸಂತಾಪ ಸೂಚಿಸಿದರು. ಅಲ್ಲದೆ ಗಾಯಗೊಂಡಿರುವವರಿಗೆ ಚಿಕಿತ್ಸಾ ವ್ಯವಸ್ಥೆಗಳ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ ಅವರೊಂದಿಗೆ ಸಮಾಲೋಚನೆ ನಡೆಸಿರುವುದಾಗಿ ಪ್ರಧಾನಮಂತ್ರಿ ಹೇಳಿದರು.

ಇಂದು ನಾವು ಹೊಸ ವರ್ಷ ಪ್ರವೇಶಿಸುತ್ತಿದ್ದೇವೆ, ನಾವು ಹಿಂದಿನ ವರ್ಷಗಳ ಸಾಧನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಹೊಸ ಪಯಣದ ಆರಂಭಕ್ಕೆ ಮುನ್ನುಡಿ ಬರೆಯುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಧಾನಮಂತ್ರಿ ಅವರು ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ರಾಷ್ಟ್ರದ ಪ್ರಯತ್ನಗಳನ್ನು ಸ್ಮರಿಸಿಕೊಂಡರು ಮತ್ತು ಸಂಕಷ್ಟದ ಸಮಯದಲ್ಲಿ ಲಸಿಕೀಕರಣ ಮತ್ತು ಸೂಕ್ಷ್ಮ ವರ್ಗದವರಿಗೆ ವ್ಯವಸ್ಥೆ ಕಲ್ಪಿಸಿದ್ದನ್ನು ನೆನಪಿಸಿಕೊಂಡರು. ಸಮಾಜದ ಎಲ್ಲ ದುರ್ಬಲ ವರ್ಗದವರಿಗೆ ಪಡಿತರ ಪೂರೈಸಲು ದೇಶ 2 ಲಕ್ಷ 60 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ ಎಂದು ಹೇಳಿದರು. ವೈದ್ಯಕೀಯ ಮೂಲಸೌಕರ್ಯ ಬಲವರ್ಧನೆಗೆ ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಹೊಸ ಆಕ್ಸಿಜನ್ ಘಟಕಗಳ ಸ್ಥಾಪನೆ ಮತ್ತು ಹೊಸ ವೈದ್ಯಕೀಯ ಕಾಲೇಜುಗಳು, ಯೋಗಕ್ಷೇಮ ಕೇಂದ್ರಗಳು, ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಮತ್ತು ಆಯುಷ್ಮಾನ್ ಭಾರತ್ ಡಿಜಿಟಲ್ ಹೆಲ್ತ್ ಮಿಷನ್ ಮೂಲಕ ವೈದ್ಯಕೀಯ ಮೂಲಸೌಕರ್ಯ ವೃದ್ಧಿ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.

ದೇಶ ಸಬ್ ಕಾ ಸಾತ್, ಸಬ್ ವಿಕಾಸ್ ಮತ್ತು ಸಬ್ ಕಾ ಪ್ರಯಾಸ್ ಎಂಬ ಮಂತ್ರದೊಂದಿಗೆ ಮುನ್ನಡೆಯುತ್ತಿದೆ. ದೇಶಕ್ಕಾಗಿ ಹಲವರು ತಮ್ಮ ಜೀವನ ಮುಡುಪಾಗಿಟ್ಟು ರಾಷ್ಟ್ರ ನಿರ್ಮಿಸುತ್ತಿದ್ದಾರೆ. ಈ ಹಿಂದೆಯೂ ಅವರು ಕೆಲಸ ಮಾಡುತ್ತಿದ್ದರು. ಆದರೆ ಈಗ ಅವರ ಕೆಲಸವನ್ನು ಗುರುತಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಈ ವರ್ಷ ನಾವು ಸ್ವಾತಂತ್ರ್ಯ ಪಡೆದು 75 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದೇವೆ. ಹೊಸ ಉತ್ಸಾಹದೊಂದಿಗೆ ಮುನ್ನಡೆಯಲು ದೇಶ ಹೊಸ ಪಯಣವನ್ನು ಆರಂಭಿಸಲು ನಾವು ಸಂಕಲ್ಪ ಮಾಡಬೇಕಿದೆ” ಎಂದು ಹೇಳಿದರು. ಸಾಮೂಹಿಕ ಪ್ರಯತ್ನದ ಶಕ್ತಿಯ ಕುರಿತು ವಿವರಿಸಿದ ಪ್ರಧಾನಮಂತ್ರಿ, ದೇಶದ 130 ಕೋಟಿ ಭಾರತೀಯರು ಒಂದು ಹೆಜ್ಜೆ ಇಟ್ಟರೆ ಅದು ಕೇವಲ ಒಂದು ಹೆಜ್ಜೆಯಾಗುವುದಿಲ್ಲ, 130 ಕೋಟಿ ಹೆಜ್ಜೆಯಾಗುತ್ತದೆ” ಎಂದು ಹೇಳಿದರು.

ದೇಶದ ಆರ್ಥಿಕತೆ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿ ಅವರು, ಹಲವು ಮಾನದಂಡಗಳಲ್ಲಿ ಭಾರತದ ಆರ್ಥಿಕತೆ ಕೋವಿಡ್ ಗೆ ಮುನ್ನಾ ದಿನಗಳಲ್ಲಿ ಇದ್ದ ಸ್ಥಿತಿಗಿಂತಲೂ ಉತ್ತಮವಾಗಿದೆ ಎಂದರು. “ಇಂದು ನಮ್ಮ ಆರ್ಥಿಕತೆಯ ಪ್ರಗತಿ ದರ ಶೇ.8ಕ್ಕಿಂತಲೂ ಹೆಚ್ಚಾಗಿದೆ. ದಾಖಲೆಯ ವಿದೇಶಿ ಬಂಡವಾಳ ಭಾರತಕ್ಕೆ ಹರಿದುಬಂದಿದೆ. ನಮ್ಮ ಫಾರೆಕ್ಸ್ ರಿಸರ್ವ್ ದಾಖಲೆಯ ಮಟ್ಟ ತಲುಪಿದೆ. ಜಿಎಸ್ ಟಿ ಸಂಗ್ರಹದಲ್ಲಿ ಹಿಂದಿನ ದಾಖಲೆಗಳನ್ನೆಲ್ಲಾ ಅಳಿಸಿ ಹಾಕಲಾಗಿದೆ. ರಫ್ತು ವಿಚಾರದಲ್ಲಿ ವಿಶೇಷವಾಗಿ ಕೃಷಿಯಲ್ಲಿ ನಾವು ಹೊಸ ದಾಖಲೆಗಳನ್ನು ನಿರ್ಮಿಸಿದ್ದೇವೆ” ಎಂದು ಹೇಳಿದರು. ಯುಪಿಐ ಮೂಲಕ 2021ರಲ್ಲಿ 70 ಲಕ್ಷ ಕೋಟಿಗೂ ಅಧಿಕ ವಹಿವಾಟು ನಡೆಸಲಾಗಿದೆ. 50 ಸಾವಿರಕ್ಕೂ ಅಧಿಕ ನವೋದ್ಯಮಗಳು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆ ಪೈಕಿ 10 ಸಾವಿರ ನವೋದ್ಯಮಗಳು ಕಳೆದ ಆರು ತಿಂಗಳಲ್ಲಿ ಆರಂಭವಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು.

2021ನೇ ವರ್ಷ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಬಲವರ್ಧನೆಗೊಳಿಸುವ ವರ್ಷವಾಗಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಕಾಶಿ ವಿಶ್ವನಾಥ ಧಾಮ ಮತ್ತು ಕೇದಾರನಾಥ ಧಾಮದ ಅಭಿವೃದ್ಧಿ ಮತ್ತು ಸುಂದರೀಕರಣ ಉಪಕ್ರಮಗಳು, ಆದಿ ಶಂಕರಾಚಾರ್ಯರ ಸ್ಮಾರಕ ನವೀಕರಣ, ಕಳುವಾಗಿದ್ದ ಅನ್ನಪೂರ್ಣ ದೇವತೆಯ ವಿಗ್ರಹ ಮರುಸ್ಥಾಪನೆ ಮಾಡಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ಧೋಲಾವಿರಾ ಮತ್ತು ದುರ್ಗಾ ಪೂಜಾ ಉತ್ಸವಕ್ಕೆ ವಿಶ್ವ ಪಾರಂಪರಿಕ ಸ್ಥಾನಮಾನ ದೊರಕಿಸಿದ್ದು ಭಾರತೀಯ ಪರಂಪರೆಯನ್ನು ಬಲವರ್ಧನೆಗೊಳಿಸಿದ್ದಲ್ಲದೆ, ಪ್ರವಾಸೋದ್ಯಮ ಮತ್ತು ಯಾತ್ರಾರ್ಥಿಗಳಿಗೆ ಸೌಕರ್ಯಗಳನ್ನೂ ಸಹ ವೃದ್ಧಿಸಲಾಗಿದೆ ಎಂದರು.

ಮಾತೃಶಕ್ತಿಗೂ ಕೂಡ 2021ನೇ ವರ್ಷ ಸಕಾರಾತ್ಮಕವಾಗಿತ್ತು, ಹೆಣ್ಣು ಮಕ್ಕಳಿಗಾಗಿ ಸೈನಿಕ ಶಾಲೆಗಳನ್ನು ಆರಂಭಿಸುವ ಮೂಲಕ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ದ್ವಾರಗಳನ್ನು ಅವರಿಗೆ ತೆರೆಯಲಾಗಿದೆ. ಈ ಕಳೆದುಹೋದ ವರ್ಷದಲ್ಲಿ ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು ಪುರುಷರಿಗೆ ಸಮನಾಗಿ 21ಕ್ಕೆ ಏರಿಸುವ ಪ್ರಯತ್ನ ನಡೆಯಿತು. 2021ರಲ್ಲಿ ಭಾರತೀಯ ಕ್ರೀಡಾಪಟುಗಳು ದೇಶಕ್ಕೆ ವೈಭವವನ್ನು ತಂದುಕೊಟ್ಟರು. ಭಾರತ ದೇಶದ ಕ್ರೀಡಾ ಮೂಲಸೌಕರ್ಯದಲ್ಲಿ ಹಿಂದೆಂದೂ ಹೂಡಿಕೆ ಮಾಡದಷ್ಟು ಹಣ ಹೂಡಿಕೆ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಹವಾಮಾನ ವೈಪರೀತ್ಯದ ವಿರುದ್ಧ ಜಗತ್ತನ್ನು ಮುನ್ನಡೆಸುತ್ತಿರುವ ಭಾರತ 2070ರ ವೇಳೆಗೆ ಶೂನ್ಯ ಇಂಗಾಲ ಹೊರಹಾಕುವ ಗುರಿಯನ್ನು ವಿಶ್ವದೆದುರು ದೃಢಪಡಿಸಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಹಲವು ದಾಖಲೆಗಳನ್ನು ಮಾಡಲಾಗಿದೆ ಎಂದ ಪ್ರಧಾನಮಂತ್ರಿ ಅವರು, ಭಾರತ ನಿಗದಿಗಿಂತ ಮುಂಚೆಯೇ ಅವುಗಳನ್ನು ಈಡೇರಿಸಿದೆ ಎಂದರು. ಭಾರತ ಇಂದು ಹೈಡ್ರೋಜನ್ ಮಿಷನ್ ಕುರಿತು ಕಾರ್ಯನಿರ್ವಹಿಸುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ ಎಂದರು. ಪಿಎಂ-ಗತಿಶಕ್ತಿ ರಾಷ್ಟ್ರೀಯ ಕ್ರೀಯಾ ಯೋಜನೆ ದೇಶದ ಮೂಲಸೌಕರ್ಯ ನಿರ್ಮಾಣ ವಲಯವನ್ನು ಹೊಸ ಎತ್ತರಕ್ಕೆ ಏರಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಮೇಕ್ ಇನ್ ಇಂಡಿಯಾಗೆ ಹೊಸ ಆಯಾಮ ನೀಡಲಾಗುತ್ತಿದೆ. ದೇಶ ಮಹತ್ವಾಕಾಂಕ್ಷೆಯ ಚಿಪ್ ಅಭಿವೃದ್ಧಿ ಮತ್ತು ಸೆಮಿಕಂಡೆಕ್ಟರ್ ಗಳಂತಹ ಹೊಸ ವಲಯಗಳಲ್ಲಿ ಮಹತ್ವಾಕಾಂಕ್ಷಿ ಗುರಿಗಳನ್ನು ಹಾಕಿಕೊಂಡಿದೆ ಎಂದು ಹೇಳಿದರು.

ಇಂದು ಭಾರತ ‘ರಾಷ್ಟ್ರ ಮೊದಲು’ ಎನ್ನುವ ಸ್ಫೂರ್ತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಮತ್ತು ಇದು ಇಂದು ಪ್ರತಿಯೊಬ್ಬ ಭಾರತೀಯನ ಭಾವನೆಯೂ ಆಗಿದೆ ಎಂದು ಪ್ರಧಾನಮಂತ್ರಿ ವಿವರಿಸಿದರು ಮತ್ತು ಅದೇ ಕಾರಣಕ್ಕಾಗಿ ನಮ್ಮ ಪ್ರಯತ್ನಗಳಲ್ಲಿ ಮತ್ತು ನಮ್ಮ ನಿರ್ಣಯಗಳಲ್ಲಿ ಒಗ್ಗಟ್ಟು ಇದೆ ಎಂದು ಹೇಳಿದರು. ನಮ್ಮ ನಿರ್ಧಾರಗಳಲ್ಲಿ ದೃಢತೆ ಇದೆ ಮತ್ತು ನಮ್ಮ ನಿರ್ಣಯಗಳಲ್ಲಿ ದೂರದೃಷ್ಟಿ ಇದೆ ಎಂದು ಅವರು ಹೇಳಿದರು.

ಪಿಎಂ ಕಿಸಾನ್ ನಿಧಿ ಭಾರತೀಯ ರೈತರಿಗೆ ದೊಡ್ಡ ಬೆಂಬಲವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ವರ್ಗಾವಣೆ ಮಾಡಲಾದ ಹಣವನ್ನೂ ಸೇರಿಸಿದರೆ ದೇಶಾದ್ಯಂತ ರೈತರಿಗೆ ಈವರೆಗೆ 1.80 ಲಕ್ಷ ಕೋಟಿ ರೂ.ಗಳನ್ನು ನೇರವಾಗಿ ಅವರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಎಫ್ ಪಿಒಗಳ ಮೂಲಕ ಸಣ್ಣ ರೈತರಿಗೆ ಸಾಮೂಹಿಕ ಸಂಘಟನಾ ಶಕ್ತಿಯ ಅನುಭವವಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಣ್ಣ ರೈತರಿಗೆ ಎಫ್ ಪಿಒಗಳ ಮೂಲಕ ಐದು ಬಗೆಯ ಅನಕೂಲಗಳಾಗುತ್ತಿವೆ ಎಂದು ಅವರು ಹೇಳಿದರು. ಆ ಅನುಕೂಲಗಳೆಂದರೆ ಖರೀದಿ ಶಕ್ತಿ ಹೆಚ್ಚಳ, ವ್ಯಾಪ್ತಿ ಹೆಚ್ಚಳ, ಆವಿಷ್ಕಾರ, ಅಪಾಯ ನಿರ್ವಹಣೆ ಮತ್ತು ಮಾರುಕಟ್ಟೆ ಸ್ಥಿತಿಗತಿಗಳಿಗೆ ಹೊಂದಿಕೊಳ್ಳುವುದು. ಎಫ್ ಪಿಒಗಳ ಅನುಕೂಲಗಳನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಪ್ರತಿಯೊಂದು ಹಂತದಲ್ಲೂ ಅವುಗಳನ್ನು ಉತ್ತೇಜಿಸುತ್ತಿದೆ. ಈ ಎಫ್ ಪಿಒಗಳಿಗೆ 15 ಲಕ್ಷ ರೂ.ಗಳ ವರೆಗೆ ನೆರವು ಸಿಗುತ್ತಿದೆ. ಅದರ ಪರಿಣಾಮವಾಗಿ ಸಾವಯವ ಎಫ್ ಪಿಒಗಳು, ತೈಲಬೀಜ ಎಫ್ ಪಿಒಗಳು, ಬಿದಿರು ಕ್ಲಸ್ಟರ್ ಗಳು ಮತ್ತು ಜೇನು ಸಾಕಾಣಿಕೆ ಎಫ್ ಪಿಒಗಳು ದೇಶಾದ್ಯಂತ ಆರಂಭವಾಗಿವೆ. “ಇಂದು ನಮ್ಮ ರೈತರು ‘ಒಂದು ಜಿಲ್ಲೆ ಒಂದು ಉತ್ಪನ್ನ’ ಮೊದಲಾದ ಯೋಜನೆಗಳ ಮೂಲಕ ಲಾಭ ಪಡೆಯುತ್ತಿದ್ದಾರೆ ಮತ್ತು ಜಾಗತಿಕ ಹಾಗೂ ರಾಷ್ಟ್ರೀಯ ಮಾರುಕಟ್ಟೆಗಳು ಅವರಿಗೆ ತೆರೆದುಕೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. 11 ಸಾವಿರ ಕೋಟಿ ರೂ. ಮೊತ್ತದ ರಾಷ್ಟ್ರೀಯ ತಾಳೆಎಣ್ಣೆ ಮಿಷನ್ ನಂತಹ ಯೋಜನೆಗಳು ಆಮದನ್ನು ತಗ್ಗಿಸಿ, ಸ್ವಾವಲಂಬನೆಗೆ ಸಹಕಾರಿಯಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಪ್ರಧಾನಮಂತ್ರಿ ಅವರು, ಕೃಷಿ ವಲಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಧಿಸಿದ ಹಲವು ಮೈಲುಗಲ್ಲುಗಳ ಕುರಿತು ಮಾತನಾಡಿದರು. ಆಹಾರ ಧಾನ್ಯಗಳ ಉತ್ಪಾದನೆ 300 ಮಿಲಿಯನ್ ಟನ್ ತಲುಪಿದೆ ಅಂತೆಯೇ ತೋಟಗಾರಿಕಾ ಮತ್ತು ಪುಷ್ಪೋದ್ಯಮ ಉತ್ಪಾದನೆ 330 ಮಿಲಿಯನ್ ಟನ್ ತಲುಪಿದೆ. ಹೈನು ಉತ್ಪಾದನೆ ಕಳೆದ 6.7 ತಿಂಗಳಿಗಿಂತ ಶೇ.45ರಷ್ಟು ಹೆಚ್ಚಳವಾಗಿದೆ. ಸುಮಾರು 60 ಲಕ್ಷ ಹೆಕ್ಟೇರ್ ಪ್ರದೇಶವನ್ನು ಸೂಕ್ಷ್ಮ ನೀರಾವರಿ ವ್ಯಾಪ್ತಿಗೆ ತರಲಾಗಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಒಂದು ಲಕ್ಷ ಕೋಟಿಗೂ ಅಧಿಕ ಪರಿಹಾರ ವಿತರಿಸಲಾಗಿದೆ. ಆದರೆ ಪ್ರೀಮಿಯಂ ಮೊತ್ತ ಸ್ವೀಕರಿಸಿರುವುದು ಕೇವಲ 21 ಸಾವಿರ ಕೋಟಿ ರೂ. ಎಥೆನಾಲ್ ಉತ್ಪಾದನೆ ಕೇವಲ 7 ವರ್ಷಗಳಲ್ಲಿ 40 ಕೋಟಿ ಲೀಟರ್ ನಿಂದ 340 ಕೋಟಿ ಲೀಟರ್ ಗೆ ಹೆಚ್ಚಳವಾಗಿದೆ. ಗೋಬರ್ಧನ್ ಯೋಜನೆಯಡಿ ಜೈವಿಕ ಅನಿಲ ಉತ್ತೇಜಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಗಣಿಗೆ ಮೌಲ್ಯ ಇದೆ ಎಂದಾದರೆ ಹಾಲು ನೀಡದಂತಹ ಜಾನುವಾರುಗಳೂ ಕೂಡ ರೈತರಿಗೆ ಹೊರೆಯಾಗುವುದಿಲ್ಲ ಎಂದರು. ಸರ್ಕಾರ, ಕಾಮಧೇನು ಕಮಿಷನ್ ಸ್ಥಾಪಿಸಿದೆ ಮತ್ತು ಹೈನು ವಲಯದ ಮೂಲಸೌಕರ್ಯ ವೃದ್ಧಿಗೆ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಅವರು ಮತ್ತೊಮ್ಮೆ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಬೇಕು ಎಂದು ಕೋರಿದರು. ಮಣ್ಣಿನ ಆರೋಗ್ಯ ರಕ್ಷಣೆಗೆ, ರಾಸಾಯನಿಕ ರಹಿತ ಕೃಷಿ ಕೈಗೊಳ್ಳಬೇಕು ಎಂದು ಅವರು ಹೇಳಿದರು. ಆ ನಿಟ್ಟಿನಲ್ಲಿ ನೈಸರ್ಗಿಕ ಕೃಷಿ ಮೊದಲ ಹೆಜ್ಜೆ ಎಂದರು. ನೈಸರ್ಗಿಕ ಕೃಷಿಯ ಲಾಭಗಳು ಮತ್ತು ವಿಧಾನಗಳ ಬಗ್ಗೆ ಪ್ರತಿಯೊಬ್ಬ ರೈತರಿಗೂ ಜಾಗೃತಿ ಮೂಡಿಸಬೇಕಾಗಿದೆ ಎಂದು ಅವರು ಹೇಳಿದರು. ಸ್ವಚ್ಛತೆಯಂತಹ ಚಳವಳಿಗಳಿಗೆ ಬೆಂಬಲ ನೀಡಬೇಕು ಮತ್ತು ನವೀನ ಕೃಷಿ ಪದ್ಧತಿ ಕೈಗೊಳ್ಳುವುದನ್ನು ಮುಂದುವರಿಸಬೇಕು ಎಂದು ರೈತರಿಗೆ ಕರೆ ನೀಡಿ ಪ್ರಧಾನಮಂತ್ರಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

***