Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಿಎಂ – ಕಿಸಾನ್ ಅಡಿಯಲ್ಲಿ ಆರ್ಥಿಕ ನೆರವಿನ 8ನೇ ಕಂತು ಬಿಡುಗಡೆ ಮಾಡಿದ ಪ್ರಧಾನಮಂತ್ರಿ

ಪಿಎಂ – ಕಿಸಾನ್ ಅಡಿಯಲ್ಲಿ ಆರ್ಥಿಕ ನೆರವಿನ 8ನೇ ಕಂತು ಬಿಡುಗಡೆ ಮಾಡಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 9,50,67,601 ಫಲಾನುಭವಿಗಳಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿ.ಎಂ. ಕಿಸಾನ್) ಅಡಿಯಲ್ಲಿ 2,06,67,75,66,000ರೂ.ಗಳ ಆರ್ಥಿಕ ಪ್ರಯೋಜನದ 8ನೇ ಕಂತನ್ನು ಬಿಡುಗಡೆ ಮಾಡಿದರು. ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ರೈತ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಕೇಂದ್ರ ಕೃಷಿ ಸಚಿವರು ಸಹ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸುವ ವೇಳೆ ಪ್ರಧಾನಮಂತ್ರಿಯವರು, ತಮ್ಮ ವಲಯದ ಯುವ ರೈತರಿಗೆ ಸಾವಯವ ಕೃಷಿ ಮತ್ತು ಹೊಸ ಕೃಷಿ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡುತ್ತಿರುವ ಉತ್ತರ ಪ್ರದೇಶದ ಉನ್ನಾವೋದ ಅರವಿಂದರನ್ನು ಶ್ಲಾಘಿಸಿದರು. ದೊಡ್ಡ ಮಟ್ಟದಲ್ಲಿ ಸಾವಯವ ಕೃಷಿ ಮಾಡುತ್ತಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕಾರ್ ನಿಕೋಬಾರ್ ಪ್ಯಾಟ್ರಿಕ್ ಅವರನ್ನೂ ಪ್ರಶಂಸಿಸಿದರು. ಆಂಧ್ರಪ್ರದೇಶದ ಅನಂತಪುರದ ಎನ್ ವೆನ್ನುರಾಮಾ ಅವರು ತಮ್ಮ ಪ್ರದೇಶದ 170ಕ್ಕೂ ಹೆಚ್ಚು ಆದಿವಾಸಿ ರೈತರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಯತ್ನವನ್ನೂ ಪ್ರಧಾನಮಂತ್ರಿ ಶ್ಲಾಘಿಸಿದರು. ಮೇಘಾಲಯದ ಗಿರಿ ಪ್ರದೇಶಗಳಲ್ಲಿ ಸಾಂಬಾರ ಪದಾರ್ಥಗಳಾದ ಶುಂಟಿ ಪುಡಿ, ದಾಲ್ಚಿನ್ನಿ, ಅರಿಶಿನ ಇತ್ಯಾದಿ ಉತ್ಪಾದಿಸುತ್ತಿರುವ ಮೇಘಾಲಯದ ರೇವಿಸ್ತರ್ ಅವರನ್ನು ಪ್ರಧಾನಮಂತ್ರಿಯವರು ಪ್ರಶಂಸಿಸಿದರು. ದೊಡ್ಡ ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ ಮತ್ತು ಸೌತೆಕಾಯಿಯನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿರುವ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಖುರ್ಷಿದ್ ಅಹ್ಮದ್ ಅವರೊಂದಿಗೂ ಸಂವಾದ ನಡೆಸಿದರು.  

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಇದೇ ಮೊದಲ ಬಾರಿಗೆ, ಪಶ್ಚಿಮ ಬಂಗಾಳದ ರೈತರು ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ಸಾಂಕ್ರಾಮಿಕದ ಸಂಕಷ್ಟದ ನಡುವೆಯೂ ದಾಖಲೆಯ ಪ್ರಮಾಣದ ಆಹಾರ ಧಾನ್ಯ ಮತ್ತು ತೋಟಗಾರಿಕೆ ಬೆಳೆ ಬೆಳೆದ ರೈತರ ಶ್ರಮವನ್ನು ಶ್ಲಾಘಿಸಿದರುಪ್ರತಿ ವರ್ಷ ಎಂ.ಎಸ್.ಪಿ.ಯಡಿಯ ದಾಸ್ತಾನು ಮಾಡಿಕೊಳ್ಳುವುದರಲ್ಲಿ ಸರ್ಕಾರ ಹೊಸ ದಾಖಲೆ ಬರೆಯುತ್ತಿದೆ ಎಂದು ಅವರು ಹೇಳಿದರು. ಎಂ.ಎಸ್.ಪಿ. ಅಡಿ ಭತ್ತದ ಖರೀದಿ ಹೊಸ ದಾಖಲೆ ಬರೆದಿದೆ ಮತ್ತು ಈಗ ಎಂ.ಎಸ್.ಪಿ.ಯಲ್ಲಿ ಗೋಧಿಯ ದಾಸ್ತಾನು ಸಹ ಹೊಸ ದಾಖಲೆ ನಿರ್ಮಿಸಿದೆ ಎಂದರು. ಕಳೆದ ವರ್ಷಕ್ಕೆ ಹೋಲಿಸಿದರೆ, ವರ್ಷ ಈವರೆಗೆ ಶೇ.10ರಷ್ಟು ಅಧಿಕ ಗೋಧಿಯನ್ನು ಎಂ.ಎಸ್.ಪಿ. ಅಡಿಯಲ್ಲಿ ದಾಸ್ತಾನು ಮಾಡಲಾಗಿದೆ ಎಂದೂ ಅವರು ತಿಳಿಸಿದರು. ಈವರೆಗೆ ಗೋಧಿ ಖರೀದಿಗಾಗಿ ಸುಮಾರು 58,000 ಕೋಟಿ ರೂ. ರೈತರ ಖಾತೆಗಳಿಗೆ ನೇರವಾಗಿ ತಲುಪಿದೆ ಎಂದರು.

ಕೃಷಿಯಲ್ಲಿ ಹೊಸ ಆಯ್ಕೆಗಳು ಮತ್ತು ಹೊಸ ಪರಿಹಾರಗಳನ್ನು ಒದಗಿಸಲು ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಸಾವಯವ ಕೃಷಿ ಸಹ ಅಂತಹ ಪ್ರಯತ್ನಗಳಲ್ಲಿ ಒಂದು ಎಂದು ತಿಳಿಸಿದರು. ಸಾವಯವ ಕೃಷಿ ಹೆಚ್ಚಿನ ಲಾಭ ತರುತ್ತಿದ್ದು, ಯುವ ರೈತರು ದೇಶದಾದ್ಯಂತ ಪದ್ಧತಿ ಅನುಸರಿಯುತ್ತಿದ್ದಾರೆ ಎಂದರು.ಗಂಗಾ ನದಿಯ ಎರಡೂ ದಂಡೆಗಳಲ್ಲಿ 5 ಕಿ.ಮೀ. ವ್ಯಾಪ್ತಿಯಲ್ಲಿ ಈಗ ಸಾವಯವ ಕೃಷಿ ಪದ್ಧತಿ ಅನುಸರಿಸಲಾಗುತ್ತಿದೆ, ಇದರಿಂದ ಗಂಗಾ ನದಿಯೂ ಶುದ್ಧವಾಗಿದೆ ಎಂದರು

ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಗಳ ಗುಡುವನ್ನು ವಿಸ್ತರಿಸಲಾಗಿದೆ ಮತ್ತು ಕಂತು ಕಟ್ಟುವುದನ್ನು ಸಹ ಜೂನ್ 30ರವರೆಗೆ ನವೀಕರಿಸಲಾಗಿದೆ ಎಂದು ತಿಳಿಸಿದರು. 2 ಕೋಟಿ ಕಿಸಾನ್ ಕ್ರಿಡಿಟ್ ಕಾರ್ಡ್ ಗಳನ್ನು ಇತ್ತೀಚಿನ ವರ್ಷಗಳಲ್ಲಿ ವಿತರಿಸಲಾಗಿದೆ ಎಂದು ತಿಳಿಸಿದರು.

ಇದು ಶತಮಾನದಲ್ಲೊಮ್ಮೆ ಬರುವಂತಹ ಸಾಂಕ್ರಾಮಿಕವಾಗಿದ್ದು, ವಿಶ್ವಕ್ಕೆ ಸವಾಲು ಒಡ್ಡಿದೆ ಎಂದ ಪ್ರಧಾನಮಂತ್ರಿಯವರು, ಇದೊಂದು ಕಣ್ಣಿಗೆ ಕಾಣದ ಶತ್ರು ನಮ್ಮ ಮುಂದಿದೆ ಎಂದರು. ಸರ್ಕಾರ ಕೋವಿಡ್ -19 ವಿರುದ್ಧ ಎಲ್ಲ ಶಕ್ತಿಯೊಂದಿಗೆ ಹೋರಾಡುತ್ತಿದೆ ಮತ್ತು ದೇಶದ ನೋವನ್ನು ತಗ್ಗಿಸಲು ಸರ್ಕಾರದ ಎಲ್ಲ ಇಲಾಖೆಗಳೂ ಹಗಲು ರಾತ್ರಿ ಶ್ರಮಿಸುತ್ತಿರುವುದನ್ನು ಖಚಿತ ಪಡಿಸಿಕೊಳ್ಳಲಾಗುತ್ತಿದೆ ಎಂದರು.

ದೇಶದ ಜನರು ತ್ವರಿತವಾಗಿ ಲಸಿಕೆ ಪಡೆಯಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಒಗ್ಗೂಡಿ ನಿರಂತರ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು, ದೇಶಾದ್ಯಂತ ಈವರೆಗೆ ಸುಮಾರು 18 ಕೋಟಿ ಲಸಿಕೆಯ ಡೋಸ್ ಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಲಸಿಕೆಗಾಗಿ ನೋಂದಾಯಿಸಿಕೊಂಡು ತಮ್ಮ ಸರದಿಗೆ ಕಾಯಬೇಕು ಮತ್ತು ಸದಾ ಕಾಲ ಸೂಕ್ತ ಕೋವಿಡ್ ನಡೆವಳಿಕೆ ಪಾಲಿಸಬೇಕು ಎಂದು ಮನವಿ ಮಾಡಿದರು. ಲಸಿಕೆ ಕೊರೊನಾ ವಿರುದ್ಧ ಮಹತ್ವದ ರಕ್ಷಣಾ ವಿಧಾನವಾಗಿದೆ ಇದು ಗಂಭೀರ ಸ್ವರೂಪದ ಕಾಯಿಲೆಯ ಅಪಾಯ ತಗ್ಗಿಸುತ್ತದೆ ಎಂದರು.

ಕಠಿಣ ಸಮಯದಲ್ಲಿ ಆಮ್ಲಜನಕದ ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳಲು ಸಶಸ್ತ್ರ ಪಡೆಗಳು ಸಂಪೂರ್ಣ ಬಲದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು. ರೈಲ್ವೆ ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳನ್ನು ಸಹ ಓಡಿಸುತ್ತಿದೆ. ದೇಶದ ಔಷಧ ವಲಯವು ದೊಡ್ಡ ಪ್ರಮಾಣದಲ್ಲಿ ಔಷಧಗಳನ್ನು ತಯಾರಿಸಿ ವಿತರಿಸುತ್ತಿದೆ. ಔಷಧಗಳು ಮತ್ತು ವೈದ್ಯಕೀಯ ಸರಬರಾಜುಗಳು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ನಿಗ್ರಹಿಸಲು ಕಠಿಣ ಕಾನೂನು ಕ್ರಮಗಳನ್ನು ಖಾತ್ರಿಪಡಿಸಿಕೊಳ್ಳಬೇಕೆಂದು ಅವರು ರಾಜ್ಯ ಸರ್ಕಾರಗಳಿಗೆ ಆಗ್ರಹಿಸಿದರು.

ಸಂಕಷ್ಟದ ಸಮಯದಲ್ಲಿ ವಿಶ್ವಾಸ ಕಳೆದುಕೊಳ್ಳುವ ರಾಷ್ಟ್ರ ಭಾರತವಲ್ಲ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸವಾಲನ್ನು ಬಲ ಮತ್ತು ದೃಢತೆಯೊಂದಿಗೆ ಮೆಟ್ಟಿ ನಿಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶಗಳಲ್ಲೂ ಕೋವಿಡ್ -19 ಹರಡುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ ಅವರು, ತಮ್ಮ ಪ್ರದೇಶಗಳಲ್ಲಿ ನೈರ್ಮಲ್ಯ ಕಾಪಾಡುವಂತೆ ಮತ್ತು ಸೂಕ್ತ ಅರಿವು ಮೂಡಿಸುವಂತೆ ಗ್ರಾಮ ಪಂಚಾಯ್ತಿಗಳಿಗೆ ಆಗ್ರಹಿಸಿದರು

***