Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಶ್ಚಿಮ ಬಂಗಾಳದ ಶಾಂತಿನಿಕೇತನದ ವಿಶ್ವ ಭಾರತಿ ವಿಶ್ವ ವಿದ್ಯಾಲಯದ ಘಟಿಕೋತ್ಸವವನ್ನು ಉದ್ದೇಶಿಸಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ


ವೇದಿಕೆಯ ಮೇಲೆ ಆಸೀನರಾಗಿರುವ ಬಾಂಗ್ಲಾ ದೇಶದ ಪ್ರಧಾನಮಂತ್ರಿಗಳಾದ ಶ್ರೀಮತಿ ಶೇಕ್ ಹಸೀನಾ ಅವರೇ, ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಶ್ರೀ ಕೇಸರಿ ನಾಥ್ ತ್ರಿಪಾಠಿಯವರೇ, ಮುಖ್ಯಮಂತ್ರಿಗಳಾದ ಶ್ರೀಮತಿ ಮಮತಾ ಬ್ಯಾನರ್ಜಿಯವರೇ , ವಿಶ್ವ ಭಾರತಿ ಉಪ ಕುಲಪತಿಗಳಾದ ಪ್ರೊಫೆಸರ್ ಸಬೂಜಿ ಕಾಳಿಯವರೇ ಮತ್ತು ರಾಮಕೃಷ್ಣ ಮಿಷನ್ ನ ವಿವೇಕಾನಂದ ಇನ್ ಸ್ಟಿಟ್ಯೂಟ್ ನ ಉಪ ಕುಲಪತಿಗಳಾದ ಸ್ವಾಮಿ ಸೌಮ್ಯಪ್ರಿಯಾನಂದಸ್ವಾಮೀಜಿಯವರೇ, ವಿಶ್ವ ಭಾರತಿಯ ಪ್ರತಿನಿಧಿಗಳೇ ಮತ್ತು ಇಲ್ಲಿ ಸೇರಿರುವಂತಹ ಯುವ ಸ್ನೇಹಿತರೇ,

 

ವಿಶ್ವ ಭಾರತಿಯ ಚಾನ್ಸಲರಾಗಿ ನಾನು ಮೊದಲು ನಿಮ್ಮೆಲ್ಲರ ಕ್ಷಮೆ ಕೇಳುತ್ತೇನೆ. ಏಕೆಂದರೆ ವಿಶ್ವ ವಿದ್ಯಾಲಯಕ್ಕೆ ಬರುವ ಸಂದರ್ಭದಲ್ಲಿ ಕೆಲವು ಮಕ್ಕಳು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹೇಳಿಕೊಂಡರು. ವಿಶ್ವ ವಿದ್ಯಾಲಯದ ಚಾನ್ಸಲರ್ ಆಗಿ ನಾನು ನಿಮಗೆ ಅಸೌಲಭ್ಯ ಆಗಿರುವುದಕ್ಕೆ ಕ್ಷಮೆ ಕೋರಿ ನಿಮಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವುದು ಎಂದು ಭಾವಿಸುತ್ತೇನೆ. ಆದ್ದರಿಂದ ನಿಮಗೆ ತೊಂದರೆ ಆಗಿರುವುದಕ್ಕೆ ಕ್ಷಮೆ ಕೋರುತ್ತೇನೆ. ಪ್ರಧಾನಮಂತ್ರಿಯಾಗಿ ನಾನು ದೇಶದ ಹಲವು ವಿಶ್ವ ವಿದ್ಯಾಲಯಗಳ ಘಟಿಕೋತ್ಸವದಲ್ಲಿ ಭಾಗವಹಿಸುವುದು ಒಂದು ಅವಕಾಶ ಎಂದು ಕೊಂಡಿದ್ದೇನೆ. ಬಹಳಷ್ಟು ಸಂದರ್ಭಗಳಲ್ಲಿ ಅಲ್ಲಿ ನಾನು ಅತಿಥಿಯಾಗಿ ಪಾಲ್ಗೊಂಡಿರುತ್ತೇನೆ. ಆದರೆ ಇಂದು ನಾನು ಅತಿಥಿಯಾಗಿ ಬಂದಿಲ್ಲ, ಕುಲಾಧಿಪತಿಯಾಗಿ ಬಂದಿದ್ದೇನೆ. ಪ್ರಜಾಪ್ರಭುತ್ವದ ಪರಿಣಾಮದಿಂದ ನನ್ನ ಪಾತ್ರ ಇಲ್ಲಿದೆ. ಪ್ರಧಾನಮಂತ್ರಿಯ ಸ್ಥಾನದ ಕಾರಣದಿಂದ ನಾನು ಕುಲಾಧಿಪತಿಯಾಗಿದ್ದೇನೆ. ಇದು ಪ್ರಜಾಪ್ರಭುತ್ವ 125 ಕೋಟಿಗೂ ಹೆಚ್ಚು ಜನರನ್ನು ಇದು ಪ್ರೋತ್ಸಾಹಿಸುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳಿಂದ ಪೋಷಣೆ ಪಡೆದುಕೊಂಡ ಮತ್ತು ಶಿಕ್ಷಿತವಾದ ಪ್ರತಿಯೊಬ್ಬ ವ್ಯಕ್ತಿಯು ಉತ್ತಮ ಭಾರತ ಮತ್ತು ಉತ್ತಮ ಭವಿಷ್ಯವನ್ನು ಕಟ್ಟಲು ಪ್ರೇರಣೆ ನೀಡುತ್ತದೆ. ಆಚಾರ್ಯತ್ ವಿದ್ಯಾವಿಹಿತ ಸಾದಿಷ್ಟತಮ್ ಪ್ರಾಪ್ಯುತಿ ಇತಿ ಎಂದು ಹೇಳುತ್ತೇವೆ. ಅಂದರೆ ಅದರ ಅರ್ಥ ಯಾರು ಶಿಕ್ಷಣ, ಶ್ರೇಷ್ಠತೆ ಮತ್ತು ಯಶಸ್ಸನ್ನು ಗುರುವಿನ ಬಳಿಗೆ ಹೋಗದೇ ಸಿದ್ಧಿಸಿಒಳ್ಳಲು ಸಾಧ್ಯವಿಲ್ಲ ಎನ್ನುವುದು. ಗುರುದೇವ್ ರಬೀಂದ್ರ ನಾಥ ಠಾಗೂರ್ ಅವರ ಪವಿತ್ರ ನೆಲದಲ್ಲಿ ಹಲವು ಗುರುಗಳ ಸಮ್ಮುಖದಲ್ಲಿ ಅಮೂಲ್ಯವಾದ ಸಮಯವನ್ನು ಕಳೆಯಲು ಅವಕಾಶ ಸಿಕ್ಕಿದ್ದು ನಾನು ನಿಜವಾಗಿಯೂ ಅದೃಷ್ಟವಂತ ಎಂದುಕೊಂಡಿದ್ದೇನೆ.

 

ದೇವಸ್ಥಾನದಲ್ಲಿ ಮಂತ್ರ ಶಕ್ತಿಯನ್ನು ಜಪಿಸಿದ ಅನುಭವದಂತೆ ನನಗೂ ಅದೇ ರೀತಿಯ ಶಕ್ತಿಯು ವಿಶ್ವ ಭಾರತಿ ವಿಶ್ವ ವಿದ್ಯಾಲಯದಲ್ಲಿ ಆಗುತ್ತಿದೆ. ಕಾರಿನಿಂದ ಇಳಿದು ವೇದಿಕೆಯ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಈ ಪವಿತ್ರ ನೆಲದಲ್ಲಿ ರಬೀಂದ್ರ ನಾಥ ಠಾಗೂರರು ಹಾಕಿದಂತಹ ಹೆಜ್ಜೆಗಳು ನೆನಪಾದವು. ಈ ಜಾಗದಲ್ಲೇ ಕುಳಿತು ಅವರು ತಮ್ಮ ಲೇಖನಿಯಿಂದ ಪದಗಳನ್ನು ಬರೆದಿರಬಹುದು. ಈ ಜಾಗದಲ್ಲೆಲ್ಲೋ ಅವರು ಸಂಗೀತವನ್ನು ಗುನುಗಿರಬಹುದು. ಮತ್ತು ಶ್ರೀ ಮಹಾತ್ಮ ಗಾಂಧಿಯವರ ಜತೆ ಸುದೀರ್ಘ ಸಂವಾದವನ್ನು ನಡೆಸಿರಬಹುದು. ಅವರು ಜೀವನದ ಅರ್ಥವನ್ನು ವಿವರಿಸಿರಬಹುದು, ಅವರ ವಿದ್ಯಾರ್ಥಿಗಳ ಜತೆ ಜೀವನ, ದೇಶ ಮತ್ತು ಸ್ವಗೌರವದ ಬಗ್ಗೆ ವಿದ್ಯಾರ್ಥಿಗಳಿಗೆ ಇಲ್ಲೇ ಅರ್ಥ ಮಾಡಿಸಿರಬಹುದು.

 

ಸ್ನೇಹಿತರೇ,

 

 ಇವತ್ತು ನಾವು ಸಂಪ್ರದಾಯವನ್ನು ಹಿಂಬಾಲಿಸಲು ಸೇರಿದ್ದೇವೆ. ಕಳೆದ ಒಂದು ಶತಮಾನದಲ್ಲಿ ಅಮರಖುಂಜ್ ಇಂತಹ ಅದೆಷ್ಟೋ ಚಟುವಟಿಕೆಗಳಿಗೆ ಸಾಕ್ಷಿಯಾಗಿದೆ. ಒಂದು ಹಂತದಲ್ಲಿ ಕಳೆದ ಕೆಲವು ವರ್ಷಗಳಿಂದ ನೀವು ಕಲಿತಿದ್ದು ಇಂದಿಗೆ ಅಂತ್ಯ ಕಾಣಲಿದೆ.  ಪದವಿ ಪಡೆದ ಎಲ್ಲರನ್ನೂ ನಾನು ಅಭಿನಂದಿಸಲು ಬಯಸುತ್ತೇನೆ. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭಕೋರುತ್ತೇನೆ. ಈ ಪದವಿಯು ನಿಮ್ಮ ಶೈಕ್ಷಣಿಕ ಅರ್ಹತೆಗೆ ಸಾಕ್ಷಿಯಾಗಲಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಇದು ಮಹತ್ವದ್ದಾಗಿದೆ. ಆದರೂ ನೀವಿಲ್ಲಿ ಕೇವಲ ಪದವಿಯನ್ನು ಮಾತ್ರ ಪಡೆದುಕೊಳ್ಳುತ್ತಿಲ್ಲ. ಬೆಲೆ ಕಟ್ಟಲಾಗದ ಕಲಿಕೆಯನ್ನು ಅರ್ಜಿಸಿಕೊಳ್ಳುತ್ತಿದ್ದೀರಿ. ನೀವು ಪುರಾತನವಾಗಿ ಬಂದ ಪುರಾತನ ಮತ್ತು ಆಧುನಿಕವಾದ ಗುರು-ಶಿಷ್ಯ ಪರಂಪರೆಯ ಸಮೀಕರಣದಲ್ಲಿ ನೀವಿದ್ದೀರಿ.

 

ವೇದ ಮತ್ತು ಪುರಾಣಗಳ ಯುಗ, ಆಧುನಿಕ ಯುಗದಲ್ಲಿ  ಋಷಿ ಮುನಿಗಳು ಈ ಸಂಪ್ರದಾಯವನ್ನು ಪೋಷಿಸಿದರು. ಗುರುದೇವ ರಬೀಂದ್ರನಾಥ ಠಾಗೂರ್ ಅವರಂತಹ ಮಹಾನ್ ಸಾಧಕರಿಂದ ಇದು ಮುಂದುವರೆದುಕೊಂಡು ಬಂದಿದೆ. ಇದು ಕೇವಲ ಭಾಷಣವಲ್ಲ. ನಿಮಗೆಲ್ಲರಿಗೂ ಒಂದು ಸಂದೇಶ. ಒಬ್ಬ ಉತ್ತಮ ಮನುಷ್ಯ ಮತ್ತು ದೇಶವನ್ನು ನಿರ್ಮಾಣ ಮಾಡುವಲ್ಲಿ ಪರಿಸರ ಹೇಗೆ ಕಲಿಸುತ್ತದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಈ ಸಂಸ್ಥೆಯ ಹಿಂದಿನ ಅದ್ಭುತ ಇದಾಗಿದೆ. ಗುರುದೇವ ರಬೀಂದ್ರ ನಾಥ ಠಾಗೂರರ ಮಹಾನ್ ಕಲ್ಪನೆಯು ವಿಶ್ವ ಭಾರತಿಯ ಮೂಲಾಧಾರವಾಗಿದೆ.

 

ಸೋದರ-ಸೋದರಿಯರೇ,

 

ಯತ್ರ ವಿಶ್ವಮ್ ಭವೆತೇಕ್ ನಿರಮ್..ಇದರ ಅರ್ಥ ಇಡೀ ವಿಶ್ವವೇ ಒಂದು ಗೂಡು ಅಥವಾ ಒಂದು ಮನೆ ಎಂದರ್ಥ. ವೇದಗಳ ಈ ಬೋಧನೆಯು ವಿಶ್ವ ಭಾರತಿಯ ಮೂಲಕ ಗುರುದೇವರ ಸಂದೇಶವನ್ನು ಸಾರುತ್ತಿದೆ. ವೇದಮಂತ್ರಗಳಲ್ಲಿ ಭಾರತದ ಶ್ರೀಮಂತ ಸಂಪ್ರದಾಯವು ಅಡಗಿಕೊಂಡಿದೆ. ಇಡೀ ವಿಶ್ವವೇ ತನ್ನ ಮನೆ ಮಾಡಿಕೊಳ್ಳುವಂತೆ ಈ ಸ್ಥಳವು ಘೋಷಣೆ ಆಗಬೇಕು ಎಂಬುದು ಗುರುದೇವ್ ಅವರ ಆಶಯವಾಗಿತ್ತು. ಇಡೀ ವಿಶ್ವಕ್ಕೇ ಆಶ್ರಯ ನೀಡಿದ್ದಾದರೆ ಗೂಡು ಮತ್ತು ಮನೆಗಳಿಗೆ ಸಮಾನವಾದ ಅವಕಾಶ ಸಿಗಲಿದೆ. ಇದುವೇ ಭಾರತೀಯತೆಯಾಗಿದೆ. ಇದುವೆ ವಸುದೈಕ ಕುಟುಂಬಕಂನ ಅರ್ಥವಾಗಿದೆ. ಕಳೆದ ಸಾವಿರಾರು ವರ್ಷಗಳಿಂದಲೂ ಈ ಮಾತು ಭಾರತದ ನೆಲದಲ್ಲಿ ಪ್ರತಿಧ್ವನಿಸುತ್ತಲೇ ಇದೆ. ಈ ಮಂತ್ರಕ್ಕೆ ಗುರುದೇವರು ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟಿದ್ದರು.

 

ಸ್ನೇಹಿತರೇ,

 

ಸಾವಿರಾರು ವರ್ಷಗಳ ಹಿಂದೆಯಿಂದೂ ಇದ್ದಂತಹ ವೇದಗಳು ಉಪನಿಷದ್ ಗಳು ಕಳೆದ 100 ವರ್ಷಗಳ ಹಿಂದೆ ರಬೀಂದ್ರ ನಾಥ ಠಾಗೂರ್ ಅವರು ಶಾಂತಿನಿಕೇತನಕ್ಕೆ ಬಂದ ಸಂದರ್ಭದಲ್ಲೂ ಪ್ರಸ್ತುತ ಎನಿಸಿದ್ದವು. 21ನೇ ಶತಮಾನದಲ್ಲಿ ವಿಶ್ವದ ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಇವತ್ತಿಗೂ ವೇದ-ಉಪನಿಷದ್ ಗಳು ಪ್ರಸ್ತುತವಾಗಿವೆ. ಇವತ್ತು ದೇಶಗಳು ರಾಜಕೀಯ ಮಿತಿಯೊಳಗಿವೆ ಎನ್ನುವುದು ಸತ್ಯ ಸಂಗತಿಯಾಗಿದೆ. ಜಾಗತೀಕರಣದ ಸ್ವರೂಪದಲ್ಲಿ ಇಂದು ನಮ್ಮ  ನೆಲದ ಮಹತ್ತರವಾದ ಸಂಪ್ರದಾಯವು ಹರಡಿಕೊಂಡಿದೆ ಇವತ್ತು ಬಾಂಗ್ಲಾ ದೇಶದ ಪ್ರಧಾನಮಂತ್ರಿಗಳಾದ ಶ್ರೀಮತಿ ಶೇಕ್ ಹಸೀನಾ ಅವರು ಇದೇ ವೇದಿಕೆಯಲ್ಲಿ ನಮ್ಮ ನಡುವೆ ಆಸೀನರಾಗಿದ್ದಾರೆ. ಒಂದೇ ಘಟಿಕೋತ್ಸವದಲ್ಲಿ ಎರಡು ದೇಶಗಳ ಪ್ರಧಾನಮಂತ್ರಿಗಳು ಸೇರುತ್ತಿರುವುದು ಅಪರೂಪದ ಸಂದರ್ಭವಾಗಿದೆ.  ಭಾರತ ಮತ್ತು ಬಾಂಗ್ಲಾ ಎರಡು ಪ್ರತ್ಯೇಕ ದೇಶಗಳೇ ಆಗಿರಬಹುದು ಆದರೆ ಆದರೆ ನಮ್ಮ ಆಸಕ್ತಿಗಳು ಸಹಕಾರ ಮತ್ತು ಸಹಬಾಳ್ವೆಯದ್ದಾಗಿವೆ. ಅದು ಸಂಸ್ಕೃತಿಯೇ ಆಗಲಿ, ಸಾರ್ವಜನಿಕ ನೀತಿಯೇ ಆಗಿರಲಿ ಎರಡೂ ದೇಶಗಳು ಪರಸ್ಪರರಿಂದ ಸಾಕಷ್ಟು ಕಲಿತು ಕೊಂಡಿದ್ದೇವೆ. ಉದಾಹರಣೆಗೆ ಬಾಂಗ್ಲಾ ದೇಶ ಭವನದ ವಿಚಾರವೇ ಇರಬಹುದು. ಇಬ್ಬರೂ ಶೀಘ್ರದಲ್ಲೇ ಅದನ್ನು ಉದ್ಘಾಟನೆ ಮಾಡುತ್ತೇವೆ. ಈ ಕಟ್ಟಡವೂ ಗುರುದೇವರ ಪ್ರತಿರೂಪವೇ ಆಗಿದೆ.

 

ಸ್ನೇಹಿತರೇ,

 

ಇದೇ ಸಂದರ್ಭದಲ್ಲಿ ಗುರುದೇವರ ವ್ಯಕ್ತಿತ್ವವನ್ನು ನೋಡಿ ಮಾತ್ರ ನೋಡಿ ನಾನು ಅಚ್ಚರಿಪಡಲಿಲ್ಲ. ಅವರ ಪ್ರವಾಸದ ಬಗ್ಗೆಯೂ ಅರಿತುಕೊಂಡಿದ್ದೇನೆ. ನನ್ನ ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಸಾಕಷ್ಟು ಮಂದಿಯನ್ನು ನಾನು ಭೇಟಿ ಮಾಡಿದ್ದೆ ಅವರೆಲ್ಲರೂ ತುಂಬಾ ವರ್ಷಗಳ ಹಿಂದೆ ರಬೀಂದ್ರ ನಾಥ ಠಾಗೂರರು ಇಲ್ಲಿಗೆ ಬಂದಿದ್ದರು ಎಂದು ಹೇಳುತ್ತಿದ್ದರು. ಗುರುದೇವ್ ಅವರನ್ನು ಇವತ್ತಿಗೂ ಗೌರವ ಮತ್ತು ಅತ್ಯಂತ ಪ್ರೀತಿಯಿಂದ ಇತರೆ ದೇಶದ ಜನರು ಗುರುದೇವರನ್ನು ಸ್ಮರಿಸುತ್ತಾರೆ. ಜನರು ಠಾಗೂರರ ಜತೆ ತಮ್ಮನ್ನು ಗುರುತಿಸಿಕೊಳ್ಳಲು ಬಯಸುತ್ತಾರೆ.

 

ಆಫ್ಘಾನಿಸ್ತಾನದಲ್ಲಿ ಪ್ರತಿಯೊಬ್ಬ ಆಫ್ಘಾನೀಯನೂ ಕಬೂಲಿವಾಲನ ಕಥೆಯನ್ನು ಹೆಮ್ಮೆಯೆಂದು ಹೇಳುತ್ತಾನೆ. ಮೂರು ವರ್ಷಗಳ ಹಿಂದೆ ನಾನು ತಜಕಿಸ್ತಾನಕ್ಕೆ ತೆರಳಿದ್ದ ಸಂದರ್ಭದಲ್ಲಿ ನನಗೆ ಗುರುದೇವರ ಪುತ್ಥಳಿಯನ್ನು ಲೋಕಾರ್ಪಣೆ ಮಾಡುವ ಅವಕಾಶ ಒದಗಿಬಂದಿತ್ತು. ಗುರುದೇವರಿಗೆ ಅಲ್ಲಿನ ಜನರು ನೀಡಿದ ಗೌರವವನ್ನು ನಾನು ಯಾವತ್ತೂ ಮರೆಯುವುದಿಲ್ಲ.

 

ಜಗತ್ತಿನ ಬಹುತೇಕ ವಿಶ್ವ ವಿದ್ಯಾಲಯಗಳಲ್ಲಿ ಇಂದಿಗೂ ಗುರುದೇವ ಠಾಗೂರರು ಅಧ್ಯಯನದ ವಸ್ತುವಾಗಿದ್ದಾರೆ. ಅವರ ಹೆಸರಿನ ಪೀಠಗಳಿವೆ. ಅವತ್ತಿಗೂ, ಇವತ್ತಿಗೂ ಠಾಗೂರರು ಜಾಗತಿಕ ನಾಗರಿಕ ಎನಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಗುಜರಾತ್ ಬಗ್ಗೆ ಇಟ್ಟುಕೊಂಡಿದ್ದಂತಹ ಸಂಬಂಧವನ್ನು ಹೇಳಲು ನನಗೆ ಕಾತರವಾಗುತ್ತಿದೆ. ಗುರುದೇವ್ ಅವರು ಗುಜರಾತ್ ಜತೆ ವಿಶೇಷ ಸಂಬಂಧ ಹೊಂದಿದ್ದರು. ಅವರ ಹಿರಿಯ ಸೋದರ ಸತ್ಯೇಂದ್ರ ನಾಥ ಠಾಗೂರ್ ಅವರು ನಾಗರಿಕ ಸೇವೆಗೆ ಸೇರಿದ ಮೊದಲ ಭಾರತೀಯ ಎನಿಸಿಕೊಂಡಿದ್ದರು. ಅವರು ಸುದೀರ್ಘ ಕಾಲದವರೆಗೂ ಅಹ್ಮದಾಬಾದ್ ನಲ್ಲಿ ನೆಲೆಸಿದ್ದರು. ಬಹುಷಃ ಅವರು ಅಹ್ಮದಾಬಾದ್ ನಗರದ ಆಯುಕ್ತರಾಗಿದ್ದರು. ಇಂಗ್ಲೆಂಡ್ ದೇಶಕ್ಕೆ ತೆರಳುವ ಮುನ್ನ ಸತ್ಯೇಂದ್ರಜೀಯವರು ತಮ್ಮ ಸೋದರನಿಗೆ ಅಹ್ಮದಾಬಾದ್ ನಲ್ಲಿ ಇಂಗ್ಲಿಷ್ ಬೋಧನೆ ಮಾಡಿದ್ದರು. ಗುರುದೇವ್ ಆಗಿನ್ನೂ 17 ವರ್ಷದವರಾಗಿದ್ದರು. ಆ ಸಂದರ್ಭದಲ್ಲಿ ಗುರುದೇವ್ ಅವರು ತಮ್ಮ ಪ್ರಖ್ಯಾತ ಕಾದಂಬರಿ ಖುದಿಟೋ ಪಾಶನ್ ನ ಹಲವು ಪ್ರಮುಖ ಭಾಗಗಳನ್ನು ಬರೆದಿದ್ದರು. ಕೆಲವು ಕವಿತೆಗಳನ್ನು ಅಹ್ಮದಾಬಾದ್ ನಲ್ಲೂ ಬರೆದಿದ್ದರು. ಗುಜರಾತ್ ಸೇರಿದಂತೆ ದೇಶದ ಪ್ರತಿಯೊಂದು ಭಾಗವೂ ಜಾಗತಿಕವಾಗಿ ಗುರುದೇವರ ಉನ್ನತಿಯನ್ನು ಮೂಡಿಸುವಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಕಾರಣವಾಗಿವೆ.

 

ಸ್ನೇಹಿತರೇ,

 

ಗುರುದೇವ್ ಅವರು ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ಗುರಿಯನ್ನು ಮುಟ್ಟುವುದಕ್ಕಾಗಿಯೇ ಹುಟ್ಟಿದ್ದಾನೆ ಎಂದು ಗುರುದೇವ್ ಅವರು ನಂಬಿದ್ದರು. ಪ್ರತಿಯೊಂದು ಮಗುವೂ ತನ್ನ ಗುರಿಯನ್ನು ಮುಟ್ಟುವಲ್ಲಿ ಶಿಕ್ಷಣವು ಮಹತ್ತರವಾದ ಪಾತ್ರವನ್ನು ವಹಿಸಿದೆ ಎಂದು ಗುರುದೇವ್ ಅವರು ನಂಬಿದ್ದರು. ಪವರ್ ಆಫ್ ಅಫೆಕ್ಷನ್ ಎಂಬ ಅವರ ಪುಸ್ತಕದಲ್ಲಿ ಠಾಗೂರರು ಮಕ್ಕಳಿಗೆ ಎಷ್ಟರ ಮಟ್ಟಿಗೆ ಶಿಕ್ಷಣವನ್ನು ನೀಡಿದ್ದಾರೆ ಎನ್ನುವುದನ್ನು ನಾವು ಕಾಣುತ್ತೇವೆ. ಶಾಲೆಯಿಂದ ಪ್ರೇರಿತವಾದುದಷ್ಟೇ ಶಿಕ್ಷಣವಲ್ಲ. ಶಿಕ್ಷಣ ಎನ್ನುವುದು ಮನುಷ್ಯನ ಎಲ್ಲಾ ಆಯಾಮಗಳಲ್ಲಿ ಹರಡಿಕೊಂಡಿದ್ದು ಅದು ಆತನ ಬೆಳವಣಿಗೆಯಲ್ಲಿ ಸಮತೋಲಿತವಾಗಿ ಪಾತ್ರ ವಹಿಸುತ್ತದೆ.ಅದು ಯಾವುದೇ ಸಮಯ ಮತ್ತು ಸ್ಥಳಕ್ಕೆ ಸೀಮಿತವಾಗಿರುವುದಿಲ್ಲ ಎಂದು ಠಾಗೂರರು ಮತ್ತು  ಬಾಹ್ಯ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಭಾರತೀಯ ವಿದ್ಯಾರ್ಥಿಗಳು ಈ ಮೂಲಕವೇ ತಿಳಿದುಕೊಳ್ಳುತ್ತಿದ್ದರು ಎಂದು ಗುರುದೇವರು ಹೇಳುತ್ತಿದ್ದರು. ಎಷ್ಟು ಮಂದಿ ವಿದೇಶಗಳಲ್ಲಿ ನೆಲೆಸಿದ್ದಾರೆ, ಅವರ ಸಾಮಾಜಿಕ ಮೌಲ್ಯಗಳು ಯಾವುವು? ಅವರ ಸಾಂಸ್ಕೃತಿಕ ಪರಂಪರೆ ಏನು ಮತ್ತಿತರೆ ಅಂಶಗಳನ್ನು ಹೇಳುತ್ತಿದ್ದರು. ಈ ಅಂಶಗಳನ್ನು ತಿಳಿದುಕೊಳ್ಳಲು ಬಯಸುತ್ತಿದ್ದರು. ಆದರೂ ಯಾರೂ ಭಾರತೀಯ ಸಂಸ್ಕೃತಿಯನ್ನು ಮರೆಯಬಾರದು ಎಂದು ಹೇಳುತ್ತಿದ್ದರು.

ಅಮೆರಿಕದಲ್ಲಿ ಕೃಷಿಯನ್ನು ಓದುತ್ತಿದ್ದ ತಮ್ಮ ಅಳಿಯನಿಗೆ ಬರೆದ ಪತ್ರದಲ್ಲಿ ಈ ಅಂಶಗಳನ್ನು ಠಾಗೂರರು ಉಲ್ಲೇಖಿಸಿದ್ದರು ಎಂದು ನಾನು ತಿಳಿದುಕೊಂಡಿದ್ದೆ. ಕೃಷಿ ಶಿಕ್ಷಣವನ್ನು ಕಲಿಯುವುದು ಹೆಚ್ಚಲ್ಲ ಸ್ಥಳೀಯ ಜನರನ್ನು ಅರಿತುಕೊಳ್ಳುವುದೂ ಶಿಕ್ಷಣದ ಒಂದು ಭಾಗ ಎಂದು ಪತ್ರದಲ್ಲಿ ಸೋದರಳಿಯನಿಗೆ ತಿಳಿಸಿದ್ದರು. ಮುಂದೆ ಬರೆಯುತ್ತಾ ಜನರನ್ನು ಅರಿತುಕೊಳ್ಳುವ ಪ್ರಯತ್ನದಲ್ಲಿ ಆತ ತನ್ನ ಗುರುತನ್ನು ಕಳೆದುಕೊಳ್ಳಲು ಆರಂಭಿಸಿದರೆ ಅವನು ಕೋಣೆಯ ಒಳಗೆ ಸ್ವತಃ ಲಾಕ್ ಆಗಬೇಕು ಎಂದು ಉಲ್ಲೇಖಿಸಿದ್ದರು.

 

ಭಾರತೀಯ ರಾಷ್ಟ್ರೀಯ ಚಳವಳಿಯ ಸಂದರ್ಭದಲ್ಲಿ ಠಾಗೂರರ ಶೈಕ್ಷಣಿಕ ಮತ್ತು ಭಾರತೀಯ ತತ್ವ ಶಾಸ್ತ್ರವು ದೂರದ್ದಾಗಿತ್ತು ಅವರ ಜೀವನವು ರಾಷ್ಟ್ರೀಯ ಮತ್ತು ಜಾಗತಿಕ ಆಲೋಚನೆಗಳ ಸಮಗ್ರ ಭಾಗವಾಗಿತ್ತು. ಅದು ನಮ್ಮ ಪುರಾತನ ಪರಂಪರೆಯ ಅಂಶಗಳಾಗಿದ್ದವು. ಇದರ ಪರಿಣಾಮವೇ ವಿಶ್ವ ಭಾರತಿಯಲ್ಲಿ ಅವರು ಶಿಕ್ಷಣದ ಪ್ರತ್ಯೇಕ ಪ್ರಪಂಚವನ್ನೇ ಸೃಷ್ಟಿ ಮಾಡಿದ್ದರು. ಸರಳತೆ ಇಲ್ಲಿ ಶಿಕ್ಷಣದ ಮೂಲ ತತ್ವವಾಗಿತ್ತು. ಇವತ್ತಿಗೂ ತರಗತಿಗಳು ಮರದ ಕೆಳಗೆ ಮತ್ತು ತೆರೆದ ಗಾಳಿಯಲ್ಲಿ ನಡೆಯುತ್ತಿವೆ. ಇದು ಮಾನವ ಮತ್ತು ಪರಿಸರದ ನಡುವಿನ ನೇರ ಸಂವಾದವೇ ಆಗಿದೆ. ಸಂಗೀತ, ಬಣ್ಣ ಹಚ್ಚುವುದು, ನಾಟಕ ಮತ್ತು ನಟನೆ ಹೀಗೆ ಮಾನವ ಜೀವನದ ಎಲ್ಲಾ ಆಯಾಮಗಳು ಪರಿಸರದ ಮಡಿಲಲ್ಲಿ ಮಿಳಿತವಾಗಿವೆ. ಗುರುದೇವ್ ಅವರು ಶಂಕು ಸ್ಥಾಪನೆ ಹಾಕಿದ ನಂತರ ಈ ಸಂಸ್ಥೆಯು ಅವರ ಕನಸುಗಳನ್ನು ಪೂರೈಸುವತ್ತ ಹೆಜ್ಜೆ ಹಾಕುತ್ತಲೇ ಬಂದಿದೆ. ಸಂಯೋಜಿತ ಶಿಕ್ಷಣ ಮತ್ತು ಕೌಶಲ್ಯ ಅಭವೃದ್ದಿ ಮತ್ತು ಸಾಮಾನ್ಯ ಮನುಷ್ಯನ ಜೀವನ ಗುಣಮಟ್ಟ ಸುಧಾರಣೆಯು ಅವರ ಪ್ರಯತ್ನದ ಫಲಗಳಾಗಿವೆ. 50ಕ್ಕೂ ಹೆಚ್ಚು ಗ್ರಾಮಗಳನ್ನು ಅಭಿವೃದ್ಧಿ ಪಡಿಸಲು ನೀವೆಲ್ಲರೂ ಪ್ರಯತ್ನ ಪಡುತ್ತಿದ್ದೀರಿ ಎನ್ನುವುದು ನನಗೆ ತಿಳಿಯಿತು. ಈ ಪ್ರಯತ್ನ ನೋಡಿ ನನ್ನ ಭರವಸೆ ಮತ್ತು ನಿರೀಕ್ಷೆಗಳು ವಿಸ್ತರಣೆ ಆಗಿವೆ ಎಂದು ನನಗೆ ಅನಿಸಿದೆ. ಕಾಯಕದಿಂದ ಭರವಸೆಯು ಹೆಚ್ಚುತ್ತದೆ. ನೀವು ನನ್ನ ಸಾಕಷ್ಟು ನಿರೀಕ್ಷೆಗಳನ್ನು ನಿಜಮಾಡಿದ್ದಿರಿ ಮತ್ತು ಅವುಗಳನ್ನು ಉತ್ತೇಜಿಸುತ್ತಿದ್ದೀರಿ.

 

ಸ್ನೇಹಿತರೇ,

 

2021ರಲ್ಲಿ ಈ ಸಂಸ್ಥೆಯು 100 ವರ್ಷಗಳನ್ನು ಪೂರೈಸಲಿದೆ. ಮುಂದಿನ 2ರಿಂದ 3 ವರ್ಷಗಳಲ್ಲಿ ನೀವು 50 ಹಳ್ಳಿಗಳಿಂದ ನಿಮ್ಮ ಪ್ರಯತ್ನವನ್ನು 100 ಅಥವಾ 200 ಹಳ್ಳಿಗಳಿಗೆ ವಿಸ್ತರಿಸಿಕೊಳ್ಳಬಹುದಾಗಿದೆ. ನೀವೆಲ್ಲರೂ ನಿಮ್ಮ ಪರಿಶ್ರಮವನ್ನು ದೇಶದ ಅಗತ್ಯಗಳಿಗೆ ವಿನಿಯೋಗಿಸಿ. ಉದಾಹರಣೆಗೆ 2021ರ ಶತಮಾನೋತ್ಸವಕ್ಕೆ ನೀವೊಂದು ಸಂಕಲ್ಪವನ್ನು ಮಾಡಿಕೊಳ್ಳಿ. ಪ್ರತಿ ಮನೆಗೂ ಗ್ಯಾಸ್ ಸಂಪರ್ಕ, ಗ್ಯಾಸ್ ಸಂಪರ್ಕ ಮತ್ತು ಶೌಚಾಲಯ, ತಾಯಂದಿರುವ ಮತ್ತು ಮಕ್ಕಳಿಗೆ ಸಂಪೂರ್ಣ ಪ್ರತಿರಕ್ಷೆಯನ್ನು ಹೊಂದಿರಬೇಕು, ಡಿಜಿಟಲ್ ವ್ಯವಹಾರದ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ಶಿಕ್ಷಣ ಹೊಂದಿರುವಂತಹ 100 ಹಳ್ಳಿಗಳನ್ನು ನಿರ್ಮಿಸುವಂತಹ ಸಂಕಲ್ಪ 2021ಕ್ಕೆ ನಿಮ್ಮದಾಗಿರಲಿ. ಅವರೆಲ್ಲರೂ ಸಾಮಾನ್ಯ ಸೇವಾ ಕೇಂದ್ರ ಆನ್್ ಲೈನ್ ಅರ್ಜಿಗಳನ್ನು ಭರ್ತಿ ಮಾಡುವುದನ್ನು ಕಲಿತಿರಬೇಕು.

 

ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಸಂಪರ್ಕ ನೀಡಲಾಗುತ್ತಿದೆ ಎನ್ನುವುದು ನಿಮಗೇ ಗೊತ್ತಿದೆ. ಶೌಚಾಲಯಗಳನ್ನು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ನಿರ್ಮಿಸಿಕೊಡಲಾಗುತ್ತಿದೆ. ಇದು ಮಹಿಳೆಯರ ಜೀವನವನ್ನು ಸುಲಭವಾಗಿಸುತ್ತಿದೆ.

 

ಹಳ್ಳಿಗಳಲ್ಲಿ ನಿಮ್ಮ ಪ್ರಯತ್ನವು ಶಕ್ತಿಯ ಕಾಯಕಯೋಗಿಗಳದ್ದಾಗಿರಲಿ. ಈ ನೆಲದಲ್ಲಿ ಮಹಿಳೆಯರನ್ನು ನೀವು ಸ್ವಾವಲಂಬಿಗಳನ್ನಾಗಿ ಮಾಡಿ. ಈ 100 ಹಳ್ಳಿಗಳನ್ನು ಪ್ರಕೃತಿ ಪ್ರೀತಿಸುವ ಅಥವಾ ಪ್ರಕೃತಿಯನ್ನು ಆರಾಧಿಸುವ ಹಳ್ಳಿಗಳನ್ನಾಗಿ ಪರಿವರ್ತನೆ ಮಾಡಬಹುದಾಗಿದೆ. ನೀವು ಪರಿಸರವನ್ನು ಸಂರಕ್ಷಣೆ ಮಾಡುತ್ತಿರುವಂತೆ ಈ ಹಳ್ಳಿಗಳೂ ಕೂಡಾ ನಿಮ್ಮ ಸಂಕಲ್ಪದ ಭಾಗಗಳಾಗಿವೆ. ಈ ಹಳ್ಳಿಗಳು ನೀರಿನ ಸಮರ್ಪಕ ಸಂರಕ್ಷಣೆಯ ಮೂಲಕ ನೀರಿನ ಉಳಿತಾಯದ ಕಲ್ಪನೆಯನ್ನು ಸಾಧಿಸುವಂತಾಗಲಿ ಮತ್ತು ಮುಂದುವರೆಸುವಂತಾಗಲಿ. ಉರುವಲುಗಳನ್ನು ನಿಯಂತ್ರಣ ಮಾಡುವ ಮೂಲಕ ವಾಯು ಮಾಲಿನ್ಯವನ್ನು ತಡೆಗಟ್ಟಬಹುದಾಗಿದೆ. ಸ್ವಚ್ಛತೆಯನ್ನು ಗಮನದಲ್ಲಿ ಇಟ್ಟುಕೊಳ್ಳುವ ಮೂಲಕ ಸಾವಯವ ರಸಗೊಬ್ಬರನ್ನು ಬಳಕೆ ಮಾಡಿ ಮಣ್ಣಿನ ಗುಣಮಟ್ಟವನ್ನು ಉಳಿಸಿಕೊಳ್ಳಬಹುದಾಗಿದೆ. ಭಾರತ ಸರ್ಕಾರದ ಗೋಬರ್ ಧನ್ ಯೋಜನೆಯನ್ನು ಇದೆಲ್ಲವನ್ನೂ ಸಾಧಿಸಲು ಬಳಸಿಕೊಳ್ಳಬಹುದಾಗಿದೆ. ಚೆಕ್ ಲಿಸ್ಟ್ ಸಿದ್ಧ ಮಾಡಿಕೊಂಡು ಇದೆಲ್ಲವನ್ನೂ ನೀವು ಪೂರೈಸಿಕೊಳ್ಳಬಹುದಾಗಿದೆ.

 

ಸ್ನೇಹಿತರೇ,

 

ಇವತ್ತು ನಾವೆಲ್ಲರೂ ವಿವಿಧ ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಭಾರತ ಸ್ವಾತಂತ್ರ್ಯ ಪಡೆದುಕೊಂಡ 75ನೇ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ 2022ರ ವೇಳೆಗೆ ನವಭಾರತವನ್ನು ನಿರ್ಮಾಣ ಮಾಡಲು 125 ಕೋಟಿ ಜನರು ಕಾತರರಾಗಿದ್ದಾರೆ. ಈ ಸಂಕಲ್ಪವನ್ನು ಕೈಗೂಡಿಸಿಕೊಳ್ಳುವಲ್ಲಿ ಶಿಕ್ಷಣ ಮತ್ತು ಶಿಕ್ಷಣ ನೀಡುತ್ತಿರುವಂತಹ ಇಂತಹ ಶಿಕ್ಷಣ ಸಂಸ್ಥೆಗಳು ಮಹತ್ತರವಾದ ಪಾತ್ರವನ್ನು ವಹಿಸಿವೆ. ಇಂತಹ ಸಂಸ್ಥೆಗಳ ಯುವ ಜನರು ಹೊಸ ಶಕ್ತಿ ಮತ್ತು ನಿರ್ದೇಶನಗಳನ್ನು ದೇಶಕ್ಕೆ ನೀಡುತ್ತಿದ್ದಾರೆ. ನಮ್ಮ ವಿಶ್ವ ವಿದ್ಯಾಲಯಗಳು ಕೇವಲ ಶೈಕ್ಷಣಿಕ ಕೇಂದ್ರಗಳಾಗಿಲ್ಲ. ಸಾಮಾಜಿಕ ಜೀವನದಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಳ್ಳುವಂತೆ ಅವುಗಳನ್ನು ಬಳಸಿಕೊಳ್ಳುವ ಪ್ರಯತ್ನಗಳಾಗುತ್ತಿವೆ.  

 

ಉನ್ನತ ಭಾರತ ಅಭಿಯಾನದ ಅಡಿಯಲ್ಲಿ ಹಳ್ಳಿಗಳ ಬೆಳವಣಿಗೆಗೆ ವಿಶ್ವ ವಿದ್ಯಾಲಯಗಳನ್ನೂ ಸಂಪರ್ಕಿಸಲಾಗುತ್ತಿದೆ. ಗುರುದೇವ್ ಅವರ ಕಲ್ಪನೆಯಂತೆ ನ ಭಾರತದ ಅಗತ್ಯಕ್ಕೆ ತಕ್ಕಂತೆ ಶಿಕ್ಷಣವನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದೆ. ಶಿಕ್ಷಣದಲ್ಲಿ ಮೂಲಭೂತ ಸೌಕರ್ಯ ಮತ್ತು ವ್ಯವಸ್ಥೆಯನ್ನು ಪುನರ್ ಜೀವನಗೊಳಿಸುವ ಯೋಜನೆ ಅಂದರೆ ಆರ್ ಐಎಸ್ ಇ(RISE)ಯನ್ನು ಈ ವರ್ಷದ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಇದರ ಅಡಿಯಲ್ಲಿ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಬಳಕೆ ಮಾಡಿ ದೇಶದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಣೆ ಮಾಡಲಾಗುತ್ತದೆ. ಗ್ಲೋಬಲ್ ಇನಿಷಿಯೇಟಿವ್ ಆಫ್ ಅಕ್ಯಾಡಮಿಕ್ ನೆಟ್ ವರ್ಕ್ ಅನ್ನೂ ಆರಂಭಿಸಲಾಗಿದೆ. ಇದರ ಮೂಲಕ ಭಾರತೀಯ ಸಂಸ್ಥೆಗಳಲ್ಲಿ ಬೋಧನೆ ಮಾಡಲು ವಿಶ್ವದ ಉತ್ತಮ ಶಿಕ್ಷಕರನ್ನೂ ಆಹ್ವಾನಿಸಲಾಗುತ್ತಿದೆ. ಒಂದು ಸಾವಿರ ಕೋಟಿ ರೂಪಾಯಿಗಳ ಹೂಡಿಕೆಯನ್ನು ಮಾಡುವ ಮೂಲಕ ಉನ್ನತ ಶಿಕ್ಷಣ ಹಣಕಾಸು ಏಜೆನ್ಸಿಯನ್ನು ಸೃಷ್ಟಿ ಮಾಡಿ ಶಿಕ್ಷಣ ಸಂಸ್ಥೆಗಳಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಇದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಉನ್ನತ ದರ್ಜೆಯ ಮೂಲ ಸೌಲಭ್ಯಗಳನ್ನು ನೀಡಲು ಸಾಧ್ಯವಾಗಿಸುತ್ತದೆ. ದೇಶದ 2400 ಶಾಲೆಗಳನ್ನು ಆಯ್ಕೆ ಮಾಡಿ ಕಿರಿಯ ವಯಸ್ಸಿನಲ್ಲೇ ಮಕ್ಕಳ ಮನಸ್ಸನ್ನು ಹದಗೊಳಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ಶಾಲೆಗಳನ್ನು ಅಟಲ್ ಟಿಂಕರಿಂಗ್ ಲ್ಯಾಬ್ ಗಳ ಮೂಲಕ 6 ವರ್ಷದಿಂದ 12 ವರ್ಷದ ಳಗಿನ ಮಕ್ಕಳ ಮೇಲೆ ಹೆಚ್ಚು ಆಸಕ್ತಿ ವಹಿಸಲಾಗುತ್ತಿದೆ. ಆಧನಿಕ ತಂತ್ರಜ್ಞಾನದಿಂದ ಕೂಡಿದ ಲ್ಯಾಬ್ ಗಳನ್ನು ಮಕ್ಕಳಿಗೆ ಪರಿಚಯಿಸಲಾಗುವುದು.

 

ಸ್ನೇಹಿತರೇ,

 

ಶಿಕ್ಷಣದಲ್ಲಿ ಅನ್ವೇಷಣೆಗೆ ನಿಮ್ಮ ಸಂಸ್ಥೆಯು ಜೀವಂತ ಉದಾಹರಣೆಯಾಗಿದೆ. ಅನ್ವೇಷಣೆಗಳನ್ನು ಪ್ರೋತ್ಸಾಹಿಸಲು ರೂಪಿಸಲಾದ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಕ್ಕಾಗಿ ನಾನು ವಿಶ್ವ ಭಾರತಿ ಸಂಸ್ಥೆಯ 11000 ವಿದ್ಯಾರ್ಥಿಗಳನ್ನು ನಾನು ಅಭಿನಂದಿಸುತ್ತೇನೆ. ನೀವೆಲ್ಲರೂ ಈ ಸಂಸ್ಥೆಯಿಂದ ಉತ್ತೀರ್ಣರಾಗಿ ಹೋಗುತ್ತಿದ್ದೀರಿ. ಗುರುದೇವ್ ಅವರ ಆಶಿರ್ವಾದದಿಂದ ನೀವು ಒಂದು ಸಂಕಲ್ಪವನ್ನು ಹೊಂದಿದ್ದೀರಿ. ನಿಮ್ಮ ಜತೆ ವಿಶ್ವ ಭಾರತಿಯ ಹೆಗ್ಗುರುತನ್ನು ಹೊತ್ತುಕೊಂಡು ಹೋಗುತ್ತಿದ್ದೀರಿ.

 

ಈ ಸಂಸ್ಥೆಯ ಹೆಮ್ಮೆಯನ್ನು ಉನ್ನತಿಗೆ ಒಯ್ಯುವ ಪ್ರಯತ್ನವನ್ನು ಮುಂದುವರೆಸಿ ಎಂದು ನಾನು ಒತ್ತಾಯಿಸುತ್ತೇನೆ. ಅನ್ವೇಷಣೆಯ ಮೂಲಕ ವಿಶ್ವ ವಿದ್ಯಾಲಯದ 500-1000 ಜನರ ಬದುಕಿನಲ್ಲಿ ಬದಲಾವಣೆ ತರುತ್ತಿರುವ ನಿಮಗೆಲ್ಲರಿರೂ ಜನರು ಅಭನಂದನೆಯನ್ನು ಸಲ್ಲಿಸುತ್ತಾರೆ.

 

ಗುರುದೇವರು ಹೇಳುತ್ತಿದ್ದ ‘ ಜೋಡಿ ತೋರ್ ಡಾಕ್ ಶುನೆ ಕೇವು ನಾ ಆಶೆ ತಬೆ ಏಕ್ಲಾ ಚಲೋ ರೇ’ ಎನ್ನುವ ಮಾತನ್ನು ನೆನಪಿಸಿಕೊಳ್ಳಿ. ಅಂದರೆ ಈ ಮಾತಿನ ಅರ್ಥ ನಿಮ್ಮ ಜತೆ ಹೆಜ್ಜೆ ಹಾಕಲು ಯಾರೂ ಸಿದ್ಧವಿಲ್ಲದೇ ಹೋದರೆ ನಿಮ್ಮ ಗುರಿಯ ಕಡೆಗೆ ಒಬ್ಬರೇ ಸಾಗಿ ಹೋಗಿ ಎನ್ನುವುದಾಗಿದೆ. ಆದರೆ ಇವತ್ತು ನಾನು ಇಲ್ಲಿಗೆ ಬಂದಿರುವುದು ನೀವು ಒಂದು ಹೆಜ್ಜೆ ಇಡಲು ಪ್ರಯತ್ನ ಮಾಡಿದರೆ ನಿಮ್ಮ ಜತೆ ನಾಲ್ಕು ಹೆಜ್ಜೆಗಳನ್ನು ಇಡಲು ಸರ್ಕಾರವು ಸಿದ್ಧವಿದೆ. ಸಾರ್ವಜನಿಕ ಸಹಭಾಗಿತ್ವವು 21ನೇ ಶತಮಾನದಲ್ಲಿ ಗುರುದೇವ್ ಅವರ ಕನಸುಗಳ ಆಶಯದಂತೆ ನಮ್ಮ ದೇಶವನ್ನು ಮುಂದಕ್ಕೆ ಒಯ್ಯಲು ಸುಲಭವಾಗಿಸುತ್ತದೆ.

 

ಸ್ನೇಹಿತರೇ,

 

ಗುರುದೇವ್ ಅವರು ಗಾಂಧೀಜಿಯವರ ಅಂತ್ಯಕಾಲಕ್ಕೂ ಮುನ್ನ ಒಂದು ಮಾತನ್ನು ಹೇಳಿದ್ದರು. ವಿಶ್ವ ಭಾರತಿಯು ಅಮೂಲ್ಯ ಸಂಪತ್ತು ಉಳಿದಿರುವ ಹಡಗು ಎಂದಿದ್ದರು. ನಾವೆಲ್ಲರೂ, ಭಾರತೀಯ ಜನರು ಈ ಖಜಾನೆಯನ್ನು ಬಳಸಿಕೊಳ್ಳಬೇಕಿದೆ. ಇದು ಇಂತಹ ಖಜಾನೆಯನ್ನು ಸಂರಕ್ಷಣೆ ಮಾಡುವ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅಲ್ಲದೇ ಇದನ್ನು ಸಮೃದ್ಧಗೊಳಿಸಬೇಕಿದೆ. ನವ ಭಾರತದ ಕನಸಿನ ಮೂಲಕ ವಿಶ್ವ ಭಾರತಿ ವಿಶ್ವ ವಿದ್ಯಾಲಯವು ಇಡೀ ಜಗತ್ತಿಗೆ ದಾರಿಯನ್ನು ತೋರಿಸುತ್ತದೆ. ಇದರೊಂದಿಗೆ ನಾನು ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ. ನಿಮಗೆಲ್ಲರಿಗೂ ಅನಂತ ಧನ್ಯವಾದಗಳು.

 

 

ನೀವು ನಿಮ್ಮ ಪೋಷಕರ ಕನಸಿನ ಜತೆಗೆ ನಿಮ್ಮ ಕನಸುಗಳನ್ನು ಮತ್ತು ಈ ಸಂಸ್ಥೆ ಹಾಗೂ ದೇಶದ ಕನಸುಗಳನ್ನು ಈಡೇರಿಸಿಕೊಳ್ಳುತ್ತೀರಾ..ಇದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದಗಳು.. ಶುಭಕಾಮನೆಗಳು..