ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪರಿಷ್ಕೃತ ರಾಷ್ಟ್ರೀಯ ಡೇರಿ ಅಭಿವೃದ್ಧಿ ಕಾರ್ಯಕ್ರಮ (ಎನ್ಪಿಡಿಡಿ)ಕ್ಕೆ ಅನುಮೋದನೆ ನೀಡಿದೆ.
ಕೇಂದ್ರ ಸ್ವಾಮ್ಯದ ಯೋಜನೆಯಾದ ಪರಿಷ್ಕೃತ ಎನ್ಪಿಡಿಡಿಗೆ ಹೆಚ್ಚುವರಿಯಾಗಿ 1000 ಕೋಟಿ ರೂ. ಒದಗಿಸಲಾಗಿದೆ. ಇದರೊಂದಿಗೆ, 15ನೇ ಹಣಕಾಸು ಆಯೋಗದ ಅವಧಿ(2021-22ರಿಂದ 2025-26ರ ವರೆಗೆ)ಯಲ್ಲಿ ಒಟ್ಟು ಬಜೆಟ್ ಗಾತ್ರವನ್ನು 2,790 ಕೋಟಿ ರೂ.ಗೆ ಹೆಚ್ಚಿಸಿದಂತಾಗಿದೆ. ಈ ಉಪಕ್ರಮವು ಡೇರಿ ಮೂಲಸೌಕರ್ಯ ಆಧುನೀಕರಣ ಮತ್ತು ವಿಸ್ತರಣೆ ಮೇಲೆ ಗಮನ ಕೇಂದ್ರೀಕರಿಸುತ್ತದೆ, ಇದು ಡೇರಿ ವಲಯದ ಸುಸ್ಥಿರ ಬೆಳವಣಿಗೆ ಮತ್ತು ಉತ್ಪಾದಕತೆಯನ್ನು ಖಚಿತಪಡಿಸುತ್ತದೆ.
ಪರಿಷ್ಕೃತ ಎನ್ಪಿಡಿಡಿ ಯೋಜನೆಯು ಹಾಲು ಖರೀದಿ, ಸಂಸ್ಕರಣಾ ಸಾಮರ್ಥ್ಯ ಮತ್ತು ಉತ್ತಮ ಗುಣಮಟ್ಟ ನಿಯಂತ್ರಣ ಖಚಿತಪಡಿಸುವ ಮೂಲಕ ಡೇರಿ ವಲಯಕ್ಕೆ ಉತ್ತೇಜನ ನೀಡುತ್ತದೆ. ರೈತರು ಮಾರುಕಟ್ಟೆಗಳಿಗೆ ಉತ್ತಮ ಪ್ರವೇಶ ಪಡೆಯಲು, ಮೌಲ್ಯವರ್ಧನೆಯ ಮೂಲಕ ಉತ್ತಮ ಬೆಲೆ ಖಚಿತಪಡಿಸಿಕೊಳ್ಳಲು ಮತ್ತು ಪೂರೈಕೆ ಸರಪಳಿಯ ದಕ್ಷತೆ ಸುಧಾರಿಸಲು, ಹೆಚ್ಚಿನ ಆದಾಯ ತಂದುಕೊಡುವ ಮೂಲಕ ಹೆಚ್ಚಿನ ಗ್ರಾಮೀಣ ಅಭಿವೃದ್ಧಿಗೆ ಕಾರಣವಾಗಲಿದೆ.
ಈ ಯೋಜನೆಯು 2 ಪ್ರಮುಖಾಂಶಗಳನ್ನು ಒಳಗೊಂಡಿದೆ:
ಎನ್ಪಿಡಿಡಿ ಅನುಷ್ಠಾನವು ಈಗಾಗಲೇ 18.74 ಲಕ್ಷಕ್ಕೂ ಹೆಚ್ಚಿನ ರೈತರಿಗೆ ಪ್ರಯೋಜನ ನೀಡುವ ಮೂಲಕ ಬೃಹತ್ ಸಾಮಾಜಿಕ-ಆರ್ಥಿಕ ಪರಿಣಾಮ ಬೀರಿದೆ. ಅಲ್ಲದೆ, 30,000ಕ್ಕಿಂತ ಹೆಚ್ಚಿನ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. ದಿನಕ್ಕೆ ಹೆಚ್ಚುವರಿಯಾಗಿ 100.95 ಲಕ್ಷ ಲೀಟರ್ ಹಾಲು ಖರೀದಿ ಸಾಮರ್ಥ್ಯ ಹೆಚ್ಚಿಸಿದೆ. ಉತ್ತಮ ಹಾಲು ಪರೀಕ್ಷೆ ಮತ್ತು ಗುಣಮಟ್ಟ ನಿಯಂತ್ರಣಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ ಉತ್ತೇಜಿಸುವಲ್ಲಿ ಎನ್ಪಿಡಿಡಿ ಬೆಂಬಲ ನೀಡುತ್ತಿದೆ. 51,777ಕ್ಕೂ ಹೆಚ್ಚು ಗ್ರಾಮ ಮಟ್ಟದ ಹಾಲು ಪರೀಕ್ಷಾ ಪ್ರಯೋಗಾಲಯಗಳನ್ನು ಬಲಪಡಿಸಿದೆ. ಜತೆಗೆ 123.33 ಲಕ್ಷ ಲೀಟರ್ಗಳ ಒಟ್ಟು ಸಾಮರ್ಥ್ಯದ 5,123 ಬಲ್ಕ್ ಮಿಲ್ಕ್ ಕೂಲರ್ಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೆ, 169 ಪ್ರಯೋಗಾಲಯಗಳನ್ನು ಫೋರಿಯರ್ ಟ್ರಾನ್ಸ್ಫಾರ್ಮ್ ಇನ್ ಫ್ರಾರೆಡ್(ಎಫ್ ಟಿಐಆರ್) ಹಾಲು ವಿಶ್ಲೇಷಕಗಳೊಂದಿಗೆ ನವೀಕರಿಸಲಾಗಿದೆ, 232 ಡೇರಿ ಸ್ಥಾವರಗಳು ಈಗ ಕಲಬೆರಕೆ ಪತ್ತೆ ಹಚ್ಚುವ ಸುಧಾರಿತ ವ್ಯವಸ್ಥೆಗಳನ್ನು ಹೊಂದಿವೆ.
ಪರಿಷ್ಕೃತ ಎನ್ಪಿಡಿಡಿ ಯೋಜನೆಯು ಈಶಾನ್ಯ ಪ್ರದೇಶ(ಎನ್ಇಆರ್)ದಲ್ಲಿ ಸಂಸ್ಕರಣೆ ಮಾಡುವ 10,000 ಹೊಸ ಡೇರಿ ಸಹಕಾರ ಸಂಘಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ, ಜತೆಗೆ ಎನ್ಪಿಡಿಡಿಯ ಚಾಲ್ತಿಯಲ್ಲಿರುವ ಯೋಜನೆಗಳ ಜತೆಗೆ ಮೀಸಲಾದ ಅನುದಾನ ಬೆಂಬಲದೊಂದಿಗೆ 2 ಹಾಲು ಉತ್ಪಾದಕ ಕಂಪನಿ(ಎಂಪಿಸಿಗಳು)ಗಳ ಸ್ಥಾಪನೆಯೂ ಸಹ ಇದೆ. ಇದು ಹೆಚ್ಚುವರಿಯಾಗಿ 3.2 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ವಿಶೇಷವಾಗಿ ಡೇರಿ ನೌಕರಪಡೆಯ ಶೇಕಡ 70ರಷ್ಟಿರುವ ಮಹಿಳೆಯರಿಗೆ ಪ್ರಯೋಜನ ನೀಡುತ್ತದೆ.
ಪರಿಷ್ಕೃತ ರಾಷ್ಟ್ರೀಯ ಡೇರಿ ಅಭಿವೃದ್ಧಿ ಕಾರ್ಯಕ್ರಮವು ಭಾರತದ ಆಧುನಿಕ ಮೂಲಸೌಕರ್ಯವನ್ನು ಶ್ವೇತಕ್ರಾಂತಿ 2.0ಕ್ಕೆ ಅನುಗುಣವಾಗಿ ಪರಿವರ್ತಿಸುತ್ತದೆ. ಹೊಸ ತಂತ್ರಜ್ಞಾನ ಮತ್ತು ಗುಣಮಟ್ಟದ ಪರೀಕ್ಷಾ ಪ್ರಯೋಗಾಲಯಗಳನ್ನು ಒದಗಿಸುವ ಮೂಲಕ ಹೊಸದಾಗಿ ರೂಪುಗೊಂಡ ಸಹಕಾರಿ ಸಂಸ್ಥೆಗಳಿಗೆ ಮತ್ತಷ್ಟು ಬೆಂಬಲ ನೀಡುತ್ತದೆ. ಈ ಕಾರ್ಯಕ್ರಮವು ಗ್ರಾಮೀಣ ಜೀವನೋಪಾಯ ಸುಧಾರಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ದೇಶಾದ್ಯಂತ ಲಕ್ಷಾಂತರ ರೈತರು ಮತ್ತು ಪಾಲುದಾರರಿಗೆ ಪ್ರಯೋಜನ ನೀಡುವ ಬಲವಾದ, ಹೆಚ್ಚು ಹೊಂದಾಣಿಕೆಯ ಮತ್ತು ಚೇತರಿಕೆಯ ಡೇರಿ ಉದ್ಯಮ ನಿರ್ಮಿಸಲು ಸಹಾಯ ಮಾಡುತ್ತದೆ.
*****