Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೈಸರ್ಗಿಕ (ಸಾವಯವ) ಕೃಷಿ ಸಮಾವೇಶದಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ

ನೈಸರ್ಗಿಕ (ಸಾವಯವ) ಕೃಷಿ ಸಮಾವೇಶದಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ


ಗುಜರಾತ್ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್ ಜೀ, ಗುಜರಾತಿನ ಜನಪ್ರಿಯ, ಸೌಮ್ಯ ಮತ್ತು ದಕ್ಷ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್, ಗುಜರಾತ್ ಸರ್ಕಾರದ ಸಚಿವರೇ, ಈ ಸಂದರ್ಭದಲ್ಲಿ ಇಲ್ಲಿ ಉಪಸ್ಥಿತರಿರುವ ಸಂಸದರು ಮತ್ತು ಶಾಸಕರೇ, ಸೂರತ್ ಮೇಯರ್, ಜಿಲ್ಲಾ ಪರಿಷತ್ ಮುಖ್ಯಸ್ಥರು, ಎಲ್ಲಾ ಸರಪಂಚರು, ಕೃಷಿ ಕ್ಷೇತ್ರದ ತಜ್ಞರು, ಭಾರತೀಯ ಜನತಾ ಪಕ್ಷದ ಗುಜರಾತ್ ರಾಜ್ಯದ ಅಧ್ಯಕ್ಷರಾದ ಶ್ರೀ ಸಿ.ಆರ್.ಪಾಟೀಲ್ ಮತ್ತು ನನ್ನ ಪ್ರೀತಿಯ ರೈತ ಸಹೋದರ ಹಾಗು ಸಹೋದರಿಯರೇ!

 

ಕೆಲವು ತಿಂಗಳ ಹಿಂದೆ ಗುಜರಾತ್ ನಲ್ಲಿ ನೈಸರ್ಗಿಕ ಕೃಷಿ ಕುರಿತ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಲಾಗಿತ್ತು. ದೇಶಾದ್ಯಂತದ ರೈತರು ಇದರಲ್ಲಿ ಭಾಗಿಯಾಗಿದ್ದರು. ಅದು, ನೈಸರ್ಗಿಕ ಕೃಷಿಗಾಗಿ ದೇಶದಲ್ಲಿ ಎಷ್ಟೊಂದು ದೊಡ್ಡ ಅಭಿಯಾನ ಹೇಗೆ ನಡೆಯುತ್ತಿದೆ ಎಂಬುದರ ಒಂದು ಇಣುಕು ನೋಟವಾಗಿತ್ತು. ಇಂದು ಮತ್ತೊಮ್ಮೆ ಸೂರತ್ ನಲ್ಲಿಯ ಈ ಮಹತ್ವದ ಪ್ರಮುಖ ಕಾರ್ಯಕ್ರಮವು ‘ಆಜಾದಿ ಕಾ ಅಮೃತ್ ಮಹೋತ್ಸವ’ದಲ್ಲಿ ರಾಷ್ಟ್ರದ ನಿರ್ಣಯಗಳಿಗೆ ಗುಜರಾತ್ ಹೇಗೆ ವೇಗೋತ್ಕರ್ಷ ನೀಡುತ್ತಿದೆ ಎಂಬುದಕ್ಕೆ ಒಂದು ಸಂಕೇತವಾಗಿದೆ. ಪ್ರತಿ ಗ್ರಾಮ ಪಂಚಾಯತ್ ನಲ್ಲಿ 75 ರೈತರನ್ನು ನೈಸರ್ಗಿಕ ಕೃಷಿಗೆ ಜೋಡಿಸುವ ಧ್ಯೇಯದಲ್ಲಿ ಸೂರತ್ ನ ಯಶಸ್ಸು ಇಡೀ ದೇಶಕ್ಕೆ ಮಾದರಿಯಾಗಲಿದೆ! ಈ ಸಾಧನೆಗಾಗಿ ಸೂರತ್ ಜನತೆಗೆ, ಸೂರತ್ ನ ರೈತರಿಗೆ ಮತ್ತು ಸರ್ಕಾರಿ ಅಧಿಕಾರಿಗಳು ಹಾಗು ಸಿಬ್ಬಂದಿಗೆ ಹೃತ್ಪೂರ್ವಕ ಅಭಿನಂದನೆಗಳು.

 

ಇಂದಿನ ‘ನೈಸರ್ಗಿಕ ಕೃಷಿ ಸಮಾವೇಶ’ದಲ್ಲಿ, ಈ ಅಭಿಯಾನಕ್ಕೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿಗೂ ಮತ್ತು ನನ್ನ ಎಲ್ಲಾ ರೈತ ಸ್ನೇಹಿತರಿಗೆ ನನ್ನ ಶುಭ ಹಾರೈಕೆಗಳು. ಇಂದು ಸರಪಂಚರಿಂದ ಗೌರವಿಸಲ್ಪಟ್ಟ ರೈತ ಸ್ನೇಹಿತರಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ. ಮತ್ತು ರೈತರ ಜೊತೆಗೆ, ಸರಪಂಚರ ಪಾತ್ರವೂ ತುಂಬಾ ಪ್ರಶಂಸನೀಯವಾಗಿದೆ ಏಕೆಂದರೆ ಅವರು ರೈತರ ಜೊತೆಗೆ ಈ ಉಪಕ್ರಮವನ್ನು ಕೈಗೊಂಡಿದ್ದಾರೆ.

 

ಸ್ನೇಹಿತರೇ,

 

ಸ್ವಾತಂತ್ರ್ಯದ 75 ನೇ ವರ್ಷದ ಸಂದರ್ಭದಲ್ಲಿ, ದೇಶವು ಅಂತಹ ವಿವಿಧ ಗುರಿಗಳ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದೆ, ಇದು ಮುಂಬರುವ ದಿನಗಳಲ್ಲಿ ಪ್ರಮುಖ ಬದಲಾವಣೆಗಳಿಗೆ ಮೂಲಾಧಾರವಾಗಲಿದೆ. ‘ಅಮೃತಕಾಲ’ದ ಸಮಯದಲ್ಲಿ, ದೇಶದ ಪ್ರಗತಿಯ ಅಡಿಪಾಯ ಎಂದರೆ ಪ್ರತಿಯೊಬ್ಬರ ಪ್ರಯತ್ನದ ಸ್ಫೂರ್ತಿ., ಅದು ನಮ್ಮ ಅಭಿವೃದ್ಧಿಯ ಯಾನವನ್ನು ಮುನ್ನಡೆಸಲಿದೆ. ವಿಶೇಷವಾಗಿ ಬಡವರು ಮತ್ತು ರೈತರಿಗಾಗಿ ಮಾಡುತ್ತಿರುವ ಪ್ರತಿಯೊಂದು ಕೆಲಸದ ನಾಯಕತ್ವವನ್ನು ದೇಶವಾಸಿಗಳಿಗೆ ಮತ್ತು ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿದೆ. ಗುಜರಾತ್ ನಲ್ಲಿ ನೈಸರ್ಗಿಕ ಕೃಷಿಯ ಆಂದೋಲನವನ್ನು ನಾನು ಬಹಳ ನಿಕಟವಾಗಿ ಗಮನಿಸುತ್ತಿದ್ದೇನೆ. ಮತ್ತು ಅದರ ಪ್ರಗತಿಯನ್ನು ನೋಡಿದರೆ ನನಗೆ ನಿಜವಾಗಿಯೂ ಸಂತೋಷವಾಗುತ್ತದೆ. ವಿಶೇಷವಾಗಿ ರೈತ ಸಹೋದರ ಸಹೋದರಿಯರು ಈ ನೈಸರ್ಗಿಕ ಅಥವಾ ಸಾವಯವ ಕೃಷಿಯ ಚಿಂತನೆಯನ್ನು ತಮ್ಮ ಹೃದಯಾಂತರಾಳದಿಂದ ಸ್ವೀಕರಿಸಿದ್ದಾರೆ ಮತ್ತು ಅದನ್ನು ಅಳವಡಿಸಿಕೊಂಡಿದ್ದಾರೆ. ಇದಕ್ಕಿಂತ ಉತ್ತಮವಾದುದು ಮತ್ತೊಂದಿರಲಾರದು. ಸೂರತ್ ನ ಪ್ರತಿ ಗ್ರಾಮ ಪಂಚಾಯಿತಿಯಿಂದ 75 ರೈತರನ್ನು ಆಯ್ಕೆ ಮಾಡಲು ಗ್ರಾಮ ಸಮಿತಿಗಳು, ತಾಲ್ಲೂಕು ಸಮಿತಿಗಳು ಮತ್ತು ಜಿಲ್ಲಾ ಸಮಿತಿಗಳನ್ನು ರಚಿಸಲಾಯಿತು. ಗ್ರಾಮ ಮಟ್ಟದಲ್ಲಿ ತಂಡಗಳನ್ನು ರಚಿಸಲಾಯಿತು; ತಂಡಕ್ಕೆ ನಾಯಕರನ್ನು ನೇಮಿಸಲಾಯಿತು ಮತ್ತು ತಾಲ್ಲೂಕಿನಲ್ಲಿ ನೋಡಲ್ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ನೀಡಲಾಯಿತು. ಈ ಅವಧಿಯಲ್ಲಿ ನಿಯಮಿತವಾಗಿ ತರಬೇತಿ ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳನ್ನು ಸಹ ಆಯೋಜಿಸಲಾಯಿತು ಎಂದು ನನಗೆ ತಿಳಿಸಲಾಗಿದೆ. ಮತ್ತು ಇಂದು, ಇಷ್ಟು ಕಡಿಮೆ ಅವಧಿಯಲ್ಲಿ 550 ಕ್ಕೂ ಹೆಚ್ಚು ಪಂಚಾಯತ್ ಗಳಿಂದ 40,000 ಕ್ಕೂ ಹೆಚ್ಚು ರೈತರು ನೈಸರ್ಗಿಕ ಕೃಷಿಗೆ ಸೇರಿದ್ದಾರೆ. ಅಂದರೆ, ಅಂತಹ ದೊಡ್ಡ ಕೆಲಸವನ್ನು ಒಂದು ಸಣ್ಣ ಪ್ರದೇಶದಲ್ಲಿ ಮಾಡಲಾಗಿದೆ! ಇದು ಬಹಳ ಉತ್ತೇಜನಕಾರಿ ಆರಂಭ ಮತ್ತು ಇದು ಪ್ರತಿಯೊಬ್ಬ ರೈತನ ಹೃದಯದಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಮುಂಬರುವ ದಿನಗಳಲ್ಲಿ, ಇಡೀ ದೇಶದ ರೈತರು ನಿಮ್ಮ ಪ್ರಯತ್ನಗಳು ಮತ್ತು ಅನುಭವಗಳಿಂದ ಸಾಕಷ್ಟು ತಿಳಿದುಕೊಳ್ಳುತ್ತಾರೆ, ಅರ್ಥಮಾಡಿಕೊಳ್ಳುತ್ತಾರೆ ಮತ್ತು ಕಲಿಯುತ್ತಾರೆ. ಸೂರತ್ ನಲ್ಲಿ ಜನಿಸಿದ ನೈಸರ್ಗಿಕ ಕೃಷಿಯ ಈ ಮಾದರಿಯು ಇಡೀ ಭಾರತಕ್ಕೆ ಒಂದು ಮಾದರಿಯಾಗಬಹುದು.

 

ಸಹೋದರೇ ಮತ್ತು ಸಹೋದರಿಯರೇ,

 

 

 

ದೇಶವಾಸಿಗಳೇ ಸ್ವತಃ ಒಂದು ಗುರಿಯನ್ನು ಸಾಧಿಸಲು ದೃಢನಿಶ್ಚಯ ಮಾಡಿದಾಗ, ಆ ಗುರಿಯನ್ನು ಸಾಧಿಸಲು ಯಾವುದೇ ಅಡೆತಡೆಯಿರುವುದಿಲ್ಲ, ಮತ್ತು ನಮಗೆ ದಣಿವಿನ ಭಾವನೆ ಬರುವುದಿಲ್ಲ. ಯಾವುದೇ ದೊಡ್ಡ ಅಥವಾ ಶ್ರಮದಾಯಕ ಕೆಲಸವನ್ನು ಸಾರ್ವಜನಿಕ ಸಹಭಾಗಿತ್ವದ ಶಕ್ತಿಯಿಂದ ಮಾಡಿದಾಗ, ಅದರ ಯಶಸ್ಸನ್ನು ದೇಶದ ಜನರೇ ಖಾತ್ರಿಪಡಿಸುತ್ತಾರೆ. ಜಲ ಜೀವನ್ ಮಿಷನ್ ಇದಕ್ಕೆ ಒಂದು ಉದಾಹರಣೆಯಾಗಿದೆ. ಪ್ರತಿ ಹಳ್ಳಿಗೂ ಶುದ್ಧ ನೀರನ್ನು ಒದಗಿಸುವ ಇಂತಹ ಬೃಹತ್ ಅಭಿಯಾನದ ಜವಾಬ್ದಾರಿಯನ್ನು ಹಳ್ಳಿಗಳ ಜನರು ಮತ್ತು ದೇಶದ ಹಳ್ಳಿಗಳಲ್ಲಿ ರಚಿಸಲಾದ ನೀರಿನ ಸಮಿತಿಗಳು ನಿರ್ವಹಿಸುತ್ತಿವೆ. ಇಂದು ಎಲ್ಲಾ ಜಾಗತಿಕ ಸಂಸ್ಥೆಗಳು ಶ್ಲಾಘಿಸುತ್ತಿರುವ ಸ್ವಚ್ಛ ಭಾರತದಂತಹ ಬೃಹತ್ ಅಭಿಯಾನದ ಯಶಸ್ಸಿನ ಶ್ರೇಯಸ್ಸು ನಮ್ಮ ಹಳ್ಳಿಗಳಿಗೆ ಸಲ್ಲುತ್ತದೆ. ಅಂತೆಯೇ, ಡಿಜಿಟಲ್ ಇಂಡಿಯಾ ಆಂದೋಲನದ ಅಸಾಧಾರಣ ಯಶಸ್ಸು ಕೂಡಾ. ಇದು ಗ್ರಾಮದಲ್ಲಿ ಬದಲಾವಣೆಯನ್ನು ತರುವುದು ಸುಲಭವಲ್ಲ ಎಂದು ಹೇಳುತ್ತಿದ್ದವರಿಗೆ ದೇಶವು ನೀಡಿದ ಸೂಕ್ತ ಉತ್ತರವಾಗಿದೆ. ಈ ಹಿಂದೆ ಜನರು ಹಳ್ಳಿಯ ಜೀವನವು ಯಾವುದೇ ಬದಲಾವಣೆಯಾಗದೆ ಇದ್ದಂತೆಯೇ ಇರುತ್ತದೆ ಎಂದು ಭಾವಿಸುತ್ತಿದ್ದರು. ಹಳ್ಳಿಯಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದರು. ಹಳ್ಳಿಗಳು, ಗ್ರಾಮಗಳು ಪರಿವರ್ತನೆಯನ್ನು ತರುವುದಲ್ಲದೆ, ಪರಿವರ್ತನೆಯ ಪ್ರಕ್ರಿಯೆಯಲ್ಲಿ ನಾಯಕತ್ವವನ್ನೂ ವಹಿಸಬಹುದು ಎಂಬುದನ್ನು ನಮ್ಮ ಗ್ರಾಮಗಳು ಇಂದು ತೋರಿಸಿಕೊಟ್ಟಿವೆ. ನೈಸರ್ಗಿಕ ಕೃಷಿಯ ಈ ಜನಾಂದೋಲನವು ಮುಂಬರುವ ವರ್ಷಗಳಲ್ಲಿ ಭಾರಿ ಯಶಸ್ಸನ್ನು ಸಾಧಿಸಲಿದೆ. ರೈತರು ಈ ಬದಲಾವಣೆಯಲ್ಲಿ ಪಾಲ್ಗೊಂಡಷ್ಟೂ ಅವರು ಹೆಚ್ಚು ಹೆಚ್ಚು ಯಶಸ್ಸನ್ನು ಗಳಿಸುತ್ತಾರೆ.

 

ಸ್ನೇಹಿತರೇ,

 

ನಮ್ಮ ಕೃಷಿ ವ್ಯವಸ್ಥೆಯು ನಮ್ಮ ಜೀವನ, ಆರೋಗ್ಯ ಮತ್ತು ಸಮಾಜದ ಬೆನ್ನೆಲುಬಾಗಿದೆ. “ಜೈಸಾ ಅನ್, ವೈಸಾ ಮನ್” (ನೀವು ಏನನ್ನು ತಿನ್ನುತ್ತೀರೋ ಅದೇ ರೀತಿ ನಿಮ್ಮ ಮನಸ್ಸು ಇರುತ್ತದೆ) ಎಂದು ಹೇಳಲಾಗುತ್ತದೆ. ಭಾರತವು ಪ್ರಕೃತಿ ಮತ್ತು ಸಂಸ್ಕೃತಿಯಿಂದ ಕೃಷಿ ಆಧಾರಿತ ದೇಶವಾಗಿದೆ. ಆದ್ದರಿಂದ, ನಮ್ಮ ರೈತ ಪ್ರಗತಿ ಸಾಧಿಸಿದಂತೆ, ನಮ್ಮ ಕೃಷಿಯು ಅಭಿವೃದ್ಧಿ ಹೊಂದುತ್ತಾ ಹೋದಂತೆ, ಸಮೃದ್ಧಿ ಸಾಧಿಸುತ್ತಾ ಹೋದಂತೆ ನಮ್ಮ ದೇಶವೂ ಅಭಿವೃದ್ಧಿ ಹೊಂದುತ್ತದೆ. ಈ ಕಾರ್ಯಕ್ರಮದ ಮೂಲಕ, ನಾನು ದೇಶದ ರೈತರಿಗೆ ಮತ್ತೊಂದು ವಿಷಯವನ್ನು ನೆನಪಿಸಲು ಬಯಸುತ್ತೇನೆ. ನೈಸರ್ಗಿಕ ಕೃಷಿಯು ಕೇವಲ ಆರ್ಥಿಕ ಯಶಸ್ಸಿನ ಸಾಧನ ಮಾತ್ರವಲ್ಲ, ಅದು ಎಲ್ಲಕ್ಕಿಂತ ಮುಖ್ಯವಾಗಿ, ನಮ್ಮ ಭೂಮಾತೆಗೆ ಸೇವೆಯನ್ನು ಸಲ್ಲಿಸುವ ಒಂದು ಶ್ರೇಷ್ಟ ಮಾಧ್ಯಮವಾಗಿದೆ. ಭೂಮಿಯು ನಮ್ಮ ತಾಯಿ ಮತ್ತು ನಾವು ಪ್ರತಿದಿನ ಆಕೆಯನ್ನು ಪೂಜಿಸುತ್ತೇವೆ. ನಾವು ಬೆಳಿಗ್ಗೆ ಎದ್ದು ಭೂಮಿ ತಾಯಿಯ ಕ್ಷಮೆಯಾಚಿಸುತ್ತೇವೆ. ಇವು ನಮ್ಮ ಮೌಲ್ಯಗಳು. ನೀವು ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಂಡಾಗ, ನೀವು ಕೃಷಿಗೆ ಅಗತ್ಯವಾದ ಸಂಪನ್ಮೂಲಗಳನ್ನು ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳಿಂದ ಸಂಗ್ರಹಿಸುತ್ತೀರಿ. ನೀವು ಹಸುಗಳು ಮತ್ತು ಜಾನುವಾರುಗಳಿಂದ ‘ಜೀವಾಮೃತ’ ಮತ್ತು ‘ಘನ ಜೀವಾಮೃತ’ (ರಸಗೊಬ್ಬರಗಳು) ತಯಾರಿಸುತ್ತೀರಿ. ಇದು ಕೃಷಿಯ ಖರ್ಚನ್ನು ಕಡಿಮೆ ಮಾಡುತ್ತದೆ. ಇದೇ ಸಮಯದಲ್ಲಿ, ಜಾನುವಾರುಗಳಿಂದ ಹೆಚ್ಚುವರಿ ಆದಾಯದ ಮೂಲಗಳು ಸಹ ಲಭಿಸುತ್ತವೆ. ಈ ಜಾನುವಾರುಗಳಿಂದ ಆದಾಯವು ಹೆಚ್ಚಾಗುತ್ತದೆ. ಅದೇ ರೀತಿ, ನೀವು ನೈಸರ್ಗಿಕ ಕೃಷಿಯಲ್ಲಿ ತೊಡಗಿದಾಗ, ನೀವು ಭೂಮಾತೆಗೆ ಸೇವೆ ಸಲ್ಲಿಸುತ್ತಿರುತ್ತೀರಿ, ಮಣ್ಣಿನ ಗುಣಮಟ್ಟ, ಭೂಮಿಯ ಆರೋಗ್ಯ ಮತ್ತು ಅದರ ಉತ್ಪಾದಕತೆಯನ್ನು ರಕ್ಷಿಸುತ್ತಿರುತ್ತೀರಿ. ನೀವು ನೈಸರ್ಗಿಕ ಕೃಷಿಯಲ್ಲಿ ತೊಡಗಿದಾಗ, ನೀವು ಪ್ರಕೃತಿ ಮತ್ತು ಪರಿಸರಕ್ಕೆ ಸೇವೆ ಸಲ್ಲಿಸುತ್ತಿರುತ್ತೀರಿ. ನಿಮಗೆ ಗೋಮಾತೆಯ ಸೇವೆ ಮಾಡುವ ಅವಕಾಶ ಲಭಿಸುತ್ತದೆ. ಮತ್ತು ಜೀವಿಯ ಸೇವೆಗಾಗಿ ಆಶೀರ್ವಾದವನ್ನೂ ಪಡೆಯುತ್ತಿರುತ್ತೀರಿ. ಪರಸ್ಪರ ಒಪ್ಪಂದ ಮಾಡಿಕೊಂಡು, ಸೂರತ್ ನಲ್ಲಿ 40-45 ಗೋಶಾಲೆಗಳಿಗೆ ಗೋ ‘ಜೀವಾಮೃತ’ವನ್ನು ಉತ್ಪಾದಿಸುವ ಜವಾಬ್ದಾರಿಯನ್ನು ವಹಿಸಲಾಗುವುದು ಎಂದು ನನಗೆ ತಿಳಿಸಲಾಗಿದೆ. ಇದರಿಂದ ಸೇವೆ ಸಲ್ಲಿಸುವಂತಹ ಹಸುಗಳ ಸಂಖ್ಯೆಯನ್ನು ಊಹಿಸಿಕೊಳ್ಳಿ. ಇದಲ್ಲದೆ, ನೈಸರ್ಗಿಕ ಕೃಷಿಯಿಂದ ಉತ್ಪಾದಿಸಲ್ಪಡುವ ಆಹಾರೋತ್ಪನ್ನಗಳು, ಕೋಟ್ಯಂತರ ಜನರಿಗೆ ಆಹಾರವನ್ನು ಒದಗಿಸುತ್ತವೆ. ಈ ಆಹಾರವು ಕೀಟನಾಶಕಗಳು ಮತ್ತು ರಾಸಾಯನಿಕಗಳ ಬಳಕೆಯಿಂದ ಉಂಟಾಗುವಂತಹ ಮಾರಣಾಂತಿಕ ರೋಗಗಳಿಂದ ಜನರನ್ನು ರಕ್ಷಿಸುತ್ತದೆ. ಉತ್ತಮ ಆರೋಗ್ಯದ ದೃಷ್ಟಿಯಿಂದ ಇದು ಕೋಟ್ಯಂತರ ಜನರಿಗೆ ಪ್ರಯೋಜನಕಾರಿಯಾಗಲಿದೆ. ಮತ್ತು ಇಲ್ಲಿ ನಾವು ಆಹಾರದೊಂದಿಗೆ ಆರೋಗ್ಯವು ಹೊಂದಿರುವ ನೇರ ಸಂಬಂಧವನ್ನು ಒಪ್ಪಿಕೊಂಡಿದ್ದೇವೆ. ನಿಮ್ಮ ಆರೋಗ್ಯವು ನೀವು ಸೇವಿಸುವ ಆಹಾರದ ಪ್ರಕಾರದ, ಮಾದರಿಯ ಮೇಲೆ ಅವಲಂಬಿತವಾಗಿರುತ್ತದೆ.

 

ಸ್ನೇಹಿತರೇ,

 

 

 

ಆರೋಗ್ಯಕರ ಜೀವನವು ಸೇವೆ ಮತ್ತು ಸದ್ಗುಣದ, ಮೌಲ್ಯಯುತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನಮಗೆ ಅಸಂಖ್ಯಾತ ಅವಕಾಶಗಳನ್ನು ಒದಗಿಸುತ್ತದೆ. ಆದ್ದರಿಂದ, ನೈಸರ್ಗಿಕ ಬೇಸಾಯವು ವೈಯಕ್ತಿಕ ಸಮೃದ್ಧಿಗೆ ಮಾರ್ಗವನ್ನು ತೆರೆಯುವುದಲ್ಲದೆ, ‘सर्वे भवभवनभतु सुसरनः, सर्वे सन्तु नरिाममयः’ ಎಂಬ ಈ ಚೈತನ್ಯವನ್ನು, ಸ್ಪೂರ್ತಿಯನ್ನೂ ತರುತ್ತದೆ.

 

ಸ್ನೇಹಿತರೇ,

 

ಇಂದು ಇಡೀ ಜಗತ್ತು ‘ಸುಸ್ಥಿರ ಜೀವನಶೈಲಿ’ ಮತ್ತು ಆರೋಗ್ಯಕರ, ಸ್ವಚ್ಛ ಆಹಾರ ಪದ್ಧತಿಗಳ ಬಗ್ಗೆ ಮಾತನಾಡುತ್ತಿದೆ. ಈ ಕ್ಷೇತ್ರದಲ್ಲಿ ಭಾರತವು ಸಾವಿರಾರು ವರ್ಷಗಳ ಜ್ಞಾನ ಮತ್ತು ಅನುಭವವನ್ನು ಹೊಂದಿದೆ. ನಾವು ಶತಮಾನಗಳಿಂದ ಜಗತ್ತನ್ನು ಈ ದಿಕ್ಕಿನಲ್ಲಿ ಮುನ್ನಡೆಸಿದ್ದೇವೆ. ಆದ್ದರಿಂದ, ಇಂದು ನಾವು ನೈಸರ್ಗಿಕ ಕೃಷಿಯಂತಹ ಅಭಿಯಾನಗಳನ್ನು ಮುನ್ನಡೆಸಲು ಮತ್ತು ಕೃಷಿಗೆ ಸಂಬಂಧಿಸಿದ ಜಾಗತಿಕ ಸಾಧ್ಯತೆಗಳ ಕೆಲಸದ ಪ್ರಯೋಜನಗಳನ್ನು ಎಲ್ಲರಿಗೂ ವಿಸ್ತರಿಸಲು ಒಂದು ಅವಕಾಶವನ್ನು ಹೊಂದಿದ್ದೇವೆ. ಕಳೆದ ಎಂಟು ವರ್ಷಗಳಿಂದ ದೇಶವು ಈ ದಿಕ್ಕಿನಲ್ಲಿ ಗಂಭೀರವಾಗಿ ಕೆಲಸ ಮಾಡುತ್ತಿದೆ. ಇಂದು, ‘ಪರಂಪರಾಗತ ಕೃಷಿ ವಿಕಾಸ ಯೋಜನೆ’ ಮತ್ತು ‘ಭಾರತೀಯ ಪ್ರಾಕೃತಿಕ ಕೃಷಿ ಪದ್ದತಿ’ ಯಂತಹ ಯೋಜನೆಗಳ ಮೂಲಕ ರೈತರಿಗೆ ಸಂಪನ್ಮೂಲಗಳು, ಸೌಲಭ್ಯಗಳು ಮತ್ತು ಬೆಂಬಲವನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ, ದೇಶದಲ್ಲಿ 30,000 ಕ್ಲಸ್ಟರ್ (ಗುಚ್ಚ) ಗಳನ್ನು ರಚಿಸಲಾಗಿದೆ ಮತ್ತು ಲಕ್ಷಾಂತರ ರೈತರು ಅದರ ಲಾಭವನ್ನು, ಪ್ರಯೋಜನವನ್ನು ಪಡೆಯುತ್ತಿದ್ದಾರೆ. ‘ಪರಂಪರಾಗತ ಕೃಷಿ ವಿಕಾಸ ಯೋಜನೆ’ಯಡಿ ದೇಶದಲ್ಲಿ ಸುಮಾರು 10 ಲಕ್ಷ ಹೆಕ್ಟೇರ್ ಭೂಮಿ ಇದರ ವ್ಯಾಪ್ತಿಗೆ ಒಳಪಡಲಿದೆ. ನೈಸರ್ಗಿಕ ಕೃಷಿಯ ಸಾಂಸ್ಕೃತಿಕ, ಸಾಮಾಜಿಕ ಮತ್ತು ಪರಿಸರೀಯ ಪರಿಣಾಮಗಳನ್ನು ಪರಿಗಣಿಸಿ, ನಾವು ಅದನ್ನು ನಮಾಮಿ ಗಂಗೆ ಯೋಜನೆಯೊಂದಿಗೆ ಜೋಡಿಸಿದ್ದೇವೆ. ದೇಶದಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು, ಗಂಗಾನದಿಯ ದಡದಲ್ಲಿ ಪ್ರತ್ಯೇಕ ಅಭಿಯಾನವನ್ನು ನಡೆಸಲಾಗುತ್ತಿದೆ, ಅಂದರೆ ಕಾರಿಡಾರ್ ನಿರ್ಮಿಸಲಾಗುತ್ತಿದೆ.

 

ಮಾರುಕಟ್ಟೆಯಲ್ಲಿ ಸಾವಯವ ಉತ್ಪನ್ನಗಳಿಗೆ ಬೇರೆಯದೇ ರೀತಿಯ ಬೇಡಿಕೆ ಇದೆ. ಇದರ ಬೆಲೆಯೂ ಅಧಿಕ. ನಾನು ದಾಹೋಡ್ ಗೆ ಭೇಟಿ ನೀಡಿದಾಗ, ನಾನು ದಾಹೋಡ್ ನಲ್ಲಿ ನನ್ನ ಬುಡಕಟ್ಟು ಸಹೋದರಿಯರನ್ನು ಭೇಟಿಯಾದೆ, ಅವರು ನೈಸರ್ಗಿಕ ಕೃಷಿಯಲ್ಲಿ ತೊಡಗಿದ್ದಾರೆ. ಅವರಿಗೆ ಬೇಡಿಕೆ ಆದೇಶಗಳು ಒಂದು ತಿಂಗಳು ಮುಂಚಿತವಾಗಿ ಬರುತ್ತವೆ ಎಂದು ಅವರು ನನಗೆ ಹೇಳಿದರು; ಹೀಗೆ ಉತ್ಪಾದಿಸಿದ ತರಕಾರಿಗಳನ್ನು ಪ್ರತಿದಿನ ಮಾರಾಟ ಮಾಡಲಾಗುತ್ತದೆ, ಅದೂ ಹೆಚ್ಚಿನ ಬೆಲೆಗೆ. ಈಗ, ಗಂಗಾನದಿಯ ಸುತ್ತಲೂ 5 ಕಿ.ಮೀ ಉದ್ದದವರೆಗೆ ನೈಸರ್ಗಿಕ ಕೃಷಿಯನ್ನು ಮಾಡುವ ಅಭಿಯಾನವನ್ನು ಪ್ರಾರಂಭಿಸಲಾಗಿದೆ, ಇದರಿಂದ ರಾಸಾಯನಿಕಗಳು ನದಿಗೆ ಮತ್ತು ಕುಡಿಯುವ ನೀರಿಗೆ ಸೇರುವುದನ್ನು ತಡೆದಂತಾಗುತ್ತದೆ. ಭವಿಷ್ಯದಲ್ಲಿ, ನಾವು ಈ ಎಲ್ಲಾ ಪ್ರಯೋಗಗಳನ್ನು ತಾಪಿ ಮತ್ತು ನರ್ಮದಾ ಮಾತೆಯ ದಡದಲ್ಲಿಯೂ ಮಾಡಬಹುದು. ಆದುದರಿಂದ, ನಾವು ನೈಸರ್ಗಿಕ ಕೃಷಿಯ ಇಳುವರಿಯನ್ನು ಪ್ರಮಾಣೀಕರಿಸಲು ನಿರ್ಧರಿಸಿದ್ದೇವೆ. ಇದನ್ನು ಗುರುತಿಸಬೇಕು ಮತ್ತು ಇದಕ್ಕಾಗಿ ರೈತರು ಹೆಚ್ಚಿನ ಹಣವನ್ನು ಪಡೆಯಬೇಕು. ಆದ್ದರಿಂದ, ನಾವು ಅದನ್ನು ಪ್ರಮಾಣೀಕರಿಸಲು ವ್ಯವಸ್ಥೆಗಳನ್ನು ಮಾಡಿದ್ದೇವೆ. ಅದನ್ನು ದೃಢೀಕರಿಸಲು ಗುಣಮಟ್ಟ ಖಾತರಿ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ನಮ್ಮ ರೈತರು ಅಂತಹ ಪ್ರಮಾಣೀಕೃತ ಬೆಳೆಗಳನ್ನು ಉತ್ತಮ ಬೆಲೆಗೆ ರಫ್ತು ಮಾಡುತ್ತಿದ್ದಾರೆ. ಇಂದು, ರಾಸಾಯನಿಕ ಮುಕ್ತ ಉತ್ಪನ್ನಗಳು ವಿಶ್ವ ಮಾರುಕಟ್ಟೆಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿವೆ. ನಾವು ಈ ಪ್ರಯೋಜನವನ್ನು ದೇಶದ ಹೆಚ್ಚು ಹೆಚ್ಚು ರೈತರಿಗೆ ಲಭ್ಯವಾಗುವಂತೆ ಮಾಡಬೇಕಾಗಿದೆ.

 

 

 

ಸ್ನೇಹಿತರೇ,

 

ಸರ್ಕಾರದ ಪ್ರಯತ್ನಗಳ ಜೊತೆಗೆ, ಈ ಕ್ಷೇತ್ರದಲ್ಲಿ ನಾವು ನಮ್ಮ ಪ್ರಾಚೀನ ಜ್ಞಾನವನ್ನು ಬಳಸಿಕೊಳ್ಳಬೇಕು. ವೇದಗಳು, ಕೃಷಿ ಗ್ರಂಥಗಳು ಅಥವಾ ಕೌಟಿಲ್ಯ ಮತ್ತು ವರಾಹಮಿಹಿರರಂತಹ ವಿದ್ವಾಂಸರು ಇರಲಿ, ನಾವು ನೈಸರ್ಗಿಕ ಕೃಷಿಗೆ ಸಂಬಂಧಿಸಿದ ಅಪಾರ ಜ್ಞಾನ ಭಂಡಾರವನ್ನು ಹೊಂದಿದ್ದೇವೆ. ಆಚಾರ್ಯ ದೇವವ್ರತ್ ಜೀ ಇಂದು ನಮ್ಮ ನಡುವೆ ಇದ್ದಾರೆ. ಅವರೂ ಸಹ ಈ ವಿಷಯದ ಬಗ್ಗೆ ತುಂಬಾ ಜ್ಞಾನವುಳ್ಳವರು ಮತ್ತು ಇದನ್ನು ತಮ್ಮ ಜೀವನದ ಮಂತ್ರವನ್ನಾಗಿ ಮಾಡಿಕೊಂಡವರು. ಅವರು ಸಾಕಷ್ಟು ಪ್ರಯೋಗಗಳನ್ನು ಮಾಡುವ ಮೂಲಕ ಯಶಸ್ಸನ್ನು ಪಡೆದಿದ್ದಾರೆ ಮತ್ತು ಈಗ ಅವರು ಗುಜರಾತಿನ ರೈತರೂ ಆ ಯಶಸ್ಸಿನ ಲಾಭವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಆದರೆ ಸ್ನೇಹಿತರೇ, ಅಂತಹ ಗುಪ್ತ ಜ್ಞಾನವು ನಮ್ಮ ಜಾನಪದ ಸಂಸ್ಕೃತಿ ಮತ್ತು ಧರ್ಮಗ್ರಂಥಗಳಲ್ಲಿ ಹುದುಗಿರುವುದನ್ನು ನಾನು ನೋಡಿದ್ದೇನೆ. ಘಾಘಾ ಮತ್ತು ಭದ್ದಾರಿಯಂತಹ ವಿದ್ವಾಂಸರು ಕೃಷಿಯ ಮಂತ್ರಗಳನ್ನು ಸರಳ ಭಾಷೆಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದ್ದಾರೆ. ಅಲ್ಲಿ ಒಂದು ನುಡಿಗಟ್ಟು ಇದೆ ಮತ್ತು ಪ್ರತಿಯೊಬ್ಬ ರೈತನಿಗೂ ಈ ಗಾದೆ ತಿಳಿದಿದೆ – ‘गोबर, मैला, नीम की खली, या से खेत दूनी फली”. ಅಂದರೆ, ಹೊಲಗಳಲ್ಲಿ ರಸಗೊಬ್ಬರ ಮತ್ತು ಬೇವಿನ ಕೇಕ್ ಬಳಸಿದರೆ, ಬೆಳೆಯ ಇಳುವರಿ ದ್ವಿಗುಣಗೊಳ್ಳುತ್ತದೆ. ಅದೇ ರೀತಿ, ಮತ್ತೊಂದು ಜನಪ್ರಿಯ ನುಡಿಗಟ್ಟು ಇದೆ – ‘छोड़े खाद जोत गहराई, फिर खेती का मजा दिखाई’. ಅಂದರೆ, ಹಸುವಿನ ಸಗಣಿಯನ್ನು ಹೊಲವನ್ನು ಉಳುಮೆ ಮಾಡಲು ಬಳಸಿದರೆ, ಆಗ ಅವರು ಕೃಷಿಯ ನಿಜವಾದ ಸಂತೋಷ ಮತ್ತು ಶಕ್ತಿಯನ್ನು ಅನುಭವಿಸಬಹುದು. ಇಲ್ಲಿ ಹಾಜರಿರುವ ಸಂಸ್ಥೆಗಳು, ಎನ್.ಜಿ.ಒ.ಗಳು ಮತ್ತು ತಜ್ಞರು ಈ ಅಂಶದ ಬಗ್ಗೆ ಗಮನ ಹರಿಸಬೇಕೆಂದು ನಾನು ಬಯಸುತ್ತೇನೆ. ಈ ನಂಬಿಕೆಗಳನ್ನು ಮುಕ್ತ ಮನಸ್ಸಿನಿಂದ ವಿಶ್ಲೇಷಿಸಲು ಪ್ರಯತ್ನಿಸಿ..

 

ಈ ಪ್ರಾಚೀನ ಹೇಳಿಕೆಗಳಿಂದ ಮತ್ತು ಅನುಭವಗಳಿಂದ ಏನು ತಿಳಿದುಕೊಳ್ಳಬಹುದು ಎಂಬುದನ್ನು ಅಭ್ಯಸಿಸಲು ಮುಂದಾಗುವಂತೆ ನಾನು ವಿಜ್ಞಾನಿಗಳಿಗೆ ವಿಶೇಷ ಕೋರಿಕೆಯನ್ನು ಮಾಡುತ್ತೇನೆ. ನಾವು ಹೊಸ ಸಂಶೋಧನಾ ಕಾರ್ಯಗಳನ್ನು ನಡೆಸಬೇಕು. ಲಭ್ಯವಿರುವ ಸಂಪನ್ಮೂಲಗಳಿಂದ ನಮ್ಮ ರೈತರನ್ನು ಸಶಕ್ತಗೊಳಿಸುವುದು ಹೇಗೆ? ನಮ್ಮ ಕೃಷಿಯನ್ನು ಉತ್ತಮಗೊಳಿಸುವುದು ಹೇಗೆ? ನಮ್ಮ ಭೂಮಿ ತಾಯಿಯನ್ನು ಸುರಕ್ಷಿತವಾಗಿಡುವುದು ಹೇಗೆ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯಲು, ನಮ್ಮ ವಿಜ್ಞಾನಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಮುಂದೆ ಬರಬೇಕು. ಇಂದಿನ ಸನ್ನಿವೇಶದಲ್ಲಿ ಈ ಎಲ್ಲಾ ವಿಷಯಗಳು ರೈತರನ್ನು ಹೇಗೆ ತಲುಪಬಹುದು? ವೈಜ್ಞಾನಿಕ ಕೆಲಸವು ಪ್ರಯೋಗಾಲಯದಿಂದ ರೈತರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಗೆ ತಲುಪಿಸಬಹುದು?

 

ನೈಸರ್ಗಿಕ ಕೃಷಿಯ ಮೂಲಕ ದೇಶದ ಈ ಮೊದಲ ಹೆಜ್ಜೆ ರೈತರಿಗೆ ಸಂತೋಷದ ಜೀವನಕ್ಕೆ ಕಾರಣವಾಗುವುದಲ್ಲದೆ, ನವ ಭಾರತಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ. ನಾನು ಕಾಶಿ ಭಾಗದಿಂದ ಲೋಕಸಭೆಯ ಸದಸ್ಯನಾಗಿದ್ದೇನೆ. ಆದ್ದರಿಂದ, ಕಾಶಿಯ ರೈತರನ್ನು ಭೇಟಿ ಮಾಡಲು ಮತ್ತು ಅವರೊಂದಿಗೆ ಮಾತನಾಡಲು ನನಗೆ ಅವಕಾಶ ಸಿಕ್ಕಾಗಲೆಲ್ಲಾ, ಕಾಶಿಯ ರೈತರು ನೈಸರ್ಗಿಕ ಕೃಷಿಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸುತ್ತಿರುವುದರಿಂದ ನನಗೆ ನಿಜವಾಗಿಯೂ ಸಂತೋಷವಾಗುತ್ತದೆ. ಅವರು ತಮ್ಮನ್ನು ತಾವು ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಾರೆ, ಹಗಲಿರುಳು ಶ್ರಮಿಸುತ್ತಾರೆ. ಮತ್ತು ಈಗ ಅವರು ತಮ್ಮ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಿದ್ಧರಾಗಿದ್ದೇವೆ ಎಂಬ ಭಾವನೆಯನ್ನು ಹೊಂದಿದ್ದಾರೆ. ಅದರಿಂದಾಗಿಯೇ ಸೂರತ್ ಈ ಮಾದರಿಯನ್ನು ಅನುಸರಿಸಬೇಕೆಂದು ನಾನು ಬಯಸುತ್ತೇನೆ. ಸೂರತ್ ನಲ್ಲಿ ಅಲ್ಲಿಯ ಜನರು ವಿದೇಶಕ್ಕೆ ಹೋಗಿರದ ಒಂದೇ ಒಂದು ಹಳ್ಳಿಯೂ ಇಲ್ಲ, ಆದ್ದರಿಂದ, ಸೂರತ್ ಒಂದು ವಿಶೇಷ ಗುರುತನ್ನು ಹೊಂದಿದೆ. ಆದುದರಿಂದ ಸೂರತ್ ನ ಉಪಕ್ರಮವು ತನ್ನದೇ ಆದ ರೀತಿಯಲ್ಲಿ ವಿಶಿಷ್ಟವಾಗಿ ನಿಲ್ಲುತ್ತದೆ.

 

ಸ್ನೇಹಿತರೇ,

 

ಪ್ರತಿ ಹಳ್ಳಿಯಲ್ಲಿ 75 ಮಂದಿ ರೈತರು ನೈಸರ್ಗಿಕ ಕೃಷಿಗೆ ಸೇರುವ ಈ ಅಭಿಯಾನವನ್ನು ನೀವು ಪ್ರಾರಂಭಿಸಿದ್ದರೂ, ಕೇವಲ 75 ರೈತರು ಮಾತ್ರವಲ್ಲ ಶೀಘ್ರದಲ್ಲೇ ಪ್ರತಿ ಹಳ್ಳಿಯಲ್ಲಿ 750 ರೈತರು ಸಿದ್ಧರಾಗುತ್ತಾರೆ ಎಂದು ನನಗೆ ಖಾತ್ರಿಯಿದೆ. ಆಂದೋಲನವು ಒಮ್ಮೆ ಇಡೀ ಜಿಲ್ಲೆಯನ್ನು ಆವರಿಸಿದ ನಂತರ, ರಾಸಾಯನಿಕಗಳು ಮತ್ತು ಕೀಟನಾಶಕಗಳಿಂದ ಮುಕ್ತವಾಗಿರುವ ನಿಮ್ಮ ಉತ್ಪನ್ನಗಳನ್ನು ಹುಡುಕಿಕೊಂಡು ಪ್ರಪಂಚದಾದ್ಯಂತದ ಖರೀದಿದಾರರು ಬರುತ್ತಾರೆ. ಇದು ಸಾವಯವ ಉತ್ಪನ್ನವಾಗಿರುವುದರಿಂದ ಮತ್ತು ಜನರು ತಮ್ಮ ಆರೋಗ್ಯಕ್ಕಾಗಿ ಈ ಸರಕುಗಳನ್ನು ಹೆಚ್ಚು ಪಾವತಿಸುವ ಮೂಲಕ ಖರೀದಿಸುತ್ತಾರೆ. ಸೂರತ್ ನಗರದಲ್ಲಿ, ಎಲ್ಲಾ ತರಕಾರಿಗಳೂ ನಿಮ್ಮ ಸ್ಥಳದಿಂದ ಪೂರೈಕೆಯಾಗುತ್ತಿವೆ. ಸೂರತ್ ನಗರವು ನಿಮ್ಮ ತರಕಾರಿಗಳು ನೈಸರ್ಗಿಕ ಕೃಷಿಯಲ್ಲಿ ಉತ್ಪಾದಿಸಲ್ಪಡುತ್ತಿವೆ ಎಂದು ತಿಳಿದರೆ, ಸೂರತ್ ನ ಜನರು ಈ ಬಾರಿ ನೀವು ಸಾವಯವವಾಗಿ ಬೆಳೆದ ತರಕಾರಿಗಳನ್ನು ಬಳಸಿ ಉಂಧಿಯು ಭಕ್ಷ್ಯವನ್ನು ತಯಾರಿಸುತ್ತಾರೆ ಎಂದು ನಾನು ದೃಢವಾಗಿ ನಂಬಿದ್ದೇನೆ. ಅನಂತರ ಸೂರತ್ ನ ಜನರು ‘ಸಾವಯವ ತರಕಾರಿಗಳಿಂದ ತಯಾರಿಸಿದ ಉಂಧಿಯು’ ಎಂಬ ಫಲಕಗಳನ್ನು ಹಾಕುತ್ತಾರೆ. ನೀವು ನೋಡಿ, ಈ ಕ್ಷೇತ್ರದಲ್ಲಿ ಒಂದು ಮಾರುಕಟ್ಟೆಯನ್ನು ಸೃಷ್ಟಿಸಲಾಗುತ್ತಿದೆ. ಸೂರತ್ ತನ್ನದೇ ಆದ ಶಕ್ತಿಯನ್ನು ಹೊಂದಿದೆ. ಸೂರತ್ ನ ಜನರು ವಜ್ರಗಳಿಗೆ ಹೇಗೆ ಪ್ರಸಿದ್ಧರಾಗಿದ್ದಾರೆಯೋ, ಅದೇ ರೀತಿ ಅವರು ಈ ಕ್ಷೇತ್ರವನ್ನು ಸಹ ಜನಪ್ರಿಯಗೊಳಿಸುತ್ತಾರೆ. ನಂತರ ಸೂರತ್ ನಲ್ಲಿ ಈ ಅಭಿಯಾನದ ಲಾಭವನ್ನು ಪಡೆಯಲು ಎಲ್ಲರೂ ಮುಂದೆ ಬರುತ್ತಾರೆ. ನಿಮ್ಮೆಲ್ಲರೊಂದಿಗೆ ಸಂವಹನ, ಸಂವಾದ ನಡೆಸುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ. ಇಂತಹ ದೊಡ್ಡ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇದಕ್ಕಾಗಿ ನಾನು ನಿಮ್ಮೆಲ್ಲರಿಗೂ ಮತ್ತೊಮ್ಮೆ ಅಭಿನಂದನೆ ಸಲ್ಲಿಸುತ್ತೇನೆ. ಅದರೊಂದಿಗೆ, ನಿಮ್ಮೆಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು!

 

ಹೃತ್ಪೂರ್ವಕ ಅಭಿನಂದನೆಗಳು!

 

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

*********