Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೈರೋಬಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣ ದ ಪಠ್ಯ

ನೈರೋಬಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರು  ಮಾಡಿದ ಭಾಷಣ ದ ಪಠ್ಯ


ನೈರೋಬಿ ವಿಶ್ವ ವಿದ್ಯಾಲಯದ ಕುಲಪತಿಗಳಾದ ಶ್ರೀ ಡಾ.ವಿಜೋ ರಟ್ಟಾನ್ಸಿಯವರೇ, ನೈರೋಬಿ ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾದ ಪ್ರೊ.ಪೀಟರ್ ಮುಬಿಥಿಯವರೇ, ವಿಶ್ವ ವಿದ್ಯಾಲಯದ ಸೆನೆಟ್ ಸದಸ್ಯರುಗಳೇ, ಗೌರವಾನ್ವಿತ ಉಪನ್ಯಾಸಕರೇ, ವಿದ್ಯಾರ್ಥಿಗಳೇ,

ಜಂಬೋ! ಹಬ್ಬಾರಿ ಗಾನಿ( ಹೆಲೋ..ಎಲ್ಲರೂ ಹೇಗಿದ್ದೀರಿ)?

ಶಕ್ತಿ ತುಂಬಿರುವ ಈ ವಾತಾವರಣದಲ್ಲಿ ಇರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ.

ಕೀನ್ಯಾ ದ ಅತ್ಯಂತ ಪ್ರಕಾಶಮಾನವಾದ ಮತ್ತು ಅತ್ಯುತ್ತಮ ಜನರ ಮಧ್ಯೆ ಇರುವುದಕ್ಕೆ ನನಗೆ ತುಂಬಾ ಹರ್ಷವಾಗುತ್ತಿದೆ.

ನೀವು ಈ ನೆಲದ ಹೆಮ್ಮೆಯ ಮಕ್ಕಳು. ಆಫ್ರಿಕಾದ ಮುಂದಿನ ಪ್ರತಿನಿಧಿಗಳು. ನಿಮ್ಮ ಆಕಾಂಕ್ಷೆಗಳು, ಮಹತ್ವಾಕಾಂಕ್ಷೆಗಳು ಮತ್ತು ಕಾರ್ಯಯೋಜನೆಗಳು ಈ ಮಹಾನ್ ದೇಶದ ದಿಕ್ಕು ಮತ್ತು ಸ್ವರೂಪವನ್ನಷ್ಟೇ ಬದಲಿಸುವುದಿಲ್ಲ. ಈ ಭೂಖಂಡದ ಭವಿಷ್ಯದ ಉತ್ಕರ್ಷದ ಹಾದಿಗೆ ತಾವು ಮಾರ್ಗದರ್ಶನ ನೀಡಬಲ್ಲಿರಿ. ಕೀನ್ಯಾದ ಭವಿಷ್ಯದ ಪೀಳಿಗೆಗೆ ನೀವು ಮಾದರಿಯಾಗುತ್ತಿದ್ದೀರಿ. ಭಾರತದ 800 ದಶಲಕ್ಷ ಯುವ ಸಮುದಾಯದ ಸ್ನೇಹಹಸ್ತವನ್ನು ನಾನು ಚಾಚುತ್ತಿದ್ದೇನೆ. ಇದು ನನ್ನನ್ನೂ ಒಳಗೊಂಡಿರುತ್ತದೆ.

ಸ್ನೇಹಿತರೇ ದೇಶ ನಿರ್ಮಾಣದ ವಿಚಾರಕ್ಕೆ ಬಂದರೆ, ಕೀನ್ಯಾದಂತಹ ರಾಷ್ಟ್ರಗಳ ಜತೆಗಿನ ಸ್ನೇಹವನ್ನು ಪೋಷಣೆ ಮಾಡುವ ವಿಚಾರಕ್ಕೆ ಬಂದರೆ ನನ್ನ ಮನಸ್ಸು 20 ವರ್ಷದ ಯುವಕನಿಗೆ ಹೊಂದಿಕೆಯಾಗುತ್ತದೆ.

ಪ್ರಿಯ ವಿದ್ಯಾರ್ಥಿಗಳೇ,

ನೈರೋಬಿ ವಿಶ್ವ ವಿದ್ಯಾಲಯವು ಆಫ್ರಿಕಾ ಅಷ್ಟೇ ಅಲ್ಲದೇ ಇಡೀ ವಿಶ್ವದಲ್ಲಿ ಅಸಾಧಾರಣ ಹಿರಿಮೆ ಹೊಂದಿರುವ ಮಹಿಮಾನ್ವಿತ ಸಂಸ್ಥೆ ಎನಿಸಿಕೊಂಡಿದೆ.

ನಾನು ನಿಮ್ಮ ಯುವ, ಉತ್ಸಾಹಿ ಮತ್ತು ಬುದ್ಧಿವಂತ ಮುಖಗಳನ್ನು ನೋಡುತ್ತಿದ್ದರೆ. ನನಗನ್ನಿಸುತ್ತದೆ ಈ ಹೆಬ್ಬಾಗಿಲಿನಿಂದ ರಾಜಕೀಯ ನಾಯಕರ ಪೀಳಿಗೆ, ಎಂಜಿನಿಯರ್‍ಗಳು, ವಿಜ್ಞಾನಿಗಳು, ಸಾಮಾಜಿಕ ವಿಜ್ಞಾನಿಗಳು ಮತ್ತು ಕಲಾವಿದರು ಏಕೆ ಕಲಿತು ಹೋದರು ಎನ್ನುವುದು ಅರ್ಥವಾಗುತ್ತಿದೆ.

ಇದು ನಿಮ್ಮ ದೇಶಕ್ಕೆ ಖ್ಯಾತಿ ಮತ್ತು ಕೀರ್ತಿ ಎರಡನ್ನೂ ತಂದುಕೊಟ್ಟಿದೆ. ಅಲ್ಲದೇ ಕೀನ್ಯಾದ ಮುಂಬರುವ ಪೀಳಿಗೆಯನ್ನೂ ರೂಪಿಸುತ್ತಿದೆ. ಭಾರತ ಮತ್ತು ಕೀನ್ಯಾ ಅಭಿವೃದ್ಧಿಶೀಲರಾಷ್ಟ್ರಗಳ ಇತಿಹಾಸ ಮತ್ತು ಒಂದೇ ರೀತಿಯ ಅನುಭವಗಳನ್ನು ಈ ವಿಶ್ವ ವಿದ್ಯಾಲಯವು ಪ್ರದರ್ಶಿಸಿದೆ.

ಈ ಸಭಾಂಗಣಕ್ಕೆ ಪ್ರವೇಶ ಮಾಡುವ ಮುನ್ನ, ನಾನು ಮಹಾತ್ಮಾ ಗಾಂಧೀಜಿಯವರಿಗೆ ನಮನ ಸಲ್ಲಿಸಿದೆ. ಸರಿಯಾಗಿ 60 ವರ್ಷಗಳ ಹಿಂದೆ ಮಹಾತ್ಮ ರ ಪ್ರತಿಮೆಯನ್ನು ಇಲ್ಲಿ ಅನಾವರಣ ಮಾಡಲಾಗಿತ್ತು. ಮಹಾತ್ಮಗಾಂಧೀಜಿ ಮತ್ತು ಈ ವಿಶ್ವ ವಿದ್ಯಾಲಯದ ಜತೆಗಿನ ಸಂಪರ್ಕವು ನಮ್ಮೆರಡೂ ದೇಶಗಳ ಆರಂಭಿಕ ಪಾಲುದಾರಿಕೆಗೆ ಬೆಸುಗೆಯಾಯಿತು. ನಮ್ಮ ಎರಡೂ ರಾಷ್ಟ್ರಗಳ ಬೆಳವಣಿಗೆಯ ಹಾದಿಯಲ್ಲಿ ನಾವು ಹೊಂದಿರುವ ಬಲಿಷ್ಠ ಶಿಕ್ಷಣ ವ್ಯವಸ್ಥೆಯು ಹೇಗೆ ಪರಿಣಾಮಕಾರಿಯಾಗಿದೆ ಎನ್ನುವುದರ ಮೌಲ್ಯವನ್ನು ಇದು ಪ್ರತಿಧ್ವನಿಸುತ್ತದೆ. ಭಾರತದಲ್ಲಿ ‘ ಒಂದು ಸಂಪತ್ತು ಹಂಚುವುದರಿಂದ ವೃದ್ಧಿಸುತ್ತದೆ. ಆ ಸಂಪತ್ತೇ ಜ್ಞಾನ ಮತ್ತು ಅದು ಎಲ್ಲ ಒಡೆತನಗಳಿಗಿಂತಲೂ ಅಪ್ರತಿಮವಾದುದು, ಉನ್ನತವಾದುದು’ ಎನ್ನುವ ಮಹಾಪುರುಷರ ಮಾತೊಂದಿದೆ. ನಾನು ನಿಮಗೆ ಒಂದು ಸ್ವಾಹಿಲಿ ನುಡಿಗಟ್ಟನ್ನು ಹೇಳುತ್ತೇನೆ

‘ಪೇಸಾ, ಕಾಮಾ ಮಾತುಮಿಜಿ ಯಾಕೆ, ಹ್ಯೂಷಾ, ಕುಜಿಫುಂಜಾ ಯಾಕೆ, ಹ್ಯೋಂಗ್ಜೇಕಾ’

ಅಂದರೆ ‘ಅದು ಹಣ, ಹಣವನ್ನು ನೀವು ಬಳಸಿದರೆ ಅದು ಅಂತ್ಯಕ್ಕೆ ಬರುತ್ತದೆ. ಆದರೆ, ಕಲಿತಿದ್ದನ್ನು ನೀವು ಬಳಕೆ ಮಾಡಿದರೆ ಅದು ವೃದ್ಧಿಸುತ್ತದೆ’

ಸೇಹಿತರೇ,

ಪುರಾತನ ಭೂಖಂಡದಲ್ಲಿ ಕೀನ್ಯಾ ಒಂದು ಯುವ ದೇಶ, ಯುವ ದೇಶವಾದರೂ ನೀವು ಬಹಳಷ್ಟು ವಿಚಾರದಲ್ಲಿ ಮೊದಲಿಗರಾಗಿದ್ದೀರಿ. ಕೀನ್ಯಾದ ವಾಂಗಾರಿ ಮಾಥಾಯ್ ಒಬ್ಬ ಹೆಸರಾಂತ ಪರಿಸರ ತಜ್ಞರು. ನೋಬೆಲ್ ಪುರಸ್ಕಾರಕ್ಕೆ ಪಾತ್ರರಾದ ಆಫ್ರಿಕಾದ ಮೊದಲ ಮಹಿಳೆ. ಅವರು ಇದೇ ವಿಶ್ವ ವಿದ್ಯಾಲಯದ ಕೊಡುಗೆ. ಕೀನ್ಯಾ ಮೂಲದ ಲುಪಿಟಾ ನ್ಯಾಂಗೋ ಆಸ್ಕರ್ ಪ್ರಶಸ್ತಿಗೆ ಪಾತ್ರರಾದ ಆಫ್ರಿಕಾದ ಮೊದಲಿಗರು. ನಮಗೆಲ್ಲರಿಗೂ ಗೊತ್ತಿರುವಂತೆ ಇಲ್ಲಿ ಊಹಿಸಲು ಯಾವುದೇ ಪ್ರಶಸ್ತಿ ಬೇಕಿಲ್ಲ. ಕೀನ್ಯಾದ ಆ ಸಾಧಕ ಕೀನ್ಯಾ ಓಟಗಾರರನ್ನು ಮುನ್ನಡೆಸಿದ್ದ, ಮ್ಯಾರಥಾನ್ ಓಟದಲ್ಲಿ ವಿಶ್ವದ ಉದ್ದಗಲಕ್ಕೆ ಪ್ರಭಾವಿಸಿದ.

ಕೀನ್ಯಾದ ಪರಿಸರವು ಕೇವಲ ಬಿಗ್-5 ಅನ್ನು ಮಾತ್ರ ಪೋಷಣೆ ಮಾಡಿಲ್ಲ. ಬೆಳವಣಿಗೆಗೆ ಸೂಕ್ತ ತಂತ್ರಜ್ಞಾನ ಮತ್ತು ಅನ್ವೇಷಣಾ ಗುಣವುಳ್ಳ ಪರಿಸರ ವ್ಯವಸ್ಥೆಯನ್ನು ನೀಡಿದೆ.

ಪೂರ್ವ ಫ್ರಿಕಾ ಭೂಭಾಗಕ್ಕೆ ಇದೊಂದು ಅತ್ಯಂತ ಪ್ರಮುಖ ಆರ್ಥಿಕ ಮತ್ತು ಸಾರಿಗೆ ಕೇಂದ್ರ ಎನಿಸಿಕೊಂಡಿದೆ. 2007ರಲ್ಲಿ ಎಂ-ಪೆಸಾ ಕೀನ್ಯಾದಲ್ಲೇ ಅನ್ವೇಷಣೆಗೊಂಡಿತ್ತು. ಈ ಐಡಿಯಾ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿತು. ಜಾಗತಿಕವಾಗಿ ಮೊಬೈಲ್ ಮನಿ ಸರ್ವಿಸ್ ಬೆಳವಣಿಗೆಯನ್ನು ಇದು ಮುನ್ನಡೆಸಿತು ಮತ್ತು ಪ್ರವರ್ತಕ ಎನಿಸಿಕೊಂಡಿತು. ಕೇವಲ ಕೀನ್ಯಾ ಒಂದೇ ಅಲ್ಲ ಇಡೀ ವಿಶ್ವದೆಲ್ಲೆಡೆ ಎಂ-ಪೆಸಾ ಮೂಲಕ ಹಣಕಾಸು ವ್ಯವಸ್ಥೆಯ ತುತ್ತ ತುದಿಯಲ್ಲಿ ಇದ್ದವರೂ ಈಗ ಸ್ವಾವಲಂಬಿಯಾಗಿದ್ದಾರೆ ಮತ್ತು ಮುಖ್ಯವಾಹಿನಿಗೆ ಬಂದಿದ್ದಾರೆ. ನಾವು ಭಾರತದಲ್ಲೂ ಈ ಆವೃತ್ತಿಯನ್ನು ಬಳಸಿಕೊಂಡಿದ್ದೇವೆ.

ಪ್ರೀತಿಯ ವಿದ್ಯಾರ್ಥಿಗಳೇ,

ಇಂದು ಭಾರತ ಮತ್ತು ಕೀನ್ಯಾ ಪ್ರವರ್ಧಮಾನಕ್ಕೆ ಬಂದಿರುವ ಪ್ರಜಾಪ್ರಭುತ್ವ ರಾಷ್ಟ್ರಗಳೆನಿಸಿವೆ. ನಮ್ಮೆರಡೂ ಅಭಿವೃದ್ಧಿಶೀಲ ರಾಷ್ಟ್ರಗಳು ನಮ್ಮ ಜನರಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ಬಯಸುತ್ತಿವೆ. ನಮ್ಮ ಒಪ್ಪಂದಗಳು ತುಂಬಾ ಹಳತಾಗಿವೆ. ಶತಮಾನಗಳಿಂದ ವಾಣಿಜ್ಯ, ಸಾಂಸ್ಕೃತಿಕ , ವ್ಯಾಪಾರ, ಸಂಪ್ರದಾಯ, ಆಲೋಚನೆ ಮತ್ತು ಆದರ್ಶ, ನಂಬಿಕೆ ಮತ್ತು ಮೌಲ್ಯಗಳಲ್ಲಿ ನಮ್ಮ ಸಮಾಜಗಳನ್ನು ಬೆಸೆದುಕೊಂಡಿದ್ದೇವೆ. ಹಿಂದೂ ಮಹಾಸಾಗರದ ಬೆಚ್ಚನೆಯ ನೀರು ನಮ್ಮ ಜನರ ನಡುವೆ ಸೇತುವೆಯಾಗಿದೆ.

ಕೀನ್ಯಾದಲ್ಲಿ 42 ಬುಡಕಟ್ಟು ಸಮುದಾಯಗಳಿವೆ. ಭಾರತೀಯ ಮೂಲದ ಜನರನ್ನು 43ನೇ ಬುಡಕಟ್ಟು ಜನಾಂಗ ಎಂದು ಕರೆಯಲಾಗುತ್ತಿದೆ ಎನ್ನುವುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಇದು ನಿಮ್ಮ ಸಮಾಜದ ಶ್ರೀಮಂತ ಚೌಕಟ್ಟು. ಭಾರತವೂ ಕೂಡಾ ವೈವಿಧ್ಯತೆಯಲ್ಲಿ ಏಕತೆಯ ಸಂಪ್ರದಾಯವನ್ನು ಸಂಭ್ರಮಿಸುತ್ತಿರುವ ಸುದೀರ್ಘ ಇತಿಹಾಸವನ್ನು ಸಂಪ್ರದಾಯವನ್ನು ಹೊಂದಿದೆ. ಪ್ರಜಾಪ್ರಭುತ್ವದ ಜತೆಗೆ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಒಳಗೊಳ್ಳುವುದು ಆಧುನಿಕ ಭಾರತಕ್ಕೆ ಅತ್ಯಗತ್ಯವಾಗಿದೆ.

ಸ್ನೇಹಿತರೇ,

ಕಳೆದ ಸಂಜೆ ಭಾರತೀಯ ಅನಿವಾಸಿಗಳ ಜತೆ ಕೀನ್ಯಾ ಅಧ್ಯಕ್ಷ ಕೆನ್ಯೆಟ್ಟಾ ಮತ್ತು ನಾನು ಅವಿಸ್ಮರಣೀಯ ಸಂವಾದ ನಡೆಸಿದೆವು. ಹಲವು ದಶಕಗಳ ಹಿಂದೆಯೇ ಅನಿವಾಸಿ ಭಾರತೀಯರು ಕೀನ್ಯಾವನ್ನು ತಮ್ಮ ಮನೆ ಎಂದು ಭಾವಿಸಿಕೊಂಡಿದ್ದಾರೆ. ಯಾವತ್ತಿಗೂ ಅವರ ನಂಟು ಮತ್ತು ನಿಷ್ಠೆ ಕೀನ್ಯಾಗಿರಲಿದೆ. ಅವರು ನಮ್ಮೆರಡೂ ದೇಶಗಳ ನಡುವಿನ ಭವಿಷ್ಯದ ಒಪ್ಪಂದದ ಹಾದಿಗೆ ಅವರು ವೇಗವರ್ಧಕಗಳಂತಿರಲಿದ್ದಾರೆ. ನಮ್ಮ ಜನರ ಈ ಹತ್ತಿರದ ಅಂತರಿಕ ಬೆರೆಯುವಿಕೆಯು ಆಧುನಿಕ ಕಾಲದ ನಮ್ಮ ಪಾಲುದಾರಿಕೆಗೆ ಭದ್ರ ಬುನಾದಿಯಾಗಲಿದೆ.

ಸ್ನೇಹಿತರೇ,

ನಮ್ಮ ಸಹಭಾಗಿತ್ವವನ್ನು ನಾವು ಮರೆಯಬಾರದು, ಭಾರತ ಮತ್ತು ಆಫ್ರಿಕಾ ಮಾನವ ಕುಲದ ಮೂರನೇ ಭಾಗವಾಗಿದೆ. ನಮ್ಮನ್ನು ಸಾಕಷ್ಟು ಜನ ಮಣಿಸಲು ಬಯಸುತ್ತಿದ್ದಾರೆ. ಈ ಅಂತರ ಸಂಪರ್ಕಗೊಂಡ ವಿಶ್ವದಲ್ಲಿ ನಾವು ಯಾವತ್ತಿಗೂ ಅಲ್ಪಸಂಖ್ಯಾತರು ಅಲ್ಲವೇ ಅಲ್ಲ. ನಾವು ಸ್ಥಿರವಾದ ಪಾಲುದಾರಿಕೆಯನ್ನು ಇನ್ನಷ್ಟು ದೃಢಪಡಿಸಿಕೊಳ್ಳಲು ಬಯಸುತ್ತೇವೆ.

-ಅದು ಪರಸ್ಪರ ಒಡಂಬಡಿಕೆಯ ಹಳೆ ಮಾದರಿ ಮತ್ತು ನಿಯಮಗಳೇ ಆಗಿರಬಹುದು

– ಜನರನ್ನು ಸ್ವಾವಲಂಬಿ ಮಾಡುವ ನಿಟ್ಟಿನಲ್ಲೇ ಆಗಿರಬಹುದು

– ಆರ್ಥಿಕ ಸಮೃದ್ಧಿಯ ಹಣ್ಣನ್ನು ಪರಸ್ಪರ ಹಂಚಿಕೆ ಮಾಡಿಕೊಳ್ಳುವ ಸಂಗತಿಯೇ ಆಗಿರಬಹುದು

– 21ನೇ ಶತಮಾನದ ಅವಕಾಶಗಳನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲೇ ಆಗಿರಬಹುದು

– ನಮ್ಮ ಸಮಾಜದ ಸುರಕ್ಷತೆ ಮತ್ತು ಭದ್ರತೆಯ ವಿಚಾರಗಳಲ್ಲಿ ಎದುರಾಗುವ ಸವಾಲುಗಳನ್ನು ನಿಭಾಯಿಸುವುದೇ ಆಗಿರಬಹುದು
– ಈ ಪ್ರದೇಶಗಳ ಒಳಿತು ಮತ್ತು ವಿಶ್ವದ ಅಭಿವೃದ್ಧಿ ಶೀಲ ರಾಷ್ಟ್ರಗಳಿಗಾಗಿ ನಾವು ಕೆಲಸ ಮಾಡುತ್ತೇವೆ.

ಕೀನ್ಯಾ ದೇಶದೊಂದಿಗಿನ ಈ ಪಾಲುದಾರಿಕೆಯು 21ನೇ ಶvಮಾನದಲ್ಲಿ ಆಫ್ರಿಕಾ ಖಂಡದ ಜತೆ ಭಾರತವು ಹೊಂದಿರುವ ಪರಿಕಲ್ಪನೆಯ ಒಂದು ಭಾಗವಾಗಿದೆ.

ಸ್ನೇಹಿತರೇ,

ಆಫ್ರಿಕಾದ ಆರ್ಥಿಕ ಬೆಳವಣಿಗೆಯಲ್ಲಿ ಕೀನ್ಯಾ ಅತ್ಯಂತ ಪ್ರಬಲ ಪ್ರದರ್ಶಕ ಎನಿಸಿಕೊಂಡಿದೆ. ನಿಮ್ಮದು ಸದೃಢ ಸಂಸ್ಕೃತಿಯ ನೆಲವಾಗಿದೆ. ಅಗಾಧವಾದ ಅವಕಾಶಗಳಿರುವ ದೇಶ ನಿಮ್ಮದು. ಹಿಂದೂ ಮಹಾಸಾಗರದ ಮತ್ತೊಂದು ತುದಿಯಲ್ಲಿ ಪ್ರತಿವರ್ಷ ಶೇಕಡಾ 6.7ರಷ್ಟು ಪಾಲನ್ನು ಹೊಂದಿದ್ದು, ಭಾರತದ ಬಹುದೊಡ್ಡ ಆರ್ಥಿಕ ಕ್ರಾಂತಿಯನ್ನು ಸಾಧಿಸುತ್ತಿದೆ. ನಮ್ಮ ಸವಾಲುಗಳಿಗೆ ಇನ್ನಷ್ಟು ಆಳವಾದ ಆಸಕ್ತಿ ಮತ್ತು ಗಮನವನ್ನು ಕೇಂದ್ರೀಕರಿಸಿದರೆ ನಾವಿಬ್ಬರೂ ಅತಿ ಹೆಚ್ಚು ಆರ್ಥಿಕ ಬೆಳವಣಿಗೆ ದರವನ್ನು ಹೊಂದುವುದು ಕಷ್ಟವಿಲ್ಲ. ಇದು ನಾವಿಬ್ಬರೂ ಕೂಡಿ ಕೆಲಸ ಮಾಡುವ ಅವಕಾಶವನ್ನು ತೆರೆದಿಡುತ್ತದೆ. ಕೇವಲ ರಾಜಕೀಯ ಲೋಕದಲ್ಲಿ ಮಾತ್ರವಲ್ಲ ಆರ್ಥಿಕ, ಸಾಮಾಜಿಕ ಮತ್ತು ಬೆಳವಣಿಗೆಯ ಕ್ಷೇತ್ರಗಳಲ್ಲದೇ ಇನ್ನೂ ಹಲವು ಹಂತಗಳಲ್ಲಿ ಕೂಡಿ ಕೆಲಸ ಮಾಡಬೇಕಿದೆ.
ಈಗಾಗಲೇ ನಾವು ಈ ಹಿಂದಿಗಿಂತಲೂ ಹೆಚ್ಚು ವ್ಯಾಪಾರ ಸಂಬಂಧವನ್ನು ವೃದ್ಧಿಸಿಕೊಂಡಿದ್ದೇವೆ. ಭಾರತದ ಕಂಪನಿಗಳು ಗಣನೀಯ ಸಂಖ್ಯೆಯಲ್ಲಿ ಇಲ್ಲಿವೆ. ನಮ್ಮ ಹೂಡಿಕೆ ಪಾಲುದಾರಿಕೆಯು ದೃಢವಾಗಿದೆ, ವೈವಿಧ್ಯಮಯ ಮತ್ತು ರೋಮಾಂಚನಕಾರಿಯಾಗಿದೆ. ನಮ್ಮ ಎರಡೂ ಸಮಾಜಗಳಲ್ಲಿ ಇದು ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ನಮ್ಮಲ್ಲಿ ವಸ್ತು ಮತ್ತು ಮೌಲ್ಯದ ವೃದ್ಧಿ ಆಗುತ್ತಿದೆ. ವಿವಿಧ ವಿಭಾಗಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡುವ ಮಾರ್ಗಗಳನ್ನು ಹುಡುಕಿಕೊಳ್ಳಬೇಕಿದೆ. ಇದು ಕೇವಲ ಭಾರತ ಮತ್ತು ಕೀನ್ಯಾಗೆ ಮಾತ್ರವಲ್ಲ ಆಫ್ರಿಕಾ ಮತ್ತು ಇತರೆ ಪ್ರದೇಶಗಳಿಗೂ ಅಗತ್ಯವಿದೆ.

ಆರೋಗ್ಯ ಕ್ಷೇತ್ರವು ತತ್ ಕ್ಷಣ ನಮ್ಮ ಮನಸ್ಸಿಗೆ ಬರುತ್ತದೆ. ಕೀನ್ಯಾದಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸುವ, ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಮತ್ತು ಅಗತ್ಯ ಸವಲತ್ತನ್ನು ಒದಗಿಸುವ ಭಾರತದ ಅನುಭವ ನೆರವಿಗೆ ಬರಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ನಮ್ಮ ವಿಶೇಷವಾದ ಕೌಶಲ್ಯಗಳು ಕೀನ್ಯಾದ ಯುವ ಸಮುದಾಯಕ್ಕೆ ಒಂದಷ್ಟು ವಿಚಾರಗಳಲ್ಲಿ ಅಗತ್ಯ ಮತ್ತು ಮಹತ್ವದ್ದೆನಿಸಿದೆ. ನಮ್ಮ ವ್ಯಾಪಾರ ಒಪ್ಪಂದದಲ್ಲಿ ಔಷಧಿಗಳ ಉತ್ಪಾದನೆಯನ್ನು ವೃದ್ಧಿಸಿಕೊಳ್ಳಬಹುದಿದ್ದು ಅವು ಕೀನ್ಯಾದ ಆರೋಗ್ಯ ಕ್ಷೇತ್ರದ ಅಗತ್ಯಗಳನ್ನು ಪೂರೈಸುತ್ತವೆ.

ಭಾರತವು 800 ದಶಲಕ್ಷ ಯುವ ಸಮುದಾಯದಿಂದ ಕೂಡಿದ ಸಮೃದ್ಧ ರಾಷ್ಟ್ರ ಎನಿಸಿದೆ. 2022ರವೇಳೆಗೆ ಭಾರತದ ಉದ್ದಗಲಕ್ಕೆ 500 ದಶಲಕ್ಷ ಉದ್ಯೋಗ ಸೃಷ್ಟಿಗೆ ನಾವು ಶ್ರಮಿಸುತ್ತಿದ್ದೇವೆ. ಇದು ನಮ್ಮ ಯುವ ಸಮುದಾಯವನ್ನು ಕೌಶಲ್ಯಗೊಳಿಸದೇ, ಶಿಕ್ಷಿತರನ್ನಾಗಿಸದೇ ಸಾಧಿಸಲು ಸಾಧ್ಯವೇ ಇಲ್ಲ. ಸ್ಕಿಲ್ ಇಂಡಿಯಾ ಮತ್ತು ಸ್ಟಾರ್ಟ್ ಅಪ್ ಮೂಲಕ ಭಾರತದಲ್ಲಿ ಉದ್ಯೋಗ ಸೃಷ್ಟಿ ಮತ್ತು ವೈಯಕ್ತಿಕ ಉದ್ದಿಮೆ ಸ್ಥಾಪನೆಯ ಅವಕಾಶಗಳನ್ನು ಮಾಡಿಕೊಡುತ್ತಿದ್ದೇವೆ. ಕೀನ್ಯಾದ ನಮ್ಮ ಸ್ನೇಹಿತರಿಗೆ ಅನುಕೂಲವಾಗುವಂತೆ ನಮ್ಮ ಸಾಮರ್ಥ್ಯ , ಅನುಭವಗಳನ್ನು ಹಂಚಿ ಕೊಳ್ಳಲು ಬಯಸುತ್ತೇವೆ. ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸಾಮರ್ಥ್ಯ ನಿರ್ಮಿಸುವ ನಿಟ್ಟಿನಲ್ಲಿ ಸಾಕಷ್ಟು ಸಹಕಾರ ಭಾವ ಹೊಂದಿದ್ದೇವೆ. ಆದರೆ ಅದು ಇನ್ನೂ ಕಡಿಮೆಯೇ, ದೂರಸಂಪರ್ಕ, ಕೃಷಿ, ಇಂಧನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೈವಿಧ್ಯತೆ ಯನ್ನು ಸಾಧಿಸಬೇಕಿದೆ. ಈ ಕ್ಷೇತ್ರಗಳು ನಮ್ಮ ಆರ್ಥಿಕತೆಯನ್ನು ಮುಂದಕ್ಕೆ ನೂಕುವ ಮತ್ತು ಆಧುನೀಕರಣಗೊಳಿಸುವ ಕೆಲಸವನ್ನಷ್ಟೇ ಮಾಡುವುದಿಲ್ಲ. ನಮ್ಮ ಕೌಶಲ್ಯಯುತ ಯುವಕರಿಗೆ ಉದ್ಯೋಗ ಸೃಷ್ಟಿಸಿಕೊಡುತ್ತದೆ. ನಾವು ಪರಸ್ಪರ ಹಂಚಿಕೊಂಡ ಅಭಿವೃದ್ಧಿ ಆಧಾರಿತ ಸವಾಲುಗಳು ಅಳತೆಗೆ ಮೀರಿದವು. ನಾವು ಪರಿಣಾಮಕಾರಿ ವೆಚ್ಚದ ತಂತ್ರಜ್ಞಾನಗಳನ್ನು ವೃದ್ಧಿಸುವಂತಹ ಸಾಮರ್ಥ್ಯವನ್ನು ಹೊಂದಿದ್ದೇವೆ.

ಎಂ-ಪೆಸಾ ತಂತ್ರಜ್ಞಾನದೊಂದಿಗೆ ಹೇಗೆ ನಾವು ಜೋಡಿಸಿಕೊಂಡಿದ್ದೇವೆ ಎನ್ನುವುದನ್ನು ತೋರಿಸಿದೆ. ನಮ್ಮ ಸಮಾಜದ ಪ್ರತ್ಯೇಕಿಸಲ್ಪಟ್ಟ ವರ್ಗವನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಹೇಗೆ ತಲುಪಲು ಸಾಧ್ಯ ಎನ್ನುವುದನ್ನು ನಮ್ಮಲ್ಲೇ ಅಭಿವೃದ್ಧಿ ಪಡಿಸಿದ ಉಪಾಯಗಳು ತೋರಿಸಿಕೊಟ್ಟಿವೆ. ನಮ್ಮ ಆರ್ಥಿಕತೆ ಬೆಳೆದಂತೆ ಮತ್ತು ಸಹಭಾಗಿತ್ವ ಹುಲುಸಾದಂತೆ ನಮ್ಮ ಪರಿಸರದ ಮೇಲೆ ಅದರ ಭಾರೀ ಹೊಡೆತ ಬೀಳದಂತೆ ನೋಡಿಕೊಳ್ಳಬೇಕಾದ ಅಗತ್ಯವೂ ಇದೆ.

ಇದರ ನಡುವೆಯೂ ನಮ್ಮ ಹಂಚಿಕೆಯಾದ ಮೌಲ್ಯಗಳು ತಾಯಿ ನೆಲವನ್ನು ಗೌರವಿಸುತ್ತವೆ. ನೋಬೆಲ್ ಪುರಸ್ಕೃತರಾದ ವಾಂಗಾರಿ ಮಾಥಾಯ್ ಇದನ್ನು ಸುಂದರವಾಗಿ ಹೇಳಿದ್ದಾರೆ. ಆಕೆ ಹೇಳಿದ್ದನ್ನು ನಾನು ಇಲ್ಲಿ ಹೇಳುತ್ತಿದ್ದೇನೆ. ‘ ನಾವು ಅಭಿವೃದ್ಧಿಯನ್ನು ಉತ್ತೇಜಿಸುವ ಅಗತ್ಯ ಇದೆ. ಆದರೆ ಅದು ನಮ್ಮ ಪರಿಸರವನ್ನು ವಿನಾಶ ಮಾಡಬಾರದು’.

ನಮ್ಮ ಸಾಮಾನ್ಯ ಸಂಪ್ರದಾಯವೂ ಅಷ್ಟೇ ಪರಿಸರದೊಂದಿಗೆ ಯಾವತ್ತಿಗೂ ಸೌಹಾರ್ದತೆಯನ್ನೇ ಕಾಪಾಡಿಕೊಂಡು ಬಂದಿದೆ. ‘ಹಸಿರು ಆಫ್ರಿಕಾ” ನಿರ್ಮಾಣದ ಪಾಲುದಾರಿಕೆಯಲ್ಲಿ ಈ ಸಂಪ್ರದಾಯದ ಮುಂದುವರಿಕೆಯೂ ಒಂದಾಗಿದೆ. ಇಂಥದ್ದೊಂದು ಪಾಲುದಾರಿಕೆಯು ಹೊಸ ಆರ್ಥಿಕ ಅವಕಾಶಗಳನ್ನು ನಿರ್ಮಾಣ ಮಾಡುತ್ತದೆ. ಅಂತರಾಷ್ಟ್ರೀಯ ಸೌರ ಇಂಧನ ಪಾಲುದಾರಿಕೆಯ ಒಪ್ಪಂದವೇ ಭಾರತದ ಪರಿಸರವನ್ನು ಸಂರಕ್ಷಣೆ ಮಾಡುವ ಒಂದು ಮಹತ್ತರವಾದ ಉದ್ದೇಶವಾಗಿದೆ. ಸೂರ್ಯನ ಸೌರ ಶಕ್ತಿಯು ಪುನರ್ ನವೀಕರಿಸಬಹುದಾದ ಶಾಶ್ವತ ಇಂಧನವಾಗಿದೆ. ಇದನ್ನು ಬಳಸಲು ನಾವು ಸಜ್ಜುಗೊಳ್ಳಬೇಕಿದೆ. ಜಗತ್ತಿನ 120 ರಾಷ್ಟ್ರಗಳ ಜತೆ ನಾವು ಈಗಾಗಲೇ ಸೌರ ಇಂಧನ ಕ್ಷೇತ್ರದಲ್ಲಿ ಒಪ್ಪಂದ ಮಾಡಿಕೊಂಡಿದ್ದೇವೆ. ಕೀನ್ಯಾದೊಂದಿನ ಅಭಿವೃದ್ಧಿ ಹೊಂದುತ್ತಿರುವ ಪಾಲುದಾರಿಕೆಯಲ್ಲಿ ಇದೂ ಒಂದಾಗಿದೆ.

ಅದರಂತೆಯೇ ಭಾರತದ ಪುರಾತನವಾದ ಯೋಗ ಸಂಪ್ರದಾಯವು ಪರಿಸರದೊಂದಿಗೆ ಸಮಗ್ರ ದೃಷ್ಟಿಯ ಜೀವನ ಹೊಂದಾಣಿಕೆಯನ್ನು ಹೊಂದಿದೆ. ನೈರೋಬಿ ವಿಶ್ವ ವಿದ್ಯಾಲಯದ ಮೈದಾನದಲ್ಲಿ ಜೂನ್ 19ರಂದು ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ 7000 ಯೋಗ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು ಎಂಬುದನ್ನು ತಿಳಿದು ನನಗೆ ಸಂತಸವಾಗುತ್ತಿದೆ.

ಸ್ನೇಹಿತರೇ,

ನಮ್ಮ ಆರ್ಥಿಕ ಗುರಿಗಳನ್ನು ತಲುಪಲು ಅಧ್ಯಯನ ಪೂರ್ವಕ ಹೆಜ್ಜೆಯನ್ನು ಇಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಆದರೆ ನಾವು ನಮ್ಮ ಜನರ ಸುರಕ್ಷತೆಯನ್ನೂ ಉದಾಸೀನ ಮಾಡಲಾಗದು. ನಮ್ಮ ಆರ್ಥಿಕ ಉನ್ನತಿ ಮತ್ತು ಸಾಮಾಜಿಕ ಅಭಿವೃದ್ಧಿಯು ಪ್ರಮುಖ ವಾಗಿವೆ . ನಮ್ಮ ಸಮಾಜ ಸುರಕ್ಷಿತವಾಗಿದ್ದರೆ ನಮ್ಮ ಜನರೂ ಸುರಕ್ಷಿತವಾಗಿರಲಿದ್ದಾರೆ.

ಅಧ್ಯಕ್ಷ ಹುರು ಅವರು ಕಳೆದ ಅಕ್ಟೋಬರ್‍ನಲ್ಲಿ ದೆಹಲಿಗೆ ಬಂದಿದ್ದಾಗ ‘ಭಯೋತ್ಪಾದನೆ ಎನ್ನುವುದು ಗಡಿಯೇ ಗೊತ್ತಿಲ್ಲದ ಭೂತ. ಅದಕ್ಕೆ ಯಾವುದೇ ಧರ್ಮವಿಲ್ಲ. ಯಾವುದೇ ವರ್ಣವಿಲ್ಲ ಮತ್ತು ಯಾವುದೇ ಮೌಲ್ಯಗಳೂ ಇಲ್ಲ’ ಎಂಬ ಮಾತನ್ನು ಆಡಿದ್ದರು. ಇದರ ನಡುವೆಯೂ ನಮ್ಮ ಸಮಾಜ ವ್ಯವಸ್ಥೆಯನ್ನು ಬೆದರಿಸುವಂತಹ ದ್ವೇಷ ಮತ್ತು ಹಿಂಸೆಯ ಬೋಧಕರು ಇರುವ ವಿಶ್ವದಲ್ಲಿ ನಾವು ಬದುಕುತ್ತಿದ್ದೇವೆ. ನಮ್ಮ ಕೀನ್ಯಾದ ಯುವ ಮತ್ತು ಉತ್ಸಾಹಿ ಯುವಕರು, ಆಫ್ರಿಕಾ ಸಮಾಜದ ಸದಸ್ಯರು ಮೂಲಭೂತ ಸಿದ್ಧಾಂತವನ್ನು ಹರಡುವಂತಹ ಶಕ್ತಿಗಳ ಮೇಲೆ ನಿಗಾ ಇಡಬೇಕಿದೆ. ಯಾರು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದಾರೋ, ರಾಜಕೀಯ ಸಲಕರಣೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೋ ಅವರನ್ನು ನಾವಿಬ್ಬರೂ ಜಂಟಿಯಾಗಿ ಖಂಡಿಸೋಣ. ಉಗ್ರವಾದದ ಸಿದ್ಧಾಂತವಾದಿಗಳಿಗೆ ತಿರುಗೇಟು ನೀಡುವ ವ್ಯವಸ್ಥೆಯನ್ನು ಸೃಷ್ಟಿಸುವಲ್ಲಿ ಯುವಕರ ಪಾತ್ರವು ಮಹತ್ತರವಾಗಿದೆ.

ಪ್ರಿಯ ವಿದ್ಯಾರ್ಥಿಗಳೇ,

ಎರಡು ಕಡಲತೀರದ ವ್ಯಾಪಾರೀ ದೇಶಗಳು, ಇಂಡಿಯನ್ ಓಷನ್ ರಿಮ್ ಅಸೋಸಿಯೇಷನ್‍ನ ಸದಸ್ಯರು ಮತ್ತು ನಾವು ಸಾಗರದಲ್ಲಿ ಹುಟ್ಟುವ ಬೆದರಿಕೆಯ ವಿರುದ್ಧ ಹೋರಾಡಬೇಕಿದೆ. ಮತ್ತು ಪೈರಸಿಯು ನಮ್ಮ ವ್ಯಾಪಾರವನ್ನು ಬೆದರಿಸದಂತೆ, ಕಡಲ ತೀರಗಳ ಸುರಕ್ಷತೆಗೆ ಭಂಗ ತರದಂತೆ, ಎಲ್ಲರಿಗೂ ನೌಕಾಯಾನದ ಸ್ವಾತಂತ್ರ ಸಿಗುವಂತೆ ನೋಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಕೀನ್ಯಾಗೆ ಆಗಮಿಸುವ ಮುನ್ನ ನಾನು ಮೊಝಂಬಿಕ್, ದಕ್ಷಿಣ ಆಫ್ರಿಕಾ ಮತ್ತು ತಾಂಜೇನಿಯಾಗೂ ಭೇಟಿ ನೀಡಿದ್ದೆ. ನೂರಾರು ವರ್ಷಗಳಿಂದಲೂ ಆಫ್ರಿಕಾ ಪೂರ್ವ ಕರಾವಳಿಯು ಭಾರತದೊಂದಿಗೆ ಸದೃಢವಾದ ಕಡಲತೀರದ ಸಂಬಂಧವನ್ನು ಹೊಂದಿದೆ. ಇವತ್ತು ಅದೇ ಪೂರ್ವ ಕರಾವಳಿಯು ರಚನಾತ್ಮಕ ಮತ್ತು ಸುರಕ್ಷತಾ ಸವಾಲುಗಳನ್ನು ಎದುರಿಸುತ್ತಿದೆ. ಈ ಇಡೀ ಕಡಲ ತೀರ ಮತ್ತು ಕರಾವಳಿ ಭದ್ರತೆಯ ದೃಷ್ಟಿಯಿಂದ ನಾವೆರಡೂ ದೇಶಗಳು ಇನ್ನಷ್ಟು ಆಳವಾದ ಒಪ್ಪಂದಗಳಿಗೆ ಬರಬೇಕಿದೆ.

ಪ್ರಿಯ ವಿದ್ಯಾರ್ಥಿಗಳೇ,

ಇದು ಪರಸ್ಪರ ಅವಲಂಬಿ ಯುಗ, ಜಗತ್ತಿನಲ್ಲಿ ಇಂದು ಅವಾಶಗಳು ವೃದ್ಧಿಸುತ್ತಿವೆ ಮತ್ತು ಸವಾಲುಗಳು ಸಂಕೀರ್ಣಗೊಳ್ಳುತ್ತಿವೆ. ನೀವು ಅದನ್ನು ನಾಳೆಯ ಸಂಪ್ರದಾಯವನ್ನಾಗಿ ಮಾಡಿಕೊಳ್ಳಬೇಕಿದೆ. ಮತ್ತು ಈ ಮಹಾನ್ ದೇಶದ ಭವಿಷ್ಯವನ್ನು ನಿರ್ಮಾಣ ಮಾಡಬೇಕಿದೆ. ಸುರಕ್ಷಿತ ಮತ್ತು ಸಮೃದ್ಧ ಕೀನ್ಯಾ ಹಾಗೂ ಸದೃಢ ಆಫ್ರಿಕಾ ನಿಮ್ಮ ಪ್ರದೇಶವಾಗಬೇಕಿದೆ. ನಿಮ್ಮಿಂದ ಇದನ್ನು ಯಾರೂ ಕಿತ್ತುಕೊಳ್ಳದಿರಲಿ. ದೇಶ ನಿರ್ಮಾಣ ಎನ್ನುವುದು ಅಂತ್ಯವಿಲ್ಲದ ಪ್ರಕ್ರಿಯೆ. ನೀವು ನಿಮ್ಮ ಮಹತ್ವಾಕಾಂಕ್ಷೆಗಳನ್ನು ಮುಂದುವರೆಸಿ, ನೀವು ಉತ್ತಮವಾಗಿ ಸಾಧನೆ ಮಾಡಬಲ್ಲಿರಿ. ನಿಮ್ಮ ಕಾರ್ಯಗಳು ಮಾರ್ಗದರ್ಶನ ನೀಡುತ್ತವೆ ಇತರರನ್ನೂ ಮುನ್ನಡೆಸುತ್ತವೆ.
ಉನ್ನತವಾದುದನ್ನು ಬಯಸಿ, ದೊಡ್ಡದನ್ನು ಕನಸು ಕಾಣಿ ಮತ್ತು ಹೆಚ್ಚಿನದನ್ನು ಸಾಧಿಸಿ. ನಿಮ್ಮ ಸಂಕಲ್ಪ ಏನಿದ್ದರೂ ‘ಯುನಿಟಾಟ್ ಎಟ್ ಲ್ಯಾಬೋರ್’ ಆಗಿರಲಿ; ಶ್ರಮಪಟ್ಟು ಕೆಲಸ ಮಾಡಿ ಮತ್ತು ಒಗ್ಗಟ್ಟಾಗಿ ಬದುಕಿ. ಕಾಯಕದ ಹಣ್ಣಿನ ಫಲ ನಿಮ್ಮದಾಗಿರಲಿದೆ. ನಿಮ್ಮ ನಿರ್ದಿಷ್ಟ ಸ್ಥಾನದತ್ತ ಮುನ್ನುಗ್ಗಿ. ಭಾರತದಲ್ಲಿ ನಂಬಿಕೆಯ ಮತ್ತು ವಿಶ್ವಾಸಾರ್ಹ ಪಾಲುದಾರನನ್ನು ಕಾಣುತ್ತೀರಿ.

– ಯಾರು ನಿಮ್ಮ ಸಾಧನೆಯಲ್ಲಿ ಸಂತೃಪ್ತಿ ಕಾಣುತ್ತಾನೋ

– ಯಾರು ಸದಾ ನಿಮಗೆ ಸಹಾಯ ಹಸ್ತ ಚಾಚುತ್ತಾನೋ

– ನಿಮ್ಮ ಪ್ರತಿ ಕ್ಷಣದ ಅಗತ್ಯದ ಸಂದರ್ಭದಲ್ಲೂ ಆತ ನಿಮ್ಮ ಜತೆ ಇರುತ್ತಾನೆ .

ಇದು ನಿಮ್ಮೊಂದಿಗೆ ಮಾತನಾಡಲು ಸಿಕ್ಕ ಅಪೂರ್ವವಾದ ಅವಕಾಶ. ನಾನು ನೈರೋಬಿ ವಿಶ್ವ ವಿದ್ಯಾಲಯಕ್ಕೆ, ಅದರ ಬೋಧಕ ವರ್ಗಕ್ಕೆ ಮತ್ತು ಕೀನ್ಯಾದ ಭವಿಷ್ಯದಂತೆ ಕಂಗೊಳಿಸುತ್ತಿರುವ ನಿಮಗೆ ಆಭಾರಿಯಾಗಿರುತ್ತೇನೆ.

ಅಸಾಂಟೆ ಸನಾ, ಧನ್ಯವಾದಗಳು.

ಎಲ್ಲರಿಗೂ ನನ್ನ ವಂದನೆಗಳು.

***