Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೀತಿ ಆಯೋಗವು ಇಂದು ನವ ದೆಹಲಿಯಲ್ಲಿ ಏರ್ಪಡಿಸಿದ್ದ `ಬದಲಾವಣೆಯ ಹರಿಕಾರರು’ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಯುವ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದರು


ನೀತಿ ಆಯೋಗವು ಇಂದು ನವ ದೆಹಲಿಯಲ್ಲಿ ಏರ್ಪಡಿಸಿದ್ದ `ಬದಲಾವಣೆಯ ಹರಿಕಾರರು’ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಯುವ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮವು ಪ್ರವಾಸಿ ಭಾರತೀಯ ಕೇಂದ್ರದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ತರುಣ ಉದ್ಯಮಿಗಳ ಆರು ತಂಡವು ಮೃದು ನೀತಿ ಧೋರಣೆ, ಇನ್ ಕ್ರೆಡಿಬಲ್ ಇಂಡಿಯಾ 2.0; ಶಿಕ್ಷಣ ಮತ್ತು ಕೌಶಲಾಭಿವೃದ್ಧಿ; ಆರೋಗ್ಯ ಮತ್ತು ಪೌಷ್ಟಿಕತೆ; ಸುಸ್ಥಿರ ನಾಳೆಗಳ ಬಲವರ್ಧನೆ ಮತ್ತು ಡಿಜಿಟಲ್ ಇಂಡಿಯಾ; ಹಾಗೂ 2022ರ ಹೊತ್ತಿಗೆ ನವಭಾರತ ನಿರ್ಮಾಣ- ಈ ಆರು ವಿಷಯಗಳನ್ನು ಕುರಿತು ಪ್ರಧಾನಮಂತ್ರಿ ಅವರ ಸಮ್ಮುಖದಲ್ಲಿ ತನ್ನ ವಿಚಾರಗಳನ್ನು ಮಂಡಿಸಿತು.

ತರುಣ ಉದ್ಯಮಿಗಳು ತಮ್ಮೆದುರು ಸಾದರಪಡಿಸಿದ ಹೊಸಹೊಸ ಆಲೋಚನೆಗಳನ್ನು ಮತ್ತು ಅನ್ವೇಷಣೆಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಅವರು , ಹಿಂದೆಲ್ಲ ತೆಗೆದುಕೊಂಡಂಥ ಸಾಮಾಜಿಕ ಉಪಕ್ರಮಗಳು ಜನರ ಅಗತ್ಯಗಳನ್ನು ಬಹುತೇಕ ಮಟ್ಟಿಗೆ ಪೂರೈಸಿದ್ದು, ಪ್ರತಿಭಾವಂತರೇ ಇವುಗಳನ್ನು ಮುನ್ನಡೆಸಿದ್ದಾರೆ ಎಂದು ಹೇಳಿದರು.

ಜತೆಗೆ `ಬದಲಾವಣೆಯ ಹರಿಕಾರರು’ ಎನ್ನುವ ಈ ಕಾರ್ಯಕ್ರಮವು ದೇಶದ ಮತ್ತು ಸಮಾಜದ ಒಳಿತಿಗಾಗಿ ಬಗೆಬಗೆಯ, ವೈವಿಧ್ಯಮಯ ಶಕ್ತಿಗಳನ್ನು/ಚಿಂತನೆಗಳನ್ನು ಒಂದೆಡೆ ತರುವ ಪ್ರಯತ್ನವಾಗಿದೆ ಎಂದು
ಪ್ರಧಾನಮಂತ್ರಿ ಅವರು ವಿವರಿಸಿದರು.

ನೀತಿ ಆಯೋಗವು ಕೈಗೊಂಡಿರುವ ಈ ಉಪಕ್ರಮವನ್ನು ಮುಂದುವರಿಸಿಕೊಂಡು ಹೋಗಲಾಗುವುದಲ್ಲದೆ, ಸಾಧ್ಯವಾದಷ್ಟೂ ಅತ್ಯುತ್ತಮ ಬಗೆಯಲ್ಲಿ ಇದಕ್ಕೊಂದು ಸಾಂಸ್ಥಿಕ ರೂಪವನ್ನು ಕೊಡಲಾಗುವುದು ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಇವುಗಳ ಪೈಕಿ, ಇಂದು ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸಿದ ತಂಡಗಳನ್ನು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಚಿವಾಲಯಗಳೊಂದಿಗೆ ಸೇರಿ ಮುಂದಡಿ ಇಡುವಂತೆ ಮಾಡುವ ಕ್ರಮವೂ ಒಂದಾಗಿದೆ ಎಂದು ಅವರು ನುಡಿದರು.

ಈ ಸಂದರ್ಭದಲ್ಲಿ ಅವರು, ಸಮಾಜದಲ್ಲಿ ಇದುವರೆಗೂ ಅನಾಮಿಕರಾಗಿ ಉಳಿದುಕೊಂಡಿದ್ದಂಥ ಸಾಧಕರಿಗೆ ಪದ್ಮ ಪ್ರಶಸ್ತಿಗಳಿಗೆ ಕೊಡಬೇಕೆಂಬ ಕಳಕಳಿಯಿಂದ ಅದಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನೇ ಹೇಗೆ ಆಮೂಲಾಗ್ರವಾಗಿ ಬದಲಾಯಿಸಲಾಯಿತು ಎಂಬ ಉದಾಹರಣೆಯನ್ನು ನೀಡಿದರು.

ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ತಂಡವು ಹೊಸಹೊಸ ಹಾದಿಗಳನ್ನು ಅನ್ವೇಷಿಸಲು ಉತ್ಸುಕವಾಗಿರುವುದಲ್ಲದೆ, ಜನರ ಜೀವನಮಟ್ಟವನ್ನು ಸುಧಾರಿಸಲೂ ತವಕದಿಂದಿದೆ ಎಂದು ಅವರು ಹೇಳಿದರು. ಜತೆಗೆ, ತಮ್ಮ ಮುಂದೆ ವಿಚಾರಗಳನ್ನು ಪ್ರಸ್ತುತಪಡಿಸಿದ ಉದ್ಯಮಿಗಳು ತಮಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಹೊಸ ಆಲೋಚನೆಗಳ ಆವಿಷ್ಕಾರವನ್ನು ಮುಂದುವರಿಸಿಕೊಂಡು ಹೋಗುವಂತೆ ಉತ್ತೇಜಿಸಿ , “ನೀವು ಹೀಗೆ ಮಾಡಿದರೆ ಮಾತ್ರ ಬಹುದೂರ ಕ್ರಮಿಸಬಲ್ಲಿರಿ. ಈ ಮೂಲಕ ಆಡಳಿತದ ಹಿಂದಿರುವ ಆಶಯಗಳು ಈಡೇರುವಂತೆ ಮಾಡಬಲ್ಲಿರಿ” ಎಂದರು.

ಕೇಂದ್ರ ಸರ್ಕಾರವು ಸಾಕಷ್ಟು ಸಣ್ಣಸಣ್ಣ ಬದಲಾವಣೆಗಳನ್ನು ತಂದಿದ್ದು, ಅವು ಮಹತ್ತರ ಫಲಿತಾಂಶಗಳನ್ನು ತಂದುಕೊಟ್ಟಿವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಶ್ರೀಸಾಮಾನ್ಯನನ್ನು ನಾವು ನಂಬಲು ಆರಂಭಿಸಿದ್ದು ಅಂಥ ಬದಲಾವಣೆಗಳಲ್ಲಿ ಒಂದಾಗಿದೆ ಎಂದು ಅವರು ಒಂದು ಉದಾಹರಣೆ ನೀಡಿದರು. ಅಲ್ಲದೆ, ಕೇಂದ್ರ ಸರ್ಕಾರದ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಸಂದರ್ಶನ ಮಾಡುವುದನ್ನು ರದ್ದುಪಡಿಸಿದ್ದನ್ನೂ ಅವರು ಉಲ್ಲೇಖಿಸಿದರು.

ನಮ್ಮಲ್ಲಿರುವ ಪ್ರತಿಯೊಂದು ಕಂದಕವನ್ನೂ ಮುಚ್ಚಲು ಇಂದು `ಆಪ್’ಗಳಿದ್ದು, ತಂತ್ರಜ್ಞಾನ ಮತ್ತು ಅನ್ವೇಷಣೆಗಳೆರಡೂ ಸೇರಿ ಆಡಳಿತದಲ್ಲಿ ಬದಲಾವಣೆಯನ್ನು ತರಬೇಕು; ಗ್ರಾಮೀಣ ಆರ್ಥಿಕತೆಗೆ ಶಕ್ತಿ ತುಂಬಲು ವಿಕೇಂದ್ರೀಕೃತ ಇಲಾಖೆಗಳು/ವ್ಯವಸ್ಥೆ ತುಂಬಾ ಮುಖ್ಯವಾಗಿದೆ. ಹೀಗಾಗಿ, ಅಪೇಕ್ಷಿತ ಬದಲಾವಣೆಯನ್ನು ತರುವಲ್ಲಿ ನವೋದ್ಯಮಗಳ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಧಾನಮಂತ್ರಿ ಅವರು ಪ್ರತಿಪಾದಿಸಿದರು.

ಪ್ರಧಾನಮಂತ್ರಿ ಅವರು ತಮ್ಮ ಮಾತಿನಲ್ಲಿ, ಸಮಾಜದಲ್ಲಿ ಒಳ್ಳೆಯ ಶಿಕ್ಷಕರ ಪಾತ್ರ ಎಷ್ಟೊಂದು ಮುಖ್ಯವೆಂಬುದನ್ನೂ ಒತ್ತಿ ಹೇಳಿದರು. ಅಲ್ಲದೆ, ಶಿಕ್ಷಣದ ಗುಣಮಟ್ಟ ಸುಧಾರಣೆಗೆ ತಂತ್ರಜ್ಞಾನವು ದೊಡ್ಡ ಮಟ್ಟದಲ್ಲಿ ಸಹಾಯ ಮಾಡಬಲ್ಲದು ಎಂದು ವಿವರಿಸಿದರು.

ಉದ್ಯಮಿಗಳು ತಮ್ಮ ನೌಕರ ವರ್ಗದಲ್ಲಿ ಸರ್ಕಾರವು ಜಾರಿಗೆ ತಂದಿರುವ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಚುರಪಡಿಸಬೇಕು ಎಂದು ಅವರು ಹುರಿದುಂಬಿಸಿದರು.

ಕೋಟ್ಯಂತರ ಶ್ರೀಸಾಮಾನ್ಯರ ಪ್ರಯತ್ನಗಳಿಂದ ಮಾತ್ರ ನಾವು ನವಭಾರತವನ್ನು ಕಟ್ಟಬಹುದು ಎಂದು ಒತ್ತಿ ಹೇಳಿದ ಅವರು, ಈ ನಿಟ್ಟಿನಲ್ಲಿ ಕೈ ಜೋಡಿಸುವಂತೆ ಉದ್ಯಮಿಗಳಿಗೆ ಆಹ್ವಾನ ನೀಡಿದರು.

ಕಾರ್ಯಕ್ರಮದಲ್ಲಿ ಹಲವಾರು ಕೇಂದ್ರ ಸಚಿವರು, ನೀತಿ ಆಯೋಗದ ಉಪಾಧ್ಯಕ್ಷ ಶ್ರೀ ಅರವಿಂದ್ ಪನಗರಿಯಾ ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ನೀತಿ ಆಯೋಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಅಮಿತಾಭ್ ಕಾಂತ್ ಕಾರ್ಯಕ್ರಮವನ್ನು ನಿರ್ವಹಿಸಿದರು.

***