Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಾಳೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸ್ಮಾರಕ ಉದ್ಘಾಟಿಸಲಿರುವ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ (27.07.2017) ಬೆಳಗ್ಗೆ 11.30ಕ್ಕೆ ರಾಮೇಶ್ವರದ ಪೀ ಕರುಂಬುವಿನಲ್ಲಿ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ. ಡಿ.ಆರ್.ಡಿ.ಓ. ವಿನ್ಯಾಸ ಮಾಡಿ ನಿರ್ಮಿಸಿರುವ ಸ್ಮಾರಕದಲ್ಲಿ ಪ್ರಧಾನಮಂತ್ರಿಯವರು ರಾಷ್ಟ್ರ ಧ್ವಜಾರೋಹಣ ಮಾಡಲಿದ್ದಾರೆ.

ಪ್ರಧಾನಮಂತ್ರಿಯವರು ಡಾ. ಅಬ್ದುಲ್ ಕಲಾಂ ಅವರ ಪುತ್ಥಳಿಯನ್ನು ಅನಾವರಣ ಮಾಡಲಿದ್ದಾರೆ, ಮತ್ತು ಪುಷ್ಪ ನಮನ ಸಲ್ಲಿಸಲಿದ್ದಾರೆ. ಡಾ. ಅಬ್ದುಲ್ ಕಲಾಂ ಅವರ ಕುಟುಂಬದ ಸದಸ್ಯರೊಂದಿಗೆ ಪ್ರಧಾನಿ ಮಾತನಾಡಲಿದ್ದಾರೆ.

ಬಳಿಕ, ಪ್ರಧಾನಮಂತ್ರಿಯವರು ದೇಶಾದ್ಯಂತ ಸಂಚರಿಸಿ, ಮಾಜಿ ರಾಷ್ಟ್ರಪತಿಯವರ ಜಯಂತಿಯ ದಿನವಾದ ಅಕ್ಟೋಬರ್ 15ರಂದು ರಾಷ್ಟ್ರಪತಿ ಭವನ ತಲುಪಲಿರುವ ವಸ್ತು ಪ್ರದರ್ಶನದ ಬಸ್ ‘ಕಲಾಂ ಸಂದೇಶ ವಾಹಿನಿ’ಗೆ ಹಸಿರು ನಿಶಾನೆ ತೋರಲಿದ್ದಾರೆ.

ನಂತರ ಪ್ರಧಾನಮಂತ್ರಿಯವರು ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಮಂಡಪಂಗೆ ಪ್ರಯಾಣ ಬೆಳೆಸಲಿದ್ದಾರೆ. ನೀಲಿ ಕ್ರಾಂತಿ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಲಾಂಗ್ ಲೈನರ್ ಟ್ರಾವಲರ್ಸ್ (ಉದ್ದನೆಯ ದೋಣಿ) ಗಳ ಹಂಚಿಕೆ ಪತ್ರವನ್ನು ವಿತರಿಸಲಿದ್ದಾರೆ. ಅಲ್ಲದೆ ಅಯೋಧ್ಯೆಯಿಂದ ರಾಮೇಶ್ವರಂ ನಡುವಿನ ಹೊಸ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ (ವಿಡಿಯೋ ಸಂವಾದದ ಮೂಲಕ) ಚಾಲನೆ ನೀಡಲಿದ್ದಾರೆ. ಹಸಿರು ರಾಮೇಶ್ವರ ಯೋಜನೆಯ ರೂಪುರೇಖೆಯನ್ನು ಬಿಡುಗಡೆ ಮಾಡಲಿದ್ದಾರೆ. ಎನ್.ಎಚ್. 87ರಲ್ಲಿ ಮುಕುಂದರಯಾರ್ ಛತಿರಂ ಮತ್ತು ಅರಿಚಲ್ಮುನೈ ನಡುವಿನ 9.5 ಕಿ.ಮೀ. ಸಂಪರ್ಕ ರಸ್ತೆಯನ್ನೂ ಪ್ರಧಾನಿ ಫಲಕ ಅನಾವರಣ ಮಾಡುವ ಮೂಲಕ ದೇಶಕ್ಕೆ ಸಮರ್ಪಿಸಲಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುವ ಮೂಲಕ ಅವರು ತಮ್ಮ ಪ್ರವಾಸವನ್ನು ಸಮಾರೋಪಗೊಳಿಸಲಿದ್ದಾರೆ.

ಕಲಾಂ ಸ್ಮಾರಕದ ಹಿನ್ನೆಲೆ

ಈ ಸ್ಮಾರಕವನ್ನು ಡಿ.ಆರ್.ಡಿ.ಓ. ಸರಿಯಾಗಿ ಒಂದು ವರ್ಷದ ಅವಧಿಯಲ್ಲಿ ನಿರ್ಮಾಣ ಮಾಡಿದೆ. ಹಲವು ರಾಷ್ಟ್ರೀಯ ಸ್ಮಾರಕಗಳ ಸ್ಫೂರ್ತಿಯಿಂದ ಇದರ ವಾಸ್ತು ವಿನ್ಯಾಸ ಮಾಡಲಾಗಿದೆ. ಇದರ ಪ್ರವೇಶ ಇಂಡಿಯಾ ಗೇಟ್ ನಂತಿದ್ದರೆ, ಮೇಲಿರುವ ಎರಡು ಗುಮ್ಮಟಗಳು ರಾಷ್ಟ್ರಪತಿ ಭವನದ ಗುಮ್ಮಟಗಳ ಮಾದರಿಯಲ್ಲಿವೆ. ಈ ಸ್ಮಾರಕವು ನಾಲ್ಕು ಮುಖ್ಯ ಸಭಾಂಗಣಗಳನ್ನು ಹೊಂದಿದ್ದು,ಪ್ರತಿಯೊಂದರಲ್ಲೂ ಡಾ. ಕಲಾಮ್ ಅವರ ಕಾಲ ಮತ್ತು ಜೀವನ ಚಿತ್ರಣವನ್ನು ಒಳಗೊಂಡಿವೆ. ಸಭಾಂಗಣ 1ರಲ್ಲಿ ಅವರ ಬಾಲ್ಯ ಮತ್ತು ಶಿಕ್ಷಣದ ಹಂತವಿದ್ದರೆ, ಹಾಲ್ 2 ಸಂಸತ್ ಮತ್ತು ವಿಶ್ವಸಂಸ್ಥೆಯ ಮಂಡಳಿಯನ್ನುದ್ದೇಶಿಸಿ ಮಾಡಿದ ಭಾಷಣ ಸೇರಿದಂತೆ ರಾಷ್ಟ್ರಪತಿ ಕಾಲಾವಧಿಯದ್ದಾಗಿದೆ. ಇನ್ನೂ ಹಾಲ್ -3 ಇಸ್ರೋ ಮತ್ತು ಡಿಆರ್.ಡಿ.ಓ. ದಿನಗಳನ್ನು ಹಾಗೂ ಹಾಲ್ -4 ರಾಷ್ಟ್ರಪತಿಯೋತ್ತರ ದಿನಗಳ ಅಂದರೆ ಶಿಲ್ಲಾಂಗ್ ನಲ್ಲಿ ಕೊನೆಯುಸಿರೆಳೆಯುವತನಕದ್ದಾಗಿದೆ.
ಡಾ. ಕಲಾಂ ಅವರಿಗೆ ಸೇರಿದ ಹೆಸರಾಂತ ರುದ್ರವೀಣೆ, ಎಸ್.ಯು -30 ಎಂ.ಕೆ.1 ವಿಮಾನ ಪ್ರಯಾಣ ವೇಳೆ ಧರಿಸಿದ ಜಿ-ಸ್ಯೂಟ್ ಮತ್ತು ಅವರಿಗೆ ದೊರೆತ ಅಸಂಖ್ಯಾತ ಪ್ರಶಸ್ತಿಗಳು ಸೇರಿದಂತೆ ಕೆಲವು ವೈಯಕ್ತಿಕ ವಸ್ತುಗಳಿಗೆ ಪ್ರತ್ಯೇಕ ವಿಭಾಗವೇ ಇದೆ. 12 ಗೋಡೆಗಳನ್ನು ಭಿತ್ತಿ ಚಿತ್ರ ಮತ್ತು ವರ್ಣಚಿತ್ರಗಳಿಗೆ ಬಳಸಿಕೊಳ್ಳಲಾಗಿದೆ.

ಇಡೀ ಪ್ರದೇಶವನ್ನು ಡಾ. ಕಲಾಂ ಅವರ ಶಾಂತಿ ಮತ್ತು ಸೌಹಾರ್ದತೆಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಸುಂದರವಾಗಿ ವಿನ್ಯಾಸ ಮಾಡಲಾಗಿದೆ.

ನಿರ್ಮಾಣ ಸಾಮಗ್ರಿಗಳು ಮತ್ತು ಸ್ಮಾರಕದ ಭಾಗಗಳನ್ನು ಭಾರತದ ವಿವಿಧ ಭಾಗಗಳಿಂದ ರಾಮೇಶ್ವರಕ್ಕೆ ಸಾಗಿಸಲಾಗಿದೆ. ಮುಖ್ಯದ್ವಾರಗಳನ್ನು ತಂಜಾವೂರಿನಿಂದ;ಕಲ್ಲಿನ ಕ್ಲಾಡಿಂಗ್ ಗಳನ್ನು ಜೈಯಲ್ಮೀರ್ ಮತ್ತು ಆಗ್ರಾದಿಂದ; ಕಲ್ಲಿನ ಕಂಬಗಳನ್ನು ಬೆಂಗಳೂರಿನಿಂದ;ಅಮೃತಶಿಲೆಯನ್ನು ಕರ್ನಾಟಕದಿಂದ ಮತ್ತು ಭಿತ್ತಿಚಿತ್ರಗಳನ್ನು ಹೈದ್ರಾಬಾದ್, ಕೋಲ್ಕತ್ತಾದ ಶಾಂತಿನಿಕೇತನ್ ಮತ್ತು ಚೆನ್ನೈನಿಂದ ತರಿಸಲಾಗಿದೆ

****

AKT/NT