Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಾಯಕರ ಹೇಳಿಕೆ: ಯುರೋಪಿಯನ್ ಆಯೋಗ (ಕಮಿಷನ್)  ಮತ್ತು ಇಯು ಕಾಲೇಜ್ ಆಫ್ ಕಮಿಷನರ್ ಗಳ ಅಧ್ಯಕ್ಷರಾದ ಶ್ರೀಮತಿ ಉರ್ಸುಲಾ ವಾನ್ ಡೆರ್ ಲೆಯೆನ್ ಅವರ ಭಾರತ ಭೇಟಿ (ಫೆಬ್ರವರಿ 27-28, 2025)

ನಾಯಕರ ಹೇಳಿಕೆ: ಯುರೋಪಿಯನ್ ಆಯೋಗ (ಕಮಿಷನ್)  ಮತ್ತು ಇಯು ಕಾಲೇಜ್ ಆಫ್ ಕಮಿಷನರ್ ಗಳ ಅಧ್ಯಕ್ಷರಾದ ಶ್ರೀಮತಿ ಉರ್ಸುಲಾ ವಾನ್ ಡೆರ್ ಲೆಯೆನ್ ಅವರ ಭಾರತ ಭೇಟಿ (ಫೆಬ್ರವರಿ 27-28, 2025)


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷೆ ಶ್ರೀಮತಿ ಉರ್ಸುಲಾ ವಾನ್ ಡೆರ್ ಲೆಯೆನ್ ಅವರು, ಇಯು-ಭಾರತ ವ್ಯೂಹಾತ್ಮಕ ಪಾಲುದಾರಿಕೆಯು ತಮ್ಮ ಜನರಿಗೆ ಮತ್ತು ವಿಸ್ತಾರವಾದ  ಜಾಗತಿಕ ಒಳಿತಿಗಾಗಿ ಅಮೂಲ್ಯವಾದ ಪ್ರಯೋಜನಗಳನ್ನು ನೀಡಿದೆ ಎಂಬುದನ್ನು  ದೃಢಪಡಿಸಿದರು. 20 ವರ್ಷಗಳ ಭಾರತ-ಇಯು ವ್ಯೂಹಾತ್ಮಕ ಪಾಲುದಾರಿಕೆ ಮತ್ತು 30 ವರ್ಷಗಳ ಭಾರತ-ಇಸಿ ಸಹಕಾರ ಒಪ್ಪಂದದ ಆಧಾರದ ಮೇಲೆ ಪಾಲುದಾರಿಕೆಯನ್ನು ಉನ್ನತ ಮಟ್ಟಕ್ಕೆ ಏರಿಸಲು ಅವರು ಬದ್ಧತೆ ವ್ಯಕ್ತಪಡಿಸಿದ್ದಾರೆ.

ಅಧ್ಯಕ್ಷ ವಾನ್ ಡೆರ್ ಲೆಯೆನ್ ಅವರು ತಮ್ಮ ಐತಿಹಾಸಿಕ ಅಧಿಕೃತ ಭೇಟಿಯಲ್ಲಿ 2025 ರ ಫೆಬ್ರವರಿ 27-28 ರಂದು ಯುರೋಪಿಯನ್ ಯೂನಿಯನ್ ಕಾಲೇಜ್ ಆಫ್ ಕಮಿಷನರ್ಸ್ ಅನ್ನು ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಕರೆತಂದಿದ್ದಾರೆ. ಇದು ಯುರೋಪಿಯನ್ ಖಂಡದ ಹೊರಗೆ  ಕಾಲೇಜ್ ಆಫ್ ಕಮಿಷನರ್ಸ್ (ಆಯುಕ್ತರ ಕಾಲೇಜಿನ ) ಮೊದಲ ಭೇಟಿಯಾಗಿದೆ ಮತ್ತು ಅವರ ಹೊಸ ಜನತಾ ತೀರ್ಪಿನ  ನಂತರ ಹಾಗು ಭಾರತ-ಇಯು ದ್ವಿಪಕ್ಷೀಯ ಸಂಬಂಧಗಳ ಇತಿಹಾಸದಲ್ಲಿ ಇದು ಮೊದಲ ಭೇಟಿಯಾಗಿದೆ.

ವೈವಿಧ್ಯಮಯ ಬಹುತ್ವದ ಸಮಾಜಗಳನ್ನು ಹೊಂದಿರುವ ಎರಡು ಅತಿದೊಡ್ಡ ಪ್ರಜಾಪ್ರಭುತ್ವಗಳು ಮತ್ತು ಮುಕ್ತ ಮಾರುಕಟ್ಟೆ ಆರ್ಥಿಕತೆಗಳಾಗಿ, ಭಾರತ ಮತ್ತು ಇಯು ಶಾಂತಿ ಮತ್ತು ಸ್ಥಿರತೆ, ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಆಧಾರವಾಗಿರುವ ಸ್ಥಿತಿಸ್ಥಾಪಕ ಬಹುಧ್ರುವೀಯ ಜಾಗತಿಕ ಕ್ರಮವನ್ನು ರೂಪಿಸುವಲ್ಲಿ ತಮ್ಮ ಬದ್ಧತೆ ಮತ್ತು ಹಂಚಿಕೆಯ ಆಸಕ್ತಿಯನ್ನು ಒತ್ತಿಹೇಳಿವೆ.

ವಿಶ್ವಸಂಸ್ಥೆಯ ಚಾರ್ಟರ್ ಉದ್ದೇಶಗಳು ಮತ್ತು ತತ್ವಗಳಿಗೆ ಅನುಗುಣವಾಗಿ ಪ್ರಜಾಪ್ರಭುತ್ವ, ಕಾನೂನಿನ ನಿಯಮ ಮತ್ತು ನಿಯಮ ಆಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆ  ಸೇರಿದಂತೆ ಹಂಚಿಕೆಯ ಮೌಲ್ಯಗಳು ಮತ್ತು ತತ್ವಗಳು ಭಾರತ ಮತ್ತು ಇಯು ಅನ್ನು ಸಮಾನ ಮನಸ್ಕ ಮತ್ತು ವಿಶ್ವಾಸಾರ್ಹ ಪಾಲುದಾರರನ್ನಾಗಿ ಮಾಡುತ್ತವೆ ಎಂದು ನಾಯಕರು ಒಪ್ಪಿಕೊಂಡರು. ಜಾಗತಿಕ ಸಮಸ್ಯೆಗಳನ್ನು ಜಂಟಿಯಾಗಿ ಪರಿಹರಿಸಲು, ಸ್ಥಿರತೆಯನ್ನು ಉತ್ತೇಜಿಸಲು ಮತ್ತು ಪರಸ್ಪರ ಸಮೃದ್ಧಿಯನ್ನು ಉತ್ತೇಜಿಸಲು ಭಾರತ-ಇಯು ಕಾರ್ಯತಂತ್ರದ ಸಹಭಾಗಿತ್ವವು ಹಿಂದೆಂದಿಗಿಂತಲೂ ಈಗ ಅಗತ್ಯವಾಗಿದೆ.

ನಿಟ್ಟಿನಲ್ಲಿ, ವ್ಯಾಪಾರ ಮತ್ತು ಪೂರೈಕೆ ಸರಪಳಿಗಳು, ಹೂಡಿಕೆ, ಉದಯೋನ್ಮುಖ ನಿರ್ಣಾಯಕ ತಂತ್ರಜ್ಞಾನಗಳು, ನಾವೀನ್ಯತೆ, ಪ್ರತಿಭೆ, ಡಿಜಿಟಲ್ ಮತ್ತು ಹಸಿರು ಕೈಗಾರಿಕಾ ಪರಿವರ್ತನೆ, ಬಾಹ್ಯಾಕಾಶ ಮತ್ತು ಜಿಯೋಸ್ಪೇಷಿಯಲ್ ಕ್ಷೇತ್ರಗಳು, ರಕ್ಷಣೆ ಮತ್ತು ಜನರ ನಡುವಿನ ಸಂಪರ್ಕಗಳಲ್ಲಿ ಭಾರತ ಮತ್ತು ಯುರೋಪ್ ನಡುವಿನ ಸಹಕಾರವನ್ನು ತೀವ್ರಗೊಳಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಹವಾಮಾನ ಬದಲಾವಣೆ, ಕೃತಕ ಬುದ್ಧಿಮತ್ತೆಯ ಆಡಳಿತ, ಅಭಿವೃದ್ಧಿ ಹಣಕಾಸು ಮತ್ತು ಪರಸ್ಪರ ಅವಲಂಬಿತ ಜಗತ್ತಿನಲ್ಲಿ ಭಯೋತ್ಪಾದನೆ ಸೇರಿದಂತೆ ಸಾಮಾನ್ಯ ಜಾಗತಿಕ ಸವಾಲುಗಳನ್ನು ಎದುರಿಸಲು ಸಹಕರಿಸುವ ಅಗತ್ಯವನ್ನು ಅವರು ಎತ್ತಿ ತೋರಿಸಿದರು.

ವ್ಯಾಪಾರ, ವಿಶ್ವಾಸಾರ್ಹ ತಂತ್ರಜ್ಞಾನ ಮತ್ತು ಹಸಿರು ಪರಿವರ್ತನೆಯನ್ನು ಬೆಸೆಯುವಲ್ಲಿ (ಜಂಕ್ಷನ್ನಿ ನಲ್ಲಿ)  ಆಳವಾದ ಸಹಯೋಗ ಮತ್ತು ಕಾರ್ಯತಂತ್ರದ ಸಮನ್ವಯವನ್ನು ಬೆಳೆಸುವ ನಿಟ್ಟಿನಲ್ಲಿ ಭೇಟಿಯ ಸಮಯದಲ್ಲಿ ನಡೆದ ಭಾರತ-ಇಯು ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿಯ (ಟಿಟಿಸಿ) ಎರಡನೇ ಸಚಿವರ ಸಭೆಯ ಪ್ರಗತಿಯನ್ನು ಉಭಯ ನಾಯಕರು ಸ್ವಾಗತಿಸಿದರು.

ಇಯು ಕಾಲೇಜ್ ಆಫ್ ಕಮಿಶನರ್ಸ್ ( ಆಯುಕ್ತರ ಕಾಲೇಜು)  ಮತ್ತು ಅವರ ಭಾರತೀಯ ಸಹವರ್ತಿ ಸಚಿವರ ನಡುವೆ ನಡೆಸಿದ ಚರ್ಚೆಗಳಿಂದ ಹೊರಹೊಮ್ಮಿದ ನಿರ್ದಿಷ್ಟ ಫಲಿತಾಂಶಗಳನ್ನೂ ಅವರು ಸ್ವಾಗತಿಸಿದರು.
 

ನಾಯಕರು ಕೆಳಗಿನ  ಅಂಶಗಳಿಗೆ  ಬದ್ಧತೆ ವ್ಯಕ್ತಪಡಿಸಿದ್ದಾರೆ:

i. ಭಾರತ, ಇಯು ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳ ಮಹತ್ವ, ಮತ್ತು ಅದರ ಪ್ರಾಮುಖ್ಯತೆಯನ್ನು ಗುರುತಿಸಿ, ವರ್ಷದ ಅವಧಿಯಲ್ಲಿ ಮಾತುಕತೆಗಳನ್ನು/ಒಪ್ಪಂದಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ ಸಮತೋಲಿತ, ಮಹತ್ವಾಕಾಂಕ್ಷೆಯ ಮತ್ತು ಪರಸ್ಪರ ಪ್ರಯೋಜನಕಾರಿ ಎಫ್ ಟಿಎಗಾಗಿ ಮಾತುಕತೆಗಳನ್ನು ಮುಂದುವರಿಸಲು ಆಯಾ ಸಮಾಲೋಚನಾ ತಂಡಗಳಿಗೆ ಕಾರ್ಯ ಜವಾಬ್ದಾರಿ ನೀಡಲಾಯಿತು. ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸಲು ಮತ್ತು ವ್ಯಾಪಾರ ಅಡೆತಡೆಗಳನ್ನು ತೆಗೆದುಹಾಕಲು ವಿಶ್ವಾಸಾರ್ಹ ಪಾಲುದಾರರಾಗಿ ಕೆಲಸ ಮಾಡುವಂತೆ ನಾಯಕರು ಅಧಿಕಾರಿಗಳಿಗೆ ಸೂಚಿಸಿದರು. ಹೂಡಿಕೆ ರಕ್ಷಣೆಯ ಒಪ್ಪಂದ ಮತ್ತು ಭೌಗೋಳಿಕ ಸೂಚಕಗಳ ಒಪ್ಪಂದದ ಬಗ್ಗೆ ಮಾತುಕತೆಗಳನ್ನು ಮುಂದುವರಿಸುವ ಕೆಲಸವನ್ನು ಅವರು ಅವರಿಗೆ ವಹಿಸಿದರು.

ii. ಆರ್ಥಿಕ ಭದ್ರತೆ ಮತ್ತು ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ, ಮಾರುಕಟ್ಟೆ ಪ್ರವೇಶ/ಲಭ್ಯತೆ ಮತ್ತು ವ್ಯಾಪಾರಕ್ಕೆ ಅಡೆತಡೆಗಳು ನಿವಾರಣೆ, ಅರೆವಾಹಕ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು, ವಿಶ್ವಾಸಾರ್ಹ ಮತ್ತು ಸುಸ್ಥಿರ ಕೃತಕ ಬುದ್ಧಿಮತ್ತೆ, ಉನ್ನತ ಕಾರ್ಯಕ್ಷಮತೆಯ ಕಂಪ್ಯೂಟಿಂಗ್, 6 ಜಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ವಿಶ್ವಾಸಾರ್ಹ ಪಾಲುದಾರಿಕೆ ಮತ್ತು ಉದ್ಯಮದ ಮೇಲೆ ಗಮನ ಕೇಂದ್ರೀಕರಿಸಿ ಹಸಿರು ಮತ್ತು ಶುದ್ಧ ಇಂಧನ ತಂತ್ರಜ್ಞಾನಗಳಿಗಾಗಿ ಜಂಟಿ ಸಂಶೋಧನೆ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಫಲಿತಾಂಶ ಆಧಾರಿತ ಸಹಕಾರವನ್ನು ರೂಪಿಸಲು ಭಾರತ-ಇಯು ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿಗೆ ನಿರ್ದೇಶನ ಹಾಗು ಎಲೆಕ್ಟ್ರಿಕ್ ವಾಹನಗಳಿಗೆ (ಇವಿ) ಬ್ಯಾಟರಿಗಳ ಮರುಬಳಕೆ, ಸಮುದ್ರದ ಪ್ಲಾಸ್ಟಿಕ್ ಕಸ ಮತ್ತು ತ್ಯಾಜ್ಯದಿಂದ ಹಸಿರು / ನವೀಕರಿಸಬಹುದಾದ ಹೈಡ್ರೋಜನ್ಗೆ ಸೇರಿದಂತೆ ಕ್ಷೇತ್ರಗಳಾದ್ಯಂತ ಸಂಪರ್ಕಗಳ ಅಭಿವೃದ್ಧಿ. ಈ ನಿಟ್ಟಿನಲ್ಲಿ, ಅರೆವಾಹಕ ಪೂರೈಕೆ ಸರಪಳಿಗಳನ್ನು ಹೆಚ್ಚಿಸಲು, ಪೂರಕ ಸಾಮರ್ಥ್ಯಗಳನ್ನು ಬಳಸಿಕೊಳ್ಳಲು, ಪ್ರತಿಭಾ ವಿನಿಮಯಕ್ಕೆ ಅನುಕೂಲ ಕಲ್ಪಿಸಲು ಮತ್ತು ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರಲ್ಲಿ ಅರೆವಾಹಕ ಕೌಶಲ್ಯಗಳನ್ನು ಬೆಳೆಸಲು ಅರೆವಾಹಕಗಳ ಕುರಿತ ತಿಳಿವಳಿಕೆ ಒಪ್ಪಂದದ ಅನುಷ್ಠಾನದ ಪ್ರಗತಿಯನ್ನು ಅವರು ಸ್ವಾಗತಿಸಿದರು; ಜೊತೆಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ದೂರಸಂಪರ್ಕ ಮತ್ತು ಸ್ಥಿತಿಸ್ಥಾಪಕತ್ವದ ಪೂರೈಕೆ ಸರಪಳಿಗಳನ್ನು ರಚಿಸಲು ಭಾರತ್ 6 ಜಿ ಮೈತ್ರಿ ಮತ್ತು ಇಯು 6 ಜಿ ಸ್ಮಾರ್ಟ್ ನೆಟ್ ವರ್ಕ್ಸ್ ಮತ್ತು ಸರ್ವೀಸಸ್ ಇಂಡಸ್ಟ್ರಿ ಅಸೋಸಿಯೇಷನ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

iii. ಸಂಪರ್ಕ, ಶುದ್ಧ ಇಂಧನ ಮತ್ತು ಹವಾಮಾನ, ನೀರು, ಸ್ಮಾರ್ಟ್ ಮತ್ತು ಸುಸ್ಥಿರ ನಗರೀಕರಣ ಮತ್ತು ವಿಪತ್ತು ನಿರ್ವಹಣೆ ಕ್ಷೇತ್ರಗಳಲ್ಲಿ ಭಾರತ-ಇಯು ಸಹಭಾಗಿತ್ವದ ಅಡಿಯಲ್ಲಿ ಸಹಕಾರವನ್ನು ಮತ್ತಷ್ಟು ವಿಸ್ತರಿಸುವುದು ಮತ್ತು ಆಳಗೊಳಿಸುವುದು ಹಾಗು ಶುದ್ಧ ಜಲಜನಕ, ಕಡಲ ತಟದ ಪವನ ಶಕ್ತಿ,  ಸೌರ ಶಕ್ತಿ, ಸುಸ್ಥಿರ ನಗರ ಚಲನಶೀಲತೆ, ವಾಯುಯಾನ ಮತ್ತು ರೈಲ್ವೆಯಂತಹ ನಿರ್ದಿಷ್ಟ ಕ್ಷೇತ್ರಗಳಲ್ಲಿ ಸಹಕಾರವನ್ನು ತೀವ್ರಗೊಳಿಸಲು ಕೆಲಸ ಮಾಡುವುದು. ಈ ನಿಟ್ಟಿನಲ್ಲಿ, ಭಾರತ-ಇಯು ಹಸಿರು ಹೈಡ್ರೋಜನ್ ಫೋರಂ ಮತ್ತು ಕಡಲ ಪವನ ಇಂಧನ ಕುರಿತ ಭಾರತ-ಇಯು ವ್ಯಾಪಾರ ಶೃಂಗಸಭೆಯನ್ನು ನಡೆಸುವ ಒಪ್ಪಂದವನ್ನು ಅವರು ಸ್ವಾಗತಿಸಿದರು.
iv. ಇಯು ಕಮಿಶನರುಗಳು (ಆಯುಕ್ತರು)  ಮತ್ತು ಭಾರತೀಯ ಮಂತ್ರಿಗಳ ನಡುವಿನ ದ್ವಿಪಕ್ಷೀಯ ಚರ್ಚೆಗಳ ಸಂದರ್ಭದಲ್ಲಿ ಗುರುತಿಸಲಾದ ಸಹಕಾರದ ಹೊಸ ನಿರ್ದಿಷ್ಟ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವುದು, ಇದು ಪರಸ್ಪರ ಪ್ರಗತಿಯನ್ನು ಹೆಚ್ಚಿಸಲು ಭವಿಷ್ಯದ ಜಂಟಿ ಕಾರ್ಯತಂತ್ರದ ಕಾರ್ಯಸೂಚಿಯಲ್ಲಿ ಪ್ರತಿಬಿಂಬಿತವಾಗಲಿದೆ.

v. ಹೊಸದಿಲ್ಲಿಯಲ್ಲಿ ನಡೆದ ಜಿ 20 ನಾಯಕರ ಶೃಂಗಸಭೆಯಲ್ಲಿ ಘೋಷಿಸಲಾದ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ) ಸಾಕಾರಕ್ಕಾಗಿ ದೃಢವಾದ ಕ್ರಮಗಳನ್ನು ಕೈಗೊಳ್ಳುವುದು, ಅಂತರರಾಷ್ಟ್ರೀಯ ಸೌರ ಒಕ್ಕೂಟ (ಐಎಸ್ಎ), ವಿಪತ್ತು ಸ್ಥಿತಿಸ್ಥಾಪಕತ್ವದ ಮೂಲಸೌಕರ್ಯ ಒಕ್ಕೂಟ (ಸಿಡಿಆರ್ಐ), ಕೈಗಾರಿಕಾ ಪರಿವರ್ತನೆಗಾಗಿ ನಾಯಕತ್ವ ಗುಂಪು (ಲೀಡ್ಐಟಿ 2.0) ಮತ್ತು ಜಾಗತಿಕ ಜೈವಿಕ ಇಂಧನ ಮೈತ್ರಿಯ ಚೌಕಟ್ಟಿನಲ್ಲಿ ತಮ್ಮ ಸಹಕಾರವನ್ನು ಆಳಗೊಳಿಸುವುದು.

vi. ವಿಶೇಷವಾಗಿ ಉನ್ನತ ಶಿಕ್ಷಣ, ಸಂಶೋಧನೆ, ಪ್ರವಾಸೋದ್ಯಮ, ಸಂಸ್ಕೃತಿ, ಕ್ರೀಡೆ ಮತ್ತು ಯುವಜನರ ನಡುವೆ ಹಾಗು ಜನರ ನಡುವಿನ ಸಂಬಂಧವನ್ನು ಬಲಪಡಿಸುವುದು ಮತ್ತು ಅಂತಹ ವಿನಿಮಯವನ್ನು ಹೆಚ್ಚಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು. ಭಾರತದ ಬೆಳೆಯುತ್ತಿರುವ ಮಾನವ ಬಂಡವಾಳವನ್ನು ಗಮನದಲ್ಲಿಟ್ಟುಕೊಂಡು ಮತ್ತು ಇಯು ಸದಸ್ಯ ರಾಷ್ಟ್ರಗಳ ಜನಸಂಖ್ಯಾ ಪ್ರೊಫೈಲ್ ಮತ್ತು ಕಾರ್ಮಿಕ ಮಾರುಕಟ್ಟೆ ಅಗತ್ಯಗಳನ್ನು ಗಣನೆಗೆ ತೆಗೆದುಕೊಂಡು ನುರಿತ ಉದ್ಯೋಗಿಗಳು ಮತ್ತು ವೃತ್ತಿಪರರ ಕ್ಷೇತ್ರಗಳಲ್ಲಿ ಕಾನೂನುಬದ್ಧ, ಸುರಕ್ಷಿತ ಮತ್ತು ಕ್ರಮಬದ್ಧ ವಲಸೆಯನ್ನು ಉತ್ತೇಜಿಸುವುದು.

ಅಂತಾರಾಷ್ಟ್ರೀಯ ಕಾನೂನಿನ ಮೇಲೆ ರೂಪಿಸಲಾದ ಮುಕ್ತ, ಶಾಂತಿಯುತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಅನ್ನು ಉತ್ತೇಜಿಸುವ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು ಮತ್ತು ಸಾರ್ವಭೌಮತ್ವಕ್ಕೆ ಪರಸ್ಪರ ಗೌರವ ಮತ್ತು ಪರಿಣಾಮಕಾರಿ ಪ್ರಾದೇಶಿಕ ಸಂಸ್ಥೆಗಳ ಬೆಂಬಲದೊಂದಿಗೆ ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸುವ ಬಗ್ಗೆ ನಾಯಕರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಇಂಡೋ-ಪೆಸಿಫಿಕ್ ಸಾಗರ ಉಪಕ್ರಮ (ಐಪಿಒಐ) ಕ್ಕೆ ಇಯು ಸೇರ್ಪಡೆಗೊಳ್ಳುವುದನ್ನು ಭಾರತ ಸ್ವಾಗತಿಸಿತು. ಆಫ್ರಿಕಾ ಮತ್ತು ಇಂಡೋ-ಪೆಸಿಫಿಕ್ ಸೇರಿದಂತೆ ತ್ರಿಪಕ್ಷೀಯ ಸಹಕಾರವನ್ನು ಅನ್ವೇಷಿಸಲು ಎರಡೂ ಕಡೆಯವರು ಬದ್ಧರಾಗಿದ್ದಾರೆ.

ಭಾರತೀಯ ನೌಕಾಪಡೆ ಮತ್ತು ಇಯು ಕಡಲ ಭದ್ರತಾ ಘಟಕಗಳ ನಡುವಿನ ಜಂಟಿ ಸಮರಾಭ್ಯಾಸ ಮತ್ತು ಸಹಯೋಗ ಸೇರಿದಂತೆ ರಕ್ಷಣಾ ಮತ್ತು ಭದ್ರತಾ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸಹಕಾರದ ಬಗ್ಗೆ ಇಬ್ಬರೂ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಇಯುನ ಶಾಶ್ವತ ರಚನಾತ್ಮಕ ಸಹಕಾರ (ಪೆಸ್ಕೊ) ಅಡಿಯಲ್ಲಿ ಯೋಜನೆಗಳಿಗೆ ಸೇರಲು ಮತ್ತು ಮಾಹಿತಿಯ ಭದ್ರತೆ ಒಪ್ಪಂದಕ್ಕಾಗಿ (ಎಸ್ಒಐಎ) ಮಾತುಕತೆಗಳಲ್ಲಿ ತೊಡಗಿಸಿಕೊಳ್ಳಲು ಭಾರತದ ಆಸಕ್ತಿಯನ್ನು ಇಯು ಕಡೆಯವರು ಸ್ವಾಗತಿಸಿದರು. ಭದ್ರತೆ ಮತ್ತು ರಕ್ಷಣಾ ಪಾಲುದಾರಿಕೆಯನ್ನು ಅನ್ವೇಷಿಸಲು ನಾಯಕರು ಬದ್ಧರಾಗಿದ್ದಾರೆ. ವ್ಯಾಪಾರ ಮತ್ತು ಸಮುದ್ರ ಮಾರ್ಗಗಳನ್ನು ರಕ್ಷಿಸಲು ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಬೆದರಿಕೆಗಳನ್ನು ನಿಭಾಯಿಸುವ ಮೂಲಕ ಕಡಲ ಭದ್ರತೆ ಸೇರಿದಂತೆ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಭಯೋತ್ಪಾದನೆ ನಿಗ್ರಹದಲ್ಲಿ ಸಹಯೋಗವನ್ನು ಆಳಗೊಳಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು ಮತ್ತು ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಹಣಕಾಸು ಸೇರಿದಂತೆ ಭಯೋತ್ಪಾದನೆಯನ್ನು ಎದುರಿಸಲು ಅಂತರರಾಷ್ಟ್ರೀಯ ಸಹಕಾರವನ್ನು ಸಮಗ್ರ ಮತ್ತು ಸುಸ್ಥಿರ ರೀತಿಯಲ್ಲಿ ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಇಬ್ಬರೂ ನಾಯಕರು ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ಮತ್ತು ಉಕ್ರೇನ್ ಯುದ್ಧ ಸೇರಿದಂತೆ ಪ್ರಮುಖ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚಿಸಿದರು. ಅಂತರರಾಷ್ಟ್ರೀಯ ಕಾನೂನು, ಯುಎನ್ ಚಾರ್ಟರ್ ತತ್ವಗಳು ಮತ್ತು ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸುವ ಆಧಾರದ ಮೇಲೆ ಉಕ್ರೇನ್ ನಲ್ಲಿ ನ್ಯಾಯಯುತ ಮತ್ತು ಶಾಶ್ವತ ಶಾಂತಿಗೆ ಅವರು ಬೆಂಬಲ ವ್ಯಕ್ತಪಡಿಸಿದರು. ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಮಾನ್ಯತೆ ಪಡೆದ ಗಡಿಯೊಳಗೆ ಶಾಂತಿ ಮತ್ತು ಭದ್ರತೆಯಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಜೊತೆಯಾಗಿ ವಾಸಿಸುವ ದ್ವಿ-ರಾಷ್ಟ್ರ ಪರಿಹಾರದ ದೃಷ್ಟಿಕೋನಕ್ಕೆ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಫಲಪ್ರದ ಮತ್ತು ಮುಂದಾಲೋಚನೆಯ ಸ್ವರೂಪದ ಮಾತುಕತೆ/ಚರ್ಚೆಗಳನ್ನು ನಾಯಕರು ಗುರುತಿಸಿದರು ಮತ್ತು ಕೆಳಗಿನ ದೃಢವಾದ ಕ್ರಮಗಳಿಗೆ ಸಮ್ಮತಿಸಿದರು:
 

(i) ವರ್ಷದ ಅಂತ್ಯದ ವೇಳೆಗೆ ಎಫ್ ಟಿಎ ಮುಕ್ತಾಯವನ್ನು ತ್ವರಿತಗೊಳಿಸುವುದು.

(ii) ಹೊಸ ಉಪಕ್ರಮಗಳು ಮತ್ತು ಕಾರ್ಯಕ್ರಮಗಳಿಂದ ಅವಕಾಶಗಳನ್ನು ಅನ್ವೇಷಿಸಲು ರಕ್ಷಣಾ ಉದ್ಯಮ ಮತ್ತು ನೀತಿಯ ಬಗ್ಗೆ ಮತ್ತಷ್ಟು ಗಮನ ಕೇಂದ್ರೀಕೃತ ಚರ್ಚೆಗಳು.

(iii) ಐಎಂಇಸಿ ಉಪಕ್ರಮದ ಬಗ್ಗೆ ಮಾಹಿತಿ ಪಡೆಯಲು ಪಾಲುದಾರರೊಂದಿಗೆ ಪರಿಶೀಲನಾ ಸಭೆ.
(iv) ಹಂಚಿಕೆಯ ಮೌಲ್ಯಮಾಪನ, ಸಮನ್ವಯ ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಕಡಲ ಡೊಮೇನ್ ಜಾಗೃತಿಯಲ್ಲಿ ತೊಡಗಿಸಿಕೊಳ್ಳುವಿಕೆ.

(v) ಅರೆವಾಹಕಗಳು ಮತ್ತು ಇತರ ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ಆಳಗೊಳಿಸಲು ಟಿಟಿಸಿಯ ಮುಂದಿನ ಸಭೆಯನ್ನು ಶೀಘ್ರದಲ್ಲೇ ಕರೆಯುವುದು.

(vi) ಹಸಿರು ಜಲಜನಕದ ಮೇಲೆ ಗಮನ ಕೇಂದ್ರೀಕರಿಸಿ ಸರ್ಕಾರಗಳು ಮತ್ತು ಕೈಗಾರಿಕೆಗಳ ನಡುವೆ ಶುದ್ಧ ಮತ್ತು ಹಸಿರು ಇಂಧನದ ಕುರಿತು ಸಂವಾದವನ್ನು ಹೆಚ್ಚಿಸುವುದು.
(vii) ತ್ರಿಪಕ್ಷೀಯ ಸಹಕಾರ ಯೋಜನೆಗಳು ಸೇರಿದಂತೆ ಇಂಡೋ-ಪೆಸಿಫಿಕ್ ನಲ್ಲಿ ಸಹಯೋಗವನ್ನು ಬಲಪಡಿಸುವುದು.

(viii) ಸನ್ನದ್ಧತೆ, ಪ್ರತಿಕ್ರಿಯೆ ಸಾಮರ್ಥ್ಯ ಮತ್ತು ಸಮನ್ವಯಕ್ಕಾಗಿ ನೀತಿ ಹಾಗು ತಾಂತ್ರಿಕ ಮಟ್ಟದ ತೊಡಗಿಸಿಕೊಳ್ಳುವಿಕೆ ಸೇರಿದಂತೆ ಸೂಕ್ತ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ವಿಪತ್ತು ನಿರ್ವಹಣೆಯಲ್ಲಿ ಸಹಕಾರವನ್ನು ಬಲಪಡಿಸುವುದು.

ಮಹತ್ವದ ಭೇಟಿಯು ಸಂಬಂಧಗಳ ಇತಿಹಾಸದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ ಎಂಬ ವಿಶ್ವಾಸವನ್ನು ಇಬ್ಬರೂ ನಾಯಕರು ವ್ಯಕ್ತಪಡಿಸಿದರು ಮತ್ತು ಭಾರತ-ಇಯು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸುವ ಹಾಗು ಆಳಗೊಳಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಮುಂದಿನ ಭಾರತ ಇಯು ಶೃಂಗಸಭೆಯನ್ನು ಪರಸ್ಪರ ಅನುಕೂಲಕರ ಸಮಯದಲ್ಲಿ ಭಾರತದಲ್ಲಿ ಆಯೋಜಿಸಲು ಮತ್ತು ಸಂದರ್ಭದಲ್ಲಿ ಹೊಸ ಜಂಟಿ ಕಾರ್ಯತಂತ್ರದ ಕಾರ್ಯಸೂಚಿಯನ್ನು ಅಳವಡಿಸಿಕೊಳ್ಳುವುದನ್ನು ಎದುರು ನೋಡುವುದಾಗಿ ಅವರು ಹೇಳಿದರು.  ಅಧ್ಯಕ್ಷರಾದ ವಾನ್ ಡೆರ್ ಲೆಯೆನ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆತ್ಮೀಯ ಆತಿಥ್ಯಕ್ಕೆ ಧನ್ಯವಾದ ಅರ್ಪಿಸಿದರು.

 

*****