ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ನಾಗರಿಕ ಸೇವೆಗಳ ಸಾಮರ್ಥ್ಯ ವೃದ್ಧಿಯ ರಾಷ್ಟ್ರೀಯ ಕಾರ್ಯಕ್ರಮಕ್ಕೆ (ಎನ್‌ಪಿಸಿಎಸ್‌ಸಿಬಿ) ಅನುಮೋದನೆ ನೀಡಿದೆ. ಕಾರ್ಯಕ್ರಮಕ್ಕೆ ಈ ಕೆಳಗಿನ ಸಾಂಸ್ಥಿಕ ಚೌಕಟ್ಟುಗಳನ್ನು ರೂಪಿಸಲಾಗಿದೆ:
(i) ಪ್ರಧಾನಿ ನೇತೃತ್ವದ ಸಾರ್ವಜನಿಕ ಮಾನವ ಸಂಪನ್ಮೂಲ ಮಂಡಳಿ
(ii) ಸಾಮರ್ಥ್ಯ ವೃದ್ಧಿ ಆಯೋಗ
(iii) ಡಿಜಿಟಲ್ ಸ್ವತ್ತುಗಳನ್ನು ಹೊಂದಲು ಮತ್ತು ನಿರ್ವಹಿಸಲು ವಿಶೇಷ ಉದ್ದೇಶದ ಘಟಕ
ಮತ್ತು ಆನ್‌ಲೈನ್ ತರಬೇತಿಗಾಗಿ ತಾಂತ್ರಿಕ ವೇದಿಕೆ
(iv) ಸಂಪುಟ ಕಾರ್ಯದರ್ಶಿ ನೇತೃತ್ವದ ಸಮನ್ವಯ ಘಟಕ
ಪ್ರಮುಖ ಅಂಶಗಳು
ನಾಗರಿಕ ಸೇವೆಯ ಅಧಿಕಾರಿಗಳು ಭಾರತೀಯ ಸಂಸ್ಕೃತಿ ಮತ್ತು ಸಂವೇದನೆಗಳನ್ನು ಹೊಂದಿರಲು ಮತ್ತು ತಮ್ಮ ಬೇರುಗಳೊಂದಿಗೆ ಸಂಪರ್ಕ ಇಟ್ಟುಕೊಂಡೇ ವಿಶ್ವದಾದ್ಯಂತದ ಅತ್ಯುತ್ತಮ ಸಂಸ್ಥೆಗಳು ಮತ್ತು ಅಭ್ಯಾಸಗಳಿಂದ ಕಲಿಯುವಂತೆ ಅವರ ಸಾಮರ್ಥ್ಯ ವೃದ್ಧಿಗೆ ಅಡಿಪಾಯ ಹಾಕಲು ಎನ್‌ಪಿಸಿಎಸ್‌ಸಿಬಿಯನ್ನು ವಿನ್ಯಾಸಗೊಳಿಸಲಾಗಿದೆ. iGOTKarmayogi – ಸಂಯೋಜಿತ ಸರ್ಕಾರಿ ಆನ್‌ಲೈನ್ ತರಬೇತಿ ವೇದಿಕೆಯನ್ನು ಸ್ಥಾಪಿಸುವ ಮೂಲಕ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು. ಕಾರ್ಯಕ್ರಮದ ಪ್ರಮುಖ ಮಾರ್ಗಸೂಚಿಗಳು ಹೀಗಿವೆ:
1. ‘ನಿಯಮಾಧಾರಿತ’ ದಿಂದ ‘ಪಾತ್ರಾಧಾರಿತ’ ಮಾನವ ಸಂಪನ್ಮೂಲ ನಿರ್ವಹಣೆಯ ಪರಿವರ್ತನೆಯನ್ನು ಬೆಂಬಲಿಸುವುದು. ಹುದ್ದೆಯ ಅವಶ್ಯಕತೆಗಳಿಗೆ ತಕ್ಕ ಸಾಮರ್ಥ್ಯವನ್ನು ಆಧರಿಸಿ ಕೆಲಸವನ್ನು ನಿಗದಿಪಡಿಸುವುದು.
2. ‘ಆಫ್-ಸೈಟ್’ಕಲಿಕೆಗೆ ಪೂರಕವಾಗಿ ‘ಆನ್-ಸೈಟ್ ಕಲಿಕೆಗೆ’ ಒತ್ತು ನೀಡುವುದು.
3. ಕಲಿಕಾ ಸಾಮಗ್ರಿಗಳು, ಸಂಸ್ಥೆಗಳು ಮತ್ತು ಸಿಬ್ಬಂದಿ ಸೇರಿದಂತೆ ಹಂಚಿಕೆಯ ತರಬೇತಿ ಮೂಲಸೌಕರ್ಯಗಳ ವ್ಯವಸ್ಥೆಯನ್ನು ಸೃಷ್ಟಿಸುವುದು.
4. ಎಲ್ಲಾ ನಾಗರಿಕ ಸೇವೆಯ ಹುದ್ದೆಗಳನ್ನು ಪಾತ್ರಗಳು, ಚಟುವಟಿಕೆಗಳು ಮತ್ತು ಸಾಮರ್ಥ್ಯಗಳ (ಎಫ್‌ಆರ್‌ಎಸಿ) ವಿಧಾನದ ಮಾಪನಾಂಕದಲ್ಲಿ ನಿರ್ಣಯಿಸುವುದು ಮತ್ತು ಪ್ರತಿ ಸರ್ಕಾರಿ ಘಟಕದಲ್ಲಿ ಗುರುತಿಸಲಾದ ಎಫ್‌ಆರ್‌ಎಸಿಗಳಿಗೆ ಸಂಬಂಧಿಸಿದ ಕಲಿಕಾ ವಿಷಯವನ್ನು ರೂಪಿಸುವುದು ಮತ್ತು ತಲುಪಿಸುವುದು.
5. ನಾಗರಿಕ ಸೇವೆಯ ಎಲ್ಲರಿಗೂ ಸ್ವಯಂ-ಚಾಲಿತ ಮತ್ತು ಕಡ್ಡಾಯ ಕಲಿಕೆಯಲ್ಲಿ ಅವರ ವರ್ತನೆ, ಕ್ರಿಯಾತ್ಮಕತೆ ಮತ್ತು ಸಾಮರ್ಥ್ಯಗಳನ್ನು ನಿರಂತರವಾಗಿ ವೃದ್ಧಿಸಿಕೊಳ್ಳಲು ಮತ್ತು ಬಲಪಡಿಸಿಕೊಳ್ಳಲು ಅವಕಾಶ ಒದಗಿಸುವುದು.
6. ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು ಮತ್ತು ಅವುಗಳ ಸಂಸ್ಥೆಗಳು ತಮ್ಮ ಸಂಪನ್ಮೂಲಗಳನ್ನು ಸಹ-ಸೃಷ್ಟಿಗೆ ನೇರವಾಗಿ ಹೂಡಿಕೆ ಮಾಡಲು ಮತ್ತು ಪ್ರತಿ ಉದ್ಯೋಗಿಗೆ ವಾರ್ಷಿಕ ಹಣಕಾಸು ಚಂದಾ ಮೂಲಕ ಕಲಿಕೆಯ ಸಹಕಾರಿ ಮತ್ತು ಸಾಮಾನ್ಯ ವ್ಯವಸ್ಥೆಯನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುವುದು.
7. ಸಾರ್ವಜನಿಕ ತರಬೇತಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸ್ಟಾರ್ಟ್ ಅಪ್ ಗಳು ಮತ್ತು ವೈಯಕ್ತಿಕ ತಜ್ಞರು ಸೇರಿದಂತೆ ಅತ್ಯುತ್ತಮವಾದ ಕಲಿಕೆಯ ವಿಷಯ ರಚನೆಕಾರರನ್ನು ಪ್ರೋತ್ಸಾಹಿಸುವುದು ಮತ್ತು ಅವರೊಂದಿಗೆ ಸಹಭಾಗಿತ್ಮ ಮಾಡಿಕೊಳ್ಳುವುದು.
8. iGOT- Karmayogi ಒದಗಿಸಿದ ದತ್ತಾಂಶ ವಿಶ್ಲೇಷಣೆ, ಸಾಮರ್ಥ್ಯ ವೃದ್ಧಿ, ವಿಷಯ ರಚನೆ, ಬಳಕೆದಾರರ ಪ್ರತಿಕ್ರಿಯೆ ಮತ್ತು ಸಾಮರ್ಥ್ಯಗಳ ಮ್ಯಾಪಿಂಗ್ ಮತ್ತು ನೀತಿ ಸುಧಾರಣೆಗಳ ಕ್ಷೇತ್ರಗಳನ್ನು ಗುರುತಿಸುವುದು.
ಉದ್ದೇಶಗಳು
ಸಹಕಾರಿ ಮತ್ತು ಸಹ-ಹಂಚಿಕೆ ಆಧಾರದ ಮೇಲೆ ಸಾಮರ್ಥ್ಯ ವೃದ್ಧಿ ಪರಿಸರ ವ್ಯವಸ್ಥೆಯನ್ನು ನಿರ್ವಹಿಸಲು ಮತ್ತು ನಿಯಂತ್ರಿಸಲು ಏಕರೂಪದ ವಿಧಾನವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಸಾಮರ್ಥ್ಯ ವೃದ್ಧಿ ಆಯೋಗವನ್ನು ಸ್ಥಾಪಿಸಲು ಸಹ ಉದ್ದೇಶಿಸಲಾಗಿದೆ.
ಆಯೋಗದ ಪಾತ್ರವು ಹೀಗಿರುತ್ತದೆ:
· ವಾರ್ಷಿಕ ಸಾಮರ್ಥ್ಯ ವೃದ್ಧಿ ಯೋಜನೆಗಳನ್ನು ಅನುಮೋದಿಸುವಲ್ಲಿ ಪ್ರಧಾನಿ ಸಾರ್ವಜನಿಕ ಮಾನವ ಸಂಪನ್ಮೂಲ ಮಂಡಳಿಗೆ ನೆರವಾಗುವುದು.
· ನಾಗರಿಕ ಸೇವೆಗಳ ಸಾಮರ್ಥ್ಯವನ್ನು ಹೆಚ್ಚಿಸುವ ಎಲ್ಲಾ ಕೇಂದ್ರೀಯ ತರಬೇತಿ ಸಂಸ್ಥೆಗಳ ಮೇಲ್ವಿಚಾರಣೆ ಮಾಡುವುದು.
· ಆಂತರಿಕ ಮತ್ತು ಬಾಹ್ಯ ಬೋಧಕ ವರ್ಗ ಮತ್ತು ಸಂಪನ್ಮೂಲ ಕೇಂದ್ರಗಳನ್ನು ಒಳಗೊಂಡಂತೆ ಹಂಚಿಕೆಯ ಕಲಿಕಾ ಸಂಪನ್ಮೂಲಗಳನ್ನು ಸೃಷ್ಟಿಸುವುದು.
· ಪಾಲುದಾರ ಇಲಾಖೆಗಳೊಂದಿಗೆ ಸಾಮರ್ಥ್ಯ ವೃದ್ಧಿ ಯೋಜನೆಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆ.
· ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ, ಬೋಧನೆ ಮತ್ತು ವಿಧಾನದ ಗುಣಮಟ್ಟದ ಬಗ್ಗೆ ಶಿಫಾರಸುಗಳನ್ನು ಮಾಡುವುದು.
· ಎಲ್ಲಾ ನಾಗರಿಕ ಸೇವೆಗಳಲ್ಲಿ ಸಾಮಾನ್ಯ ವೃತ್ತಿಜೀವನದ ತರಬೇತಿ ಕಾರ್ಯಕ್ರಮಗಳಿಗೆ ನಿಯಮಗಳನ್ನು ನಿಗದಿಪಡಿಸುವುದು.
· ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಸಾಮರ್ಥ್ಯ ವೃದ್ಧಿ ಕ್ಷೇತ್ರಗಳಲ್ಲಿ ಅಗತ್ಯವಾದ ನೀತಿ ನಿರೂಪಣೆಗಳನ್ನು ಸರ್ಕಾರಕ್ಕೆ ಸೂಚಿಸುವುದು.
iGOT-Karmayogi ವೇದಿಕೆಯು ಭಾರತದಲ್ಲಿ ಎರಡು ಕೋಟಿ ಅಧಿಕಾರಿಗಳ ಸಾಮರ್ಥ್ಯ ವೃದ್ಧಿಗೆ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಹೊಂದಲಿದೆ. ಈ ವೇದಿಕೆಯು ಕಲಿಕೆಯ ವಿಷಯಕ್ಕಾಗಿ ಒಂದು ರೋಮಾಂಚಕ ಮತ್ತು ವಿಶ್ವ ದರ್ಜೆಯ ಮಾರುಕಟ್ಟೆ ಸ್ಥಳವಾಗಿ ವಿಕಸನಗೊಳ್ಳುವ ನಿರೀಕ್ಷೆಯಿದೆ. ಸಾಮರ್ಥ್ಯವನ್ನು ವೃದ್ಧಿಯ ಜೊತೆಗೆ, ಪ್ರೊಬೇಷನರಿ ಅವಧಿಯ ನಂತರ ದೃಢೀಕರಣ, ನಿಯೋಜನೆ, ಕೆಲಸದ ಹಂಚಿಕೆ ಮತ್ತು ಖಾಲಿ ಹುದ್ದೆಗಳ ಅಧಿಸೂಚನೆ ಮುಂತಾದ ಸೇವಾ ವಿಷಯಗಳು ಅಂತಿಮವಾಗಿ ಪ್ರಸ್ತಾವಿತ ಸಾಮರ್ಥ್ಯದ ಚೌಕಟ್ಟಿನೊಂದಿಗೆ ಸಂಯೋಜಿಸಲ್ಪಡುತ್ತವೆ.
ಮಿಷನ್ ಕರ್ಮಯೋಗಿಯು ಭಾರತೀಯ ನಾಗರಿಕ ಸೇವೆಯ ಅಧಿಕಾರಿಗಳನ್ನು ಹೆಚ್ಚು ಸೃಜನಶೀಲ, ರಚನಾತ್ಮಕ, ಕಾಲ್ಪನಿಕ, ಸಕ್ರಿಯ, ವೃತ್ತಿಪರ, ಪ್ರಗತಿಪರ, ಶಕ್ತಿಯುತ, ಪಾರದರ್ಶಕ ಮತ್ತು ತಂತ್ರಜ್ಞಾನ-ಶಕ್ತಗೊಳಿಸುವ ಮೂಲಕ ಅವರನ್ನು ಭವಿಷ್ಯಕ್ಕಾಗಿ ಸಿದ್ಧಪಡಿಸುವ ಗುರಿ ಹೊಂದಿದೆ. ನಿರ್ದಿಷ್ಟ ಪಾತ್ರ-ಸಾಮರ್ಥ್ಯಗಳೊಂದಿಗೆ ಶಕ್ತರಾದ ನಾಗರಿಕ ಸೇವೆಯ ಅಧಿಕಾರಿಗಳು ಗುಣಮಟ್ಟದ ಸಮರ್ಥ ಸೇವೆ ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.
ಹಣಕಾಸಿನ ಪರಿಣಾಮಗಳು
ಸುಮಾರು 46 ಲಕ್ಷ ಕೇಂದ್ರ ಸರ್ಕಾರಿ ನೌಕರರನ್ನು ಒಳಗೊಳ್ಳಲು, 2020-21 ರಿಂದ 2024-25ರವರೆಗಿನ 5 ವರ್ಷಗಳ ಅವಧಿಯಲ್ಲಿ 510.86 ಕೋಟಿ ರೂ. ವೆಚ್ಚ ಮಾಡಲಾಗುವುದು. ಕಂಪೆನಿ ಕಾಯ್ದೆ, 2013 ರ ಸೆಕ್ಷನ್ 8 ರ ಅಡಿಯಲ್ಲಿ ಎನ್‌ಪಿಸಿಎಸ್‌ಸಿಬಿಗೆ ಸಂಪೂರ್ಣ ಸ್ವಾಮ್ಯದ ವಿಶೇಷ ಉದ್ದೇಶದ ವಾಹಕವನ್ನು (ಎಸ್‌ಪಿವಿ) ಸ್ಥಾಪಿಸಲಾಗುವುದು. ಎಸ್‌ಪಿವಿಯು “ಲಾಭರಹಿತ” ಕಂಪನಿಯಾಗಿರುತ್ತದೆ ಮತ್ತು iGOT-Karmayogi ವೇದಿಕೆಯನ್ನು ಹೊಂದಿರುತ್ತದೆ ಮತ್ತು ಅದನ್ನು ನಿರ್ವಹಿಸುತ್ತದೆ. ಎಸ್‌ಪಿವಿ ವಿಷಯ ಮೌಲ್ಯಮಾಪನ, ಸ್ವತಂತ್ರ ಮೌಲ್ಯಮಾಪನಗಳು ಮತ್ತು ಟೆಲಿಮೆಟ್ರಿ ಡೇಟಾ ಲಭ್ಯತೆಗೆ ಸಂಬಂಧಿಸಿದ ಐಗೋಟ್-ಕರ್ಮಯೋಗಿಪ್ಲಾಟ್‌ಫಾರ್ಮ್‌ನ ಪ್ರಮುಖ ವ್ಯಾಪಾರ ಸೇವೆಗಳನ್ನು ಸೃಷ್ಟಿಸುತ್ತದೆ ಮತ್ತು ನಿರ್ವಹಿಸುತ್ತದೆ. ಎಸ್‌ಪಿವಿಯು ಭಾರತ ಸರ್ಕಾರದ ಪರವಾಗಿ ಎಲ್ಲಾ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಹೊಂದಲಿದೆ. ಪ್ರಮುಖ ಕಾರ್ಯಕ್ಷಮತೆ ಸೂಚಕಗಳ ಡ್ಯಾಶ್‌ಬೋರ್ಡ್ ವೀಕ್ಷಣೆಯನ್ನು ಸೃಷ್ಟಿಸಲು ಐಜಿಒಟಿ-ಕರ್ಮಯೋಗಿ ಪ್ಲಾಟ್‌ಫಾರ್ಮ್‌ನ ಎಲ್ಲಾ ಬಳಕೆದಾರರ ಕಾರ್ಯಕ್ಷಮತೆ ಮೌಲ್ಯಮಾಪನಕ್ಕಾಗಿ ಸೂಕ್ತವಾದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಚೌಕಟ್ಟನ್ನು ರೂಪಿಸಲಾಗುವುದು.
ಹಿನ್ನೆಲೆ
ನಾಗರಿಕ ಸೇವೆ ಅಧಿಖಾರಿಗಳ ಸಾಮರ್ಥ್ಯವು ವಿವಿಧ ರೀತಿಯ ಸೇವೆಗಳನ್ನು ಒದಗಿಸಲು, ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮತ್ತು ಪ್ರಮುಖ ಆಡಳಿತ ಕಾರ್ಯಗಳನ್ನು ನಿರ್ವಹಿಸಲು ಪ್ರಮುಖ ಪಾತ್ರ ವಹಿಸುತ್ತದೆ. ನಾಗರಿಕ ಸೇವಾ ಸಾಮರ್ಥ್ಯದಲ್ಲಿನ ಪರಿವರ್ತಕ ಬದಲಾವಣೆಯು ಕೆಲಸದ ಸಂಸ್ಕೃತಿಯಲ್ಲಿ ರೂಪಾಂತರ, ಸಾರ್ವಜನಿಕ ಸಂಸ್ಥೆಗಳನ್ನು ಬಲಪಡಿಸುವುದು ಮತ್ತು ನಾಗರಿಕರಿಗೆ ಸೇವೆಗಳನ್ನು ಸಮರ್ಥವಾಗಿ ತಲುಪಿಸುವುದನ್ನು ಖಾತರಿಪಡಿಸುವ ಒಟ್ಟಾರೆ ಗುರಿ ಹೊಂದಿದೆ. ನಾಗರಿಕ ಸೇವಾ ಸಾಮರ್ಥ್ಯವನ್ನು ವೃದ್ಧಿಸಲು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಪ್ರಸ್ತಾಪಿಸಲಾಗಿದೆ.
ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಆಯ್ದ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಪ್ರಸಿದ್ಧ ಸಾರ್ವಜನಿಕ ಮಾನವ ಸಂಪನ್ಮೂಲ ತಜ್ಞರು, ಚಿಂತಕರು, ಜಾಗತಿಕ ಚಿಂತಕರು ಮತ್ತು ಸಾರ್ವಜನಿಕ ಸೇವಾ ಕಾರ್ಯಕರ್ತರನ್ನು ಒಳಗೊಂಡ ಸಾರ್ವಜನಿಕ ಮಾನವ ಸಂಪನ್ಮೂಲ ಮಂಡಳಿಯು ನಾಗರಿಕ ಸೇವೆಗಳ ಸುಧಾರಣೆ ಮತ್ತು ಸಾಮರ್ಥ್ಯ ವೃದ್ಧಿಗೆ ಕಾರ್ಯತಂತ್ರದ ನಿರ್ದೇಶನವನ್ನು ನೀಡುವ ಉನ್ನತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
*****