Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವೋದ್ಯಮಗಳ ಜೊತೆ ಸಂವಾದ ನಡೆಸಿದ ಪ್ರಧಾನಮಂತ್ರಿ

ನವೋದ್ಯಮಗಳ ಜೊತೆ ಸಂವಾದ ನಡೆಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನವೋದ್ಯಮಗಳೊಂದಿಗೆ ಸಂವಾದ ನಡೆಸಿದರು. ನವೋದ್ಯಮಗಳು ಆರು ವಿಷಯಗಳ ಕುರಿತು ಪ್ರಧಾನ ಮಂತ್ರಿ ಅವರಿಗೆ ಪ್ರಾತ್ಯಕ್ಷಿಕೆಗಳನ್ನು ನೀಡಿದರು, ಅವುಗಳೆಂದರೆ,  ತಳಮಟ್ಟದಿಂದ ಬೆಳವಣಿಗೆ; ಡಿಎನ್ಎ ಹುರಿದುಂಬಿಸುವುದು; ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟಕ್ಕೆ; ಭವಿಷ್ಯದ ತಂತ್ರಜ್ಞಾನ; ಉತ್ಪಾದನೆಯಲ್ಲಿ ಚಾಂಪಿಯನ್ ಗಳನ್ನು ಸೃಷ್ಟಿಸುವುದು ಮತ್ತು ಸುಸ್ಥಿರ ಅಭಿವೃದ್ಧಿ. ಈ ಪ್ರಾತ್ಯಕ್ಷಿಕೆಗಳ  ಉದ್ದೇಶಕ್ಕಾಗಿ 150 ಕ್ಕೂ ಹೆಚ್ಚು ನವೋದ್ಯಮಗಳನ್ನು ಆರು ಕಾರ್ಯನಿರ್ವಹಣಾ ತಂಡಗಳನ್ನಾಗಿ ವಿಭಜಿಸಲಾಗಿದೆ. ಪ್ರತಿ ವಿಷಯಕ್ಕಾಗಿ, ಎರಡು ನವೋದ್ಯಮಗಳ ಪ್ರತಿನಿಧಿಗಳು ಪ್ರಾತ್ಯಕ್ಷಿಕೆ ನೀಡಿದರು, ಅವರು ನಿರ್ದಿಷ್ಟ ವಿಷಯಕ್ಕಾಗಿ ಆಯ್ಕೆ ಮಾಡಿದ ಎಲ್ಲಾ ನವೋದ್ಯಮಗಳ ಪರ ಮಾತನಾಡಿದರು.

ತಮ್ಮ ಪ್ರಸ್ತುತಿಯ ಸಮಯದಲ್ಲಿ, ಸ್ಟಾರ್ಟಪ್ ಪ್ರತಿನಿಧಿಗಳು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಇಂತಹ ವೇದಿಕೆಯನ್ನು ಒದಗಿಸುವ ಅವಕಾಶಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಸ್ಟಾರ್ಟಪ್ ಪರಿಸರ ವ್ಯವಸ್ಥೆಗೆ ಅವರ ದೃಷ್ಟಿಕೋನ ಮತ್ತು ಬೆಂಬಲವನ್ನು ಶ್ಲಾಘಿಸಿದರು.

ಪ್ರಾತ್ಯಕ್ಷಿಕೆ ವೇಳೆ ನವೋದ್ಯಮಗಳ ಪ್ರತಿನಿಧಿಗಳು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ವೇದಿಕೆ ಮತ್ತು ಅವಕಾಶ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು ಮತ್ತು ಪ್ರಧಾನಿ ಅವರು ದೂರದೃಷ್ಟಿ ಮತ್ತು ನವೋದ್ಯಮ ಪೂರಕ ವ್ಯವಸ್ಥೆಗೆ ಬೆಂಬಲ ನೀಡುತ್ತಿರುವ ಕ್ರಮವನ್ನು  ಶ್ಲಾಘಿಸಿದರು.  ಕೃಷಿಯಲ್ಲಿ ಉತ್ಕೃಷ್ಟ ದತ್ತಾಂಶ ಸಂಗ್ರಹ ಕಾರ್ಯವಿಧಾನ, ಭಾರತವನ್ನು ಕೃಷಿ ವ್ಯಾಪಾರದ ಆದ್ಯತಾ ತಾಣನ್ನಾಗಿ ಮಾಡುವುದು; ತಂತ್ರಜ್ಞಾನದ ಬಳಕೆಯ ಮೂಲಕ ಆರೋಗ್ಯ ರಕ್ಷಣಾ ವ್ಯವಸ್ಥೆ ವೃದ್ಧಿಸುವುದು; ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ನಿರ್ವಹಣೆ ಮಾಡುವುದು; ವರ್ಚುವಲ್ ಪ್ರವಾಸಗಳಂತಹ ನಾವೀನ್ಯತೆಗಳ ಮೂಲಕ ಪ್ರವಾಸ ಮತ್ತು ಪ್ರವಾಸೋದ್ಯ ಉತ್ತೇಜಿಸುವುದು; ಶಿಕ್ಷಣ-ತಂತ್ರಜ್ಞಾನ (ಎಡ್-ಟೆಕ್) ಮತ್ತು ಉದ್ಯೋಗಗಳನ್ನು ಗುರುತಿಸುವಿಕೆ; ಬಾಹ್ಯಾಕಾಶ ವಲಯ; ಡಿಜಿಟಲ್ ವಹಿವಾಟಿನೊಂದಿಗೆ ಆಫ್‌ಲೈನ್ ಚಿಲ್ಲರೆ ಮಾರುಕಟ್ಟೆ ಸಂಪರ್ಕಿಸುವುದು; ಉತ್ಪಾದನಾ ದಕ್ಷತೆಯನ್ನು ಹೆಚ್ಚಿಸುವುದು; ರಕ್ಷಣಾ ರಫ್ತು; ಹಸಿರು ಸುಸ್ಥಿರ ಉತ್ಪನ್ನ ಮತ್ತು ಸುಸ್ಥಿರ ಸಾರಿಗೆ ವಿಧಾನಗಳನ್ನು ಉತ್ತೇಜಿಸುವುದು ಒಳಗೊಂಡಂತೆ ಅವರು ನಾನಾ ಕ್ಷೇತ್ರಗಳ ಕುರಿತು ಆಲೋಚನೆ ಮತ್ತು ಚಿಂತನೆಗಳನ್ನು ಹಂಚಿಕೊಂಡರು.

ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್, ಡಾ ಮನ್ಸುಖ್ ಮಾಂಡವಿಯ, ಶ್ರೀ ಅಶ್ವಿನಿ ವೈಷ್ಣವ್, ಶ್ರೀ ಸರ್ಬಾನಂದ ಸೋನೋವಾಲ್, ಶ್ರೀ ಪರಷೋತ್ತಮ್ ರೂಪಾಲಾ, ಶ್ರೀ ಜಿ. ಕಿಷನ್ ರೆಡ್ಡಿ, ಶ್ರೀ ಪಶುಪತಿ ಕುಮಾರ್ ಪರಾಸ್, ಡಾ. ಜಿತೇಂದ್ರ ಸಿಂಗ್, ಶ್ರೀ ಸೋಮ್ ಪ್ರಕಾಶ್  ಮತ್ತಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಾತ್ಯಕ್ಷಿಕೆಗಳ ಪ್ರಸ್ತುತಿ ನಂತರ ಮಾತನಾಡಿದ ಪ್ರಧಾನಮಂತ್ರಿ, ಈ ವರ್ಷದ ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಈ ‘ಸ್ಟಾರ್ಟ್ ಅಪ್ ಇಂಡಿಯಾ ಇನ್ನೋವೇಷನ್ ಸಪ್ತಾಹ’ದ ಆಯೋಜನೆಯು ಹೆಚ್ಚು ಮಹತ್ವದ್ದಾಗಿದೆ. ಏಕೆಂದರೆ ಭಾರತೀಯ ಸ್ವಾತಂತ್ರ್ಯವು ತನ್ನ ಶತಮಾನೋತ್ಸ ಆಚರಿಸುವ ವೇಳೆಗೆ  ನವೋದ್ಯಮಗಳು ನಿರ್ಣಾಯಕ ಪಾತ್ರವು ವಹಿಸಲಿವೆ. “ನವೋದ್ಯಮಗಳ ಜಗತ್ತಿನಲ್ಲಿ ಭಾರತದ ಧ್ವಜವನ್ನು ಎತರೆತ್ತರಕ್ಕೆ ಏರಿಸುತ್ತಿರುವ ದೇಶದ ಎಲ್ಲಾ ನವೋದ್ಯಗಳನ್ನು ಮತ್ತು ಎಲ್ಲಾ ನವೀನ ಚಿಂತನೆಗಳ ಯುವಕರನ್ನು ನಾನು ಅಭಿನಂದಿಸುತ್ತೇನೆ. ಈ ನವೋದ್ಯಮಗಳ ಸಂಸ್ಕೃತಿಯು ದೇಶದ ಕಟ್ಟ ಕಡೆಯ ಪ್ರದೇಶಗಳಿಗೂ ತಲುಪಿಸಲು ಪ್ರತಿವರ್ಷ ಜನವರಿ 16 ಅನ್ನು ರಾಷ್ಟ್ರೀಯ ನವೋದ್ಯಮ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ” ಎಂದು ಪ್ರಧಾನಮಂತ್ರಿ ಘೋಷಿಸಿದರು.

ಸದ್ಯದ ದಶಕ ಭಾರತದ ‘ಟೆಕ್‌ ಎಡ್’ (ತಂತ್ರಜ್ಞಾನ-ಶಿಕ್ಷಣ)ದ ದಶಕವಾಗಿದೆ ಎಂಬ ಪರಿಕಲ್ಪನೆಯನ್ನು ನೆನಪು ಮಾಡಿಕೊಂಡ ಪ್ರಧಾನಮಂತ್ರಿ, ನಾವೀನ್ಯತೆ, ಉದ್ಯಮಶೀಲತೆ ಮತ್ತು ನವೋದ್ಯಮ ಪೂರಕ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಲು ಈ ದಶಕದಲ್ಲಿ ಸರ್ಕಾರವು ಕೈಗೊಂಡಿರುವ ಬೃಹತ್ ಬದಲಾವಣೆಗಳ ಮೂರು ಪ್ರಮುಖ ಅಂಶಗಳನ್ನು ವಿವರಿಸಿದರು. ಮೊದಲನೆಯದಾಗಿ, ಸರ್ಕಾರಿ ಪ್ರಕ್ರಿಯೆಗಳ ಜಾಲದಿಂದ ಮತ್ತು ಆಡಳಿತಶಾಹಿಯ ಮುಷ್ಠಿಯಿಂದ ಉದ್ಯಮಶೀಲತೆ ಮತ್ತು ನಾವೀನ್ಯತೆಯನ್ನು ಮುಕ್ತಗೊಳಿಸುವುದು, ಎರಡನೆಯದಾಗಿ, ನಾವೀನ್ಯತೆಯನ್ನು ಉತ್ತೇಜಿಸಲು ಸಾಂಸ್ಥಿಕ ಕಾರ್ಯವಿಧಾನವನ್ನು ಸೃಷ್ಟಿಸುವುದು ಮತ್ತು ಮೂರನೆಯದಾಗಿ, ಯುವ ನವೋದ್ಯಮಿಗಳು ಮತ್ತು ಯುವ ಉದ್ಯಮಗಳ ಕೈಹಿಡಿದು ಬೆಂಬಲಿಸುವುದು. ಸ್ಟಾರ್ಟ್ಅಪ್ ಇಂಡಿಯಾ ಮತ್ತು ಸ್ಟ್ಯಾಂಡಪ್ ಇಂಡಿಯಾದಂತಹ ಕಾರ್ಯಕ್ರಮಗಳು ಆ ಪ್ರಯತ್ನದ  ಭಾಗವಾಗಿದೆ ಎಂದು ಅವರು ತಿಳಿಸಿದರು. ‘ಏಂಜಲ್ ಟ್ಯಾಕ್ಸ್’ ಸಮಸ್ಯೆ ನಿವಾರಣೆ, ತೆರಿಗೆ ಪ್ರಕ್ರಿಯೆ ಸರಳೀಕರಣ, ಸರ್ಕಾರದ ಧನಸಹಾಯಕ್ಕೆ ವ್ಯವಸ್ಥೆ, 9 ಕಾರ್ಮಿಕ ಮತ್ತು 3 ಪರಿಸರ ಕಾನೂನುಗಳ ಸ್ವಯಂ ಪ್ರಮಾಣೀಕರಣಕ್ಕೆ ಅವಕಾಶ ನೀಡುವುದು ಮತ್ತು 25 ಸಾವಿರಕ್ಕೂ ಹೆಚ್ಚು ನಿಯಮಗಳ ಪಾಲನೆ (ಅನುಸರಣೆ)ಗಳನ್ನು ತೆಗೆದುಹಾಕುವುದು ಮುಂತಾದ ಕ್ರಮಗಳು ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಿವೆ. ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (ಜಿಇಎಂ) ವೇದಿಕೆಯಲ್ಲಿ ನವೋದ್ಯಮ  ರನ್‌ವೇ ಸರ್ಕಾರಕ್ಕೆ ನವೋದ್ಯಮ ಸೇವೆಗಳನ್ನು ಒದಗಿಸುವುದಕ್ಕೆ ಹಾದಿಯನ್ನು ಸುಗಮಗೊಳಿಸುತ್ತಿದೆ.

ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ನಾವೀನ್ಯತೆಯ ಬಗ್ಗೆ ಆಕರ್ಷಣೆಯನ್ನು ಹುಟ್ಟುಹಾಕುವ ಮೂಲಕ ದೇಶದಲ್ಲಿ ನಾವೀನ್ಯತೆಗೆ ಸಾಂಸ್ಥಿಕ ರೂಪ ನೀಡುವುದು ಸರ್ಕಾರದ ಪ್ರಯತ್ನವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. 9000ಕ್ಕೂ ಅಧಿಕ ಅಟಲ್ ಟಿಂಕರಿಂಗ್ (ಚಿಂತನಾ) ಪ್ರಯೋಗಾಲಯಗಳು ಮಕ್ಕಳಿಗೆ ಶಾಲೆಗಳಲ್ಲಿ ಆವಿಷ್ಕಾರ ಮಾಡಲು ಮತ್ತು ಹೊಸ ಚಿಂತನೆಗಳನ್ನು ಆಧರಿಸಿ ಕೆಲಸ ಮಾಡಲು ಅವಕಾಶವನ್ನು ನೀಡುತ್ತಿವೆ. ಹೊಸ ಡ್ರೋನ್ ನಿಯಮಗಳಾಗಲಿ ಅಥವಾ ಹೊಸ ಬಾಹ್ಯಾಕಾಶ ನೀತಿಯಾಗಲಿ, ಸಾಧ್ಯವಾದಷ್ಟು ಯುವಕರಿಗೆ ನಾವೀನ್ಯತೆಗೆ ಅವಕಾಶಗಳನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಹೇಳಿದರು. ನಮ್ಮ ಸರ್ಕಾರವು ಐಪಿಆರ್ ನೋಂದಣಿಗೆ ಸಂಬಂಧಿಸಿದ ನಿಯಮಗಳನ್ನು ಸರಳೀಕರಣಗೊಳಿಸಿದೆ ಎಂದು ಅವರು ಹೇಳಿದರು.

ನಾವೀನ್ಯತೆಯ ಸೂಚ್ಯಂಕಕಗಳಲ್ಲಿ ಗಮನಾರ್ಹ ಏರಿಕೆಯನ್ನು ಕಾಣಲಾಗಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. 2013-14ನೇ ಸಾಲಿನಲ್ಲಿ 4000 ಪೇಟೆಂಟ್ ಮಂಜೂರಾಗಿದ್ದವು, ಕಳೆದ ವರ್ಷ 28 ಸಾವಿರಕ್ಕೂ ಹೆಚ್ಚು ಪೇಟೆಂಟ್ ಗಳು ಅನುಮೋದನೆಯಾಗಿವೆ ಎಂದರು. 2013-14ನೇ ಸಾಲಿನಲ್ಲಿ ಸುಮಾರು 70000 ಟ್ರೇಡ್‌ಮಾರ್ಕ್‌ಗಳನ್ನು ನೋಂದಾಯಿಸಿದ್ದರೆ, 2020-21ರಲ್ಲಿ 2.5 ಲಕ್ಷಕ್ಕೂ ಹೆಚ್ಚು ಟ್ರೇಡ್‌ಮಾರ್ಕ್‌ ನೋಂದಣಿಯಾಗಿವೆ. 2013-14ನೇ ಸಾಲಿನಲ್ಲಿ ಕೇವಲ 4000 ಹಕ್ಕುಸಾಮ್ಯ (ಕಾಪಿರೈಟ್) ಗಳನ್ನು ನೀಡಲಾಗಿದ್ದು, ಕಳೆದ ವರ್ಷ ಅವುಗಳ ಸಂಖ್ಯೆ 16000 ದಾಟಿದೆ. ಭಾರತದ ನಾವೀನ್ಯತೆಯ ಅಭಿಯಾನವು ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕದಲ್ಲಿ ಸುಧಾರಣೆಗೆ ಕಾರಣವಾಗಿದೆ, ಆಗ ಭಾರತವು 81 ನೇ ಸ್ಥಾನದಲ್ಲಿತ್ತು, ಈಗ ಭಾರತವು ಸೂಚ್ಯಂಕದಲ್ಲಿ 46 ನೇ ಸ್ಥಾನದಲ್ಲಿದೆ ಎಂದು ಪ್ರಧಾನಿ ಉಲ್ಲೇಖಿಸಿದರು.

ಭಾರತದ ನವೋದ್ಯಮಗಳು 55 ಪ್ರತ್ಯೇಕ ಕೈಗಾರಿಕೆಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ ಮತ್ತು ಐದು ವರ್ಷಗಳ ಹಿಂದೆ 500 ಕ್ಕಿಂತ ಕಡಿಮೆ ಇದ್ದ ನವೋದ್ಯಮಗಳ ಸಂಖ್ಯೆ ಇಂದು 60 ಸಾವಿರಕ್ಕೂ ಅಧಿಕವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. “ನಮ್ಮ ನವೋದ್ಯಮಗಳು ಆಟದ ನಿಯಮಗಳನ್ನು ಬದಲಾಯಿಸುತ್ತಿವೆ. ಅದಕ್ಕಾಗಿಯೇ ನವೋದ್ಯಮಗಳು ನವ ಭಾರತದ ಬೆನ್ನೆಲುಬಾಗಲಿವೆ ಎಂದು ನಾನು ನಂಬಿದ್ದೇನೆ” ಎಂದು ಪ್ರಧಾನಮಂತ್ರಿ ಹೇಳಿದರು. ಕಳೆದ ವರ್ಷ ದೇಶದಲ್ಲಿ 42 ಯೂನಿಕಾರ್ನ್‌ಗಳು ತಲೆಎತ್ತಿವೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಈ ಕಂಪನಿಗಳು ಭಾರತದ ಸ್ವಾವಲಂಬಿ ಮತ್ತು ಆತ್ಮವಿಶ್ವಾಸದ ಹೆಗ್ಗರುತಾಗಿವೆ. “ಇಂದು ಭಾರತವು ಯೂನಿಕಾರ್ನ್‌ಗಳ ಶತಕದತ್ತ ವೇಗವಾಗಿ ಮುನ್ನಡೆಯುತ್ತಿವೆ, ಹಾಗಾಗಿಯೇ ನಾನು ಭಾರತದ ನವೋದ್ಯಮಗಳ ಸುವರ್ಣ ಯುಗ ಈಗ ಆರಂಭವಾಗುತ್ತಿದೆ ಎಂದು ನಂಬಿದ್ದೇನೆ” ಎಂದು ಅವರು ಹೇಳಿದರು.

ಅಭಿವೃದ್ಧಿ ಮತ್ತು ಪ್ರಾದೇಶಿಕ-ಲಿಂಗ ಅಸಮಾನತೆ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಉದ್ಯಮಶೀಲತೆಯ ಮೂಲಕ ಸಬಲೀಕರಣದ ಪಾತ್ರವನ್ನು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಇಂದು ದೇಶದ 625 ಜಿಲ್ಲೆಗಳಲ್ಲಿ ಪ್ರತಿಯೊಂದರಲ್ಲೂ ಕನಿಷ್ಠ ಒಂದು ನವೋದ್ಯಮವಿದೆ ಮತ್ತು ಅರ್ಧಕ್ಕಿಂತ ಹೆಚ್ಚು ನವೋದ್ಯಮಗಳು ಎರಡನೇ ದರ್ಜೆ ಮತ್ತು ಮೂರನೇ ದರ್ಜೆ ನಗರಗಳಿಂದ ಆರಂಭವಾಗಿದೆ ಎಂದು ಅವರು ಹೇಳಿದರು. ಇವು ಸಾಮಾನ್ಯ ಬಡ ಕುಟುಂಬಗಳ ಆಲೋಚನೆಗಳನ್ನು ವ್ಯವಹಾರಗಳನ್ನಾಗಿ ಪರಿವರ್ತಿಸುತ್ತಿವೆ ಮತ್ತು ಲಕ್ಷಾಂತರ ಭಾರತೀಯ ಯುವಜನರು ಉದ್ಯೋಗವಕಾಶಗಳನ್ನು ಪಡೆಯುತ್ತಿದ್ದಾರೆ ಎಂದರು. 

ಭಾರತದ ವೈವಿಧ್ಯತೆ  ಪ್ರಮುಖ ಶಕ್ತಿ ಮತ್ತು  ಅದು  ಭಾರತದ ಜಾಗತಿಕ ಅಸ್ಮಿತೆಯ ಮೈಲಿಗಲ್ಲು ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಭಾರತೀಯ ಯೂನಿಕಾರ್ನ್‌ಗಳು ಮತ್ತು ನವೋದ್ಯಗಳು ಈ ವೈವಿಧ್ಯತೆಯ ಸಂದೇಶವಾಹಕಗಳಾಗಿವೆ ಎಂದು ಅವರು ಹೇಳಿದರು. ಭಾರತದ ನವೋದ್ಯಮಗಳು ವಿಶ್ವದ ಇತರ ದೇಶಗಳನ್ನು ಸುಲಭವಾಗಿ ತಲುಪಬಹುದು ಎಂದು ಪ್ರಧಾನಿ ಹೇಳಿದರು. ಆದ್ದರಿಂದ “ನಿಮ್ಮ ಕನಸುಗಳನ್ನು ಸ್ಥಳೀಯವಾಗಿರಿಸಿಕೊಳ್ಳಬೇಡಿ, ಅವುಗಳನ್ನು ಜಾಗತಿಕವಾಗಿಸಿ. ಈ ಮಂತ್ರವನ್ನು ನೆನಪಿಸಿಕೊಳ್ಳಿ- ಭಾರತಕ್ಕಾಗಿ ನಾವೀನ್ಯತೆ ಕಂಡುಕೊಳ್ಳೋಣ, ಭಾರತದಿಂದ ಹೊಸತನ ಕಂಡುಕೊಳ್ಳೋಣ” ಎಂದು ಅವರು ನವೋದ್ಯಮಗಳನ್ನು ಶ್ಲಾಘಿಸಿದರು.

ಹಲವು ವಲಯಗಳಲ್ಲಿ ನವೋದ್ಯಮ ಪೂರಕ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ಸೂಚಿದರು. ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಕ್ರಿಯಾ ಯೋಜನೆಯಲ್ಲಿರುವ ಹೆಚ್ಚುವರಿ ಜಾಗವನ್ನು ಇವಿ ಚಾರ್ಜಿಂಗ್ ಮೂಲಸೌಕರ್ಯಕ್ಕಾಗಿ ಬಳಸಬಹುದು ಎಂದು ಅವರು ಹೇಳಿದರು. ಅದೇ ರೀತಿ ರಕ್ಷಣಾ ಉತ್ಪಾದನೆ, ಚಿಪ್ ತಯಾರಿಕೆಯಂತಹ ಕ್ಷೇತ್ರಗಳು ಹಲವು ಸಾಧ್ಯತೆಗಳನ್ನು ನೀಡುತ್ತವೆ. ಡ್ರೋಣ್  ವಲಯದ ಬಗ್ಗೆ ಪ್ರಸ್ತಾಪಿಸಿದ ಮಾತನಾಡಿದ ಅವರು, ಹೊಸ ಡ್ರೋಣ್ ನೀತಿಯ ನಂತರ ಅನೇಕ ಹೂಡಿಕೆದಾರರು ಡ್ರೋಣ್ ನವೋದ್ಯಮಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂದು ಹೇಳಿದರು. ಸೇನೆ, ನೌಕಾಪಡೆ ಮತ್ತು ವಾಯುಪಡೆ ಡ್ರೋಣ್ ನವೋದ್ಯಮಗಳಿಗೆ 500 ಕೋಟಿ ರೂಪಾಯಿ ಮೌಲ್ಯದ ಬೇಡಿಕೆಗಳನ್ನು ನೀಡಿದೆ. ನಗರ ಯೋಜನೆಯಲ್ಲಿ ‘ಕೆಲಸಕ್ಕೆ ನಡಿಗೆ ಪರಿಕಲ್ಪನೆಗಳು’, ಸಮಗ್ರ ಕೈಗಾರಿಕಾ ಎಸ್ಟೇಟ್‌ಗಳು ಮತ್ತು ಸ್ಮಾರ್ಟ್ ಮೊಬಿಲಿಟಿಯನ್ನು ಸಂಭಾವ್ಯ ವಲಯಗಳಗಾಗಲಿವೆ ಎಂದು ಪ್ರಧಾನಮಂತ್ರಿ ಹೇಳಿದರು.

ಇಂದು ಮಿಲೇನಿಯರ್ ಗಳು ತಮ್ಮ ಕುಟುಂಬದ ಸಮೃದ್ಧಿ ಮತ್ತು ರಾಷ್ಟ್ರದ ಸ್ವಾವಲಂಬನೆ ಎರಡಕ್ಕೂ ಮೂಲಾಧಾರವಾಗಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. “ಗ್ರಾಮೀಣ ಆರ್ಥಿಕತೆಯಿಂದ ಕೈಗಾರಿಕೆ 4.0 ವರೆಗೆ, ನಮ್ಮ ಅಗತ್ಯತೆಗಳು ಮತ್ತು ನಮ್ಮ ಸಾಮರ್ಥ್ಯಗಳೆರಡೂ ಅಪರಿಮಿತವಾಗಿವೆ. ಭವಿಷ್ಯದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲಿನ ಹೂಡಿಕೆ ಇಂದಿನ ಸರ್ಕಾರದ ಆದ್ಯತೆಯಾಗಿದೆ” ಎಂದು ಅವರು ಹೇಳಿದರು.

ಭವಿಷ್ಯದ ಸಂಭವನೀಯತೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸದ್ಯಕ್ಕೆ ನಮ್ಮ ಜನಸಂಖ್ಯೆಯ ಅರ್ಧದಷ್ಟು ಮಾತ್ರ ಆನ್‌ಲೈನ್‌ನಲ್ಲಿದ್ದಾರೆ, ಆದ್ದರಿಂದ ಭವಿಷ್ಯದಲ್ಲಿ ಅಪಾರ ಸಾಧ್ಯತೆಗಳಿವೆ ಮತ್ತು ಅದಕ್ಕಾಗಿ ಹಳ್ಳಿಗಳತ್ತ ಸಾಗುವಂತೆ ನವೋದ್ಯಮಗಳಿಗೆ ಅವರು ಮನವಿ ಮಾಡಿದರು. “ಅದು ಮೊಬೈಲ್ ಇಂಟರ್ ನೆಟ್ , ಬ್ರಾಡ್ ಬ್ಯಾಂಡ್ ಸಂಪರ್ಕ ಅಥವಾ ಭೌತಿಕ ಸಂಪರ್ಕವಾಗಿರಲಿ, ಹಳ್ಳಿಗಳ ಆಕಾಂಕ್ಷೆಗಳು ಹೆಚ್ಚುತ್ತಿವೆ ಮತ್ತು ಗ್ರಾಮೀಣ ಮತ್ತು ನಗರದ ಹೊರವಲಯದ ಪ್ರದೇಶಗಳು ವಿಸ್ತರಣೆಯ ಹೊಸ ಅಲೆಗಾಗಿ ಕಾಯುತ್ತಿವೆ” ಎಂದು ಅವರು ಹೇಳಿದರು.

ಇದು ಆವಿಷ್ಕಾರಗಳ ಹೊಸ ಯುಗ, ಅಂದರೆ ಚಿಂತನೆಗಳು, ಉದ್ಯಮ ಮತ್ತು ಹೂಡಿಕೆ ಮತ್ತು ಅವರ ಶ್ರಮ, ಉದ್ಯಮ, ಸಂಪತ್ತು ಸೃಷ್ಟಿ ಮತ್ತು ಉದ್ಯೋಗ ಸೃಷ್ಟಿ ಭಾರತಕ್ಕೆ ಬೇಕಾಗಿದೆ  ಎಂದು ಪ್ರಧಾನಿ  ನವೋದ್ಯಮಗಳಿಗೆ ಕರೆ ನೀಡಿದರು.. “ನಾನು ನಿಮ್ಮ ಜೊತೆ ನಿಲ್ಲುತ್ತೇನೆ, ಸರ್ಕಾರ ನಿಮ್ಮೊಂದಿಗಿರುತ್ತದೆ ಮತ್ತು ಇಡೀ ದೇಶವು ನಿಮ್ಮ ಪರವಾಗಿ ನಿಂತಿದೆ” ಎಂದು ಅವರು ಮಾತುಗಳನ್ನು ಮುಕ್ತಾಯಗೊಳಿಸಿದರು.

***