ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 5ರಂದು ಉತ್ತರಾಖಂಡದ ಕೇದಾರನಾಥಕ್ಕೆ ಭೇಟಿ ನೀಡಲಿದ್ದಾರೆ.
ಕೇದಾರನಾಥ ದೇವಾಲಯದಲ್ಲಿ ಪ್ರಧಾನಮಂತ್ರಿಯವರು ಪ್ರಾರ್ಥನೆ ಸಲ್ಲಿಸಲಿದ್ದಾರೆ. ಆ ನಂತರ ಅವರು ಶ್ರೀ ಆದಿ ಶಂಕರಾಚಾರ್ಯರ ಸಮಾಧಿಯನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆಯನ್ನೂ ಅವರು ಅನಾವರಣಗೊಳಿಸಲಿದ್ದಾರೆ. 2013ರ ಪ್ರವಾಹದಲ್ಲಿ ಹಾನಿಗೊಳಗಾಗಿದ್ದ ಸಮಾಧಿಯನ್ನು ಮರುನಿರ್ಮಾಣ ಮಾಡಲಾಗಿದೆ. ಯೋಜನೆಯ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿ, ಮೇಲ್ವಿಚಾರಣೆ ನಡೆಸುತ್ತಿರುವ ಪ್ರಧಾನಮಂತ್ರಿಯವರ ಮಾರ್ಗದರ್ಶನದಲ್ಲಿ ಸಂಪೂರ್ಣ ಪುನರ್ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗಿದೆ.
ಸರಸ್ವತಿ ಅಷ್ಟಪಥ್ನಲ್ಲಿ ಪೂರ್ಣಗೊಂಡ ಮತ್ತು ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳನ್ನು ಪ್ರಧಾನಮಂತ್ರಿಯವರು ಪರಿಶೀಲಿಸಲಿದ್ದಾರೆ.
ಪ್ರಧಾನಮಂತ್ರಿಯವರು ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಷ್ಟಪಥದ ಸರಸ್ವತಿ ರಿಟೇನಿಂಗ್ ವಾಲ್ ಮತ್ತು ಘಾಟ್ಗಳು, ಅಷ್ಟಪಥದ ಮಂದಾಕಿನಿ ರಿಟೇನಿಂಗ್ ವಾಲ್, ತೀರ್ಥ ಪುರೋಹಿತ್ ಮನೆಗಳು ಮತ್ತು ಮಂದಾಕಿನಿ ನದಿಯ ಗರುಡ್ ಚಟ್ಟಿ ಸೇತುವೆ ಸೇರಿದಂತೆ ಪೂರ್ಣಗೊಂಡ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಅವರು ಉದ್ಘಾಟಿಸಲಿದ್ದಾರೆ. ಸುಮಾರು 130 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಸಂಗಮ್ ಘಾಟ್, ಪ್ರಥಮ ಚಿಕಿತ್ಸೆ ಮತ್ತು ಪ್ರವಾಸಿ ಸೌಲಭ್ಯ ಕೇಂದ್ರ, ಆಡಳಿತ ಕಚೇರಿ ಮತ್ತು ಆಸ್ಪತ್ರೆ, ಎರಡು ಅತಿಥಿ ಗೃಹಗಳು, ಪೊಲೀಸ್ ಠಾಣೆ, ಕಮಾಂಡ್ & ಕಂಟ್ರೋಲ್ ಸೆಂಟರ್, ಮಂದಾಕಿನಿ ಅಷ್ಟಪಥ್ ಕ್ಯೂ ನಿರ್ವಹಣೆ ಮತ್ತು ಮಳೆ ಆಶ್ರಯ ಕೇಂದ್ರ, ಹಾಗೂ ಸರಸ್ವತಿ ನಾಗರಿಕ ಸೌಲಭ್ಯ ಕಟ್ಟಡ ಸೇರಿದಂತೆ 180 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅನೇಕ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
***