1949ರಲ್ಲಿ ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ರಾಷ್ಟ್ರವು ನವೆಂಬರ್ 26ರಂದು ʻಸಂವಿಧಾನ ದಿನʼವನ್ನು ಆಚರಿಸಲಿದೆ. ಈ ಐತಿಹಾಸಿಕ ದಿನಾಂಕದ ಮಹತ್ವಕ್ಕೆ ಸೂಕ್ತ ಮಾನ್ಯತೆ ನೀಡುವ ಪ್ರಧಾನಮಂತ್ರಿಯವರ ದೂರದೃಷ್ಟಿ ಆಧರಿಸಿ, 2015ರಿಂದ ʻಸಂವಿಧಾನ ದಿನʼ ಆಚರಣೆ ಸಂಪ್ರದಾಯವನ್ನು ಪ್ರಾರಂಭಿಸಲಾಯಿತು. 2010ರಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಶ್ರೀ ನರೇಂದ್ರ ಮೋದಿ ಅವರು ಆಯೋಜಿಸಿದ್ದ “ಸಂವಿಧಾನ ಗೌರವ ಯಾತ್ರೆ”ಯಲ್ಲಿ ಈ ದೂರದೃಷ್ಟಿಯ ಮೂಲವನ್ನು ಕಾಣಬಹುದು.
ಈ ವರ್ಷದ ಸಂವಿಧಾನ ದಿನಾಚರಣೆ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ನವೆಂಬರ್ 26ರಂದು ಸಂಸತ್ತು ಮತ್ತು ವಿಜ್ಞಾನ ಭವನದಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಆಯೋಜಿಸಲಾದ ಕಾರ್ಯಕ್ರಮವು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಲಿದೆ. ಮಾನ್ಯ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು ಮತ್ತು ಲೋಕಸಭಾ ಸ್ಪೀಕರ್ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ಗೌರವಾನ್ವಿತ ರಾಷ್ಟ್ರಪತಿಗಳ ಭಾಷಣದ ನಂತರ, ಅವರು ಸಂವಿಧಾನದ ಪೀಠಿಕೆ ವಾಚನ ಮಾಡಲಿದ್ದು, ರಾಷ್ಟ್ರಾದ್ಯಂತ ಜನರು ಅವರೊಂದಿಗೆ ಲೈವ್ ಆಗಿ ಪಾಲ್ಗೊಳ್ಳಲಿದ್ದಾರೆ. ಗೌರವಾನ್ವಿತ ರಾಷ್ಟ್ರಪತಿಗಳು ಸಂವಿಧಾನ ರಚನಾ ಸಭೆ ಚರ್ಚೆಗಳ ಡಿಜಿಟಲ್ ಆವೃತ್ತಿ, ಭಾರತದ ಸಂವಿಧಾನದ ಕ್ಯಾಲಿಗ್ರಾಫ್ ಪ್ರತಿಯ ಡಿಜಿಟಲ್ ಆವೃತ್ತಿ ಮತ್ತು ಇಲ್ಲಿಯವರೆಗೆ ಎಲ್ಲಾ ತಿದ್ದುಪಡಿಗಳನ್ನು ಒಳಗೊಂಡಿರುವ ಭಾರತದ ಸಂವಿಧಾನದ ನವೀಕರಿಸಿದ ಆವೃತ್ತಿಯನ್ನು ಸಹ ಬಿಡುಗಡೆ ಮಾಡಲಿದ್ದಾರೆ. ಅವರು ‘ಸಾಂವಿಧಾನಿಕ ಪ್ರಜಾಪ್ರಭುತ್ವ ಕುರಿತ ಆನ್ಲೈನ್ ರಸಪ್ರಶ್ನೆ’ಯನ್ನು ಉದ್ಘಾಟಿಸಲಿದ್ದಾರೆ.
ನವದೆಹಲಿಯ ವಿಜ್ಞಾನ ಭವನದ ಪ್ಲೀನರಿ ಹಾಲ್ ನಲ್ಲಿ ಸಂಜೆ 5:30ಕ್ಕೆ ಸುಪ್ರೀಂ ಕೋರ್ಟ್ ಆಯೋಜಿಸಿರುವ ಎರಡು ದಿನಗಳ ಸಂವಿಧಾನ ದಿನಾಚರಣೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ಎಲ್ಲಾ ನ್ಯಾಯಮೂರ್ತಿಗಳು, ಎಲ್ಲಾ ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಮೂರ್ತಿಗಳು ಮತ್ತು ಹಿರಿಯ ನ್ಯಾಯಾಧೀಶರು, ಭಾರತದ ಸಾಲಿಸಿಟರ್ ಜನರಲ್ ಮತ್ತು ಕಾನೂನು ವೃಂದದ ಇತರ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು. ಪ್ರಧಾನಮಂತ್ರಿಯವರು ಗಣ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
***