ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 13ರಂದು ಬಿಹಾರಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ದರ್ಭಾಂಗಕ್ಕೆ ಪ್ರಯಾಣಿಸಲಿದ್ದು, ಬೆಳಗ್ಗೆ 10:45 ಕ್ಕೆ ಅವರು ಬಿಹಾರದಲ್ಲಿ ಸುಮಾರು 12,100 ಕೋಟಿ ರೂ.ಗಳ ಅನೇಕ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದು, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಈ ಪ್ರದೇಶದಲ್ಲಿ ಆರೋಗ್ಯ ಮೂಲಸೌಕರ್ಯಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರು ದರ್ಭಾಂಗದಲ್ಲಿ 1260 ಕೋಟಿ ರೂಪಾಯಿ ಮೌಲ್ಯದ ಏಮ್ಸ್ ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ / ಆಯುಷ್ ಬ್ಲಾಕ್, ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು, ರಾತ್ರಿ ಆಶ್ರಯ ಮತ್ತು ವಸತಿ ಸೌಲಭ್ಯಗಳನ್ನು ಹೊಂದಿರುತ್ತದೆ. ಇದು ಬಿಹಾರ ಮತ್ತು ಹತ್ತಿರದ ಪ್ರದೇಶಗಳ ಜನರಿಗೆ ತೃತೀಯ ಹಂತದ ಆರೋಗ್ಯ ರಕ್ಷಣಾ ಸೌಲಭ್ಯಗಳನ್ನು ಒದಗಿಸುತ್ತದೆ.
ರಸ್ತೆ ಮತ್ತು ರೈಲು ಕ್ಷೇತ್ರಗಳಲ್ಲಿ ಹೊಸ ಯೋಜನೆಗಳ ಮೂಲಕ ಈ ಪ್ರದೇಶದಲ್ಲಿ ಸಂಪರ್ಕವನ್ನು ಹೆಚ್ಚಿಸುವುದು ಯೋಜನೆಗಳ ವಿಶೇಷ ಗಮನವಾಗಿದೆ. ಪ್ರಧಾನಮಂತ್ರಿಯವರು ಬಿಹಾರದಲ್ಲಿ ಸುಮಾರು 5,070 ಕೋಟಿ ರೂಪಾಯಿ ಮೌಲ್ಯದ ಹಲವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಅವರು ಎನ್ ಎಚ್ -327ಇ ಯ ಚತುಷ್ಪಥ ಗಲ್ಗಾಲಿಯಾ-ಅರಾರಿಯಾ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಈ ಕಾರಿಡಾರ್ ಪೂರ್ವ-ಪಶ್ಚಿಮ ಕಾರಿಡಾರ್ (ಎನ್ಎಚ್ -27) ನ ಅರಾರಿಯಾದಿಂದ ನೆರೆಯ ರಾಜ್ಯ ಪಶ್ಚಿಮ ಬಂಗಾಳಕ್ಕೆ ಗಲ್ಗಾಲಿಯಾದಲ್ಲಿ ಪರ್ಯಾಯ ಮಾರ್ಗವನ್ನು ಒದಗಿಸುತ್ತದೆ. ಅವರು ಎನ್ಎಚ್ -322 ಮತ್ತು ಎನ್ಎಚ್ -31 ರಲ್ಲಿ ಎರಡು ರೈಲ್ವೆ ಮೇಲ್ಸೇತುವೆಗಳನ್ನು (ಆರ್ ಒಬಿ) ಉದ್ಘಾಟಿಸಲಿದ್ದಾರೆ. ಇದಲ್ಲದೆ ಪ್ರಧಾನಮಂತ್ರಿ ಅವರು ಬಂಧುಗಂಜ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 110ರ ಪ್ರಮುಖ ಸೇತುವೆಯನ್ನು ಉದ್ಘಾಟಿಸಲಿದ್ದು, ಇದು ಜೆಹಾನಾಬಾದ್ ನಿಂದ ಬಿಹಾರ್ ಶರೀಫ್ ಗೆ ಸಂಪರ್ಕ ಕಲ್ಪಿಸಲಿದೆ.
ರಾಮನಗರದಿಂದ ರೋಸೆರಾವರೆಗೆ, ಬಿಹಾರ-ಪಶ್ಚಿಮ ಬಂಗಾಳ ಗಡಿಯಿಂದ ಎನ್ಎಚ್-131ಎಯ ಮಣಿಹರಿ ವಿಭಾಗದವರೆಗೆ, ಹಾಜಿಪುರದಿಂದ ಮಹ್ನಾರ್ ಮತ್ತು ಮೊಹಿಯುದ್ದೀನ್ ನಗರ, ಸರ್ವನ್-ಚಕೈ ವಿಭಾಗದಿಂದ ಬಚ್ವಾರಾವರೆಗೆ ಎರಡು ಪಥದ ರಸ್ತೆ ನಿರ್ಮಾಣ ಸೇರಿದಂತೆ ಎಂಟು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವರು ರಾಷ್ಟ್ರೀಯ ಹೆದ್ದಾರಿ 327ಇ ಯ ರಾಣಿಗಂಜ್ ಬೈಪಾಸ್ ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ 333 ಎ ನಲ್ಲಿ ಕಟೋರಿಯಾ, ಲಖ್ಪುರ, ಬಂಕಾ ಮತ್ತು ಪಂಜ್ವಾರಾ ಬೈಪಾಸ್ ಗಳು; ಮತ್ತು ರಾಷ್ಟ್ರೀಯ ಹೆದ್ದಾರಿ 82 ರಿಂದ ರಾಷ್ಟ್ರೀಯ ಹೆದ್ದಾರಿ 33 ರವರೆಗೆ ಚತುಷ್ಪಥ ಸಂಪರ್ಕ ರಸ್ತೆ ಆಗಿದೆ.
ಪ್ರಧಾನಮಂತ್ರಿ ಅವರು, 1740 ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಯೋಜನೆಗಳನ್ನು ಸಮರ್ಪಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಿಹಾರದ ಔರಂಗಾಬಾದ್ ಜಿಲ್ಲೆಯ ಚಿರಾಲಪೋತುದಿಂದ ಬಾಘಾ ಬಿಶುನ್ ಪುರವರೆಗಿನ 220 ಕೋಟಿ ರೂಪಾಯಿ ಮೌಲ್ಯದ ಸೋನೆನಗರ ಬೈಪಾಸ್ ರೈಲ್ವೆ ಮಾರ್ಗಕ್ಕೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಅವರು 1520 ಕೋಟಿ ರೂ.ಗೂ ಅಧಿಕ ಮೌಲ್ಯದ ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇವುಗಳಲ್ಲಿ ಝಂಜರ್ ಪುರ-ಲೌಕಾಹಾ ಬಜಾರ್ ರೈಲು ವಿಭಾಗದ ಗೇಜ್ ಪರಿವರ್ತನೆ, ದರ್ಭಂಗಾ ಜಂಕ್ಷನ್ ನಲ್ಲಿ ರೈಲ್ವೆ ಸಂಚಾರ ದಟ್ಟಣೆಯನ್ನು ಸರಾಗಗೊಳಿಸುವ ದರ್ಭಾಂಗ ಬೈಪಾಸ್ ರೈಲ್ವೆ ಮಾರ್ಗ, ಉತ್ತಮ ಪ್ರಾದೇಶಿಕ ಸಂಪರ್ಕಕ್ಕೆ ಅನುಕೂಲವಾಗುವ ರೈಲ್ವೆ ಮಾರ್ಗ ಯೋಜನೆಗಳನ್ನು ದ್ವಿಗುಣಗೊಳಿಸುವುದು ಸೇರಿವೆ.
ಪ್ರಧಾನಮಂತ್ರಿ ಅವರು ಝಂಜರ್ ಪುರ-ಲೌಕಾಹಾ ಬಜಾರ್ ವಿಭಾಗದಲ್ಲಿ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಈ ವಿಭಾಗದಲ್ಲಿ ಮೆಮು ರೈಲು ಸೇವೆಗಳನ್ನು ಪರಿಚಯಿಸುವುದರಿಂದ ಹತ್ತಿರದ ಪಟ್ಟಣಗಳು ಮತ್ತು ನಗರಗಳಲ್ಲಿ ಉದ್ಯೋಗಗಳು, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳಿಗೆ ಸುಲಭ ಪ್ರವೇಶವನ್ನು ಸುಲಭಗೊಳಿಸುತ್ತದೆ.
ಪ್ರಧಾನಮಂತ್ರಿ ಅವರು ಭಾರತದಾದ್ಯಂತ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ 18 ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದು ಪ್ರಯಾಣಿಕರಿಗೆ ರೈಲ್ವೆ ನಿಲ್ದಾಣಗಳಲ್ಲಿ ಕೈಗೆಟುಕುವ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸುತ್ತದೆ. ಇದು ಜೆನೆರಿಕ್ ಔಷಧಿಗಳ ಬಗ್ಗೆ ಜಾಗೃತಿ ಮತ್ತು ಸ್ವೀಕಾರವನ್ನು ಉತ್ತೇಜಿಸುತ್ತದೆ, ಆ ಮೂಲಕ ಆರೋಗ್ಯ ರಕ್ಷಣೆಯ ಮೇಲಿನ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡುತ್ತದೆ.
ಪ್ರಧಾನಮಂತ್ರಿ ಅವರು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಲಯದಲ್ಲಿ 4,020 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಉಪಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮನೆಗಳಿಗೆ ಕೊಳವೆ ಮೂಲಕ ನೈಸರ್ಗಿಕ ಅನಿಲ (ಪಿಎನ್ ಜಿ) ತರುವ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ವಲಯಗಳಿಗೆ ಶುದ್ಧ ಇಂಧನ ಆಯ್ಕೆಗಳನ್ನು ಒದಗಿಸುವ ದೃಷ್ಟಿಕೋನಕ್ಕೆ ಅನುಗುಣವಾಗಿ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನಿಂದ ಬಿಹಾರದ ಐದು ಪ್ರಮುಖ ಜಿಲ್ಲೆಗಳಾದ ದರ್ಭಂಗಾ, ಮಧುಬನಿ, ಸುಪಾಲ್, ಸೀತಾಮರ್ಹಿ ಮತ್ತು ಶಿಯೋಹರ್ ನಲ್ಲಿ ನಗರ ಅನಿಲ ವಿತರಣಾ (ಸಿಜಿಡಿ) ಜಾಲದ ಅಭಿವೃದ್ಧಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ಬರೌನಿ ರಿಫೈನರಿಯ ಬಿಟುಮೆನ್ ಉತ್ಪಾದನಾ ಘಟಕಕ್ಕೂ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ, ಇದು ದೇಶೀಯವಾಗಿ ಬಿಟುಮೆನ್ ಉತ್ಪಾದಿಸಲಿದ್ದು, ಆಮದು ಮಾಡಿಕೊಳ್ಳುವ ಬಿಟುಮೆನ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
*****