Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತೀಯ ಶಿಕ್ಷಾ ಸಮಾಗಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

ನವದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತೀಯ ಶಿಕ್ಷಾ ಸಮಾಗಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಧರ್ಮೇಂದ್ರ ಪ್ರಧಾನ್ ಜಿ, ಅನ್ನಪೂರ್ಣ ದೇವಿ, ರಾಜಕುಮಾರ್ ರಂಜನ್ ಸಿಂಗ್, ಸುಭಾಷ್ ಸರ್ಕಾರ್ ಜೀ, ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಶಿಕ್ಷಕರು, ಗೌರವಾನ್ವಿತ ಬುದ್ಧಿಜೀವಿಗಳು ಮತ್ತು ದೇಶಾದ್ಯಂತ ಇರುವ ನನ್ನ ಆತ್ಮೀಯ ವಿದ್ಯಾರ್ಥಿ ಮಿತ್ರರೆ!

ದೇಶವನ್ನು ಯಶಸ್ವಿಗೊಳಿಸುವ ಮತ್ತು ದೇಶದ ಭವಿಷ್ಯವನ್ನು ಬದಲಾಯಿಸುವ ದೈತ್ಯ ಶಕ್ತಿ ಶಿಕ್ಷಣವಾಗಿದೆ. 21ನೇ ಶತಮಾನದಲ್ಲಿ ಭಾರತವು ತನ್ನ ಗುರಿಗಳತ್ತ ಮುನ್ನಡೆಯುತ್ತಿದೆ, ನಮ್ಮ ಶಿಕ್ಷಣ ವ್ಯವಸ್ಥೆಯು ಮಹತ್ತರವಾದ ಮಹತ್ವ ಹೊಂದಿದೆ. ನೀವೆಲ್ಲರೂ ಈ ವ್ಯವಸ್ಥೆಯ ಪ್ರತಿನಿಧಿಗಳು ಮತ್ತು ಧ್ವಜಧಾರಿಗಳು. ಆದ್ದರಿಂದ, ಅಖಿಲ ಭಾರತೀಯ ಶಿಕ್ಷಾ ಸಮಾಗಮದ ಭಾಗವಾಗಿರುವುದು ನನಗೆ ಅತ್ಯಂತ ಮಹತ್ವದ ಅವಕಾಶವಾಗಿದೆ.

ಜ್ಞಾನಕ್ಕೆ ಚರ್ಚೆ ಅಗತ್ಯ, ಶಿಕ್ಷಣಕ್ಕೆ ಸಂವಾದ ಅಗತ್ಯ ಎಂದು ನಾನು ನಂಬುತ್ತೇನೆ. ಅಖಿಲ ಭಾರತೀಯ ಶಿಕ್ಷಾ ಸಮಾಗಮದ ಈ ಕಾರ್ಯಕ್ರಮದ ಮೂಲಕ ನಾವು ನಮ್ಮ ಸಂವಾದ ಮತ್ತು ಚಿಂತನೆಯ ಸಂಪ್ರದಾಯವನ್ನು ಮುಂದುವರಿಸುತ್ತಿದ್ದೇವೆ ಎಂದು ನನಗೆ ಸಂತೋಷವಾಗಿದೆ. ಈ ಹಿಂದೆ ಕಾಶಿಯಲ್ಲಿ ನೂತನವಾಗಿ ನಿರ್ಮಿಸಿರುವ ರುದ್ರಾಕ್ಷಿ ಸಭಾಂಗಣದಲ್ಲಿ ಇಂತಹ ಕಾರ್ಯಕ್ರಮ ನಡೆದಿತ್ತು. ಈ ಬಾರಿ ದೆಹಲಿಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಭಾರತ ಮಂಟಪದಲ್ಲಿ ಈ ಸಮಾಗಮ ನಡೆಯುತ್ತಿದೆ. ಭಾರತ ಮಂಟಪದ ಔಪಚಾರಿಕ ಉದ್ಘಾಟನೆಯ ನಂತರದ ಮೊದಲ ಕಾರ್ಯಕ್ರಮ ಇದಾಗಿದ್ದು, ನಡೆಯುತ್ತಿರುವ ಮೊದಲ ಕಾರ್ಯಕ್ರಮ ಶಿಕ್ಷಣಕ್ಕೆ ಸಂಬಂಧಿಸಿದ್ದು ಎಂಬುದಕ್ಕೆ ಇನ್ನೂ ಹೆಚ್ಚಿನ ಸಂತಸ ತಂದಿದೆ.

ಸ್ನೇಹಿತರೆ,

ಕಾಶಿಯ ರುದ್ರಾಕ್ಷದಿಂದ ಈ ಆಧುನಿಕ ಭಾರತ ಮಂಟಪದವರೆಗೆ ಅಖಿಲ ಭಾರತೀಯ ಶಿಕ್ಷಾ ಸಮಾಗಮದ ಪ್ರಯಾಣವು ಉದಾತ್ತ ಸಂದೇಶವನ್ನು ಹೊಂದಿದೆ. ಈ ಸಂದೇಶವು ಪ್ರಾಚೀನತೆ ಮತ್ತು ಆಧುನಿಕತೆಯ ಸಂಗಮವಾಗಿದೆ! ಒಂದೆಡೆ, ನಮ್ಮ ಶಿಕ್ಷಣ ವ್ಯವಸ್ಥೆಯು ಭಾರತದ ಪ್ರಾಚೀನ ಸಂಪ್ರದಾಯಗಳನ್ನು ಸಂರಕ್ಷಿಸುತ್ತಿದೆ, ಮತ್ತೊಂದೆಡೆ, ನಾವು ಆಧುನಿಕ ವಿಜ್ಞಾನ ಮತ್ತು ಹೈಟೆಕ್ ತಂತ್ರಜ್ಞಾನ ಕ್ಷೇತ್ರದಲ್ಲೂ ವೇಗವಾಗಿ ಮುನ್ನಡೆಯುತ್ತಿದ್ದೇವೆ. ಈ ಸಂದರ್ಭದಲ್ಲಿ, ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಮತ್ತು ಶಿಕ್ಷಣ ವ್ಯವಸ್ಥೆಗೆ ನಿಮ್ಮೆಲ್ಲರ ಕೊಡುಗೆಗಳಿಗಾಗಿ ನಾನು ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಮತ್ತು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಕಾಕತಾಳೀಯವೆಂಬಂತೆ, ಇಂದು ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯ 3 ವರ್ಷಗಳು ಪೂರ್ಣಗೊಂಡಿವೆ. ದೇಶಾದ್ಯಂತದ ವಿದ್ವಾಂಸರು, ಶಿಕ್ಷಣ ತಜ್ಞರು ಮತ್ತು ಶಿಕ್ಷಕರು ಇದನ್ನು ಒಂದು ಧ್ಯೇಯವಾಗಿ ಸ್ವೀಕರಿಸಿದ್ದಾರೆ ಮತ್ತು ಅದರ ಉದ್ದೇಶಗಳನ್ನು ಹೆಚ್ಚಿಸಿದ್ದಾರೆ. ಇಂದು ಈ ಸಂದರ್ಭದಲ್ಲಿ ನಾನು ಅವರೆಲ್ಲರಿಗೂ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಮತ್ತು ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಇಲ್ಲಿಗೆ ಬರುವ ಮೊದಲು ನಾನು ಹತ್ತಿರದ ಪೆವಿಲಿಯನ್‌ನಲ್ಲಿ ಸ್ಥಾಪಿಸಲಾದ ಪ್ರದರ್ಶನವನ್ನು ನೋಡುತ್ತಿದ್ದೆ. ಈ ಪ್ರದರ್ಶನವು ನಮ್ಮ ಕೌಶಲ್ಯ ಮತ್ತು ಶಿಕ್ಷಣ ಕ್ಷೇತ್ರದ ಸಾಮರ್ಥ್ಯ ಮತ್ತು ಅದರ ಸಾಧನೆಗಳನ್ನು ತೋರಿಸುತ್ತದೆ. ಹೊಸ ಮತ್ತು ನವೀನ ವಿಧಾನಗಳನ್ನು ಪ್ರದರ್ಶಿಸಲಾಗಿದೆ. ‘ಬಾಲ ವಾಟಿಕಾ’ದಲ್ಲಿ ಮಕ್ಕಳನ್ನು ಭೇಟಿಯಾಗುವ ಮತ್ತು ಸಂವಾದ ನಡೆಸುವ ಅವಕಾಶವೂ ನನಗೆ ಸಿಕ್ಕಿತು. ಮಕ್ಕಳು ಆಟವಾಡುತ್ತಾ ಹೇಗೆ ಕಲಿಯುತ್ತಿದ್ದಾರೆ, ಶಿಕ್ಷಣ ಮತ್ತು ಶಾಲಾ ಶಿಕ್ಷಣದ ಅರ್ಥವು ಹೇಗೆ ಬದಲಾಗುತ್ತಿದೆ ಎಂಬುದನ್ನು ನೋಡುವುದು ನನಗೆ ನಿಜವಾಗಿಯೂ ಉತ್ತೇಜನಕಾರಿಯಾಗಿದೆ. ಕಾರ್ಯಕ್ರಮದ ಮುಕ್ತಾಯದ ನಂತರ ಆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಎಲ್ಲಾ ಚಟುವಟಿಕೆಗಳನ್ನು ನೋಡಬೇಕೆಂದು ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ.

 

ಸ್ನೇಹಿತರೆ,

ಯುಗ ಬದಲಾವಣೆಗಳು ಸಂಭವಿಸಿದಾಗ, ಅವರು ತಮ್ಮ ಸಮಯವನ್ನು ತೆಗೆದುಕೊಳ್ಳುತ್ತಾರೆ. 3 ವರ್ಷಗಳ ಹಿಂದೆ ನಾವು ರಾಷ್ಟ್ರೀಯ ಶಿಕ್ಷಣ ನೀತಿ ಘೋಷಿಸಿದಾಗ ವಿಶಾಲವಾದ ಕಾರ್ಯಕ್ಷೇತ್ರ ನಮ್ಮ ಮುಂದಿತ್ತು. ಆದರೆ ನೀವೆಲ್ಲರೂ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸುವಲ್ಲಿ ಹೊಸ ಆಲೋಚನೆಗಳು ಮತ್ತು ಪ್ರಯೋಗಗಳನ್ನು ಒಪ್ಪಿಕೊಳ್ಳುವ ಕರ್ತವ್ಯ, ಸಮರ್ಪಣೆ, ಬದ್ಧತೆ ಮತ್ತು ಮುಕ್ತತೆಯನ್ನು ತೋರಿಸಿದ್ದೀರಿ. ಇದು ನಿಜವಾಗಿಯೂ ಪ್ರಭಾವಶಾಲಿಯಾಗಿದೆ ಮತ್ತು ಆತ್ಮವಿಶ್ವಾಸದ ಹೊಸ ಅರ್ಥವನ್ನು ತುಂಬುತ್ತದೆ.

ನೀವೆಲ್ಲರೂ ಇದನ್ನು ಒಂದು ಮಿಷನ್ (ಕಾರ್ಯಾಚರಣೆ ರೂಪ) ಆಗಿ ಸ್ವೀಕರಿಸಿದ್ದೀರಿ. ರಾಷ್ಟ್ರೀಯ ಶಿಕ್ಷಣ ನೀತಿಯು ಸಮತೋಲಿತ ರೀತಿಯಲ್ಲಿ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳು ಮತ್ತು ಭವಿಷ್ಯದ ತಂತ್ರಜ್ಞಾನಕ್ಕೆ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತದೆ. ಪ್ರಾಥಮಿಕ ಶಿಕ್ಷಣಕ್ಕೆ ಹೊಸ ಪಠ್ಯಕ್ರಮ ಸಿದ್ಧಪಡಿಸಲು, ಪ್ರಾದೇಶಿಕ ಭಾಷೆಗಳಲ್ಲಿ ಪುಸ್ತಕಗಳನ್ನು ತರಲು, ದೇಶದಲ್ಲಿ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ಎಲ್ಲಾ ಪ್ರಯತ್ನಗಳಿಗೆ ಶಿಕ್ಷಣ ಕ್ಷೇತ್ರದ ಎಲ್ಲಾ ಮಹಾನ್ ವ್ಯಕ್ತಿಗಳು ಶ್ರದ್ಧೆಯಿಂದ ಶ್ರಮಿಸಿದ್ದಾರೆ.

ದೇಶದ ಜನಸಾಮಾನ್ಯರು ಮತ್ತು ನಮ್ಮ ವಿದ್ಯಾರ್ಥಿಗಳು ಈಗ ಹೊಸ ವ್ಯವಸ್ಥೆಯ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ. ‘ಟೆನ್ ಪ್ಲಸ್ ಟು’ ಶಿಕ್ಷಣ ಪದ್ಧತಿಯ ಬದಲಾಗಿ ‘ಫೈವ್ ಪ್ಲಸ್ ತ್ರೀ – ಪ್ಲಸ್ ತ್ರೀ ಪ್ಲಸ್ ಫೋರ್’ ಪದ್ಧತಿ ಜಾರಿಗೆ ಬಂದಿದೆ ಎಂದು ತಿಳಿದು ಬಂದಿದೆ. ಈಗ 3 ವರ್ಷದಿಂದ ಶಿಕ್ಷಣ ಆರಂಭವಾಗುತ್ತದೆ. ಇದು ದೇಶಾದ್ಯಂತ ಏಕರೂಪತೆ ತರುತ್ತದೆ.

ಇತ್ತೀಚೆಗಷ್ಟೇ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು. 3ರಿಂದ 8 ವರ್ಷ ವಯಸ್ಸಿನ ಮಕ್ಕಳಿಗೆ ಶಿಕ್ಷಣ ಪೂರೈಸುವ ಅಡಿಪಾಯ ಹಂತದ ಚೌಕಟ್ಟನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಇತರ ಹಂತಗಳಿಗೆ ಪಠ್ಯಕ್ರಮವನ್ನು ಶೀಘ್ರದಲ್ಲೇ ಅಭಿವೃದ್ಧಿಪಡಿಸಲಾಗುವುದು. ಸ್ವಾಭಾವಿಕವಾಗಿ, ಈಗ ದೇಶಾದ್ಯಂತ ಸಿಬಿಎಸ್ಇ  ಶಾಲೆಗಳಲ್ಲಿ ಏಕರೂಪದ ಪಠ್ಯಕ್ರಮ ಇರುತ್ತದೆ. ಈ ಉದ್ದೇಶಕ್ಕಾಗಿ ಎನ್‌ಸಿಇಆರ್‌ಟಿ ಹೊಸ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿದೆ. 3ರಿಂದ 12ನೇ ತರಗತಿಗಳಿಗೆ ಸುಮಾರು 130 ವಿಷಯಗಳ ಹೊಸ ಪುಸ್ತಕಗಳನ್ನು ಪರಿಚಯಿಸಲಾಗುತ್ತಿದೆ. ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಉತ್ತೇಜಿಸಲು ಈ ಪುಸ್ತಕಗಳು 22 ಭಾರತೀಯ ಭಾಷೆಗಳಲ್ಲಿ ಲಭ್ಯವಿರುವುದರಿಂದ ನನಗೆ ಸಂತೋಷವಾಗಿದೆ.

ಸ್ನೇಹಿತರೆ,

ಯುವಕರನ್ನು ಅವರ ಪ್ರತಿಭೆಯ ಬದಲು ಅವರ ಭಾಷೆಯ ಆಧಾರದ ಮೇಲೆ ನಿರ್ಣಯಿಸುವುದು ಘೋರ ಅನ್ಯಾಯ. ಒಬ್ಬರ ಮಾತೃಭಾಷೆಯಲ್ಲಿ ಶಿಕ್ಷಣವು ಭಾರತದ ಪ್ರತಿಭಾವಂತ ಯುವಕರಿಗೆ ನಿಜವಾದ ನ್ಯಾಯದ ಆರಂಭವನ್ನು ಸೂಚಿಸುತ್ತದೆ. ಇದು ಸಾಮಾಜಿಕ ನ್ಯಾಯದತ್ತ ಮಹತ್ವದ ಹೆಜ್ಜೆಯೂ ಹೌದು. ಜಗತ್ತಿನಲ್ಲಿ ನೂರಾರು ವಿಭಿನ್ನ ಭಾಷೆಗಳಿವೆ, ಪ್ರತಿಯೊಂದೂ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಹೆಚ್ಚಿನ ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಸ್ಥಳೀಯ ಭಾಷೆಗಳನ್ನು ಉತ್ತೇಜಿಸುವ ಮೂಲಕ ಪ್ರಗತಿ ಸಾಧಿಸಿವೆ. ನಾವು ಯುರೋಪ್ ಅನ್ನು ಮಾತ್ರ ನೋಡಿದರೆ, ಅಲ್ಲಿನ ಹೆಚ್ಚಿನ ದೇಶಗಳು ತಮ್ಮ ಸ್ಥಳೀಯ ಭಾಷೆಗಳನ್ನು ಬಳಸುತ್ತವೆ. ಆದರೆ, ಇಷ್ಟು ಶ್ರೀಮಂತ ಭಾಷೆಗಳನ್ನು ಹೊಂದಿದ್ದರೂ, ನಮ್ಮ ಭಾಷೆಗಳನ್ನು ಹಿಂದುಳಿದ ಭಾಷೆ ಎಂದು ಪ್ರಸ್ತುತಪಡಿಸಿದ್ದೇವೆ. ಇದಕ್ಕಿಂತ ದೊಡ್ಡ ದೌರ್ಭಾಗ್ಯ ಮತ್ತೇನಿದೆ? ಯಾರಾದರೂ ಎಷ್ಟೇ ನವೀನ ಮತ್ತು ಪ್ರತಿಭಾವಂತರಾಗಿದ್ದರೂ, ಅವರಿಗೆ ಇಂಗ್ಲಿಷ್ ಮಾತನಾಡಲು ಸಾಧ್ಯವಾಗದಿದ್ದರೆ, ಅವರ ಪ್ರತಿಭೆಯನ್ನು ಸುಲಭವಾಗಿ ಗುರುತಿಸಲಾಗುವುದಿಲ್ಲ. ಇದರ ದೊಡ್ಡ ನಷ್ಟವನ್ನು ನಮ್ಮ ಗ್ರಾಮೀಣ ಪ್ರದೇಶದ ಭರವಸೆಯ ಮಕ್ಕಳು ಅನುಭವಿಸಿದ್ದಾರೆ. ಸ್ವಾತಂತ್ರ್ಯದ ‘ಅಮೃತ ಕಾಲ’ದಲ್ಲಿ ನಮ್ಮ ದೇಶ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಈ ಕೀಳರಿಮೆ ತೊಲಗಿಸಲು ಮುಂದಾಗಿದೆ. ವಿಶ್ವಸಂಸ್ಥೆಯಲ್ಲೂ ಭಾರತದ ಭಾಷೆಯನ್ನು ಹೆಮ್ಮೆಯಿಂದ ಮಾತನಾಡುತ್ತೇನೆ. ಕೇಳುಗರು ಚಪ್ಪಾಳೆ ತಟ್ಟಲು ಸ್ವಲ್ಪ ಸಮಯ ತೆಗೆದುಕೊಂಡರೆ, ಹಾಗೇ ಆಗಲಿ.

ಸ್ನೇಹಿತರೆ,

ಈಗ ಸಮಾಜ ವಿಜ್ಞಾನದಿಂದ ಇಂಜಿನಿಯರಿಂಗ್‌ವರೆಗಿನ ಶಿಕ್ಷಣವನ್ನು ಭಾರತೀಯ ಭಾಷೆಗಳಲ್ಲಿಯೂ ನಡೆಸಲಾಗುವುದು. ಯುವಕರು ತಮ್ಮ ಭಾಷೆಯಲ್ಲಿ ವಿಶ್ವಾಸ ಹೊಂದಿದಾಗ ಅವರ ಕೌಶಲ್ಯ ಮತ್ತು ಪ್ರತಿಭೆಗಳು ಬಹಿರಂಗವಾಗಿ ಮುಂಚೂಣಿಗೆ ಬರುತ್ತವೆ. ಇದಲ್ಲದೆ, ದೇಶಕ್ಕೆ ಮತ್ತೊಂದು ಅನುಕೂಲವೂ ಇರುತ್ತದೆ. ರಾಜಕೀಯ ಉದ್ದೇಶಕ್ಕಾಗಿ ಭಾಷೆಯನ್ನು ಬಳಸುವ ಮತ್ತು ದ್ವೇಷವನ್ನು ಹರಡುವವರ ಮೇಲೆ ವಿರೋಧಗಳು ಬರುತ್ತವೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ದೇಶದ ಪ್ರತಿಯೊಂದು ಭಾಷೆಗೂ ಗೌರವ ಮತ್ತು ಪ್ರೋತ್ಸಾಹ ಸಿಗಲಿದೆ.

ಸ್ನೇಹಿತರೆ,

ಮುಂಬರುವ 25 ವರ್ಷಗಳು ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾಲವು ಹೆಚ್ಚಿನ ಮಹತ್ವ ಹೊಂದಿವೆ. ಈ 25 ವರ್ಷಗಳಲ್ಲಿ, ನಾವು ಶಕ್ತಿಯುತ ಮತ್ತು ವಿಮೋಚನೆಯ ಯುವ ಪೀಳಿಗೆಯನ್ನು, ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತವಾದ ಪೀಳಿಗೆಯನ್ನು, ಹೊಸ ಆವಿಷ್ಕಾರಗಳ ಬಯಕೆಯಿಂದ ಓಡುವ ಪೀಳಿಗೆಯನ್ನು, ಪ್ರತಿಯೊಂದು ಕ್ಷೇತ್ರದಲ್ಲೂ ಭಾರತದ ಹೆಸರನ್ನು ಬೆಳಗಿಸುವ ಪೀಳಿಗೆಯನ್ನು ನಿರ್ಮಿಸಬೇಕು. ವಿಜ್ಞಾನದಿಂದ ಕ್ರೀಡೆಗೆ ಭಾರತವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ, 21ನೇ ಶತಮಾನದ ಭಾರತದ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ತನ್ನ ಸಾಮರ್ಥ್ಯವನ್ನು ಹೆಚ್ಚಿಸುವ ಪೀಳಿಗೆ, ಮತ್ತು ಕರ್ತವ್ಯ ಪ್ರಜ್ಞೆಯಿಂದ ತುಂಬಿದ ಪೀಳಿಗೆ, ಅದರ ಜವಾಬ್ದಾರಿಗಳ ಅರಿವು ಮತ್ತು ಜಾಗೃತವಾಗಿದೆ. ಅಂತಹ ಪೀಳಿಗೆಯನ್ನು ರೂಪಿಸುವಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯು ಬಹುಮುಖ್ಯ ಪಾತ್ರ ವಹಿಸುತ್ತದೆ.

ಸ್ನೇಹಿತರೆ,

ಗುಣಮಟ್ಟದ ಶಿಕ್ಷಣದ ಜಗತ್ತಿನಲ್ಲಿ ಹಲವು ನಿಯತಾಂಕ ಅಥವಾ ಮಾಪನಗಳಿವೆ. ಆದರೆ, ನಾವು ಭಾರತದ ಬಗ್ಗೆ ಮಾತನಾಡುವಾಗ, ನಮ್ಮ ಪ್ರಾಥಮಿಕ ಗುರಿ ಸಮಾನತೆ ಆಗಿರಬೇಕು! ರಾಷ್ಟ್ರೀಯ ಶಿಕ್ಷಣ ನೀತಿಯ ಆದ್ಯತೆಯು ಭಾರತದಲ್ಲಿ ಪ್ರತಿಯೊಬ್ಬ ಯುವಕರು ಸಮಾನ ಶಿಕ್ಷಣ ಮತ್ತು ಶಿಕ್ಷಣಕ್ಕೆ ಸಮಾನ ಅವಕಾಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಆದಾಗ್ಯೂ, ಸಮಾನ ಶಿಕ್ಷಣ ಮತ್ತು ಸಮಾನ ಅವಕಾಶಗಳನ್ನು ಸಾಧಿಸುವುದು ಕೇವಲ ಶಾಲೆಗಳನ್ನು ತೆರೆಯುವುದರ ಬಗ್ಗೆ ಅಲ್ಲ, ಶಿಕ್ಷಣದ ಜತೆಗೆ ಸಂಪನ್ಮೂಲಗಳಿಗೆ ಸಮಾನ ಪ್ರವೇಶ ಒದಗಿಸುವುದು ಎಂದರ್ಥ. ಸಮಾನ ಶಿಕ್ಷಣ ಎಂದರೆ ಪ್ರತಿ ಮಗುವೂ ಅವರ ತಿಳಿವಳಿಕೆ ಮತ್ತು ಆಯ್ಕೆಗಳ ಆಧಾರದ ಮೇಲೆ ಆಯ್ಕೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಸಮಾನ ಶಿಕ್ಷಣ ಎಂದರೆ ಮಕ್ಕಳು ತಮ್ಮ ಸ್ಥಳ, ಜಾತಿ ಅಥವಾ ಪ್ರದೇಶದ ಕಾರಣದಿಂದ ಶಿಕ್ಷಣದಿಂದ ವಂಚಿತರಾಗಬಾರದು.

ಅದಕ್ಕಾಗಿಯೇ ರಾಷ್ಟ್ರೀಯ ಶಿಕ್ಷಣ ನೀತಿಯ ದೃಷ್ಟಿ ಮತ್ತು ರಾಷ್ಟ್ರದ ಪ್ರಯತ್ನವು ಹಳ್ಳಿಗಳು ಮತ್ತು ನಗರಗಳ ಯುವಕರು, ಶ್ರೀಮಂತರು ಮತ್ತು ಬಡವರು, ಪ್ರತಿಯೊಂದು ವಿಭಾಗದಿಂದ ಸಮಾನ ಅವಕಾಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವಾಗಿದೆ. ನೀವು ನೋಡಿ, ದೂರದ ಪ್ರದೇಶಗಳಲ್ಲಿ ಗುಣಮಟ್ಟದ ಶಾಲೆಗಳಿಲ್ಲದ ಕಾರಣ ಅನೇಕ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗದ ಸಮಯವಿತ್ತು. ಆದರೆ ಇಂದು ದೇಶಾದ್ಯಂತ ಸಾವಿರಾರು ಶಾಲೆಗಳನ್ನು ಪಿಎಂ-ಶ್ರೀ ಶಾಲೆಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ‘5ಜಿ’ಯ ಈ ಯುಗದಲ್ಲಿ, ಈ ಆಧುನಿಕ ಹೈಟೆಕ್ ಶಾಲೆಗಳು ಭಾರತೀಯ ವಿದ್ಯಾರ್ಥಿಗಳಿಗೆ ಸಮಕಾಲೀನ ಶಿಕ್ಷಣದ ಮಾಧ್ಯಮವಾಗಿ ಕಾರ್ಯ ನಿರ್ವಹಿಸುತ್ತವೆ.

ಇಂದು ನಾವು ಬುಡಕಟ್ಟು ಪ್ರದೇಶಗಳಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಸ್ಥಾಪಿಸುತ್ತಿದ್ದೇವೆ. ಇಂಟರ್ನೆಟ್ ಸೌಲಭ್ಯಗಳು ಪ್ರತಿ ಹಳ್ಳಿಯನ್ನು ತಲುಪಿವೆ. ದೂರದ ಪ್ರದೇಶಗಳ ಮಕ್ಕಳು ದೀಕ್ಷಾ, ಸ್ವಯಂ ಮತ್ತು ಸ್ವಯಂ-ಪ್ರಭಾ ಮುಂತಾದ ವೇದಿಕೆಗಳ ಮೂಲಕ ಕಲಿಯುತ್ತಿದ್ದಾರೆ. ಉತ್ತಮ ಪುಸ್ತಕಗಳು ಮತ್ತು ಸೃಜನಾತ್ಮಕ ಕಲಿಕೆಯ ತಂತ್ರಗಳೊಂದಿಗೆ, ಡಿಜಿಟಲ್ ತಂತ್ರಜ್ಞಾನದ ಏಕೀಕರಣವು ಹೊಸ ಆಲೋಚನೆಗಳನ್ನು, ಹೊಸ ವ್ಯವಸ್ಥೆಗಳನ್ನು ಒದಗಿಸುತ್ತಿದೆ. ಭಾರತದ ಪ್ರತಿ ಹಳ್ಳಿಯಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಬೇರೊಂದು ರೀತಿಯಲ್ಲಿ ಹೇಳುವುದಾದರೆ, ಭಾರತದಲ್ಲಿ ಶೈಕ್ಷಣಿಕ ಸಂಪನ್ಮೂಲಗಳ ಅಂತರವು ಶೀಘ್ರವಾಗಿ ಕೊನೆಗೊಳ್ಳುತ್ತಿದೆ.

ಸ್ನೇಹಿತರೆ,

ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಆದ್ಯತೆಗಳಲ್ಲಿ ಒಂದಾದ ಶಿಕ್ಷಣವು ಕೇವಲ ಪುಸ್ತಕಗಳಿಗೆ ಸೀಮಿತವಾಗಿರಬಾರದು, ಬದಲಿಗೆ ಪ್ರಾಯೋಗಿಕ ಕಲಿಕೆಯು ಅದರ ಭಾಗವಾಗಿರಬೇಕು ಎಂಬುದು ನಿಮಗೆ ತಿಳಿದಿದೆ. ಈ ಉದ್ದೇಶವನ್ನು ಸಾಧಿಸಲು ಸಾಮಾನ್ಯ ಶಿಕ್ಷಣದೊಂದಿಗೆ ವೃತ್ತಿಪರ ಶಿಕ್ಷಣವನ್ನು ಸಂಯೋಜಿಸಲಾಗುತ್ತಿದೆ. ಈ ವಿಧಾನದ ಹೆಚ್ಚಿನ ಪ್ರಯೋಜನವೆಂದರೆ ಹಿಂದುಳಿದ, ನಿರ್ಲಕ್ಷಿತ ಮತ್ತು ಗ್ರಾಮೀಣ ಮಕ್ಕಳಿಗೆ ಅನುಕೂಲ ಕಲ್ಪಿಸಲಾಗುತ್ತಿದೆ.

ಈ ಮಕ್ಕಳು ಪಠ್ಯಪುಸ್ತಕಗಳಿಂದ ಮೌಖಿಕ ಕಲಿಕೆಯ ಹೊರೆಯಲ್ಲಿ ಹೆಚ್ಚು ಕಷ್ಟಪಡುತ್ತಿದ್ದರು. ಆದರೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ, ನವೀನ ವಿಧಾನಗಳನ್ನು ಬಳಸಿ ಕಲಿಕೆ ನಡೆಸಲಾಗುವುದು. ಶಿಕ್ಷಣವು ಸಂವಾದಾತ್ಮಕ ಮತ್ತು ಆಸಕ್ತಿದಾಯಕವಾಗಿರುತ್ತದೆ. ಮೊದಲು ಕೆಲವೇ ಶಾಲೆಗಳಲ್ಲಿ ಲ್ಯಾಬ್‌ಗಳು ಮತ್ತು ಪ್ರಾಯೋಗಿಕ ಕಲಿಕೆಗೆ ಸೌಲಭ್ಯಗಳಿದ್ದವು. ಆದರೆ, ಈಗ ಅಟಲ್ ಟಿಂಕರಿಂಗ್ ಲ್ಯಾಬ್‌ಗಳಲ್ಲಿ 75 ಲಕ್ಷಕ್ಕೂ ಹೆಚ್ಚು ಮಕ್ಕಳು ವಿಜ್ಞಾನ ಮತ್ತು ನಾವೀನ್ಯತೆ ಕಲಿಯುತ್ತಿದ್ದಾರೆ. ವಿಜ್ಞಾನ ಎಲ್ಲರಿಗೂ ಲಭ್ಯವಾಗುತ್ತಿದೆ. ಈ ಯುವ ವಿಜ್ಞಾನಿಗಳು ಭವಿಷ್ಯದಲ್ಲಿ ದೇಶದ ಪ್ರಮುಖ ಯೋಜನೆಗಳನ್ನು ಮುನ್ನಡೆಸುತ್ತಾರೆ, ಭಾರತವನ್ನು ಜಾಗತಿಕ ಸಂಶೋಧನಾ ಕೇಂದ್ರವನ್ನಾಗಿ ಮಾಡುತ್ತಾರೆ.

ಸ್ನೇಹಿತರೆ,

ಯಾವುದೇ ಸುಧಾರಣೆಗೆ ಧೈರ್ಯ ಬೇಕು, ಧೈರ್ಯವಿರುವಲ್ಲಿ ಹೊಸ ಸಾಧ್ಯತೆಗಳು ಹುಟ್ಟುತ್ತವೆ. ಆದ್ದರಿಂದಲೇ ಇಂದು ಜಗತ್ತು ಭಾರತವನ್ನು ಹೊಸ ಅವಕಾಶಗಳ ನರ್ಸರಿಯಾಗಿ ನೋಡುತ್ತಿದೆ. ಸಾಫ್ಟ್‌ವೇರ್ ತಂತ್ರಜ್ಞಾನದ ವಿಷಯಕ್ಕೆ ಬಂದಾಗ, ಭವಿಷ್ಯವು ಭಾರತದ್ದು ಎಂದು ಇಂದು ಜಗತ್ತಿಗೆ ತಿಳಿದಿದೆ. ಬಾಹ್ಯಾಕಾಶ ತಂತ್ರಜ್ಞಾನದ ವಿಷಯಕ್ಕೆ ಬಂದರೆ, ಭಾರತದ ಸಾಮರ್ಥ್ಯಗಳಿಗೆ ಸಾಟಿಯಿಲ್ಲ ಎಂಬುದು ಜಗತ್ತಿಗೆ ತಿಳಿದಿದೆ. ರಕ್ಷಣಾ ತಂತ್ರಜ್ಞಾನದ ವಿಷಯಕ್ಕೆ ಬಂದಾಗ, ಭಾರತದ ‘ಕಡಿಮೆ ವೆಚ್ಚದ’ ಮತ್ತು ‘ಉತ್ತಮ ಗುಣಮಟ್ಟದ’ ಮಾದರಿಯು ಗೆಲುವು ಪಡೆಯಲಿದೆ ಎಂಬುದು ಜಗತ್ತಿಗೆ ತಿಳಿದಿದೆ. ಜಗತ್ತಿಗೆ ನಮ್ಮ ಮೇಲಿನ ನಂಬಿಕೆ ಕಡಿಮೆಯಾಗಲು ಬಿಡಬಾರದು.

ಇತ್ತೀಚಿನ ವರ್ಷಗಳಲ್ಲಿ, ಭಾರತದ ಕೈಗಾರಿಕಾ ಕ್ಷೇತ್ರದ ಕ್ಷಿಪ್ರ ಬೆಳವಣಿಗೆ, ನಮ್ಮ ಸ್ಟಾರ್ಟಪ್‌ಗಳ ಹೆಚ್ಚುತ್ತಿರುವ ಪ್ರಾಮುಖ್ಯತೆ ಮತ್ತು ನಮ್ಮ ಶಿಕ್ಷಣ ಸಂಸ್ಥೆಗಳ ಹೆಚ್ಚುತ್ತಿರುವ ಜಾಗತಿಕ ಶ್ರೇಯಾಂಕಗಳು ನಮಗೆ ವಿಶ್ವಾದ್ಯಂತ ಗೌರವವನ್ನು ಗಳಿಸಿವೆ. ವಿವಿಧ ಜಾಗತಿಕ ಶ್ರೇಯಾಂಕಗಳಲ್ಲಿ ಭಾರತೀಯ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿದೆ, ನಮ್ಮದೇ ಶ್ರೇಯಾಂಕಗಳು ಸಹ ಸುಧಾರಿಸುತ್ತಿವೆ. ಇಂದು ನಮ್ಮ ಐಐಟಿಗಳು ಜಾಂಜಿಬಾರ್ ಮತ್ತು ಅಬುಧಾಬಿಯಂತಹ ದೇಶಗಳಲ್ಲಿ ಕ್ಯಾಂಪಸ್‌ಗಳನ್ನು ತೆರೆಯುತ್ತಿವೆ. ಅನೇಕ ಇತರ ದೇಶಗಳು ತಮ್ಮ ರಾಷ್ಟ್ರಗಳಲ್ಲಿ ಐಐಟಿ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ವಿನಂತಿಸುತ್ತಿವೆ. ವಿಶ್ವಾದ್ಯಂತ ಇದಕ್ಕೆ ಬೇಡಿಕೆ ಹೆಚ್ಚುತ್ತಿದೆ. ನಮ್ಮ ಶಿಕ್ಷಣ ಪರಿಸರ ವ್ಯವಸ್ಥೆಯಲ್ಲಿನ ಈ ಸಕಾರಾತ್ಮಕ ಬದಲಾವಣೆಗಳಿಂದಾಗಿ, ಹಲವಾರು ಜಾಗತಿಕ ವಿಶ್ವವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಉತ್ಸುಕವಾಗಿವೆ. ಎರಡು ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳು ಗುಜರಾತ್‌ನ ಗಿಫ್ಟ್ ಸಿಟಿಯಲ್ಲಿ ತಮ್ಮ ಕ್ಯಾಂಪಸ್‌ಗಳನ್ನು ಸ್ಥಾಪಿಸುತ್ತಿವೆ. ಈ ಸಾಧನೆಗಳ ನಡುವೆ, ನಾವು ನಮ್ಮ ಶಿಕ್ಷಣ ಸಂಸ್ಥೆಗಳನ್ನು ನಿರಂತರವಾಗಿ ಬಲಪಡಿಸಬೇಕು, ಅವುಗಳನ್ನು ಭವಿಷ್ಯಕ್ಕಾಗಿ ಸಿದ್ಧಗೊಳಿಸಲು ಶ್ರಮಿಸಬೇಕು. ನಾವು ನಮ್ಮ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಶಾಲೆಗಳು ಮತ್ತು ಕಾಲೇಜುಗಳನ್ನು ಈ ಕ್ರಾಂತಿಯ ಕೇಂದ್ರಗಳನ್ನಾಗಿ ಮಾಡಬೇಕಾಗಿದೆ.

ಸ್ನೇಹಿತರೆ,

ಸಮರ್ಥ ಯುವಕರ ಅಭಿವೃದ್ಧಿಯು ಬಲಿಷ್ಠ ರಾಷ್ಟ್ರ ನಿರ್ಮಿಸಲು ದೊಡ್ಡ ಭರವಸೆಯಾಗಿದೆ. ಯುವಕರನ್ನು ರೂಪಿಸುವಲ್ಲಿ ಪೋಷಕರು ಮತ್ತು ಶಿಕ್ಷಕರು ಪ್ರಾಥಮಿಕ ಪಾತ್ರ ವಹಿಸುತ್ತಾರೆ. ಆದ್ದರಿಂದ, ಮಕ್ಕಳಿಗೆ ಮುಕ್ತವಾಗಿ ರೆಕ್ಕೆ ಪುಕ್ಕಗಳನ್ನು ಚಾಚಲು ಅವಕಾಶವನ್ನು ನೀಡುವಂತೆ ನಾನು ಎಲ್ಲಾ ಶಿಕ್ಷಕರು ಮತ್ತು ಪೋಷಕರನ್ನು ಒತ್ತಾಯಿಸಲು ಬಯಸುತ್ತೇನೆ. ಅವರು ಯಾವಾಗಲೂ ಹೊಸದನ್ನು ಕಲಿಯಲು ಮತ್ತು ಮಾಡಲು ಧೈರ್ಯವನ್ನು ಹೊಂದಲು ನಾವು ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ನಾವು ಭವಿಷ್ಯದ ಮೇಲೆ ಕಣ್ಣಿಡಬೇಕು, ಭವಿಷ್ಯದ ಮನಸ್ಥಿತಿಯನ್ನು ಅಳವಡಿಸಿಕೊಳ್ಳಬೇಕು. ಪುಸ್ತಕಗಳ ಒತ್ತಡದಿಂದ ಮಕ್ಕಳನ್ನು ಮುಕ್ತಗೊಳಿಸಬೇಕು.

ವೈಜ್ಞಾನಿಕ ಕಾಲ್ಪನಿಕ ಕಥೆಗಳಲ್ಲಿದ್ದ ಎಐ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್)ನಂತಹ ತಂತ್ರಜ್ಞಾನವು ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗುತ್ತಿವುದನ್ನು ನಾವು ನೋಡುತ್ತಿದ್ದೇವೆ. ರೊಬೊಟಿಕ್ಸ್ ಮತ್ತು ಡ್ರೋನ್ ತಂತ್ರಜ್ಞಾನ ಈಗಾಗಲೇ ನಮ್ಮ ಬಾಗಿಲು ತಟ್ಟಿದೆ. ಆದ್ದರಿಂದ, ನಾವು ಹಳೆಯ ಆಲೋಚನೆಗಳಿಂದ ಮುಕ್ತರಾಗಬೇಕು ಮತ್ತು ಹೊಸ ದಿಗಂತಗಳನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ನಾವು ನಮ್ಮ ಮಕ್ಕಳನ್ನು ಸಿದ್ಧಪಡಿಸಬೇಕು. ಭವಿಷ್ಯದ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ನಮ್ಮ ಶಾಲೆಗಳು ಸಂವಾದಾತ್ಮಕ ಅವಧಿಗಳನ್ನು ಆಯೋಜಿಸುವುದನ್ನು ನಾನು ನೋಡಲು ಬಯಸುತ್ತೇನೆ. ಇದು ವಿಪತ್ತು ನಿರ್ವಹಣೆ, ಹವಾಮಾನ ಬದಲಾವಣೆ ಅಥವಾ ಶುದ್ಧ ಶಕ್ತಿಯ ಬಗ್ಗೆ ಇರಲಿ, ನಾವು ನಮ್ಮ ಹೊಸ ಪೀಳಿಗೆಗೆ ಈ ವಿಷಯಗಳೊಂದಿಗೆ ಪರಿಚಯ ಮಾಡಿಕೊಳ್ಳಬೇಕು. ಆದ್ದರಿಂದ ಯುವ ಜನರಿಗೆ ಈ ಕ್ಷೇತ್ರಗಳ ಬಗ್ಗೆ ಅರಿವು ಮೂಡಿಸುವ ಮತ್ತು ಕುತೂಹಲ ಮೂಡಿಸುವ ರೀತಿಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಸಿದ್ಧಪಡಿಸಬೇಕಾಗಿದೆ.

ಸ್ನೇಹಿತರೆ,

ಭಾರತವು ಬಲಿಷ್ಠವಾಗುತ್ತಿದ್ದಂತೆ, ಭಾರತದ ಅಸ್ಮಿತೆ ಮತ್ತು ಸಂಪ್ರದಾಯಗಳ ಬಗ್ಗೆ ಪ್ರಪಂಚದ ಆಸಕ್ತಿಯೂ ಬೆಳೆಯುತ್ತಿದೆ. ನಾವು ಈ ಬದಲಾವಣೆಯನ್ನು ಜಾಗತಿಕ ನಿರೀಕ್ಷೆಯಾಗಿ ಸ್ವೀಕರಿಸಬೇಕು. ಯೋಗ, ಆಯುರ್ವೇದ, ಕಲೆ, ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರಗಳು ಭವಿಷ್ಯಕ್ಕಾಗಿ ಅಪಾರ ಸಾಧ್ಯತೆಗಳನ್ನು ಹೊಂದಿವೆ. ಈ ವಿಷಯಗಳೊಂದಿಗೆ ನಾವು ನಮ್ಮ ಹೊಸ ಪೀಳಿಗೆಗೆ ಪರಿಚಿತರಾಗಬೇಕು. ಅಖಿಲ ಭಾರತೀಯ ಶಿಕ್ಷಾ ಸಮಾಗಮದಲ್ಲಿ ಈ ಎಲ್ಲಾ ವಿಷಯಗಳಿಗೆ ಆದ್ಯತೆ ನೀಡಲಾಗುತ್ತದೆ  ಎಂದು ನಾನು ನಂಬುತ್ತೇನೆ.

ನಿಮ್ಮ ಪ್ರಯತ್ನಗಳು ನವ ಭಾರತಕ್ಕೆ ಅಡಿಪಾಯ ಹಾಕುತ್ತವೆ, ನಮ್ಮ ದೇಶದ ಭವಿಷ್ಯ ರೂಪಿಸುತ್ತವೆ. 2047ರಲ್ಲಿ ರಾಷ್ಟ್ರವು 100 ವರ್ಷಗಳ ಸ್ವಾತಂತ್ರ್ಯ ಆಚರಿಸುವಾಗ, ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ನಮ್ಮ ಕನಸು ಮತ್ತು ಸಂಕಲ್ಪವು ನನಸಾಗುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಈ ಅವಧಿಯು ಇಂದು ನಿಮ್ಮಿಂದ ತರಬೇತಿ ಪಡೆಯುತ್ತಿರುವ ಯುವಕರ ಕೈಯಲ್ಲಿದೆ. ನಿಮ್ಮಿಂದ ಯಾರು ತಯಾರಾಗುತ್ತಾರೋ ಅವರೇ ನಾಳೆ ದೇಶವನ್ನು ಸಜ್ಜುಗೊಳಿಸುವರು. ಆದ್ದರಿಂದ, ನಾನು ನಿಮಗೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಈ ಕನಸನ್ನು ನನಸಾಗಿಸುವ ಸಂಕಲ್ಪ, ಆ ಸಂಕಲ್ಪವನ್ನು ನನಸಾಗಿಸಿ ಯಶಸ್ಸು ಸಾಧಿಸಲು ಸಮರ್ಪಣಾ ಭಾವದಿಂದ ಎಲ್ಲ ಯುವಕರು ಮುನ್ನಡೆಯಬೇಕು.

ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಆಶೀರ್ವಾದಗಳನ್ನು ತಿಳಿಸುತ್ತೇನೆ.

ತುಂಬು ಧನ್ಯವಾದಗಳು!

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

 

***