Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವದೆಹಲಿಯಲ್ಲಿ ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಪ್ರಧಾನಮಂತ್ರಿ ಮೋದಿ ಉದ್ಘಾಟಿಸಿದರು

ನವದೆಹಲಿಯಲ್ಲಿ ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಪ್ರಧಾನಮಂತ್ರಿ ಮೋದಿ ಉದ್ಘಾಟಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ವಿವಿಧ ಹಬ್ಬಗಳನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು. ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು ಮತ್ತು “ಬಾಬಾಸಾಹೇಬ್ ಮುಖ್ಯ ವಾಸ್ತುಶಿಲ್ಪಿಯಾಗಿದ್ದ ಸಂವಿಧಾನವು ನಮಗೆ ಸಂಸದೀಯ ವ್ಯವಸ್ಥೆಯ ಆಧಾರವನ್ನು ನೀಡಿದೆ. ಈ ಸಂಸದೀಯ ವ್ಯವಸ್ಥೆಯ ಮುಖ್ಯ ಜವಾಬ್ದಾರಿ ದೇಶದ ಪ್ರಧಾನ ಮಂತ್ರಿಯ ಕಚೇರಿಯ ಮೇಲಿದೆ. ಇಂದು ಪ್ರಧಾನಮಂತ್ರಿ ವಸ್ತುಸಂಗ್ರಹಾಲಯವನ್ನು ರಾಷ್ಟ್ರಕ್ಕೆ ಸಮರ್ಪಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ.”  ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಿಂದಿನ ಪ್ರಧಾನಿಗಳ ಕುಟುಂಬಗಳ ಸದಸ್ಯರಿಗೆ ಶುಭಾಶಯ ಕೋರಿದರು.
 “ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ, ಈ ವಸ್ತುಸಂಗ್ರಹಾಲಯವು ಭವ್ಯವಾದ ಸ್ಫೂರ್ತಿಯಾಗಿದೆ. ಈ 75 ವರ್ಷಗಳಲ್ಲಿ ದೇಶ ಹಲವು ಹೆಮ್ಮೆಯ ಕ್ಷಣಗಳನ್ನು ಕಂಡಿದೆ. ಇತಿಹಾಸದ ಕಿಟಕಿಯಲ್ಲಿ ನೋಡಿದಾಗ ಈ ಕ್ಷಣಗಳ ಮಹತ್ವವನ್ನು ಹೋಲಿಸಲಾಗದು” ಎಂದು ಪ್ರಧಾನಮಂತ್ರಿಯವರು ಹೇಳಿದರು,.
ಸ್ವಾತಂತ್ರ್ಯದ ನಂತರದ ಎಲ್ಲಾ ಸರ್ಕಾರಗಳ ಕೊಡುಗೆಯನ್ನು ಪ್ರಧಾನಿ ಪುನರುಚ್ಚರಿಸಿದರು. ಸ್ವತಂತ್ರ ಭಾರತದಲ್ಲಿ ರಚನೆಯಾದ ಪ್ರತಿಯೊಂದು ಸರ್ಕಾರವೂ ದೇಶವನ್ನು ಇಂದಿನ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಕೊಡುಗೆ ನೀಡಿದೆ. ನಾನು ಕೆಂಪು ಕೋಟೆಯಿಂದಲೂ ಈ ವಿಷಯವನ್ನು ಹಲವು ಬಾರಿ ಉಲ್ಲೇಖಿಸಿದ್ದೇನೆ. ಈ ವಸ್ತುಸಂಗ್ರಹಾಲಯವು ಪ್ರತಿ ಸರ್ಕಾರದ ಸೈದ್ಧಾಂತಿಕ ಪರಂಪರೆಯ ಜೀವಂತ ಪ್ರತಿಬಿಂಬವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು” ದೇಶದ ಪ್ರತಿಯೊಬ್ಬ ಪ್ರಧಾನಿಯು ಸಾಂವಿಧಾನಿಕ ಪ್ರಜಾಪ್ರಭುತ್ವದ ಗುರಿಗಳನ್ನು ಸಾಧಿಸಲು ಅಪಾರ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಮಂತ್ರಿಯವರು ಹೇಳಿದರು. “ಅವರನ್ನು ನೆನಪಿಸಿಕೊಳ್ಳುವುದೆಂದರೆ ಸ್ವತಂತ್ರ ಭಾರತದ ಪಯಣವನ್ನು ತಿಳಿಯುವುದು. ಇಲ್ಲಿಗೆ ಬರುವ ಜನರಿಗೆ ದೇಶದ ಮಾಜಿ ಪ್ರಧಾನಿಗಳ ಕೊಡುಗೆ, ಅವರ ಹಿನ್ನೆಲೆ, ಅವರ ಹೋರಾಟಗಳು ಮತ್ತು ರಚನೆಗಳ ಪರಿಚಯವಿದೆ ಎಂದು ಅವರು ಹೇಳಿದರು.
ಅನೇಕ ಪ್ರಧಾನಿಗಳು ಸಾಮಾನ್ಯ ಕುಟುಂಬದಿಂದ ಬಂದವರು ಎಂದು ಪ್ರಧಾನಿ ಹೆಮ್ಮೆ ವ್ಯಕ್ತಪಡಿಸಿದರು. ಅತ್ಯಂತ ಬಡವರು, ರೈತ ಕುಟುಂಬಗಳಿಂದ ಬಂದ ಇಂತಹ ನಾಯಕರು ಪ್ರಧಾನಮಂತ್ರಿ ಸ್ಥಾನವನ್ನು ತಲುಪಿರುವುದು ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ಸಂಪ್ರದಾಯಗಳ ಮೇಲಿನ ನಂಬಿಕೆಯನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು. “ಸಾಮಾನ್ಯ ಕುಟುಂಬದಲ್ಲಿ ಜನಿಸಿದ ವ್ಯಕ್ತಿಯೂ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯುನ್ನತ ಸ್ಥಾನಗಳನ್ನು ತಲುಪಬಹುದು ಎನ್ನುವ ವಿಶ್ವಾಸವನ್ನು ಇದು ದೇಶದ ಯುವಕರಿಗೆ ನೀಡುತ್ತದೆ” ಎಂದು ಶ್ರೀ ಮೋದಿ ಹೇಳಿದರು. ವಸ್ತುಸಂಗ್ರಹಾಲಯವು ಯುವ ಪೀಳಿಗೆಯ ಅನುಭವವನ್ನು ವಿಸ್ತರಿಸುತ್ತದೆ ಎಂದು ಪ್ರಧಾನಮಂತ್ರಿ ಆಶಿಸಿದರು. ನಮ್ಮ ಯುವಕರು ಸ್ವತಂತ್ರ ಭಾರತದ ಪ್ರಮುಖ ಸಂದರ್ಭಗಳ ಬಗ್ಗೆ ಹೆಚ್ಚು ತಿಳಿದುಕೊಂಡರೆ ಅವರ ನಿರ್ಧಾರಗಳು ಹೆಚ್ಚು ಪ್ರಸ್ತುತವಾಗುತ್ತವೆ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವದ ತಾಯಿಯಾಗಿ ಭಾರತದ ಸ್ಥಾನಮಾನವನ್ನು ಗಮನಿಸಿದ ಪ್ರಧಾನಿ, “ಭಾರತದ ಪ್ರಜಾಪ್ರಭುತ್ವದ ದೊಡ್ಡ ವೈಶಿಷ್ಟ್ಯವೆಂದರೆ ಅದು ಕಾಲಾನಂತರದಲ್ಲಿ ನಿರಂತರವಾಗಿ ಬದಲಾಗುತ್ತಿದೆ. ಪ್ರತಿ ಯುಗದಲ್ಲಿ, ಪ್ರತಿ ಪೀಳಿಗೆಯಲ್ಲಿ, ಪ್ರಜಾಪ್ರಭುತ್ವವನ್ನು ಹೆಚ್ಚು ಆಧುನಿಕ ಮತ್ತು ಸಶಕ್ತಗೊಳಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಒಂದೆರಡು ಅಪವಾದಗಳನ್ನು ಹೊರತುಪಡಿಸಿ, ಭಾರತವು ಪ್ರಜಾಪ್ರಭುತ್ವವನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ಬಲಪಡಿಸುವ ಹೆಮ್ಮೆಯ ಸಂಪ್ರದಾಯವನ್ನು ಹೊಂದಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. “ಅದಕ್ಕಾಗಿಯೇ ನಾವು ನಮ್ಮ ಪ್ರಯತ್ನಗಳೊಂದಿಗೆ ಪ್ರಜಾಪ್ರಭುತ್ವವನ್ನು ಬಲಪಡಿಸುವ ಜವಾಬ್ದಾರಿಯನ್ನು ಹೊಂದಿದ್ದೇವೆ” ಎಂದು ಅವರು ಹೇಳಿದರು. ಭಾರತೀಯ ಸಂಸ್ಕೃತಿಯ ಅಂತರ್ಗತ ಮತ್ತು ಹೊಂದಾಣಿಕೆಯ ಅಂಶಗಳನ್ನು ಎತ್ತಿ ಹಿಡಿದ ಶ್ರೀ ಮೋದಿ, ನಮ್ಮ ಪ್ರಜಾಪ್ರಭುತ್ವವು ಆಧುನಿಕತೆ ಮತ್ತು ಹೊಸ ಆಲೋಚನೆಗಳನ್ನು ಸ್ವೀಕರಿಸಲು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.
ಭಾರತದ ಶ್ರೀಮಂತ ಇತಿಹಾಸ ಮತ್ತು ಸಮೃದ್ಧ ಯುಗವನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಭಾರತದ ಪರಂಪರೆ ಮತ್ತು ವರ್ತಮಾನದ ಸರಿಯಾದ ಚಿತ್ರಣದ ಬಗ್ಗೆ ಜಾಗೃತಿ ಮೂಡಿಸಲು ಒತ್ತು ನೀಡಿದರು. ವಿದೇಶದಿಂದ ಕಳುವಾಗಿರುವ ಕಲಾಕೃತಿಗಳು ಪರಂಪರೆಯನ್ನು ಮರಳಿ ತರಲು, ಭವ್ಯ ಪರಂಪರೆಯ ಸ್ಥಳಗಳನ್ನು ಆಚರಿಸಲು, ಜಲಿಯನ್‌ವಾಲಾ ಸ್ಮಾರಕ, ಪಂಚತೀರ್ಥ ಬಾಬಾಸಾಹೇಬರ ಸ್ಮರಣಾರ್ಥ ಪಂಚತೀರ್ಥ, ಸ್ವಾತಂತ್ರ್ಯ ಹೋರಾಟಗಾರ ಮ್ಯೂಸಿಯಂ, ಬುಡಕಟ್ಟು ಇತಿಹಾಸ ಸಂಗ್ರಹಾಲಯದಂತಹ ಸ್ಥಳಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯನ್ನು ಉಳಿಸುವ ಸರ್ಕಾರದ ಪ್ರಯತ್ನಗಳು ಆ ದಿಕ್ಕಿನಲ್ಲಿ ಹೆಜ್ಜೆಗಳಾಗಿವೆ ಎಂದು ಹೇಳಿದರು.
ಚಕ್ರವನ್ನು ಹಿಡಿದಿರುವ ಅನೇಕ ಕೈಗಳನ್ನು ಹೊಂದಿರುವ ವಸ್ತುಸಂಗ್ರಹಾಲಯದ ಲಾಂಛನವನ್ನುಕುರಿತು ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು, ಚಕ್ರವು 24 ಗಂಟೆಗಳ ನಿರಂತರತೆಯ ಸಂಕೇತವಾಗಿದೆ ಮತ್ತು ಸಮೃದ್ಧಿ ಮತ್ತು ಕಠಿಣ ಪರಿಶ್ರಮದ ಸಂಕಲ್ಪವಾಗಿದೆ ಎಂದು ಹೇಳಿದರು. ಈ ಸಂಕಲ್ಪ, ಪ್ರಜ್ಞೆ ಮತ್ತು ಶಕ್ತಿಯು ಮುಂಬರುವ 25 ವರ್ಷಗಳಲ್ಲಿ ಭಾರತದ ಅಭಿವೃದ್ಧಿಯನ್ನು ವ್ಯಾಖ್ಯಾನಿಸಲಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.

ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯನ್ನು ಮತ್ತು ಆ ವ್ಯವಸ್ಥೆಯಲ್ಲಿ ಭಾರತದ ಬೆಳೆಯುತ್ತಿರುವ ಸ್ಥಾನಮಾನವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. “ಇಂದು, ಹೊಸ ಜಾಗತಿಕ ವ್ಯವಸ್ಥೆಯು ಹೊರಹೊಮ್ಮುತ್ತಿರುವಾಗ, ಜಗತ್ತು ಭಾರತವನ್ನು ಭರವಸೆ ಮತ್ತು ವಿಶ್ವಾಸದಿಂದ ನೋಡುತ್ತಿದೆ, ಆಗ ಭಾರತವು ಈ ಸಂದರ್ಭಕ್ಕೆ ತಕ್ಕಂತೆ  ತನ್ನ ಪ್ರಯತ್ನಗಳನ್ನು ಹೆಚ್ಚಿಸಬೇಕಾಗಿದೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

 

************