ಗೌರವಾನ್ವಿತರೇ,
ಭೂತಾನ್ ಪ್ರಧಾನಮಂತ್ರಿ, ನನ್ನ ಸಹೋದರ ದಾಶೋ ತ್ಸೆರಿಂಗ್ ಟೋಬ್ಗೆ ಜಿ, ಸೋಲ್ ಬೋರ್ಡ್ ಅಧ್ಯಕ್ಷ ಸುಧೀರ್ ಮೆಹ್ತಾ, ಉಪಾಧ್ಯಕ್ಷ ಹನ್ಸುಮುಖ್ ಅಧಿಯಾ, ತಮ್ಮ ಜೀವನದಲ್ಲಿ, ತಮ್ಮ ಕ್ಷೇತ್ರಗಳಲ್ಲಿ ನಾಯಕತ್ವವನ್ನು ಒದಗಿಸುವಲ್ಲಿ ಯಶಸ್ವಿಯಾದ ಕೈಗಾರಿಕಾ ಜಗತ್ತಿನ ದಿಗ್ಗಜರು ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳನ್ನು ನಾನು ಇಲ್ಲಿ ನೋಡುತ್ತಿದ್ದೇನೆ. ಭವಿಷ್ಯಕ್ಕಾಗಿ ಕಾಯುತ್ತಿರುವ ನನ್ನ ಯುವ ಸ್ನೇಹಿತರನ್ನೂ ನಾನು ಇಲ್ಲಿ ನೋಡುತ್ತಿದ್ದೇನೆ.
ಸ್ನೇಹಿತರೇ,
ಕೆಲವು ಕಾರ್ಯಕ್ರಮಗಳು ನಮ್ಮ ಹೃದಯಕ್ಕೆ ತುಂಬಾ ಹತ್ತಿರವಾಗಿರುತ್ತವೆ. ಇಂದಿನ ಕಾರ್ಯಕ್ರಮವು ಕೂಡ ಅಂತಹದ್ದೇ ಒಂದು ಕಾರ್ಯಕ್ರಮ. ಉತ್ತಮ ಪ್ರಜೆಗಳನ್ನು ರೂಪಿಸುವುದು ರಾಷ್ಟ್ರ ನಿರ್ಮಾಣಕ್ಕೆ ಅತ್ಯಂತ ಮುಖ್ಯ. ವ್ಯಕ್ತಿಯ ಅಭಿವೃದ್ಧಿಯಿಂದಲೇ ರಾಷ್ಟ್ರದ ಅಭಿವೃದ್ಧಿ ಆರಂಭವಾಗುತ್ತದೆ, ಜನರಿಂದಲೇ ಈ ಜಗತ್ತು. ಯಾವುದೇ ಉನ್ನತ ಸ್ಥಾನವನ್ನು ತಲುಪಬೇಕಾದರೂ, ಯಾವುದೇ ಮಹತ್ವಾಕಾಂಕ್ಷೆಯ ಗುರಿಯನ್ನು ಮುಟ್ಟಬೇಕಾದರೂ, ಅದರ ಆರಂಭ ಜನರಿಂದಲೇ ಆಗಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಶ್ರೇಷ್ಠ ನಾಯಕರನ್ನು ರೂಪಿಸುವುದು ಇಂದಿನ ಅಗತ್ಯ ಮತ್ತು ಕಾಲದ ಬೇಡಿಕೆ. ಆದ್ದರಿಂದ, “ದಿ ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್ಶಿಪ್” ಸ್ಥಾಪನೆಯು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದ ಪಯಣದಲ್ಲಿ ಒಂದು ಮಹತ್ವಪೂರ್ಣ ಹೆಜ್ಜೆಯಾಗಿದೆ. ಈ ಸಂಸ್ಥೆಯ ಹೆಸರಿನಲ್ಲಿ ‘SOUL’ (ಆತ್ಮ) ಇದೆ ಎಂಬುದು ಮಾತ್ರವಲ್ಲ, ಇದು ಭಾರತದ ಸಾಮಾಜಿಕ ಜೀವನದ ಆತ್ಮವಾಗಲಿದೆ ಎಂಬ ನಂಬಿಕೆ ನನಗಿದೆ. “ಆತ್ಮ” ಎಂಬ ಪದ ನಮಗೆಲ್ಲರಿಗೂ ಪರಿಚಿತ. ಈ ಸಂಸ್ಥೆಯ ಹೆಸರಿನಲ್ಲಿರುವ SOUL ಪದವನ್ನು ಆ ಅರ್ಥದಲ್ಲಿ ನೋಡಿದರೆ, ಅದು ನಿಜಕ್ಕೂ ನಮಗೆ ಆತ್ಮವನ್ನು ಅನುಭವಿಸುವಂತೆ ಮಾಡುತ್ತದೆ. ಈ ಮಹತ್ವಾಕಾಂಕ್ಷೆಯ ಯೋಜನೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲ ಸಹೋದ್ಯೋಗಿಗಳಿಗೂ, ಈ ಸಂಸ್ಥೆಯೊಂದಿಗೆ ಜೊತೆಗೂಡಿರುವ ಎಲ್ಲ ಮಹನೀಯರಿಗೂ ನಾನು ಹೃತ್ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಶೀಘ್ರದಲ್ಲೇ ಗಿಫ್ಟ್ ಸಿಟಿ ಬಳಿ “ದಿ ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್ಶಿಪ್”ನ ಒಂದು ವಿಶಾಲವಾದ ಕ್ಯಾಂಪಸ್ ಸಿದ್ಧವಾಗಲಿದೆ. ಸ್ವಲ್ಪ ಹೊತ್ತಿನ ಹಿಂದೆ ನಾನು ನಿಮ್ಮ ಬಳಿಗೆ ಬರುವಾಗ, ಅಧ್ಯಕ್ಷರು ಈ ಕ್ಯಾಂಪಸ್ ನ ಸಂಪೂರ್ಣ ಮಾದರಿಯನ್ನು ಮತ್ತು ಯೋಜನೆಯನ್ನು ನನಗೆ ತೋರಿಸಿದರು. ವಾಸ್ತುಶಿಲ್ಪದ ದೃಷ್ಟಿಯಿಂದಲೂ ಇದು ಒಂದು ಅನನ್ಯ ಕಟ್ಟಡವಾಗಲಿದೆ ಎಂದು ನಾನು ಭಾವಿಸುತ್ತೇನೆ.
ಸ್ನೇಹಿತರೇ,
ಇಂದು, “ದಿ ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್ಶಿಪ್ – SOUL” ತನ್ನ ಯಶಸ್ವಿ ಪಯಣದ ಮೊದಲ ಮಹತ್ವದ ಹೆಜ್ಜೆಯನ್ನಿಡುತ್ತಿರುವ ಈ ಸಂದರ್ಭದಲ್ಲಿ, ನಿಮ್ಮ ದಿಕ್ಕು ಏನು, ನಿಮ್ಮ ಗುರಿ ಏನು ಎಂಬುದನ್ನು ನೀವು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ಸ್ವಾಮಿ ವಿವೇಕಾನಂದರು ಹೇಳಿದ ಒಂದು ಮಾತು ನೆನಪಿಗೆ ಬರುತ್ತಿದೆ – “ನನಗೆ ನೂರು ಚೈತನ್ಯಶೀಲ ಯುವಕ ಯುವತಿಯರನ್ನು ಕೊಡಿ, ನಾನು ಭಾರತವನ್ನು ಪರಿವರ್ತಿಸುತ್ತೇನೆ.” ಸ್ವಾಮಿ ವಿವೇಕಾನಂದರು ಭಾರತವನ್ನು ಗುಲಾಮಗಿರಿಯಿಂದ ಬಿಡುಗಡೆಗೊಳಿಸಿ, ಒಂದು ಹೊಸ ಭಾರತವನ್ನು ಕಟ್ಟಲು ಬಯಸಿದ್ದರು. ನೂರು ನಾಯಕರಿದ್ದರೆ, ಭಾರತವನ್ನು ಸ್ವತಂತ್ರಗೊಳಿಸುವುದಲ್ಲದೆ, ಅದನ್ನು ವಿಶ್ವದಲ್ಲೇ ಅಗ್ರಸ್ಥಾನದಲ್ಲಿರುವ ದೇಶವನ್ನಾಗಿ ಮಾಡಬಹುದು ಎಂಬ ದೃಢವಾದ ನಂಬಿಕೆ ಅವರಿಗಿತ್ತು. ಈ ಇಚ್ಛಾಶಕ್ತಿಯಿಂದ, ಈ ಮಂತ್ರದಿಂದ, ನಾವೆಲ್ಲರೂ ಮತ್ತು ವಿಶೇಷವಾಗಿ ನೀವು ಮುನ್ನಡೆಯಬೇಕು. ಇಂದು ಪ್ರತಿಯೊಬ್ಬ ಭಾರತೀಯನೂ 21 ನೇ ಶತಮಾನದ “ಅಭಿವೃದ್ಧಿ ಹೊಂದಿದ ಭಾರತ”ಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದಾನೆ. 140 ಕೋಟಿ ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ, ಪ್ರತಿಯೊಂದು ಕ್ಷೇತ್ರದಲ್ಲೂ, ಪ್ರತಿಯೊಂದು ಹಂತದಲ್ಲೂ, ಜೀವನದ ಪ್ರತಿಯೊಂದು ಅಂಶದಲ್ಲೂ ನಮಗೆ ಕ್ರಿಯಾಶೀಲ ನಾಯಕತ್ವದ ಅಗತ್ಯವಿದೆ. ಕೇವಲ ರಾಜಕೀಯ ನಾಯಕತ್ವವಲ್ಲ, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ 21ನೇ ಶತಮಾನದ ದಕ್ಷ ನಾಯಕತ್ವವನ್ನು ರೂಪಿಸಲು “ದಿ ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್ಶಿಪ್”ಗೆ ಅಪಾರ ಅವಕಾಶಗಳಿವೆ. ಈ ಸಂಸ್ಥೆಯಿಂದ ಹೊರಹೊಮ್ಮುವ ನಾಯಕರು ದೇಶದಲ್ಲಿ ಮಾತ್ರವಲ್ಲದೆ, ವಿಶ್ವದ ಮಟ್ಟದಲ್ಲಿಯೂ ತಮ್ಮ ಛಾಪು ಮೂಡಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಇಲ್ಲಿಂದ ತರಬೇತಿ ಪಡೆದು ಹೊರಬರುವ ಯುವಕರು ರಾಜಕೀಯದಲ್ಲೂ ಹೊಸ ಎತ್ತರವನ್ನು ತಲುಪಬಹುದು.
ಸ್ನೇಹಿತರೇ,
ಒಂದು ದೇಶದ ಪ್ರಗತಿಗೆ ನೈಸರ್ಗಿಕ ಸಂಪನ್ಮೂಲಗಳು ಪೂರಕವಾಗಿವೆ ನಿಜ, ಆದರೆ ಮಾನವ ಸಂಪನ್ಮೂಲಗಳ ಪಾತ್ರ ಅದಕ್ಕಿಂತಲೂ ಮಹತ್ವದ್ದಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್ ಬೇರ್ಪಡಿಕೆಯ ಚಳುವಳಿ ನಡೆಯುತ್ತಿದ್ದಾಗ ನನಗೆ ನೆನಪಿದೆ. ಆಗ ನಾವು ಚಿಕ್ಕ ಮಕ್ಕಳು. ಆಗ ಜನ ಹೀಗೆ ಮಾತನಾಡಿಕೊಳ್ಳುತ್ತಿದ್ದರು: “ಗುಜರಾತ್ ಬೇರ್ಪಟ್ಟರೆ ಏನು ಮಾಡುತ್ತದೆ? ಅಲ್ಲಿ ಯಾವುದೇ ನೈಸರ್ಗಿಕ ಸಂಪನ್ಮೂಲಗಳಿಲ್ಲ, ಗಣಿಗಳಿಲ್ಲ, ಕಲ್ಲಿದ್ದಲು ಇಲ್ಲ, ಏನೂ ಇಲ್ಲ. ನೀರಿಲ್ಲ, ಮರುಭೂಮಿ, ಮತ್ತೊಂದು ಕಡೆ ಪಾಕಿಸ್ತಾನ. ಅವರು ಏನು ಮಾಡುತ್ತಾರೆ? ಗುಜರಾತಿಗಳ ಬಳಿ ಇರುವುದೆಂದರೆ ಉಪ್ಪು ಮಾತ್ರ.” ಆದರೆ ನಾಯಕತ್ವದ ಶಕ್ತಿಯನ್ನು ನೋಡಿ! ಇಂದು ಆ ಗುಜರಾತ್ ಎಲ್ಲವನ್ನೂ ಸಾಧಿಸಿದೆ. ಅಲ್ಲಿನ ಜನರಲ್ಲಿ ಆತ್ಮವಿಶ್ವಾಸವಿತ್ತು. ಅವರು “ಇದು ಇಲ್ಲ, ಅದು ಇಲ್ಲ” ಎಂದು ಕುಳಿತುಕೊಂಡು ಅಳಲಿಲ್ಲ. “ಏನಿದೆ ಅದರಿಂದಲೇ ಮುಂದುವರೆಯೋಣ” ಎಂಬ ಧೋರಣೆ ಅವರದಾಗಿತ್ತು. ಗುಜರಾತ್ನಲ್ಲಿ ಒಂದೇ ಒಂದು ವಜ್ರದ ಗಣಿ ಇಲ್ಲ, ಆದರೆ ಜಗತ್ತಿನಲ್ಲಿ ಮಾರಾಟವಾಗುವ 10 ವಜ್ರಗಳಲ್ಲಿ 9 ಗುಜರಾತಿಗಳ ಕೈ ಸ್ಪರ್ಶ ಪಡೆದಿರುತ್ತವೆ! ನಾನು ಹೇಳಲು ಬಯಸುವುದೇನೆಂದರೆ, ನೈಸರ್ಗಿಕ ಸಂಪನ್ಮೂಲಗಳು ಮಾತ್ರವಲ್ಲ, ಮಾನವ ಸಂಪನ್ಮೂಲ, ಮಾನವ ಸಾಮರ್ಥ್ಯ, ಮಾನವಶಕ್ತಿ ಮತ್ತು ನಾಯಕತ್ವ – ಇವುಗಳೇ ಅಭಿವೃದ್ಧಿಯ ಮೂಲಾಧಾರ.
21ನೇ ಶತಮಾನದಲ್ಲಿ, ನಾವೀನ್ಯತೆಗೆ ಚಾಲನೆ ನೀಡಬಲ್ಲ ಮತ್ತು ಕೌಶಲ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳಬಲ್ಲ ಸಂಪನ್ಮೂಲಗಳ ಅಗತ್ಯವಿದೆ. ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಕೌಶಲ್ಯಗಳು ಎಷ್ಟು ಮುಖ್ಯ ಎಂಬುದನ್ನು ನಾವು ಕಾಣುತ್ತಿದ್ದೇವೆ. ಹಾಗಾಗಿ, ನಾಯಕತ್ವ ಅಭಿವೃದ್ಧಿಯ ಕ್ಷೇತ್ರಕ್ಕೂ ಹೊಸ ಕೌಶಲ್ಯಗಳ ಅಗತ್ಯವಿದೆ. ನಾಯಕತ್ವ ಅಭಿವೃದ್ಧಿಯ ಈ ಕಾರ್ಯವನ್ನು ವೇಗವಾಗಿ ಮತ್ತು ವೈಜ್ಞಾನಿಕ ವಿಧಾನದಲ್ಲಿ ಮುಂದುವರಿಸಬೇಕು. ಈ ನಿಟ್ಟಿನಲ್ಲಿ ನಿಮ್ಮ ಸಂಸ್ಥೆ, SOUL, ಪ್ರಮುಖ ಪಾತ್ರ ವಹಿಸಲಿದೆ ಎಂದು ನಾನು ಭಾವಿಸುತ್ತೇನೆ. ಈಗಾಗಲೇ ನೀವು ಈ ಬಗ್ಗೆ ಕಾರ್ಯಪ್ರವೃತ್ತರಾಗಿರುವುದು ನನಗೆ ಸಂತಸ ತಂದಿದೆ. ಔಪಚಾರಿಕವಾಗಿ ಇಂದು ನಿಮ್ಮ ಮೊದಲ ಕಾರ್ಯಕ್ರಮವಾಗಿರಬಹುದು, ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಶಿಕ್ಷಣ ಕಾರ್ಯದರ್ಶಿಗಳು, ರಾಜ್ಯ ಯೋಜನಾ ನಿರ್ದೇಶಕರು ಮತ್ತು ಇತರ ಅಧಿಕಾರಿಗಳಿಗೆ SOUL ಈಗಾಗಲೇ ಕಾರ್ಯಾಗಾರಗಳನ್ನು ನಡೆಸಿದೆ ಎಂದು ನನಗೆ ತಿಳಿದುಬಂದಿದೆ. ಗುಜರಾತ್ ನ ಮುಖ್ಯಮಂತ್ರಿಗಳ ಕಚೇರಿಯ ಸಿಬ್ಬಂದಿಗಳಲ್ಲಿ ನಾಯಕತ್ವ ಅಭಿವೃದ್ಧಿಗಾಗಿ ಚಿಂತನ ಶಿಬಿರವನ್ನೂ ಆಯೋಜಿಸಲಾಗಿದೆ. ಇದು ಕೇವಲ ಆರಂಭ. SOUL ವಿಶ್ವದಲ್ಲೇ ಅತ್ಯುತ್ತಮ ನಾಯಕತ್ವ ಅಭಿವೃದ್ಧಿ ಸಂಸ್ಥೆಯಾಗಬೇಕು ಎಂಬುದು ನಮ್ಮೆಲ್ಲರ ಆಶಯ. ಇದಕ್ಕಾಗಿ ನಾವು ಒಟ್ಟಾಗಿ ಶ್ರಮಿಸಬೇಕಿದೆ.
ಸ್ನೇಹಿತರೇ,
ಇಂದು ಭಾರತವು ಜಾಗತಿಕ ಶಕ್ತಿ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಈ ವೇಗ ಮತ್ತು ಉತ್ಸಾಹವು ಪ್ರತಿಯೊಂದು ಕ್ಷೇತ್ರದಲ್ಲೂ ಹೆಚ್ಚಾಗಬೇಕಾದರೆ, ನಮಗೆ ವಿಶ್ವ ದರ್ಜೆಯ ನಾಯಕರು, ಅಂತಾರಾಷ್ಟ್ರೀಯ ಮಟ್ಟದ ನಾಯಕತ್ವ ಅಗತ್ಯವಿದೆ. SOUL ನಂತಹ ನಾಯಕತ್ವ ಸಂಸ್ಥೆಗಳು ಈ ನಿಟ್ಟಿನಲ್ಲಿ ಗೇಮ್ ಚೇಂಜರ್ ಗಳಾಗಿ ಪರಿಣಮಿಸಬಲ್ಲವು. ಅಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ನಮ್ಮ ಆಯ್ಕೆ ಮಾತ್ರವಲ್ಲ, ನಮ್ಮ ಅನಿವಾರ್ಯತೆಯೂ ಹೌದು. ಇಂದು ಭಾರತಕ್ಕೆ ಪ್ರತಿಯೊಂದು ಕ್ಷೇತ್ರದಲ್ಲೂ ಚೈತನ್ಯಶೀಲ ನಾಯಕರ ಅಗತ್ಯವಿದೆ, ಅವರು ಜಾಗತಿಕ ಸಂಕೀರ್ಣತೆಗಳು ಮತ್ತು ಜಾಗತಿಕ ಅಗತ್ಯಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಲ್ಲರು. ಜಾಗತಿಕ ವೇದಿಕೆಯಲ್ಲಿ ಸಮಸ್ಯೆಗಳನ್ನು ಪರಿಹರಿಸುವಾಗ, ದೇಶದ ಹಿತಾಸಕ್ತಿಗಳನ್ನು ಪ್ರಥಮ ಆದ್ಯತೆಯಾಗಿಟ್ಟುಕೊಳ್ಳುವವರು. ಜಾಗತಿಕ ದೃಷ್ಟಿಕೋನವನ್ನು ಹೊಂದಿದ್ದರೂ, ಅವರ ಚಿಂತನೆಯಲ್ಲಿ ಸ್ಥಳೀಯತೆಯೂ ಪ್ರಮುಖ ಪಾತ್ರ ವಹಿಸುವಂತಹವರು. ಭಾರತೀಯ ಮನಸ್ಸಿನೊಂದಿಗೆ ಮುನ್ನಡೆಯುವ, ಅಂತಾರಾಷ್ಟ್ರೀಯ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಗಳನ್ನು ನಾವು ತಯಾರು ಮಾಡಬೇಕು. ಯಾರು ಯಾವಾಗಲೂ ಕಾರ್ಯತಂತ್ರದ ನಿರ್ಧಾರ ತೆಗೆದುಕೊಳ್ಳುವಿಕೆ, ಬಿಕ್ಕಟ್ಟು ನಿರ್ವಹಣೆ ಮತ್ತು ಭವಿಷ್ಯದ ಚಿಂತನೆಗೆ ಸಿದ್ಧರಿರುತ್ತಾರೋ ಅಂತಹವರು. ಅಂತಾರಾಷ್ಟ್ರೀಯ ಮಾರುಕಟ್ಟೆಗಳು ಮತ್ತು ಜಾಗತಿಕ ಸಂಸ್ಥೆಗಳಲ್ಲಿ ಸ್ಪರ್ಧಿಸಬೇಕಾದರೆ, ಅಂತಾರಾಷ್ಟ್ರೀಯ ವ್ಯಾಪಾರ ಚಲನಶೀಲತೆಯ ತಿಳುವಳಿಕೆಯನ್ನು ಹೊಂದಿರುವ ನಾಯಕರು ನಮಗೆ ಬೇಕು. ಇದುವೇ SOUL ನ ಮುಖ್ಯ ಉದ್ದೇಶ. ನಿಮ್ಮ ವ್ಯಾಪ್ತಿ ಬಹಳ ವಿಶಾಲವಾಗಿದೆ, ನಿಮ್ಮ ಮುಂದಿರುವ ಅವಕಾಶಗಳು ಅಪಾರವಾಗಿವೆ, ಮತ್ತು ನಿಮ್ಮ ಮೇಲಿನ ನಿರೀಕ್ಷೆಗಳು ಕೂಡ ಅಷ್ಟೇ ಹೆಚ್ಚಿವೆ.
ಸ್ನೇಹಿತರೇ,
ಒಂದು ವಿಷಯವನ್ನು ನೀವೆಲ್ಲರೂ ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ಮುಂದಿನ ದಿನಗಳಲ್ಲಿ, ನಾಯಕತ್ವ ಎಂದರೆ ಕೇವಲ ಅಧಿಕಾರ ಅಲ್ಲ. ನಾವೀನ್ಯತೆ ಮತ್ತು ಪ್ರಭಾವ ಬೀರುವ ಸಾಮರ್ಥ್ಯವಿರುವವರು ಮಾತ್ರ ನಾಯಕತ್ವದ ಸ್ಥಾನಗಳಲ್ಲಿ ಇರಲು ಸಾಧ್ಯ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಈ ಅಗತ್ಯಕ್ಕೆ ತಕ್ಕಂತೆ ತಮ್ಮನ್ನು ತಾವು ರೂಪಿಸಿಕೊಳ್ಳಬೇಕು. SOUL ಒಂದು ಅದ್ಭುತವಾದ ಸಂಸ್ಥೆಯಾಗಿದ್ದು, ವ್ಯಕ್ತಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಅಪಾಯಗಳನ್ನು ಎದುರಿಸುವ ಧೈರ್ಯ ಮತ್ತು ಪರಿಹಾರ ಕೇಂದ್ರಿತ ಮನಸ್ಥಿತಿಯನ್ನು ಬೆಳೆಸುತ್ತದೆ. ಮುಂದಿನ ದಿನಗಳಲ್ಲಿ, ಅಡ್ಡಿಪಡಿಸುವ ಬದಲಾವಣೆಗಳ ನಡುವೆ ಕೆಲಸ ಮಾಡಲು ಸಿದ್ಧರಾಗಿರುವ ನಾಯಕರು ಈ ಸಂಸ್ಥೆಯಿಂದ ಹೊರಹೊಮ್ಮುತ್ತಾರೆ.
ಸ್ನೇಹಿತರೇ,
ಟ್ರೆಂಡ್ ಗಳನ್ನು ಅನುಸರಿಸುವವರಲ್ಲ, ಟ್ರೆಂಡ್ ಗಳನ್ನು ಸೃಷ್ಟಿಸುವ ನಾಯಕರನ್ನು ನಾವು ರೂಪಿಸಬೇಕು. ಮುಂಬರುವ ದಿನಗಳಲ್ಲಿ, ರಾಜತಾಂತ್ರಿಕತೆಯಿಂದ ತಾಂತ್ರಿಕ ನಾವೀನ್ಯತೆಯವರೆಗೆ ಹೊಸ ನಾಯಕತ್ವವನ್ನು ಪ್ರೋತ್ಸಾಹಿಸಿದಾಗ, ಈ ಎಲ್ಲಾ ಕ್ಷೇತ್ರಗಳಲ್ಲಿ ಭಾರತದ ಪ್ರಭಾವ ಮತ್ತು ಪರಿಣಾಮವು ಹಲವು ಪಟ್ಟು ಹೆಚ್ಚಾಗುತ್ತದೆ. ಅಂದರೆ, ಒಂದು ರೀತಿಯಲ್ಲಿ, ಭಾರತದ ಸಂಪೂರ್ಣ ದೃಷ್ಟಿಕೋನ, ಸಂಪೂರ್ಣ ಭವಿಷ್ಯವು ಬಲವಾದ ನಾಯಕತ್ವ ಪೀಳಿಗೆಯ ಮೇಲೆ ಅವಲಂಬಿತವಾಗಿರುತ್ತದೆ. ಅದಕ್ಕಾಗಿಯೇ ನಾವು ಜಾಗತಿಕ ಚಿಂತನೆ ಮತ್ತು ಸ್ಥಳೀಯ ಪಾಲನೆಯೊಂದಿಗೆ ಮುನ್ನಡೆಯಬೇಕು. ನಮ್ಮ ಆಡಳಿತ, ನಮ್ಮ ನೀತಿ ನಿರೂಪಣೆಯನ್ನು ವಿಶ್ವ ದರ್ಜೆಯನ್ನಾಗಿ ಮಾಡಬೇಕು. ನಮ್ಮ ನೀತಿ ನಿರೂಪಕರು, ಅಧಿಕಾರಿಗಳು, ಉದ್ಯಮಿಗಳು ಜಾಗತಿಕ ಅತ್ಯುತ್ತಮ ಅಭ್ಯಾಸಗಳೊಂದಿಗೆ ಸಂಪರ್ಕ ಸಾಧಿಸುವ ಮೂಲಕ ತಮ್ಮ ನೀತಿಗಳನ್ನು ರೂಪಿಸಲು ಸಾಧ್ಯವಾದರೆ ಮಾತ್ರ ಇದು ಸಾಧ್ಯ. ಮತ್ತು ಇದರಲ್ಲಿ SOUL ನಂತಹ ಸಂಸ್ಥೆಗಳು ಬಹಳ ದೊಡ್ಡ ಪಾತ್ರವನ್ನು ವಹಿಸುತ್ತವೆ.
ಸ್ನೇಹಿತರೇ,
ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕೆಂದರೆ, ಪ್ರತಿಯೊಂದು ಕ್ಷೇತ್ರದಲ್ಲೂ ನಾವು ವೇಗವಾಗಿ ಮುನ್ನಡೆಯಬೇಕು ಎಂದು ನಾನು ಈ ಹಿಂದೆಯೂ ಹೇಳಿದ್ದೇನೆ. ನಮ್ಮ ಧರ್ಮಗ್ರಂಥಗಳಲ್ಲಿ ಹೀಗೆ ಹೇಳಲಾಗಿದೆ-
“ಯತ್ ಯತ್ ಆಚರತಿ ಶ್ರೇಷ್ಠಃ, ತತ್ ತತ್ ಏವ ಇತರಃ ಜನಃ।।”
ಅಂದರೆ, ಶ್ರೇಷ್ಠ ವ್ಯಕ್ತಿಯು ಹೇಗೆ ನಡೆದುಕೊಳ್ಳುತ್ತಾನೋ ಹಾಗೆಯೇ ಸಾಮಾನ್ಯ ಜನರು ಅನುಕರಿಸುತ್ತಾರೆ. ಆದ್ದರಿಂದ, ಭಾರತದ ರಾಷ್ಟ್ರೀಯ ದೃಷ್ಟಿಕೋನವನ್ನು ಪ್ರತಿಯೊಂದು ಅಂಶದಲ್ಲೂ ಪ್ರತಿಬಿಂಬಿಸುವ ಮತ್ತು ಅದಕ್ಕೆ ಅನುಗುಣವಾಗಿ ನಡೆಸುವ ನಾಯಕತ್ವ ಅಗತ್ಯ. ಭವಿಷ್ಯದ ನಾಯಕರು, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಅಗತ್ಯವಿರುವ ಉಕ್ಕಿನಂತಹ ದೃಢತೆ ಮತ್ತು ಉತ್ಸಾಹ ಎರಡನ್ನೂ ಹೊಂದಿರಬೇಕು. ಇದುವೇ SOUL ನ ಮುಖ್ಯ ಗುರಿಯಾಗಿರಬೇಕು. ಉತ್ತಮ ನಾಯಕತ್ವದಿಂದ, ಅಗತ್ಯ ಬದಲಾವಣೆಗಳು ಮತ್ತು ಸುಧಾರಣೆಗಳು ಸ್ವಯಂಚಾಲಿತವಾಗಿ ಜಾರಿಗೆ ಬರುತ್ತವೆ.
ಸ್ನೇಹಿತರೇ,
ಸಾರ್ವಜನಿಕ ನೀತಿ ಮತ್ತು ಸಾಮಾಜಿಕ ವಲಯಗಳಲ್ಲಿಯೂ ನಾವು ಈ ಉಕ್ಕಿನಂಥ ದೃಢತೆ ಮತ್ತು ಉತ್ಸಾಹವನ್ನು ಬೆಳೆಸಬೇಕು. ಡೀಪ್-ಟೆಕ್, ಬಾಹ್ಯಾಕಾಶ, ಜೈವಿಕ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನದಂತಹ ಹೊಸ ಕ್ಷೇತ್ರಗಳಿಗೆ ನಾವು ನಾಯಕತ್ವವನ್ನು ಸಿದ್ಧಪಡಿಸಬೇಕು. ಕ್ರೀಡೆ, ಕೃಷಿ, ಉತ್ಪಾದನೆ ಮತ್ತು ಸಾಮಾಜಿಕ ಸೇವೆಯಂತಹ ಸಾಂಪ್ರದಾಯಿಕ ಕ್ಷೇತ್ರಗಳಿಗೂ ನಾವು ನಾಯಕತ್ವವನ್ನು ಸೃಷ್ಟಿಸಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಶ್ರೇಷ್ಠತೆಯನ್ನು ಸಾಧಿಸುವ ಆಕಾಂಕ್ಷೆಯನ್ನು ಹೊಂದಿರಬೇಕು, ಮತ್ತು ಅದನ್ನು ಮುಟ್ಟಬೇಕು. ಆದ್ದರಿಂದ, ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವ ನಾಯಕರು ಭಾರತಕ್ಕೆ ಬೇಕಾಗುತ್ತಾರೆ. ಅಂತಹ ಸಂಸ್ಥೆಗಳ ವೈಭವದ ಕಥೆಗಳಿಂದ ನಮ್ಮ ಇತಿಹಾಸ ತುಂಬಿದೆ. ನಾವು ಆ ಉತ್ಸಾಹವನ್ನು ಪುನರುಜ್ಜೀವನಗೊಳಿಸಬೇಕು. ಇದು ಅಸಾಧ್ಯವೇನಲ್ಲ. ಇದನ್ನು ಮಾಡಿ ತೋರಿಸಿರುವ ಅನೇಕ ದೇಶಗಳ ಉದಾಹರಣೆಗಳು ಜಗತ್ತಿನಲ್ಲಿವೆ. ಈ ಸಭಾಂಗಣದಲ್ಲಿ ಕುಳಿತಿರುವ ಮತ್ತು ಹೊರಗೆ ನಮ್ಮ ಮಾತುಗಳನ್ನು ಕೇಳುತ್ತಿರುವ, ನಮ್ಮನ್ನು ವೀಕ್ಷಿಸುತ್ತಿರುವ ಲಕ್ಷಾಂತರ ಸ್ನೇಹಿತರಿದ್ದಾರೆ. ನಿಮ್ಮೆಲ್ಲರಲ್ಲೂ ಸಾಮರ್ಥ್ಯವಿದೆ ಎಂದು ನನಗೆ ಗೊತ್ತು. ಈ ಸಂಸ್ಥೆಯು ನಿಮ್ಮ ಕನಸುಗಳು ಮತ್ತು ನಿಮ್ಮ ದೃಷ್ಟಿಕೋನದ ಪ್ರಯೋಗಾಲಯವೂ ಆಗಿರಬೇಕು. ಇಂದಿನಿಂದ 25-50 ವರ್ಷಗಳ ನಂತರ ಬರುವ ಪೀಳಿಗೆಯು ನಿಮ್ಮನ್ನು ಹೆಮ್ಮೆಯಿಂದ ಸ್ಮರಿಸುವಂತೆ ಮಾಡಬೇಕು. ನೀವು ಇಂದು ಹಾಕುತ್ತಿರುವ ಅಡಿಪಾಯದ ಬಗ್ಗೆ ಅವರು ಗರ್ವಪಡುವಂತಾಗಬೇಕು.
ಸ್ನೇಹಿತರೇ,
ಒಂದು ಸಂಸ್ಥೆಯಾಗಿ, ಕೋಟ್ಯಂತರ ಭಾರತೀಯರ ಸಂಕಲ್ಪ ಮತ್ತು ಕನಸುಗಳು ನಿಮಗೆ ಸ್ಪಷ್ಟವಾಗಿರಬೇಕು. ನಮಗೆ ಸವಾಲು ಮತ್ತು ಅವಕಾಶ ಎರಡೂ ಆಗಿರುವ ಕ್ಷೇತ್ರಗಳು ಮತ್ತು ಅಂಶಗಳು ನಿಮಗೆ ಚೆನ್ನಾಗಿ ತಿಳಿದಿರಬೇಕು. ನಾವು ಒಂದೇ ಗುರಿಯೊಂದಿಗೆ ಮುನ್ನಡೆದಾಗ ಮತ್ತು ಒಟ್ಟಾಗಿ ಶ್ರಮಿಸಿದಾಗ, ಫಲಿತಾಂಶಗಳು ಅದ್ಭುತವಾಗಿರುತ್ತವೆ. ಒಂದೇ ಉದ್ದೇಶದಿಂದ ಬೆಸೆದುಕೊಂಡ ಬಂಧವು ರಕ್ತಸಂಬಂಧಕ್ಕಿಂತಲೂ ಬಲಿಷ್ಠವಾಗಿರುತ್ತದೆ. ಅದು ಮನಸ್ಸುಗಳನ್ನು ಒಂದುಗೂಡಿಸುತ್ತದೆ, ಉತ್ಸಾಹವನ್ನು ಹೆಚ್ಚಿಸುತ್ತದೆ ಮತ್ತು ಕಾಲಾತೀತವಾಗಿ ನಿಲ್ಲುತ್ತದೆ. ಸಾಮಾನ್ಯ ಗುರಿ ದೊಡ್ಡದಾಗಿದ್ದಾಗ, ನಿಮ್ಮ ಉದ್ದೇಶ ಮಹತ್ತರವಾಗಿದ್ದಾಗ, ನಾಯಕತ್ವ ಬೆಳೆಯುತ್ತದೆ, ತಂಡದ ಮನೋಭಾವ ಬೆಳೆಯುತ್ತದೆ. ಜನರು ತಮ್ಮ ಗುರಿಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆ. ಸಾಮಾನ್ಯ ಗುರಿ ಮತ್ತು ಹಂಚಿಕೆಯ ಉದ್ದೇಶ ಇದ್ದಾಗ, ಪ್ರತಿಯೊಬ್ಬ ವ್ಯಕ್ತಿಯ ಅತ್ಯುತ್ತಮ ಸಾಮರ್ಥ್ಯ ಹೊರಹೊಮ್ಮುತ್ತದೆ. ಇಷ್ಟೇ ಅಲ್ಲ, ಅವನು ತನ್ನ ಸಾಮರ್ಥ್ಯಗಳನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ದೃಢ ಸಂಕಲ್ಪ ಮಾಡುತ್ತಾನೆ. ಮತ್ತು ಈ ಪ್ರಕ್ರಿಯೆಯಲ್ಲಿ ಒಬ್ಬ ನಾಯಕ ಹುಟ್ಟುತ್ತಾನೆ. ತಾನು ಮುಂದೆ ಬೆಳೆಯಲು, ತನ್ನಲ್ಲಿ ಇಲ್ಲದ ಸಾಮರ್ಥ್ಯಗಳನ್ನು ಗಳಿಸಲು ಅವನು ಪ್ರಯತ್ನಿಸುತ್ತಾನೆ.
ಸ್ನೇಹಿತರೇ,
ಹಂಚಿಕೆಯ ಉದ್ದೇಶ ಇದ್ದಾಗ, ಅಭೂತಪೂರ್ವವಾದ ತಂಡದ ಮನೋಭಾವ ನಮ್ಮನ್ನು ಮಾರ್ಗದರ್ಶನ ಮಾಡುತ್ತದೆ. ಎಲ್ಲರೂ ಒಟ್ಟಾಗಿ ಒಂದೇ ಉದ್ದೇಶದ ಸಹಪ್ರಯಾಣಿಕರಾಗಿ ನಡೆದಾಗ, ಒಂದು ಬಂಧ ಬೆಳೆಯುತ್ತದೆ. ತಂಡ ನಿರ್ಮಾಣದ ಈ ಪ್ರಕ್ರಿಯೆಯು ನಾಯಕತ್ವಕ್ಕೂ ಜನ್ಮ ನೀಡುತ್ತದೆ. ಹಂಚಿಕೆಯ ಉದ್ದೇಶಕ್ಕೆ ನಮ್ಮ ಸ್ವಾತಂತ್ರ್ಯ ಹೋರಾಟಕ್ಕಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ. ನಮ್ಮ ಸ್ವಾತಂತ್ರ್ಯ ಹೋರಾಟವು ರಾಜಕೀಯದಲ್ಲಿ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲಿಯೂ ನಾಯಕರನ್ನು ಸೃಷ್ಟಿಸಿತು. ಇಂದು ನಾವು ಸ್ವಾತಂತ್ರ್ಯ ಚಳವಳಿಯ ಅದೇ ಉತ್ಸಾಹವನ್ನು ಮತ್ತೆ ಜೀವಂತಗೊಳಿಸಬೇಕು. ಅದರಿಂದ ಪ್ರೇರಣೆ ಪಡೆದು ನಾವು ಮುನ್ನಡೆಯಬೇಕು.
ಸ್ನೇಹಿತರೇ,
ಸಂಸ್ಕೃತದಲ್ಲಿ ಒಂದು ಸುಂದರವಾದ ಮಾತು ಇದೆ:
ಅಮನ್ತ್ರಂ ಅಕ್ಷರಂ ನಾಸ್ತಿ, ನಾಸ್ತಿ ಮೂಲಂ ಅನೌಷಧಮ್ । ಅಯೋಗ್ಯಃ ಪುರುಷೋ ನಾಸ್ತಿ, ಯೋಜಕಾಃ ತತ್ರ ದುರ್ಲಭಃ ।
ಅಂದರೆ, ಮಂತ್ರವಾಗದಂತಹ ಯಾವ ಶಬ್ದವೂ ಇಲ್ಲ. ಔಷಧವಾಗದಂತಹ ಯಾವ ಗಿಡಮೂಲಿಕೆಯೂ ಇಲ್ಲ. ಅಸಮರ್ಥ ಎನ್ನುವ ವ್ಯಕ್ತಿಯೇ ಇಲ್ಲ. ಆದರೆ, ಎಲ್ಲರಿಗೂ ಸರಿಯಾದ ಸಮಯದಲ್ಲಿ, ಸರಿಯಾದ ಮಾರ್ಗದರ್ಶನ ನೀಡುವ ಯೋಜಕನ ಅಗತ್ಯವಿದೆ. ನಮ್ಮ ಅಂತರಾತ್ಮದ ಪಾತ್ರವೂ ಅದೇ. ಶಬ್ದಗಳನ್ನು ಮಂತ್ರಗಳನ್ನಾಗಿಯೂ, ಗಿಡಮೂಲಿಕೆಗಳನ್ನು ಔಷಧಗಳನ್ನಾಗಿಯೂ ಪರಿವರ್ತಿಸುವುದು ನಿಮ್ಮ ಕೈಯಲ್ಲಿದೆ. ಇಲ್ಲಿ ಅನೇಕ ನಾಯಕರು ಉಪಸ್ಥಿತರಿದ್ದೀರಿ. ನೀವು ನಾಯಕತ್ವದ ಕಲೆಗಳನ್ನು ಕಲಿತು ಪಳಗಿದ್ದೀರಿ. ನಾನು ಎಲ್ಲೋ ಓದಿದೆ -‘ನೀವು ನಿಮ್ಮನ್ನು ರೂಪಿಸಿಕೊಂಡರೆ, ವೈಯಕ್ತಿಕ ಯಶಸ್ಸು ನಿಮ್ಮದಾಗುತ್ತದೆ. ನೀವು ಒಂದು ತಂಡವನ್ನು ರೂಪಿಸಿದರೆ, ನಿಮ್ಮ ಸಂಸ್ಥೆ ಬೆಳವಣಿಗೆಯ ಹಾದಿ ಹಿಡಿಯುತ್ತದೆ. ನೀವು ನಾಯಕರನ್ನು ರೂಪಿಸಿದರೆ, ನಿಮ್ಮ ಸಂಸ್ಥೆ ಅಭೂತಪೂರ್ವ ಬೆಳವಣಿಗೆಯನ್ನು ಸಾಧಿಸುತ್ತದೆ.’ ಈ ಮೂರು ವಾಕ್ಯಗಳು ನಾವು ಏನು ಮಾಡಬೇಕು, ಹೇಗೆ ಕೊಡುಗೆ ನೀಡಬೇಕು ಎಂಬುದನ್ನು ಸದಾ ನೆನಪಿಸುತ್ತವೆ.
ಸ್ನೇಹಿತರೇ,
ಇಂದು, ದೇಶದಲ್ಲಿ ಹೊಸ ಸಾಮಾಜಿಕ ವ್ಯವಸ್ಥೆ ರೂಪುಗೊಳ್ಳುತ್ತಿದೆ, ಇದನ್ನು 21ನೇ ಶತಮಾನದಲ್ಲಿ ಜನಿಸಿದ, ಕಳೆದ ದಶಕದಲ್ಲಿ ಜನಿಸಿದ ಯುವ ಪೀಳಿಗೆ ರೂಪಿಸುತ್ತಿದೆ. ಇದು ನಿಜವಾಗಿಯೂ ಅಭಿವೃದ್ಧಿ ಹೊಂದಿದ ಭಾರತದ ಮೊದಲ ಪೀಳಿಗೆ, ಅಮೃತ ಪೀಳಿಗೆಯಾಗಲಿದೆ. ಈ ಅಮೃತ ಪೀಳಿಗೆಯ ನಾಯಕತ್ವವನ್ನು ಸಿದ್ಧಪಡಿಸುವಲ್ಲಿ ಈ ಹೊಸ ಸಂಸ್ಥೆ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಮತ್ತೊಮ್ಮೆ, ನಾನು ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ.
ಇಂದು ಭೂತಾನ್ ಮಹಾರಾಜರ ಜನ್ಮದಿನ ಮತ್ತು ಈ ಶುಭ ಸಂದರ್ಭ ಇಲ್ಲಿಯೇ ನಡೆಯುತ್ತಿರುವುದು ಒಂದು ಆನಂದದ ಕಾಕತಾಳೀಯ. ಭೂತಾನ್ ಪ್ರಧಾನ ಮಂತ್ರಿಗಳು ಇಂತಹ ಮಹತ್ವದ ದಿನದಂದು ಇಲ್ಲಿಗೆ ಆಗಮಿಸಿರುವುದು ವಿಶೇಷ. ಅವರನ್ನು ಇಲ್ಲಿಗೆ ಕಳುಹಿಸುವಲ್ಲಿ ಭೂತಾನ್ ಮಹಾರಾಜರು ಪ್ರಮುಖ ಪಾತ್ರ ವಹಿಸಿದ್ದಾರೆ, ಅವರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
ಸ್ನೇಹಿತರೇ,
ನನಗೆ ಸಮಯವಿದ್ದಿದ್ದರೆ, ಖಂಡಿತಾ ಈ ಎರಡು ದಿನಗಳೂ ಇಲ್ಲಿಯೇ ನೆಲೆಸುತ್ತಿದ್ದೆ. ಏಕೆಂದರೆ, ಕೆಲ ಸಮಯದ ಹಿಂದೆ ನಾನು ವಿಕಸಿತ ಭಾರತದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ, ಅದರಲ್ಲಿ ನಿಮ್ಮಲ್ಲಿ ಅನೇಕ ಯುವಕರು ಇದ್ದರು. ಆಗ ನಾನು ಬಹುತೇಕ ಇಡೀ ದಿನ ಅಲ್ಲೇ ಇದ್ದು, ಎಲ್ಲರನ್ನೂ ಭೇಟಿಯಾಗಿ, ಮಾತಾಡುತ್ತಾ, ಸಾಕಷ್ಟು ವಿಷಯಗಳನ್ನು ತಿಳಿದುಕೊಂಡೆ. ಇಂದು, ಮೊದಲ ಸಾಲಿನಲ್ಲಿ ವಿರಾಜಮಾನರಾಗಿರುವ ಎಲ್ಲಾ ನಾಯಕರು ತಮ್ಮ ಜೀವನದಲ್ಲಿ ಅಪೂರ್ವ ಸಾಧನೆಗಳನ್ನು ಮಾಡಿದವರೆಂದು ಕಾಣುವ ಭಾಗ್ಯ ಲಭಿಸಿದೆ. ನಿಮ್ಮೆಲ್ಲರಿಗೂ ಅವರೊಡನೆ ಸಂವಾದ ನಡೆಸಲು, ಕುಳಿತು ಚರ್ಚಿಸಲು ದೊರೆತಿರುವ ಈ ಅವಕಾಶ ಅಮೂಲ್ಯವಾದುದು. ನನಗೆ ಈ ಸೌಭಾಗ್ಯ ಅಪರೂಪ, ಏಕೆಂದರೆ ನಾನು ಅವರನ್ನು ಭೇಟಿಯಾದಾಗ, ಅವರ ಬಳಿ ಒಂದಲ್ಲ ಒಂದು ಕಾರ್ಯಭಾರವಿರುತ್ತದೆ. ಆದರೆ, ಅವರ ಅನುಭವಗಳಿಂದ ನೀವು ಅಪಾರ ಜ್ಞಾನವನ್ನು ಪಡೆಯಬಹುದು, ಕಲಿಯಬಹುದು. ಅವರು ತಮ್ಮ ಕ್ಷೇತ್ರಗಳಲ್ಲಿ ಮಹಾನ್ ಸಾಧನೆಗೈದವರು. ಮತ್ತು ಅವರು ನಿಮಗಾಗಿ ಇಷ್ಟು ಅಮೂಲ್ಯ ಸಮಯವನ್ನು ಮೀಸಲಿಟ್ಟಿದ್ದಾರೆ, ಇದು SOUL ಎಂಬ ಈ ಸಂಸ್ಥೆಯ ಭವಿಷ್ಯ ಉಜ್ವಲವಾಗಿದೆ ಎಂದು ನನಗೆ ಅನಿಸುತ್ತದೆ. ಇಂತಹ ಯಶಸ್ವಿ ವ್ಯಕ್ತಿಗಳು ಬೀಜ ಬಿತ್ತಿದಾಗ, ಆ ಆಲದ ಮರವೂ ಹೊಸ ಎತ್ತರಗಳನ್ನು ತಲುಪುವ ನಾಯಕರನ್ನು ರೂಪಿಸುತ್ತದೆ. ಸಮಯವನ್ನು ನೀಡಿದ, ಸಾಮರ್ಥ್ಯವನ್ನು ಹೆಚ್ಚಿಸಿದ, ಶಕ್ತಿಯನ್ನು ತುಂಬಿದ ಎಲ್ಲರಿಗೂ ನಾನು ಪೂರ್ಣ ಹೃದಯದಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನ ಯುವಜನತೆಯ ಬಗ್ಗೆ ನನಗೆ ಅಪಾರ ಕನಸುಗಳು ಮತ್ತು ನಿರೀಕ್ಷೆಗಳಿವೆ ಮತ್ತು ನನ್ನ ದೇಶದ ಯುವಜನರಿಗಾಗಿ ಪ್ರತಿ ಕ್ಷಣವೂ ಏನನ್ನಾದರೂ ಮಾಡುವ ಹಂಬಲ ನನ್ನಲ್ಲಿದೆ. ನಾನು ಸದಾ ಅವಕಾಶಗಳನ್ನು ಎದುರು ನೋಡುತ್ತಿರುತ್ತೇನೆ ಮತ್ತು ಇಂದು ಮತ್ತೊಮ್ಮೆ ಆ ಅವಕಾಶ ಲಭಿಸಿದೆ. ನನ್ನ ಯುವ ಮಿತ್ರರಿಗೆ ಶುಭ ಹಾರೈಕೆಗಳು.
ಧನ್ಯವಾದಗಳು.
ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಭಾವಾನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.
*****
Addressing the SOUL Leadership Conclave in New Delhi. It is a wonderful forum to nurture future leaders. @LeadWithSoul
— Narendra Modi (@narendramodi) February 21, 2025
https://t.co/QI5RePeZnV
The School of Ultimate Leadership (SOUL) will shape leaders who excel nationally and globally. pic.twitter.com/x8RWGSZsFl
— PMO India (@PMOIndia) February 21, 2025
Today, India is emerging as a global powerhouse. pic.twitter.com/RQWJIW1pRz
— PMO India (@PMOIndia) February 21, 2025
Leaders must set trends. pic.twitter.com/6mWAwNAWKX
— PMO India (@PMOIndia) February 21, 2025
Instilling steel and spirit in every sector. pic.twitter.com/EkOVPGc9MI
— PMO India (@PMOIndia) February 21, 2025
I commend SOUL for their endeavours to nurture a spirit of leadership among youngsters. pic.twitter.com/otSrbQ2Pdp
— Narendra Modi (@narendramodi) February 21, 2025
We in India must train our coming generations to become global trendsetters. pic.twitter.com/5L4AFfY3wF
— Narendra Modi (@narendramodi) February 21, 2025
With determined endeavours and collective efforts, the results of our quest for development will surely be fruitful. pic.twitter.com/s1lmEIGUMq
— Narendra Modi (@narendramodi) February 21, 2025