Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ `ವಾಣಿಜ್ಯ ಭವನ’ಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾನ್ಯ ಪ್ರಧಾನಮಂತ್ರಿಗಳು ಮಾಡಿದ ಭಾಷಣದ ಪೂರ್ಣಪಾಠ


ನನ್ನ ಸಂಪುಟ ಸಹೋದ್ಯೋಗಿಯೂ ಕೇಂದ್ರ ಸರಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರೂ ಆದ ಶ್ರೀ ಸುರೇಶ್ ಪ್ರಭು ಅವರೇ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಶ್ರೀ ಹರದೀಪ್ ಸಿಂಗ್ ಪುರಿಯವರೇ, ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ಸಹಾಯಕ ಸಚಿವರಾದ ಶ್ರೀ ಸಿ ಆರ್ ಚೌಧರಿಯವರೇ, ವಾಣಿಜ್ಯ ಮತ್ತು ಇನ್ನಿತರ ಸಚಿವಾಲಯಗಳ ಅಧಿಕಾರಿಗಳೇ ಹಾಗೂ ಈ ಸಮಾರಂಭದಲ್ಲಿ ಉಪಸ್ಥಿತರಿರುವ ಗಣ್ಯರೇ,

ಮೊಟ್ಟಮೊದಲಿಗೆ, `ವಾಣಿಜ್ಯ ಭವನ’ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಕ್ಕಾಗಿ ನಿಮ್ಮೆಲ್ಲರನ್ನೂ ನಾನು ಅಭಿನಂದಿಸುತ್ತೇನೆ. ಈ ಭವನದ ಕಾಮಗಾರಿ ಇಂದು ಶುರುವಾಗಿದೆ. ಅಂದಂತೆ, ಈ ಕಾಮಗಾರಿಯನ್ನು ಮುಂದಿನ ವರ್ಷದ ಡಿಸೆಂಬರ್ ಹೊತ್ತಿಗೆ ಮುಗಿಸುವುದಾಗಿ ವೇದಿಕೆಯ ಮೇಲಿದ್ದಾಗ ನನಗೆ ತಿಳಿಸಲಾಗಿದೆ. ನಿಗದಿತ ಕಾಲಮಿತಿಯೊಳಗೆ ವಾಣಿಜ್ಯ ಭವನದ ನಿರ್ಮಾಣ ಕಾರ್ಯ ಮುಗಿಯಲಿದೆ ಎಂದು ನಾನು ನಂಬಿದ್ದು, ಜನರು ಸದ್ಯದಲ್ಲೇ ಇದರ ಪ್ರಯೋಜನಗಳನ್ನು ಪಡೆಯಲಿದ್ದಾರೆ.

ಸ್ನೇಹಿತರೇ, ಯಾವುದೇ ಕೆಲಸವಾಗಲಿ, ಎಲ್ಲದಕ್ಕೂ ಮೊದಲು ನಾನು ಕಾಲಮಿತಿಯ ಬಗ್ಗೆ ಮಾತನಾಡುವುದಕ್ಕೆ ಒಂದು ಕಾರಣವಿದೆ. ಅದೇನೆಂದರೆ, ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದಮೇಲೆ ನಾನು ಅದೆಷ್ಟೋ ಕಟ್ಟಡಗಳಿಗೆ ಅಡಿಗಲ್ಲು ಹಾಕಿದ್ದೇನೆ; ಇಲ್ಲವೇ, ಅವುಗಳನ್ನು ಉದ್ಘಾಟಿಸುವ ಅವಕಾಶವನ್ನು ಪಡೆದಿದ್ದೇನೆ. ಆದರೆ, ಈ ಎರಡೂ ಸಂದರ್ಭಗಳಲ್ಲಿ ಸಾಮಾನ್ಯವಾದ ಒಂದು ಅಂಶ

ತಳುಕು  ಹಾಕಿಕೊಂಡಿರುತ್ತದೆ. ಅದೇನೆಂದರೆ, ಈ ಕಟ್ಟಡಗಳೆಲ್ಲವೂ ಆಯಾಯ ಕಾಲದಲ್ಲಿದ್ದ ಸರಕಾರಗಳ ಕಾರ್ಯಶೈಲಿಯನ್ನು ಪ್ರತಿಬಿಂಬಿಸುತ್ತಿರುತ್ತವೆ. ಅಲ್ಲದೆ, ಇವುಗಳ ಮೂಲಕ ಪ್ರಗತಿ ಪಥದಲ್ಲಿ ದಾಪುಗಾಲಿಡುತ್ತಿರುವ ನವಭಾರತ ಮತ್ತು ಹಿಂದಿನ ಸರಕಾರಗಳ ಅವಧಿಯಲ್ಲಿದ್ದ ಹಳೆಯ ವ್ಯವಸ್ಥೆಗಳ ನಡುವೆ ಇರುವ ಅಂತರವನ್ನು  ಅಳೆಯಬಹುದು.

ಸ್ನೇಹಿತರೇ, ಈ ನಿಟ್ಟಿನಲ್ಲಿ ನಾನು ನಿಮಗೆ ಕೆಲವು ಉದಾಹರಣೆಗಳನ್ನು ಕೊಡಬಯಸುತ್ತೇನೆ. 2016ರಲ್ಲಿ `ಪ್ರವಾಸಿ ಭಾರತೀಯ ಕೇಂದ್ರ’ವನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದು ನನಗೆ ನೆನಪಿದೆ. ಆದರೆ, ಈ ಕೇಂದ್ರವನ್ನು ಕಟ್ಟಬೇಕೆನ್ನುವ ನಿರ್ಧಾರ ಹೊರಬಿದ್ದಿದ್ದು ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಸರಕಾರವಿದ್ದಾಗ. ಅಂದರೆ, ಈ ಕಟ್ಟಡವನ್ನು ಕಟ್ಟಲು 12 ವರ್ಷಗಳನ್ನು ತೆಗೆದುಕೊಳ್ಳಲಾಗಿದೆ. ಹಾಗೆಯೇ, ಕಳೆದ ವರ್ಷ ನಾನು `ಡಾ.ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರ’ವನ್ನು ಜನತೆಗೆ ಅರ್ಪಿಸಿದೆ. ಈ ಕೇಂದ್ರವನ್ನು ನಿರ್ಮಾಣ ಮಾಡಬೇಕೆಂಬ ನಿರ್ಧಾರವನ್ನು ತೆಗೆದುಕೊಂಡಿದ್ದು 1992ರಷ್ಟು ಹಿಂದೆ! ಆದರೆ, ಇದಕ್ಕೆ ಶಂಕುಸ್ಥಾಪನೆ ನೆರವೇರಿದ್ದು 2015ರಲ್ಲಿ. ಇದಾದ ಬಳಿಕ, 2017ರಲ್ಲಿ ಇದನ್ನು ಉದ್ಘಾಟಿಸಲಾಯಿತು. ಅಂದರೆ, ನಿರ್ಧಾರವನ್ನು ತೆಗೆದುಕೊಂಡ ಮೇಲೆ ಈ ಕೇಂದ್ರವನ್ನು ನಿರ್ಮಿಸಲು 23-24 ವರ್ಷಗಳನ್ನು ತೆಗೆದುಕೊಳ್ಳಲಾಗಿದೆ.

ಗೆಳೆಯರೇ,

ಈ ವರ್ಷದ ಮಾರ್ಚ್ ತಿಂಗಳಲ್ಲಿ ನಾನು, ನೂತನವಾಗಿ ನಿರ್ಮಿಸಿರುವ `ಕೇಂದ್ರ ಮಾಹಿತಿ ಆಯೋಗ’ದ ಕಟ್ಟಡವನ್ನು ದೇಶಕ್ಕೆ ಸಮರ್ಪಿಸಿದೆ. ನಿಜ ಹೇಳಬೇಕೆಂದರೆ, ಇಂತಹದೊಂದು ಕಟ್ಟಡವನ್ನು ನಿರ್ಮಿಸಬೇಕೆಂಬ ಬೇಡಿಕೆ 12 ವರ್ಷಗಳಷ್ಟು ಹಳೆಯದಾಗಿತ್ತು. ಆದರೆ, ನಿಜಕ್ಕೂ ಕೇಂದ್ರ ಮಾಹಿತಿ ಆಯೋಗಕ್ಕೆ ಅಗತ್ಯವಾಗಿದ್ದ ಈ ಕಟ್ಟಡದ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು ನಮ್ಮ

ಎನ್.ಡಿ.ಎ ಸರಕಾರ! ಇಷ್ಟೇ ಅಲ್ಲ, ನಿಗದಿತ ಕಾಲಮಿತಿಯೊಳಗೇ ಇದನ್ನು ಸಂಪೂರ್ಣಗೊಳಿಸಲಾಯಿತು.

ಇದಕ್ಕೆ ಇನ್ನೊಂದು ಉದಾಹರಣೆಯೆಂದರೆ, ನವದೆಹಲಿಯ ಅಲಿಪುರ್ ರಸ್ತೆಯಲ್ಲಿ ಈಗ ತಲೆಯೆತ್ತಿ ನಿಂತಿರುವ `ರಾಷ್ಟ್ರೀಯ ಅಂಬೇಡ್ಕರ್ ಸ್ಮಾರಕ’ದ ವಿಚಾರ. ಈ ಕಟ್ಟಡವನ್ನು ಕೂಡ ಎರಡು ತಿಂಗಳ ಹಿಂದೆ ದೇಶಕ್ಕೆ ಸಮರ್ಪಿಸಲಾಯಿತು. ಈ ಸ್ಮಾರಕವನ್ನು ನಿರ್ಮಿಸಬೇಕೋ, ಬೇಡವೋ ಎನ್ನುವ ಬಗ್ಗೆಯೇ ನಮ್ಮಲ್ಲಿ ಅನೇಕ ವರ್ಷಗಳ ಕಾಲ ಕೇವಲ ಚರ್ಚೆಯಲ್ಲೇ ಕಳೆದುಹೋಯಿತು. ಆದರೆ, ನಿಜಕ್ಕೂ ಇದನ್ನು ಗಂಭೀರವಾಗಿ ಪರಿಗಣಿಸಿ, ಇದರ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಕೈಗೆತ್ತಿಕೊಂಡಿದ್ದು ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಸರಕಾರವೇ. ಆದರೆ, ಶ್ರೀ ವಾಜಪೇಯಿಯವರ ಸರಕಾರದ ಅವಧಿ ಮುಗಿದಮೇಲೆ ಈ ಕಾಮಗಾರಿಯನ್ನೇ 10-12 ವರ್ಷಗಳ ಕಾಲ ಸ್ಥಗಿತಗೊಳಿಸಲಾಯಿತು.

ದೆಹಲಿಯಲ್ಲಿ ಇಂದು ಹೆಗ್ಗುರುತುಗಳಂತೆ ಮೈದಾಳಿ ನಿಂತಿರುವ ಈ ನಾಲ್ಕು ಕಟ್ಟಡಗಳಿಗೆ ಸಂಬಂಧಿಸಿದ ಕತೆಯಲ್ಲಿ ಒಂದು ಸಂದೇಶವಿದೆ. ಅದೇನೆಂದರೆ, ಸರಕಾರವು ಯಾವಾಗ ಮುಕ್ತವಾಗಿ ಕೆಲಸ ಮಾಡುತ್ತದೋ ಯಾವಾಗ ಎಲ್ಲ ಇಲಾಖೆಗಳು ಮತ್ತು ಸಚಿವಾಲಯಗಳು ಜತೆಗೂಡಿ ಕೆಲಸ ಮಾಡುತ್ತವೋ ಆಗ ಎಲ್ಲ ಕೆಲಸಗಳೂ ತ್ವರಿತವಾಗಿ ಆಗುತ್ತವೆ. ಅಂದಂತೆ, ಹಿಂದಿನ ದಿನಗಳಿಗೆ ಹೋಲಿಸಿದರೆ ದೇಶವು ಈಗ ಅಡೆತಡೆಗಳನ್ನು ನಿರ್ಮಿಸುವ, ಗೊಂದಲಗಳನ್ನು ಸೃಷ್ಟಿಸುವ ಮತ್ತು ಕೆಲಸಗಳನ್ನು ಬೇಕೆಂದೇ ತಡ ಮಾಡುವ ಪ್ರವೃತ್ತಿಯಿಂದ ಹೊರಬಂದಿದ್ದು, ಮುಂದಕ್ಕೆ ಸಾಗುತ್ತಿದೆ.

ದೆಹಲಿಯಲ್ಲಿ ಈಗ ಭವ್ಯವಾಗಿ ತಲೆಯೆತ್ತಿ ನಿಂತಿರುವ ಮೇಲಿನ ನಾಲ್ಕು ಹೆಗ್ಗುರುತುಗಳ ಜೊತೆಗೆ ಐದನೆಯ ಹೆಗ್ಗುರುತನ್ನು ಕೂಡ ನಿರ್ಮಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ.

ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇರುವ ಪ್ರತಿಯೊಂದು ಕೆಲಸಗಳನ್ನೂ ಒಂದೇ ಕಟ್ಟಡದಡಿ ಮುಕ್ತವಾಗಿ ನಡೆಸುವಂತೆ ಮಾಡಬೇಕು, ಇದಕ್ಕಾಗಿ ಸರಕಾರಿ ವಲಯದಲ್ಲಿರುವ ಜಡ ಸಂಸ್ಕೃತಿಯನ್ನು ಮೂಲೋತ್ಪಾಟನೆ ಮಾಡಬೇಕೆಂಬುದು ನನ್ನ ಆಸೆ. ನನ್ನ ಈ ಬಯಕೆ ಈಡೇರುತ್ತದೆ ಎನ್ನುವ ವಿಶ್ವಾಸ ನನಗಿದೆ.

ಸ್ನೇಹಿತರೇ, ಭಾರತವು ಇಂದು ತುಂಬಾ ನಿರ್ಣಾಯಕವಾದ ಹಂತದಲ್ಲಿದೆ   ನಮ್ಮ ದೇಶದಲ್ಲಿರುವ ಮಾನವ ಸಂಪನ್ಮೂಲವನ್ನು ನೋಡಿದರೆ, ಬೇರೆ ಯಾವ ದೇಶವೇ ಆದರೂ ಅಸೂಯೆ

ಪಡುವುದು ಸಹಜವಾಗಿದೆ. ನಮ್ಮ ಯುವಜನತೆಯು ದೇಶದ ಪ್ರಜಾಸತ್ತೆಗೆ ಹೊಸ ಶಕ್ತಿಯನ್ನು ತುಂಬುತ್ತಿದ್ದಾರೆ. ಈ ಯುವಜನರೇ 21ನೇ ಶತಮಾನದ ಭಾರತದ ಬುನಾದಿ! ಇಂತಹ ಯುವಜನರ ಆಸೆ-ಆಕಾಂಕ್ಷೆಗಳನ್ನು ಈಡೇರಿಸುವುದು ಕೇವಲ ಕೆಲವೇ ಕೆಲವು ಸಚಿವಾಲಯಗಳ ಹೊಣೆಗಾರಿಕೆಯಲ್ಲ. ಬದಲಿಗೆ, ಇದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ.

ಕಳೆದ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿ ಸಂಭವಿಸಿತು, ನಿಜ. ಆದರೆ, ಭಾರತ ಇದರ ಲಾಭವನ್ನು ಪಡೆಯುವಲ್ಲಿ ವಿಫಲವಾಯಿತು. ಆ ಕಾಲದಲ್ಲಿ ಇದಕ್ಕೆ ಹತ್ತಾರು ಕಾರಣಗಳಿದ್ದವು. ಆದರೆ ಈಗ ಹಾಗಿಲ್ಲ. ಅಂದರೆ, 21ನೇ ಶತಮಾನದ ಕೈಗಾರಿಕಾ ಕ್ರಾಂತಿಯಲ್ಲಿ ಭಾರತವು ಮುಂಚೂಣಿಯಲ್ಲಿ ನಿಲ್ಲಲು ಹತ್ತಾರು ಕಾರಣಗಳಿವೆ. ಜಗತ್ತಿನೆಲ್ಲೆಡೆ ಸಂಭವಿಸಲಿರುವ ನಾಲ್ಕನೇ ಕೈಗಾರಿಕಾ ಕ್ರಾಂತಿಗೆ ಡಿಜಿಟಲ್ ತಂತ್ರಜ್ಞಾನವೇ ಅಸ್ತಿಭಾರವಾಗಿದೆ. ಈ ಕ್ಷೇತ್ರದಲ್ಲಿ ಭಾರತವು ನಿಸ್ಸಂಶಯವಾಗಿಯೂ ಅನೇಕ ದೇಶಗಳಿಗಿಂತ ಮುಂದಿದೆ.

ವಾಣಿಜ್ಯ ಸಚಿವಾಲಯವು ಇಂದು ಅನೇಕ ಸಾಧನೆಗಳನ್ನು ಮಾಡಿದೆ; ಹಲವು ಗುರಿಗಳನ್ನು ಸಾಧಿಸಿದೆ. ಇವೆಲ್ಲಕ್ಕೂ ಡಿಜಿಟಲ್ ತಂತ್ರಜ್ಞಾನವೇ ಮುಖ್ಯವಾದ ಸಂಗತಿಯಾಗಿದೆ. ಉದಾಹರಣೆಗೆ, ಈ ವಾಣಿಜ್ಯ ಭವನವನ್ನೇ ತೆಗೆದುಕೊಳ್ಳಿ. ಈ ಭವನವು ತಲೆಯೆತ್ತಲಿರುವ ಈ ಜಾಗವು ಮೊದಲು ಸರಬರಾಜು ಮತ್ತು ವಿಲೇವಾರಿ ಮಹಾನಿರ್ದೇಶನಾಲಯದ ಸುಪರ್ದಿಯಲ್ಲಿತ್ತು. 100 ವರ್ಷಗಳಿಗಿಂತಲೂ ಹಳೆಯದಾದ ಈ ಮಹಾನಿರ್ದೇಶನಾಲಯವನ್ನು ಈಗ ಮುಚ್ಚಲಾಗಿದ್ದು, ಇದರ ಬದಲಿಗೆ ಡಿಜಿಟಲ್ ತಂತ್ರಜ್ಞಾನವನ್ನು ಆಧರಿಸಿದ ಸರಕಾರಿ-

ಇ-ಮಾರುಕಟ್ಟೆ  (GeM) ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಇದರಿಂದಾಗಿ, ಸರಕಾರಕ್ಕೆ ಬೇಕಾದ ಸಾಧನ-ಸಲಕರಣೆಗಳನ್ನು ಖರೀದಿಸುವ/ಸಂಗ್ರಹಿಸುವ ವಿಧಾನವೇ ಕ್ರಾಂತಿಕಾರಿ ಬದಲಾವಣೆಯನ್ನು ಕಂಡಿದೆ.

ಇಂದು, ದೇಶಾದ್ಯಂತ 1.17 ಲಕ್ಷ ಕಂಪನಿಗಳು, ಸಣ್ಣ ಮತ್ತು ದೊಡ್ಡ ವ್ಯಾಪಾರಿಗಳು ಈ ವೇದಿಕೆಯಲ್ಲಿದ್ದಾರೆ. ಸರಕಾರಿ-ಇ-ಮಾರುಕಟ್ಟೆಯ ಮೂಲಕ ಇಂದು ಈ ವಹಿವಾಟುದಾರರಿಗೆ ಐದು ಲಕ್ಷಕ್ಕೂ ಹೆಚ್ಚು ವಹಿವಾಟು ಆದೇಶಗಳು ಸಿಕ್ಕಿವೆ. ಇದರ ಮೂಲಕ 8,700 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಸರಕುಗಳನ್ನು ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಪೂರೈಸಲಾಗುತ್ತದೆ.  ಇಂದು ದೇಶದ ಯಾವುದೋ ದೂರದೂರದ ಮೂಲೆಮೂಲೆಗಳ ಸಣ್ಣ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಬಹುದು. ಈ ಅವಕಾಶವನ್ನು ಒದಗಿಸಿದ್ದಕ್ಕಾಗಿ ನಿಜಕ್ಕೂ ವಾಣಿಜ್ಯ ಸಚಿವಾಲಯವು ಮೆಚ್ಚುಗೆಗೆ ಅರ್ಹವಾಗಿದೆ. ಆದರೆ, ಇದೇನೇ ಇದ್ದರೂ ಇದು ನಮ್ಮ ಬಹುದೀರ್ಘವಾದ ಪಯಣದ ಆರಂಭವಷ್ಟೆ ಎನ್ನುವುದು ನನ್ನ ಅನಿಸಿಕೆಯಾಗಿದೆ.

ಏಕೆಂದರೆ, ಸರಕಾರಿ-ಇ-ಮಾರುಕಟ್ಟೆಯನ್ನು ಹೇಗೆ ವಿಸ್ತರಿಸಬೇಕು, ಇದರ ಮೂಲಕ ದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಲಯವನ್ನು ಮತ್ತು ಸಣ್ಣಪುಟ್ಟ ಉದ್ಯಮಿಗಳನ್ನು ಅಂತಾರಾಷ್ಟ್ರೀಯ ವಾಣಿಜ್ಯ ವಹಿವಾಟಿನೆಡೆಗೆ ಕೊಂಡೊಯ್ಯುವುದು ಹೇಗೆ ಎನ್ನುವಂತಹ ಅನೇಕ ಕೆಲಸಗಳನ್ನು ನಾವಿನ್ನೂ ಮಾಡಬೇಕಾಗಿದೆ. ಅಂದಹಾಗೆ, ದೇಶದಲ್ಲಿ ಇಂದು 40 ಕೋಟಿ ಸ್ಮಾರ್ಟ್ ಫೋನುಗಳಿವೆ; ಇದರ ಜೊತೆಗೆ ಇಂಟರ್ನೆಟ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ; ಅಲ್ಲದೆ, ಡೇಟಾ ಎನ್ನುವುದು ಈಗ ಅಗ್ಗವಾಗಿದೆ. ಇವೆಲ್ಲದರಿಂದಾಗಿ, ನಾವು-ನೀವು ಮಾಡುವ ಕೆಲಸಗಳೆಲ್ಲವೂ ಸುಲಭವಾಗಿವೆ.

ಗೆಳೆಯರೇ, ನಮ್ಮಲ್ಲಿ `ಭಾರಃ ಸಮರ್ಥನಂ ಕಿಂ ದೂರ ವ್ಯವಸಾಯಿನಾಂ’ ಎನ್ನುವ ಒಂದು ಮಾತಿದೆ. ಅಂದರೆ, ಶಕ್ತಿಶಾಲಿಯಾದವನಿಗೆ ಯಾವುದೂ ಹೊರೆಯಲ್ಲ ಎಂದರ್ಥ. ಇದೇ ರೀತಿಯಲ್ಲಿ, ವ್ಯಾಪಾರ ವಹಿವಾಟುದಾರರಿಗೆ ದೂರವೆನ್ನುವುದು ಲೆಕ್ಕಕ್ಕಿಲ್ಲ. ಯಾವುದೇ ಊರು/ಪೇಟೆ/ನಗರವಾದರೂ ಅವರಿಗೆ ಎಲ್ಲವೂ ಹತ್ತಿರವೇ! ಇಂದು ತಂತ್ರಜ್ಞಾನವು ವ್ಯಾಪಾರ ವಹಿವಾಟನ್ನು ತುಂಬಾ ಸುಲಭಗೊಳಿಸಿದ್ದು, ಭೌಗೋಳಿಕ ಅಂತರವೆನ್ನುವುದು ದಿನದಿಂದ ದಿನಕ್ಕೆ ಕಿರಿದಾಗುತ್ತಿದೆ. ನಾವು ನಮ್ಮ ದೇಶದ ವ್ಯಾಪಾರ ವಹಿವಾಟುಗಳಲ್ಲಿ ಈ ತಂತ್ರಜ್ಞಾನವನ್ನು ಎಷ್ಟೆಷ್ಟು ಹೆಚ್ಚಾಗಿ ಬಳಸುತ್ತೇವೋ ಅಷ್ಟರ ಮಟ್ಟಿಗೆ ಅದು ನಮಗೆ ಪ್ರಯೋಜನಕಾರಿಯಾಗಲಿದೆ.

ಜಿಎಸ್ ಟಿ ವ್ಯವಸ್ಥೆಯನ್ನು ನಾವು ಜಾರಿಗೆ ತಂದಮೇಲೆ, ಕೇವಲ ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಇದು ಭಾರತದ ವಾಣಿಜ್ಯ ಸಂಸ್ಕೃತಿಯಲ್ಲಿ ಹೇಗೆ ಬದಲಿಸಿದೆ ಎನ್ನುವುದನ್ನು ನಾವೆಲ್ಲರೂ ನೋಡಿದ್ದೇವೆ. ತಂತ್ರಜ್ಞಾನವಿಲ್ಲದೆ ಇದ್ದಿದ್ದರೆ ಇದು ಸಾಧ್ಯವಾಗುತ್ತಿತ್ತೇನು? ಖಂಡಿತವಾಗಿಯೂ ಇಲ್ಲ. ಜಿಎಸ್ ಟಿಯಿಂದಾಗಿ ಇವತ್ತು ದೇಶದ ಪರೋಕ್ಷ ತೆರಿಗೆ ಜಾಲವು ತುಂಬಾ ಕ್ಷಿಪ್ರ ಗತಿಯಲ್ಲಿ ವಿಸ್ತಾರವಾಗುತ್ತಿದೆ . ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಹಿಡಿದು ಜಿಎಸ್ ಟಿ ವ್ಯವಸ್ಥೆ ಜಾರಿಗೆ ಬರುವವರೆಗೂ ನಮ್ಮಲ್ಲಿ ಕೇವಲ 60 ಲಕ್ಷ ಮಂದಿ ಮಾತ್ರ ಪರೋಕ್ಷ ತೆರಿಗೆ ಪಾವತಿಸುತ್ತಿದ್ದರು. ಆದರೆ, ಜಿಎಸ್ ಟಿ ವ್ಯವಸ್ಥೆಯನ್ನು ಜಾರಿಗೆ ತಂದ ಕೇವಲ 11 ತಿಂಗಳಲ್ಲಿ 54 ಲಕ್ಷ ಮಂದಿ ಈ ಜಾಲದೊಳಕ್ಕೆ ಬರುವ ಆಸಕ್ತಿ ತೋರಿ, ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಈಗಾಗಲೇ 47 ಲಕ್ಷಕ್ಕೂ ಹೆಚ್ಚು ಜನರನ್ನು ಈ ವ್ಯವಸ್ಥೆಯಡಿಯಲ್ಲಿ ನೋಂದಾಯಿಸಲಾಗಿದೆ. ಅಂದರೆ, ಜಿಎಸ್ ಟಿ ಅಡಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುವವರ ಸಂಖ್ಯೆ ಈಗಾಗಲೇ ಒಂದು ಕೋಟಿಯನ್ನು ದಾಟಿದೆ.

ಯಾವುದೇ ಕೆಲಸದ ವಿಧಿವಿಧಾನಗಳನ್ನು ನಾವು ಸರಳಗೊಳಿಸಿದರೆ ಮತ್ತು `ಕನಿಷ್ಠ ಸರಕಾರ, ಗರಿಷ್ಠ ಆಡಳಿತ’ ತತ್ತ್ವವನ್ನು ಜಾರಿಗೆ ತಂದೆವೆಂದರೆ, ಖಂಡಿತವಾಗಿಯೂ ಒಳ್ಳೆಯ ಫಲಿತಾಂಶ ಬಂದೇಬರುತ್ತದೆ ಎನ್ನುವುದನ್ನು ಇದು ತೋರಿಸುತ್ತದೆ. ಒಟ್ಟಿನಲ್ಲಿ, ದೇಶದಲ್ಲಿ ಈಗ ಹೆಚ್ಚುಹೆಚ್ಚು ಜನರು ಅಭಿವೃದ್ಧಿಯ ಮುಖ್ಯವಾಹಿನಿಯ ಭಾಗವಾಗಲು ಮುಂದೆ ಬರುತ್ತಿದ್ದಾರೆ.

ಗೆಳೆಯರೇ, ನಮ್ಮಸರಕಾರವು ದೇಶಾದ್ಯಂತ ಜನಸ್ನೇಹಿಯೂ ಅಭಿವೃದ್ಧಿಪರವೂ ಬಂಡವಾಳ ಹೂಡಿಕೆ ಸ್ನೇಹಿಯೂ ಆದ ವಾತಾವರಣವನ್ನು ನಿರ್ಮಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಈ ಕಾಲಘಟ್ಟದಲ್ಲಿ ಜಾಗತಿಕ ಮಟ್ಟದಲ್ಲಿ ಅನೇಕ ಸವಾಲುಗಳು ಎದುರಾಗಿದ್ದವು. ಆದರೂ ನಮ್ಮ ದೇಶದ ಆರ್ಥಿಕ ವ್ಯವಸ್ಥೆಯು ಸ್ಥಿರವಾಗಿತ್ತು. ಅಂದರೆ, ಹಣದುಬ್ಬರವೇ ಇರಲಿ, ವಿತ್ತೀಯ ಕೊರತೆಯೇ ಇರಲಿ ಅಥವಾ ಚಾಲ್ತಿ ಖಾತೆ ಬಾಕಿಯೇ ಇರಲಿ, ಹಿಂದಿನ ಸರಕಾರದ ಅವಧಿಗೆ ಹೋಲಿಸಿದರೆ ನಮ್ಮ ಸರಕಾರದಲ್ಲಿ ಸುಧಾರಣೆಯನ್ನು/ಪ್ರಗತಿಯನ್ನು ದಾಖಲಿಸಿವೆ.

ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತವು ಇಂದು ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತಿದೆ. ಕಳೆದ ತ್ರೈಮಾಸಿಕದ ಅವಧಿಯಲ್ಲಿ ದೇಶವು ಶೇಕಡ 7.7ರಷ್ಟು ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ. ಜೊತೆಗೆ, ಕಳೆದ ನಾಲ್ಕು ವರ್ಷಗಳಲ್ಲಿ ದೇಶಕ್ಕೆ ಹರಿದು ಬಂದಿರುವ ವಿದೇಶಿ ನೇರ ಹೂಡಿಕೆ ಮತ್ತು ವಿದೇಶಿ ವಿನಿಮಯ ಮೀಸಲು ಕೂಡ ದಾಖಲೆ ಪ್ರಮಾಣದಲ್ಲಿವೆ.

ವಿದೇಶಿ ನೇರ ಹೂಡಿಕೆ ಕುರಿತ ಸುಗಮ ಸಂಸ್ಕೃತಿ ಸೂಚ್ಯಂಕದ ವಿಚಾರದಲ್ಲಿ ದೇಶವು ಪ್ರವರ್ಧಮಾನಕ್ಕೆ ಬರುತ್ತಿರುವ ಜಗತ್ತಿನ ಎರಡು ಮಾರುಕಟ್ಟೆಗಳ ಪೈಕಿ ಒಂದಾಗಿದೆ. ಹಾಗೆಯೇ `ಸುಗಮ ವಾಣಿಜ್ಯ ಸಂಸ್ಕೃತಿ’ಗೆ ಸಂಬಂಧಿಸಿದಂತೆ ಮೊದಲು 142ನೇ ಸ್ಥಾನದಲ್ಲಿದ್ದ ನಮ್ಮ ದೇಶವು 100ನೇ ಸ್ಥಾನಕ್ಕೆ ಜಿಗಿದಿದೆ. ಹಾಗೆಯೇ, ಲಾಜಿಸ್ಟಿಕ್ಸ್ ಪರ್ಫಾರ್ಮೆನ್ಸ್ ಇಂಡೆಕ್ಸ್ ನಲ್ಲಿ ಹಿಂದಿಗಿಂತ 19 ಅಂಕಗಳನ್ನು ನಾವು ಹೆಚ್ಚಾಗಿ ಪಡೆದಿದ್ದು, ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ 39ನೇ ಸ್ಥಾನಕ್ಕೆ ಏರಿದ್ದೇವೆ. ಈ ಮೊದಲು ನಾವು ಈ ಪಟ್ಟಿಯಲ್ಲಿ 71ನೇ ಸ್ಥಾನದಲ್ಲಿದ್ದೆವು. ಉಳಿದಂತೆ, ಜಾಗತಿಕ ಸಂಶೋಧನಾ ಸೂಚ್ಯಂಕದಲ್ಲಿ ಮೊದಲಿಗಿಂತ 21 ಅಂಕಗಳನ್ನು ಹೆಚ್ಚಾಗಿ ಪಡೆದಿದ್ದೇವೆ. ಇವೆಲ್ಲವೂ, ನಾವು ದೇಶದ ಅಭಿವೃದ್ಧಿಯ ಬಗ್ಗೆ ಹೊಂದಿರುವ ಮುನ್ನೋಟದ ಫಲಗಳೇ ಆಗಿವೆ.

ಇತ್ತೀಚೆಗೆ ಭಾರತವು ಅಗ್ರಗಣ್ಯ 5  ಫೈನ್ ಟೆಕ್ ದೇಶಗಳ ಪಟ್ಟಿಯಲ್ಲಿ ಒಂದು ಸ್ಥಾನವನ್ನು ತನ್ನದಾಗಿಸಿಕೊಂಡಿತು. ಇದೇನೇ ಇರಲಿ, ಇಷ್ಟೆಲ್ಲ ಸಕಾರಾತ್ಮಕ ಸಂಕೇತಗಳ ಮಧ್ಯೆಯೂ `ಮುಂದೇನು?’ ಎನ್ನುವ ಒಂದು ದೊಡ್ಡ ಪ್ರಶ್ನೆ ನಮ್ಮ ಮುಂದಿದೆ.

ಗೆಳೆಯರೇ, ನಾವೀಗ ಶೇಕಡ 7-8ರ ಆಸುಪಾಸಿನಲ್ಲಿ ನಮ್ಮ ಆರ್ಥಿಕ ಬೆಳವಣಿಗೆಯನ್ನು ಸಾಧಿಸುತ್ತಿದ್ದೇವೆ. ಇದನ್ನು ಮೀರಿ, ನಾವು ಈ ವಿಚಾರದಲ್ಲಿ ಎರಡಂಕಿಯ ಸಾಧನೆ ಮಾಡಬೇಕೆಂದರೆ, ನಾವು ನಿಜಕ್ಕೂ ಕಷ್ಟಪಟ್ಟು ಕೆಲಸ ಮಾಡಬೇಕಾಗಿದೆ. ಏಕೆಂದರೆ, ಭಾರತವು 5 ಟ್ರಿಲಿಯನ್ ಡಾಲರ್ ಶಕ್ತಿಯುಳ್ಳ ದೇಶಗಳ ಸಾಲಿಗೆ ಸೇರುವುದು ಯಾವಾಗ ಎಂದು ಇಡೀ ಜಗತ್ತು ನಮ್ಮತ್ತ ಆಸೆ ಕಂಗಳಿಂದ ನೋಡುತ್ತಿದೆ.

ವಾಣಿಜ್ಯ ಸಚಿವಾಲಯದ ಸಮಸ್ತ ಅಧಿಕಾರಿಗಳೂ ಈ ಗುರಿಗಳನ್ನೆಲ್ಲ ಸವಾಲಾಗಿ ಸ್ವೀಕರಿಸುತ್ತಾರೆ ಎಂದು ನಾನು ಅಂದುಕೊಂಡಿದ್ದೇನೆ. ನಮ್ಮ ಆರ್ಥಿಕ ಕ್ಷೇತ್ರದಲ್ಲಿ ಸಾಧಿಸಬೇಕಾದ ಈ ಪ್ರಗತಿಯು ದೇಶದ ಜನಸಾಮಾನ್ಯರ ಜೀವನದೊಂದಿಗೆ ಸಂಬಂಧ ಹೊಂದಿದೆ.

ಹೀಗಾಗಿಯೇ ನಾನು `ಸುಗಮ ವಾಣಿಜ್ಯ ಸಂಸ್ಕೃತಿ’ಯ ವಿಚಾರವನ್ನು ಪ್ರಸ್ತಾಪಿಸವಾಗಲೆಲ್ಲ

`ಸುಗಮ ಜೀವನ’ದ ವಿಚಾರವನ್ನೂ ಪ್ರಸ್ತಾಪಿಸುವುದನ್ನು ನೀವೆಲ್ಲರೂ ನೋಡಿರಬಹುದು. ಒಂದಕ್ಕೊಂದು ಅಂತರ್ಗತವಾಗಿರುವ ಈ ಜಗತ್ತಿನಲ್ಲಿ ಪ್ರತಿಯೊಂದೂ ಪರಸ್ಪರ ಹೆಣೆದುಕೊಂಡಿವೆ.

ಇಂದು ವಿದ್ಯುತ್ ಸಂಪರ್ಕ ಪಡೆಯುವುದು, ಕಾಮಗಾರಿಯನ್ನು ಆರಂಭಿಸಲು ಅಗತ್ಯವಾದ ಅನುಮತಿಗಳನ್ನು ಪಡೆದುಕೊಳ್ಳುವುದು ಮತ್ತು ಉದ್ದಿಮೆಗಳನ್ನು/ಕಂಪನಿಗಳನ್ನು ಶುರು ಮಾಡುವುದು ಎಲ್ಲವೂ ಸುಲಭವಾಗಿವೆ. ಅಂದಮೇಲೆ, ಇವೆಲ್ಲವೂ ನಮ್ಮ ಶ್ರೀಸಾಮಾನ್ಯನಿಗೂ ಪ್ರಯೋಜನಕಾರಿಗಳಾಗಬೇಕು. ಇದು ನಿಮಗೂ ಸಹ ಒಂದು ಸವಾಲೇ ಸರಿ. ಏಕೆಂದರೆ, ಎಲ್ಲೆಲ್ಲಿ ಅಡೆತಡೆಗಳಿವೆಯೋ, ಎಲ್ಲೆಲ್ಲಿ ಮುಕ್ತವಾಗಿ ಕೆಲಸಗಳು ನಡೆಯುತ್ತಿಲ್ಲವೋ ಅವುಗಳನ್ನೆಲ್ಲ ಸ್ವತಃ ನೀವೇ ಆದಷ್ಟು ಬೇಗ ಸರಿಪಡಿಸಬೇಕು. ಅದರಲ್ಲೂ ಮೂಲಸೌಲಭ್ಯ ವಲಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ನೀವೆಲ್ಲರೂ ಗಮನಿಸಬೇಕು. ಏಕೆಂದರೆ, ಯಾವಾಗ ಸಾಗಾಟದ ವೆಚ್ಚ ಜಾಸ್ತಿಯಾಗುತ್ತದೋ ಆಗ ಉತ್ಪಾದನೆ ಕುಂಠಿತಗೊಳ್ಳುತ್ತದೆ; ಸೇವಾ ವೈವಿಧ್ಯದ ಕೊರತೆ ಉಂಟಾಗುತ್ತದೆ. ಆದ್ದರಿಂದ, ಈ ಸಮಸ್ಯೆಗಳನ್ನು ನಿವಾರಿಸುವುದು ಅತ್ಯಗತ್ಯವಾಗಿದೆ.

       ವಾಣಿಜ್ಯ ಸಚಿವಾಲಯವು ದೇಶದ ಸರಕು ಸಾಗಣೆ ವಲಯದ ಸಮಗ್ರ ಅಭಿವೃದ್ಧಿಯ ಹೊಣೆಯನ್ನು ಇತ್ತೀಚೆಗೆ ತಾನೇ ವಹಿಸಿಕೊಂಡಿರುವುದು ನಿಜಕ್ಕೂ ನನಗೆ ಸಂತಸವನ್ನು ಕೊಟ್ಟಿದೆ. ದೇಶದ ವಾಣಿಜ್ಯ ಸಂಸ್ಕೃತಿ/ಪರಿಸರವನ್ನು ಸುಧಾರಿಸುವಲ್ಲಿ ಮುಂಬರುವ ದಿನಗಳಲ್ಲಿ ಈ ಕ್ರಮವು ಖಂಡಿತವಾಗಿಯೂ ಪ್ರಮುಖ ಪಾತ್ರವನ್ನು ವಹಿಸಲಿದೆ.

ಗೆಳೆಯರೇ, ಸಮಗ್ರ ಸರಕು ಸಾಗಣೆ ಕ್ರಿಯಾ ಯೋಜನೆಯು ಈ ಕಾಲದ ಮತ್ತು ನವಭಾರತದ ಅಗತ್ಯವಾಗಿದೆ. ಆದರೆ, ಈಗ ಚಾಲ್ತಿಯಲ್ಲಿರುವ ನಿಯಮಗಳಿಗೆ ಮತ್ತು ವಿಧಿವಿಧಾನಗಳಿಗೆ ಸೂಕ್ತ ತಿದ್ದುಪಡಿಗಳನ್ನು ತರುವ ಮೂಲಕ ಹಾಗೂ ಆಧುನಿಕ ಸಾಧನಗಳನ್ನು ಬಳಸುವ ಮೂಲಕ ನಾವು ಇದನ್ನು ಸಾಧಿಸಬಹುದು.

ವಾಣಿಜ್ಯ ಸಚಿವಾಲಯವವು ಆನ್ ಲೈನ್ ಪೋರ್ಟಲ್ಲನ್ನು ಅಸ್ತಿತ್ವಕ್ಕೆ ತರುವ ಬಗ್ಗೆಯೂ ಗಮನ ಹರಿಸಿದ್ದು, ಈ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದು ನನಗೆ ತಿಳಿಸಲಾಗಿದೆ. ಜಾಗತಿಕ ವಾಣಿಜ್ಯ ರಂಗದಲ್ಲಿ ಭಾರತದ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸಲು ಮತ್ತು ಇದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಮ್ಮ ಎಲ್ಲ ಸಚಿವಾಲಯಗಳೂ ರಾಜ್ಯ ಸರಕಾರಗಳೂ ಹೀಗೆ ಜೊತೆಗೂಡಿ ಕೆಲಸ ಮಾಡುವುದು ಅತ್ಯಗತ್ಯವಾಗಿದೆ. ಇದನ್ನೇ ನಾವು `ಸರಕಾರದ ಸಂಪೂರ್ಣ ಸಕ್ರಿಯತೆ’ ಎನ್ನುವುದು. ಆದರೆ, ಇದನ್ನು ನಾವು ನಮ್ಮ ಕೆಲಸ-ಕಾರ್ಯಗಳಲ್ಲಿ ಅಳವಡಿಸಿಕೊಳ್ಳಬೇಕಾಗಿದೆ.

ನಮ್ಮ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ವಹಿವಾಟನ್ನು ಉತ್ತೇಜಿಸಲು `ವಾಣಿಜ್ಯಾಭಿವೃದ್ಧಿ ಮತ್ತು ಉತ್ತೇಜನಾ ಮಂಡಳಿ’ಯು ಶ್ರಮಿಸುತ್ತಿರುವುದು ನಿಜಕ್ಕೂ ಒಂದು ಒಳ್ಳೆಯ ಹೆಜ್ಜೆಯಾಗಿದೆ. ಭಾರತದ ರಫ್ತು ವಹಿವಾಟನ್ನು ನಾವು ಹೆಚ್ಚು ಮಾಡಬೇಕೆಂದರೆ, ಈ ಪ್ರಕ್ರಿಯೆಯಲ್ಲಿ ನಮ್ಮ ರಾಜ್ಯಗಳನ್ನು ನಾವು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲೇಬೇಕಾಗಿದೆ.

ರಾಷ್ಟ್ರ ಮಟ್ಟದಲ್ಲಿರುವ ವಾಣಿಜ್ಯ ವಹಿವಾಟು ನೀತಿಗೆ ಸರಿಹೊಂದುವಂತೆ ರಾಜ್ಯಗಳ ಮಟ್ಟದಲ್ಲೂ ನಾವು ರಫ್ತು ನೀತಿಯನ್ನು ಕ್ಷಿಪ್ರ ಗತಿಯಲ್ಲಿ ಅಳವಡಿಸಿಕೊಂಡರೆ ಅದರಿಂದ ದೇಶಕ್ಕೆ ಅಷ್ಟರ ಮಟ್ಟಿಗೆ ಲಾಭವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಆರ್ಥಿಕ ನೆರವನ್ನು ನೀಡುವುದರ ಜೊತೆಗೆ, ಸಂಬಂಧಿಸಿದ ಪ್ರತಿಯೊಬ್ಬರೂ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಷ್ಟೆ.

ಗೆಳೆಯರೇ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಉಪಸ್ಥಿತಿಯು ಹೆಚ್ಚಾಗಬೇಕೆಂದರೆ, ನಾವು ನಮ್ಮ ಸಾಂಪ್ರದಾಯಿಕ ಉತ್ಪನ್ನಗಳು ಮತ್ತು ಮಾರುಕಟ್ಟೆಗಳ ಜೊತೆಗೆ ಹೊಸಹೊಸ ಉತ್ಪನ್ನಗಳು ಹಾಗೂ ಹೊಸಹೊಸ ಮಾರುಕಟ್ಟೆಗಳ ಕಡೆಗೂ ಗಮನ ಹರಿಸಬೇಕು. ದೇಶದ ಒಳಗೂ ದೇಶದ ಹೊರಗೂ ಎದುರಾಗುವ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ನಮ್ಮನ್ನು ನಾವು ಬಲಪಡಿಸಿಕೊಳ್ಳಬೇಕಾಗಿದೆ.

ನಾವು ಅಭಿವೃದ್ಧಿಗೆ ಸಂಬಂಧಿಸಿದ ಅಲ್ಪಾವಧಿ ಫಲಗಳು ಮತ್ತು ದೀರ್ಘಾವಧಿ ಸುಸ್ಥಿರತೆಯ ನಡುವೆ ಸರಿಯಾದ ಸಮತೋಲನವನ್ನು ಕಾಪಾಡಿಕೊಂಡೇ ಮುಂದಡಿ ಇಟ್ಟರೆ, ಅದರಿಂದ ಸಿಗುವ ಫಲಿತಾಂಶಗಳು ನಿಜಕ್ಕೂ ನಮ್ಮೆಲ್ಲರಿಗೂ ನಿಚ್ಚಳವಾಗಿ ಕಾಣಿಸಲಿವೆ. ಈ ನಿಟ್ಟಿನಲ್ಲಿ ಕಳೆದ ವರ್ಷ ನಾವು ಕೈಗೊಂಡ ವಿದೇಶೀ ವಾಣಿಜ್ಯ ನೀತಿಯ ಮಧ್ಯಾಂತರ ಪರಾಮರ್ಶೆಯು ತುಂಬಾ ಸಕಾರಾತ್ಮಕವಾದ ಒಂದು ಉಪಕ್ರಮವೆಂದು ನಾನು ಅಂದುಕೊಂಡಿದ್ದೇನೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಲಯಕ್ಕೆ ಪ್ರೋತ್ಸಾಹ ನೀಡುವ ಅಂಗವಾಗಿ ಮತ್ತು ಈ ವಲಯದ ರಫ್ತು ವಹಿವಾಟನ್ನು ಹೆಚ್ಚಿಸುವ ಸಲುವಾಗಿ ತೆಗೆದುಕೊಂಡಿರುವ ಪ್ರತಿಯೊಂದು ಕ್ರಮವೂ ಶ್ಲಾಘನೆಗೆ ಅರ್ಹವಾಗಿವೆ. ಹಾಗೆಯೇ, ಇದು ದೇಶದ ಔದ್ಯೋಗಿಕ ಅಗತ್ಯಗಳೊಂದಿಗೆ ನೇರವಾದ ಸಂಬಂಧವನ್ನು ಹೊಂದಿದೆ.

ಇಲ್ಲಿ ಇನ್ನೊಂದು ಮುಖ್ಯವಾದ ವಿಚಾರವಿದೆ. ಅದೇನೆಂದರೆ, ಉತ್ಪನ್ನಗಳ ಗುಣಮಟ್ಟ. ಈ ಕಾರಣಕ್ಕಾಗಿಯೇ ನಾನು 2014ರ ಆಗಸ್ಟ್15ರಂದು ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡಿದಾಗ “ಝೀರೋ ಡಿಫೆಕ್ಟ್-ಝೀರೋ ಎಫೆಕ್ಟ್’ ತತ್ತ್ವಕ್ಕೆ ಒತ್ತು ಕೊಟ್ಟು ಮಾತನಾಡಿದ್ದು. ಸಣ್ಣ ಕೈಗಾರಿಕೆಯೇ ಇರಲಿ, ಅಥವಾ ದೊಡ್ಡ ಉದ್ದಿಮೆಯೇ ಇರಲಿ, ನಾವು ಉತ್ಪಾದಿಸುವ ಪ್ರತಿಯೊಂದು ಉತ್ಪನ್ನವೂ ದೋಷರಹಿತವಾಗಿರುವಂತೆ ನೋಡಿಕೊಳ್ಳಬೇಕು. ಅಂದರೆ, ನಾವು ರಫ್ತು ಮಾಡುವ ಯಾವೊಂದು ಉತ್ಪನ್ನವನ್ನೂ ದೋಷದಿಂದ ಕೂಡಿದೆ ಎಂಬ ಕಾರಣ ನೀಡಿ, ಯಾರೊಬ್ಬರೂ ವಾಪಸ್ ಕಳಿಸಬಾರದು. ಇದರ ಜತೆಗೆ ನಾನು `ಝೀರೋ ಎಫೆಕ್ಟ್’ ಬಗ್ಗೆಯೂ ನಾನು ಪ್ರಸ್ತಾಪಿಸಿದ್ದುಂಟು. ಹೀಗೆಂದರೆ, ನಮ್ಮ ಯಾವ ಉತ್ಪನ್ನಗಳೂ ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ ನಾವು ನೋಡಿಕೊಳ್ಳಬೇಕು.

ಉತ್ಪನ್ನಗಳ ಗುಣಮಟ್ಟದ ಬಗ್ಗೆ ನಾವು ವಹಿಸುವ ಇಂತಹ ಕಾಳಜಿಯು `ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ನಿಜವಾದ ಮೆರುಗನ್ನು ತಂದುಕೊಡುತ್ತದಲ್ಲದೆ, ನವಭಾರತದ ಅಸ್ಮಿತೆಗೆ ಮತ್ತಷ್ಟು ಶಕ್ತಿಯನ್ನು ತುಂಬುತ್ತದೆ. ಅಂದಂತೆ, ನಮ್ಮ ದೇಶದಲ್ಲಿ 2014ರಲ್ಲಿ ಕೇವಲ ಎರಡೇ ಎರಡು ಮೊಬೈಲ್ ಫೋನ್ ತಯಾರಿಕಾ ಘಟಕಗಳಿದ್ದವು. ಆದರೆ, ಇಂದು ಇವುಗಳ ಸಂಖ್ಯೆ 120ಕ್ಕೆ ಏರಿರುವುದು ನಿಮಗೆಲ್ಲ ಗೊತ್ತಿರಬಹುದು. ಇದರ ಬಗ್ಗೆ ನನಗೆ ಅತೀವ ಹೆಮ್ಮೆ ಇದ್ದು, ಈ ಘಟಕಗಳು ಇಂದು ನಮ್ಮ ದೇಶದಲ್ಲೇ ಜಾಗತಿಕ ಗುಣಮಟ್ಟದ ಮೊಬೈಲ್ ಫೋನುಗಳನ್ನು ಉತ್ಪಾದಿಸುತ್ತಿವೆ.

ಸ್ನೇಹಿತರೇ, ಇದು ಸರಿಯಾದ ಸಂಕಲ್ಪಗಳನ್ನು ಕೈಗೊಳ್ಳಲು ಮತ್ತು ಸವಾಲುಗಳನ್ನು ಸ್ವೀಕರಿಸಲು ಸರಿಯಾದ ಸಮಯ. ವಾಣಿಜ್ಯ ಸಚಿವಾಲಯವು ಜಾಗತಿಕ ವಾಣಿಜ್ಯ ವಹಿವಾಟಿನಲ್ಲಿ ಈಗಿರುವ ಭಾರತದ ಪಾಲನ್ನು ಶೇಕಡ 1.6ರಿಂದ ಶೇಕಡ 3.4ಕ್ಕಾದರೂ ಏರಿಸಲು ಪ್ರಯತ್ನಿಸಬೇಕು. ಈ ಸಚಿವಾಲಯದ ಕೊಡುಗೆಯು ಏನಿಲ್ಲವೆಂದರೂ ಭಾರತದ ಜಿ.ಡಿ.ಪಿ.ಗೆ ಸರಿಸಮನಾಗಿರಬೇಕು. ಹೀಗಾದರೆ, ನಮ್ಮ ದೇಶದಲ್ಲಿ ಹೊಸಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವಲ್ಲದೆ, ನಮ್ಮ ತಲಾವಾರು ಆದಾಯವೂ ಇದರಿಂದ ಹೆಚ್ಚಳವನ್ನು ಕಾಣುತ್ತದೆ. ಸರಕಾರದ ಪ್ರತಿಯೊಂದು ಇಲಾಖೆ ಮತ್ತು ಇಲ್ಲಿ ಉಪಸ್ಥಿತರಿರುವ `ರಫ್ತು ಉತ್ತೇಜನಾ ಮಂಡಳಿ’ಯ ಪ್ರತಿಯೊಬ್ಬರೂ ಈ ಗುರಿಯನ್ನು ಸಾಧಿಸಲು ಒಗ್ಗೂಡಿ ಪ್ರಯತ್ನಿಸಬೇಕು.

ನಮ್ಮ ಆಮದು ವಹಿವಾಟಿಗೆ ಸಂಬಂಧಿಸಿದಂತೆಯೂ ನಾವೊಂದು ಪ್ರತಿಜ್ಞೆಯನ್ನು ಕೈಗೊಳ್ಳಬೇಕು. ಅದೇನೆಂದರೆ, ಕೆಲವು ವಲಯಗಳಿಗೆ ಸಂಬಂಧಿಸಿದಂತೆ ನಾವು ಈಗ ಮಾಡಿಕೊಳ್ಳುತ್ತಿರುವ ಆಮದನ್ನು ಕಡಿಮೆ ಮಾಡಿಕೊಳ್ಳುವುದು ಸಾಧ್ಯವಿಲ್ಲವೇ? ಇದು ಇಂಧನದ ಆಮದಾದರೂ ಆಗಿರಬಹುದು; ವಿದ್ಯುನ್ಮಾನ ಸಾಧನಗಳಿಗೆ ಸಂಬಂಧಿಸಿದ್ದೂ ಆಗಿರಬಹುದು; ಇಲ್ಲವೇ, ನಮ್ಮ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಶಸ್ತ್ರಾಸ್ತ್ರಗಳು  ಮತ್ತು ಇನ್ನಿತರ ಆಧುನಿಕ ಸಾಧನಗಳಿಗಾದರೂ ಆಗಿರಬಹುದು; ಅಥವಾ ನಾವು ಅಗಾಧ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿರುವ ವೈದ್ಯಕೀಯ ಸಾಧನಗಳಿಗೆ ಸಂಬಂಧಿಸಿದಂತೆಯೂ ಆಗಿರಬಹುದು. `ಮೇಕ್ ಇನ್ ಇಂಡಿಯಾ’ಗೆ ಒತ್ತು ಕೊಡುವ ಮೂಲಕ, ನಾವು ಇವುಗಳ ಆಮದನ್ನು ಕೊಂಚ ಮಟ್ಟಿಗಾದರೂ ಕಡಿಮೆ ಮಾಡಿಕೊಳ್ಳಬಹುದಲ್ಲವೇ? ನಾವು ದೇಶೀಯ ಉತ್ಪಾದನೆಗೆ ಒತ್ತು ಕೊಟ್ಟು ಇವುಗಳ ಆಮದನ್ನು ಕೇವಲ ಶೇಕಡ 10ರಷ್ಟು ಕಡಿಮೆ ಮಾಡಿಕೊಂಡರೂ ಸಾಕು, ದೇಶದ ಆದಾಯವು 3.5 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಾಗುತ್ತದೆ. ದೇಶದ ಜಿಡಿಪಿ ಬೆಳವಣಿಗೆಯನ್ನು ನಾವು ಎರಡಂಕಿಗೆ ತೆಗೆದುಕೊಂಡು ಹೋಗಲು ಇದು ನಿಜಕ್ಕೂ ಅತ್ಯಂತ ಪರಿಣಾಮಕಾರಿಯಾದ ಒಂದು ಮಾರ್ಗವಾಗಿದೆ.

ಈ ನಿಟ್ಟಿನಲ್ಲಿ ನಾನು, ವಿದ್ಯುನ್ಮಾನ ಸಾಧನಗಳ ಉತ್ಪಾದನೆಯನ್ನು ಒಂದು ಉದಾಹರಣೆಯಾಗಿ ಕೊಡಲು ಬಯಸುತ್ತೇನೆ. ಅದೇನೆಂದರೆ, ನಾವು ಈಗಲೂ ನಮ್ಮ ಅಗತ್ಯದ ವಿದ್ಯುನ್ಮಾನ ಸಾಧನಗಳ ಪೈಕಿ ಶೇಕಡ 65ರಷ್ಟನ್ನು ಬೇರೆಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಇದು ನಿಜಕ್ಕೂ ನಮಗೊಂದು ಸವಾಲಲ್ಲವೇ? ನಾವೀಗ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿದ್ದೇವೆ. ಇದೇ ರೀತಿಯಲ್ಲಿ ನೀವು ಈ ಸವಾಲನ್ನೂ ಸ್ವೀಕರಿಸಿ, ವಿದ್ಯುನ್ಮಾನ ಸಾಧನಗಳ ಉತ್ಪಾದನೆಯಲ್ಲೂ ನಾವು ಸ್ವಾವಲಂಬಿಗಳಾಗುವಂತೆ ಮಾಡಲಾರಿರಾ?

ಸ್ನೇಹಿತರೇ, ಆಮದಿನ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡುವಂತಹ ಒಂದು ಅತ್ಯಂತ ಮುಖ್ಯವಾದ ತೀರ್ಮಾನವನ್ನು ನಾವು ಕಳೆದ ವರ್ಷ ತೆಗೆದುಕೊಂಡಿದ್ದು ನಿಮಗೆಲ್ಲ ಗೊತ್ತಿರಬಹುದು. ನಮ್ಮ ಎಲ್ಲಾ ಇಲಾಖೆಗಳೂ ಏನನ್ನೇ ಖರೀದಿಸಿದರೂ ಸ್ಥಳೀಯ ಉತ್ಪಾದಕರಿಗೆ ಒತ್ತು ನೀಡಬೇಕು. ಈ ಮೂಲಕ, ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವಂತಹ ಅತ್ಯಂತ ಮುಖ್ಯವಾದ ನಿರ್ಧಾರವನ್ನು ಅನುಷ್ಠಾನಕ್ಕೆ ತರಲು ಸಹಕರಿಸಬೇಕು.

ಈ ಆದೇಶವನ್ನು ಜಾರಿಗೆ ತರಲು ಸರಕಾರದ ಪ್ರತಿಯೊಂದು ಇಲಾಖೆಗಳಲ್ಲೂ ಇರುವ ನಿಗಾ/ಉಸ್ತುವಾರಿ ವ್ಯವಸ್ಥೆ ಕೂಡ ಮತ್ತಷ್ಟು ಬಲಗೊಳ್ಳಬೇಕು. ಸ್ಥಳೀಯ ಮಟ್ಟದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ನಮ್ಮ ಸರಕಾರವು ಹತ್ತುಹಲವು ಮುಖ್ಯವಾದ ನಿರ್ಧಾರಗಳನ್ನು ಕೈಗೊಂಡಿದೆ. ನಿಯಂತ್ರಣ ವ್ಯವಸ್ಥೆಯೇ ಆಗಲಿ ಅಥವಾ ಇದನ್ನು ಮತ್ತಷ್ಟು ಸುಲಭಗೊಳಿಸುವುದೇ ಆಗಲಿ, ಅಥವಾ ಹೂಡಿಕೆದಾರ ಸ್ನೇಹಿ ನೀತಿಗಳೇ ಆಗಲಿ ಅಥವಾ ಮೂಲಸೌಲಭ್ಯ ಅಭಿವೃದ್ಧಿಯೇ ಆಗಲಿ, ಇವೆಲ್ಲಕ್ಕೂ ಸಂಬಂಧಿಸಿದಂತೆ ನಮ್ಮ ಸರಕಾರವು ಒಳ್ಳೆಯ ನಿರ್ಧಾರಗಳನ್ನೇ ಕೈಗೊಂಡಿದೆ. ಈ ಮೂಲಕ ಮಾತ್ರ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಬಹುದು. ಅಂತಿಮವಾಗಿ, ಭಾರತವು 21ನೇ ಶತಮಾನದ ಕೈಗಾರಿಕಾ ಕ್ರಾಂತಿಯಲ್ಲಿ ಸ್ವಲ್ಪವೂ ಹಿಂದುಳಿಯಬಾರದು ಎನ್ನುವುದೇ ಈ ಎಲ್ಲ ಉಪಕ್ರಮಗಳ ಹಿಂದಿನ ಆಶಯವಾಗಿದೆ.

`ಮೇಕ್ ಇನ್ ಇಂಡಿಯಾ’ ಆಂದೋಲನದ ಜತೆಜತೆಯಲ್ಲೇ ನಮಗಿರುವ ಈ ಹೆಮ್ಮೆಯ ಭಾವವು ಮತ್ತಷ್ಟು ಮಗದಷ್ಟು ಹೆಚ್ಚುತ್ತಾ ಹೋಗಬೇಕೆನ್ನುವುದೇ ನನಗಿರುವ ಏಕೈಕ ನಿರೀಕ್ಷೆಯಾಗಿದೆ. ಅಲ್ಲದೆ ಇದು, ಸದ್ಯದಲ್ಲೇ ತಲೆಯೆತ್ತಲಿರುವ ವಾಣಿಜ್ಯ ಭವನಕ್ಕೆ ಮನ್ನಣೆಯನ್ನು ತಂದುಕೊಡಲಿ ಎನ್ನುವುದು ನನ್ನ ಆಸೆಯಾಗಿದೆ.

ಸ್ನೇಹಿತರೇ, ನಾನು ಇಲ್ಲಿಗೆ ಬರುವ ಮುಂಚೆ ನನ್ನ ಕೈಯಿಂದ ಒಂದು ಪುಣ್ಯದ ಕೆಲಸವನ್ನು ಮಾಡಿಸಿದ್ದೀರಿ. ಅದೇನೆಂದರೆ, ಈ ಆವರಣದಲ್ಲಿ ನನಗೆ ಬಕುಲದ ಸಸಿಯೊಂದನ್ನು ನೆಡುವ ಅವಕಾಶವನ್ನು ನನಗೆ ಒದಗಿಸಿದಿರಿ. ಪುರಾಣಗಳ ಕಾಲದಿಂದಲೂ ಬಕುಲ ವೃಕ್ಷಕ್ಕೆ ನಮ್ಮಲ್ಲಿ ಗೌರವವಿದೆ. ಅನೇಕ ವೈದ್ಯಕೀಯ ಪ್ರಯೋಜನಗಳನ್ನು ನೀಡುವ ಬಕುಲ ವೃಕ್ಷವು ಹತ್ತಾರು ವರ್ಷಗಳ ಕಾಲ ನೆರಳು ನೀಡುತ್ತದೆ. ಈ ಆವರಣದಲ್ಲಿ ಇನ್ನೂ ಸರಿಸುಮಾರು ಒಂದು ಸಾವಿರ ಗಿಡಗಳನ್ನು ನೆಡುವ ಯೋಜನೆಯಿದೆ ಎಂಬ ವಿಚಾರವನ್ನು ನನಗೆ ತಿಳಿಸಲಾಗಿದೆ.

ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಈ ಪರಿಸರಸ್ನೇಹಿ ವಾತಾವರಣದಲ್ಲಿ ನೀವು ನವಭಾರತದ ನಿರ್ಮಾಣಕ್ಕೆ ನಿಮ್ಮ ಅತ್ಯುತ್ತಮ ಕೊಡುಗೆಯನ್ನು ನೀಡಲಿದ್ದೀರಿ ಎನ್ನುವ ನಿರೀಕ್ಷೆಯೊಂದಿಗೆ ನಾನು ನನ್ನ ಮಾತುಗಳಿಗೆ ವಿರಾಮ ಹೇಳಲು ಬಯಸುತ್ತಿದ್ದೇನೆ. ವಾಣಿಜ್ಯ ಭವನದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿರುವ ಈ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಅಭಿನಂದನೆಗಳು.

ಧನ್ಯವಾದಗಳು.