Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವದೆಹಲಿಯಲ್ಲಿ ನಡೆದ ಬಿ-20 ಶೃಂಗಸಭೆ `ಭಾರತ 2023’ ಉದ್ದೇಶಿಸಿ ಪ್ರಧಾನ ಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ

ನವದೆಹಲಿಯಲ್ಲಿ ನಡೆದ ಬಿ-20 ಶೃಂಗಸಭೆ `ಭಾರತ 2023’ ಉದ್ದೇಶಿಸಿ ಪ್ರಧಾನ ಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ


ಮಹಿಳೆಯರೇ ಮತ್ತು ಮಹನೀಯರೇ

ಗೌರವಾನ್ವಿತ ಪ್ರತಿನಿಧಿಗಳೇ,

ನಮಸ್ಕಾರ!

ಭಾರತಕ್ಕೆ ಸ್ವಾಗತ.

ಸ್ನೇಹಿತರೇ,

ಇಡೀ ದೇಶದಾದ್ಯಂತ ನಮ್ಮಲ್ಲಿ ಹಬ್ಬದ ವಾತಾವರಣವಿರುವ ಸಮಯದಲ್ಲಿ ಉದ್ಯಮಿಗಳಾದ ನೀವೆಲ್ಲರೂ ಭಾರತಕ್ಕೆ ಬಂದಿದ್ದೀರಿ. ಭಾರತದಲ್ಲಿ ಸುದೀರ್ಘ ವಾರ್ಷಿಕ ಹಬ್ಬದ ಋತುವನ್ನು ಒಂದು ರೀತಿಯಲ್ಲಿ ಮುಂದೂಡಲಾಗಿದೆ. ಈ ಹಬ್ಬದ ಋತುವೆಂದರೆ, ಅದು ನಮ್ಮ ಸಮಾಜ ಹಾಗೂ ನಮ್ಮ ವ್ಯಾಪಾರಿಗಳು ಸಂಭ್ರಮಾಚರಣೆ ಮಾಡುವ ಸಮಯ. ಈ ಬಾರಿ, ಅದು ಆಗಸ್ಟ್ 23ರಿಂದಲೇ ಪ್ರಾರಂಭವಾಗಿದೆ. ಈ ಆಚರಣೆಯು ಚಂದ್ರನ ಮೇಲೆ ʻಚಂದ್ರಯಾನ-3’ದ ಆಗಮನದ ಪ್ರಯುಕ್ತವಾಗಿದೆ. ನಮ್ಮ ಬಾಹ್ಯಾಕಾಶ ಸಂಸ್ಥೆ ʻಇಸ್ರೋʼ ಭಾರತದ ಚಂದ್ರಯಾನದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ಆದರೆ ಇದೇ ವೇಳೆ, ಭಾರತೀಯ ಉದ್ಯಮವು ಅಪಾರ ಬೆಂಬಲವನ್ನು ನೀಡಿದೆ. ಚಂದ್ರಯಾನದಲ್ಲಿ ಬಳಸಲಾದ ಅನೇಕ ಉಪಕರಣಗಳನ್ನು ನಮ್ಮ ಉದ್ಯಮ, ಖಾಸಗಿ ಕಂಪನಿಗಳು ಮತ್ತು ʻಎಂಎಸ್ಎಂಇʼಗಳು ಅಭಿವೃದ್ಧಿಪಡಿಸಿವೆ ಮತ್ತು ಅಗತ್ಯ ಸಮಯದೊಳಗೆ ಅವು ಇಸ್ರೋಗೆ ಲಭ್ಯವಾಗುವಂತೆ ಮಾಡಿವೆ. ಒಂದು ರೀತಿಯಲ್ಲಿ, ಈ ಯಶಸ್ಸು ವಿಜ್ಞಾನ ಮತ್ತು ಉದ್ಯಮ ಎರಡಕ್ಕೂ ಸೇರಿದೆ. ಈ ಬಾರಿ ಇಡೀ ಜಗತ್ತು ಭಾರತದೊಂದಿಗೆ ಈ ಸಾಧನೆಯನ್ನು ಸಂಭ್ರಮಿಸುತ್ತಿದೆ. ಎಂಬುದು ಸಹ ಮುಖ್ಯವಾಗಿದೆ. ಈ ಸಂಭ್ರಮಾಚರಣೆಯು ʻಜವಾಬ್ದಾರಿಯುತ ಬಾಹ್ಯಾಕಾಶ ಕಾರ್ಯಕ್ರಮʼವನ್ನು ನಡೆಸುವ ಕುರಿತದ್ದಾಗಿದೆ. ಈ ಆಚರಣೆಯು ದೇಶದ ಅಭಿವೃದ್ಧಿಯನ್ನು ವೇಗಗೊಳಿಸುವ ಕುರಿತದ್ದಾಗಿದೆ. ಈ ಆಚರಣೆಯು ನಾವೀನ್ಯತೆ ಕುರಿತದ್ದಾಗಿದೆ. ಈ ಆಚರಣೆಯು ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಸುಸ್ಥಿರತೆ ಮತ್ತು ಸಮಾನತೆಯನ್ನು ತರುವ ಕುರಿತದ್ದಾಗಿದೆ. ಇದು ʻಬಿ-20 ಶೃಂಗಸಭೆ – ರೈಸ್ʼನ ವಿಷಯವೂ ಆಗಿದೆ. ಇದು ಜವಾಬ್ದಾರಿ, ವೇಗವರ್ಧನೆ, ನಾವೀನ್ಯತೆ, ಸುಸ್ಥಿರತೆ ಮತ್ತು ಸಮಾನತೆಯ ಕುರಿತಾದದ್ದು. ಇದು ಮಾನವೀಯತೆಯ ಕುರಿತಾದದ್ದು. ಇದು ʻಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯʼವನ್ನು ಕುರಿತಾದದ್ದು.

 ಸ್ನೇಹಿತರೇ,

ʻಬಿ-20 ಶೃಂಗಸಭೆಯ ವಿಷಯವಾದ “ರೈಸ್”(RISE) ನಾವೀನ್ಯತೆಯನ್ನು(Innovation) ಪ್ರತಿನಿಧಿಸುವ ‘ಐ’ ಅಕ್ಷರವನ್ನು ಒಳಗೊಂಡಿದೆ. ಆದಾಗ್ಯೂ, ನಾನು ʻಇನ್ನೋವೇಶನ್ʼ ಜೊತೆಗೆ ಮತ್ತೊಂದು ‘ಐ’ ಅನ್ನು ಸಹ  ಇದರಲ್ಲಿ ನೋಡುತ್ತೇನೆ. ಆ ‘ಐ’ ಎಂದರೆ ಒಳಗೊಳ್ಳುವಿಕೆ(Inclusiveness). ʻಜಿ -20’ ಒಕ್ಕೂಟದ ಖಾಯಂ ಸದಸ್ಯರಾಗಲು ನಾವು ಅದೇ ದೃಷ್ಟಿಕೋನದೊಂದಿಗೆ ಆಫ್ರಿಕನ್ ಒಕ್ಕೂಟವನ್ನು ಆಹ್ವಾನಿಸಿದ್ದೇವೆ. ʻಬಿ-20ʼ ನಲ್ಲಿಯೂ ಆಫ್ರಿಕಾದ ಆರ್ಥಿಕ ಅಭಿವೃದ್ಧಿಗೆ ಮೀಸಲಾಗಿರುವ ಕೇಂದ್ರೀಕೃತ ಪ್ರದೇಶವಿದೆ. ಈ ವೇದಿಕೆಯು ತನ್ನ ವಿಧಾನದಲ್ಲಿ ಹೆಚ್ಚು ಅಂತರ್ಗತವಾಗಿದ್ದರೆ, ಅದು ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಭಾರತ ನಂಬಿದೆ. ಈ ವಿಧಾನವು ಜಾಗತಿಕ ಆರ್ಥಿಕ ಸವಾಲುಗಳನ್ನು ನಿಭಾಯಿಸಲು, ಬೆಳವಣಿಗೆಯನ್ನು ಸುಸ್ಥಿರವಾಗಿಸಲು ಮತ್ತು ಇಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಕಾರ್ಯಗತಗೊಳಿಸುವಲ್ಲಿ ಹೆಚ್ಚಿನ ಯಶಸ್ಸನ್ನು ಖಾತರಿಪಡಿಸಲು ಸಹಾಯ ಮಾಡುತ್ತದೆ.

ಸ್ನೇಹಿತರೇ,

ಯಾವುದೇ ಬಿಕ್ಕಟ್ಟು ಅಥವಾ ಪ್ರತಿಕೂಲತೆ ಪರಿಸ್ಥಿತಿಯು ಅದರೊಂದಿಗೆ ಕೆಲವು ಪಾಠಗಳನ್ನು ನಮಗೆ ಹೊತ್ತು ತರುತ್ತದೆ, ನಮಗೆ ಅಮೂಲ್ಯವಾದದ್ದನ್ನು ಕಲಿಸುತ್ತದೆ ಎಂಬ ಮಾತನ್ನು ಆಗಾಗ್ಗೆ ನಾವು ಕೇಳುತ್ತಿರುತ್ತೇವೆ. ಕೇವಲ ಎರಡು ಅಥವಾ ಮೂರು ವರ್ಷಗಳ ಹಿಂದೆ, ಜಗತ್ತು ಅತಿದೊಡ್ಡ ಸಾಂಕ್ರಾಮಿಕ ರೋಗವನ್ನು ಎದುರಿಸಿತು, ಶತಮಾನದ ಅತಿದೊಡ್ಡ ಬಿಕ್ಕಟ್ಟನ್ನು ಎದುರಿಸಿತು. ಈ ಬಿಕ್ಕಟ್ಟು ಪ್ರತಿ ದೇಶ, ಪ್ರತಿ ಸಮಾಜ, ಪ್ರತಿ ವ್ಯಾಪಾರ ಸಂಸ್ಥೆ ಮತ್ತು ಪ್ರತಿ ಕಾರ್ಪೊರೇಟ್ ಸಂಸ್ಥೆಗೆ ಪಾಠ ಕಲಿಸಿದೆ. ಆ ಪಾಠ ಏನೆಂದರೆ ನಾವು ಈಗ ಹೆಚ್ಚು ಹೂಡಿಕೆ ಮಾಡಬೇಕಾಗಿರುವುದು ಪರಸ್ಪರ ನಂಬಿಕೆಯಲ್ಲಿ. ಕರೋನಾ ಸಾಂಕ್ರಾಮಿಕವು ವಿಶ್ವದಾದ್ಯಂತ ಈ ಪರಸ್ಪರ ನಂಬಿಕೆಯನ್ನು ಛಿದ್ರಗೊಳಿಸಿದೆ. ಮತ್ತು ಈ ಅಪನಂಬಿಕೆಯ ವಾತಾವರಣದಲ್ಲಿ, ಅತ್ಯಂತ ಸೂಕ್ಷ್ಮತೆ, ನಮ್ರತೆ ಮತ್ತು ನಂಬಿಕೆಯ ವಿಶ್ವಾಸದೊಂದಿಗೆ ನಿಮ್ಮ ಮುಂದೆ ನಿಂತಿರುವ ದೇಶವೆಂದರೆ ಅದು ಭಾರತ. 100 ವರ್ಷಗಳ ಅತಿದೊಡ್ಡ ಬಿಕ್ಕಟ್ಟಿನ ನಡುವೆ, ಭಾರತವು ಜಗತ್ತಿಗೆ ಅಮೂಲ್ಯವಾದದ್ದನ್ನು –  ನಂಬಿಕೆಯನ್ನು, ಪರಸ್ಪರ ವಿಶ್ವಾಸವನ್ನು ನೀಡಿದೆ.

ಕರೋನಾ ಅವಧಿಯಲ್ಲಿ ಜಗತ್ತಿಗೆ ಅಗತ್ಯವಿದ್ದಾಗ, ಭಾರತವು ವಿಶ್ವದ ಔಷಧಾಲಯವಾಗಿ 150ಕ್ಕೂ ಹೆಚ್ಚು ದೇಶಗಳಿಗೆ ಔಷಧಗಳನ್ನು ಒದಗಿಸಿತು. ಜಗತ್ತಿಗೆ ಕೋವಿಡ್‌ ಲಸಿಕೆಗಳು ಅಗತ್ಯವಿದ್ದಾಗ, ಭಾರತವು ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಿತು ಮತ್ತು ಲಕ್ಷಾಂತರ ಜನರ ಜೀವವನ್ನು ಉಳಿಸಿತು. ಭಾರತದ ಪ್ರಜಾಪ್ರಭುತ್ವದ ಮೌಲ್ಯಗಳು ಅದರ ಕಾರ್ಯಗಳು ಮತ್ತು ಪ್ರತಿಕ್ರಿಯೆಗಳಲ್ಲಿ ಅತ್ಯಂತ ಸ್ಪಷ್ಟವಾಗಿವೆ. ದೇಶಾದ್ಯಂತ 50 ಕ್ಕೂ ಹೆಚ್ಚು ನಗರಗಳಲ್ಲಿ ನಡೆದ
ಜಿ-20 ಸಭೆಗಳಲ್ಲಿ ಭಾರತದ ಪ್ರಜಾಪ್ರಭುತ್ವ ಮೌಲ್ಯಗಳು ಗೋಚರಿಸುತ್ತವೆ. ಅದಕ್ಕಾಗಿಯೇ ಭಾರತದೊಂದಿಗಿನ ನಿಮ್ಮ ಪಾಲುದಾರಿಕೆಯು ಬಹಳ ಮಹತ್ವದ್ದಾಗಿದೆ. ಇಂದು, ಭಾರತವು ವಿಶ್ವದ ಅತ್ಯಂತ ಕಿರಿಯ ಪ್ರತಿಭೆಗಳಿಗೆ ನೆಲೆಯಾಗಿದೆ. ಇಂದು, ಭಾರತವು ‘ಇಂಡಸ್ಟ್ರಿ 4.0’ ಯುಗದಲ್ಲಿ ಡಿಜಿಟಲ್ ಕ್ರಾಂತಿಯ ಮುಖವಾಗಿ ತಲೆ ಎತ್ತಿ ನಿಂತಿದೆ. ಭಾರತದೊಂದಿಗಿನ ನಿಮ್ಮ ಸ್ನೇಹವು ಬಲವಾದಷ್ಟೂ ಇಬ್ಬರಿಗೂ ಹೆಚ್ಚಿನ ಸಮೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ವ್ಯವಹಾರಗಳು ಸಾಮರ್ಥ್ಯವನ್ನು ಸಮೃದ್ಧಿಯಾಗಿ, ಅಡೆತಡೆಗಳನ್ನು ಅವಕಾಶಗಳಾಗಿ ಮತ್ತು ಆಕಾಂಕ್ಷೆಗಳನ್ನು ಸಾಧನೆಗಳಾಗಿ ಪರಿವರ್ತಿಸಬಹುದು ಎಂದು ನಿಮಗೆಲ್ಲರಿಗೂ ತಿಳಿದಿದೆ. ಅವು ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ, ಜಾಗತಿಕ ಅಥವಾ ಸ್ಥಳೀಯವಾಗಿರಲಿ, ವ್ಯವಹಾರಗಳು ಎಲ್ಲರಿಗೂ ಪ್ರಗತಿಯನ್ನು ಖಾತರಿಪಡಿಸಬಹುದು. ಆದ್ದರಿಂದ, ಜಾಗತಿಕ ಬೆಳವಣಿಗೆಯ ಭವಿಷ್ಯವು ವ್ಯವಹಾರದ ಭವಿಷ್ಯವನ್ನು ಅವಲಂಬಿಸಿರುತ್ತದೆ.

ಸ್ನೇಹಿತರೇ,

ಕೋವಿಡ್-19ರ ಮೊದಲು ಮತ್ತು ನಂತರ ಜಗತ್ತು ಗಮನಾರ್ಹ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ನಾವು ಅನೇಕ ವಿಚಾರಗಳಲ್ಲಿ ಇನ್ನೆಂದೂ ಮರಳಿ ಹಳೆಯ ಸ್ಥಿತಿಗೆ ಮರಳದಂತಹ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಈಗ, ಜಾಗತಿಕ ಪೂರೈಕೆ ಸರಪಳಿಗಳ ಬಗೆಗಿನ ದೃಷ್ಟಿಕೋನ ಮೊದಲಿನಂತಿಲ್ಲ. ಜಾಗತಿಕ ಪೂರೈಕೆ ಸರಪಳಿ ದಕ್ಷವಾಗಿರುವವರೆಗೆ, ಚಿಂತಿಸುವ ಅಗತ್ಯವೇ ಇಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಜಗತ್ತಿಗೆ ಅತ್ಯಂತ ಅಗತ್ಯವಿರುವ ಸಂದರ್ಭದಲ್ಲೇ  ಅಂತಹ ಪೂರೈಕೆ ಸರಪಳಿ ತುಂಡರಿಸಬಹುದು. ಆದ್ದರಿಂದ, ಇಂದು ಜಗತ್ತು ಈ ಪ್ರಶ್ನೆಯೊಂದಿಗೆ ಹೋರಾಡುತ್ತಿರುವ ಸಂದರ್ಭದಲ್ಲಿ, ನನ್ನ ಸ್ನೇಹಿತರೇ, ಭಾರತವು ಈ ಸಮಸ್ಯೆಗೆ ಪರಿಹಾರವಾಗಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ದಕ್ಷ ಮತ್ತು ವಿಶ್ವಾಸಾರ್ಹ ಜಾಗತಿಕ ಪೂರೈಕೆ ಸರಪಳಿಯನ್ನು ನಿರ್ಮಿಸುವಲ್ಲಿ ಭಾರತವು ನಿರ್ಣಾಯಕ ಸ್ಥಾನವನ್ನು ಹೊಂದಿದೆ. ಆದ್ದರಿಂದ, ಇದನ್ನು ಸಾಧಿಸಲು ಜಾಗತಿಕ ವ್ಯವಹಾರಗಳು ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಬೇಕಾಗಿದೆ, ಮತ್ತು ಇದನ್ನು ನಾವು ಒಟ್ಟಾಗಿ ಮಾಡಬೇಕು.

ಸ್ನೇಹಿತರೇ,

ಜಿ-20 ರಾಷ್ಟ್ರಗಳ ನಡುವೆ ಚರ್ಚೆಗಳು ಮತ್ತು ಸಂವಾದಗಳಿಗೆ ʻಬಿಸಿನೆಸ್-20ʼ ಒಂದು ಬಲಿಷ್ಠ ವೇದಿಕೆಯಾಗಿ ಹೊರಹೊಮ್ಮಿದೆ ಎಂಬುದು ನನಗೆ ಸಂತೋಷ ತಂದಿದೆ. ಆದ್ದರಿಂದ, ಈ ವೇದಿಕೆಯಲ್ಲಿ ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ನಾವು ಚರ್ಚಿಸುವಾಗ, ಸುಸ್ಥಿರತೆಯು ಅತ್ಯಂತ ನಿರ್ಣಾಯಕ ವಿಷಯವಾಗಿದೆ. ಸುಸ್ಥಿರತೆಯು ಕೇವಲ ನಿಯಮಗಳು ಮತ್ತು ನಿಬಂಧನೆಗಳಿಗೆ ಸೀಮಿತವಾಗಬಾರದು ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿಡಬೇಕು; ಇದು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಬೇಕು. ಜಾಗತಿಕ ಉದ್ಯಮಗಳು ಈ ದಿಕ್ಕಿನಲ್ಲಿ ಮತ್ತಷ್ಟು ಮುಂದುವರಿದು ಹೆಜ್ಜೆ ಇಡಬೇಕು ಎಂಬುದು ನನ್ನ ಮನವಿ. ಸುಸ್ಥಿರತೆಯು ಸ್ವತಃ ಒಂದು ಅವಕಾಶ ಮತ್ತು ವ್ಯವಹಾರ ಮಾದರಿಯಾಗಿದೆ. ಇದನ್ನು ವಿವರಿಸಲು, ನಾನು ನಿಮಗೆ ಒಂದು ಸಣ್ಣ ಉದಾಹರಣೆಯನ್ನು ನೀಡುತ್ತೇನೆ ಅದೆಂದರೆ ಸಿರಿಧಾನ್ಯಗಳು. ಈ ವರ್ಷವನ್ನು ವಿಶ್ವಸಂಸ್ಥೆಯು ʻಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷʼವೆಂದು ಆಚರಿಸುತ್ತಿದೆ. ಸಿರಿಧಾನ್ಯಗಳು ಸಮೃದ್ಧ ಪೌಷ್ಠಕತೆಯುಳ್ಳ ಆಹಾರ ಮಾತ್ರವಲ್ಲ, ಪರಿಸರ ಸ್ನೇಹಿ ಮತ್ತು ಸಣ್ಣ ರೈತರಿಗೆ ಬೆಂಬಲ ನೀಡುತ್ತವೆ. ಹೆಚ್ಚುವರಿಯಾಗಿ, ಆಹಾರ ಸಂಸ್ಕರಣಾ ವ್ಯವಹಾರದಲ್ಲಿ ಅಪಾರ ಸಾಮರ್ಥ್ಯವಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ಜೀವನಶೈಲಿ ಮತ್ತು ಆರ್ಥಿಕತೆ ಎರಡಕ್ಕೂ ಗೆಲುವು-ಗೆಲುವಿನ ಮಾದರಿಯಾಗಿದೆ. ಅಂತೆಯೇ, ನಾವು ಈ ಪರಿಕಲ್ಪನೆಯನ್ನು ಆವರ್ತಕ ಆರ್ಥಿಕತೆಯಲ್ಲಿ ನೋಡುತ್ತೇವೆ. ಇದು ವ್ಯವಹಾರಗಳಿಗೆ ಅಪಾರ ಅವಕಾಶಗಳನ್ನು ಒದಗಿಸುತ್ತದೆ. ಭಾರತದಲ್ಲಿ, ನಾವು ಹಸಿರು ಇಂಧನದ ಮೇಲೆ ಸಾಕಷ್ಟು ಗಮನ ಹರಿಸುತ್ತಿದ್ದೇವೆ. ಹಸಿರು ಹೈಡ್ರೋಜನ್ ಕ್ಷೇತ್ರದಲ್ಲಿ, ಸೌರ ಶಕ್ತಿ ಸಾಮರ್ಥ್ಯದಲ್ಲಿ ನಾವು ಸಾಧಿಸಿದ ಯಶಸ್ಸನ್ನು ಪುನರಾವರ್ತಿಸುವುದು ನಮ್ಮ ಗುರಿಯಾಗಿದೆ. ಜಗತ್ತನ್ನು ತನ್ನೊಂದಿಗೆ ಕರೆದೊಯ್ಯುವುದು ಭಾರತದ ಪ್ರಯತ್ನವಾಗಿದೆ.  ಈ ಪ್ರಯತ್ನವು ಅಂತರರಾಷ್ಟ್ರೀಯ ಸೌರ ಮೈತ್ರಿಯ ರೂಪದಲ್ಲಿಯೂ ನೋಡಬಹುದಾಗಿದೆ.

ಸ್ನೇಹಿತರೇ,

ಕೊರೊನಾ ನಂತರದ ಜಗತ್ತಿನಲ್ಲಿ, ಜನರು ತಮ್ಮ ಆರೋಗ್ಯದ ಬಗ್ಗೆ ಬಹಳ ಜಾಗೃತರಾಗಿರುವುದನ್ನು ನಾವು ಗಮನಿಸಬಹುದು. ಆರೋಗ್ಯ ಪ್ರಜ್ಞೆಯು ಕೇವಲ ಊಟದ ಮೇಜಿನ ಬಳಿ ಮಾತ್ರವಲ್ಲ, ನಾವು ಖರೀದಿಗಳನ್ನು ಮಾಡಿದಾಗ, ನಮ್ಮ ಊಟವನ್ನು ಆಯ್ಕೆ ಮಾಡಿದಾಗ ಮತ್ತು ವಿವಿಧ ಚಟುವಟಿಕೆಗಳಲ್ಲಿ ತೊಡಗಿದಾಗ ಸಹ ಗೋಚರಿಸುತ್ತದೆ. ಪ್ರತಿಯೊಂದು ಆಯ್ಕೆಯು ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಎಚ್ಚರಿಕೆಯಿಂದ ಪರಿಗಣಿಸುತ್ತೇವೆ. ದೀರ್ಘಾವಧಿಯಲ್ಲಿ ಅಸ್ವಸ್ಥತೆ ಮತ್ತು ಸಂಭಾವ್ಯ ತೊಂದರೆಗಳನ್ನು ತಪ್ಪಿಸುವ ಬಗ್ಗೆ ಪ್ರತಿಯೊಬ್ಬರೂ ಚಿಂತಿಸುತ್ತಾರೆ. ಇದು ಕೇವಲ ವರ್ತಮಾನದ ಬಗ್ಗೆ ಅಲ್ಲ; ನಾವು ಅದರ ಭವಿಷ್ಯದ ಪರಿಣಾಮಗಳನ್ನು ಸಹ ಪರಿಗಣಿಸುತ್ತೇವೆ. ಭೂಗ್ರಹದ ವಿಚಾರದಲ್ಲಿ ನಮ್ಮ ಕಾರ್ಯವಿಧಾನದ ಬಗ್ಗೆ ಉದ್ಯಮಗಳು ಮತ್ತು ಸಮಾಜ ಎರಡೂ ಸಹ ಒಂದೇ ಮನಸ್ಥಿತಿಯನ್ನು ಹೊಂದಿರಬೇಕು ಎಂಬುದು ನನ್ನ ನಂಬಿಕೆ. ನನ್ನ ಆರೋಗ್ಯದ ಬಗ್ಗೆ ಮತ್ತು ಅದು ನನ್ನ ದೈನಂದಿನ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ನಾನು ಕಾಳಜಿ ವಹಿಸುವಂತೆಯೇ, ನಮ್ಮ ಕ್ರಿಯೆಗಳು ಭೂಗ್ರಹದ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಪರಿಗಣಿಸುವುದು ನಮ್ಮ ಜವಾಬ್ದಾರಿಯಾಗಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು, ನಮ್ಮ ಭೂಮಿಯ ಮೇಲೆ ಅದರ ಪರಿಣಾಮದ ಬಗ್ಗೆ ನಾವು ಯೋಚಿಸಬೇಕು. ʻಲೈಫ್‌ಸ್ಟೈಲ್‌ ಫಾರ್‌ ಎನ್ವಿರಾನ್ಮೆಂಟ್ʼ(LiFE) ಅನ್ನು ಪ್ರತಿನಿಧಿಸುವ `ಮಿಷನ್ ಲೈಫ್’, ಈ ತತ್ವದಿಂದ ಪ್ರೇರಿತವಾಗಿದೆ. ಪ್ರಪಂಚದಾದ್ಯಂತ ಭೂಗ್ರಹ-ಪರ ವ್ಯಕ್ತಿಗಳ ಸಮುದಾಯವನ್ನು ರಚಿಸುವುದು, ಆಂದೋಲನವನ್ನು ಪ್ರಾರಂಭಿಸುವುದು ಇದರ ಉದ್ದೇಶವಾಗಿದೆ. ಪ್ರತಿಯೊಂದು ಜೀವನಶೈಲಿ ನಿರ್ಧಾರವು, ಔದ್ಯಮಿಕ ಪ್ರಪಂಚದ ಮೇಲೆ ಸ್ವಲ್ಪ ಪರಿಣಾಮ ಬೀರುತ್ತದೆ. ಜೀವನಶೈಲಿ ಮತ್ತು ವ್ಯವಹಾರಗಳೆರಡೂ ಭೂಗ್ರಹದ ಪರವಾಗಿದ್ದಾಗ, ಅನೇಕ ಸಮಸ್ಯೆಗಳು ಸಹಜವಾಗಿಯೇ ಕಡಿಮೆಯಾಗುತ್ತವೆ. ನಾವು ನಮ್ಮ ಜೀವನ ಮತ್ತು ವ್ಯವಹಾರಗಳನ್ನು ಪರಿಸರ ಪರಿಗಣನೆಗಳೊಂದಿಗೆ ಹೊಂದಿಸುವತ್ತ ಗಮನ ಹರಿಸಬೇಕು. ಭಾರತವು ವ್ಯಾಪಾರ ವಲಯದಲ್ಲಿ ʻಹಸಿರು ಸಾಲʼಕ್ಕಾಗಿ (ಗ್ರೀನ್‌ ಕ್ರೆಡಿಟ್‌) ಒಂದು ನೀತಿಯನ್ನು ಅಭಿವೃದ್ಧಿಪಡಿಸಿದೆ. ನಾವು ದೀರ್ಘಕಾಲದಿಂದ ʻಕಾರ್ಬನ್ ಕ್ರೆಡಿಟ್ಸ್ʼ ಪರಿಕಲ್ಪನೆಯಲ್ಲಿ ಸಿಲುಕಿಕೊಂಡಿದ್ದೇವೆ. ಇದೇ ವೇಳೆ, ʻಕಾರ್ಬನ್ ಕ್ರೆಡಿಟ್‌ʼನ ಪ್ರಯೋಜನಗಳನ್ನು ಆನಂದಿಸುತ್ತಿರುವವರೂ  ಇದ್ದಾರೆ. ನಾನು ʻಹಸಿರು ಸಾಲʼದ ವಿಷಯವನ್ನು ವಿಶ್ವದ ಮುಂದೆ ತಂದಿದ್ದೇನೆ. ‘ಭೂಗ್ರಹ ಪರ’ ಕ್ರಿಯೆಗಳಿಗೆ ʻಗ್ರೀನ್ ಕ್ರೆಡಿಟ್ʼ ಒತ್ತು ನೀಡುತ್ತದೆ. ಜಾಗತಿಕ ಉದ್ಯಮದ ಎಲ್ಲ ಘಟಾನುಘಟಿಗಳು ಇದರಲ್ಲಿ ಸೇರಬೇಕು ಮತ್ತು ಇದನ್ನು ಜಾಗತಿಕ ಆಂದೋಲನವನ್ನಾಗಿ ಮಾಡಬೇಕು ಎಂದು ನಾನು ಒತ್ತಾಯಿಸುತ್ತೇನೆ.

ಸ್ನೇಹಿತರೇ,

ನಾವು ಸಾಂಪ್ರದಾಯಿಕ ವ್ಯಾಪಾರ ವಿಧಾನವನ್ನು ಸಹ ಪರಿಗಣಿಸಬೇಕಾಗಿದೆ. ನಾವು ಕೇವಲ ನಮ್ಮ ಉತ್ಪನ್ನಗಳು, ಬ್ರಾಂಡ್‌ಗಳು ಮತ್ತು ಮಾರಾಟಕ್ಕೆ ನಮ್ಮನ್ನು ಸೀಮಿತಗೊಳಿಸಬಾರದು; ಅದು ಸಾಕಾಗುವುದಿಲ್ಲ. ವ್ಯವಹಾರವಾಗಿ, ದೀರ್ಘಾವಧಿಯಲ್ಲಿ ಪ್ರಯೋಜನಗಳನ್ನು ಒದಗಿಸುವ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವತ್ತ ನಾವು ಗಮನ ಹರಿಸಬೇಕಾಗಿದೆ. ಉದಾಹರಣೆಗೆ, ಇತ್ತೀಚಿನ ದಿನಗಳಲ್ಲಿ ಭಾರತವು ಜಾರಿಗೆ ತಂದ ನೀತಿಗಳಿಂದಾಗಿ, ಕೇವಲ 5 ವರ್ಷಗಳ ಅವಧಿಯಲ್ಲಿ 13 ಕೋಟಿಗೂ ಹೆಚ್ಚು ಜನರನ್ನು ಬಡತನದಿಂದ ಮೇಲೆತ್ತಲಾಗಿದೆ. ಬಡತನ ರೇಖೆಗಿಂತ ಮೇಲಿರುವವರು, ʻನವ ಮಧ್ಯಮ ವರ್ಗʼದವರು ದೊಡ್ಡ ಗ್ರಾಹಕರಾಗಿದ್ದಾರೆ. ಏಕೆಂದರೆ ಅವರು ಹೊಸ ಆಕಾಂಕ್ಷೆಗಳೊಂದಿಗೆ ಬರುತ್ತಾರೆ. ಈ ʻನವ ಮಧ್ಯಮ ವರ್ಗʼವು ಭಾರತದ ಬೆಳವಣಿಗೆಯ ವೇಗಕ್ಕೆ ಕೊಡುಗೆ ನೀಡುತ್ತಿದೆ. ಒಟ್ಟಾರೆಯಾಗಿ, ಸರ್ಕಾರದ ಬಡವರ ಪರ ಆಡಳಿತವು ಬಡವರಿಗೆ ಮಾತ್ರವಲ್ಲದೆ ಮಧ್ಯಮ ವರ್ಗ ಮತ್ತು ನಮ್ಮ ʻಎಂಎಸ್ಎಂಇʼಗಳಿಗೆ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಪ್ರಯೋಜನವನ್ನು ನೀಡಿದೆ. ಬಡವರ ಪರವಾಗಿ ಗಮನ ಕೇಂದ್ರೀಕರಿಸಿ ನಡೆಸುವ ಆಡಳಿತದಿಂದ ಮುಂದಿನ 5-7 ವರ್ಷಗಳಲ್ಲಿ ಮಧ್ಯಮ ವರ್ಗದ ಬೆಳವಣಿಗೆ ಎಷ್ಟು ಮಹತ್ವದ್ದಾಗಿರಬಹುದು ಎಂದು ಊಹಿಸಿ. ಮಧ್ಯಮ ವರ್ಗದ ಖರೀದಿ ಶಕ್ತಿ ಹೆಚ್ಚುತ್ತಲೇ ಇರುತ್ತದೆ. ಆದ್ದರಿಂದ, ಪ್ರತಿಯೊಂದು ವ್ಯಾಪಾರ ಉದ್ದಮವೂ ಹೆಚ್ಚು ಹೆಚ್ಚು ಜನರ ಬೇಡಿಕೆಯನ್ನು  ಪೂರೈಸುವತ್ತ ಗಮನ ಹರಿಸಬೇಕು. ಈ ಖರೀದಿ ಶಕ್ತಿ ಬೆಳೆದಂತೆ, ಇದು ನೇರವಾಗಿ ವ್ಯವಹಾರಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಈ ಎರಡೂ ಅಂಶಗಳ ಮೇಲೆ ನಮ್ಮ ಗಮನವನ್ನು ಸಮಾನವಾಗಿ ಸಮತೋಲನಗೊಳಿಸುವುದು ಹೇಗೆ ಎಂದು ನಾವು ಕಲಿಯಬೇಕು. ನಮ್ಮ ಗಮನವು ಸ್ವ-ಕೇಂದ್ರಿತವಾಗಿದ್ದರೆ, ನಾವು ನಮಗೆ ಅಥವಾ ಜಗತ್ತಿಗೆ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ನಾನು ನಂಬುತ್ತೇನೆ. ನಿರ್ಣಾಯಕ ವಸ್ತುಗಳು, ಅಪರೂಪದ ಮಣ್ಣಿನ ವಸ್ತುಗಳು ಮತ್ತು ಹಲವಾರು ಇತರ ಲೋಹಗಳಲ್ಲಿ ನಾವು ಈ ಸವಾಲನ್ನು ಅನುಭವಿಸುತ್ತಿದ್ದೇವೆ. ಈ ವಸ್ತುಗಳು ಕೆಲವು ಸ್ಥಳಗಳಲ್ಲಿ ಹೇರಳವಾಗಿವೆ ಮತ್ತು ಕೆಲವು ಸ್ಥಳಗಳಲ್ಲಿ ಇಲ್ಲ, ಆದರೆ ಇಡೀ ಮಾನವ ಜನಾಂಗಕ್ಕೆ ಅವುಗಳ ಅಗತ್ಯವಿದೆ. ಅದನ್ನು ಯಾರೇ ಹೊಂದಿದ್ದರೂ, ಅವರು ಅದನ್ನು ಜಾಗತಿಕ ಜವಾಬ್ದಾರಿ ಎಂದು ಪರಿಗಣಿಸದಿದ್ದರೆ, ಅದು ವಸಾಹತುಶಾಹಿಯ ಹೊಸ ಮಾದರಿಯನ್ನು ಉತ್ತೇಜಿಸುತ್ತದೆ. ಇದು ನಾನು ನೀಡುತ್ತಿರುವ ಗಂಭೀರ ಎಚ್ಚರಿಕೆ.

ಸ್ನೇಹಿತರೇ,

ಉತ್ಪಾದಕರು ಮತ್ತು ಗ್ರಾಹಕರ ಹಿತಾಸಕ್ತಿಗಳಲ್ಲಿ ಸಮತೋಲನವಿದ್ದಾಗ ಲಾಭದಾಯಕ ಮಾರುಕಟ್ಟೆಯನ್ನು ಉಳಿಸಿಕೊಳ್ಳಬಹುದು. ಇದು ರಾಷ್ಟ್ರಗಳಿಗೂ ಅನ್ವಯಿಸುತ್ತದೆ. ಇತರ ದೇಶಗಳನ್ನು ಕೇವಲ ಮಾರುಕಟ್ಟೆಯಾಗಿ ಪರಿಗಣಿಸುವುದರಿಂದ ಈ ನಿಟ್ಟಿನಲ್ಲಿ ಯಾವುದೇ ಪ್ರಯೋಜನವಿಲ್ಲ. ಇದರಿಂದ ಶೀಘ್ರದಲ್ಲೇ ಅಥವಾ ನಿಧಾನವಾಗಿ ಉತ್ಪಾದಕ ದೇಶಗಳಿಗೆ ಸಹ ಹಾನಿಯಾಗುತ್ತದೆ. ಪ್ರಗತಿಯಲ್ಲಿ ಎಲ್ಲರನ್ನೂ ಸಮಾನ ಪಾಲುದಾರರನ್ನಾಗಿ ಮಾಡುವುದು ಮುಂದಿನ ಮಾರ್ಗವಾಗಿದೆ. ಇಲ್ಲಿ ಅನೇಕ ಜಾಗತಿಕ ವ್ಯಾಪಾರ ನಾಯಕರು ಇದ್ದಾರೆ. ವ್ಯವಹಾರಗಳನ್ನು ಹೆಚ್ಚು ಗ್ರಾಹಕ ಕೇಂದ್ರಿತವಾಗಿಸುವುದು ಹೇಗೆ ಎಂಬುದರ ಬಗ್ಗೆ ನಾವೆಲ್ಲರೂ ಹೆಚ್ಚು ಯೋಚಿಸಬಾರದೇಕೆ? ಈ ಗ್ರಾಹಕರು ವ್ಯಕ್ತಿಗಳಾಗಿರಬಹದು ಅಥವಾ ದೇಶಗಳಾಗಿರಬಹುದು. ಅವರ ಹಿತಾಸಕ್ತಿಗಳನ್ನು ಸಹ ನೋಡಿಕೊಳ್ಳಬೇಕು. ಇದಕ್ಕಾಗಿ ನಾವು ಒಂದು ರೀತಿಯ ವಾರ್ಷಿಕ ಅಭಿಯಾನದ ಬಗ್ಗೆ ಯೋಚಿಸಬಹುದೇ? ಜಾಗತಿಕ ಉದ್ಯಮಗಳು ಪ್ರತಿವರ್ಷ ಗ್ರಾಹಕರ ಮತ್ತು ಅವರ ಮಾರುಕಟ್ಟೆಗಳ ಒಳಿತಿಗಾಗಿ ಸಂಕಲ್ಪ ಮಾಡಲು ಒಗ್ಗೂಡಬಹುದೇ?

ಸ್ನೇಹಿತರೇ,

ಗ್ರಾಹಕರಿಗಾಗಿ ವರ್ಷದಲ್ಲಿ ದಿನವೊಂದನ್ನು ಮೀಸಲಾಗಿರಿಸಲು ವಿಶ್ವಾದ್ಯಂತದ ವ್ಯವಹಾರಗಳು ಒಗ್ಗೂಡಬಹುದೇ? ದುರದೃಷ್ಟವಶಾತ್, ನಾವು ಗ್ರಾಹಕರ ಹಕ್ಕುಗಳ ಬಗ್ಗೆ ಮಾತನಾಡುತ್ತೇವೆ ಮತ್ತು ಜಗತ್ತು ಗ್ರಾಹಕ ಹಕ್ಕುಗಳ ದಿನವನ್ನು ಸಹ ಆಚರಿಸುತ್ತದೆ. ʻಕಾರ್ಬನ್ ಕ್ರೆಡಿಟ್ʼನಿಂದ ʻಗ್ರೀನ್ ಕ್ರೆಡಿಟ್ʼಗೆ ಚಲಿಸುವ ಮೂಲಕ ನಾವು ಈ ಚಕ್ರವನ್ನು ಬದಲಾಯಿಸಬಹುದೇ? ಗ್ರಾಹಕ ಹಕ್ಕುಗಳ ದಿನದ ಬದಲು, ʻಗ್ರಾಹಕ ಆರೈಕೆʼಯ ಬಗ್ಗೆ ಮಾತನಾಡಲು ನಾವು ಮುಂದಾಳತ್ವ ವಹಿಸಬಹುದು. ʻಗ್ರಾಹಕ ಆರೈಕೆ ದಿನʼವನ್ನು ಪ್ರಾರಂಭಿಸುವುದನ್ನು ಮತ್ತು ಅದು ಪರಿಸರದ ಮೇಲೆ ಬೀರಬಹುದಾದ ಗಮನಾರ್ಹ ಸಕಾರಾತ್ಮಕ ಪರಿಣಾಮವನ್ನು ಕಲ್ಪಿಸಿಕೊಳ್ಳಿ. ಗ್ರಾಹಕರ ಆರೈಕೆಯತ್ತ ಗಮನ ಹರಿಸಿದರೆ, ಹಕ್ಕುಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ತಾವಾಗಿಯೇ ಪರಿಹಾರವಾಗುತ್ತವೆ. ಆದ್ದರಿಂದ, ʻಅಂತರರಾಷ್ಟ್ರೀಯ ಗ್ರಾಹಕ ಆರೈಕೆ ದಿನʼದ ವಿಚಾರವಾಗಿ ಏನನ್ನಾದರೂ ಯೋಚಿಸುವಂತೆ ನಾನು ನಿಮ್ಮೆಲ್ಲರನ್ನೂ ಒತ್ತಾಯಿಸುತ್ತೇನೆ. ಇಂತಹ ಉಪಕ್ರಮವು ವ್ಯವಹಾರಗಳು ಮತ್ತು ಗ್ರಾಹಕರ ನಡುವಿನ ವಿಶ್ವಾಸವನ್ನು ಬಲಪಡಿಸುತ್ತದೆ. ಗ್ರಾಹಕರು ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶಕ್ಕೆ ಸೀಮಿತವಾಗಿಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು; ಅವರು ಜಾಗತಿಕ ವ್ಯಾಪಾರದಲ್ಲಿ ತೊಡಗಿರುವ ವಿವಿಧ ದೇಶಗಳನ್ನು ಪ್ರತಿನಿಧಿಸುತ್ತಾರೆ, ಜಾಗತಿಕ ಸರಕು ಮತ್ತು ಸೇವೆಗಳನ್ನು ಬಳಸುತ್ತಾರೆ.

ಸ್ನೇಹಿತರೇ,

ಇಂದು, ವಿಶ್ವದ ಪ್ರಮುಖ ವ್ಯಾಪಾರ ದಿಗ್ಗಜರು ಇಲ್ಲಿ ಸೇರುತ್ತಿದ್ದಂತೆ, ವ್ಯಾಪಾರ ಮತ್ತು ಮಾನವೀಯತೆಯ ಭವಿಷ್ಯವನ್ನು ನಿರ್ಧರಿಸುವ ಹೆಚ್ಚು ಮಹತ್ವದ ಪ್ರಶ್ನೆಗಳನ್ನು ನಾವು ಎದುರಿಸುತ್ತಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯಲು ಸಹಯೋಗದ ಪ್ರಯತ್ನಗಳು ಅತ್ಯಗತ್ಯ. ಹವಾಮಾನ ಬದಲಾವಣೆ, ಇಂಧನ ಕ್ಷೇತ್ರದ ಬಿಕ್ಕಟ್ಟು, ಆಹಾರ ಪೂರೈಕೆ ಸರಪಳಿಯಲ್ಲಿನ ಅಸಮತೋಲನ, ನೀರಿನ ಭದ್ರತೆ ಅಥವಾ ಸೈಬರ್ ಭದ್ರತೆ ಇವೆಲ್ಲವೂ ವ್ಯವಹಾರಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ವಿಷಯಗಳಾಗಿವೆ. ಈ ಸವಾಲುಗಳನ್ನು ಎದುರಿಸಲು, ನಾವು ನಮ್ಮ ಜಂಟಿ ಪ್ರಯತ್ನಗಳನ್ನು ಹೆಚ್ಚಿಸಬೇಕು. ಕಾಲಾನಂತರದಲ್ಲಿ, 10-15 ವರ್ಷಗಳ ಹಿಂದೆ ಊಹಿಸಲಾಗದ ಹೊಸ ಸಮಸ್ಯೆಗಳು ಹೊರಹೊಮ್ಮುತ್ತಿವೆ. ಉದಾಹರಣೆಗೆ, ʻಕ್ರಿಪ್ಟೋಕರೆನ್ಸಿʼಒಡ್ಡುವ ಸವಾಲು. ಇದಕ್ಕೆ ಹೆಚ್ಚು ಸಂಯೋಜಿತ ಕಾರ್ಯವಿಧಾನದ ಅಗತ್ಯವಿದೆ. ಎಲ್ಲಾ ಮಧ್ಯಸ್ಥಗಾರರ ಕಾಳಜಿಗಳನ್ನು ಪರಿಗಣಿಸಿ ಜಾಗತಿಕ ನೀತಿಗಳನ್ನು ರೂಪಿಸುವ ಅಗತ್ಯವಿದೆ ಎಂದು ನಾನು ನಂಬುತ್ತೇನೆ.

ಕೃತಕ ಬುದ್ಧಿಮತ್ತೆಗೆ (ಎಐ) ಇದೇ ರೀತಿಯ ಕಾರ್ಯವಿಧಾನದ ಅಗತ್ಯವಿದೆ. ಜಗತ್ತು ಪ್ರಸ್ತುತ ʻಎಐʼ ಬಗ್ಗೆ ಬಹಳ ಉತ್ಸಾಹ ತೋರುತ್ತಿದೆ. ಆದರೆ ಈ ಉತ್ಸಾಹದಲ್ಲಿ, ನೈತಿಕ ಪರಿಗಣನೆಗಳೂ ಇವೆ. ಕೌಶಲ್ಯ ಮತ್ತು ಮರು-ಕೌಶಲ್ಯ, ಅಲ್ಗಾರಿದಮಿಕ್ ಪಕ್ಷಪಾತ ಮತ್ತು ʻಎಐʼನ ಸಾಮಾಜಿಕ ಪರಿಣಾಮದ ಬಗ್ಗೆ ಕಳವಳಗಳನ್ನು ಎತ್ತಲಾಗುತ್ತಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ನಾವೆಲ್ಲರೂ ಒಗ್ಗೂಡಬೇಕಾಗಿದೆ. ʻನೈತಿಕ ಎಐʼ ವಿಸ್ತರಣೆಯನ್ನು ಖಚಿತಪಡಿಸಿಕೊಳ್ಳಲು ಜಾಗತಿಕ ವ್ಯಾಪಾರ ಸಮುದಾಯಗಳು ಮತ್ತು ಸರ್ಕಾರಗಳು ಸಹಕರಿಸಬೇಕು. ವಿವಿಧ ಕ್ಷೇತ್ರಗಳಲ್ಲಿನ ಸಂಭಾವ್ಯ ಅಡೆತಡೆಗಳನ್ನು ನಾವು ವಿಶ್ಲೇಷಿಸಬೇಕು. ಪ್ರತಿ ಸಂದರ್ಭದಲ್ಲೂ ವಿಘಟನೆಯು ಹೆಚ್ಚು ಆಳವಾದ, ವ್ಯಾಪಕವಾದ ಮತ್ತು ಮಹತ್ವದ್ದಾಗುತ್ತಿದೆ. ಈ ಸವಾಲಿಗೆ ಜಾಗತಿಕ ಚೌಕಟ್ಟಿನ ಅಡಿಯಲ್ಲಿ ಪರಿಹಾರದ ಅಗತ್ಯವಿದೆ. ಸ್ನೇಹಿತರೇ, ಈ ಸವಾಲುಗಳನ್ನು ನಾವು ಎದುರಿಸುತ್ತಿರುವುದು ಇದೇ ಮೊದಲ ಬಾರಿ ಏನಲ್ಲ. ವಾಯುಯಾನ ಕ್ಷೇತ್ರವು ಬೆಳೆಯುತ್ತಿದ್ದಾಗ, ಹಣಕಾಸು ಕ್ಷೇತ್ರವು ಪ್ರಗತಿ ಹೊಂದುತ್ತಿದ್ದಾಗ, ಜಗತ್ತು ಅಂತಹ ಸವಾಲುಗಳನ್ನು ಎದುರಿಸಲು ನಿಯಮಗಳನ್ನು ರೂಪಿಸಿತು. ಆದ್ದರಿಂದ, ಇಂದು, ಈ ಉದಯೋನ್ಮುಖ ವಿಷಯಗಳ ಬಗ್ಗೆ ಚರ್ಚೆಗಳು ಮತ್ತು ಚಿಂತನೆಯಲ್ಲಿ ತೊಡಗಿಸಿಕೊಳ್ಳಲು ನಾನು ʻಬಿ-20ʼಗೆ ಕರೆ ನೀಡುತ್ತೇನೆ.

ಸ್ನೇಹಿತರೇ,

ವ್ಯವಹಾರಗಳು ಯಶಸ್ವಿಯಾಗಿ ಗಡಿಗಳು ಮತ್ತು ಎಲ್ಲೆಗಳನ್ನು ಮೀರಿ ಬೆಳೆದಿವೆ. ಈಗ ವ್ಯವಹಾರಗಳನ್ನು ಕೇವಲ ತಳಮಟ್ಟದಿಂದಾಚೆಗೆ ಕೊಂಡೊಯ್ಯುವ ಸಮಯ. ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆಯ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಮಾತ್ರ ಇದನ್ನು ಮಾಡಬಹುದು. ʻಬಿ 20 ಶೃಂಗಸಭೆʼ ಸಾಮೂಹಿಕ ಪರಿವರ್ತನೆಗೆ ದಾರಿ ಮಾಡಿಕೊಟ್ಟಿದೆ ಎಂದು ನನಗೆ ಖಾತ್ರಿಯಿದೆ. ಸಂಪರ್ಕಿತ ಜಗತ್ತು ಎಂದರೆ, ಅದು ಕೇವಲ ತಂತ್ರಜ್ಞಾನದ ಮೂಲಕ ಸಂಪರ್ಕವಲ್ಲ ಎಂಬುದನ್ನು ನಾವು ನೆನಪಿನಲ್ಲಿಡೋಣ. ಪರಸ್ಪರ ಹಂಚಿಕೊಳ್ಳುವಿಕೆ ಕೇವಲ ಸಾಮಾಜಿಕ ವೇದಿಕೆಗಳಲ್ಲಿ ಮಾತ್ರವಲ್ಲದೆ; ಉದ್ದೇಶ, ಭೂಗ್ರಹದ ಕಾಳಜಿ, ಸಮೃದ್ಧಿ ಮತ್ತು ಭವಿಷ್ಯವನ್ನು ಹಂಚಿಕೊಳ್ಳುವ ಬಗ್ಗೆಯೂ ಯೋಚಿಸಬೇಕಾಗಿದೆ.

ಧನ್ಯವಾದಗಳು.

ಅನಂತ ಧನ್ಯವಾದಗಳು!

ಗಮನಿಸಿ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.

                                                                                                                                                                 ***