Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವದೆಹಲಿಯಲ್ಲಿ ಕರ್ತವ್ಯ ಪಥ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ

ನವದೆಹಲಿಯಲ್ಲಿ ಕರ್ತವ್ಯ ಪಥ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ


ಇಡೀ ದೇಶವೇ ಇಂದಿನ ಈ ಐತಿಹಾಸಿಕ ಕಾರ್ಯಕ್ರಮವನ್ನು ನೋಡುತ್ತಿದೆ, ದೇಶವಾಸಿಗಳೆಲ್ಲ ಈ ಕಾರ್ಯಕ್ರಮದಲ್ಲಿ ಸೇರಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿರುವ ಎಲ್ಲಾ ದೇಶವಾಸಿಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ. ಈ ಐತಿಹಾಸಿಕ ಕ್ಷಣದಲ್ಲಿ, ನನ್ನ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಹರ್ದೀಪ್ ಪುರಿ, ಶ್ರೀ ಜಿ ಕಿಶನ್ ರೆಡ್ಡಿ, ಶ್ರೀ ಅರ್ಜುನ್ ರಾಮ್ ಮೇಘವಾಲ್, ಶ್ರೀಮತಿ ಮೀನಾಕ್ಷಿ ಲೇಖಿ ಮತ್ತು ಶ್ರೀ ಕೌಶಲ್ ಕಿಶೋರ್ ಕೂಡ ಇಂದು ನನ್ನೊಂದಿಗೆ ವೇದಿಕೆಯಲ್ಲಿದ್ದಾರೆ. ನಾಡಿನ ಹಲವು ಗಣ್ಯರು ಕೂಡ ಇಲ್ಲಿದ್ದಾರೆ.

ಸ್ನೇಹಿತರೇ,

ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಇಂದು ದೇಶವ ಹೊಸ ಸ್ಫೂರ್ತಿ ಮತ್ತು ಶಕ್ತಿ ಪಡೆದಿದೆ. ಇಂದು ನಾವು ಭೂತಕಾಲವನ್ನು ಬಿಟ್ಟು ನಾಳೆಯ ಚಿತ್ರಕ್ಕೆ ಹೊಸ ಬಣ್ಣಗಳನ್ನು ತುಂಬುತ್ತಿದ್ದೇವೆ. ಎಲ್ಲೆಡೆ ಗೋಚರಿಸುವ ಈ ಹೊಸ ಪ್ರಭೆಯು ನವಭಾರತದ ಆತ್ಮವಿಶ್ವಾಸದ ತೇಜಸ್ಸಾಗಿದೆ. ಗುಲಾಮಗಿರಿಯ ಸಂಕೇತವಾದ ಕಿಂಗ್ಸ್‌ವೇ ಅಥವಾ ರಾಜಪಥ್ ಇಂದಿನಿಂದ ಇತಿಹಾಸ ಸೇರಿದೆ. ಶಾಶ್ವತವಾಗಿ ಅಳಿಸಿಹೋಗಿದೆ. ಇಂದು ಕರ್ತವ್ಯ ಪಥದ ರೂಪದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಈ ಸ್ವಾತಂತ್ರ್ಯದ ‘ಅಮೃತ ಕಾಲ’ದಲ್ಲಿ ಗುಲಾಮಗಿರಿಯ ಮತ್ತೊಂದು ಗುರುತಿನಿಂದ ಸ್ವತಂತ್ರವಾದ ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಇಂದು ನಮ್ಮ ರಾಷ್ಟ್ರ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬೃಹತ್ ಪ್ರತಿಮೆಯನ್ನು ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾಗಿದೆ. ಗುಲಾಮಗಿರಿಯ ಸಮಯದಲ್ಲಿ, ಬ್ರಿಟಿಷ್ ರಾಜ್ ಪ್ರತಿನಿಧಿಯ ಪ್ರತಿಮೆ ಇತ್ತು. ಇಂದು ಅದೇ ಸ್ಥಳದಲ್ಲಿ ನೇತಾಜಿ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ದೇಶವು ಆಧುನಿಕ ಮತ್ತು ಬಲಿಷ್ಠ ಭಾರತದ ಜೀವಂತಿಕೆಯನ್ನು ಸ್ಥಾಪಿಸಿದೆ. ವಾಸ್ತವವಾಗಿ, ಈ ಅವಕಾಶವು ಐತಿಹಾಸಿಕ ಮತ್ತು ಅಭೂತಪೂರ್ವವಾಗಿದೆ. ಇಂದು ನಾವು ಈ ದಿನಕ್ಕೆ ಸಾಕ್ಷಿಯಾಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ.

ಸ್ನೇಹಿತರೇ,

ಸ್ಥಾನ ಮತ್ತು ಸಂಪನ್ಮೂಲಗಳ ಪ್ರಯೋಗಗಳನ್ನು ಮೀರಿದ ಮಹಾನ್ ವ್ಯಕ್ತಿ ಸುಭಾಷ್ ಚಂದ್ರ ಬೋಸ್. ಇಡೀ ಜಗತ್ತು ಅವರನ್ನು ನಾಯಕ ಎಂದು ಪರಿಗಣಿಸಿತು. ಅವರು ಧೈರ್ಯಶಾಲಿ ಮತ್ತು ಸ್ವಾಭಿಮಾನಿಯಾಗಿದ್ದರು. ಅವರು ಚಿಂತನೆಗಳು ಮತ್ತು ದೃಷ್ಟಿಕೋನಗಳನ್ನು ಹೊಂದಿದ್ದರು. ನಾಯಕತ್ವದ ಸಾಮರ್ಥ್ಯ ಅವರಲ್ಲಿತ್ತು. ‘ಭಾರತ ತನ್ನ ಭವ್ಯ ಇತಿಹಾಸವನ್ನು ಮರೆಯುವ ದೇಶವಲ್ಲ. ಭಾರತದ ಭವ್ಯ ಇತಿಹಾಸವು ಪ್ರತಿಯೊಬ್ಬ ಭಾರತೀಯನ ರಕ್ತದಲ್ಲಿದೆ, ಅವನ ಸಂಪ್ರದಾಯಗಳಲ್ಲಿದೆ.ʼಎಂದು ನೇತಾಜಿ ಸುಭಾಷರು ಹೇಳುತ್ತಿದ್ದರು.  ನೇತಾಜಿಯವರು ಭಾರತದ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತಿದ್ದರು ಮತ್ತು ಭಾರತವನ್ನು ಆದಷ್ಟು ಬೇಗ ಆಧುನೀಕರಿಸಲು ಬಯಸಿದ್ದರು. ಸ್ವಾತಂತ್ರ್ಯಾನಂತರ ಸುಭಾಷ್‌ ಬಾಬು ತೋರಿಸಿದ ಹಾದಿಯಲ್ಲಿ ದೇಶ ಸಾಗಿದ್ದರೆ ಹೊಸ ಉತ್ತುಂಗಕ್ಕೇರುತ್ತಿತ್ತು. ಆದರೆ ದುರದೃಷ್ಟವಶಾತ್, ಸ್ವಾತಂತ್ರ್ಯದ ನಂತರ ಈ ಮಹಾನ್ ವೀರನನ್ನು ಮರೆತುಬಿಡಲಾಯಿತು. ಅವರ ಆಲೋಚನೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಗುರುತುಗಳನ್ನು ಸಹ ನಿರ್ಲಕ್ಷಿಸಲಾಗಿದೆ. ಸುಭಾಷ್ ಬಾಬು ಅವರ 125ನೇ ಜನ್ಮದಿನದ ಸಂದರ್ಭದಲ್ಲಿ ಕೋಲ್ಕತ್ತಾದಲ್ಲಿರುವ ಅವರ ಮನೆಗೆ ಭೇಟಿ ನೀಡುವ ಸೌಭಾಗ್ಯ ನನಗೆ ಸಿಕ್ಕಿತ್ತು. ನೇತಾಜಿಗೆ ಸಂಬಂಧಿಸಿದ ಸ್ಥಳದಲ್ಲಿ ನಾನು ಅನಂತ ಶಕ್ತಿಯನ್ನು ಅನುಭವಿಸಿದೆ. ಇಂದು ನೇತಾಜಿಯವರ ಶಕ್ತಿಯು ದೇಶಕ್ಕೆ ಮಾರ್ಗದರ್ಶನ ನೀಡಬೇಕೆಂಬುದು ಭಾರತದ ಪ್ರಯತ್ನವಾಗಿದೆ. ಕರ್ತವ್ಯ ಪಥದಲ್ಲಿರುವ ನೇತಾಜಿ ಅವರ ಪ್ರತಿಮೆ ಅದರ ಮಾಧ್ಯಮವಾಗಲಿದೆ. ಈ ಪ್ರತಿಮೆಯು ದೇಶದ ನೀತಿಗಳು ಮತ್ತು ನಿರ್ಧಾರಗಳಲ್ಲಿ ಸುಭಾಷ್‌ ಬಾಬು ಅವರ ಛಾಪು ಮೂಡಿಸಲು ಸ್ಫೂರ್ತಿಯ ಮೂಲವಾಗಲಿದೆ.

ಸೋದರ ಸೋದರಿಯರೇ,

ಕಳೆದ ಎಂಟು ವರ್ಷಗಳಲ್ಲಿ, ನೇತಾಜಿಯವರ ಆದರ್ಶಗಳು ಮತ್ತು ಕನಸುಗಳ ಛಾಪು ಹೊಂದಿರುವ ಹಲವಾರು ನಿರ್ಧಾರಗಳನ್ನು ನಾವು ತೆಗೆದುಕೊಂಡಿದ್ದೇವೆ. ನೇತಾಜಿ ಸುಭಾಷ್‌ ಅವರು 1947 ರ ಮುಂಚೆಯೇ ಅಂಡಮಾನ್ ಅನ್ನು ವಿಮೋಚನೆಗೊಳಿಸಿ ತ್ರಿವರ್ಣ ಧ್ವಜವನ್ನು ಹಾರಿಸಿದ ಅಖಂಡ ಭಾರತದ ಮೊದಲ ಮುಖ್ಯಸ್ಥರಾಗಿದ್ದರು. ಆಗ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದರೆ ಹೇಗಿರುತ್ತದೆ ಎಂದು ಊಹಿಸಿದ್ದರು. ಆಜಾದ್ ಹಿಂದ್ ಸರ್ಕಾರದ 75 ವರ್ಷಗಳ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಸುಯೋಗವನ್ನು ಪಡೆದಾಗ ನಾನು ವೈಯಕ್ತಿಕವಾಗಿ ಈ ಭಾವನೆಯನ್ನು ಅನುಭವಿಸಿದೆ. ನಮ್ಮ ಸರ್ಕಾರದ ಪ್ರಯತ್ನದಿಂದ ನೇತಾಜಿ ಮತ್ತು ಆಜಾದ್ ಹಿಂದ್ ಫೌಜ್‌ಗೆ ಸಂಬಂಧಿಸಿದ ವಸ್ತುಸಂಗ್ರಹಾಲಯವನ್ನು ಕೆಂಪು ಕೋಟೆಯಲ್ಲಿ ನಿರ್ಮಿಸಲಾಗಿದೆ.

ಸ್ನೇಹಿತರೇ,

ಆಜಾದ್ ಹಿಂದ್ ಫೌಜ್‌ನ ಸೈನಿಕರು 2019 ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ ದಿನವನ್ನು ನಾನು ಮರೆಯಲು ಸಾಧ್ಯವಿಲ್ಲ. ಅವರು ಈ ಗೌರವಕ್ಕಾಗಿ ದಶಕಗಳಿಂದ ಕಾಯುತ್ತಿದ್ದರು. ಅಂಡಮಾನ್‌ನಲ್ಲಿ ನೇತಾಜಿಯವರು ತ್ರಿವರ್ಣ ಧ್ವಜವನ್ನು ಹಾರಿಸಿದ ಸ್ಥಳಕ್ಕೆ ಭೇಟಿ ನೀಡಿ ತ್ರಿವರ್ಣ ಧ್ವಜವನ್ನು ಹಾರಿಸುವ ಭಾಗ್ಯ ನನಗೆ ಸಿಕ್ಕಿತ್ತು. ಆ ಕ್ಷಣ ದೇಶದ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಿತ್ತು.

ಸೋದರ ಸೋದರಿಯರೇ,

ನೇತಾಜಿಯವರು ಮೊಟ್ಟಮೊದಲ ಬಾರಿಗೆ ವಿಮೋಚನೆಗೊಳಿಸಿದ ಅಂಡಮಾನ್‌ನ ಆ ದ್ವೀಪಗಳೂ ಕೆಲಕಾಲದವರೆಗೆ ಗುಲಾಮಗಿರಿಯ ಚಿಹ್ನೆಗಳನ್ನು ಹೊಂದಿದ್ದವು! ಆ ದ್ವೀಪಗಳಿಗೆ ಸ್ವತಂತ್ರ ಭಾರತದಲ್ಲಿಯೂ ಬ್ರಿಟಿಷ್ ಆಡಳಿತಗಾರರ ಹೆಸರನ್ನು ಇಡಲಾಯಿತು. ನೇತಾಜಿ ಸುಭಾಷ್‌ ಅವರ ಹೆಸರನ್ನು ಈ ದ್ವೀಪಗಳಿಗೆ ಮರುನಾಮಕರಣ ಮಾಡುವ ಮೂಲಕ ನಾವು ಭಾರತೀಯ ಹೆಸರುಗಳು ಮತ್ತು ಭಾರತೀಯ ಗುರುತನ್ನು ನೀಡುವ ಮೂಲಕ ಆ ಗುಲಾಮಗಿರಿಯ ಚಿಹ್ನೆಗಳನ್ನು ಅಳಿಸಿ ಹಾಕಿದ್ದೇವೆ.

ಸ್ನೇಹಿತರೇ,

ಸ್ವಾತಂತ್ರ್ಯದ 75 ವರ್ಷಗಳು ಪೂರ್ಣಗೊಂಡ ನಂತರ, ದೇಶವು ತನಗಾಗಿ ‘ಪಂಚ ಪ್ರಾಣ’ (ಐದು ಪ್ರತಿಜ್ಞೆ)ವನ್ನು ಮಾಡಿಕೊಂಡಿದೆ. ಈ ಐದು ಪ್ರತಿಜ್ಞೆಗಳಲ್ಲಿ ಅಭಿವೃದ್ಧಿಯ ದೊಡ್ಡ ಗುರಿಗಳ ಸಂಕಲ್ಪ ಮತ್ತು ಕರ್ತವ್ಯಗಳಿಗೆ ಸ್ಫೂರ್ತಿಯೂ ಇದೆ. ಇವುಗಳಲ್ಲಿ ಗುಲಾಮಿ ಮನಸ್ಥಿತಿಯನ್ನು ತೊರೆಯುವ ಕರೆ ಮತ್ತು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಯ ಭಾವನೆ ಸೇರಿದೆ. ಇಂದು ಭಾರತ ತನ್ನದೇ ಆದ ಆದರ್ಶ ಮತ್ತು ಆಯಾಮಗಳನ್ನು ಹೊಂದಿದೆ. ಇಂದು ಭಾರತ ತನ್ನದೇ ಆದ ಸಂಕಲ್ಪಗಳು ಮತ್ತು ಗುರಿಗಳನ್ನು ಹೊಂದಿದೆ. ಇಂದು ನಾವು ನಮ್ಮದೇ ಆದ ಮಾರ್ಗಗಳು ಮತ್ತು ಚಿಹ್ನೆಗಳನ್ನು ಹೊಂದಿದ್ದೇವೆ. ಸ್ನೇಹಿತರೇ, ಇಂದು ರಾಜಪಥವು ಅಸ್ತಿತ್ವ ಕಳೆದುಕೊಂಡು ಕರ್ತವ್ಯ ಪಥವಾಗಿ ಮಾರ್ಪಟ್ಟಿದ್ದರೆ ಮತ್ತು ಜಾರ್ಜ್ V ಅವರ ಪ್ರತಿಮೆಯ ಜಾಗದಲ್ಲಿ ನೇತಾಜಿಯವರ ಪ್ರತಿಮೆಯಿಂದ ಅಲಂಕರಿಸಲಾಗಿದೆ, ಇದು ಗುಲಾಮಿ ಮನಸ್ಥಿತಿಯನ್ನು ತಿರಸ್ಕರಿಸಿದ ಮೊದಲ ಉದಾಹರಣೆಯಲ್ಲ. ಇದು ಆರಂಭವೂ ಅಲ್ಲ, ಅಂತ್ಯವೂ ಅಲ್ಲ. ಮನಸ್ಸು ಮತ್ತು ಮನಸ್ಸಿನ ಸ್ವಾತಂತ್ರ್ಯದ ಗುರಿಯನ್ನು ಸಾಧಿಸುವವರೆಗೆ ಇದು ನಿರಂತರ ಸಂಕಲ್ಪದ ಪ್ರಯಾಣವಾಗಿರುತ್ತದೆ. ದೇಶದ ಪ್ರಧಾನ ಮಂತ್ರಿಗಳು ವಾಸಿಸುತ್ತಿದ್ದ ಸ್ಥಳದ ರೇಸ್ ಕೋರ್ಸ್ ರಸ್ತೆಯ ಹೆಸರನ್ನು ಲೋಕ ಕಲ್ಯಾಣ ಮಾರ್ಗ ಎಂದು ಬದಲಾಯಿಸಲಾಗಿದೆ. ಭಾರತೀಯ ಸಂಗೀತ ವಾದ್ಯಗಳ ಪ್ರತಿಧ್ವನಿ ಈಗ ನಮ್ಮ ಗಣರಾಜ್ಯೋತ್ಸವದಲ್ಲಿ ಕೇಳಿಬರುತ್ತಿದೆ. ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ದೇಶಭಕ್ತಿ ಗೀತೆಗಳನ್ನು ಕೇಳುವ ಮೂಲಕ ಪ್ರತಿಯೊಬ್ಬ ಭಾರತೀಯನೂ ಸಂತೋಷಭರಿತನಾಗಿದ್ದಾನೆ. ತೀರಾ ಇತ್ತೀಚೆಗೆ, ಭಾರತೀಯ ನೌಕಾಪಡೆಯು ಗುಲಾಮಗಿರಿಯ ಚಿಹ್ನೆಯನ್ನು ತೆಗೆದುಹಾಕುವ ಮೂಲಕ ಛತ್ರಪತಿ ಶಿವಾಜಿ ಮಹಾರಾಜರ ಚಿಹ್ನೆಯನ್ನು ಅಳವಡಿಸಿಕೊಂಡಿದೆ. ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ನಿರ್ಮಿಸುವ ಮೂಲಕ ದೇಶವು ಎಲ್ಲಾ ದೇಶವಾಸಿಗಳ ಬಹುಕಾಲದ ಆಸೆಯನ್ನು ಈಡೇರಿಸಿದೆ.

ಸ್ನೇಹಿತರೇ,

ಈ ಬದಲಾವಣೆಗಳು ಕೇವಲ ಚಿಹ್ನೆಗಳಿಗೆ ಸೀಮಿತವಾಗಿಲ್ಲ; ಈ ಬದಲಾವಣೆಗಳು ದೇಶದ ನೀತಿಗಳ ಭಾಗವೂ ಆಗಿವೆ. ಬ್ರಿಟಿಷರ ಕಾಲದಿಂದಲೂ ಇದ್ದ ನೂರಾರು ಕಾನೂನುಗಳನ್ನು ಇಂದು ರದ್ದುಗೊಳಿಸಿಲಾಗಿದೆ. ಇಷ್ಟು ದಶಕಗಳಿಂದ ಬ್ರಿಟನ್ ಸಂಸತ್ತಿನ ಕಾಲಘಟ್ಟದಲ್ಲಿ ನಡೆಯುತ್ತಿದ್ದ ಭಾರತದ ಬಜೆಟ್ ಮಂಡನೆಯ ಸಮಯ ಮತ್ತು ದಿನಾಂಕ ಕೂಡ ಬದಲಾಗಿದೆ. ಇದೀಗ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ದೇಶದ ಯುವಕರು ಅನ್ಯ ಭಾಷೆಯ ಒತ್ತಾಯದಿಂದ ಮುಕ್ತಿ ಪಡೆಯುತ್ತಿದ್ದಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇಂದು ದೇಶದ ಕಲ್ಪನೆ ಮತ್ತು ನಡವಳಿಕೆ ಎರಡೂ ಗುಲಾಮಿ ಮನಸ್ಥಿತಿಯಿಂದ ಮುಕ್ತವಾಗುತ್ತಿವೆ. ಈ ವಿಮೋಚನೆಯು ನಮ್ಮನ್ನು ಅಭಿವೃದ್ಧಿ ಹೊಂದಿದ ಭಾರತವಾಗುವ ಗುರಿಯತ್ತ ಕೊಂಡೊಯ್ಯುತ್ತದೆ.

ಸ್ನೇಹಿತರೇ,

ಮಹಾಕವಿ ಭಾರತಿಯಾರ್ ಭಾರತದ ಶ್ರೇಷ್ಠತೆಯ ಬಗ್ಗೆ ತಮಿಳು ಭಾಷೆಯಲ್ಲಿ ಬಹಳ ಸುಂದರವಾದ ಕವಿತೆಯನ್ನು ಬರೆದಿದ್ದಾರೆ. ಈ ಕವಿತೆಯ ಶೀರ್ಷಿಕೆ ‘ಪಾರುಕುಳ್ಳೆ ನಲ್ಲ ನಾಡು -ಈಂಗಳ್, ಭಾರತ್ ನಾಡ್‌’. ಮಹಾಕವಿ ಭಾರತಿಯಾರರ ಈ ಕವಿತೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯನ್ನು ತುಂಬುತ್ತದೆ. ಜ್ಞಾನ, ಅಧ್ಯಾತ್ಮ, ಘನತೆ, ಅನ್ನದಾನ, ಸಂಗೀತ ಮತ್ತು ಸನಾತನ ಕಾವ್ಯಗಳಲ್ಲಿ ಇಡೀ ಪ್ರಪಂಚದಲ್ಲಿಯೇ ನಮ್ಮ ಭಾರತ ದೇಶವೇ ಶ್ರೇಷ್ಠ ಎಂಬುದು ಅವರ ಕವಿತೆಯ ಅರ್ಥ. ನಮ್ಮ ಭಾರತ ದೇಶವು ಸ್ಥೈರ್ಯ, ಸಶಸ್ತ್ರ ಪಡೆಗಳ ಶೌರ್ಯ, ಸಹಾನುಭೂತಿ, ಇತರರ ಸೇವೆ ಜೀವನದ ಸತ್ಯವನ್ನು ಕಂಡುಕೊಳ್ಳುವಲ್ಲಿ ಮತ್ತು ವೈಜ್ಞಾನಿಕ ಸಂಶೋಧನೆಯಲ್ಲಿ ಇಡೀ ವಿಶ್ವದಲ್ಲೇ ಶ್ರೇಷ್ಠವಾಗಿದೆ. ತಮಿಳು ಕವಿ ಭಾರತಿಯಾರ್ ಅವರ ಪ್ರತಿ ಪದವನ್ನು, ಪ್ರತಿ ಭಾವನೆಯನ್ನು ಅವರ ಕವಿತೆಯಲ್ಲಿ ಅನುಭವಿಸಬಹುದು.

ಸ್ನೇಹಿತರೇ,

ಇದು ಗುಲಾಮಗಿರಿಯ ಅವಧಿಯಲ್ಲಿ ಇಡೀ ಜಗತ್ತಿಗೆ ಭಾರತದ ಯುದ್ಧದ ಕೂಗಾಗಿತ್ತು. ಇದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕರೆಯಾಗಿತ್ತು. ಭಾರತಿಯಾರ್ ತಮ್ಮ ಕವಿತೆಯಲ್ಲಿ ವಿವರಿಸಿರುವ ಭಾರತವನ್ನು ನಾವು ಕಟ್ಟಬೇಕು ಮತ್ತು ಅದರ ಮಾರ್ಗವು ಈ ಕರ್ತವ್ಯ ಮಾರ್ಗದ ಮೂಲಕ ಸಾಗುತ್ತದೆ.

ಸ್ನೇಹಿತರೇ,

ಕರ್ತವ್ಯ ಪಥವು ಕೇವಲ ಇಟ್ಟಿಗೆ ಮತ್ತು ಕಲ್ಲುಗಳ ಮಾರ್ಗವಲ್ಲ. ಇದು ಭಾರತದ ಪ್ರಜಾಸತ್ತಾತ್ಮಕ ಮತ್ತು ಸಾರ್ವಕಾಲಿಕ ಆದರ್ಶಗಳ ಜೀವಂತ ಮಾರ್ಗವಾಗಿದೆ. ನೇತಾಜಿ ಪ್ರತಿಮೆ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕವು ಜನರಿಗೆ ಸ್ಫೂರ್ತಿ ನೀಡುತ್ತವೆ ಮತ್ತು ಅವರಲ್ಲಿ ಕರ್ತವ್ಯ ಪ್ರಜ್ಞೆಯನ್ನು ತುಂಬುತ್ತವೆ.ಸರ್ಕಾರ ಈ ಸ್ಥಳದಿಂದ ಕೆಲಸ ಮಾಡುತ್ತಿದೆ. ಸಾರ್ವಜನಿಕ ಸೇವೆಯ ಜವಾಬ್ದಾರಿಯನ್ನು ದೇಶವು ಯಾರಿಗೆ ವಹಿಸಿಕೊಟ್ಟಿದೆಯೋ ಅವರು ಜನರ ಸೇವಕರು ಎಂಬ ಭಾವನೆಯನ್ನು ರಾಜಪಥವು ಹೇಗೆ ಉಂಟುಮಾಡಲು ಸಾಧ್ಯ? ಮಾರ್ಗವು ರಾಜಪಥವಾಗಿದ್ದರೆ, ಜನರ ಕಲ್ಯಾಣ ಹೇಗೆ ಸಾಧ್ಯ? ಭಾರತದ ಜನರು ಗುಲಾಮರಾಗಿದ್ದ ಬ್ರಿಟಿಷ್ ರಾಜ್‌ಗೆ ಇದು ರಾಜಪಥವಾಗಿತ್ತು. ರಾಜಪಥದ ಚೈತನ್ಯ ಮತ್ತು ರಚನೆಯು ಗುಲಾಮಗಿರಿಯ ಸಂಕೇತವಾಗಿತ್ತು. ಇಂದು ಅದರ ವಾಸ್ತುಶಿಲ್ಪ ಹಾಗೂ ಅದರ ಚೈತನ್ಯವೂ ಬದಲಾಗಿದೆ. ಈಗ ದೇಶದ ಸಂಸದರು, ಮಂತ್ರಿಗಳು ಮತ್ತು ಅಧಿಕಾರಿಗಳು ಈ ಕರ್ತವ್ಯ ಪಥದಲ್ಲಿ ಹಾದುಹೋದಾಗ, ಅವರು ದೇಶದ ಬಗ್ಗೆ ಕರ್ತವ್ಯ ಪ್ರಜ್ಞೆಯನ್ನು ಹೊಂದುತ್ತಾರೆ ಮತ್ತು ಅವರಿಗೆ ಹೊಸ ಶಕ್ತಿ ಮತ್ತು ಸ್ಫೂರ್ತಿ ಸಿಗುತ್ತದೆ. ರಾಷ್ಟ್ರೀಯ ಯುದ್ಧ ಸ್ಮಾರಕದಿಂದ ಕರ್ತವ್ಯ ಪಥದವರೆಗೆ, ರಾಷ್ಟ್ರಪತಿ ಭವನದ ಈ ಸಂಪೂರ್ಣ ವಿಸ್ತಾರವು ಪ್ರತಿ ಕ್ಷಣವೂ ಅವರಲ್ಲಿ ‘ರಾಷ್ಟ್ರ ಮೊದಲು’ ಎಂಬ ಭಾವನೆಯನ್ನು ತುಂಬುತ್ತದೆ.

ಸ್ನೇಹಿತರೇ,

ಕರ್ತವ್ಯ ಪಥವನ್ನು ನಿರ್ಮಿಸಿದ್ದಲ್ಲದೆ, ತಮ್ಮ ದುಡಿಮೆಯ ಪರಾಕಾಷ್ಠೆಯ ಮೂಲಕ ದೇಶಕ್ಕೆ ಕರ್ತವ್ಯದ ಹಾದಿಯನ್ನು ತೋರಿಸಿದ ನನ್ನ ಸಹೋದ್ಯೋಗಿಗಳಿಗೆ ಈ ಸಂದರ್ಭದಲ್ಲಿ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಆ ಕಾರ್ಮಿಕರನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿದೆ. ಅವರೊಂದಿಗೆ ಮಾತನಾಡುವಾಗ, ದೇಶದ ಬಡವರು, ಕಾರ್ಮಿಕರು ಮತ್ತು ಸಾಮಾನ್ಯ ಜನರಲ್ಲಿ ಭಾರತದ ಭವ್ಯವಾದ ಕನಸು ನೆಲೆಸಿದೆ ಎಂಬ ಭಾವನೆ ನನಗೆ ಬಂದಿತು. ಅವರು ತಮ್ಮ ಬೆವರು ಸುರಿಸುತ್ತಲೇ ಆ ಕನಸನ್ನು ನನಸಾಗಿಸುತ್ತಾರೆ. ಈ ಸಂದರ್ಭದಲ್ಲಿ, ದೇಶದ ಅಭೂತಪೂರ್ವ ಅಭಿವೃದ್ಧಿಗೆ ವೇಗವನ್ನು ನೀಡುತ್ತಿರುವ ಎಲ್ಲಾ ಬಡ ಕಾರ್ಮಿಕರಿಗೆ ನಾನು ದೇಶದ ಪರವಾಗಿ ಧನ್ಯವಾದ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾನು ಇಂದು ಈ ಕಾರ್ಮಿಕ ಸಹೋದರ ಸಹೋದರಿಯರನ್ನು ಭೇಟಿಯಾದಾಗ, ಮುಂದಿನ ವರ್ಷ ಜನವರಿ 26 ರಂದು ಅವರ ಕುಟುಂಬದೊಂದಿಗೆ ನನ್ನ ವಿಶೇಷ ಅತಿಥಿಗಳಾಗಿ ಎಂದು ನಾನು ಅವರಿಗೆ ಕೇಳಿದೆ. ಇಂದು ನವ ಭಾರತದಲ್ಲಿ ಕಾರ್ಮಿಕರು ಮತ್ತು ದುಡಿಯುವ ಜನರನ್ನು ಗೌರವಿಸುವ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ ಎಂಬ ನನಗೆ ತೃಪ್ತಿ ಇದೆ. ಸ್ನೇಹಿತರೇ, ನೀತಿಗಳಲ್ಲಿ ಸೂಕ್ಷ್ಮತೆಯ ವಿಷಯಕ್ಕೆ ಬಂದಾಗ, ನಿರ್ಧಾರಗಳು ಅಷ್ಟೇ ಸೂಕ್ಷ್ಮವಾಗಿರುತ್ತವೆ. ಆದ್ದರಿಂದ, ದೇಶವು ಈಗ ತನ್ನ ಕಾರ್ಮಿಕ ಬಲದ ಬಗ್ಗೆ ಹೆಮ್ಮೆ ಪಡುತ್ತಿದೆ. ‘ಶ್ರಮೇಮೇವ ಜಯತೇ’ ಇಂದು ದೇಶದ ಮಂತ್ರವಾಗುತ್ತಿದೆ. ಆದ್ದರಿಂದ ಕಾಶಿಯಲ್ಲಿ ವಿಶ್ವನಾಥ ಧಾಮ ಉದ್ಘಾಟನೆ ಮಾಡುವ ದೈವಿಕ ಸಂದರ್ಭ ಬಂದಾಗ ದುಡಿಯುವ ಜನರ ಗೌರವಾರ್ಥ ಹೂವಿನ ಸುರಿಮಳೆಯಾಗುತ್ತದೆ. ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ, ನೈರ್ಮಲ್ಯ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಕೆಲವೇ ದಿನಗಳ ಹಿಂದೆ ದೇಶಕ್ಕೆ ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಸಮರ್ಪಣೆಯಾಗಿದೆ. ಐಎನ್‌ಎಸ್ ವಿಕ್ರಾಂತ್ ನಿರ್ಮಾಣದಲ್ಲಿ ಹಗಲಿರುಳು ಶ್ರಮಿಸಿದ ಕಾರ್ಮಿಕ ಸಹೋದರ ಸಹೋದರಿಯರು ಮತ್ತು ಅವರ ಕುಟುಂಬಗಳನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ನಾನು ಅವರನ್ನು ಭೇಟಿಯಾದಾಗ ಅವರಿಗೆ ಧನ್ಯವಾದ ಹೇಳಿದ್ದೇನೆ. ಶ್ರಮವನ್ನು ಗೌರವಿಸುವ ಈ ಸಂಪ್ರದಾಯವು ದೇಶದ ಸಂಸ್ಕಾರಗಳಲ್ಲಿ ಅಳಿಸಲಾಗದ ಭಾಗವಾಗುತ್ತಿದೆ. ಹೊಸ ಸಂಸತ್ತಿನ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರಿಗೂ ವಿಶೇಷ ಗ್ಯಾಲರಿಯಲ್ಲಿ ಸ್ಥಾನ ನೀಡಲಾಗುವುದು ಎಂದು ತಿಳಿಸಲು ಇಷ್ಟಪಡುತ್ತೇನೆ. ಒಂದೆಡೆ ಸಂವಿಧಾನವೇ ಪ್ರಜಾಪ್ರಭುತ್ವದ ಬುನಾದಿ ಮತ್ತೊಂದೆಡೆ ಕಾರ್ಮಿಕರ ಕೊಡುಗೆಯೂ ಇದೆ ಎಂಬುದನ್ನು ಭವಿಷ್ಯದ ಪೀಳಿಗೆಗೂ ಈ ಗ್ಯಾಲರಿ ನೆನಪಿಸಲಿದೆ. ಈ ಕರ್ತವ್ಯ ಮಾರ್ಗವು ಪ್ರತಿಯೊಬ್ಬ ದೇಶವಾಸಿಗಳಿಗೂ ಸ್ಫೂರ್ತಿಯನ್ನು ನೀಡುತ್ತದೆ. ಈ ಸ್ಫೂರ್ತಿಯು ಕಠಿಣ ಪರಿಶ್ರಮದ ಮೂಲಕ ಯಶಸ್ಸಿನ ಹಾದಿಯನ್ನು ಸುಗಮಗೊಳಿಸುತ್ತದೆ.

ಸ್ನೇಹಿತರೇ,

ನಮ್ಮ ನಡವಳಿಕೆ, ವಿಧಾನಗಳು, ಸಂಪನ್ಮೂಲಗಳು ಮತ್ತು ಮೂಲಸೌಕರ್ಯಗಳಲ್ಲಿ ಈ ‘ಅಮೃತ ಕಾಲ’ದಲ್ಲಿ ಆಧುನೀಕರಣವು ಮುಖ್ಯ ಗುರಿಯಾಗಿದೆ ಮತ್ತು ನಾವು ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡುವಾಗ, ಹೆಚ್ಚಿನ ಜನರ ಮನಸ್ಸಿಗೆ ಬರುವ ಮೊದಲ ಚಿತ್ರವೆಂದರೆ ರಸ್ತೆಗಳು ಅಥವಾ ಫ್ಲೈಓವರ್‌ಗಳು. ಆದರೆ ಆಧುನೀಕರಣಗೊಳ್ಳುತ್ತಿರುವ ಭಾರತದಲ್ಲಿ ಮೂಲಸೌಕರ್ಯಗಳ ವಿಸ್ತರಣೆಯು ಅದಕ್ಕಿಂತ ದೊಡ್ಡದಾಗಿದೆ. ಏಕೆಂದರೆ ಅದು ಅನೇಕ ಆಯಾಮಗಳನ್ನು ಹೊಂದಿದೆ. ಇಂದು ಭಾರತವು ಸಾಮಾಜಿಕ, ಸಾರಿಗೆ ಮತ್ತು ಡಿಜಿಟಲ್ ಮೂಲಸೌಕರ್ಯಗಳ ಜೊತೆಗೆ ಸಾಂಸ್ಕೃತಿಕ ಮೂಲಸೌಕರ್ಯದಲ್ಲಿ ಅಷ್ಟೇ ವೇಗವಾಗಿ ಕೆಲಸ ಮಾಡುತ್ತಿದೆ. ಸಾಮಾಜಿಕ ಮೂಲಸೌಕರ್ಯದ ಉದಾಹರಣೆಯನ್ನು ನಾನು ನಿಮಗೆ ನೀಡುತ್ತೇನೆ. ಇಂದು ದೇಶದಲ್ಲಿ ಏಮ್ಸ್‌ಗಳ ಸಂಖ್ಯೆ ಹಿಂದಿನದಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆಯೂ ಶೇ.50ರಷ್ಟು ಹೆಚ್ಚಿದೆ. ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಮೂಲಕ ತನ್ನ ನಾಗರಿಕರ ಆರೋಗ್ಯವನ್ನು ಸುಧಾರಿಸಲು ಭಾರತವು ಇಂದು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಇಂದು ದೇಶದಲ್ಲಿ ಹೊಸ ಐಐಟಿಗಳು, ಟ್ರಿಪಲ್ ಐಟಿ ಮತ್ತು ವೈಜ್ಞಾನಿಕ ಸಂಸ್ಥೆಗಳ ಆಧುನಿಕ ಜಾಲವನ್ನು ನಿರಂತರವಾಗಿ ವಿಸ್ತರಿಸಲಾಗುತ್ತಿದೆ ಮತ್ತು ಸಜ್ಜುಗೊಳಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ 6.5 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ಕೊಳವೆ ಮೂಲಕ ನೀರು ಸರಬರಾಜು ಮಾಡಲಾಗಿದೆ. ಇಂದು, ದೇಶದ ಪ್ರತಿ ಜಿಲ್ಲೆಯಲ್ಲೂ 75 ಅಮೃತ ಸರೋವರ (ಕೆರೆ) ಗಳನ್ನು ನಿರ್ಮಿಸುವ ದೊಡ್ಡ ಅಭಿಯಾನವೂ ನಡೆಯುತ್ತಿದೆ. ಭಾರತದ ಈ ಸಾಮಾಜಿಕ ಮೂಲಸೌಕರ್ಯವು ಸಾಮಾಜಿಕ ನ್ಯಾಯವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಿದೆ.

ಸ್ನೇಹಿತರೇ,

ಸಾರಿಗೆ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಭಾರತವು ಇಂದು ಮಾಡುತ್ತಿರುವ ಕೆಲಸವು ಹಿಂದೆಂದೂ ನಡೆದಿರಲಿಲ್ಲ. ಇಂದು ದೇಶದಾದ್ಯಂತ ಆಧುನಿಕ ಎಕ್ಸ್‌ಪ್ರೆಸ್‌ವೇಗಳೊಂದಿಗೆ ದಾಖಲೆ ಸಂಖ್ಯೆಯ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ದೇಶದಲ್ಲಿ ರೈಲು ಮಾರ್ಗಗಳ ವಿದ್ಯುದೀಕರಣವು ತ್ವರಿತ ಗತಿಯಲ್ಲಿ ನಡೆಯುತ್ತಿದ್ದರೆ, ವಿವಿಧ ನಗರಗಳಲ್ಲಿ ಮೆಟ್ರೋ ಕೂಡ ಅದೇ ವೇಗದಲ್ಲಿ ವಿಸ್ತರಿಸುತ್ತಿದೆ. ಇಂದು, ದೇಶದಲ್ಲಿ ಅನೇಕ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ಜಲಮಾರ್ಗಗಳ ಸಂಖ್ಯೆಯಲ್ಲಿ ಅಭೂತಪೂರ್ವ ಹೆಚ್ಚಳವಿದೆ. ಇಂದು, ಡಿಜಿಟಲ್ ಮೂಲಸೌಕರ್ಯ ನಿರ್ಮಾಣದಲ್ಲಿ ಭಾರತವು ಇಡೀ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಸ್ಥಾನವನ್ನು ಗಳಿಸಿದೆ. 1.5 ಲಕ್ಷಕ್ಕೂ ಹೆಚ್ಚು ಪಂಚಾಯತ್‌ಗಳಲ್ಲಿ ಆಪ್ಟಿಕಲ್ ಫೈಬರ್ ಹಾಕುತ್ತಿರುವುದಾಗಲಿ ಅಥವಾ ಡಿಜಿಟಲ್ ಪಾವತಿಯ ಹೊಸ ದಾಖಲೆಗಳಾಗಲಿ ಭಾರತದ ಡಿಜಿಟಲ್ ಪ್ರಗತಿಯ ಬಗ್ಗೆ ಪ್ರಪಂಚದಾದ್ಯಂತ ಮಾತನಾಡಲಾಗುತ್ತಿದೆ.

ಸೋದರ ಸೋದರಿಯರೇ,

ಈ ಮೂಲಸೌಕರ್ಯ ಯೋಜನೆಗಳ ಮಧ್ಯೆ, ಭಾರತದಲ್ಲಿ ಸಾಂಸ್ಕೃತಿಕ ಮೂಲಸೌಕರ್ಯಗಳಲ್ಲಿ ಮಾಡಿರುವ ಕೆಲಸಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿಲ್ಲ. ಪ್ರಸಾದ ಯೋಜನೆಯಡಿ ದೇಶದ ಹಲವು ಯಾತ್ರಾ ಕೇಂದ್ರಗಳನ್ನು ನವೀಕರಿಸಲಾಗುತ್ತಿದೆ. ಕಾಶಿ-ಕೇದಾರನಾಥ-ಸೋಮನಾಥದಿಂದ ಕರ್ತಾರ್‌ಪುರ ಸಾಹಿಬ್ ಕಾರಿಡಾರ್‌ವರೆಗಿನ ಕೆಲಸ ಅಭೂತಪೂರ್ವವಾಗಿದೆ. ಸ್ನೇಹಿತರೇ, ನಾವು ಸಾಂಸ್ಕೃತಿಕ ಮೂಲಸೌಕರ್ಯದ ಬಗ್ಗೆ ಮಾತನಾಡುವಾಗ, ಇದು ಶ್ರದ್ಧಾ ಕೇಂದ್ರಗಳಿಗೆ ಸಂಬಂಧಿಸಿದ ಮೂಲಸೌಕರ್ಯ ಎಂದು ಅರ್ಥವಲ್ಲ. ನಮ್ಮ ಇತಿಹಾಸ, ರಾಷ್ಟ್ರೀಯ ವೀರರು ಮತ್ತು ಪರಂಪರೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಸಹ ಅಷ್ಟೇ ಶ್ರದ್ಧೆಯಿಂದ ಅಭಿವೃದ್ಧಿಪಡಿಸಲಾಗುತ್ತಿದೆ. ಸರ್ದಾರ್ ಪಟೇಲರ ಏಕತಾ ಪ್ರತಿಮೆಯಾಗಿರಲಿ ಅಥವಾ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಮೀಸಲಾಗಿರುವ ವಸ್ತುಸಂಗ್ರಹಾಲಯವಾಗಲಿ, ಪ್ರಧಾನಮಂತ್ರಿ ಮ್ಯೂಸಿಯಂ ಅಥವಾ ಬಾಬಾಸಾಹೇಬ್ ಅಂಬೇಡ್ಕರ್ ಸ್ಮಾರಕವಾಗಲಿ, ರಾಷ್ಟ್ರೀಯ ಯುದ್ಧ ಸ್ಮಾರಕ ಅಥವಾ ರಾಷ್ಟ್ರೀಯ ಪೊಲೀಸ್ ಸ್ಮಾರಕವಾಗಲ ಇವು ಸಾಂಸ್ಕೃತಿಕ ಮೂಲಸೌಕರ್ಯಕ್ಕೆ ಉದಾಹರಣೆಗಳಾಗಿವೆ. ರಾಷ್ಟ್ರವಾಗಿ ನಮ್ಮ ಸಂಸ್ಕೃತಿ ಏನು, ನಮ್ಮ ಮೌಲ್ಯಗಳು ಯಾವುವು ಮತ್ತು ನಾವು ಅವುಗಳನ್ನು ಹೇಗೆ ರಕ್ಷಿಸುತ್ತಿದ್ದೇವೆ ಎಂಬುದನ್ನು ಈ ಕೆಲಸಗಳು ವ್ಯಾಖ್ಯಾನಿಸುತ್ತವೆ. ಮಹತ್ವಾಕಾಂಕ್ಷೆಯ ಭಾರತವು ಸಾಮಾಜಿಕ, ಸಾರಿಗೆ, ಡಿಜಿಟಲ್ ಮತ್ತು ಸಾಂಸ್ಕೃತಿಕ ಮೂಲಸೌಕರ್ಯಗಳಿಗೆ ಉತ್ತೇಋಜನವನ್ನು ನೀಡುವ ಮೂಲಕ ಮಾತ್ರ ತ್ವರಿತ ಪ್ರಗತಿಯನ್ನು ಸಾಧಿಸಬಹುದು. ಇಂದು ದೇಶವು ಕರ್ತವ್ಯ ಪಥದ ರೂಪದಲ್ಲಿ ಸಾಂಸ್ಕೃತಿಕ ಮೂಲಸೌಕರ್ಯಕ್ಕೆ ಮತ್ತೊಂದು ಉತ್ತಮ ಉದಾಹರಣೆ ಸಿಗುತ್ತಿರುವುದು ನನಗೆ ಸಂತಸ ತಂದಿದೆ. ವಾಸ್ತುಶಿಲ್ಪದಿಂದ ಆದರ್ಶಗಳವರೆಗೆ, ನೀವು ಇಲ್ಲಿ ಭಾರತೀಯ ಸಂಸ್ಕೃತಿಯನ್ನು ನೋಡಬಹುದು ಮತ್ತು ಬಹಳಷ್ಟು ಕಲಿಯಬಹುದು. ನಾನು ದೇಶದ ಪ್ರತಿಯೊಬ್ಬ ನಾಗರಿಕರಿಗೂ ಹೊಸದಾಗಿ ನಿರ್ಮಿಸಲಾದ ಈ ಕರ್ತವ್ಯ ಪಥವನ್ನು ನೋಡಲು ಬರುವಂತೆ ಅವರನ್ನು ಆಹ್ವಾನಿಸುತ್ತೇನೆ ಮತ್ತು ಮನವಿ ಮಾಡುತ್ತೇನೆ. ಅದರಲ್ಲಿ ಭವಿಷ್ಯದ ಭಾರತವನ್ನು ನೀವು ನೋಡುತ್ತೀರಿ. ಅದರ ಶಕ್ತಿಯು ನಮ್ಮ ವಿಶಾಲ ರಾಷ್ಟ್ರಕ್ಕೆ ಹೊಸ ದೃಷ್ಟಿ ಮತ್ತು ನಂಬಿಕೆಯನ್ನು ನೀಡುತ್ತದೆ. ನಾಳೆಯಿಂದ ಪ್ರತಿದಿನ ಸಂಜೆ ಮೂರು ದಿನಗಳ ಕಾಲ ನೇತಾಜಿ ಸುಭಾಷ್ ಬಾಬು ಅವರ ಜೀವನಾಧಾರಿತ ಡ್ರೋನ್ ಶೋ ನಡೆಯಲಿದೆ. ನಿಮ್ಮ ಕುಟುಂಬದೊಂದಿಗೆ ಇಲ್ಲಿಗೆ ಬನ್ನಿ ಮತ್ತು ಚಿತ್ರಗಳನ್ನು ಮತ್ತು ಸೆಲ್ಫಿಗಳನ್ನು ತೆಗೆದುಕೊಳ್ಳಬೇಕು. ನೀವು ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹ್ಯಾಶ್‌ಟ್ಯಾಗ್ ಕರ್ತವ್ಯ ಪಥದೊಂದಿಗೆ ಅಪ್‌ಲೋಡ್ ಮಾಡಬೇಕು. ಈ ಸಂಪೂರ್ಣ ಪ್ರದೇಶವು ದೆಹಲಿಯ ಜನರ ಹೃದಯದ ಬಡಿತವಾಗಿದೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ತಮ್ಮ ಕುಟುಂಬಗಳೊಂದಿಗೆ ಬಂದು ಸಂಜೆ ಸಮಯ ಕಳೆಯುತ್ತಾರೆ ಎಂದು ನನಗೆ ತಿಳಿದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕರ್ತವ್ಯ ಪಥದ ಯೋಜನೆ, ವಿನ್ಯಾಸ ಮತ್ತು ಬೆಳಕಿನ ವ್ಯವಸ್ಥೆ ಕೂಡ ಮಾಡಲಾಗಿದೆ. ಕರ್ತವ್ಯ ಪಥದ ಈ ಪ್ರೇರಣೆಯು ದೇಶದಲ್ಲಿ ಕರ್ತವ್ಯದ ಹರಿವನ್ನು ಸೃಷ್ಟಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಅದು ನವ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಈಡೇರಿಸುವತ್ತ ನಮ್ಮನ್ನು ಕರೆದೊಯ್ಯುತ್ತದೆ. ಈ ನಂಬಿಕೆಯೊಂದಿಗೆ, ನಾನು ಮತ್ತೊಮ್ಮೆ, ತುಂಬು ಧನ್ಯವಾದಗಳನ್ನು ಹೇಳುತ್ತೇನೆ! ಈಗ ನೀವು ನನ್ನೊಂದಿಗೆ ಹೇಳಿ, ನಾನು ನೇತಾಜಿ ಎಂದು ಹೇಳುತ್ತೇನೆ, ನೀವು ಅಮರ್ ರಹೇ, ಅಮರ್ ರಹೇ ಎಂದು ಹೇಳಬೇಕು!

ನೇತಾಜಿ — ಅಮರ್ ರಹೇ!

ನೇತಾಜಿ — ಅಮರ್ ರಹೇ!

ನೇತಾಜಿ — ಅಮರ್ ರಹೇ!

ಭಾರತ್ ಮಾತಾ ಕಿ – ಜೈ!

ಭಾರತ್ ಮಾತಾ ಕಿ – ಜೈ!

ಭಾರತ್ ಮಾತಾ ಕಿ – ಜೈ!

ವಂದೇ ಮಾತರಂ!

ವಂದೇ ಮಾತರಂ!

ವಂದೇ ಮಾತರಂ!

ತುಂಬಾ ಧನ್ಯವಾದಗಳು!

 

ಸೂಚನೆ: ಇದು ಪ್ರಧಾನಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

*****