Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವದೆಹಲಿಯಲ್ಲಿ ಐಟಿಯು ವರ್ಲ್ಡ್ ಟೆಲಿಕಮ್ಯುನಿಕೇಷನ್ ಸ್ಟ್ಯಾಂಡರ್ಡೈಸೇಷನ್ ಅಸೆಂಬ್ಲಿ -2024 ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ನವದೆಹಲಿಯಲ್ಲಿ ಐಟಿಯು ವರ್ಲ್ಡ್ ಟೆಲಿಕಮ್ಯುನಿಕೇಷನ್ ಸ್ಟ್ಯಾಂಡರ್ಡೈಸೇಷನ್ ಅಸೆಂಬ್ಲಿ -2024 ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ನವದೆಹಲಿಯ ಭಾರತ್ ಮಂಟಪಂನಲ್ಲಿ ಐಟಿಯು ವರ್ಲ್ಡ್ ಟೆಲಿಕಮ್ಯುನಿಕೇಷನ್ ಸ್ಟ್ಯಾಂಡರ್ಡೈಸೇಷನ್ ಅಸೆಂಬ್ಲಿ [ಡಬ್ಲ್ಯುಟಿಎಸ್ಎ] -2024 ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ಇಂಡಿಯಾ ಮೊಬೈಲ್ ಕಾಂಗ್ರೆಸ್ ನ 8ನೇ ಆವೃತ್ತಿಗೂ ಪ್ರಧಾನಮಂತ್ರಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ವಸ್ತುಪ್ರದರ್ಶನವನ್ನು ನಡೆದಾಡುತ್ತಾ ವೀಕ್ಷಿಸಿದರು.

ನಂತರ ನೆರೆದಿದ್ದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಕೇಂದ್ರ ಸಂಪರ್ಕ ಸಚಿವ ಶ್ರೀ ಜ್ಯೋತಿರಾಧಿತ್ಯ ಸಿಂಧಿಯಾ, ಕೇಂದ್ರ ಸಂಪರ್ಕ ಖಾತೆ ರಾಜ್ಯ ಸಚಿವ ಶ್ರೀ ಚಂದ್ರಶೇಖರ್ ಪೆಮ್ಮಸಾನಿ, ಐಟಿಯು ಕಾರ್ಯದರ್ಶಿ ಶ್ರೀಮತಿ ದೋರೀನ್ ಬೊಗ್ಡನ್ – ಮಾರ್ಟಿನ್, ವಿವಿಧ ದೇಶಗಳ ಸಚಿವರು, ಗಣ್ಯರು, ಕೈಗಾರಿಕಾ ನಾಯಕರು, ದೂರ ಸಂಪರ್ಕ ಪರಿಣಿತರು, ನವೋದ್ಯಮಗಳ ಯುವ ಸಮೂಹ, ಡಬ್ಲ್ಯುಟಿಎಸ್ಎ ಮತ್ತು ಮೊಬೈಲ್ ಕಾಂಗ್ರೆಸ್ [ಐಎಂಸಿ] ನ ಮಹಿಳೆಯರು ಮತ್ತು ಮಹನೀಯರನ್ನು ಸ್ವಾಗತಿಸಿದರು. ಐಟಿಯುಗೆ ಗಣ್ಯರನ್ನು ಸ್ವಾಗತಿಸಿದ ಪ್ರಧಾನಮಂತ್ರಿಯವರು, ಈ ಅಧಿವೇಶನವನ್ನು ಭಾರತದಲ್ಲಿ ನಡೆಸಲು ನಿರ್ಧರಿಸಿದ್ದಕ್ಕಾಗಿ ಡಬ್ಲ್ಯುಟಿಎಸ್ಎ ಸಂಸ್ಥೆಯನ್ನು ಹೊಗಳಿದರು. “ದೂರಸಂಪರ್ಕ ಮತ್ತು ಸಂಬಂಧಿತ ತಂತ್ರಜ್ಞಾನ ವಲಯದಲ್ಲಿ ಭಾರತ ಅತಿ ಹೆಚ್ಚು ಚಟುವಟಿಕೆಯ ದೇಶವಾಗಿದೆ” ಎಂದು ಶ್ರೀ ನರೇಂದ್ರ ಮೋದಿ ಅವರು ಉದ್ಘರಿಸಿದರು. ಭಾರತದ ಸಾಧನೆಗಳ ಪಟ್ಟಿ ಮಾಡಿದ ಪ್ರಧಾನಮಂತ್ರಿಯವರು, ದೇಶದಲ್ಲಿ 120 ಕೋಟಿ ಅಥವಾ 1200 ದಶಲಕ್ಷ ಮಂದಿ ಮೊಬೈಲ್ ಬಳಕೆ ಮಾಡುತ್ತಿದ್ದು, 95 ಕೋಟಿ ಅಥವಾ 950 ದಶಲಕ್ಷ ಮಂದಿ ಇಂಟರ್ ನೆಟ್ ಬಳಸುತ್ತಿದ್ದಾರೆ ಮತ್ತು ನೈಜ ಕಾಲದಲ್ಲಿ ಜಗತ್ತಿನ ಒಟ್ಟಾರೆ ಶೇ 40 ರಷ್ಟು ಡಿಜಿಟಲ್ ವಹಿವಾಟನ್ನು ಭಾರತೀಯರೇ ಮಾಡುತ್ತಿದ್ದಾರೆ. ಕಟ್ಟಕಡೆಯ ಮೈಲಿನವರೆಗೆ ಡಿಜಿಟಲ್ ಸಂಪರ್ಕ ಹೇಗೆ ಪರಿಣಾಮಕಾರಿ ಸಾಧನವಾಗಿದೆ ಎಂಬ ಕುರಿತು ಅವರು ಈ ಸಂದರ್ಭದಲ್ಲಿ ಅನಾವರಣಗೊಳಿಸಿದರು. ಜಾಗತಿಕ ದೂರ ಸಂಪರ್ಕ ಗುಣಮಟ್ಟ ಕುರಿತು ಚರ್ಚಿಸಲು ಭಾರತವನ್ನು ಆಯ್ಕೆ ಮಾಡಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಮತ್ತು ಜಗತ್ತಿನ ಒಳಿತಿಗಾಗಿ ಭವಿಷ್ಯದ ದೂರ ಸಂಪರ್ಕ ಕುರಿತು ಚರ್ಚಿಸಬೇಕಾಗಿದೆ ಎಂದರು.

ಡಬ್ಲ್ಯುಟಿಎಸ್ಎ ಮತ್ತು ಮೊಬೈಲ್ ಕಾಂಗ್ರೆಸ್ ಜಂಟಿಯಾಗಿ ಆಯೋಜಿಸಿರುವ ಅಧಿವೇಶನ ಕುರಿತು ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಭಾರತ ಮೊಬೈಲ್ ಕಾಂಗ್ರೆಸ್‌ನ ಪಾತ್ರವು ಸೇವೆಗಳೊಂದಿಗೆ ಸಂಬಂಧ ಹೊಂದಿದೆ. ಆದರೆ ಜಾಗತಿಕ ಗುಣಮಟ್ಟದಲ್ಲಿ ಕೆಲಸ ಮಾಡುವುದು ಡಬ್ಲ್ಯುಟಿಎಸ್ಎ ಯ ಉದ್ದೇಶವಾಗಿದೆ ಎಂದು  ಪ್ರಧಾನಮಂತ್ರಿ ಹೇಳಿದರು. ಇಂದಿನ ಕಾರ್ಯಕ್ರಮ ಜಾಗತಿಕ ಗುಣಮಟ್ಟ ಮತ್ತು ಸೇವೆಗಳನ್ನು ಒಂದೇ ವೇದಿಕೆಯಲ್ಲಿ ತರುತ್ತಿರುವುದು ವಿಶೇಷ ಎಂದು ಅವರು ಹೇಳಿದರು. ಗುಣಮಟ್ಟದ ಸೇವೆ ಮತ್ತು ಮಾನದಂಡಗಳ ಮೇಲೆ ಭಾರತದ ಗಮನವನ್ನು ಒತ್ತಿಹೇಳಿದ ಅವರು, ಡಬ್ಲ್ಯುಟಿಎಸ್ಎ ಅನುಭವವು ಭಾರತಕ್ಕೆ ಹೊಸ ಶಕ್ತಿಯನ್ನು ನೀಡುತ್ತದೆ ಎಂದರು.

ಡಬ್ಲ್ಯುಟಿಎಸ್ಎ ತನ್ನ ಪ್ರಜ್ಞೆಯ ಮೂಲಕ ಸಬಲೀಕರಣಗೊಳಿಸುತ್ತಿದೆ ಮತ್ತು ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಂಪರ್ಕದ ಮೂಲಕ ಜಗತ್ತನ್ನು ಬಲಿಷ್ಠಗೊಳಿಸುತ್ತಿದೆ. ಆದ್ದರಿಂದ ಪ್ರಜ್ಞೆ ಮತ್ತು ಸಂಪರ್ಕದ ಮೂಲಕ ಈ ಕಾರ್ಯಕ್ರಮವನ್ನು ಆನಂದಿಸಲಾಗುತ್ತಿದೆ. ಸಂಘರ್ಷದಿಂದ ನಲುಗುತ್ತಿರುವ ಇಂದಿನ ಜಗತ್ತಿನಲ್ಲಿ ಸಂಯೋಜನೆಯ ಅಗತ್ಯವನ್ನು ಒತ್ತಿ ಹೇಳಿದ ಅವರು, ಭಾರತವು ವಸುಧೈವ ಕುಟುಂಬಕಂ ಎಂಬ ಅಮರ ಸಂದೇಶದ ಮೂಲಕ ಬದುಕುತ್ತಿದೆ ಎಂದರು. ಅವರು ಭಾರತದ ಅಧ್ಯಕ್ಷತೆಯ ಜಿ20 ಶೃಂಗಸಭೆಯನ್ನು ಪ್ರಸ್ತಾಪಿಸಿದರು ಮತ್ತು ‘ಒಂದು ಭೂಮಿ ಒಂದು ಕುಟುಂಬ ಒಂದು ಭವಿಷ್ಯ’ ಎಂಬ ಸಂದೇಶವನ್ನು ಪ್ರಸಾರ ಮಾಡುವ ಕುರಿತು ಮಾತನಾಡಿದರು. ಭಾರತವು ಜಗತ್ತನ್ನು ಸಂಘರ್ಷದಿಂದ ಹೊರತರುವಲ್ಲಿ ಮತ್ತು ಅದನ್ನು ಸಂಪರ್ಕಿಸುವ ನಿಟ್ಟಿನಲ್ಲಿ ತೊಡಗಿಕೊಂಡಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. “ಪ್ರಾಚೀನ ರೇಷ್ಮೆ ಮಾರ್ಗವಾಗಿರಲಿ ಅಥವಾ ಇಂದಿನ ತಂತ್ರಜ್ಞಾನದ ಮಾರ್ಗವಾಗಿರಲಿ, ಭಾರತದ ಏಕೈಕ ಧ್ಯೇಯವೆಂದರೆ ಜಗತ್ತನ್ನು ಸಂಪರ್ಕಿಸುವುದು ಮತ್ತು ಪ್ರಗತಿಯ ಹೊಸ ಬಾಗಿಲುಗಳನ್ನು ತೆರೆಯುವುದಾಗಿದೆ” ಎಂದು ಪ್ರಧಾನಮಂತ್ರಿ ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ ಡಬ್ಲ್ಯುಟಿಎಸ್ಎ ಮತ್ತು ಐಎಂಸಿ ಸ್ಥಳೀಯ ಮತ್ತು ಜಾಗತಿಕವಾಗಿ ಪರಮೋಚ್ಛ ಸಂದೇಶ ನೀಡುತ್ತಿದ್ದು, ಇದರಿಂದ ಕೇವಲ ಒಂದು ದೇಶಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಅನುಕೂಲವಾಗುತ್ತಿದೆ ಎಂದು ಹೇಳಿದರು.

“21 ನೇ ಶತಮಾನದಲ್ಲಿ ಭಾರತದ ಮೊಬೈಲ್ ಮತ್ತು ದೂರ ಸಂಪರ್ಕ ಯಾನ ಜಗತ್ತಿಗೆ ಅಧ್ಯಯನದ ವಸ್ತುವಾಗಿದೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಮೊಬೈಲ್ ಮತ್ತು ದೂರಸಂಪರ್ಕವನ್ನು ಒಂದು ಸೌಲಭ್ಯವನ್ನಾಗಿ ನಾವು ಜಗತ್ತಿನಲ್ಲಿ ನೋಡುತ್ತಿದ್ದೇವೆ, ಆದರೆ ದೂರ ಸಂಪರ್ಕ ಭಾರತಕ್ಕೆ ಕೇವಲ ಸಂಪರ್ಕವಷ್ಟೇ ಅಲ್ಲ, ಇದು ನೀತಿ ಮತ್ತು ಅವಕಾಶದ ಮಾಧ್ಯಮವೂ ಆಗಿದೆ. ಹಳ್ಳಿಗಳು ಮತ್ತು ನಗರಗಳು, ಬಡವರು ಮತ್ತು ಶ್ರೀಮಂತರ ನಡುವಿನ ಅಂತರಕ್ಕೆ ಇದು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಒಂದು ದಶಕದ ಹಿಂದೆ ಡಿಜಿಟಲ್ ಇಂಡಿಯಾದ ದೃಷ್ಟಿಕೋನ ಕುರಿತು ತಮ್ಮ ಅನಿಸಿಕೆಗಳನ್ನು ನೆನಪಿಸಿಕೊಂಡ ಶ್ರೀ ಮೋದಿಯವರು, ಭಾರತವು ಸಮಗ್ರ ವಿಧಾನದೊಂದಿಗೆ ಮುನ್ನಡೆಯಬೇಕು ಎಂದು ಹೇಳಿದ್ದರು. ಶ್ರೀ ಮೋದಿ ಅವರು ಡಿಜಿಟಲ್ ಇಂಡಿಯಾದ ನಾಲ್ಕು ಸ್ತಂಭಗಳನ್ನು ಪಟ್ಟಿ ಮಾಡಿದರು – ಕಡಿಮೆ ಬೆಲೆಯ ಸಾಧನಗಳು, ದೇಶದ ಮೂಲೆ ಮೂಲೆಗಳಿಗೆ ಡಿಜಿಟಲ್ ಸಂಪರ್ಕದ ವ್ಯಾಪಕ ವ್ಯಾಪ್ತಿ, ಸುಲಭವಾಗಿ ಪ್ರವೇಶಿಸಬಹುದಾದ ಡೇಟಾ ಮತ್ತು ‘ಡಿಜಿಟಲ್ ಫಸ್ಟ್’ ಗುರಿ, ಇವುಗಳನ್ನು ಏಕಕಾಲದಲ್ಲಿ ಗುರುತಿಸಲಾಗಿದೆ ಮತ್ತು ಈ ನಿಟ್ಟಿನಲ್ಲಿ ಕೆಲಸ ಮಾಡಲಾಗಿದೆ. ಇದರಿಂದ ಉತ್ತಮ ಫಲಿತಾಂಶ ಪಡೆಯುವಂತಾಗಿದೆ ಎಂದರು.

ಸಂಪರ್ಕ ಮತ್ತು ದೂರಸಂಪರ್ಕ ಸುಧಾರಣೆಗಳ ಸಾಧನೆಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ದೇಶಾದ್ಯಂತ, ಅದರಲ್ಲೂ ಬುಡಕಟ್ಟು, ಗುಡ್ಡಗಾಡು ಮತ್ತು ಗಡಿ ಪ್ರದೇಶಗಳಲ್ಲಿ ಸಹಸ್ರಾರು ಮೊಬೈಲ್ ಟವರ್ ಗಳನ್ನು ಅಳವಡಿಸಿ ಉಜ್ವಲ ಸಂಪರ್ಕ ಜಾಲವನ್ನು ನಿರ್ಮಿಸಲಾಗಿದೆ ಮತ್ತು ಪ್ರತಿಯೊಂದು ಮನೆಗಳಿಗೂ ಸಂಪರ್ಕವನ್ನು ಖಚಿತಪಡಿಸಲಾಗಿದೆ. ಸರ್ಕಾರ ದೇಶಾದ್ಯಂತ ಬಲಿಷ್ಟ ಮೊಬೈಲ್ ಟವರ್ ಗಳನ್ನು ನಿರ್ಮಿಸಲಾಗಿದೆ. ಮೂಲಸೌಕರ್ಯ ವಲಯದಲ್ಲಿ ನಿರ್ಣಾಯಕ ಸಂಪರ್ಕ ಜಾಲವನ್ನು ನಿರ್ಮಿಸಿದ್ದು, ಸಾರ್ವಜನಿಕ ಸ್ಥಳಗಳಾದ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆಯನ್ನು ತ್ವರಿತವಾಗಿ ಅಳವಡಿಸಲಾಗಿದೆ ಮತ್ತು ಅಂಡಮಾನ್-ನಿಕೋಬಾರ್, ಲಕ್ಷದ್ವೀಪ ಪ್ರದೇಶಗಳಲ್ಲಿ ಸಾಗರದಾಳದಲ್ಲೂ ಆಪ್ಟಿಕಲ್ ಫೈಬರ್ ಅಳವಡಿಸಲಾಗಿದೆ. “ಕೇವಲ ಹತ್ತು ವರ್ಷಗಳಲ್ಲಿ ನಾವು ಭೂಮಿಯಿಂದ ಚಂದ್ರನ ಅಂಗಳದ ವರೆಗಿನ ಎಂಟುಪಟ್ಟು ದೂರದ ಪ್ರಮಾಣದಷ್ಟು ಆಫ್ಟಿಕಲ್ ಫೈಬರ್ ಅನ್ನು ಭಾರತದಲ್ಲಿ ಅಳವಡಿಸಿದ್ದೇವೆ”. ಭಾರತ 5ಜಿ ತಂತ್ರಜ್ಞಾನವನ್ನು ತ್ವರಿತವಾಗಿ ಅಡಕಗೊಳಿಸಿಕೊಳ್ಳುತ್ತಿದೆ ಮತ್ತು 5ಜಿ ತಂತ್ರಜ್ಞಾನವನ್ನು ಎರಡು ವರ್ಷಗಳ ಹಿಂದೆ ಪ್ರಾರಂಭಿಸಲಾಗಿತ್ತು. ಇಂದು ಪ್ರತಿಯೊಂದು ಜಿಲ್ಲೆಯಲ್ಲೂ ಸಂಪರ್ಕ ಹೊಂದಿದ್ದೇವೆ. ಜಗತ್ತಿನಲ್ಲಿ ಭಾರತ 5ಜಿ ತಂತ್ರಜ್ಞಾನದಲ್ಲಿ ಎರಡನೇ ಅತಿದೊಡ್ಡ ದೇಶವಾಗಿ ಹೊರ ಹೊಮ್ಮಿದೆ. 6ಜಿ ತಂತ್ರಜ್ಞಾನದತ್ತ ಭಾರತ ತನ್ನ ಪ್ರಗತಿಯ ಹೆಜ್ಜೆ ಇಟ್ಟಿದ್ದು, ಭವಿಷ್ಯದ ತಂತ್ರಜ್ಞಾನವನ್ನು ಬಳಸಿಕೊಳ್ಳುವುದನ್ನು ಖಾತರಿಪಡಿಸಿದೆ.

ದೂರ ಸಂಪರ್ಕ ವಲಯದ ಸುಧಾರಣೆಗಳ ಕುರಿತು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು ಡೇಟಾ ವೆಚ್ಚವನ್ನು ಕಡಿಮೆ ಮಾಡುವಲ್ಲಿ ಭಾರತದ ಪ್ರಯತ್ನಗಳನ್ನು ಅನಾವರಣಗೊಳಿಸಿದರು. ಒಂದು ಜಿಬಿ ಡೇಟಾ 10 ರಿಂದ 20 ಪಟ್ಟು ಹೆಚ್ಚು ದುಬಾರಿಯಾಗಿರುವ ವಿಶ್ವದ ಹಲವು ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈಗ ಇಂಟರ್ನೆಟ್ ಡೇಟಾದ ಬೆಲೆ ಪ್ರತಿ ಜಿಬಿಗೆ 12 ಸೆಂಟ್‌ಗಳಷ್ಟು ಕಡಿಮೆಯಾಗಿದೆ ಎಂದು ಅವರು ಹೇಳಿದರು. “ಇಂದು, ಪ್ರತಿ ಭಾರತೀಯರು ಪ್ರತಿ ತಿಂಗಳು ಸರಾಸರಿ 30 ಜಿಬಿ ಡೇಟಾವನ್ನು ಬಳಸುತ್ತಾರೆ” ಎಂದು ಅವರು ಹೇಳಿದರು.

ಅಂತಹ ಎಲ್ಲಾ ಪ್ರಯತ್ನಗಳನ್ನು ನಾಲ್ಕನೇ ಸ್ತಂಭದಿಂದ ಅಂದರೆ ಡಿಜಿಟಲ್ ಫಸ್ಟ್ ಎಂಬ ಮನೋಭಾವದಿಂದ ಹೊಸ ಮಟ್ಟಕ್ಕೆ ಕೊಂಡೊಯ್ಯಲಾಗಿದೆ ಎಂದು ಶ್ರೀ ಮೋದಿ ಗಮನ ಸೆಳೆದರು. ಭಾರತವು ಡಿಜಿಟಲ್ ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸಿದೆ ಮತ್ತು ಡಿಜಿಟಲ್ ವೇದಿಕೆಗಳನ್ನು ರಚಿಸಿದೆ ಎಂದು ಅವರು ಒತ್ತಿಹೇಳಿದರು, ಈ ವೇದಿಕೆಗಳಲ್ಲಿನ ಆವಿಷ್ಕಾರಗಳು ಲಕ್ಷಾಂತರ ಹೊಸ ಅವಕಾಶಗಳನ್ನು ಸೃಷ್ಟಿಸಿದವು. ಜನ್ ಧನ್, ಆಧಾರ್ ಮತ್ತು ಮೊಬೈಲ್ ಕುರಿತಂತೆ ತ್ರಿವಳಿ ಪರಿವರ್ತನೆಯ ಶಕ್ತಿಯನ್ನು – ಶ್ರೀ ಮೋದಿಯವರು ಎತ್ತಿ ತೋರಿಸಿದರು. ಇದು ಅಸಂಖ್ಯಾತ ಆವಿಷ್ಕಾರಗಳಿಗೆ ಅಡಿಪಾಯ ಹಾಕಿದೆ ಎಂದು ಹೇಳಿದರು. ಅನೇಕ ಕಂಪನಿಗಳಿಗೆ ಹೊಸ ಅವಕಾಶಗಳನ್ನು ಒದಗಿಸಿರುವ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಕುರಿತು ಪ್ರಸ್ತಾಪಿಸಿದ ಅವರು ಡಿಜಿಟಲ್ ವಾಣಿಜ್ಯದಲ್ಲಿ ದು ಕ್ರಾಂತಿಯನ್ನುಂಟು ಮಾಡುವ ಒಎನ್‌ಡಿಸಿ ಬಗ್ಗೆಯೂ ಮಾತನಾಡಿದರು. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಡಿಜಿಟಲ್ ವೇದಿಕೆಗಳ ಪಾತ್ರದ ಬಗ್ಗೆ ಗಮನಸೆಳೆದರು. ಅಗತ್ಯವಿರುವವರಿಗೆ ಹಣಕಾಸಿನ ವರ್ಗಾವಣೆ, ಮಾರ್ಗಸೂಚಿಗಳ ನೈಜ-ಸಮಯದ ಸಂವಹನ, ಲಸಿಕೆ ಅಭಿಯಾನ ಮತ್ತು ಡಿಜಿಟಲ್ ಲಸಿಕೆ ಪ್ರಮಾಣಪತ್ರಗಳನ್ನು ಹಸ್ತಾಂತರಿಸುವಂತಹ ತಡೆರಹಿತ ಪ್ರಕ್ರಿಯೆಗಳನ್ನು ಖಚಿತಪಡಿಸುತ್ತಿದೆ ಎಂದರು.  ಭಾರತದ ಯಶಸ್ಸನ್ನು ಪ್ರತಿಬಿಂಬಿಸುತ್ತಾ, ಪ್ರಧಾನಮಂತ್ರಿಯವರು ತನ್ನ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಅನುಭವವನ್ನು ಜಾಗತಿಕವಾಗಿ ಹಂಚಿಕೊಳ್ಳಲು ರಾಷ್ಟ್ರೀಯ ಹಿತಾಸಕ್ತಿಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಭಾರತದ ಡಿಜಿಟಲ್ ಪುಷ್ಪಗುಚ್ಛವು ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕೆ ಭಾರತದ ಮಹತ್ವವನ್ನು ಎತ್ತಿ ತೋರಿಸುವ ಕಲ್ಯಾಣ ಯೋಜನೆಗಳನ್ನು ವಿಶ್ವದಾದ್ಯಂತ ಹೆಚ್ಚಿಸಬಹುದು ಎಂದು ಪ್ರಧಾನಿ ಹೇಳಿದರು. ರಾಷ್ಟ್ರವು ತನ್ನ ಡಿಪಿಐ ಜ್ಞಾನವನ್ನು ಎಲ್ಲಾ ದೇಶಗಳೊಂದಿಗೆ ಹಂಚಿಕೊಳ್ಳಲು ಸಂತೋಷವಾಗಿದೆ ಎಂದು ಅವರು ಒತ್ತಿ ಹೇಳಿದರು.

ಡಬ್ಲ್ಯುಟಿಎಸ್ಎ ಸಮಯದಲ್ಲಿ ಮಹಿಳಾ ಉಪಕ್ರಮದ ಸಂಪರ್ಕಜಾಲದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಶ್ರೀ ಮೋದಿ ಅವರು, ಭಾರತವು ಮಹಿಳಾ ನೇತೃತ್ವದ ಅಭಿವೃದ್ಧಿಯ ಮೇಲೆ ಬಹಳ ಗಂಭೀರವಾಗಿ ಕೆಲಸ ಮಾಡುತ್ತಿದೆ ಎಂದರು. ಭಾರತವು ಜಿ-20 ಅಧ್ಯಕ್ಷತೆ ವಹಿಸಿದ್ದಾಗ ಬದ್ಧತೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಲಾಗಿದೆ ಎಂದು ಅವರು ಹೇಳಿದರು. ತಂತ್ರಜ್ಞಾನ ವೇದಿಕೆಗಳ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವ ಮೂಲಕ ತಂತ್ರಜ್ಞಾನ ಕ್ಷೇತ್ರವನ್ನು ಒಳಗೊಂಡಂತೆ ಮಾಡುವ ಗುರಿಯತ್ತ ಭಾರತ ಕೆಲಸ ಮಾಡುತ್ತಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಭಾರತದ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಮಹಿಳಾ ವಿಜ್ಞಾನಿಗಳ ನಿರ್ಣಾಯಕ ಪಾತ್ರವನ್ನು ಅವರು ಎತ್ತಿ ತೋರಿಸಿದರು, ಭಾರತದ ನವೋದ್ಯಮಗಳಲ್ಲಿ ಮಹಿಳಾ ಸಹ-ಸಂಸ್ಥಾಪಕರ ಸಂಖ್ಯೆ ಹೆಚ್ಚುತ್ತಿದೆ ಎಂದರು. ಭಾರತದ ಸ್ಟೆಮ್ ಶಿಕ್ಷಣ ವ್ಯವಸ್ಥೆಯಲ್ಲಿ ಮಹಿಳೆಯರ ಪಾಲು ಶೇ 40 ರಷ್ಟಿದೆ ಮತ್ತು ಮಹಿಳಾ ತಂತ್ರಜ್ಞಾನ ನಾಯಕತ್ವದಡಿ ಭಾರತ ಅತಿ ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳುತ್ತಿದೆ. ಸರ್ಕಾರದ ನಮೋ ಡ್ರೋಣ್ ದಿದಿ ಕಾರ್ಯಕ್ರಮದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಇದರಿಂದ ಕೃಷಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಸಾಧ್ಯವಾಯಿತು. ಇದರ ನಾಯಕತ್ವವನ್ನು ಹಳ್ಳಿಗಳ ಮಹಿಳೆಯರು ವಹಿಸಿಕೊಂಡಿದ್ದಾರೆ. ಡಿಜಿಟಲ್ ಜಾಗೃತಿಗೆ ಕಾರಣವಾದ ಪ್ರತಿ ಮನೆಗೆ ಡಿಜಿಟಲ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿಗಳನ್ನು ತೆಗೆದುಕೊಳ್ಳಲು ಭಾರತವು ಬ್ಯಾಂಕ್ ಸಖಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಭಾರತದ ಪ್ರಾಥಮಿಕ ಆರೋಗ್ಯ, ಹೆರಿಗೆ ಮತ್ತು ಮಕ್ಕಳ ಆರೈಕೆಯಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ನಿರ್ಣಾಯಕ ಪಾತ್ರವನ್ನು ಎತ್ತಿ ಹಿಡಿದ ಶ್ರೀ ನರೇಂದ್ರ ಮೋದಿ ಅವರು, ಇಂದು ಈ ಕಾರ್ಯಕರ್ತರು ಟ್ಯಾಬ್‌ಗಳು ಮತ್ತು ಅಪ್ಲಿಕೇಶನ್‌ಗಳ ಮೂಲಕ ಎಲ್ಲಾ ಕೆಲಸಗಳ ಜಾಡು ಪತ್ತೆ ಮಾಡುತ್ತಿದ್ದಾರೆ ಎಂದರು. ಮಹಿಳಾ ಉದ್ಯಮಿಗಳಿಗೆ ಆನ್‌ಲೈನ್ ಮಾರುಕಟ್ಟೆ ವೇದಿಕೆಯಾದ ಮಹಿಳಾ ಇ-ಹಾತ್ ಕಾರ್ಯಕ್ರಮವನ್ನು ಭಾರತವೂ ನಡೆಸುತ್ತಿದೆ ಎಂದು ಅವರು ಹೇಳಿದರು. ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಇಂದು ಭಾರತದ ಪ್ರತಿಯೊಂದು ಹಳ್ಳಿಗಳ ಮಹಿಳೆಯರು ತಂತ್ರಜ್ಞಾನದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬ ಮಗಳು ತಂತ್ರಜ್ಞಾನದಲ್ಲಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದರು.

ಡಿಜಿಟಲ್ ತಂತ್ರಜ್ಞಾನ ಕುರಿತು ಡಿಜಿಟಲ್ ಕಾರ್ಯಚೌಕಟ್ಟಿನ ಮಹತ್ವವನ್ನು ಜಾಗತಿಕ ಸಂಸ್ಥೆಗಳು ಸ್ವೀಕರಿಸುವ ಕಾಲ ಸನ್ನಿಹಿತವಾಗಿದೆ. ಭಾರತ ಜಿ20 ನಾಯಕತ್ವ ವಹಿಸಿದ್ದ ಸಂದರ್ಭದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗಿತ್ತು ಮತ್ತು ಜಾಗತಿಕ ಡಿಜಿಟಲ್ ಆಡಳಿತಕ್ಕಾಗಿ ಜಾಗತಿಕ ಡಿಜಿಟಲ್ ಸಂಸ್ಥೆಗಳು ಇದರ ಮಹತ್ವ ಅರಿಯಬೇಕು ಎಂದು ಒತ್ತಾಯಿಸಲಾಗಿತ್ತು. “ಡಿಜಿಟಲ್ ತಂತ್ರಜ್ಞಾನ ಕುರಿತು ಡಿಜಿಟಲ್ ಕಾರ್ಯಚೌಕಟ್ಟಿನ ಮಹತ್ವವನ್ನು ಜಾಗತಿಕ ಸಂಸ್ಥೆಗಳು ಸ್ವೀಕರಿಸುವ ಕಾಲ ಸನ್ನಿಹಿತವಾಗಿದ್ದು, ಇದರಿಂದ ಜಾಗತಿಕ ಆಡಳಿತದ ಮಾರ್ಗಸೂಚಿ ರೂಪಿಸಲು ಸಾಧ್ಯವಾಗಲಿದೆ”. ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ವಲಯದಲ್ಲಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎನ್ನುವ ಕುರಿತು ಸೂಕ್ತ ತಿಳಿವಳಿಕೆ ನೀಡಬೇಕು. ಪ್ರಧಾನಮಂತ್ರಿಯವರು ಡಿಜಿಟಲ್ ಉಪಕರಣಗಳು ಮತ್ತು ಅಪ್ಲಿಕೇಶನ್‌ಗಳ ಗಡಿಯಿಲ್ಲದ ಸ್ವರೂಪವನ್ನು ಎತ್ತಿ ತೋರಿಸಿದರು ಮತ್ತು ಸೈಬರ್ ಬೆದರಿಕೆಗಳನ್ನು ಎದುರಿಸಲು ಮತ್ತು ಜಾಗತಿಕ ಸಂಸ್ಥೆಗಳ ಸಾಮೂಹಿಕ ಕ್ರಿಯೆಯನ್ನು ನಿಭಾಯಿಸಲು ಅಂತರರಾಷ್ಟ್ರೀಯ ಸಹಯೋಗಕ್ಕಾಗಿ ಒತ್ತಾಯಿಸಿದರು. ಈಗಾಗಲೇ ಸುಸ್ಥಾಪಿತ ಚೌಕಟ್ಟುಗಳನ್ನು ಹೊಂದಿರುವ ವಾಯುಯಾನ ವಲಯದೊಂದಿಗೆ ಸಮಾನಾಂತರಗಳನ್ನು ಹೊಂದಿದ್ದರು. ಸುರಕ್ಷಿತ ಡಿಜಿಟಲ್ ಪರಿಸರ ವ್ಯವಸ್ಥೆ ಮತ್ತು ದೂರಸಂಪರ್ಕಕ್ಕಾಗಿ ಸುರಕ್ಷಿತ ಮಾರ್ಗವನ್ನು ರಚಿಸುವಲ್ಲಿ ಪೂರ್ವಭಾವಿ ಪಾತ್ರವನ್ನು ವಹಿಸಲು ಡಬ್ಲ್ಯುಟಿಎಸ್ಎ ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಕರೆ ನೀಡಿದರು. “ಅಂತರ್ ಸಂಪರ್ಕಿತ ಜಗತ್ತಿನಲ್ಲಿ, ಭದ್ರತೆಯು ನಂತರದ ಆಲೋಚನೆಯಾಗಿರಲು ಸಾಧ್ಯವಿಲ್ಲ. ಭಾರತದ ದತ್ತಾಂಶ ಸಂರಕ್ಷಣಾ ಕಾಯಿದೆ ಮತ್ತು ರಾಷ್ಟ್ರೀಯ ಸೈಬರ್ ಭದ್ರತಾ ಕಾರ್ಯತಂತ್ರವು ಸುರಕ್ಷಿತ ಡಿಜಿಟಲ್ ಪರಿಸರವನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಅವರು ಹೇಳಿದರು. ರಾಷ್ಟ್ರಗಳ ವೈವಿಧ್ಯತೆಯನ್ನು ಗೌರವಿಸುವ ನೈತಿಕ ಕೃತಕ ಬುದ್ದಿಮತ್ತೆ ಮತ್ತು ಡೇಟಾ ಗೌಪ್ಯತೆ ಮಾನದಂಡಗಳು ಸೇರಿದಂತೆ ಭವಿಷ್ಯದ ಸವಾಲುಗಳಿಗೆ ಒಳಗೊಳ್ಳುವ, ಸುರಕ್ಷಿತ ಮತ್ತು ಹೊಂದಿಕೊಳ್ಳುವ ಮಾನದಂಡಗಳನ್ನು ರಚಿಸಲು ಅಧಿವೇಶನದಲ್ಲಿ ಪಾಲ್ಗೊಂಡಿರುವ ಸದಸ್ಯರನ್ನು ಪ್ರಧಾನಮಂತ್ರಿಯವರು ಒತ್ತಾಯಿಸಿದರು.

ಪ್ರಸ್ತುತ ಚಾಲ್ತಿಯಲ್ಲಿರುವ ತಂತ್ರಜ್ಞಾನ ಕ್ರಾಂತಿಯಲ್ಲಿ ಮಾನವ ಕೇಂದ್ರಿತ ಬೆಳವಣಿಗೆಯ ಹೊಸ ಆಯಾಮದ ಅಗತ್ಯವಿದೆ. ಜವಾಬ್ದಾರಿತನ ಮತ್ತು ಸುಸ್ಥಿರ ನಾವೀನ್ಯತೆಯ ಅಗತ್ಯವಿದೆ. ಇಂದು ಗುಣಮಟ್ಟವನ್ನು ನಿಗದಿಪಡಿಸಿದ್ದು, ಇದು ಭವಿಷ್ಯದ ಮಾರ್ಗಕ್ಕೆ ದೃಢ ನಿಶ್ಚಯವನ್ನು ಒದಗಿಸಲಿದೆ. ಭದ್ರತೆ, ಗೌರವ ಮತ್ತು ನೀತಿ  ವಿಷಯಗಳು ಚರ್ಚೆಯ ಪ್ರಮುಖ ಕೇಂದ್ರ ಬಿಂದುವಾಗಿರಬೇಕು. ಡಿಜಿಟಲ್ ಪರಿವರ್ತನೆಯಲ್ಲಿ ಯಾವುದೇ ವಲಯ ಮತ್ತು ಯಾವುದೇ ಸಮುದಾಯ ಹಿಂದೆ ಬೀಳಬಾರದು ಮತ್ತು ಸಮತೋಲಿತ ನಾವೀನ್ಯತೆ ಎಲ್ಲರನ್ನೊಳಗೊಳ್ಳುವಂತಿರಬೇಕು. ಭವಿಷ್ಯವು ತಾಂತ್ರಿಕವಾಗಿ ಪ್ರಬಲವಾಗಿದೆ ಮತ್ತು ನಾವೀನ್ಯತೆ ಮತ್ತು ಸೇರ್ಪಡೆಯೊಂದಿಗೆ ನೈತಿಕವಾಗಿ ಉತ್ತಮವಾಗಿದೆ ಎಂದು ಖಚಿತಪಡಿಸಿಕೊಳ್ಳುವಂತೆ ಅವರು ಒತ್ತಾಯಿಸಿದರು. ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಪ್ರಧಾನಮಂತ್ರಿಯವರು ಡಬ್ಲ್ಯುಟಿಎಸ್ಎ ಯಶಸ್ಸಿಗೆ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದರು ಮತ್ತು ತಮ್ಮ ಬೆಂಬಲವನ್ನೂ ವ್ಯಕ್ತಪಡಿಸಿದರು.  

ಕೇಂದ್ರ ಸಂಪರ್ಕ ಸಚಿವ ಶ್ರೀ ಜ್ಯೋತಿರಾಧಿತ್ಯ ಸಿಂಧಿಯಾ, ಕೇಂದ್ರ ಸಂಪರ್ಕ ಖಾತೆ ರಾಜ್ಯ ಸಚಿವ ಶ್ರೀ ಚಂದ್ರಶೇಖರ್ ಪೆಮ್ಮಸಾನಿ ಅವರು ವಿವಿಧ ಕೈಗಾರಿಕಾ ವಲಯದ ನಾಯಕರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಹಿನ್ನೆಲೆ

ವರ್ಲ್ಡ್ ಟೆಲಿಕಮ್ಯುನಿಕೇಷನ್ ಸ್ಟ್ಯಾಂಡರ್ಡೈಸೇಷನ್ ಅಸೆಂಬ್ಲಿ ಅಥವಾ ಡಬ್ಲ್ಯುಟಿಎಸ್ಎ ಎಂಬುದು ಅಂತಾರಾಷ್ಟ್ರೀಯ ದೂರ ಸಂಪರ್ಕ ಸಂಸ್ಥೆಯಾಗಿದ್ದು, ವಿಶ್ವ ಸಂಸ್ಥೆಯ ಡಿಜಿಟಲ್ ತಂತ್ರಜ್ಞಾನ ಪ್ರಮಾಣೀಕರಣ ಕಾರ್ಯಕ್ಕಾಗಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸುವ ಆಡಳಿತ ಸಮ್ಮೇಳನವಾಗಿದೆ. ಇದು ಮೊದಲ ಬಾರಿಗೆ ಐಟಿಯು-ಡಬ್ಲ್ಯುಟಿಎಸ್ಎ – ಡಬ್ಲ್ಯುಟಿಎಸ್ಎ ಅನ್ನು ಭಾರತ ಮತ್ತು ಏಷ್ಯಾ-ಪೆಸಿಫಿಕ್‌ನಲ್ಲಿ ಆಯೋಜಿಸಲಾಗಿದೆ. ಇದು ದೂರ ಸಂಪರ್ಕ, ಡಿಜಿಟಲ್ ಮತ್ತು ಐಸಿಟಿ ವಲಯಗಳನ್ನು ಪ್ರತಿನಿಧಿಸುವ 190 ಕ್ಕೂ ಹೆಚ್ಚು ದೇಶಗಳ 3,000 ಕ್ಕೂ ಹೆಚ್ಚು ಉದ್ಯಮ ನಾಯಕರು, ನೀತಿ-ನಿರೂಪಕರು ಮತ್ತು ತಂತ್ರಜ್ಞಾನ ತಜ್ಞರನ್ನು ಒಟ್ಟುಗೂಡಿಸುವ ಪ್ರಮುಖ ಜಾಗತಿಕ ಕಾರ್ಯಕ್ರಮವಾಗಿದೆ.

ಡಬ್ಲ್ಯುಟಿಎಸ್ಎ 2024 6ಜಿ, ಎಐ, ಎಲ್ಒಟಿ, ಬಿಗ್ ಡೇಟಾ, ಸೈಬರ್‌ ಸೆಕ್ಯುರಿಟಿ ಮುಂತಾದ ಮುಂದಿನ-ಪೀಳಿಗೆಯ ನಿರ್ಣಾಯಕ ತಂತ್ರಜ್ಞಾನಗಳ ಭವಿಷ್ಯವನ್ನು ಚರ್ಚಿಸಲು ಮತ್ತು ನಿರ್ಧರಿಸಲು ದೇಶಗಳಿಗೆ ವೇದಿಕೆಯನ್ನು ಒದಗಿಸುತ್ತದೆ. ಭಾರತದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುವುದು ದೇಶಕ್ಕೆ ಒಂದು ಉಜ್ವಲ ಅವಕಾಶವನ್ನು ಒದಗಿಸಿದಂತಾಗಿದೆ. ಜಾಗತಿಕ ದೂರ ಸಂಪರ್ಕ ಕಾರ್ಯಸೂಚಿಯನ್ನು ರೂಪಿಸುವಲ್ಲಿ ಮತ್ತು ಭವಿಷ್ಯದ ತಂತ್ರಜ್ಞಾನಗಳಿಗೆ ಕೋರ್ಸ್ ಗಳನ್ನು ಹೊಂದಿಸುವಲ್ಲಿ ಪ್ರಮುಖ ಪಾತ್ರವನ್ನು ಇದು ಒದಗಿಸಲಿದೆ. ಭಾರತೀಯ ನವೋದ್ಯಮಗಳು ಮತ್ತು ಸಂಶೋಧನಾ ಸಂಸ್ಥೆಗಳು, ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಅಗತ್ಯವಾಗಿರುವ ಗುಣಮಟ್ಟದ ಪೇಟೆಂಟ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರ್ಣಾಯಕ ಒಳನೋಟಗಳನ್ನು ಪಡೆಯಲು ಸನ್ನದ್ಧವಾಗಿದೆ.

ಏಷ್ಯಾದ ಅತಿದೊಡ್ಡ ಡಿಜಿಟಲ್ ತಂತ್ರಜ್ಞಾನ ವೇದಿಕೆಯಾದ ಇಂಡಿಯಾ ಮೊಬೈಲ್ ಕಾಂಗ್ರೆಸ್, ಉದ್ಯಮ, ಸರ್ಕಾರ, ಶಿಕ್ಷಣ ತಜ್ಞರು, ನವೋದ್ಯಮಗಳು ಮತ್ತು ಇತರ ಪ್ರಮುಖ ಪಾಲುದಾರರಿಗೆ ಹೊಸದಾದ ಪರಿಹಾರಗಳು, ಸೇವೆಗಳು ಮತ್ತು ಅತ್ಯಾಧುನಿಕ ಬಳಕೆಯ ಪ್ರಕರಣಗಳನ್ನು ಪ್ರದರ್ಶಿಸಲು ಜಗತ್ತಿನಾದ್ಯಂತ ಪ್ರಸಿದ್ಧ ವೇದಿಕೆಯಾಗಿದೆ. ತಂತ್ರಜ್ಞಾನ ಮತ್ತು ದೂರ ಸಂಪರ್ಕ ಪರಿಸರ ವ್ಯವಸ್ಥೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ 400 ಕ್ಕೂ ಹೆಚ್ಚು ಪ್ರದರ್ಶಕರು, ಸುಮಾರು 900 ಸ್ಟಾರ್ಟ್‌ಅಪ್‌ಗಳು ಮತ್ತು 120 ಕ್ಕೂ ಹೆಚ್ಚು ದೇಶಗಳಿಂದ ಭಾಗವಹಿಸುವಿಕೆಯನ್ನು ಒಳಗೊಂಡಿದೆ. ಈ ಕಾರ್ಯಕ್ರಮ 900 ಕ್ಕೂ ಹೆಚ್ಚು ತಂತ್ರಜ್ಞಾನದ ವಿಷಯಗಳನ್ನು ಪ್ರದರ್ಶಿಸುವ ಗುರಿ ಹೊಂದಿದೆ, 100 ಕ್ಕೂ ಹೆಚ್ಚು ಅಧಿವೇಶನಗಳನ್ನು ಆಯೋಜಿಸುತ್ತದೆ ಮತ್ತು 600 ಕ್ಕೂ ಹೆಚ್ಚು ಜಾಗತಿಕ ಮತ್ತು ಭಾರತೀಯ ಭಾಷಣಕಾರರ ಚರ್ಚೆಯನ್ನು ಏರ್ಪಡಿಸುತ್ತದೆ.

 

 

 

*****