Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ; ಉಜಿರೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ

ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ; ಉಜಿರೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಕರ್ನಾಟಕ ಭೇಟಿಯ ಪ್ರಥಮ ಚರಣದಲ್ಲಿ ಮಂಗಳೂರಿಗೆ ಆಗಮಿಸಿದರು. ಅಲ್ಲಿಂದ ಧರ್ಮಸ್ಥಳಕ್ಕೆ ತೆರಳಿದ ಅವರು, ಶ್ರೀ ಮಂಜುನಾಥಸ್ವಾಮಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಉಜಿರೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಪ್ರಧಾನಮಂತ್ರಿ ಜನ್ ಧನ್ ಯೋಜನೆಯ ಖಾತೆದಾರರಿಗೆ ರೂಪೆ ಕಾರ್ಡ್ ವಿತರಣೆ ಮಾಡಿದರು. “ಭೂತಾಯಿಯನ್ನು ರಕ್ಷಿಸೋಣ, ಮುಂದಿನ ಪೀಳಿಗೆಗೆ ವರ್ಗಾಯಿಸೋಣ’’ ಉದ್ಘಾಟನೆ ಅಂಗವಾಗಿ ಲಾಂಛನ ಅನಾವರಣ ಮಾಡಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಶ್ರೀ ಮಂಜುನಾಥ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸುವ ಅವಕಾಶ ದೊರೆತಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ಪ್ರಸಕ್ತ ಶತಮಾನ ಕೌಶಲ ಅಭಿವೃದ್ಧಿಯದಾಗಿದೆ. ಭಾರತ ಯುವಜನರ ದೇಶವಾಗಿದೆ, ನಾವು ನಮ್ಮ ಜನ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.

ನಮ್ಮ ಸಂತರು ಮತ್ತು ಶ್ರೀಗಳು ಶತಮಾನಗಳಿಂದ ಸಮಾಜಕ್ಕೆ ನೆರವಾಗುವಂಥ ಸಂಸ್ಥೆಗಳನ್ನು ಸ್ಥಾಪಿಸಿ ಪೋಷಿಸಿದ್ದಾರೆ ಎಂದು ಪ್ರಧಾನಿ ತಿಳಿಸಿದರು.

ರೂಪೆ ಕಾರ್ಡ್ ಗಳನ್ನು ಮಹಿಳಾ ಸ್ವ ಸಹಾಯ ಗುಂಪುಗಳಿಗೆ ವಿತರಿಸುವ ಅವಕಾಶ ದೊರೆತಿದ್ದರ ಬಗ್ಗೆ ಮಾತನಾಡಿದ ಪ್ರಧಾನಿಯವರು, ಡಿಜಿಟಲ್ ವಹಿವಾಟಿನೆಡೆಗಿನ ಉತ್ಸಾಹವನ್ನು ನೋಡಿ ತಮಗೆ ಸಂತಸವಾಗಿದೆ ಎಂದರು.

ಭೀಮ್ ಆಪ್ ಬಳಸುವಂತೆ ಮತ್ತು ನಗದು ರಹಿತ ವಹಿವಾಟು ಒಪ್ಪಿಕೊಳ್ಳುವಂತೆ ಜನತೆಗೆ ಮನವಿ ಮಾಡಿದರು. ಇದು ಪ್ರಾಮಾಣಿಕತೆ ಮತ್ತು ಏಕತೆಯ ಯುಗ; ಇಲ್ಲಿ ವ್ಯವಸ್ಥೆಗೆ ವಂಚಿಸುವವರಿಗೆ ಜಾಗವಿಲ್ಲ ಎಂದು ಪ್ರಧಾನಿ ಹೇಳಿದರು.

ಭಾರತ ಸರ್ಕಾರದಿಂದ ಬರುವ ಪ್ರತಿಯೊಂದು ರೂಪಾಯಿ ಮತ್ತು ಸಂಪನ್ಮೂಲವನ್ನು ಭಾರತೀಯರ ಕಲ್ಯಾಣಕ್ಕಾಗಿ ಸಮರ್ಪಿಸಲಾಗುವುದು ಎಂದರು. ಅಭಿವೃದ್ಧಿಯ ಲಾಭ, ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಸೂಕ್ತ ಫಲಾನುಭವಿಗಳಿಗೆ ತಲುಪಿಸುವುದನ್ನು ನಾವು ಖಾತ್ರಿ ಪಡಿಸಿಕೊಳ್ಳುತ್ತಿದ್ದೇವೆ ಎಂದರು.

ಈ ಯುಗದಲ್ಲಿ ಮತ್ತು ಸಮಯದಲ್ಲಿ ನಮಗೆ ಜಲ ಸಂರಕ್ಷಣೆ ಬಹುದೊಡ್ಡ ಸವಾಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ನಾವು ಪ್ರಕೃತಿಯೊಂದಿಗೆ ಸೌಹಾರ್ದವಾಗಿ ಬಾಳುವತ್ತ ಮಹತ್ವ ನೀಡಬೇಕೇ ಹೊರತು ಅಲ್ಪಕಾಲೀನ ಲಾಭದತ್ತ ಅಲ್ಲ ಎಂದರು. ಜಲ ಸಂರಕ್ಷಣೆಗೆ ನೆರವಾಗುವ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವಂತೆ ಕರ್ನಾಟಕದ ರೈತರಿಗೆ ಪ್ರಧಾನಿ ಕರೆ ನೀಡಿದರು.

***