ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದ್ವಿತೆರಿಗೆ ತಪ್ಪಿಸಲು ಮತ್ತು ಆದಾಯದ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ ಆರ್ಥಿಕ ವಂಚನೆ ತಡೆಯಲು ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ವಿಧ್ಯುಕ್ತ ಸಭೆಯ ಮೂರನೇ ಪ್ರೋಟೋಕಾಲ್ ಗೆ ಸ್ಥಿರೀಕರಣ ಮತ್ತು ಜಾರಿಗೆ ತನ್ನ ಅನುಮೋದನೆ ನೀಡಿದೆ. ಈ ಪ್ರೋಟೋಕಾಲ್ ಗೆ 2016ರ ಅಕ್ಟೋಬರ್ 26ರಂದು ಅಂಕಿತ ಹಾಕಲಾಗಿತ್ತು.
ಈ ಪ್ರೊಟೋಕಾಲ್ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಮಾಹಿತಿಯ ವಿನಿಮಯಕ್ಕೆ ಅವಕಾಶ ನೀಡಲಿದ್ದು, ಇದು, ತೆರಿಗೆ ತಪ್ಪಿಸುವುದು ಮತ್ತು ವಂಚನೆಯನ್ನು ಹತ್ತಿಕ್ಕಲು ಸಹಾಯ ಮಾಡಲಿದೆ. ಅಲ್ಲದೆ ಇದು ಎರಡೂ ರಾಷ್ಟ್ರಗಳ ನಡುವೆ ತೆರಿಗೆ ಆದಾಯ ಕ್ಲೇಮುಗಳ ಸಂಗ್ರಹಣೆಗೂ ನೆರವಾಗಲಿದೆ.
ಹಾಲಿ ಒಪ್ಪಂದದಲ್ಲಿರುವ ವಿಧಿ 26ರ ‘ಮಾಹಿತಿ ವಿನಿಮಯ’ ವನ್ನು ಪ್ರೋಟೋಕಾಲ್ ನ ಹೊಸ ವಿಧಿಯೊಂದಿಗೆ ಬದಲಾಯಿಸಲಾಗುತ್ತದೆ, ಇದು ಮಾಹಿತಿಯ ವಿನಿಮಯಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿದೆ.
ತೆರಿಗೆ ಸಂಗ್ರಹಣೆಗೆ ನೆರವಾಗುವ ಹೊಸ ವಿಧಿಯನ್ನು ಪ್ರೋಟೋಕಾಲ್ ನಲ್ಲಿ ಸೇರಿಸಲಾಗಿದೆ.
ಈ ಪ್ರೋಟೋಕಾಲ್ ಜಾರಿಗೆ ಬರಲು ಎರಡೂ ರಾಷ್ಟ್ರಗಳ ಕಾನೂನಿನ ಅಗತ್ಯಕ್ಕೆ ಅನುಗುಣವಾದ ಪ್ರಕ್ರಿಯೆಗಳು ಪೂರ್ಣಗೊಂಡು ಅಧಿಸೂಚನೆ ಆದ ಬಳಿಕ ಈ ಪ್ರೋಟೋಕಾಲ್ ಜಾರಿಗೆ ಬರಲಿದೆ.
ಹಿನ್ನೆಲೆ:
ಆದಾಯ ತೆರಿಗೆ ಕಾಯಿದೆ 1961ರ ಅಡಿಯಲ್ಲಿ ಆದಾಯಕ್ಕೆ ಸಲ್ಲಿಸಬೇಕಾದ ತೆರಿಗೆ ತಪ್ಪಿಸುವುದು ಅಥವಾ ವಂಚಿಸುವುದನ್ನು ತಡೆಯಲು ಆದಾಯ ತೆರಿಗೆಯನ್ನು ವಸೂಲಿ ಮಾಡಲು ಮತ್ತು ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ವಿದೇಶ ಅಥವಾ ನಿರ್ದಿಷ್ಟ ಸೀಮೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 90 ಅಡಿಯಲ್ಲಿ ಕೇಂದ್ರ ಸರ್ಕಾರ ಅಧಿಕಾರ ಹೊಂದಿದೆ. ಈ ಒಪ್ಪಂದ 1986ರ ಡಿಸೆಂಬರ್ 3ರಿಂದ ಜಾರಿಗೆ ಬಂದಿದೆ.
ಈ ಒಪ್ಪಂದವನ್ನು 1997ರಲ್ಲಿ ಪ್ರಥಮ ಪ್ರೋಟೋಕಾಲ್ ಮೂಲಕ ಮತ್ತು 2000ದಲ್ಲಿ ಎರಡನೇ ಪ್ರೋಟೋಕಾಲ್ ಮೂಲಕ ತಿದ್ದುಪಡಿ ಮಾಡಲಾಗಿತ್ತು. ನಂತರದಲ್ಲಿ ಮಾಹಿತಿಯ ವಿನಿಮಯವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಪಡೆಯಲು ಮತ್ತು ತೆರಿಗೆಯನ್ನು ಸಂಗ್ರಹಿಸಲು ನೆರವಾಗುವ ವಿಧಿ ಸೇರಿಸಲು ಮೂರನೇ ಪ್ರೋಟೋಕಾಲ್ ಮೂಲಕ ಮತ್ತಷ್ಟು ತಿದ್ದುಪಡಿ ಮಾಡಲು ಭಾರತ ಪ್ರಸ್ತಾಪಿಸಿತ್ತು. ಆ ಪ್ರಕಾರವಾಗಿ, ನ್ಯೂಜಿಲ್ಯಾಂಡ್ ನೊಂದಿಗೆ ಮಾತುಕತೆಗಳು ನಡೆದು, ಮೂರನೇ ಪ್ರೋಟೋಕಾಲ್ ನಲ್ಲಿ ಎರಡೂ ವಿಧಿ ಸೇರಿಸಲು ಒಪ್ಪಂದಕ್ಕೆ ಬರಲಾಗಿದೆ.
AKT/VB/SH