Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೇಶವ್ಯಾಪಿ ಫಿಟ್ ಇಂಡಿಯಾ ಆಂದೋಲನಕ್ಕೆ ಪ್ರಧಾನಮಂತ್ರಿ ಚಾಲನೆ


ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಕ್ರೀಡಾ ದಿನದ ಸಂದರ್ಭದಲ್ಲಿ ನವ ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿಂದು ಸಮಾಜದ ವಿವಿಧ ವರ್ಗದ ಸಾವಿರಾರು ಜನರ ಸಮ್ಮುಖದಲ್ಲಿ ಫಿಟ್ ಇಂಡಿಯಾ ಆಂದೋಲನಕ್ಕೆ ಚಾಲನೆ ನೀಡಿದರು. ‘ಫಿಟ್ ಇಂಡಿಯಾ ಆಂದೋಲನ’ ರಾಷ್ಟ್ರೀಯ ಗುರಿಯಾಗಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ದೇಶವನ್ನು ಪ್ರೇರೇಪಿಸುವ ಪ್ರಯತ್ನವಾಗಿ, ಸರ್ಕಾರದಿಂದ ಫಿಟ್ ಇಂಡಿಯಾ ಆಂದೋಲನ ಆರಂಭಿಸಲಾಗಿದೆ, ಆದರೆ ಇದನ್ನು ಯಶಸ್ವಿಗೊಳಿಸಲು ಜನರೇ ಮುಂದಾಳತ್ವವಹಿಸಬೇಕು ಎಂದು ಪ್ರಧಾನಮಂತ್ರಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಶ್ರೀ ರಮೇಶ್ ಪೋಖ್ರೀಯಾಲ್ ನಿಶಾಂಕ್ ಮತ್ತು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಕಿರಣ್ ರಿಜಿಜು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನೇರ ಪ್ರಸಾರ ದೇಶದಾದ್ಯಂತ ಜನರ ಪಾಲ್ಗೊಳ್ಳುವಿಕೆಯನ್ನು ಖಾತ್ರಿ ಪಡಿಸಿತು.

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಕಿರಣ್ ರಿಜಿಜು ಪ್ರಧಾನಮಂತ್ರಿಯವರನ್ನು ಸ್ವಾಗತಿಸಿ, ಅವರೇ ಈ ಆಂದೋಲನಕ್ಕೆ ಸ್ಫೂರ್ತಿ ಎಂದು ತಿಳಿಸಿದರು. 2019ರ ಆಗಸ್ಟ್ 25ರಂದು ತಮ್ಮ ಮನ್ ಕಿ ಬಾತ್ ಆವೃತ್ತಿಯಲ್ಲಿ ಪ್ರಧಾನಮಂತ್ರಿಯವರು ಫಿಟ್ ಇಂಡಿಯಾ ಆಂದೋಲನದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಬಲಿಷ್ಠ ಮತ್ತು ಪ್ರಗತಿಪರ ಭಾರತ ಫಿಟ್ ಇಂಡಿಯಾಗೆ ಕರೆ ನೀಡುತ್ತದೆ ಎಂದು ಸಚಿವರು ಹೇಳಿದರು. ಪ್ರತಿಯೊಬ್ಬರೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು ಎಂದು ಶ್ರೀ ರಿಜಿಜು ಹೇಳಿದರು.

ಉದ್ಘಾಟನಾ ಭಾಷಣದ ಬಳಿಕ ಅತ್ಯುನ್ನತ ಚೈತನ್ಯದಿಂದ ಕೂಡಿದ ಅರ್ಧ ಗಂಟೆಗಳ ಕಾರ್ಯಕ್ರಮ ನಡೆಯಿತು. ಇದರಲ್ಲಿ ಭಾರತದ ಶ್ರೀಮಂತ ಕ್ರೀಡಾ ಪರಂಪರೆ ಮತ್ತು ನೃತ್ಯ ಪ್ರಕಾರದ ಅನಾವರಣವಾಯಿತು, ಮತ್ತು ಅದರಲ್ಲಿ ಸದೃಢತೆ ಮಹತ್ವವನ್ನು ಸಾರಲಾಯಿತು. ಕ್ರೀಡಾ ಚಟುವಟಿಕೆಗಳಾದ ಕುಸ್ತಿ, ಕಬಡ್ಡಿ, ಗಡ್ಕ, ಖೋ-ಖೋ, ಮಲ್ಲಕಂಬ, ಕಲಿರ್ಯಪಟ್ಟು ಮತ್ತು ಹಲವು ಇತರ ಕ್ರೀಡಾ ಚಟುವಟಿಕೆಗಳು ಭಾರತೀಯರಲ್ಲಿ ದೇಹದ ಸದೃಢತೆಯ ಸುಧಾರಣೆಗೆ ಸಾಧನಗಳಾಗಿವೆ. ಇದರ ಜೊತೆಗೆ ಪುರುಷರು ಮತ್ತು ಮಹಿಳೆಯರು ಹಬ್ಬದ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ, ವಿವಿಧ ಪ್ರಾದೇಶಿಕ ನೃತ್ಯ ಪ್ರಕಾರಗಳಲ್ಲಿ ಭಾಗಿಯಾಗುತ್ತಿದ್ದಾರೆ, ಇದು ಕೂಡ ಸದೃಢತೆಯ ಸಾಕಾರಕ್ಕೆ ಕೊಡುಗೆ ನೀಡುತ್ತಿವೆ. ಈಗ ತಾಂತ್ರಿಕ ಅಭಿವೃದ್ಧಿಯಿಂದಾಗಿ, ವೇಗದ ಜೀವನ ಶೈಲಿ ಮತ್ತು ಮೊಬೈಲ್ ಫೋನ್ ಗಳ ಪ್ರತೀಕೂಲ ಪರಿಣಾಮದಿಂದಾಗಿ, ಈ ದೇಶೀಯವಾದ ಸದೃಢತೆಯ ಪ್ರಕಾರಗಳು ತಮ್ಮ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿವೆ, ಆದರೆ ಇವೆಲ್ಲವೂ ಸದೃಢವಾಗಿರಲು ಉತ್ತಮ ಮಾರ್ಗಗಳಾಗಿವೆ. ಈ ಪ್ರದರ್ಶನವು ಜಡ ಜೀವನ ಶೈಲಿಯನ್ನು ತೊರೆದು, ದೈನಂದಿನ ಬದುಕಿನಲ್ಲಿ ಕ್ರಿಯಾಶೀಲತೆಯ ಅಗತ್ಯವನ್ನು ಒತ್ತಿ ಹೇಳಿತು.

ಪ್ರಧಾನಮಂತ್ರಿಯರ ಕಲ್ಪನೆಯ ರಾಷ್ಟ್ರವ್ಯಾಪಿ ಫಿಟ್ ಇಂಡಿಯಾ ಆಂದೋಲನ ಪ್ರತಿಯೊಬ್ಬ ಭಾರತೀಯರೂ ತಮ್ಮ ದೈನಂದಿನ ಬದುಕಿನಲ್ಲಿ ಸದೃಢವಾಗಿರಲು ಸರಳವಾದ, ಸುಲಭವಾದ ಮಾರ್ಗಗಳನ್ನು ಸಂಯೋಜಿಸಲು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮದ ವಿಶೇಷತೆಗಳಲ್ಲಿ ರಾಷ್ಟ್ರೀಯ ಸದೃಢತೆಯುಳ್ಳವರ ಸಾಕ್ಷಾತ್ ಉಪಸ್ಥಿತಿಯೂ ಒಂದಾಗಿತ್ತು. ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ತಮ್ಮ ವಯಸ್ಸನ್ನೂ ಲೆಕ್ಕಿಲದೆ ತಮ್ಮ ಸದೃಢತೆಗೆ ನಿರಂತರವಾಗಿ ಸಮರ್ಪಿತರಾಗಿರುವವನ್ನು ಆಯ್ಕೆ ಮಾಡಿತ್ತು. 101 ವರ್ಷದ ಮಾನ್ ಕೌರ್ ಇಂದಿಗೂ ಮ್ಯಾರಥಾನ್ ನಲ್ಲಿ ಓಡುತ್ತಾರೆ, 81 ವರ್ಷದ ಉಷಾ ಸೋಮನ್ ಈಗಲೂ ಪುಷ್ ಅಪ್ಸ್ ಮಾಡುತ್ತಾರೆ ಮತ್ತು ಮ್ಯಾರಥಾನ್ ಗಳಲ್ಲಿ ತಮ್ಮ ಪುತ್ರನೊಂದಿಗೆ ಓಡುತ್ತಾರೆ ಇಂಥ 20 ಶ್ರೇಷ್ಠರನ್ನು ಸದೃಢ ಜೀವನದತ್ತ ಸಾರ್ವಜನಿಕರಿಗೆ ಪ್ರೇರಣೆ ನೀಡಲು ಆಯ್ಕೆ ಮಾಡಲಾಗಿತ್ತು. ಈ ವರ್ಷ ಕ್ರೀಡಾ ಪ್ರಶಸ್ತಿಗೆ ಭಾಜನರಾಗಿರುವವರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಕಾರ್ಯಕ್ರಮದಿಂದ ಪ್ರೇರಣೆ ಪಡೆದ ಸಾವಿರಾರು ಶಾಲಾ ಮಕ್ಕಳು, ಸೈಕಲ್ ಸ್ಪರ್ಧಿಗಳು, ಜಾಗಿಂಗ್ ಮಾಡುವವರು, ಓಟಗಾರರು, ಏರೋಬಿಕ್ ನೃತ್ಯ ಸ್ಪರ್ಧಿಗಳು ಇಂದಿರಾಗಾಂಧಿ ಕ್ರೀಡಾಂಗಣದ ಮೈದಾನಕ್ಕೆ ಇಂದು ಬೆಳಗ್ಗೆಯೇ ಆಗಮಿಸಿ, ಸದೃಢತೆಯ ವಿವಿಧ ಶ್ರೇಣಿಗಳ ಪ್ರದರ್ಶನ ನಡೆಸಿಕೊಟ್ಟರು.

*******