ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಜನವರಿ 27 ರಂದು ಸಂಜೆ ಸುಮಾರು 4:30ಕ್ಕೆ ದೆಹಲಿಯ ಕಾರಿಯಪ್ಪ ಪರೇಡ್ ಮೈದಾನದಲ್ಲಿ ವಾರ್ಷಿಕ ಎನ್ ಸಿ ಸಿ ಪಿ ಎಂ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈ ವರ್ಷದ ಗಣರಾಜ್ಯೋತ್ಸವ ಶಿಬಿರದಲ್ಲಿ ಒಟ್ಟು 2,361 ಎನ್ ಸಿ ಸಿ ಕೆಡೆಟ್ಟ್ ಗಳು ಭಾಗಿಯಾಗಿದ್ದಾರೆ. ಈ ಪೈಕಿ 917 ಬಾಲಕಿ ಕೆಡೆಟ್ ಗಳು ಸೇರಿದ್ದು, ಈವರೆಗಿನ ಅತಿ ಹೆಚ್ಚು ಹೆಣ್ಣು ಮಕ್ಕಳ ಭಾಗವಹಿಸುವಿಕೆಯಾಗಿದೆ. ಪಿಎಂ ರ‍್ಯಾಲಿಯಲ್ಲಿ ಈ ಕೆಡೆಟ್ ಗಳ ಭಾಗವಹಿಸುವಿಕೆಯೊಂದಿಗೆ ನವದೆಹಲಿಯಲ್ಲಿ ಒಂದು ತಿಂಗಳ ಕಾಲ ನಡೆದ ಎನ್ ಸಿ ಸಿ ಗಣರಾಜ್ಯೋತ್ಸವ ಶಿಬಿರ 2025 ಯಶಸ್ವಿಯಾಗಿ ಸಮಾಪನಗೊಳ್ಳಲಿದೆ. ಈ ವರ್ಷದ ಎನ್ ಸಿ ಸಿ ಪಿಎಂ ರ‍್ಯಾಲಿಯ ಧ್ಯೇಯ ವಾಕ್ಯ ‘ಯುವ ಶಕ್ತಿ, ವಿಕಸಿತ ಭಾರತ’.
ರಾಷ್ಟ್ರ ನಿರ್ಮಾಣದ ಕಡೆಗೆ ಎನ್ ಸಿ ಸಿ ಬದ್ಧತೆಯನ್ನು ಪ್ರದರ್ಶಿಸುವ ಸಾಂಸ್ಕೃತಿಕ ಕಾರ್ಯಕ್ರಮವನ್ನು 800 ಕ್ಕೂ ಹೆಚ್ಚು ಕೆಡೆಟ್ ಗಳು ಪ್ರಸ್ತುತಪಡಿಸಲಿದ್ದಾರೆ. 18 ವಿದೇಶಿ ಮಿತ್ರ ದೇಶಗಳ 144 ಯುವ ಕೆಡೆಟ್ ಗಳ ಭಾಗವಹಿಸುವಿಕೆಯು ಈ ವರ್ಷದ ರ‍್ಯಾಲಿಯ ಮೆರುಗನ್ನು ಹೆಚ್ಚಿಸಲಿದೆ.
ಮೇರಾ ಯುವ (ಎಂವೈ) ಭಾರತ್, ಶಿಕ್ಷಣ ಸಚಿವಾಲಯ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದಡಿ ದೇಶಾದ್ಯಂತದ 650 ಕ್ಕೂ ಹೆಚ್ಚು ಸ್ವಯಂಸೇವಕರು ಎನ್‌ಸಿಸಿ ಪಿಎಂ ರ‍್ಯಾಲಿಯಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
*****