ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯಲ್ಲಿ 12,200 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವುದು ಮತ್ತು ಸುಗಮ ಪ್ರಯಾಣವನ್ನು ಖಾತ್ರಿಪಡಿಸುವುದು ಯೋಜನೆಗಳ ಆದ್ಯ ಗಮನವಾಗಿದೆ. ಪ್ರಧಾನಮಂತ್ರಿಯವರು ಸಾಹಿಬಾಬಾದ್ ಆರ್.ಆರ್.ಟಿಎಸ್ ನಿಲ್ದಾಣದಿಂದ ನ್ಯೂ ಅಶೋಕ್ ನಗರ ಆರ್.ಆರ್.ಟಿಎಸ್ ನಿಲ್ದಾಣದವರೆಗೆ ನಮೋ ಭಾರತ್ ರೈಲಿನಲ್ಲಿ ಪ್ರಯಾಣಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು, ದೆಹಲಿ-ಎನ್.ಸಿಆರ್ ಭಾರತ ಸರ್ಕಾರದಿಂದ ಮಹತ್ವದ ಉಡುಗೊರೆಯನ್ನು ಪಡೆದಿದೆ ಮತ್ತು ಭಾರತದ ನಗರ ಸಂಚಾರ ಮತ್ತಷ್ಟು ವಿಸ್ತರಿಸಿದೆ ಎಂದು ಹೇಳಿದರು. ಅಭಿವೃದ್ಧಿ ಹೊಂದಿದ ಭಾರತೀಯ ನಗರಗಳಲ್ಲಿ ಸಾರ್ವಜನಿಕ ಸಾರಿಗೆಯ ಭವಿಷ್ಯವನ್ನು ಪ್ರದರ್ಶಿಸುವ ನಮೋ ಭಾರತ್ ರೈಲಿನಲ್ಲಿ ಸಾಹಿಬಾಬಾದ್ ನಿಂದ ನ್ಯೂ ಅಶೋಕ್ ನಗರಕ್ಕೆ ಬೆಳಗ್ಗ ತಾವು ಪ್ರಯಾಣಿಸಿದ್ದನ್ನು ಸ್ಮರಿಸಿದ ಶ್ರೀ ಮೋದಿ ಅವರು, ಸಂತಸ ಮತ್ತು ಭರವಸೆ ತುಂಬಿದ ಅನೇಕ ಯುವಕರೊಂದಿಗೆ ಸಂವಾದ ನಡೆಸಿದ್ದಾಗಿ ಹೇಳಿದರು. ನಮೋ ಭಾರತ್ ಯೋಜನೆ ಪೂರ್ಣಗೊಂಡ ನಂತರ, ದೆಹಲಿ-ಮೀರತ್ ಮಾರ್ಗದ ಸಂಚಾರದಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ದೆಹಲಿ-ಎನ್.ಸಿಆರ್ ಜನತೆಗೆ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
“ಇಂದು ಭಾರತದ ಆಧುನಿಕ ಮೂಲಸೌಕರ್ಯ ಪ್ರಯಾಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ದಾಖಲಾಗಿದೆ” ಎಂದು ಶ್ರೀ ಮೋದಿ ಹೇಳಿದರು. ಭಾರತದ ಮೆಟ್ರೋ ಜಾಲವು ಈಗ 1,000 ಕಿಲೋಮೀಟರ್ ತಲುಪಿದೆ ಎಂದು ಅವರು ಒತ್ತಿ ಹೇಳಿದರು ಮತ್ತು ಇದು ಗಮನಾರ್ಹ ಸಾಧನೆ ಎಂದು ಶ್ಲಾಘಿಸಿದರು. 2014 ರಲ್ಲಿ, ದೇಶವು ಅವರಿಗೆ ಅವಕಾಶವನ್ನು ನೀಡಿದಾಗ, ಮೆಟ್ರೋ ಸಂಪರ್ಕದ ವಿಷಯದಲ್ಲಿ ಭಾರತವು ಜಾಗತಿಕವಾಗಿ ಅಗ್ರ ಹತ್ತರಲ್ಲಿ ಇರಲಿಲ್ಲ. ಆದಾಗ್ಯೂ, ಕಳೆದ ಹತ್ತು ವರ್ಷಗಳಲ್ಲಿ, ಮೆಟ್ರೋ ಜಾಲದ ವಿಷಯದಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿದೆ ಎಂದು ಅವರು ಹೇಳಿದರು. ತಮ್ಮ ಸರ್ಕಾರದ ಪ್ರಸ್ತುತ ಅಧಿಕಾರಾವಧಿಯಲ್ಲಿ, ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಲಿದೆ ಎಂದು ಪ್ರಧಾನಮಂತ್ರಿ ಪ್ರತಿಪಾಸಿದರು.
2014ಕ್ಕೆ ಮೊದಲು ಭಾರತದ ಮೆಟ್ರೋ ಜಾಲ ಕೇವಲ 248 ಕಿಲೋಮೀಟರ್ ಆಗಿತ್ತು ಮತ್ತು ಕೇವಲ ಐದು ನಗರಗಳಿಗೆ ಸೀಮಿತವಾಗಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಕಳೆದ ಹತ್ತು ವರ್ಷಗಳಲ್ಲಿ, ಭಾರತದಲ್ಲಿ 752 ಕಿಲೋಮೀಟರ್ ಹೊಸ ಮೆಟ್ರೋ ಮಾರ್ಗಗಳನ್ನು ಉದ್ಘಾಟಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. ಇಂದು, ದೇಶಾದ್ಯಂತ 21 ನಗರಗಳಲ್ಲಿ ಮೆಟ್ರೋ ರೈಲುಗಳು ಕಾರ್ಯನಿರ್ವಹಿಸುತ್ತಿವೆ, ಪ್ರಸ್ತುತ 1,000 ಕಿಲೋಮೀಟರ್ ಮೆಟ್ರೋ ಮಾರ್ಗಗಳು ತ್ವರಿತ ಅಭಿವೃದ್ಧಿಯಲ್ಲಿವೆ ಎಂದೂ ಅವರು ಹೇಳಿದರು.
ಎರಡು ಹೊಸ ಮಾರ್ಗಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುವುದರೊಂದಿಗೆ ದೆಹಲಿ ಮೆಟ್ರೋದ ವಿಸ್ತರಣೆಯ ಬಗ್ಗೆ ಉಲ್ಲೇಖಿಸಿದ ಶ್ರೀ ಮೋದಿ, ಗುರಗಾಂವ್ ನಂತರ ಹರಿಯಾಣದ ಮತ್ತೊಂದು ಭಾಗವನ್ನು ಈಗ ಮೆಟ್ರೋ ಜಾಲಕ್ಕೆ ಸಂಪರ್ಕಿಸಲಾಗುತ್ತಿದೆ ಎಂದು ಹೇಳಿದರು. ರಿಥಾಲಾ-ನರೇಲಾ-ಕುಂಡ್ಲಿ ಕಾರಿಡಾರ್ ದೆಹಲಿ ಮೆಟ್ರೋ ಜಾಲದ ಅತಿದೊಡ್ಡ ವಿಭಾಗಗಳಲ್ಲಿ ಒಂದಾಗಿದೆ, ದೆಹಲಿ ಮತ್ತು ಹರಿಯಾಣದ ಪ್ರಮುಖ ಕೈಗಾರಿಕಾ ಕೇಂದ್ರಗಳ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ ಮತ್ತು ಜನರಿಗೆ ಪ್ರಯಾಣವನ್ನು ಸುಗಮಗೊಳಿಸುತ್ತದೆ ಎಂದು ಅವರು ಹೇಳಿದರು. ಭಾರತ ಸರ್ಕಾರದ ನಿರಂತರ ಪ್ರಯತ್ನಗಳಿಂದಾಗಿ, ದೆಹಲಿಯಲ್ಲಿ ಮೆಟ್ರೋ ಮಾರ್ಗಗಳು ಸ್ಥಿರವಾಗಿ ಹೆಚ್ಚುತ್ತಿವೆ ಎಂದು ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು ಮತ್ತು 2014 ರಲ್ಲಿ, ದೆಹಲಿ-ಎನ್.ಸಿ.ಆರ್.ನಲ್ಲಿ ಒಟ್ಟು ಮೆಟ್ರೋ ಜಾಲವು 200 ಕಿಲೋಮೀಟರ್ ಗಿಂತ ಕಡಿಮೆ ಇತ್ತು ಮತ್ತು ಇಂದು ಅದು ದ್ವಿಗುಣಗೊಂಡಿದೆ ಎಂದು ಹೇಳಿದರು.
“ಕಳೆದ ದಶಕದಿಂದ, ಸರ್ಕಾರದ ಆದ್ಯ ಗಮನವು ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಇದೆ” ಎಂದು ಶ್ರೀ ಮೋದಿ ಹೇಳಿದರು. ಹತ್ತು ವರ್ಷಗಳ ಹಿಂದೆ, ಮೂಲಸೌಕರ್ಯಕ್ಕಾಗಿ ಬಜೆಟ್ ಸುಮಾರು 2 ಲಕ್ಷ ಕೋಟಿ ರೂ.ಗಳಷ್ಟಿತ್ತು, ಅದು ಈಗ 11 ಲಕ್ಷ ಕೋಟಿ ರೂ.ಗೆ ಏರಿದೆ ಎಂದು ಅವರು ಉಲ್ಲೇಖಿಸಿದರು. ಆಧುನಿಕ ಸಂಪರ್ಕಕ್ಕೆ, ವಿಶೇಷವಾಗಿ ನಗರಗಳ ಒಳಗೆ ಮತ್ತು ಒಂದು ನಗರವನ್ನು ಇನ್ನೊಂದಕ್ಕೆ ಸಂಪರ್ಕಿಸಲು ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು. ದೆಹಲಿಯಿಂದ ವಿವಿಧ ನಗರಗಳಿಗೆ ಎಕ್ಸ್ ಪ್ರೆಸ್ ಹೆದ್ದಾರಿಗಳು ಈಗ ಹೊರಹೊಮ್ಮುತ್ತಿವೆ ಮತ್ತು ದೆಹಲಿಯನ್ನು ಕೈಗಾರಿಕಾ ಕಾರಿಡಾರ್ ಗಳಿಗೆ ಸಂಪರ್ಕಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಎನ್.ಸಿ.ಆರ್.ನಲ್ಲಿ, ದೊಡ್ಡ ಮಲ್ಟಿ-ಮಾಡೆಲ್ ಲಾಜಿಸ್ಟಿಕ್ಸ್ ಹಬ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ದೆಹಲಿ-ಎನ್.ಸಿ.ಆರ್.ನಲ್ಲಿ ಎರಡು ಸರಕು ಕಾರಿಡಾರ್ ಗಳು ಒಗ್ಗೂಡುತ್ತಿವೆ ಎಂದು ಅವರು ಹೇಳಿದರು. ಈ ಯೋಜನೆಗಳು ದೇಶದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿವೆ ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. “ಆಧುನಿಕ ಮೂಲಸೌಕರ್ಯವು ಬಡವರು ಮತ್ತು ಮಧ್ಯಮ ವರ್ಗದವರು ಸೇರಿದಂತೆ ಎಲ್ಲರಿಗೂ ಗೌರವಯುತ ಮತ್ತು ಗುಣಮಟ್ಟದ ಜೀವನವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತಿದೆ” ಎಂದು ಅವರು ಹೇಳಿದರು.
ಕಡು ಬಡವರಿಗೆ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡುವ ಸರ್ಕಾರದ ಗಮನದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಆಯುಷ್ ಮತ್ತು ಆಯುರ್ವೇದದಂತಹ ಸಾಂಪ್ರದಾಯಿಕ ಭಾರತೀಯ ವೈದ್ಯ ಪದ್ಧತಿಗಳನ್ನು ಸರ್ಕಾರ ಉತ್ತೇಜಿಸುತ್ತಿದೆ ಎಂದರು. ಕಳೆದ ದಶಕದಲ್ಲಿ, ಆಯುಷ್ ವ್ಯವಸ್ಥೆಯು 100 ಕ್ಕೂ ಹೆಚ್ಚು ದೇಶಗಳಿಗೆ ವಿಸ್ತರಿಸಿದೆ ಎಂದು ಅವರು ಹೇಳಿದರು. ಸಾಂಪ್ರದಾಯಿಕ ಔಷಧಕ್ಕೆ ಸಂಬಂಧಿಸಿದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್.ಒ)ಯ ಸಂಸ್ಥೆಯನ್ನು ಮೊಟ್ಟ ಮೊದಲು ಭಾರತದಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಕೆಲವು ವಾರಗಳ ಹಿಂದೆ ತಾವು ಅಖಿಲ ಭಾರತ ಆಯುರ್ವೇದ ಸಂಸ್ಥೆಯ ಎರಡನೇ ಹಂತವನ್ನು ಉದ್ಘಾಟಿಸಿದ್ದಾಗಿ ಅವರು ಹೇಳಿದರು. ಇಂದು ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಹೇಳಿದ ಶ್ರೀ ಮೋದಿ, ಈ ಸಾಧನೆಗಾಗಿ ದೆಹಲಿಯ ಜನತೆಗೆ ವಿಶೇಷ ಅಭಿನಂದನೆ ಸಲ್ಲಿಸಿದರು.
“ಭಾರತವು ವಿಶ್ವದ ಆರೋಗ್ಯ ಮತ್ತು ಸ್ವಾಸ್ಥ್ಯ ರಾಜಧಾನಿಯಾಗುವ ಅಪಾರ ಸಾಮರ್ಥ್ಯವನ್ನು ಹೊಂದಿದೆ” ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. “ಮೇಕ್ ಇನ್ ಇಂಡಿಯಾ” ಜೊತೆಗೆ ಜಗತ್ತು “ಹೀಲ್ ಇನ್ ಇಂಡಿಯಾ” ವನ್ನು ಮಂತ್ರವಾಗಿ ಅಳವಡಿಸಿಕೊಳ್ಳುವ ದಿನ ದೂರವಿಲ್ಲ ಎಂದು ಅವರು ಹೇಳಿದರು. ಭಾರತದಲ್ಲಿ ಆಯುಷ್ ಚಿಕಿತ್ಸೆಗಳನ್ನು ಪಡೆಯಲು ವಿದೇಶಿ ನಾಗರಿಕರಿಗೆ ಅನುಕೂಲವಾಗುವಂತೆ, ವಿಶೇಷ ಆಯುಷ್ ವೀಸಾ ಸೌಲಭ್ಯವನ್ನು ಪರಿಚಯಿಸಲಾಗಿದೆ ಮತ್ತು ಅಲ್ಪಾವಧಿಯಲ್ಲಿ, ನೂರಾರು ವಿದೇಶಿ ಪ್ರಜೆಗಳು ಈ ಸೌಲಭ್ಯದಿಂದ ಪ್ರಯೋಜನ ಪಡೆದಿದ್ದಾರೆ ಎಂದು ಅವರು ಹೇಳಿದರು. ಭಾರತ ಸರ್ಕಾರದ ಈ ಪ್ರಯತ್ನಗಳು ದೆಹಲಿಯನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಮನೋಹರ್ ಲಾಲ್, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ವಿನಯ್ ಕುಮಾರ್ ಸಕ್ಸೇನಾ, ದೆಹಲಿ ಮುಖ್ಯಮಂತ್ರಿ ಶ್ರೀಮತಿ ಅತಿಶಿ ಸೇರಿದಂತೆ ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವಲ್ಲಿ ಮಹತ್ವದ ಮೈಲಿಗಲ್ಲಾಗಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು, ಸಾಹಿಬಾಬಾದ್ ಮತ್ತು ನ್ಯೂ ಅಶೋಕ್ ನಗರ ನಡುವೆ ಸುಮಾರು 4,600 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ 13 ಕಿ.ಮೀ ಉದ್ದದ ದೆಹಲಿ-ಗಾಜಿಯಾಬಾದ್-ಮೀರತ್ ನಮೋ ಭಾರತ್ ಕಾರಿಡಾರ್ ಅನ್ನು ಉದ್ಘಾಟಿಸಿದರು. ಈ ಉದ್ಘಾಟನೆಯೊಂದಿಗೆ, ದೆಹಲಿ ತನ್ನ ಮೊದಲ ನಮೋ ಭಾರತ್ ಸಂಪರ್ಕವನ್ನು ಪಡೆದಿದೆ. ಇದು ದೆಹಲಿ ಮತ್ತು ಮೀರತ್ ನಡುವಿನ ಪ್ರಯಾಣವನ್ನು ಗಮನಾರ್ಹವಾಗಿ ಸುಗಮಗೊಳಿಸುತ್ತದೆ ಮತ್ತು ಸಾಟಿಯಿಲ್ಲದ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯೊಂದಿಗೆ ಹೈಸ್ಪೀಡ್ ಮತ್ತು ಆರಾಮದಾಯಕ ಪ್ರಯಾಣದ ಮೂಲಕ ಲಕ್ಷಾಂತರ ಜನರಿಗೆ ಪ್ರಯೋಜನವನ್ನು ನೀಡುತ್ತದೆ.
ಸುಮಾರು 1,200 ಕೋಟಿ ರೂ.ಗಳ ಮೌಲ್ಯದ ದೆಹಲಿ ಮೆಟ್ರೋ ಹಂತ -4 ರ ಜನಕ್ಪುರಿ ಮತ್ತು ಕೃಷ್ಣ ಪಾರ್ಕ್ ನಡುವಿನ 2.8 ಕಿ.ಮೀ ಉದ್ದದ ಮಾರ್ಗವನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು. ಇದು ದೆಹಲಿ ಮೆಟ್ರೋ ಹಂತ -4 ರ ಮೊದಲ ವಿಸ್ತರಣೆಯಾಗಿದೆ. ಪಶ್ಚಿಮ ದೆಹಲಿಯ ಪ್ರದೇಶಗಳಾದ ಕೃಷ್ಣ ಪಾರ್ಕ್, ವಿಕಾಸಪುರಿಯ ಕೆಲವು ಭಾಗಗಳು, ಜನಕ್ಪುರಿ ಮುಂತಾದವುಗಳಿಗೆ ಪ್ರಯೋಜನವಾಗಲಿದೆ.
ಸುಮಾರು 6,230 ಕೋಟಿ ರೂಪಾಯಿ ಮೌಲ್ಯದ ದೆಹಲಿ ಮೆಟ್ರೋ ಹಂತ -4 ರ 26.5 ಕಿ.ಮೀ ರಿಥಾಲಾ – ಕುಂಡ್ಲಿ ವಿಭಾಗಕ್ಕೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು. ಈ ಕಾರಿಡಾರ್ ದೆಹಲಿಯ ರಿಥಾಲಾವನ್ನು ಹರಿಯಾಣದ ನಾಥುಪುರ್ (ಕುಂಡ್ಲಿ) ಗೆ ಸಂಪರ್ಕಿಸುತ್ತದೆ, ಇದು ದೆಹಲಿ ಮತ್ತು ಹರಿಯಾಣದ ವಾಯುವ್ಯ ಭಾಗಗಳಲ್ಲಿ ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ರೋಹಿಣಿ, ಬವಾನಾ, ನರೇಲಾ ಮತ್ತು ಕುಂಡ್ಲಿ ಪ್ರಮುಖ ತಾಣಗಳಾಗಿವೆ, ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ವಲಯಗಳಿಗೆ ಪ್ರವೇಶವನ್ನು ಸುಧಾರಿಸುತ್ತವೆ. ಇದು ಕಾರ್ಯರೂಪಕ್ಕೆ ಬಂದ ನಂತರ, ವಿಸ್ತೃತ ಕೆಂಪು ಮಾರ್ಗದ ಮೂಲಕ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದಾದ್ಯಂತ ಪ್ರಯಾಣಿಸಲು ಅನುಕೂಲವಾಗಲಿದೆ.
ನವದೆಹಲಿಯ ರೋಹಿಣಿಯಲ್ಲಿ ಸುಮಾರು 185 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವ ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆ (ಸಿಎಆರ್.ಐ)ಯ ಹೊಸ ಅತ್ಯಾಧುನಿಕ ಕಟ್ಟಡಕ್ಕೂ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು. ಕ್ಯಾಂಪಸ್ ಅತ್ಯಾಧುನಿಕ ಆರೋಗ್ಯ ಮತ್ತು ವೈದ್ಯಕೀಯ ಮೂಲಸೌಕರ್ಯಗಳನ್ನು ಒದಗಿಸುತ್ತದೆ. ಹೊಸ ಕಟ್ಟಡವು ಆಡಳಿತಾತ್ಮಕ ಬ್ಲಾಕ್, ಒಪಿಡಿ ಬ್ಲಾಕ್, ಐಪಿಡಿ ಬ್ಲಾಕ್ ಮತ್ತು ಸಮರ್ಪಿತ ಚಿಕಿತ್ಸಾ ಬ್ಲಾಕ್ ಅನ್ನು ಹೊಂದಿರುತ್ತದೆ, ಇದು ರೋಗಿಗಳು ಮತ್ತು ಸಂಶೋಧಕರಿಗೆ ಸಮಗ್ರ ಮತ್ತು ತಡೆರಹಿತ ಆರೋಗ್ಯ ಅನುಭವವನ್ನು ಖಾತ್ರಿಪಡಿಸುತ್ತದೆ.
*****