Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೆಹಲಿಗೆ ಆಗಮಿಸಿದ ಪ್ರಧಾನಮಂತ್ರಿಯವರಿಗೆ ನಾಗರಿಕರಿಂದ ಭವ್ಯ ಸ್ವಾಗತ

ದೆಹಲಿಗೆ ಆಗಮಿಸಿದ ಪ್ರಧಾನಮಂತ್ರಿಯವರಿಗೆ ನಾಗರಿಕರಿಂದ ಭವ್ಯ ಸ್ವಾಗತ


ದೆಹಲಿಗೆ ಆಗಮಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.  ʻಚಂದ್ರಯಾನ -3ʼ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿದ ಹಿನ್ನೆಲೆಯಲ್ಲಿ ಇಸ್ರೋ ತಂಡದೊಂದಿಗೆ ಸಂವಹನ ನಡೆಸಿದ ನಂತರ ಪ್ರಧಾನಿ ಮೋದಿ ಇಂದು ಬೆಂಗಳೂರಿನಿಂದ ದೆಹಲಿಗೆ ಬಂದಿಳಿದರು. ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ನ 4 ದಿನಗಳ ಪ್ರವಾಸದ ನಂತರ ಪ್ರಧಾನಿ ಮೋದಿ ನೇರವಾಗಿ ಬೆಂಗಳೂರಿಗೆ ತೆರಳಿದ್ದರು. ಶ್ರೀ ಜೆ.ಪಿ. ನಡ್ಡಾ ಅವರು ಪ್ರಧಾನಮಂತ್ರಿಯವರನ್ನು ಸ್ವಾಗತಿಸಿದರು. ಪ್ರಧಾನಿಯವರ ವಿದೇಶಿ ಭೇಟಿಯ ಯಶಸ್ಸಿಗಾಗಿ ಹಾಗೂ ಭಾರತೀಯ ವಿಜ್ಞಾನಿಗಳ ಮಹತ್ವದ ಸಾಧನೆಗಾಗಿ ಪ್ರಧಾನ ಮಂತ್ರಿಗಳನ್ನು ನಡ್ಡಾ ಅವರು ಸನ್ಮಾನಿಸಿದರು.

ನಾಗರಿಕ ಸ್ವಾಗತಕ್ಕೆ ಸ್ಪಂದಿಸಿದ ಪ್ರಧಾನಮಂತ್ರಿಯವರು, ಚಂದ್ರಯಾನ-3ರ ಯಶಸ್ಸಿನ ಕುರಿತಾಗಿ ಜನರ ಉತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದರು. ಇಸ್ರೋ ತಂಡದೊಂದಿಗಿನ ತಮ್ಮ ಸಂವಾದದ ಬಗ್ಗೆ ಮಾತನಾಡಿದ ಪ್ರಧಾನಿ, “ಚಂದ್ರಯಾನ-3ರ ಭಾಗವಾಗಿ ಚಂದ್ರನ ಮೇಲೆ ಲ್ಯಾಂಡರ್ ಇಳಿದ ಸ್ಥಳವನ್ನು ಈಗ ‘ಶಿವ ಶಕ್ತಿ’ ಎಂದು ಕರೆಯಲಾಗುತ್ತದೆ” ಎಂದು ಮಾಹಿತಿ ನೀಡಿದರು. ʻಶಿವʼ ಪದವು ಶುಭವನ್ನು ಹಾಗೂ ʻಶಕ್ತಿʼ ಪದವು ನಾರಿ ಶಕ್ತಿಯನ್ನು ಸಂಕೇತಿಸುತ್ತದೆ ಎಂದು ಅವರು ವಿವರಿಸಿದರು. ʻಶಿವಶಕ್ತಿʼ ಎಂದರೆ ಹಿಮಾಲಯ ಮತ್ತು ಕನ್ಯಾಕುಮಾರಿಯ ಸಂಪರ್ಕವನ್ನು ಸೂಚಿಸುತ್ತದೆ. ಅಂತೆಯೇ, 2019ರಲ್ಲಿ ʻಚಂದ್ರಯಾನ-2ʼ ತನ್ನ ಹೆಜ್ಜೆಗುರುತುಗಳನ್ನು ಬಿಟ್ಟುಹೋದ ಸ್ಥಳವನ್ನು ಈಗ ‘ತಿರಂಗಾ’ ಎಂದು ಕರೆಯಲಾಗುವುದು ಎಂದು ಪ್ರಧಾನಿ ಮಾಹಿತಿ ನೀಡಿದರು. ಆ ಸಮಯದಲ್ಲಿಯೂ ಒಂದು ಪ್ರಸ್ತಾಪವಿತ್ತು, ಆದರೆ ಹೃದಯ ಸಿದ್ಧವಾಗಿರಲಿಲ್ಲ ಎಂದು ಅವರು ಹೇಳಿದರು.

ಸಂಪೂರ್ಣ ಯಶಸ್ವಿ ಕಾರ್ಯಾಚರಣೆಯ ನಂತರವೇ ʻಚಂದ್ರಯಾನ -2ʼರ ಹೆಜ್ಜೆ ಗುರುತಿನ ಸ್ಥಳವನ್ನು ಹೆಸರಿಸಲು ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. “ತಿರಂಗಾ ಪ್ರತಿಯೊಂದು ಸವಾಲನ್ನು ಎದುರಿಸಲು ಶಕ್ತಿಯನ್ನು ನೀಡುತ್ತದೆ”, ಎಂದು ಪ್ರಧಾನಿ ಹೇಳಿದರು. ಆಗಸ್ಟ್ 23 ಅನ್ನು `ರಾಷ್ಟ್ರೀಯ ಬಾಹ್ಯಾಕಾಶ ದಿನ’ವಾಗಿ ಆಚರಿಸುವ ನಿರ್ಧಾರದ ಬಗ್ಗೆಯೂ ಅವರು ಮಾಹಿತಿ ನೀಡಿದರು. ಪ್ರಧಾನಮಂತ್ರಿಯವರು ತಮ್ಮ ವಿದೇಶ ಭೇಟಿಯ ಸಂದರ್ಭದಲ್ಲಿ ಜಾಗತಿಕ ಸಮುದಾಯವು ಭಾರತಕ್ಕೆ ನೀಡಿದ ಶುಭಾಶಯಗಳು ಮತ್ತು ಅಭಿನಂದನಾ ಸಂದೇಶಗಳನ್ನು ತಿಳಿಸಿದರು.

ಭಾರತವು ತನ್ನ ಸಾಧನೆ ಮತ್ತು ಯಶಸ್ಸಿನ ಮೂಲಕ ಹೊಸ ಪರಿಣಾಮವನ್ನು ಸೃಷ್ಟಿಸುತ್ತಿದೆ ಮತ್ತು ಜಗತ್ತು ಇದನ್ನು ಗಮನಿಸುತ್ತಿದೆ ಎಂದು ಪ್ರಧಾನಿ ಹೇಳಿದರು.

ಕಳೆದ 40 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಗ್ರೀಸ್‌ಗೆ ಭೇಟಿ ನೀಡಿರುವುದನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಗ್ರೀಸ್‌ನಲ್ಲಿ ಭಾರತದ ಮೇಲಿನ ಪ್ರೀತಿ ಮತ್ತು ಗೌರವವನ್ನು ಒತ್ತಿ ಹೇಳಿದರು. ಒಂದು ರೀತಿಯಲ್ಲಿ ಗ್ರೀಸ್ ದೇಶವು ಯುರೋಪ್‌ಗೆ ಭಾರತದ ಹೆಬ್ಬಾಗಿಲಾಗಲಿದೆ, ಜೊತೆಗೆ ದೃಢವಾದ ಭಾರತ-ಐರೋಪ್ಯ ಒಕ್ಕೂಟದ ಸಂಬಂಧಗಳಿಗೆ ಬಲವಾದ ಮಾಧ್ಯಮವಾಗಲಿದೆ ಎಂದು ಹೇಳಿದರು.

ವಿಜ್ಞಾನದಲ್ಲಿ ಯುವಕರ ಪಾಲ್ಗೊಳ್ಳುವಿಕೆಯನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ಆದ್ದರಿಂದ, ಉತ್ತಮ ಆಡಳಿತಕ್ಕಾಗಿ ಮತ್ತು ಸಾಮಾನ್ಯ ನಾಗರಿಕರ ಜೀವನವನ್ನು ಸುಲಭಗೊಳಿಸುವ ಸಲುವಾಗಿ ಬಾಹ್ಯಾಕಾಶ ವಿಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನೋಡುವ ಅಗತ್ಯವಿದೆ ಎಂದು ಅವರು ಹೇಳಿದರು. ಸೇವಾ ಪೂರೈಕೆ, ಪಾರದರ್ಶಕತೆ ಮತ್ತು ಪರಿಪೂರ್ಣತೆಯಲ್ಲಿ ಬಾಹ್ಯಾಕಾಶ ವಿಜ್ಞಾನವನ್ನು ಬಳಸಿಕೊಳ್ಳುವ ಮಾರ್ಗಗಳನ್ನು ಕಂಡುಹಿಡಿಯಲು ಸರ್ಕಾರಿ ಇಲಾಖೆಗಳನ್ನು ಕಾರ್ಯಮಗ್ನಗೊಳೀಸುವ ತಮ್ಮ ನಿರ್ಧಾರಗಳನ್ನು ಅವರು ಪುನರುಚ್ಚರಿಸಿದರು. ಇದಕ್ಕಾಗಿ ಮುಂದಿನ ದಿನಗಳಲ್ಲಿ ʻಹ್ಯಾಕಥಾನ್ʼಗಳನ್ನು ಆಯೋಜಿಸಲಾಗುವುದು ಎಂದರು.

21ನೇ ಶತಮಾನವು ತಂತ್ರಜ್ಞಾನದಿಂದ ಮುನ್ನಡೆಸಲ್ಪಡುತ್ತಿದೆ ಎಂದು ಪ್ರಧಾನಿ ಹೇಳಿದರು. “2047ರ ವೇಳೆಗೆ ʻವಿಕಸಿತ ಭಾರತʼವನ್ನು ಸಾಧಿಸಲು ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ಹಾದಿಯಲ್ಲಿ ಹೆಚ್ಚು ದೃಢವಾಗಿ ಸಾಗಬೇಕಾಗಿದೆ” ಎಂದು ಅವರು ಕರೆ ನೀಡಿದರು. ಹೊಸ ಪೀಳಿಗೆಯಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು, ಚಂದ್ರಯಾನದ ಯಶಸ್ಸಿನಿಂದ ಉಂಟಾದ ಉತ್ಸಾಹವನ್ನು ಶಕ್ತಿಯಾಗಿ ಮಾರ್ಪಡಿಸಬೇಕಿದೆ. ಇದಕ್ಕಾಗಿ ಸೆಪ್ಟೆಂಬರ್ 1ರಿಂದ `ಮೈಗೌ’(MyGov)ನಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗುವುದು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಾಕಷ್ಟು ಅವಕಾಶಗಳಿವೆ ಎಂದು ಅವರು ಹೇಳಿದರು.

ಮುಂಬರುವ `ಜಿ -20’ ಶೃಂಗಸಭೆಯು ಇಡೀ ರಾಷ್ಟ್ರವು ಆತಿಥ್ಯ ವಹಿಸುವ ಸಂದರ್ಭವಾಗಿದೆ. ಇದರ ಗರಿಷ್ಠ ಜವಾಬ್ದಾರಿ ದೆಹಲಿಯ ಮೇಲಿದೆ ಎಂದು ಪ್ರಧಾನಿ ಹೇಳಿದರು. “ರಾಷ್ಟ್ರಗಳ ಪ್ರತಿಷ್ಠೆಯ ಧ್ವಜವನ್ನು ಎತ್ತರದಲ್ಲಿ ಹಾರಿಸುವ ಅವಕಾಶವನ್ನು ಪಡೆಯುವ ಸೌಭಾಗ್ಯ ದೆಹಲಿಗೆ ಸಿಕ್ಕಿದೆ” ಎಂದು ಶ್ರೀ ಮೋದಿ ಹೇಳಿದರು. ಭಾರತದ ಆತಿಥ್ಯವನ್ನು ತೋರಿಸಲು ಇದು ನಿರ್ಣಾಯಕ ಸಂದರ್ಭವಾಗಿರುವುದರಿಂದ ದೆಹಲಿ ‘ಅತಿಥಿ ದೇವೋ ಭವ’ ಸಂಪ್ರದಾಯವನ್ನು ಅನುಸರಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. “ಸೆಪ್ಟೆಂಬರ್ 5ರಿಂದ-15 ರ ನಡುವೆ ಸಾಕಷ್ಟು ಚಟುವಟಿಕೆಗಳು ನಡೆಯಲಿವೆ.  ಈ ವೇಳೆ ದೆಹಲಿಯ ಜನರಿಗೆ ಉಂಟಾಗಬಹುದಾದ ಅನಾನುಕೂಲತೆಗಾಗಿ ನಾನು ಮುಂಚಿತವಾಗಿ ಕ್ಷಮೆಯಾಚಿಸುತ್ತೇನೆ. ಒಂದು ಕುಟುಂಬವಾಗಿ, ಎಲ್ಲಾ ಗಣ್ಯರು ನಮ್ಮ ಅತಿಥಿಗಳು. ನಾವು ಸಾಮೂಹಿಕ ಪ್ರಯತ್ನಗಳೊಂದಿಗೆ ನಮ್ಮ ʻಜಿ 20 ಶೃಂಗಸಭೆʼಯನ್ನು ಭವ್ಯಗೊಳಿಸಬೇಕಾಗಿದೆ,” ಎಂದು ಹೇಳಿದರು.

ಮುಂಬರುವ ʻರಕ್ಷಾ ಬಂಧನʼ ಮತ್ತು ಚಂದ್ರನನ್ನು ಭೂಮಾತೆಯ ಸಹೋದರನಂತೆ ಪರಿಗಣಿಸುವ ಭಾರತೀಯ ಸಂಪ್ರದಾಯದ ಬಗ್ಗೆ ಮಾತನಾಡಿದ ಪ್ರಧಾನಿ, ಸಂತಸದಿಂದ ರಕ್ಷಾ ಬಂಧನ ಆಚರಿಸುವಂತೆ ಕರೆ ನೀಡಿದರು. ವಿನೋದ ಭರಿತ ಹಬ್ಬದ ಉತ್ಸಾಹವು ನಮ್ಮ ಸಂಪ್ರದಾಯಗಳನ್ನು ಜಗತ್ತಿಗೆ ಪರಿಚಯಿಸುತ್ತದೆ ಎಂದು ಆಶಿಸಿದರು. ಸೆಪ್ಟೆಂಬರ್ ತಿಂಗಳಲ್ಲಿ ದೆಹಲಿಯ ಜನರು ಜಿ 20 ಶೃಂಗಸಭೆಯನ್ನು ಯಶಸ್ವಿಗೊಳಿಸುವ ಮೂಲಕ ನಮ್ಮ ವಿಜ್ಞಾನಿಗಳ ಸಾಧನೆಗಳಿಗೆ ಹೊಸ ಶಕ್ತಿಯನ್ನು ನೀಡಲಿದ್ದಾರೆ ಎಂದು ಪ್ರಧಾನಿ ಹೇಳಿದರು.

***