Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದಾವೂದಿ ಬೊಹ್ರಾ ಸಮುದಾಯದ ನಿಯೋಗದೊಂದಿಗೆ ಪ್ರಧಾನಮಂತ್ರಿ ಸಂವಾದ

ದಾವೂದಿ ಬೊಹ್ರಾ ಸಮುದಾಯದ ನಿಯೋಗದೊಂದಿಗೆ ಪ್ರಧಾನಮಂತ್ರಿ ಸಂವಾದ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲೋಕ ಕಲ್ಯಾಣ ಮಾರ್ಗ್ ನಲ್ಲಿರುವ ತಮ್ಮ ನಿವಾಸದಲ್ಲಿ ದಾವೂದಿ ಬೊಹ್ರಾ ಸಮುದಾಯದ ನಿಯೋಗದೊಂದಿಗೆ ಸಂವಾದ ನಡೆಸಿದರು.

ಈ ನಿಯೋಗದಲ್ಲಿ ಉದ್ಯಮ ನಾಯಕರು, ವೃತ್ತಿಪರರು, ವೈದ್ಯರು, ಶಿಕ್ಷಣ ತಜ್ಞರು ಮತ್ತು ದಾವೂದಿ ಬೊಹ್ರಾ ಸಮುದಾಯದ ಪ್ರಮುಖ ಪ್ರತಿನಿಧಿಗಳು ಭಾಗವಹಿಸಿದ್ದರು. ಅವರು ತಮ್ಮ ಕಷ್ಟಗಳನ್ನು ವಿವರಿಸಿದರು ಮತ್ತು ತಮ್ಮ ಸಮುದಾಯದ ಸದಸ್ಯರ ಆಸ್ತಿಗಳನ್ನು ವಕ್ಫ್ ಮಂಡಳಿಯು ಅಕ್ರಮವಾಗಿ ವಶಪಡಿಸಿಕೊಂಡ ಕಥೆಗಳನ್ನು ಹಂಚಿಕೊಂಡರು. ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದ್ದಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಇದು ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಬೇಡಿಕೆಯಾಗಿತ್ತು ಎಂದು ತಿಳಿಸಿದರು.

ದಾವೂದಿ ಬೊಹ್ರಾ ಸಮುದಾಯದೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗಿರುವ ಬಹುಕಾಲದ ವಿಶೇಷ ಸಂಬಂಧ ಮತ್ತು ಅವರು ಮಾಡಿರುವಂತಹ ಸಕಾರಾತ್ಮಕ ಕಾರ್ಯಗಳ ಬಗ್ಗೆ ಅವರು ಮಾತನಾಡಿದರು. ಈ ಕಾಯಿದೆಯಿಂದ ತಮ್ಮ ಸಮುದಾಯಕ್ಕೆ ಆಗುವ ಪ್ರಯೋಜನಗಳ ಕುರಿತು ಹೇಳುತ್ತಾ, ಪ್ರಧಾನಮಂತ್ರಿಯವರು ಈ ಕಾನೂನನ್ನು ಕೇವಲ ಅಲ್ಪಸಂಖ್ಯಾತರಿಗಷ್ಟೇ ಅಲ್ಲದೆ, ಅಲ್ಪಸಂಖ್ಯಾತರೊಳಗಿನ ಅತಿ ಸಣ್ಣ ಸಮುದಾಯಗಳಿಗೂ ತಂದಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. ಭಾರತವು ಯಾವಾಗಲೂ ತನ್ನ ಗುರುತನ್ನು ವಿಕಸನಗೊಳಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದ ಅವರು, ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ ತಾವು ಒಳಗೊಳ್ಳುವಿಕೆಯ ಭಾವನೆಯನ್ನು ಅನುಭವಿಸುತ್ತಿರುವುದಾಗಿ ಅವರು  ಹೇಳಿದರು.

2047ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸುವ ಪ್ರಧಾನಮಂತ್ರಿಯವರ ಕನಸಿನ ಕುರಿತು ಮಾತನಾಡಿದ ಅವರು, ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಈ ಪಯಣದಲ್ಲಿ ತಮ್ಮ ಸಂಪೂರ್ಣ ಸಹಕಾರ ಮತ್ತು ಸಾಧ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ತಿಳಿಸಿದರು. ನಿಜವಾದ ಅಭಿವೃದ್ಧಿ ಎಂದರೆ ಅದು ಜನರನ್ನು ಕೇಂದ್ರವಾಗಿರಿಸಿಕೊಂಡಿರಬೇಕು ಎಂಬ ಅವರ ನಾಯಕತ್ವದ ಗುಣವನ್ನು ಅವರು ಬಹುವಾಗಿ ಪ್ರಶಂಸಿಸಿದರು. ಆತ್ಮನಿರ್ಭರ ಭಾರತ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSME) ಬೆಂಬಲ ಮುಂತಾದ ಅನೇಕ ಮಹತ್ವದ ಯೋಜನೆಗಳು ಸಣ್ಣ ಉದ್ಯಮಗಳಿಗೆ ಬಹಳಷ್ಟು ನೆರವಾಗುತ್ತಿವೆ ಎಂದು ಅವರು ಕೊಂಡಾಡಿದರು. ಬೇಟಿ ಬಚಾವೋ ಬೇಟಿ ಪಡಾವೋ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಕೈಗೊಂಡಿರುವ ಇತರ ಕ್ರಮಗಳನ್ನೂ ಅವರು ಮುಕ್ತ ಕಂಠದಿಂದ ಹೊಗಳಿದರು.

ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲು ನಡೆದ ವರ್ಷಗಳ ಶ್ರಮದ ಕುರಿತು ಪ್ರಧಾನಮಂತ್ರಿಗಳು ಮಾತನಾಡಿದರು. ವಕ್ಫ್ನಿಂದಾಗಿ ಸಾರ್ವಜನಿಕರು ಎದುರಿಸುತ್ತಿದ್ದ ಕಷ್ಟಗಳನ್ನು ಅವರು ವಿವರಿಸಿದರು ಮತ್ತು ಈ ಕಾಯ್ದೆಯನ್ನು ಜಾರಿಗೆ ತರಲು ಪ್ರಮುಖ ಪ್ರೇರಣೆಯಾಗಿದ್ದು, ಅಸ್ತಿತ್ವದಲ್ಲಿದ್ದ ವ್ಯವಸ್ಥೆಯಿಂದ ಅತಿ ಹೆಚ್ಚು ನರಳುತ್ತಿದ್ದ ಮಹಿಳೆಯರು, ಅದರಲ್ಲೂ ನಿರ್ದಿಷ್ಟವಾಗಿ ವಿಧವೆಯರು ಎಂದು ಅವರು ತಿಳಿಸಿದರು.

ದಾವೂದಿ ಬೊಹ್ರಾ ಸಮುದಾಯದ ಸದಸ್ಯರೊಂದಿಗಿನ ತಮ್ಮ ಗಾಢವಾದ ಸಂಬಂಧವನ್ನು ಪ್ರಧಾನಮಂತ್ರಿಗಳು ನೆನಪಿಸಿಕೊಂಡರು. ಹಲವು ವರ್ಷಗಳಿಂದ ತಾವು ಕಂಡುಕೊಂಡಂತೆ, ಸಮಾಜದ ಒಳಿತಿಗಾಗಿ ದುಡಿಯುವ ಈ ಸಮುದಾಯದ ಸಂಪ್ರದಾಯವನ್ನು ಅವರು ಮುಕ್ತವಾಗಿ ಪ್ರಶಂಸಿಸಿದರು. ಈ ಕಾಯ್ದೆಯನ್ನು ಸಾಕಾರಗೊಳಿಸುವಲ್ಲಿ ಈ ಸಮುದಾಯದ ವಿಶಿಷ್ಟ ಕೊಡುಗೆಯನ್ನೂ ಅವರು ಒತ್ತಿ ಹೇಳಿದರು. ವಕ್ಫ್ ತಿದ್ದುಪಡಿ ಕಾಯ್ದೆಯ ಕುರಿತಾದ ಕಾರ್ಯ ಆರಂಭವಾದಾಗ, ಈ ವಿಷಯದ ಬಗ್ಗೆ ತಾವು ಮೊದಲು ಸಮಾಲೋಚನೆ ನಡೆಸಿದವರಲ್ಲಿ ಸೈಯದ್ನಾ ಮುಫದ್ದಲ್ ಸೈಫುದ್ದೀನ್ ಅವರು ಪ್ರಮುಖರಾಗಿದ್ದರು ಮತ್ತು ಈ ಕಾಯ್ದೆಯ ವಿವಿಧ ಸೂಕ್ಷ್ಮ ವಿಚಾರಗಳ ಬಗ್ಗೆ ಅವರು ಅಮೂಲ್ಯವಾದ ಸಲಹೆಗಳನ್ನು ನೀಡಿದ್ದರು ಎಂದು ಪ್ರಧಾನಮಂತ್ರಿಗಳು ತಿಳಿಸಿದರು.

*****