Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತೆಲಂಗಾಣದ ವಾರಂಗಲ್‌ನಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ವೇಳೆ ಪ್ರಧಾನಮಂತ್ರಿ ಮಾಡಿದ ಭಾಷಣದ ಇಂಗ್ಲಿಷ್ ಅನುವಾದ

ತೆಲಂಗಾಣದ ವಾರಂಗಲ್‌ನಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ವೇಳೆ ಪ್ರಧಾನಮಂತ್ರಿ ಮಾಡಿದ ಭಾಷಣದ ಇಂಗ್ಲಿಷ್ ಅನುವಾದ


ತೆಲಂಗಾಣ ಜನತೆಗೆ ನನ್ನ ನಮಸ್ಕಾರಗಳು!

ತೆಲಂಗಾಣ ರಾಜ್ಯಪಾಲರಾದ ಸೌಂದರರಾಜನ್ ಜೀ, ನನ್ನ ಕೇಂದ್ರ ಸಂಪುಟದ ಸಹೋದ್ಯೋಗಿಗಳಾದ ನಿತಿನ್ ಗಡ್ಕರಿ ಜಿ, ಜಿ ಕಿಶನ್ ರೆಡ್ಡಿ ಜಿ, ಸಂಜಯ್ ಜಿ, ಇತರ ಗಣ್ಯರು ಮತ್ತು ತೆಲಂಗಾಣದ ನನ್ನ ಸಹೋದರ ಸಹೋದರಿಯರೇ! ಇತ್ತೀಚೆಗೆ ತೆಲಂಗಾಣ ರಚನೆಯಾಗಿ 9 ವರ್ಷ ಪೂರ್ಣಗೊಂಡಿದೆ. ತೆಲಂಗಾಣ ರಾಜ್ಯವು ಹೊಸದಾಗಿರಬಹುದು ಆದರೆ ಭಾರತದ ಇತಿಹಾಸಕ್ಕೆ ತೆಲಂಗಾಣ ಮತ್ತು ಅದರ ಜನರ ಕೊಡುಗೆ ಯಾವಾಗಲೂ ಬಹುಮೂಲ್ಯವಾಗಿದೆ. ತೆಲುಗು ಜನರ ಸಾಮರ್ಥ್ಯವು ಯಾವಾಗಲೂ ಭಾರತದ ಶಕ್ತಿಯನ್ನು ಹೆಚ್ಚಿಸಿದೆ. ಇಂದು ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಅಭಿವೃದ್ಧಿ ಹೊಂದಲು ತೆಲಂಗಾಣ ಪ್ರಮುಖ ಪಾತ್ರ ವಹಿಸಿದೆ. ಇಡೀ ವಿಶ್ವವೇ ಭಾರತದಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿರುವ ಮತ್ತು ಭಾರತದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಇಂಥ ಸನ್ನಿವೇಶದಲ್ಲಿ ತೆಲಂಗಾಣದ ಮುಂದೆ ಅವಕಾಶಗಳ ಮಹಾಪೂರವೇ ಇದೆ.

ಸ್ನೇಹಿತರೇ,

ಇಂದಿನ ನವ ಭಾರತ, ಯುವ ಭಾರತ ಮತ್ತು ಶಕ್ತಿ ತುಂಬಿದ ಭಾರತವಾಗಿದೆ. ನಾವು ಈಗ 21 ನೇ ಶತಮಾನದ ಮೂರನೇ ದಶಕದ ಸುವರ್ಣ ಅವಧಿಯನ್ನು ಪ್ರವೇಶಿಸಿದ್ದೇವೆ. ಈ ಸುವರ್ಣ ಅವಧಿಯಲ್ಲಿ ಪ್ರತಿ ಸೆಕೆಂಡ್ ಅನ್ನು ನಾವು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಕ್ಷಿಪ್ರ ಅಭಿವೃದ್ಧಿ ಸಾಧ್ಯತೆಯ ವಿಷಯದಲ್ಲಿ ದೇಶದ ಯಾವುದೇ ಭಾಗವು ಹಿಂದೆ ಉಳಿಯಬಾರದು. ಇವುಗಳನ್ನು ಬಲಪಡಿಸುವ ಸಲುವಾಗಿ, ಕಳೆದ 9 ವರ್ಷಗಳಲ್ಲಿ, ಭಾರತ ಸರ್ಕಾರವು ತೆಲಂಗಾಣದ ಅಭಿವೃದ್ಧಿ ಮತ್ತು ಅದರ ಜತೆಗಿನ ಸಂಪರ್ಕಕ್ಕೆ ವಿಶೇಷ ಗಮನವನ್ನು ನೀಡಿದೆ. ಇದಕ್ಕೆ ಅನುಗುಣವಾಗಿ ಇಂದು ತೆಲಂಗಾಣದಲ್ಲಿ ಸಂಪರ್ಕ ಮತ್ತು ಉತ್ಪಾದನೆಗೆ ಸಂಬಂಧಿಸಿದ 6,000 ಕೋಟಿ ರೂ.ಗಳ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ. ಈ ಎಲ್ಲಾ ಯೋಜನೆಗಳಿಗಾಗಿ ನಾನು ತೆಲಂಗಾಣದ ಜನರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಹೊಸ ಗುರಿಗಳಿದ್ದರೆ, ಹೊಸ ಮಾರ್ಗಗಳನ್ನೂ ಸೃಷ್ಟಿಸಬೇಕು. ಹಳೆಯ ಮೂಲಸೌಕರ್ಯಗಳ ಆಧಾರದ ಮೇಲೆ ಭಾರತದ ತ್ವರಿತ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ. ಪ್ರಯಾಣದಲ್ಲಿ ಹೆಚ್ಚು ಸಮಯ ವ್ಯರ್ಥವಾದರೆ, ಇತರೆ ಕಾರ್ಯಗಳ ವೆಚ್ಚ ದುಬಾರಿಯಾಗಿದ್ದರೆ, ವ್ಯವಹಾರಗಳು ಮತ್ತು ಜನರು ತೊಂದರೆಗಳನ್ನು ಅನುಭವಿಸುತ್ತಾರೆ. ಆದ್ದರಿಂದಲೇ ನಮ್ಮ ಸರ್ಕಾರ ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ ಕೆಲಸ ಮಾಡುತ್ತಿದೆ. ಇಂದು, ಪ್ರತಿಯೊಂದು ರೀತಿಯ ಮೂಲಸೌಕರ್ಯಗಳಿಗೆ ಮೊದಲಿಗಿಂತ ಹಲವಾರು ಪಟ್ಟು ವೇಗವಾಗಿ ಕೆಲಸ ಮಾಡಲಾಗುತ್ತಿದೆ. ದೇಶದಾದ್ಯಂತ ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳು, ಆರ್ಥಿಕ ಕಾರಿಡಾರ್‌ಗಳು, ಕೈಗಾರಿಕಾ ಕಾರಿಡಾರ್‌ಗಳ ಜಾಲವನ್ನು ವಿಸ್ತರಿಸಲಾಗುತ್ತಿದೆ. ಎರಡು ಲೇನ್ ಹೆದ್ದಾರಿಗಳನ್ನು ನಾಲ್ಕು ಪಥಗಳಾಗಿ ಮತ್ತು ನಾಲ್ಕು ಪಥಗಳು ಆರು ಪಥಗಳಾಗಿ ಪರಿವರ್ತಿಸಲಾಗುತ್ತಿದೆ. ದಶಪಥ ಹೆದ್ದಾರಿಗಳು ಈಗ ನಮ್ಮ ದೇಶದಲ್ಲಿವೆ. 9 ವರ್ಷಗಳ ಹಿಂದೆ ತೆಲಂಗಾಣದ ರಾಷ್ಟ್ರೀಯ ಹೆದ್ದಾರಿ ಜಾಲ ಕೇವಲ 2500 ಕಿ.ಮೀ ಇತ್ತು. ಇಂದು ಅದು ದುಪ್ಪಟ್ಟಾಗಿ 5000 ಕಿ.ಮೀ.ಗೆ ಏರಿಕೆಯಾಗಿದೆ. ಇಂದು, ತೆಲಂಗಾಣದಲ್ಲಿ 2500 ಕಿಮೀ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ. ಭಾರತಮಾಲಾ ಯೋಜನೆಯಡಿ ದೇಶದಲ್ಲಿ ನಿರ್ಮಿಸಲಾಗುತ್ತಿರುವ ಹತ್ತಾರು ಕಾರಿಡಾರ್‌ಗಳಲ್ಲಿ ಹಲವು ತೆಲಂಗಾಣದ ಮೂಲಕ ಹಾದು ಹೋಗಿವೆ. ಹೈದರಾಬಾದ್-ಇಂದೋರ್ ಆರ್ಥಿಕ ಕಾರಿಡಾರ್, ಸೂರತ್-ಚೆನ್ನೈ ಆರ್ಥಿಕ ಕಾರಿಡಾರ್, ಹೈದರಾಬಾದ್-ಪಣಜಿ ಎಕನಾಮಿಕ್ ಕಾರಿಡಾರ್, ಹೈದರಾಬಾದ್-ವಿಶಾಖಪಟ್ಟಣಂ ಇಂಟರ್ ಕಾರಿಡಾರ್ ಹೀಗೆ ಹಲವಾರು ಉದಾಹರಣೆಗಳು ನಮ್ಮ ಮುಂದೆ ಇವೆ. ಒಂದು ರೀತಿಯಲ್ಲಿ, ತೆಲಂಗಾಣವು ನೆರೆಯ ಆರ್ಥಿಕ ಕೇಂದ್ರಗಳನ್ನು ಸಂಪರ್ಕಿಸುತ್ತದೆ ಮತ್ತು ಆರ್ಥಿಕ ಚಟುವಟಿಕೆಗಳ ಕೇಂದ್ರವಾಗುತ್ತಿದೆ.

ಸ್ನೇಹಿತರೇ,

ಇಂದು, ನಾಗ್ಪುರ-ವಿಜಯವಾಡ ಕಾರಿಡಾರ್‌ನ ಮಂಚೇರಿಯಲ್‌ನಿಂದ ವಾರಂಗಲ್ ವಿಭಾಗದ ಕಾಮಗಾರಿಗೆ ಅಡಿಗಲ್ಲು ಕೂಡ ಹಾಕಲಾಗಿದೆ. ಇದು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದವರೆಗೆ ತೆಲಂಗಾಣಕ್ಕೆ ಆಧುನಿಕ ಸಂಪರ್ಕವನ್ನು ಒದಗಿಸುತ್ತದೆ. ಇದು ಮಂಚೇರಿಯಲ್ ಮತ್ತು ವಾರಂಗಲ್ ನಡುವಿನ ಪ್ರಯಾಣ ಅಂತರವನ್ನು ಬಹಳ ಕಡಿಮೆ ಮಾಡುತ್ತದೆ ಮತ್ತು ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ವಿಶೇಷವಾಗಿ ಅಭಿವೃದ್ಧಿಯ ಕೊರತೆಯಿರುವ ಪ್ರದೇಶಗಳ ಮೂಲಕ ಹಾದುಹೋಗುತ್ತದೆ ಮತ್ತು ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಸ್ಥಳಗಳ ಮೂಲಕವೇ ಸಾಗುತ್ತದೆ. ಈ ಕಾರಿಡಾರ್ ಮಲ್ಟಿಮಾಡಲ್ ಸಂಪರ್ಕವನ್ನು ಬಲಪಡಿಸುತ್ತದೆ. ಕರೀಂನಗರ-ವಾರಂಗಲ್ ವಿಭಾಗದ ಚತುಷ್ಪಥವು ಹೈದರಾಬಾದ್-ವಾರಂಗಲ್ ಇಂಡಸ್ಟ್ರಿಯಲ್ ಕಾರಿಡಾರ್, ಕಾಕತೀಯ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಮತ್ತು ವಾರಂಗಲ್ ವಿಶೇಷ ಆರ್ಥಿಕ ವಲಯದ (SEZ) ಸಂಪರ್ಕವನ್ನು ಬಲಪಡಿಸುತ್ತದೆ.

ಸ್ನೇಹಿತರೇ,

ಭಾರತ ಸರ್ಕಾರವು ಇಂದು ತೆಲಂಗಾಣದಲ್ಲಿ ಕೈಗಾರಿಕೆಗಳಿಗೆ ಮತ್ತು ಇಲ್ಲಿನ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ತೆಲಂಗಾಣದಲ್ಲಿ ಅನೇಕ ಪಾರಂಪರಿಕ ಕೇಂದ್ರಗಳು ಮತ್ತು ಧಾರ್ಮಿಕ ಸ್ಥಳಗಳಿವೆ. ಈ ಸ್ಥಳಗಳಿಗೆ ಭೇಟಿ ನೀಡಲು ಈಗ ಹೆಚ್ಚು ಅನುಕೂಲಕರ ಪರಿಸ್ಥಿತಿ ಇದೆ. ಇಲ್ಲಿನ ಕೃಷಿಗೆ ಸಂಬಂಧಿಸಿದ ಕೈಗಾರಿಕೆಗಳು, ಕರೀಂನಗರದ ಗ್ರಾನೈಟ್ ಉದ್ಯಮಗಳು ಸಹ ಭಾರತ ಸರ್ಕಾರದ ಪ್ರಯತ್ನದಿಂದ ಪ್ರಯೋಜನ ಪಡೆಯುತ್ತಿವೆ. ರೈತರಾಗಲಿ, ಕೂಲಿಕಾರರಾಗಲಿ, ವಿದ್ಯಾರ್ಥಿಗಳಾಗಲಿ ಅಥವಾ ವೃತ್ತಿಪರರಾಗಲಿ ಎಲ್ಲರೂ ಇದರ ಲಾಭ ಪಡೆಯುತ್ತಿದ್ದಾರೆ. ಪರಿಣಾಮವಾಗಿ, ಯುವಕರು ತಮ್ಮ ಮನೆಯ ಸಮೀಪದಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಹೊಸ ಅವಕಾಶಗಳನ್ನು ಪಡೆಯುತ್ತಿದ್ದಾರೆ.

ಸ್ನೇಹಿತರೇ

ಉತ್ಪಾದನಾ ಕ್ಷೇತ್ರವು ದೇಶದ ಯುವಕರಿಗೆ ಉದ್ಯೋಗ ಒದಗಿಸುವ ಮತ್ತೊಂದು ಪ್ರಮುಖ ಮಾಧ್ಯಮವಾಗುತ್ತಿದೆ. ಮೇಕ್ ಇನ್ ಇಂಡಿಯಾ ಅಭಿಯಾನವು ಅಂತಹ ಇನ್ನೊಂದು ಮಾಧ್ಯಮವಾಗಿದೆ. ದೇಶದಲ್ಲಿ ಉತ್ಪಾದನೆಯನ್ನು ಉತ್ತೇಜಿಸಲು ನಾವು PLI ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಅಂದರೆ ಹೆಚ್ಚು ಉತ್ಪಾದನೆ ಮಾಡುತ್ತಿರುವವರು ಭಾರತ ಸರ್ಕಾರದಿಂದ ವಿಶೇಷ ನೆರವು ಪಡೆಯುತ್ತಿದ್ದಾರೆ. ಇದರ ಅಡಿಯಲ್ಲಿ, ತೆಲಂಗಾಣದಲ್ಲಿ 50 ಕ್ಕೂ ಹೆಚ್ಚು ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ವರ್ಷ ರಕ್ಷಣಾ ರಫ್ತಿನಲ್ಲಿ ಭಾರತ ಹೊಸ ದಾಖಲೆ ಸೃಷ್ಟಿಸಿರುವ ಸಂಗತಿ ನಿಮಗೆ ತಿಳಿದಿದೆ. ಸುಮಾರು 9 ವರ್ಷಗಳ ಹಿಂದೆ ಭಾರತದ ರಕ್ಷಣಾ ರಫ್ತು 1000 ಕೋಟಿ ರೂ.ಗಿಂತ ಕಡಿಮೆ ಇತ್ತು. ಇಂದು 16 ಸಾವಿರ ಕೋಟಿ ದಾಟಿದೆ. ಹೈದರಾಬಾದ್ ಮೂಲದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಕೂಡ ಇದರ ಲಾಭ ಪಡೆಯುತ್ತಿದೆ.

ಸ್ನೇಹಿತರೇ

ಇಂದು ಭಾರತೀಯ ರೈಲ್ವೆಯು ಉತ್ಪಾದನೆಯ ವಿಷಯದಲ್ಲಿ ಹೊಸ ದಾಖಲೆಗಳನ್ನು ಮತ್ತು ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರು ಮೇಡ್ ಇನ್ ಇಂಡಿಯಾ ವಂದೇ ಭಾರತ್ ರೈಲುಗಳ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಭಾರತೀಯ ರೈಲ್ವೇ ಸಾವಿರಾರು ಆಧುನಿಕ ಕೋಚ್‌ಗಳು ಮತ್ತು ಇಂಜಿನ್‌ಗಳನ್ನು ತಯಾರಿಸಿದೆ. ಭಾರತೀಯ ರೈಲ್ವೇಯ ಈ ಪರಿಷ್ಕರಣೆಯೊಂದಿಗೆ, ಈಗ ಮೇಕ್ ಇನ್ ಇಂಡಿಯಾದ ಹೊಸ ಉತ್ಸಾಹಕ್ಕೆ ಕಾಜಿಪೇಟ್ ಕೂಡ ಸೇರ್ಪಡೆಯಾಗಿದೆ. ಈಗ ಪ್ರತಿ ತಿಂಗಳು ಹತ್ತಾರು ವ್ಯಾಗನ್‌ಗಳನ್ನು ಇಲ್ಲಿ ತಯಾರಿಸಲಾಗುವುದು. ಪರಿಣಾಮವಾಗಿ, ಈ ಪ್ರದೇಶದಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಮತ್ತು ಇಲ್ಲಿನ ಪ್ರತಿಯೊಂದು ಕುಟುಂಬವು ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನ ಪಡೆಯುತ್ತದೆ. ಇದೇ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’. ಈ ಅಭಿವೃದ್ಧಿಯ ಮಂತ್ರದ ಮೇಲೆ ನಾವು ತೆಲಂಗಾಣವನ್ನು ಮುನ್ನಡೆಸಬೇಕಾಗಿದೆ. ಮತ್ತೊಮ್ಮೆ, ಈ ಪ್ರಗತಿಪರ ಯೋಜನೆಗಳಿಗಾಗಿ, ಕಾರ್ಯಕ್ರಮಗಳಿಗಾಗಿ ಮತ್ತು ಅಭಿವೃದ್ಧಿಯ ಹೊಸ ಪರ್ವಕ್ಕಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. 
ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು! 
ಧನ್ಯವಾದ !

ಹಕ್ಕುಸ್ವಾಮ್ಯ: ಇದು ಪ್ರಧಾನಿ ಭಾಷಣದ ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

****