ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತೆಲಂಗಾಣದ ಆದಿಲಾಬಾದ್‌ನಲ್ಲಿ ಬರೋಬ್ಬರಿ 56,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಿದ್ಯುತ್, ರೈಲು ಮತ್ತು ರಸ್ತೆ ಸಾರಿಗೆ ವಲಯಕ್ಕೆ ಸಂಬಂಧಿಸಿದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸುವ ಜತೆಗೆ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು, “ಬರೋಬ್ಬರಿ 56,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ 30ಕ್ಕೂ ಅಧಿಕ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸುತ್ತಿರುವುದು ಹಾಗೂ ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಿರುವ ಆದಿಲಾಬಾದ್ ಪ್ರದೇಶವು ಕೇವಲ ತೆಲಂಗಾಣಕ್ಕೆ ಮಾತ್ರವಲ್ಲದೆ, ಇಡೀ ದೇಶದಲ್ಲೇ ಮಹತ್ವದ ಅಭಿವೃದ್ಧಿ ಯೋಜನೆಗಳಿಗೆ ಸಾಕ್ಷಿಯಾಗುತ್ತಿದೆ. ರಾಜ್ಯದ ವಿದ್ಯುತ್, ಪರಿಸರ ಸುಸ್ಥಿರತೆ ಹಾಗೂ ರಸ್ತೆ ಸಂಪರ್ಕ ವಲಯಕ್ಕೆ ಸಂಬಂಧಪಟ್ಟ ಯೋಜನೆಗಳನ್ನು ಒಳಗೊಂಡಿರುವುದು ವಿಶೇಷ.
ಕೇಂದ್ರ ಸರ್ಕಾರ ಮತ್ತು ತೆಲಂಗಾಣ ರಾಜ್ಯವು ಸರಿಸುಮಾರು 10 ವರ್ಷಗಳನ್ನು ಒಟ್ಟಿಗೆ ಪೂರೈಸುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿಗಳು, ತೆಲಂಗಾಣದ ಜನರು ತಮ್ಮ ಕನಸುಗಳನ್ನು ನನಸಾಗಿಸಲು ರಾಜ್ಯಕ್ಕೆ ಅಗತ್ಯವಿರುವ ಎಲ್ಲ ರೀತಿಯ ನೆರವನ್ನೂ ಕೇಂದ್ರ ಸರ್ಕಾರ ನೀಡುತ್ತಿದೆ. ಇಂದು ಸಹ, ತೆಲಂಗಾಣ ರಾಜ್ಯದ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸಲು ಪೂರಕವಾದ 800 ಮೆಗಾವ್ಯಾಟ್ ಸಾಮರ್ಥ್ಯದ ಎನ್‌ಟಿಪಿಸಿ ಎರಡನೇ ಘಟಕವನ್ನು ಉದ್ಘಾಟಿಸಲಾಗಿದೆ ಎಂದು ಹೆಮ್ಮೆಯಿಂದ ನುಡಿದರು. ಅಂಬಾರಿ- ಅದಿಲಾಬಾದ್ – ಪಿಂಪಲಕುಟಿ ರೈಲು ಮಾರ್ಗಗಳ ವಿದ್ಯುದ್ದೀಕರಣವನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದ ಅವರು, ಅದಿಲಾಬಾದ್, ಬೇಲಾ ಮತ್ತು ಮುಲುಗುನಲ್ಲಿ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನಗರವೇ ದಿದ ಲಾಗಿದೆ ಎಂದು ವಿವರಿಸಿದರು. ಇಂದಿನ ಈ ಆಧುನಿಕ ರೈಲು ಮತ್ತು ರಸ್ತೆ ಯೋಜನೆಗಳು ತೆಲಂಗಾಣ ಮತ್ತು ಇಡೀ ಪ್ರದೇಶದ ಅಭಿವೃದ್ಧಿಗೆ ವೇಗ ನೀಡಲಿದ್ದು, ಈ ಪ್ರದೇಶಗಳಲ್ಲಿ ಪ್ರಯಾಣದ ಸಮಯವನ್ನು ಗಣನೀಯವಾಗಿ ತಗ್ಗಿಸಲಿವೆ. ಜತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದ್ದು, ಅಗಾಧ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಿದೆ ಎಂದು ಪ್ರಧಾನ ಮಂತ್ರಿಗಳು ಒತ್ತಿ ಹೇಳಿದರು.
“ರಾಜ್ಯಗಳ ಅಭಿವೃದ್ಧಿಯ ಮೂಲಕವೇ ರಾಷ್ಟ್ರದ ಅಭಿವೃದ್ಧಿ” ಎಂಬ ಮಂತ್ರವನ್ನು ಪುನರುಚ್ಚರಿಸಿದ ಪ್ರಧಾನ ಮಂತ್ರಿಗಳು, ಉತ್ತಮ ಆರ್ಥಿಕತೆಯಿದ್ದಾಗ ದೇಶದಲ್ಲಿ ನಂಬಿಕೆ ಬೆಳೆಯುತ್ತಾ ಹೋಗುತ್ತದೆ ಮತ್ತು ಹೂಡಿಕೆಯನ್ನು ಆಕರ್ಷಿಸುವುದರಿಂದ ರಾಜ್ಯಗಳು ಸಹ ಲಾಭ ಪಡೆಯುತ್ತವೆ ಎಂದು ವಿಶ್ಲೇಷಿಸಿದರು. ಕಳೆದ ತ್ರೈಮಾಸಿಕದಲ್ಲಿ 8.4 ಪ್ರತಿಶತದಷ್ಟು ಬೆಳವಣಿಗೆ ಸಾಧಿಸಿದ ಏಕೈಕ ಪ್ರಮುಖ ಆರ್ಥಿಕತೆಯ ರಾಷ್ಟ್ರವಾಗಿ ಭಾರತ ಹೊರಹೊಮ್ಮಿರುವುದರಿಂದ ದೇಶದ ಆರ್ಥಿಕತೆಯ ಹೆಚ್ಚಿನ ಬೆಳವಣಿಗೆಯ ದರದ ಸುತ್ತಲಿನ ಜಾಗತಿಕ ವ್ಯವಹಾರವೂ ವೃದ್ಧಿಸುತ್ತದೆ. “ಈ ವೇಗದೊಂದಿಗೆ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ” ಎಂದು ಪ್ರಧಾನ ಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು. ಹಾಗೆಯೇ ಇದು ತೆಲಂಗಾಣದ ಆರ್ಥಿಕತೆಗೆ ಹೆಚ್ಚಿನ ಬೆಳವಣಿಗೆಯನ್ನು ನೀಡುತ್ತದೆ ಎಂದು ಅವರು ತಿಳಿಸಿದರು.
ಈ ಹಿಂದೆ ತೆಲಂಗಾಣದಂತಹ ಪ್ರದೇಶಗಳ ನಿರ್ಲಕ್ಷ್ಯವನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿಗಳು, ಕಳೆದ 10 ವರ್ಷಗಳಲ್ಲಿ ಆಡಳಿತದ ಹೊಸ ಪಥವನ್ನೇ ಆರಂಭಿಸಲಾಗಿದೆ ಎಂದು ಹೆಮ್ಮೆಯಿಂದ ನುಡಿದರು. ಕಳೆದ 10 ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿರುವುದನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿಗಳು, “ನಮಗೆ ಅಭಿವೃದ್ಧಿ ಎಂದರೆ ಬಡವರಲ್ಲೇ ಕಡು ಬಡವರಾದವರು, ದಲಿತರು, ಬುಡಕಟ್ಟು ಜನರು, ಹಿಂದುಳಿದವರು ಮತ್ತು ವಂಚಿತ ಜನರ ಅಭಿವೃದ್ಧಿ,” ಎಂದು ಹೇಳಿದರು. ಒಂದೆಡೆ 25 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿದ್ದರೆ, ಮತ್ತೊಂದೆಡೆ ಬಡವರಿಗಾಗಿ ರೂಪಿಸಿದ ಸರ್ಕಾರದ ರೂಪಿಸಿದ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸಲಾಗುತ್ತಿದೆ,ʼʼ ಎಂದು ಹೇಳಿದರು. ಸಮಾರೋಪ ಮಾತುಗಳನ್ನಾಡಿದ ಪ್ರಧಾನ ಮಂತ್ರಿಗಳು, “ಮುಂದಿನ 5 ವರ್ಷಗಳಲ್ಲಿ ಇಂತಹ ಅಭಿಯಾನಗಳನ್ನು ಇನ್ನಷ್ಟು ಹೆಚ್ಚಿಸಲಾಗುವುದು,ʼʼ ಎಂದು ಭರವಸೆ ನೀಡಿದರು.
ತೆಲಂಗಾಣ ರಾಜ್ಯಪಾಲರಾದ ಡಾ. ತಮಿಳಿಸೈ ಸೌಂದರರಾಜನ್, ತೆಲಂಗಾಣದ ಮುಖ್ಯಮಂತ್ರಿ ಶ್ರೀ ರೇವಂತ ರೆಡ್ಡಿ ಮತ್ತು ಕೇಂದ್ರ ಸಚಿವರಾದ ಶ್ರೀ ಜಿ. ಕಿಶನ್ ರೆಡ್ಡಿ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಯೋಜನೆಗಳ ವಿವರ
ರಾಷ್ಟ್ರವ್ಯಾಪ್ತಿ ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಪಟ್ಟ ಹಲವು ಮಹತ್ವದ ಯೋಜನೆಗಳನ್ನು ಪ್ರಧಾನ ಮಂತ್ರಿಗಳು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸುವ ಜತೆಗೆ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ತೆಲಂಗಾಣದ ಪೆದ್ದಪಲ್ಲಿಯಲ್ಲಿ ತೆಲಂಗಾಣ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ ಯೋಜನೆಯಡಿ ಎನ್‌ಟಿಪಿಸಿಯ 800 ಮೆಗಾವ್ಯಾಟ್ (ಘಟಕ-2) ಅನ್ನು ಪ್ರಧಾನ ಮಂತ್ರಿಗಳು ರಾಷ್ಟ್ರಕ್ಕೆ ಸಮರ್ಪಿಸಿದರು. ಹಾಗೆಯೇ ಅಲ್ಟ್ರಾ-ಸೂಪರ್ ಕ್ರಿಟಿಕಲ್ ಟೆಕ್ನಾಲಜಿ ಆಧಾರಿತ ಯೋಜನೆಯಡಿ ತೆಲಂಗಾಣಕ್ಕೆ ಶೇ. 85ರಷ್ಟು ವಿದ್ಯುತ್ ಪೂರೈಸುವುದು ಹಾಗೂ ಭಾರತದಲ್ಲಿ ಎನ್‌ಟಿಪಿಸಿ ನಿಗಮದ ಎಲ್ಲಾ ವಿದ್ಯುತ್ ಕೇಂದ್ರಗಳ ಪೈಕಿ ಸುಮಾರು ಶೇ. 42ರಷ್ಟು ಅತ್ಯಧಿಕ ವಿದ್ಯುತ್ ಉತ್ಪಾದನಾ ಕಾರ್ಯಕ್ಷಮತೆಯನ್ನು ಈ ಘಟಕ ಹೊಂದಿರಲಿರುವುದು ವಿಶೇಷ. ಈ ಯೋಜನೆಗೆ ಪ್ರಧಾನಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದರು.
ಜಾರ್ಖಂಡ್‌ನ ಚತ್ರಾದಲ್ಲಿರುವ ಉತ್ತರ ಕರಣಪುರ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್‌ನ 660 ಮೆಗಾವ್ಯಾಟ್ (ಘಟಕ-2) ಅನ್ನು ಪ್ರಧಾನಮಂತ್ರಿಗಳು ಸಮರ್ಪಿಸಿದರು. ಇದು ಏರ್ ಕೂಲ್ಡ್ ಕಂಡೆನ್ಸರ್ (ಎಸಿಸಿ) ಸೌಲಭ್ಯ ಹೊಂದಿರುವ ದೇಶದ ಪ್ರಥಮ
ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಪ್ರಾಜೆಕ್ಟ್ ಆಗಿದ್ದು, ಇದು ಸಾಂಪ್ರದಾಯಿಕ ವಾಟರ್- ಕೂಲ್ಡ್ ಕಂಡೆನ್ಸರ್‌ಗಳಿಗೆ ಹೋಲಿಸಿದರೆ ನೀರಿನ ಬಳಕೆಯನ್ನು ಮೂರನೇ ಒಂದು ಭಾಗದಷ್ಟು ಕಡಿಮೆ ಮಾಡುತ್ತದೆ. ಈ ಯೋಜನೆಯ ಕಾಮಗಾರಿಗೆ ಪ್ರಧಾನಮಂತ್ರಿಗಳು ಹಸಿರು ನಿಶಾನೆ ತೋರಿದರು.
ಇದೇ ವೇಳೆ, ಪ್ರಧಾನ ಮಂತ್ರಿಗಳು ಛತ್ತೀಸ್‌ಗಢದ ಬಿಲಾಸ್‌ಪುರದ ಸಿಪತ್‌ನಲ್ಲಿ “ಫ್ಲೈ ಆಶ್ (ಹಾರು ಬೂದಿ) ಆಧಾರಿತ ಲೈಟ್ ವೇಟ್ ಅಗ್ರೆಗೇಟ್ ಸ್ಥಾವರವನ್ನು ಲೋಕಾರ್ಪಣೆಗೊಳಿಸಿದರು. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಹಸಿರು ಹೈಡ್ರೋಜನ್ ಸ್ಥಾವರಕ್ಕೆ ಸಂಸ್ಕರಣೆಯಾದ ಕೊಳಚೆ ನೀರು ಬಳಸುವ ಯೋಜನೆಯನ್ನೂ ಉದ್ಘಾಟಿಸಿದರು.
ಹಾಗೆಯೇ, ಪ್ರಧಾನಮಂತ್ರಿಗಳು ಉತ್ತರ ಪ್ರದೇಶದ ಸೋನ್‌ಭದ್ರಾದಲ್ಲಿ ಸಿಂಗ್ರೌಲಿ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ ಹಂತ- 3ಕ್ಕೆ (ತಲಾ 800 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕ) ಅಡಿಗಲ್ಲು ಹಾಕಿದರು. ಛತ್ತೀಸ್‌ಗಢದ ರಾಯ್‌ಗಢ್‌ನ ಲಾರಾದಲ್ಲಿ 4ಜಿ ಎಥೆನಾಲ್ ಸ್ಥಾವರಕ್ಕೆ ಫ್ಲೂ ಗ್ಯಾಸ್ ಸಿಒ2 ಘಟಕ, ಆಂಧ್ರಪ್ರದೇಶದ ವಿಶಾಖಪಟ್ಟಣಂನಲಿರುವ ಸಿಂಹಾದ್ರಿಯಲ್ಲಿ ಹಸಿರು ಹೈಡ್ರೋಜನ್ ಸ್ಥಾವರಕ್ಕೆ ಸಮುದ್ರದ ನೀರು ಬಳಸುವುದು ಹಾಗೂ ಛತ್ತೀಸ್‌ಗಢದ ಕೊರ್ಬಾದಲ್ಲಿ ಫ್ಲೈ ಬೂದಿ ಆಧಾರಿತ ಎಫ್‌ಎಎಲ್‌ಜಿ ಘಟಕ ಸ್ಥಾಪನೆಗೂ ಶಂಕುಸ್ಥಾಪನೆ ನೆರವೇರಿಸಿದರು.
ಇದೇ ವೇಳೆ, ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾದ ಏಳು ಯೋಜನೆಗಳ ಉದ್ಘಾಟನೆ ಜತೆಗೆ ಶಂಕುಸ್ಥಾಪನೆಯನ್ನು ಪ್ರಧಾನ ಮಂತ್ರಿಗಳು ನೆರವೇರಿಸಿದರು. ಸಮರ್ಪಕ ವಿದ್ಯುತ್ ಪೂರೈಕೆ ದೃಷ್ಟಿಯಿಂದ ರಾಷ್ಟ್ರೀಯ ಗ್ರಿಡ್ ಕ್ಷೇತ್ರದಲ್ಲಿ ಈ ಯೋಜನೆಗಳು ನಿರ್ಣಾಯಕ ಪಾತ್ರ ವಹಿಸುವುದು ವಿಶೇಷ.
ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ರಾಷ್ಟ್ರೀಯ ಜಲವಿದ್ಯುತ್ ಶಕ್ತಿ ನಿಗಮದ (ಎನ್‌ಎಚ್‌ಪಿಸಿ) 380 ಮೆಗಾವ್ಯಾಟ್ ಸಾಮರ್ಥ್ಯದ ಸೌರ ಯೋಜನೆಗೆ ಪ್ರಧಾನ ಮಂತ್ರಿಗಳು ಚಾಲನೆ ನೀಡಿದರು. ಈ ಯೋಜನೆಯಿಂದ ಪ್ರತಿವರ್ಷ ಸುಮಾರು 792 ಮಿಲಿಯನ್ ಯೂನಿಟ್ ಹಸಿರು ವಿದ್ಯುತ್ ಉತ್ಪಾದಿಸಲಾಗುತ್ತದೆ.
ಉತ್ತರ ಪ್ರದೇಶದ ಜಲೌನ್‌ನಲ್ಲಿ ಬುಂದೇಲ್‌ಖಂಡ್ ಸೌರ ಊರ್ಜಾ ಲಿಮಿಟೆಡ್‌ನ (ಬಿಎಸ್‌ಯುಎಲ್) 1200 ಮೆಗಾವ್ಯಾಟ್ ಜಲೌನ್ ಅಲ್ಟ್ರಾ ಮೆಗಾ ನವೀಕರಿಸಬಹುದಾದ ಇಂಧನ ಸೌರ ಪಾರ್ಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಉದ್ದೇಶಿತ ಸೌರ ಪಾರ್ಕ್ ನಿಂದ ಪ್ರತಿ ವರ್ಷ ಸುಮಾರು 2400 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸುತ್ತದೆ.
ಪ್ರಧಾನ ಮಂತ್ರಿಗಳು ಉತ್ತರ ಪ್ರದೇಶದ ಜಲೌನ್ ಮತ್ತು ಕಾನ್ಪುರ್ ದೇಹತ್ ನಲ್ಲಿ ಸತ್ಲುಜ್ ಜಲ ವಿದ್ಯುತ್ ನಿಗಮದ (ಎಸ್‌ಜೆವಿಎನ್) ಮೂರು ಸೌರ ವಿದ್ಯುತ್ ಯೋಜನೆಗಳನ್ನು ಉದ್ಘಾಟಿಸಿದರು. ಈ ಯೋಜನೆಗಳು ಒಟ್ಟು 200 ಮೆಗಾವ್ಯಾಟ್ ಉತ್ಪಾದನೆ ಸಾಮರ್ಥ್ಯ ಹೊಂದಿವೆ. ಉತ್ತರಾಖಂಡದ ಉತ್ತರಕಾಶಿಯಲ್ಲಿ ಪ್ರಸರಣ ವಿದ್ಯುತ್ ಮಾರ್ಗದ ಜತೆಗೆ ನೈಟ್ವಾರ್ ಮೋರಿ ಜಲವಿದ್ಯುತ್ ಕೇಂದ್ರವನ್ನು ಪ್ರಧಾನ ಮಂತ್ರಿಗಳು ಉದ್ಘಾಟಿಸಿದರು. ಬಿಲಾಸ್‌ಪುರ, ಹಿಮಾಚಲ ಪ್ರದೇಶ ಮತ್ತು ಅಸ್ಸಾಂನ ಧುಬ್ರಿಯಲ್ಲಿ ಎಸ್‌ಜೆವಿಎನ್‌ನ ಎರಡು ಸೌರ ವಿದ್ಯುತ್ ಯೋಜನೆಗಳು ಹಾಗೂ ಹಿಮಾಚಲ ಪ್ರದೇಶದಲ್ಲಿ 382 ಮೆಗಾವ್ಯಾಟ್ ಸಾಮರ್ಥ್ಯದ ಸುನ್ನಿ ಅಣೆಕಟ್ಟು ಹೈಡ್ರೋ ಎಲೆಕ್ಟ್ರಿಕ್ ಯೋಜನೆಗೂ ಶಂಕುಸ್ಥಾಪನೆ ನೆರವೇರಿಸಿದರು.
ಉತ್ತರ ಪ್ರದೇಶದ ಲಲಿತ್‌ಪುರ ಜಿಲ್ಲೆಯಲ್ಲಿ ಟುಸ್ಕೊದ 600 ಮೆಗಾವ್ಯಾಟ್ ಸಾಮರ್ಥ್ಯ ದ ಲಲಿತ್‌ಪುರ ಸೌರ ವಿದ್ಯುತ್ ಯೋಜನೆಗೆ ಪ್ರಧಾನ ಮಂತ್ರಿಗಳು ಅಡಿಗಲ್ಲು ಹಾಕಿದರು. ಈ ಯೋಜನೆಯಡಿ ವರ್ಷಕ್ಕೆ 1200 ಮಿಲಿಯನ್ ಯೂನಿಟ್ ಹಸಿರು ವಿದ್ಯುತ್ ಉತ್ಪಾದಿಸುವ ಉದ್ದೇಶ ಹೊಂದಿದೆ.
ನವೀಕರಿಸಬಹುದಾದ ಇಂಧನದಿಂದ 2500 ಮೆಗಾವ್ಯಾಟ್ ವಿದ್ಯುತ್ ಪ್ರಸರಣಕ್ಕಾಗಿ “ರಿನ್ಯೂಸ್ ಕೊಪ್ಪಳ-ನರೇಂದ್ರ ಪ್ರಸರಣ ಯೋಜನೆ”ಯನ್ನು ಪ್ರಧಾನಮಂತ್ರಿಗಳು ಉದ್ಘಾಟಿಸಿದರು. ಈ ಅಂತರ-ರಾಜ್ಯ ಪ್ರಸರಣ ಯೋಜನೆಯು ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿದೆ. ದಾಮೋದರ್ ವ್ಯಾಲಿ ಕಾರ್ಪೊರೇಷನ್ ಮತ್ತು ಇಂಡಿಗ್ರಿಡ್‌ನ ಇತರ ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳನ್ನು ಸಹ ಪ್ರಧಾನ ಮಂತ್ರಿಗಳು ಲೋಕಾರ್ಪಣೆಗೊಳಿಸಿದರು.
ಇದೇ ಸಂದರ್ಭದಲ್ಲಿ ವಿದ್ಯುತ್ ವಲಯದ ಜತೆಗೆ ರಸ್ತೆ ಮತ್ತು ರೈಲು ವಲಯದ ಯೋಜನೆಗಳಿಗೂ ಚಾಲನೆ ನೀಡಲಾಯಿತು. ಹೊಸದಾಗಿ ವಿದ್ಯುದ್ದೀಕರಿಸಿದ ಅಂಬಾರಿ – ಅದಿಲಾಬಾದ್ – ಪಿಂಪಲ್ಕುಟಿ ರೈಲು ಮಾರ್ಗವನ್ನು ಪ್ರಧಾನ ಮಂತ್ರಿಗಳು ರಾಷ್ಟ್ರಕ್ಕೆ ಸಮರ್ಪಿಸಿದರು. ತೆಲಂಗಾಣವನ್ನು ಮಹಾರಾಷ್ಟ್ರದೊಂದಿಗೆ ಮತ್ತು ತೆಲಂಗಾಣವನ್ನು ಛತ್ತೀಸ್‌ಗಢದೊಂದಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-353ಬಿ ಮತ್ತು ರಾಷ್ಷ್ಟ್ರೀಯ ಹೆದ್ದಾರಿ-163 ಯೋಜನೆಗಳಿಗೆ ಅವರು ಅಡಿಪಾಯ ಹಾಕಿದರು.
***
From Adilabad in Telangana, launching development initiatives that will further strengthen the country's power, road and rail infrastructure.https://t.co/KV6jbwPsh4
— Narendra Modi (@narendramodi) March 4, 2024
जिस विकास का सपना तेलंगाना के लोगों ने देखा था, उसे पूरा करने में केंद्र सरकार हर तरह से सहयोग कर रही है: PM pic.twitter.com/8I3Z7ksFP2
— PMO India (@PMOIndia) March 4, 2024
राज्यों के विकास से देश का विकास। pic.twitter.com/11cmY9t9wf
— PMO India (@PMOIndia) March 4, 2024