ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತಮ್ಮ ಭೇಟಿಯ 2ನೇ ದಿನವಾದ ಇಂದು ಮಸ್ಸೂರಿಯ ಎಲ್.ಬಿ.ಎಸ್.ಎನ್.ಎ.ಎ.ಯಲ್ಲಿ 92ನೇ ಫೌಂಡೇಷನ್ ಕೋರ್ಸ್ ನಲ್ಲಿರುವ 360 ತರಬೇತಿ ನಿರತ ಅಧಿಕಾರಿಗಳನ್ನುದ್ದೇಶಿಸಿ ಭಾಷಣ ಮಾಡಿದರು. ಈ ತರಬೇತಿ ನಿರತ ಅಧಿಕಾರಿಗಳು 17 ನಾಗರಿಕ ಸೇವೆಗಳ ಮತ್ತು ರಾಯಲ್ ಭೂತಾನ್ ಸಿವಿಲ್ ಸೇವೆಯ ಮೂರು ಸೇವೆಗಳಿಗೆ ಸೇರಿದವರಾಗಿದ್ದಾರೆ.
ಭಾಷಣಕ್ಕೂ ಮುನ್ನ ತರಬೇತಿ ನಿರತ ಅಧಿಕಾರಿಗಳು ’ನಾನೇಕೆ ನಾಗರಿಕ ಸೇವೆ ಸೇರಿದೆ’ ಎಂಬ ವಿಷಯ ಕುರಿತಂತೆ ತಾವು ಬರೆದ ಪ್ರಬಂಧಗಳ; ಮತ್ತು ವಸತಿ, ಶಿಕ್ಷಣ, ಸಂಪರ್ಕಿತ ಸಾರಿಗೆ ವ್ಯವಸ್ಥೆ, ಅಪೌಷ್ಟಿಕತೆ, ಘನ ತ್ಯಾಜ್ಯ ನಿರ್ವಹಣೆ, ಕೌಶಲ ಅಭಿವೃದ್ಧಿ, ಡಿಜಿಟಲ್ ವಹಿವಾಟು, ಏಕ ಭಾರತ ಶ್ರೇಷ್ಠ ಭಾರತ ಮತ್ತು ನವ ಭಾರತ 2022 ವಿಷಯ ಕುರಿತಂತೆ ಪ್ರಾತ್ಯಕ್ಷಿಕೆಗಳನ್ನು ಪ್ರಸ್ತುತಪಡಿಸಿದರು. ತರಬೇತಿ ನಿರತ ಅಧಿಕಾರಿಗಳು ಸ್ವಚ್ಛ ಭಾರತ ಅಭಿಯಾನದ ಬಗ್ಗೆ ತಮ್ಮ ಉತ್ತಮ ಕಲ್ಪನೆಗಳನ್ನೂ ಪ್ರಸ್ತುತ ಪಡಿಸಿದರು.
ತರಬೇತಿ ನಿರತ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಪ್ರಾತ್ಯಕ್ಷಿಕೆಗೆ ಅಭಿನಂದನೆ ಸಲ್ಲಿಸಿದರು. ಈ ಪ್ರಾತ್ಯಕ್ಷಿಕೆಗಳನ್ನು ಆಳವಾಗಿ ಅಧ್ಯಯನ ಮಾಡುವಂತೆ ಭಾರತ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು. ಅವರ ಅಭಿಪ್ರಾಯ ಮತ್ತು ಪ್ರತಿಕ್ರಿಯೆಗಳನ್ನು ಫೌಂಡೇಷನ್ ಕೋರ್ಸ್ ಮುಗಿಯುವುದರೊಳಗೆ ತರಬೇತಿ ನಿರತ ಅಧಿಕಾರಿಗಳೊಂದಿಗೆ ಹಂಚಿಕೊಳ್ಳುವುದಾಗಿ ತಿಳಿಸಿದರು.
ತರಬೇತಿ ಮುಗಿತ ನಂತರದಲ್ಲಿ ತಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬ ಬಗ್ಗೆ ತರಬೇತಿ ನಿರತ ಅಧಿಕಾರಿಗಳಿಗೆ ಸಲಹೆ ನೀಡಿದ ಪ್ರಧಾನಮಂತ್ರಿಯವರು, ತಮ್ಮ ಸುತ್ತಲು ಇರುವ ಜನರ ಬಗ್ಗೆ ಸದಾ ಜಾಗರೂಕತೆಯಿಂದ ಇರುವಂತೆ ತಿಳಿಸಿದರು. ಪುಸ್ತಕದ ಮೂಲಕ ಕಲಿತದ್ದು, ಖಂಡಿತವಾಗಿ ತಪ್ಪು ಹಾದಿ ತುಳಿಯುವುದರಿಂದ ತಪ್ಪಿಸುತ್ತದೆ ಎಂದರು; ಆದರೆ ಅದು ತಮ್ಮ ತಂಡದವರೊಂದಿಗೆ ಮತ್ತು ಜನರೊಂದಿಗಿನ ಬಾಂಧವ್ಯವನ್ನು ಸ್ಥಾಪಿಸುತ್ತದೆ, ಅದು ಯಶಸ್ವು ಕಾಣಲು ಸಹಕಾರಿಯಾಗುತ್ತದೆ ಎಂದರು.
ನೀತಿ ಉಪಕ್ರಮಗಳ ಯಶಸ್ವಿ ಅನುಷ್ಠಾನದಲ್ಲಿ ಜನರ ಪಾಲ್ಗೊಳ್ಳುವಿಕೆಯ ಮಹತ್ವನ್ನು ಪ್ರಧಾನಿ ಒತ್ತಿ ಹೇಳಿದರು.
ಪ್ರಧಾನಮಂತ್ರಿಯವರು, ಸ್ವಾತಂತ್ರ್ಯಪೂರ್ವದಲ್ಲಿ, ನಾಗರಿಕ ಸೇವೆಗಳು ಬ್ರಿಟಿಷ್ ಆಳ್ವಿಕೆಯ ಉದ್ದೇಶಗಳನ್ನು ರಕ್ಷಿಸುವುದಾಗಿತ್ತು. ಆದರೆ ಈಗ, ನಾಗರಿಕ ಸೇವೆಯ ಉದ್ದೇಶ, ಪ್ರಗತಿ ಮತ್ತು ಜನರ ಕ್ಷೇಮವಾಗಿದೆ ಎಂದರು. ನಾಗರಿಕ ಸೇವಕರು ಈ ಉದ್ದೇಶಗಳನ್ನು ತಮ್ಮಲ್ಲಿ ಅಂತರ್ಗತ ಮಾಡಿಕೊಂಡರೆ, ಜನರು ಮತ್ತು ಆಡಳಿತ ಯಂತ್ರದ ನಡುವೆ ಸೇತುವೆಯಾಗಬಹುದು ಎಂದರು. ನಾಗರಿಕ ಸೇವಾ ಅಧಿಕಾರಿಗಳ ಮನೋಸ್ಥಿತಿಯ ಸಮಸ್ಯೆ ಮತ್ತು ತಂಡಸ್ಫೂರ್ತಿಯ ಕೊರತೆಯನ್ನು ಮಸ್ಸೂರಿಯ ಈ ಪ್ರಾರಂಭಿಕ ತರಬೇತಿಯ ಸಂದರ್ಭದಲ್ಲಿ ಸಮರ್ಥವಾಗಿ ನಿಭಾಯಿಸಲಾಗುತ್ತದೆ ಎಂದರು. ಫೌಂಡೇಷನ್ ಕೋರ್ಸ್ ವೇಳೆ ತರಬೇತಿ ನಿರತ ಅಧಿಕಾರಿಗಳು ತೋರಿದ ಚಾರಣದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಚಾರಣದಿಂದ ತಂಡಸ್ಫೂರ್ತಿ, ನಾಯಕತ್ವ ಕಲಿಯುವಂತೆ ಮತ್ತು ಅದನ್ನು ತಮ್ಮ ವೃತ್ತಿ ಬದುಕಿನ ಪೂರ್ತಿ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಸಾಮಾಜಿಕ ಚಳವಳಿಗಳು ಪ್ರಜಾಪ್ರಭುತ್ವದಲ್ಲಿ ಬದಲಾವಣೆ ತರಬಲ್ಲವಾಗಿವೆ, ನಾಗರಿಕ ಸೇವೆಗಳು ಅದಕ್ಕೆ ವೇಗವರ್ಧಕವಾಗಬೇಕು ಎಂದರು. ನಿನ್ನೆ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ತರಬೇತಿ ನಿರತ ಅಧಿಕಾರಿಗಳು ಪ್ರದರ್ಶಿಸಿದ ಭಕ್ತಿಗೀತೆ ವೈಷ್ಣವ ಜನ.. ದ ಪ್ರಸ್ತಾಪ ಮಾಡಿದ ಪ್ರಧಾನಿ, ಈ ಗೀತೆಯಲ್ಲಿ ವೈಷ್ಣವ ಜನ ಎಂಬ ಪದದ ಜಾಗದಲ್ಲಿ ನಾಗರಿಕ ಸೇವಕರು ಎಂಬುದನ್ನು ಸೇರಿಸಿ, ಗೀತೆಯ ಸಾಹಿತ್ಯದಲ್ಲಿರುವ ಅಂಶಗಳ ಬಗ್ಗೆ ಆಲೋಚಿಸಿ ಎಂದರು. ಅನಾಮಧೇಯತೆ ನಾಗರಿಕ ಸೇವಾ ಅಧಿಕಾರಿಗಳ ದೊಡ್ಡ ಶಕ್ತಿ ಎಂದ ಅವರು, ನಾಗರಿಕ ಸೇವಕರು ಅಶೋಕಸ್ತಂಭದಲ್ಲಿರುವ ನಾಲ್ಕನೆ ಸಿಂಹದಂತೆ., ಅದು ಕಾಣದಿದ್ದರೂ ಎಲ್ಲ ಸಮಯದಲ್ಲೂ ತನ್ನ ಅಸ್ತಿತ್ವ ತೋರುತ್ತದೆ ಎಂದು ಬಣ್ಣಿಸಿದರು.
ಪ್ರವಾಸ ಭಾರತದ ಶ್ರೇಷ್ಠ ಸಂಪ್ರದಾಯವಾಗಿದ್ದು, ಪ್ರವಾಸ ಮತ್ತು ಜನರೊಂದಿಗೆ ಸಂವಾದ ದೊಡ್ಡ ಕಲಿಕೆಯ ಅನುಭವ ನೀಡುತ್ತದೆ ಎಂದರು. ತಮ್ಮ ನಿಯೋಜನೆಯ ವೇಳೆ ಕ್ಷೇತ್ರ ಪ್ರದೇಶಗಳಲ್ಲಿ ಸಂಚರಿಸುವಂತೆ ತರಬೇತಿ ನಿರತ ಅಧಿಕಾರಿಗಳಿಗೆ ತಿಳಿಸಿದರು.
ತರಬೇತಿ ನಿರತ ಅಧಿಕಾರಿಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನ ಮಂತ್ರಿಯವರು, “ವೃತ್ತಿಯ ಪ್ರಜ್ಞೆ ಎಲ್ಬಿಎಸ್ಎನ್ಎಎ ವರೆಗೆ ಕರೆತಂದಿದೆ ಈಗ ಅದನ್ನು ” ಅಭಿಯಾನದ ಪ್ರಜ್ಞೆ “,-ಈಗ ಭಾರತದ ಜನರ ಸೇವೆ ಮಾಡುವ” ಅಭಿಯಾನವಾಗಿ ಬದಲಾಯಿಸಿಕೊಳ್ಳಿ ಎಂದರು. ಭವಿಷ್ಯದಲ್ಲಿ ಅವರು ತಮ್ಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಾಗ ಇದು ಅವರ ಬದುಕಿನ ಉದ್ದೇಶವಾಗಬೇಕು ಎಂದರು.
ಇಂದು ಬೆಳಗ್ಗೆ ಹಿಮಾಲಯದ ಹಿನ್ನೆಲೆಯಲ್ಲಿರುವ ಅಕಾಡಮಿಯ ಹುಲ್ಲು ಹಾರಿನಲ್ಲಿ ನಡೆದ ತರಬೇತಿ ಅಧಿಕಾರಿಗಳ ಯೋಗ ಅಧಿವೇಶದಲ್ಲಿ ಪ್ರಧಾನಿ ಭಾಗಿಯಾಗಿದ್ದರು.
ಹೊಸ ಹಾಸ್ಟೆಲ್ ಕಟ್ಟಡ ಮತ್ತು 200 ಮೀಟರ್ ಬಹುಕಾರ್ಯದ ಸಿಂಥೆಟಿಕೆ ಅಥ್ಲೆಟಿಕ್ ಟ್ರಾಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಲುವಾಗಿ ಫಲಕ ಅನಾವರಣ ಮಾಡಿದರು.
ಪ್ರಧಾನಮಂತ್ರಿಯವರು, ಅಕಾಡಮಿಯ ಬಾಲವಾಡಿಗೆ ಭೇಟಿ ನೀಡಿದರು ಮತ್ತು ಮಕ್ಕಳೊಂದಿಗೆ ಸಂವಾದ ನಡೆಸಿದರು. ಅಕಾಡಮಿಯಲ್ಲಿನ ಜಿಮ್ನಾಷಿಯಮ್ ಮತ್ತು ಇತರ ಸೌಲಭ್ಯಗಳಿಗೂ ಅವರು ಭೇಟಿ ನೀಡಿದರು.
***