Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಮಿಳು ಕವಿ ಸುಬ್ರಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ ಸಂಕಲನ ಬಿಡುಗಡೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ

ತಮಿಳು ಕವಿ ಸುಬ್ರಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ ಸಂಕಲನ ಬಿಡುಗಡೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ


ಕೇಂದ್ರ ಸಚಿವರಾದ, ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಜಿ, ರಾವ್ ಇಂದರ್‌ಜಿತ್ ಸಿಂಗ್ ಮತ್ತು ಎಲ್. ಮುರುಗನ್ ಜಿ, ಈ ಕಾರ್ಯಕ್ರಮದ ಕೇಂದ್ರ ವ್ಯಕ್ತಿ, ಸಾಹಿತ್ಯ ವಿದ್ವಾಂಸ ಶ್ರೀ ಸೀನಿ ವಿಶ್ವನಾಥನ್ ಜಿ, ಪ್ರಕಾಶಕ ವಿ. ಶ್ರೀನಿವಾಸನ್ ಜಿ, ಮತ್ತು ಉಪಸ್ಥಿತರಿರುವ ಎಲ್ಲ ಗೌರವಾನ್ವಿತ ಗಣ್ಯರೇ… ಮಹಿಳೆಯರೇ ಮತ್ತು ಮಹನೀಯರೇ,

ಇಂದು, ರಾಷ್ಟ್ರವು ಮಹಾನ್ ಕವಿ ಸುಬ್ರಹ್ಮಣ್ಯ ಭಾರತಿ ಜೀ ಅವರ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದೆ. ಸುಬ್ರಮಣ್ಯ ಭಾರತಿ ಜೀ ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಇದು ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ, ಭಾರತದ ಸ್ವಾತಂತ್ರ್ಯ ಹೋರಾಟದ ನೆನಪುಗಳಿಗೆ ಮತ್ತು ತಮಿಳುನಾಡಿನ ಹೆಮ್ಮೆಗೆ ಮಹತ್ವದ ಸಂದರ್ಭವಾಗಿದೆ. ಮಹಾಕವಿ ಸುಬ್ರಹ್ಮಣ್ಯ ಭಾರತಿಯವರ ಕೃತಿಗಳು ಮತ್ತು ರಚನೆಗಳ ಪ್ರಕಟಣೆಯು ಒಂದು ಬಹಳ ದೊಡ್ಡ ಚಾರಿತ್ರಿಕ ಸೇವೆ ಮತ್ತು ಅಪಾರ ಆಧ್ಯಾತ್ಮಿಕ ಸಾಹಸವಾಗಿದೆ, ಮತ್ತು ಅದು ಇಂದು ಅದರ ಪರಾಕಾಷ್ಠೆಯನ್ನು ತಲುಪುತ್ತಿದೆ. 21 ಸಂಪುಟಗಳಲ್ಲಿ ‘ಕಾಲ ವರಿಸೈಯಿಲ್ ಭಾರತಿಯರ್ ಪದೈಪ್ಪುಗಳು’ ಸಂಕಲನವು ಒಂದು ಅಸಾಧಾರಣ ಮತ್ತು ಅಭೂತಪೂರ್ವ ಸಾಧನೆಯಾಗಿದೆ, ಇದು ಆರು ದಶಕಗಳ ಅವಿರತ ಪ್ರಯತ್ನ ಮತ್ತು ಗಮನಾರ್ಹ ಧೈರ್ಯದ ಫಲವಾಗಿದೆ. ಈ ಅಸಾಧಾರಣ ಮತ್ತು ಅಭೂತಪೂರ್ವ ಸಾಧನೆಯು ಶ್ರೀ ಸೀನಿ ವಿಶ್ವನಾಥನ್ ಜೀ  ಅವರ ಶ್ರದ್ಧೆ ಮತ್ತು ಕಠಿಣ ಪರಿಶ್ರಮದ ಫಲಿತಾಂಶವಾಗಿದೆ, ಇದು ಭವಿಷ್ಯದ ಪೀಳಿಗೆಗೆ ಅಪಾರ ಪ್ರಯೋಜನವನ್ನು ನೀಡುತ್ತದೆ ಎಂದು ನಾನು ನಂಬುತ್ತೇನೆ. “ಒಂದು ಜೀವನ, ಒಂದು ಧ್ಯೇಯ” ಎಂಬ ವಾಕ್ಯವನ್ನು ನಾವು ಸಾಮಾನ್ಯವಾಗಿ ಕೇಳುತ್ತೇವೆ ಆದರೆ ಶ್ರೀ ಸೀನಿ ಜೀಯವರು ಇದರ ಅರ್ಥವನ್ನು ನಿಜವಾಗಿಯೂ ಉದಾಹರಣೆಯಾಗಿ ಸಾಕಾರಗೊಳಿಸಿದ್ದಾರೆ. ಇದು ನಿಜವಾಗಿಯೂ ಆಳವಾದ ಬದ್ಧತೆಯ ದ್ಯೋತಕವಾಗಿದೆ. ಅವರ ಪ್ರೀತಿಯ ಶ್ರಮ ನನಗೆ ಮಹಾಮಹೋಪಾಧ್ಯಾಯ ಪಾಂಡುರಂಗ ವಾಮನ್ ಕಾಣೆ ಅವರನ್ನು ನೆನಪಿಸುತ್ತದೆ, ಅವರು ತಮ್ಮ ಜೀವನದ 35 ವರ್ಷಗಳನ್ನು ಧರ್ಮಶಾಸ್ತ್ರದ ಇತಿಹಾಸವನ್ನು ಬರೆಯಲು ಮೀಸಲಿಟ್ಟರು. ಶ್ರೀ ಸೀನಿ ವಿಶ್ವನಾಥನ್ ಜೀ ಅವರ ಕೆಲಸವು ಶೈಕ್ಷಣಿಕ ವಲಯಗಳಲ್ಲಿ ಒಂದು ಮಾನದಂಡವನ್ನು ಸ್ಥಾಪಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಈ ಅಸಾಧಾರಣ ಸಾಧನೆಗಾಗಿ ವಿಶ್ವನಾಥನ್ ಜೀ, ಅವರ ತಂಡ ಮತ್ತು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಈ 23 ಸಂಪುಟಗಳಲ್ಲಿ ಭಾರತಿ ಜೀ ಅವರ ಸಾಹಿತ್ಯ ರಚನೆಗಳು ಮಾತ್ರವಲ್ಲದೆ ಅವುಗಳ ಹಿನ್ನೆಲೆ ಮತ್ತು ತಾತ್ವಿಕ ವಿಶ್ಲೇಷಣೆಯ ಒಳನೋಟಗಳೂ ಸೇರಿವೆ ಎಂದು ನನಗೆ ತಿಳಿಸಲಾಗಿದೆ. ಪ್ರತಿಯೊಂದು ಸಂಪುಟವು ವ್ಯಾಖ್ಯಾನಗಳು, ವಿವರಣೆಗಳು ಮತ್ತು ಟಿಪ್ಪಣಿಗಳನ್ನು ಒಳಗೊಂಡಿದೆ, ಇದು ಭಾರತಿ ಜೀ ಅವರ ಆಲೋಚನೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಮತ್ತು ಯುಗದ ಸಂದರ್ಭವನ್ನು ಗ್ರಹಿಸಲು ಸಹಾಯ ಮಾಡುತ್ತದೆ. ಈ ಸಂಕಲನವು ಸಂಶೋಧನಾ ವಿದ್ವಾಂಸರು ಮತ್ತು ಬುದ್ಧಿಜೀವಿಗಳಿಗೆ ಅಮೂಲ್ಯವಾದ ಸಂಪನ್ಮೂಲವಾಗಿಯೂ ಕಾರ್ಯನಿರ್ವಹಿಸಲಿದೆ.

ಸ್ನೇಹಿತರೇ,

ಇಂದು ಗೀತಾ ಜಯಂತಿಯ ಶುಭ ಸಂದರ್ಭವೂ ಹೌದು. ಶ್ರೀ ಸುಬ್ರಮಣ್ಯ ಭಾರತಿ ಜೀ ಅವರು ಗೀತೆಯಲ್ಲಿ ಆಳವಾದ ನಂಬಿಕೆಯನ್ನು ಹೊಂದಿದ್ದರು ಮತ್ತು ಅದರ ಜ್ಞಾನ/ಅರಿವಿನ ಬಗ್ಗೆ ಆಳವಾದ ಪಾಂಡಿತ್ಯವನ್ನು ಹೊಂದಿದ್ದರು. ಅವರು ಗೀತೆಯನ್ನು ತಮಿಳಿಗೆ ಭಾಷಾಂತರಿಸಿದರು ಮತ್ತು ಅದಕ್ಕೆ ಸರಳ ಮತ್ತು ಎಲ್ಲರೂ ಅರ್ಥಮಾಡಿಕೊಳ್ಳಬಹುದಾದ/ಪ್ರವೇಶಿಸಬಹುದಾದ ವ್ಯಾಖ್ಯಾನವನ್ನು ನೀಡಿದರು. ಕಾಕತಾಳೀಯವಾಗಿ, ಇಂದು ನಾವು ಗೀತಾ ಜಯಂತಿ, ಸುಬ್ರಮಣ್ಯ ಭಾರತಿ ಜೀ ಅವರ ಜನ್ಮ ವಾರ್ಷಿಕೋತ್ಸವ ಮತ್ತು ಅವರ ಕೃತಿಗಳ ಬಿಡುಗಡೆಯನ್ನು ಆಚರಿಸುತ್ತಿದ್ದೇವೆ – ಒಂದು ರೀತಿಯ ‘ತ್ರಿವೇಣಿ ಸಂಗಮ’ ಇದು. ಈ ಕಾರ್ಯಕ್ರಮದ ಮೂಲಕ ನಿಮ್ಮೆಲ್ಲರಿಗೂ ಮತ್ತು ಎಲ್ಲಾ ಭಾರತೀಯರಿಗೂ ಗೀತಾ ಜಯಂತಿಯ ಸಂದರ್ಭದಲ್ಲಿ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ನಮ್ಮ ಸಂಸ್ಕೃತಿಯಲ್ಲಿ ಪದಗಳು ಕೇವಲ ಅಭಿವ್ಯಕ್ತಿಯ ಸಾಧನ ಮಾತ್ರವಲ್ಲ. ನಾವು ‘ಶಬ್ದ ಬ್ರಹ್ಮ’ (ದೈವಿಕ ಪದ) ಬಗ್ಗೆ ಮಾತನಾಡುವ ಮತ್ತು ಅದರ ಅನಂತ ಶಕ್ತಿಯನ್ನು ಒಪ್ಪಿಕೊಳ್ಳುವ ಸಂಸ್ಕೃತಿಯ ಭಾಗವಾಗಿದ್ದೇವೆ. ಹೀಗಾಗಿ ಋಷಿಮುನಿಗಳ, ಬುದ್ಧಿಜೀವಿಗಳ ಮಾತು ಕೇವಲ ಅವರ ಚಿಂತನೆಗಳಲ್ಲ; ಅವು ಅವರ ಚಿಂತನೆ, ಅನುಭವಗಳು ಮತ್ತು ಭಕ್ತಿಯ ಸಾರ. ಅಂತಹ ಅಸಾಧಾರಣ ಆತ್ಮಗಳ ಜ್ಞಾನವನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ನಮ್ಮ ಕರ್ತವ್ಯ. ಇಂತಹ ಸಂಕಲನದ ಮಹತ್ವ ಇಂದಿನ ಸಂದರ್ಭದಲ್ಲಿ ನಮ್ಮ ಸಂಪ್ರದಾಯಗಳು  ಎಷ್ಟು ಪ್ರಸ್ತುತವೋ ಅಷ್ಟೇ ಪ್ರಸ್ತುತವಾಗಿದೆ. ಉದಾಹರಣೆಗೆ, ಭಗವಾನ್ ವ್ಯಾಸರ ಅನೇಕ ಕೃತಿಗಳು ಇಂದಿಗೂ ನಮಗೆ ಲಭ್ಯವಿವೆ ಏಕೆಂದರೆ ಅವುಗಳನ್ನು ವ್ಯವಸ್ಥಿತವಾಗಿ ಪುರಾಣಗಳಲ್ಲಿ ಸಂಕಲಿಸಲಾಗಿದೆ. ಅದೇ ರೀತಿ, ಸ್ವಾಮಿ ವಿವೇಕಾನಂದರ ಸಂಪೂರ್ಣ ಕೃತಿಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್: ಬರಹಗಳು ಮತ್ತು ಭಾಷಣಗಳು ಹಾಗು ದೀನ್ ದಯಾಳ್ ಉಪಾಧ್ಯಾಯ ಸಂಪೂರ್ಣ ವಾಂಗ್ಮಯ ಮುಂತಾದ ಆಧುನಿಕ ಸಂಕಲನಗಳು ಸಮಾಜ ಮತ್ತು ಶಿಕ್ಷಣಕ್ಕೆ ಅಮೂಲ್ಯವೆಂದು ಸಾಬೀತಾಗಿವೆ. ತಿರುಕ್ಕುರಲ್ ಅನ್ನು ವಿವಿಧ ಭಾಷೆಗಳಿಗೆ ಭಾಷಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ. ಕಳೆದ ವರ್ಷ, ಪಪುವಾ ನ್ಯೂಗಿನಿಯಾದಲ್ಲಿ ತಿರುಕ್ಕುರಲ್‌ನ ಟೋಕ್ ಪಿಸಿನ್ ಅನುವಾದವನ್ನು ಬಿಡುಗಡೆ ಮಾಡುವ ಸುಯೋಗವನ್ನು ನಾನು ಪಡೆದಿದ್ದೆ ಮತ್ತು ಅದಕ್ಕೂ ಮೊದಲು, ನಾನು ತಿರುಕ್ಕುರಲ್‌ನ ಗುಜರಾತಿ ಅನುವಾದವನ್ನು ಇಲ್ಲಿಯೇ ಲೋಕ ಕಲ್ಯಾಣ ಮಾರ್ಗದಲ್ಲಿ ಬಿಡುಗಡೆ ಮಾಡಿದ್ದೆ.

ಸ್ನೇಹಿತರೇ,

ಸುಬ್ರಹ್ಮಣ್ಯ ಭಾರತಿ ಅವರು ದೇಶದ ಅಗತ್ಯಗಳಿಗೆ ಅನುಗುಣವಾಗಿ ಕೆಲಸ ಮಾಡಿದ ದಾರ್ಶನಿಕರಾಗಿದ್ದರು. ಅವರ ದೃಷ್ಟಿ ಎಷ್ಟು ವಿಸ್ತಾರವಾಗಿತ್ತು ಎಂದರೆ ಯುಗದಲ್ಲಿ ಅವರು ರಾಷ್ಟ್ರಕ್ಕೆ ಅಗತ್ಯವಿರುವ ಪ್ರತಿಯೊಂದು ದಿಕ್ಕಿನಲ್ಲಿಯೂ ಕೆಲಸ ಮಾಡಿದರು. ಅವರು ಕೇವಲ ತಮಿಳುನಾಡಿನ ಮತ್ತು ತಮಿಳು ಭಾಷೆಯ ಹೆಮ್ಮೆಯಲ್ಲ; ಅವರು ಚಿಂತಕರು, ಅವರ ಪ್ರತಿ ಉಸಿರು ಭಾರತಮಾತೆಯ ಸೇವೆಗೆ ಸಮರ್ಪಿತವಾಗಿದೆ. ಭಾರತಿ ಜೀ ಯವರ ಕನಸು ಭಾರತದ ಉದಯ ಮತ್ತು ವೈಭವವಾಗಿತ್ತು. ಭಾರತಿ ಜೀ ಯವರ ಕೊಡುಗೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ನಮ್ಮ ಸರ್ಕಾರ ಸತತ ಪ್ರಯತ್ನಗಳನ್ನು ಮಾಡಿದೆ. 2020 ರಲ್ಲಿ ಕೋವಿಡ್‌ನ ಸವಾಲುಗಳ ಹೊರತಾಗಿಯೂ, ನಾವು ಭಾರತಿ ಜೀ ಅವರ ನಿಧನದ ಗೌರವಾರ್ಥ 100 ನೇ ವಾರ್ಷಿಕೋತ್ಸವವನ್ನು ವೈಭವದಿಂದ ಆಚರಿಸಿ, ಸ್ಮರಿಸಿದ್ದೇವೆ. ಅಂತರಾಷ್ಟ್ರೀಯ ಭಾರತಿ ಉತ್ಸವದಲ್ಲಿ ಖುದ್ದು ಭಾಗವಹಿಸಿದ್ದೆ. ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವಾಗ ಇರಲಿ ಅಥವಾ ಅಂತರಾಷ್ಟ್ರೀಯ ಸಮುದಾಯದೊಂದಿಗೆ ತೊಡಗಿಸಿಕೊಳ್ಳುತ್ತಿರಲಿ, ನಾನು ಭಾರತಿ ಜೀ ಯವರ ಆಲೋಚನೆಗಳ ಮೂಲಕ ಭಾರತದ ದೃಷ್ಟಿಕೋನವನ್ನು ನಿರಂತರವಾಗಿ ಎತ್ತಿ ತೋರಿಸಿದ್ದೇನೆ. ಮತ್ತು ಶ್ರೀ ಸೀನಿ ಜೀ ಅವರು ಉಲ್ಲೇಖಿಸಿದಂತೆ, ನಾನು ಪ್ರಪಂಚದಾದ್ಯಂತ ಎಲ್ಲಿಗೆ ಹೋದರೂ, ನಾನು ಭಾರತಿ ಜೀ ಬಗ್ಗೆ ಮಾತನಾಡಿದ್ದೇನೆ ಮತ್ತು ಸೀನಿ ಜೀ ಇದನ್ನು ಹೆಮ್ಮೆಯಿಂದ ಎತ್ತಿ ತೋರಿಸಿದ್ದಾರೆ. ಮತ್ತು ನಿಮಗೆ ಗೊತ್ತೇ, ನನ್ನ ಮತ್ತು ಸುಬ್ರಮಣ್ಯ ಭಾರತಿ ಜೀ ನಡುವೆ ಜೀವಂತ, ಆಧ್ಯಾತ್ಮಿಕ ಸಂಪರ್ಕವಿದೆ ಮತ್ತು ಅದು ನಮ್ಮ ಕಾಶಿ. ಕಾಶಿಯೊಂದಿಗಿನ ಅವರ ಬಾಂಧವ್ಯ, ಅವರು ಅಲ್ಲಿ ಕಳೆದ ಸಮಯವು ಕಾಶಿಯ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಜ್ಞಾನದ ಅನ್ವೇಷಣೆಯಲ್ಲಿ ಕಾಶಿಗೆ ಬಂದು ಅವರು ಅಲ್ಲಿ ಒಂದಾದರು. ಅವರ ಕುಟುಂಬದ ಅನೇಕ ಸದಸ್ಯರು ಈಗಲೂ ಕಾಶಿಯಲ್ಲಿ ನೆಲೆಸಿದ್ದು, ಅವರೊಂದಿಗೆ ಸಂಪರ್ಕ ಹೊಂದಿರುವ  ಅದೃಷ್ಟಶಾಲಿ ನಾನಾಗಿದ್ದೇನೆ. ಕಾಶಿಯಲ್ಲಿ ವಾಸವಾಗಿದ್ದಾಗ ಭಾರತಿಯಾರ್ ತಮ್ಮ ವಿಶಿಷ್ಟ  ಮೀಸೆಯನ್ನು ಬೆಳೆಸಲು  ಪ್ರೇರಣೆ ಪಡೆದರು ಎಂದು ಹೇಳಲಾಗುತ್ತದೆ. ಭಾರತಿಯಾರ್ ಅವರು ಕಾಶಿಯಲ್ಲಿದ್ದಾಗ ಗಂಗಾ ತೀರದಲ್ಲಿ ತಮ್ಮ ಅನೇಕ ಕೃತಿಗಳನ್ನು ಬರೆದಿದ್ದಾರೆ. ಅದಕ್ಕಾಗಿಯೇ ಕಾಶಿಯ ಸಂಸದನಾಗಿ ಅವರ ಬರಹಗಳನ್ನು ಸಂಕಲಿಸುವ ಪವಿತ್ರ ಕಾರ್ಯವನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಕೊಂಡಾಡುತ್ತೇನೆ. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ (ಬಿಎಚ್‌ಯು) ಮಹಾಕವಿ ಭಾರತಿಯಾರ್ ಅವರ ಕೊಡುಗೆಗಳಿಗೆ ಮೀಸಲಾದ ಪೀಠದ ಸ್ಥಾಪನೆಗೆ ಅವಕಾಶವಾಗಿರುವುದು  ನಮ್ಮ ಸರ್ಕಾರಕ್ಕೆ ದೊರೆತ  ಸೌಭಾಗ್ಯ.

ಸ್ನೇಹಿತರೇ,

ಸುಬ್ರಮಣ್ಯ ಭಾರತಿಯವರೆಂದರೆ ಶತಮಾನಗಳಲ್ಲಿ ಒಮ್ಮೆ ಮಾತ್ರ ಕಾಣಿಸಿಕೊಳ್ಳುವ ವ್ಯಕ್ತಿತ್ವ. ಅವರ ಚಿಂತನೆ, ಬುದ್ಧಿಶಕ್ತಿ, ಬಹು ಆಯಾಮದ ವ್ಯಕ್ತಿತ್ವ ಇಂದಿಗೂ ಎಲ್ಲರನ್ನೂ ಬೆರಗುಗೊಳಿಸುತ್ತಲೇ ಇದೆ. ಕೇವಲ 39 ವರ್ಷಗಳ ಜೀವನದಲ್ಲಿ, ಭಾರತಿ ಜೀ ನಮಗೆ ತುಂಬಾ ನೀಡಿದರು, ವಿದ್ವಾಂಸರು ಅದನ್ನು ವಿವರಿಸಲು ತಮ್ಮ ಇಡೀ ಜೀವನವನ್ನು ಕಳೆಯುತ್ತಾರೆ. ಅವರು ಕೇವಲ 39 ವರ್ಷಗಳ ಕಾಲ ಬದುಕಿದ್ದರೂ, ಅವರ ಕೆಲಸವು ಆರು ದಶಕಗಳವರೆಗೆ ವಿಸ್ತರಿಸಿತು. ಅವರು ಬಾಲ್ಯದಲ್ಲಿ, ಆಟವಾಡಲು ಮತ್ತು ಕಲಿಯಲು ಉದ್ದೇಶಿಸಿರುವ ವಯಸ್ಸಿನಲ್ಲಿ, ಅವರು ರಾಷ್ಟ್ರೀಯತೆಯ ಭಾವನೆಯನ್ನು ತುಂಬುತ್ತಿದ್ದರು. ಒಂದೆಡೆ, ಅವರು ಆಧ್ಯಾತ್ಮಿಕತೆಯ ಅನ್ವೇಷಕರಾಗಿದ್ದರು, ಮತ್ತು ಇನ್ನೊಂದೆಡೆ, ಆಧುನಿಕತೆಯ ಬೆಂಬಲಿಗರಾಗಿದ್ದರು. ಅವರ ಕೃತಿಗಳು ಪ್ರಕೃತಿಯ ಮೇಲಿನ ಪ್ರೀತಿಯನ್ನು ಮತ್ತು ಉತ್ತಮ ಭವಿಷ್ಯಕ್ಕಾಗಿ ಅವರ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತವೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ಅವರು ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿದರು ಮಾತ್ರವಲ್ಲದೆ ಭಾರತೀಯ ಜನಸಮುದಾಯದ ಹೃದಯವನ್ನು ಕಲಕಿದರು ಮತ್ತು ಸ್ವತಂತ್ರರಾಗಬೇಕಾದ ಅಗತ್ಯವನ್ನು ಪ್ರತಿಪಾದಿಸಿ ಅವರನ್ನು ಜಾಗೃತಗೊಳಿಸಿದರು. ಮತ್ತು ಇದು ಬಹಳ ಮಹತ್ವದ ವಿಷಯ! ಅವರು ತಮ್ಮ ದೇಶವಾಸಿಗಳಿಗೆ ಹೇಳಿದ್ದರು ಮತ್ತು ನಾನು ತಮಿಳಿನಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದೇನೆ. ಯಾವುದೇ ಉಚ್ಚಾರಣೆ ತಪ್ಪುಗಳಿಗಾಗಿ ದಯವಿಟ್ಟು ನನ್ನನ್ನು ಕ್ಷಮಿಸಿ. ಮಹಾಕವಿ ಭಾರತಿಯಾರ್ ಹೇಳಿದ್ದರು: एन्रु तणियुम्, इन्द सुदन्तिर,दागम्। एन्रु मडियुम् एंगळ् अडिमैयिऩ्मोगम्।

ಇದರರ್ಥ “ಸ್ವಾತಂತ್ರ್ಯದ ದಾಹ ಯಾವಾಗ ತಣಿಯುತ್ತದೆ? ಗುಲಾಮಗಿರಿಯ ಜೊತೆಗಿನ ನಮ್ಮ ಬಾಂಧವ್ಯ ಯಾವಾಗ ಕೊನೆಗೊಳ್ಳುತ್ತದೆ?” ಆ ಸಮಯದಲ್ಲಿ, ಇನ್ನೂ ಗುಲಾಮಗಿರಿಯ ಬಾಂಧವ್ಯವನ್ನು ಹೊಂದಿರುವ ಜನರ ಒಂದು ವಿಭಾಗವಿತ್ತು ಮತ್ತು ಅದಕ್ಕಾಗಿ ಅವರು ಅವರನ್ನು ಖಂಡಿಸಿದರು. “ಗುಲಾಮಗಿರಿಯ ಬಾಂಧವ್ಯ ಯಾವಾಗ ಕೊನೆಗೊಳ್ಳುತ್ತದೆ?” ಆತ್ಮಾವಲೋಕನದ ಧೈರ್ಯ ಮತ್ತು ಗೆಲ್ಲುವ ಆತ್ಮವಿಶ್ವಾಸ ಇದ್ದವರಿಂದ ಮಾತ್ರ ಇಂತಹ ಕರೆ ಬರಲು ಸಾಧ್ಯ! ಮತ್ತು ಇದು ಭಾರತಿಯಾರ್ ಅವರ ವಿಶಿಷ್ಟ ಲಕ್ಷಣವಾಗಿತ್ತು. ನೇರವಾಗಿ ಮಾತನಾಡಿ ಸಮಾಜಕ್ಕೆ ಸರಿಯಾದ ದಾರಿ ತೋರಿಸಿದರು. ಪತ್ರಿಕೋದ್ಯಮ ಕ್ಷೇತ್ರದಲ್ಲೂ ಅವರು ಗಮನಾರ್ಹ ಕೆಲಸ ಮಾಡಿದ್ದಾರೆ. 1904 ರಲ್ಲಿ ಅವರು ತಮಿಳು ಪತ್ರಿಕೆ ‘ಸ್ವದೇಶಮಿತ್ರನ್’ ಸೇರಿದರು. ನಂತರ, 1906 ರಲ್ಲಿ, ಅವರು ಕೆಂಪು ಕಾಗದದ ಮೇಲೆ ವಾರಪತ್ರಿಕೆಯಾದ ‘ಇಂಡಿಯಾ’ವನ್ನು ಪ್ರಕಟಿಸಲು ಪ್ರಾರಂಭಿಸಿದರು. ರಾಜಕೀಯ ವ್ಯಂಗ್ಯಚಿತ್ರಗಳನ್ನು ಮುದ್ರಿಸಿದ ತಮಿಳುನಾಡಿನ ಮೊದಲ ಪತ್ರಿಕೆ ಇದಾಗಿದೆ. ಭಾರತಿ ಜೀ ದುರ್ಬಲರು ಮತ್ತು ಸಮಾಜದ ಅಂಚಿನಲ್ಲಿರುವವರಿಗೆ ಸಹಾಯ ಮಾಡಲು ಸಮಾಜವನ್ನು ಪ್ರೇರೇಪಿಸಿದರು. ಅವರ ಕವನ ಸಂಕಲನ ‘ಕಣ್ಣನ್ ಪಾಟ್ಟು’ದಲ್ಲಿ ಅವರು ಶ್ರೀಕೃಷ್ಣನನ್ನು 23 ರೂಪಗಳಲ್ಲಿ ಕಲ್ಪಿಸಿಕೊಂಡಿದ್ದಾರೆ. ಅವರ ಒಂದು ಕವಿತೆಯಲ್ಲಿ, ಅವರು ಬಡ ಕುಟುಂಬಗಳಿಗೆ ಬಟ್ಟೆಗಳನ್ನು ದೇಣಿಗೆ ನೀಡುವಂತೆ ಕೇಳುತ್ತಾರೆ, ನೀಡಲು ಶಕ್ತರಾದವರನ್ನು ಅವರು  ತಲುಪುತ್ತಾರೆ. ಪರೋಪಕಾರದ ಸ್ಫೂರ್ತಿ ತುಂಬಿದ ಅವರ ಕವನಗಳು ಇಂದಿಗೂ ನಮಗೆ ಪ್ರೇರೇಪಣೆ  ನೀಡುತ್ತಿವೆ.

ಸ್ನೇಹಿತರೇ,

ಭಾರತಿಯಾರ್ ಓರ್ವ ದಾರ್ಶನಿಕ, ತನ್ನ ಕಾಲವನ್ನು ಮೀರಿ ನೋಡಬಲ್ಲ ಮತ್ತು ಭವಿಷ್ಯವನ್ನು ಅರ್ಥಮಾಡಿಕೊಳ್ಳಬಲ್ಲ ವ್ಯಕ್ತಿ. ಸಮಾಜವು ವಿವಿಧ ಹೋರಾಟಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಯುಗದಲ್ಲಿಯೂ ಭಾರತಿಯಾರ್ ಯುವಜನತೆಯ ಪರವಾಗಿದ್ದರು ಮತ್ತು ಮಹಿಳಾ ಸಬಲೀಕರಣದ ಪ್ರಬಲ ಪ್ರತಿಪಾದಕರಾಗಿದ್ದರು. ಭಾರತಿಯಾರ್ ಅವರಿಗೆ ವಿಜ್ಞಾನ ಮತ್ತು ಆವಿಷ್ಕಾರದಲ್ಲಿ ಅಪಾರ ನಂಬಿಕೆ ಇತ್ತು. ದೂರವನ್ನು ಜೋಡಿಸುವ/ಸೇತುವೆ ಮಾಡುವ ಮತ್ತು ಇಡೀ ರಾಷ್ಟ್ರವನ್ನು ಒಂದುಗೂಡಿಸುವ ಸಂವಹನ ವ್ಯವಸ್ಥೆಯನ್ನು ಅವರು ತಮ್ಮ ಕಾಲದಲ್ಲಿ ಚಿಂತಿಸಿದ್ದರು ಮತ್ತು ಇಂದು, ನಾವು ಯಾವ ತಂತ್ರಜ್ಞಾನದೊಂದಿಗೆ ಬದುಕುತ್ತಿದ್ದೇವೋ ಅದೂ ಅಂದು ಭಾರತಿಯಾರ್ ಕಲ್ಪಿಸಿಕೊಂಡಂತಹದ್ದಾಗಿದೆ. ಅವರು ಹೇಳಿದ್ದರು: काशी नगर,पुलवर पेसुम्,उरै तान् कांचियिल्, केट्पदर्कोर्,करुवि चेय्वोम

ಇದರರ್ಥ ಏನೆಂದರೆ ಕಂಚಿಯಲ್ಲಿ ಕುಳಿತುಕೊಂಡು ಬನಾರಸ್‌ನಲ್ಲಿರುವ ಸಂತರು ಏನು ಹೇಳುತ್ತಾರೆಂದು ಕೇಳಲು ಅನುವು ಮಾಡಿಕೊಡುವ ಸಾಧನ ಇರಬೇಕು ಎಂಬುದು” ಡಿಜಿಟಲ್ ಇಂಡಿಯಾ ಕನಸುಗಳನ್ನು ಹೇಗೆ ನಿಜವಾಗಿಸುತ್ತಿದೆ ಎಂಬುದನ್ನು ನಾವು ಇಂದು ನೋಡುತ್ತಿದ್ದೇವೆ. ‘ಭಾಷಿಣಿ’ಯಂತಹ ಅಪ್ಲಿಕೇಶನ್‌ಗಳು ಸಹ ಅನೇಕ ಭಾಷಾ ತಡೆಗಳನ್ನು ನಿವಾರಿಸಿವೆ. ಭಾರತದ ಪ್ರತಿಯೊಂದು ಭಾಷೆಯ ಬಗ್ಗೆ ಗೌರವದ ಭಾವನೆ ಇದ್ದಾಗ, ಪ್ರತಿಯೊಂದು ಭಾಷೆಯ ಬಗ್ಗೆಯೂ ಅಭಿಮಾನವಿದ್ದಾಗ ಮತ್ತು ಪ್ರತಿಯೊಂದು ಭಾಷೆಯನ್ನು ಉಳಿಸುವ ಪ್ರಾಮಾಣಿಕ ಉದ್ದೇಶವಿದ್ದಾಗ, ಆಗ ಅದು ಪ್ರತಿಯೊಂದು ಭಾಷೆಗೂ ಸಲ್ಲಿಸುವ ನೈಜ ಸೇವೆಯಾಗಿರುತ್ತದೆ.  

ಸ್ನೇಹಿತರೇ,

ಮಹಾಕವಿ ಭಾರತಿಯವರ ಸಾಹಿತ್ಯ ಪ್ರಪಂಚ ಅತ್ಯಂತ ಹಳೆಯ ತಮಿಳು ಭಾಷೆಗೆ ಒಂದು ನಿಧಿಯಾಗಿದೆ. ಮತ್ತು ನಮ್ಮ ತಮಿಳು ಭಾಷೆ ಜಗತ್ತಿನ ಅತ್ಯಂತ ಪ್ರಾಚೀನ ಭಾಷೆ ಎಂಬುದಕ್ಕೆ ನಾವು ಹೆಮ್ಮೆ ಪಡುತ್ತೇವೆ. ಅವರ ಸಾಹಿತ್ಯವನ್ನು ಪಸರಿಸಿದಾಗ ತಮಿಳು ಭಾಷೆಗೂ ಸೇವೆ ಸಲ್ಲಿಸಿದಂತಾಗುತ್ತದೆ. ಮತ್ತು ನಾವು ತಮಿಳಿನ ಸೇವೆ ಮಾಡುವಾಗ, ನಾವು ದೇಶದ ಅತ್ಯಂತ ಪುರಾತನ ಪರಂಪರೆಯ ಸೇವೆಯನ್ನೂ ಮಾಡುತ್ತೇವೆ.

ಸಹೋದರೇ ಮತ್ತು  ಸಹೋದರಿಯರೇ,

ಕಳೆದ 10 ವರ್ಷಗಳಲ್ಲಿ ತಮಿಳು ಭಾಷೆಯ ವೈಭವಕ್ಕಾಗಿ ರಾಷ್ಟ್ರ ಸಮರ್ಪಣಾ ಭಾವದಿಂದ ಕೆಲಸ ಮಾಡಿದೆ. ವಿಶ್ವಸಂಸ್ಥೆಯಲ್ಲಿ ತಮಿಳಿನ ಹೆಮ್ಮೆಯನ್ನು ಇಡೀ ಜಗತ್ತಿನ ಮುಂದೆ ಮಂಡಿಸಿದ್ದೆ. ನಾವು ಜಗತ್ತಿನಾದ್ಯಂತ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರಗಳನ್ನು ತೆರೆಯುತ್ತಿದ್ದೇವೆ. ‘ಏಕ್ ಭಾರತ್, ಶ್ರೇಷ್ಠ ಭಾರತ’ದ ಆತ್ಮವು, ತಿರುಳು ಸುಬ್ರಮಣ್ಯ ಭಾರತಿಯ ಚಿಂತನೆಗಳನ್ನು ಪ್ರತಿಬಿಂಬಿಸುತ್ತದೆ. ದೇಶದ ವೈವಿಧ್ಯಮಯ ಸಂಸ್ಕೃತಿಗಳನ್ನು ಸಂಪರ್ಕಿಸುವ ಸಿದ್ಧಾಂತವನ್ನು ಭಾರತಿಯಾರ್ ಸದಾ ಬಲಪಡಿಸಿದರು. ಇಂದು ಕಾಶಿ ತಮಿಳು ಸಂಗಮಂ ಮತ್ತು ಸೌರಾಷ್ಟ್ರ ತಮಿಳು ಸಂಗಮಂ ಮುಂತಾದ ಕಾರ್ಯಕ್ರಮಗಳು ಅದೇ ಕೆಲಸವನ್ನು ಮಾಡುತ್ತಿವೆ. ಈ ಉಪಕ್ರಮಗಳು ದೇಶಾದ್ಯಂತ ತಮಿಳನ್ನು ಕಲಿಯುವ ಮತ್ತು ತಿಳಿದುಕೊಳ್ಳುವ ಜನರ ಕುತೂಹಲವನ್ನು ಹೆಚ್ಚಿಸುತ್ತಿವೆ. ತಮಿಳುನಾಡಿನ ಸಂಸ್ಕೃತಿಯನ್ನೂ ಪ್ರಚಾರ ಮಾಡಲಾಗುತ್ತಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ದೇಶದ ಪ್ರತಿಯೊಂದು ಭಾಷೆಯನ್ನು ತಮ್ಮದೆಂದು ಸ್ವೀಕರಿಸಬೇಕು ಮತ್ತು ಪ್ರತಿಯೊಂದು ಭಾಷೆಯ ಬಗ್ಗೆ ಹೆಮ್ಮೆ ಪಡಬೇಕು ಎಂಬುದು ನಮ್ಮ ಸಂಕಲ್ಪ. ತಮಿಳಿನಂತಹ ಭಾರತೀಯ ಭಾಷೆಗಳನ್ನು ಉತ್ತೇಜಿಸಲು ನಾವು ಯುವಜನರಿಗೆ ಅವರ ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣದ ಆಯ್ಕೆಯನ್ನು ನೀಡಿದ್ದೇವೆ.

ಸ್ನೇಹಿತರೇ,

ಭಾರತಿ ಜೀ ಅವರ ಸಾಹಿತ್ಯದ ಸಂಕಲನವು ತಮಿಳು ಭಾಷೆಯ ಹರಡುವಿಕೆಗೆ ಸಂಬಂಧಿಸಿದ ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಉತ್ತೇಜಿಸುತ್ತದೆ ಎಂಬ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಒಟ್ಟಾಗಿ, ನಾವು ‘ವಿಕ್ಷಿತ್ ಭಾರತ್’ (ಅಭಿವೃದ್ಧಿ ಹೊಂದಿದ ಭಾರತ) ಗುರಿಯನ್ನು ತಲುಪುತ್ತೇವೆ ಮತ್ತು ಭಾರತಿಯಾರ್ ಅವರ ಕನಸುಗಳನ್ನು ಈಡೇರಿಸುತ್ತೇವೆ. ಮತ್ತೊಮ್ಮೆ, ಈ ಸಂಕಲನ ಮತ್ತು ಪ್ರಕಟಣೆಗಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ಜೀವನದ ಹಂತದಲ್ಲಿ, ತಮಿಳುನಾಡಿನಲ್ಲಿ ವಾಸಿಸುವ ಮತ್ತು ದಿಲ್ಲಿಯ ಚಳಿಯನ್ನು ಸಹಿಸಿಕೊಂಡು, ಅವರು ಬಹಳ ಸಮರ್ಪಣಾ ಜೀವನ ನಡೆಸಿರಬೇಕು. ನಾನು ಅವರ ಕೈಬರಹದ ಟಿಪ್ಪಣಿಗಳನ್ನು ಸಹ ನೋಡಿದೆ – ಅಂತಹ ಸುಂದರವಾದ ಕೈಬರಹ! ಈ ವಯಸ್ಸಿನಲ್ಲಿ, ನಾವು ಸಹಿ ಹಾಕುವಾಗಲೂ ನಡುಗುತ್ತೇವೆ, ಆದರೆ ಅವರ ಕೈಬರಹವು ಅವರ ಭಕ್ತಿ ಮತ್ತು ತಪಸ್ಸಿನ ಸಂಕೇತವಾಗಿದೆ. ನಾನು ನಿಮಗೆ ಪ್ರಾಮಾಣಿಕ ಗೌರವದಿಂದ ನಮಸ್ಕರಿಸುತ್ತೇನೆ. ನಾನು ನಿಮ್ಮೆಲ್ಲರನ್ನೂ ಬೆಚ್ಚಗಿನ ವಣಕ್ಕಮ್‌ನೊಂದಿಗೆ ಅಭಿನಂದಿಸುತ್ತೇನೆ ಮತ್ತು ತುಂಬಾ ಧನ್ಯವಾದಗಳು!

ಘೋಷಣೆ: ಇದು  ಪ್ರಧಾನಮಂತ್ರಿಯವರ  ಭಾಷಣದ ಸರಿಸುಮಾರಾದ ಭಾಷಾಂತರವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

 

*****