ವಣಕ್ಕಂ!
ನನ್ನ ಪ್ರೀತಿಯ ತಮಿಳು ಸಹೋದರ ಸಹೋದರಿಯರೇ!
ತಮಿಳುನಾಡಿನ ರಾಜ್ಯಪಾಲರಾದ ಶ್ರೀ ಆರ್.ಎನ್. ರವಿ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಅಶ್ವಿನಿ ವೈಷ್ಣವ್ ಜಿ ಮತ್ತು ಡಾ. ಎಲ್. ಮುರುಗನ್ ಜಿ, ಇಲ್ಲಿರುವ ತಮಿಳುನಾಡು ಸರ್ಕಾರದ ಸಚಿವರು, ಸಂಸತ್ ಸದಸ್ಯರು, ಇತರೆ ಗಣ್ಯ ಅತಿಥಿಗಳು ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೆ!
ನಮಸ್ಕಾರ!
ಸ್ನೇಹಿತರೆ,
ಇಂದು ರಾಮ ನವಮಿಯ ಶುಭ ಹಬ್ಬ. ಸ್ವಲ್ಪ ಸಮಯದ ಹಿಂದೆ ಅಯೋಧ್ಯೆಯ ಭವ್ಯ ರಾಮ ದೇವಾಲಯದಲ್ಲಿ ಸೂರ್ಯನ ದಿವ್ಯ ಕಿರಣಗಳು ಬಾಲ ರಾಮನನ್ನು ಭವ್ಯವಾದ ತಿಲಕದೊಂದಿಗೆ ಸ್ಪರ್ಶಿಸಿದವು. ಶ್ರೀ ರಾಮನ ಜೀವನ ಮತ್ತು ಅವರ ರಾಜ್ಯಭಾರದಿಂದ ಪಡೆದ ಉತ್ತಮ ಆಡಳಿತದ ಸ್ಫೂರ್ತಿ ರಾಷ್ಟ್ರ ನಿರ್ಮಾಣಕ್ಕೆ ಭದ್ರ ಬುನಾದಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇಂದು, ರಾಮ ನವಮಿಯಂದು, ನಾವೆಲ್ಲರೂ ಒಟ್ಟಾಗಿ ಜಪಿಸೋಣ: ಜೈ ಶ್ರೀ ರಾಮ್! ಜೈ ಶ್ರೀ ರಾಮ್! ತಮಿಳುನಾಡಿನ ಸಂಗಮ ಯುಗದ ಸಾಹಿತ್ಯದಲ್ಲಿಯೂ ಶ್ರೀ ರಾಮನ ಉಲ್ಲೇಖಗಳಿವೆ. ಈ ಪವಿತ್ರ ಭೂಮಿ ರಾಮೇಶ್ವರದ ನನ್ನ ಎಲ್ಲಾ ದೇಶವಾಸಿಗಳಿಗೆ ನಾನು ನನ್ನ ಹೃತ್ಪೂರ್ವಕ ರಾಮ ನವಮಿಯ ಶುಭಾಶಯಗಳನ್ನು ತಿಳಿಸುತ್ತೇನೆ.
ಸ್ನೇಹಿತರೆ,
ಇಂದು ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥಿಸಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಧನ್ಯತೆ ಎಂದು ಭಾವಿಸುತ್ತೇನೆ. ಈ ವಿಶೇಷ ದಿನದಂದು, 8,300 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಹಸ್ತಾಂತರಿಸುವ ಅವಕಾಶ ನನಗೆ ಸಿಕ್ಕಿದೆ. ಈ ರೈಲು ಮತ್ತು ರಸ್ತೆ ಯೋಜನೆಗಳು ತಮಿಳುನಾಡಿನಲ್ಲಿ ಸಂಪರ್ಕ ಹೆಚ್ಚಿಸುತ್ತವೆ. ಈ ಯೋಜನೆಗಳಿಗಾಗಿ ತಮಿಳುನಾಡಿನಲ್ಲಿರುವ ನನ್ನ ಸಹೋದರ, ಸಹೋದರಿಯರನ್ನು ನಾನು ಅಭಿನಂದಿಸುತ್ತೇನೆ.
ಸ್ನೇಹಿತರೆ,
ಇದು ಭಾರತ ರತ್ನ ಡಾ. ಅಬ್ದುಲ್ ಕಲಾಂ ಅವರ ಭೂಮಿ. ವಿಜ್ಞಾನ ಮತ್ತು ಆಧ್ಯಾತ್ಮವು ಪರಸ್ಪರ ಪೂರಕವಾಗಿದೆ ಎಂಬುದನ್ನು ಅವರ ಜೀವನವು ನಮಗೆ ತೋರಿಸಿದೆ. ಅದೇ ರೀತಿ, ರಾಮೇಶ್ವರಂಗೆ ಹೊಸ ಪಂಬನ್ ಸೇತುವೆಯು ತಂತ್ರಜ್ಞಾನ ಮತ್ತು ಸಂಪ್ರದಾಯವನ್ನು ಒಟ್ಟಿಗೆ ತರುತ್ತದೆ. ಸಾವಿರಾರು ವರ್ಷಗಳಷ್ಟು ಹಳೆಯದಾದ ಈ ಪಟ್ಟಣವನ್ನು 21 ನೇ ಶತಮಾನದ ಎಂಜಿನಿಯರಿಂಗ್ ಅದ್ಭುತದಿಂದ ಸಂಪರ್ಕಿಸಲಾಗುತ್ತಿದೆ. ನಮ್ಮ ಎಂಜಿನಿಯರ್‌ಗಳು ಮತ್ತು ಕಾರ್ಮಿಕರ ಕಠಿಣ ಪರಿಶ್ರಮಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ. ಈ ಸೇತುವೆ ಭಾರತದ ಮೊದಲ ಲಂಬ ಲಿಫ್ಟ್ ರೈಲ್ವೆ ಸಮುದ್ರ ಸೇತುವೆಯಾಗಿದೆ. ದೊಡ್ಡ ಹಡಗುಗಳು ಇದರ ಅಡಿ ಸಾಗಲು ಸಾಧ್ಯವಾಗುತ್ತದೆ. ರೈಲುಗಳು ಸಹ ಇದರ ಮೇಲೆ ವೇಗವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ನಾನು ಸ್ವಲ್ಪ ಸಮಯದ ಹಿಂದೆ ಹೊಸ ರೈಲು ಸೇವೆ ಮತ್ತು ಹಡಗು ಸಂಚಾರಕ್ಕೆ ಚಾಲನೆ ನೀಡಿದ್ದೆ. ಮತ್ತೊಮ್ಮೆ, ಈ ಯೋಜನೆಗಾಗಿ ತಮಿಳುನಾಡಿನ ಜನರನ್ನು ನಾನು ಅಭಿನಂದಿಸುತ್ತೇನೆ.
ಸ್ನೇಹಿತರೆ,
ಹಲವು ದಶಕಗಳಿಂದ ಈ ಸೇತುವೆಗೆ ಬೇಡಿಕೆ ಇತ್ತು. ನಿಮ್ಮ ಆಶೀರ್ವಾದದಿಂದ ಈ ಕೆಲಸವನ್ನು ಪೂರ್ಣಗೊಳಿಸುವ ಸೌಭಾಗ್ಯ ನಮಗೆ ಸಿಕ್ಕಿದೆ. ಪಂಬನ್ ಸೇತುವೆ ವ್ಯಾಪಾರ ಸುಲಭತೆ ಮತ್ತು ಪ್ರಯಾಣ ಸುಲಭತೆ ಎರಡನ್ನೂ ಬೆಂಬಲಿಸುತ್ತದೆ. ಇದು ಲಕ್ಷಾಂತರ ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹೊಸ ರೈಲು ಸೇವೆಯು ರಾಮೇಶ್ವರಂನಿಂದ ಚೆನ್ನೈ ಮತ್ತು ದೇಶದ ಇತರೆ ಭಾಗಗಳಿಗೆ ಸಂಪರ್ಕ ಸುಧಾರಿಸುತ್ತದೆ. ಇದು ತಮಿಳುನಾಡಿನ ವ್ಯಾಪಾರ ಮತ್ತು ಪ್ರವಾಸೋದ್ಯಮ ಎರಡಕ್ಕೂ ಪ್ರಯೋಜನ ನೀಡುತ್ತದೆ. ಯುವಕರಿಗೆ ಹೊಸ ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳನ್ನು ಸಹ ಸೃಷ್ಟಿಸಲಿದೆ.
ಸ್ನೇಹಿತರೆ,
ಕಳೆದ 10 ವರ್ಷಗಳಲ್ಲಿ, ಭಾರತವು ತನ್ನ ಆರ್ಥಿಕತೆಯ ಗಾತ್ರವನ್ನು ದ್ವಿಗುಣಗೊಳಿಸಿದೆ. ಈ ತ್ವರಿತ ಬೆಳವಣಿಗೆಗೆ ಪ್ರಮುಖ ಕಾರಣವೆಂದರೆ ನಮ್ಮ ವಿಶ್ವ ದರ್ಜೆಯ ಆಧುನಿಕ ಮೂಲಸೌಕರ್ಯ. ಕಳೆದ ದಶಕದಲ್ಲಿ, ನಾವು ರೈಲ್ವೆ, ರಸ್ತೆಗಳು, ವಿಮಾನ ನಿಲ್ದಾಣಗಳು, ಬಂದರುಗಳು, ವಿದ್ಯುತ್, ನೀರು ಮತ್ತು ಅನಿಲ ಪೈಪ್‌ಲೈನ್‌ಗಳ ಬಜೆಟ್ ಅನ್ನು ಸುಮಾರು 6 ಪಟ್ಟು ಹೆಚ್ಚಿಸಿದ್ದೇವೆ. ಇಂದು ದೇಶವು ಬೃಹತ್ ಯೋಜನೆಗಳಲ್ಲಿ ತ್ವರಿತ ಪ್ರಗತಿ ಕಾಣುತ್ತಿದೆ. ನೀವು ದೇಶದ ಉತ್ತರ ಭಾಗವನ್ನು ನೋಡಿದರೆ, ವಿಶ್ವದ ಅತಿ ಎತ್ತರದ ರೈಲು ಸೇತುವೆಗಳಲ್ಲಿ ಒಂದಾದ ಚೆನಾಬ್ ಸೇತುವೆಯನ್ನು ಜಮ್ಮು-ಕಾಶ್ಮೀರದಲ್ಲಿ ನಿರ್ಮಿಸಲಾಗಿದೆ. ಪಶ್ಚಿಮ ಭಾಗದಲ್ಲಿ, ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾದ ಅಟಲ್ ಸೇತುವನ್ನು ಮುಂಬೈನಲ್ಲಿ ನಿರ್ಮಿಸಲಾಗಿದೆ. ಪೂರ್ವದಲ್ಲಿ, ಅಸ್ಸಾಂನ ಬೋಗಿಬೀಲ್ ಸೇತುವೆ ಒಂದು ಹೆಗ್ಗುರುತಾಗಿದೆ. ಮತ್ತು ದಕ್ಷಿಣದಲ್ಲಿ, ವಿಶ್ವದ ಕೆಲವೇ ಲಂಬ ಲಿಫ್ಟ್ ಸೇತುವೆಗಳಲ್ಲಿ ಒಂದಾದ ಪಂಬನ್ ಸೇತುವೆ ಪೂರ್ಣಗೊಂಡಿದೆ. ಅದೇ ರೀತಿ, ಪೂರ್ವ ಮತ್ತು ಪಶ್ಚಿಮ ಮೀಸಲಾದ ಸರಕು ಕಾರಿಡಾರ್‌ಗಳನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ. ದೇಶದ ಮೊದಲ ಬುಲೆಟ್ ರೈಲಿನ ಕೆಲಸವು ವೇಗವಾಗಿ ಪ್ರಗತಿಯಲ್ಲಿದೆ. ವಂದೇ ಭಾರತ್, ಅಮೃತ್ ಭಾರತ್ ಮತ್ತು ನಮೋ ಭಾರತ್‌ನಂತಹ ಆಧುನಿಕ ರೈಲುಗಳು ರೈಲ್ವೆ ಜಾಲವನ್ನು ಇನ್ನಷ್ಟು ಮುಂದುವರಿದಂತೆ ಮಾಡುತ್ತಿವೆ.
ಸ್ನೇಹಿತರೆ,
ಭಾರತದ ಪ್ರತಿಯೊಂದು ಪ್ರದೇಶವು ಉತ್ತಮ ಸಂಪರ್ಕ ಹೊಂದಿರುವಾಗ, ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಹಾದಿ ಬಲಗೊಳ್ಳುತ್ತದೆ. ವಿಶ್ವಾದ್ಯಂತದ ಪ್ರತಿಯೊಂದು ಅಭಿವೃದ್ಧಿ ಹೊಂದಿದ ರಾಷ್ಟ್ರ ಮತ್ತು ಅಭಿವೃದ್ಧಿ ಹೊಂದಿದ ಪ್ರತಿಯೊಂದು ಪ್ರದೇಶದಲ್ಲಿ ಇದು ನಿಖರವಾಗಿ ಸಂಭವಿಸಿದೆ. ಇಂದು ಭಾರತದ ಪ್ರತಿಯೊಂದು ರಾಜ್ಯವು ಹೆಚ್ಚಾಗಿ ಪರಸ್ಪರ ಸಂಪರ್ಕ ಹೊಂದುತ್ತಿದ್ದಂತೆ, ಇಡೀ ದೇಶದ ನಿಜವಾದ ಸಾಮರ್ಥ್ಯ ಹೊಕಹೊಮ್ಮುತ್ತಿದೆ. ಈ ಪ್ರಗತಿಯು ನಮ್ಮ ತಮಿಳುನಾಡು ಸೇರಿದಂತೆ ದೇಶದ ಪ್ರತಿಯೊಂದು ಪ್ರದೇಶಕ್ಕೂ ಪ್ರಯೋಜನ ನೀಡುತ್ತಿದೆ.
ಸ್ನೇಹಿತರೆ,
ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ ಭಾರತ)ದ ಕಡೆಗಿನ ಪ್ರಯಾಣದಲ್ಲಿ ತಮಿಳುನಾಡು ನಿರ್ಣಾಯಕ ಪಾತ್ರ ವಹಿಸುತ್ತದೆ. ತಮಿಳುನಾಡು ಬಲಗೊಂಡಷ್ಟೂ ಭಾರತದ ಬೆಳವಣಿಗೆ ವೇಗವಾಗಿರುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಕಳೆದ ದಶಕದಲ್ಲಿ, ಕೇಂದ್ರ ಸರ್ಕಾರದಿಂದ ತಮಿಳುನಾಡಿಗೆ ಹಂಚಿಕೆಯಾದ ಹಣವು 2014ಕ್ಕಿಂತ ಮೊದಲಿಗೆ ಹೋಲಿಸಿದರೆ 3 ಪಟ್ಟು ಹೆಚ್ಚಾಗಿದೆ. ಮೋದಿ ಸರ್ಕಾರವು ತಮಿಳುನಾಡಿಗೆ ಒದಗಿಸಿದ ಹಣಕಾಸಿನ ಪ್ರಮಾಣವು ಅದು ಅಧಿಕಾರದಲ್ಲಿದ್ದಾಗ ಐಎನ್ ಡಿಐ ಮೈತ್ರಿಕೂಟಕ್ಕಿಂತ 3 ಪಟ್ಟು ಹೆಚ್ಚಾಗಿದೆ, ಆಗ ಡಿಎಂಕೆ ಆ ಸರ್ಕಾರದ ಭಾಗವಾಗಿತ್ತು. ಇದು ತಮಿಳುನಾಡಿನ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಯನ್ನು ಬಹಳವಾಗಿ ಹೆಚ್ಚಿಸಿದೆ.
ಸ್ನೇಹಿತರೆ,
ತಮಿಳುನಾಡಿನ ಮೂಲಸೌಕರ್ಯವು ಭಾರತ ಸರ್ಕಾರಕ್ಕೆ ಪ್ರಮುಖ ಆದ್ಯತೆಯಾಗಿದೆ. ಕಳೆದ ದಶಕದಲ್ಲಿ, ತಮಿಳುನಾಡಿಗೆ ರೈಲ್ವೆ ಬಜೆಟ್ ಅನ್ನು 7 ಪಟ್ಟು ಹೆಚ್ಚು ಹೆಚ್ಚಿಸಲಾಗಿದೆ. ಆದರೂ, ಕೆಲವು ಜನರಿಗೆ ಕಾರಣವಿಲ್ಲದೆ ದೂರು ನೀಡುವ ಅಭ್ಯಾಸವಿದೆ – ಅವರು ವಿಷಯಗಳ ಬಗ್ಗೆ ಅಳುತ್ತಲೇ ಇರುತ್ತಾರೆ. 2014ರ ಮೊದಲು, ತಮಿಳುನಾಡಿನಲ್ಲಿ ರೈಲ್ವೆ ಯೋಜನೆಗಳಿಗೆ ವಾರ್ಷಿಕ ಹಂಚಿಕೆ ಕೇವಲ 900 ಕೋಟಿ ರೂಪಾಯಿಗಳಾಗಿತ್ತು. ಮತ್ತು ಆ ಸಮಯದಲ್ಲಿ ಐಎನ್ ಡಿಐ ಮೈತ್ರಿಕೂಟದಉಸ್ತುವಾರಿ ಯಾರು ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಆದರೆ ಈ ವರ್ಷ, ತಮಿಳುನಾಡಿನ ರೈಲ್ವೆ ಬಜೆಟ್ 6,000 ಕೋಟಿ ರೂಪಾಯಿನ್ನು ಮೀರಿದೆ. ಭಾರತ ಸರ್ಕಾರವು ರಾಮೇಶ್ವರಂ ನಿಲ್ದಾಣ ಸೇರಿದಂತೆ ರಾಜ್ಯಾದ್ಯಂತ 77 ರೈಲು ನಿಲ್ದಾಣಗಳನ್ನು ಆಧುನೀಕರಿಸುತ್ತಿದೆ.
ಸ್ನೇಹಿತರೆ,
ಕಳೆದ 10 ವರ್ಷಗಳಲ್ಲಿ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ, ಗ್ರಾಮೀಣ ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಅಗಾಧ ಪ್ರಗತಿ ಸಾಧಿಸಲಾಗಿದೆ. ಕೇಂದ್ರ ಸರ್ಕಾರದ ಸಹಾಯದಿಂದ 2014ರಿಂದ ತಮಿಳುನಾಡಿನಲ್ಲಿ 4,000 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗಿದೆ. ಚೆನ್ನೈ ಬಂದರು ಸಂಪರ್ಕಿಸುವ ಎತ್ತರದ ಕಾರಿಡಾರ್ ಆಧುನಿಕ ಮೂಲಸೌಕರ್ಯದ ಅದ್ಭುತವಾಗಲಿದೆ. ಇಂದು ಸುಮಾರು 8,000 ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಉದ್ಘಾಟನೆ ನೆರವೇರಿಸಲಾಗಿದೆ. ಈ ಯೋಜನೆಗಳು ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಸಂಪರ್ಕ ಹೆಚ್ಚಿಸುತ್ತವೆ ಮತ್ತು ಆಂಧ್ರ ಪ್ರದೇಶದೊಂದಿಗೆ ಸಂಪರ್ಕ ಬಲಪಡಿಸುತ್ತವೆ.
ಸ್ನೇಹಿತರೆ,
ಚೆನ್ನೈ ಮೆಟ್ರೋದಂತಹ ಆಧುನಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ತಮಿಳುನಾಡಿನಲ್ಲಿ ಪ್ರಯಾಣದ ಸುಲಭತೆಯನ್ನು ಹೆಚ್ಚಿಸುತ್ತಿವೆ. ಹಲವು ಮೂಲಸೌಕರ್ಯ ಯೋಜನೆಗಳು ಅಭಿವೃದ್ಧಿಗಾಂದಾಗ ಅವು ಬಹು ವಲಯಗಳಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಈ ಯೋಜನೆಗಳು ನಮ್ಮ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ತೆರೆಯುತ್ತವೆ.
ಸ್ನೇಹಿತರೆ,
ಕಳೆದ ದಶಕದಲ್ಲಿ, ಭಾರತ ಸಾಮಾಜಿಕ ಮೂಲಸೌಕರ್ಯದಲ್ಲಿ ದಾಖಲೆಯ ಹೂಡಿಕೆಗಳನ್ನು ಮಾಡಿದೆ. ತಮಿಳುನಾಡಿನ ಲಕ್ಷಾಂತರ ಬಡ ಕುಟುಂಬಗಳು ಇದರಿಂದ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದರಿಂದ ನನಗೆ ಸಂತೋಷವಾಗಿದೆ. ಕಳೆದ 10 ವರ್ಷಗಳಲ್ಲಿ, ದೇಶಾದ್ಯಂತ ಬಡ ಕುಟುಂಬಗಳಿಗೆ 4 ಕೋಟಿಗೂ ಹೆಚ್ಚು ಪಕ್ಕಾ(ಶಾಶ್ವತ) ಮನೆಗಳನ್ನು ಒದಗಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ, ತಮಿಳುನಾಡಿನ ನನ್ನ ಬಡ ಕುಟುಂಬಗಳಿಗೆ 12 ಲಕ್ಷಕ್ಕೂ ಹೆಚ್ಚು ಪಕ್ಕಾ ಮನೆಗಳನ್ನು ನೀಡಲಾಗಿದೆ. ಕಳೆದ 10 ವರ್ಷಗಳಲ್ಲಿ, ಸುಮಾರು 12 ಕೋಟಿ ಗ್ರಾಮೀಣ ಕುಟುಂಬಗಳು ಮೊದಲ ಬಾರಿಗೆ ಪೈಪ್ ನೀರಿನ ಸಂಪರ್ಕ ಪಡೆದಿವೆ. ಇದರಲ್ಲಿ ತಮಿಳುನಾಡಿನಲ್ಲಿ 1 ಕೋಟಿ 11 ಲಕ್ಷ ಕುಟುಂಬಗಳು ಸೇರಿವೆ. ಮೊದಲ ಬಾರಿಗೆ ನಲ್ಲಿ ನೀರು ಅವರ ಮನೆಗಳನ್ನು ತಲುಪಿದೆ. ಇದು ತಮಿಳುನಾಡಿನ ತಾಯಂದಿರು ಮತ್ತು ಸಹೋದರಿಯರಿಗೆ ದೊಡ್ಡ ಪರಿಹಾರವಾಗಿದೆ.
ಸ್ನೇಹಿತರೆ,
ನಮ್ಮ ನಾಗರಿಕರಿಗೆ ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ಸೇವೆ ಒದಗಿಸುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯ ಪರಿಣಾಮ ನೋಡಿ – ಈ ಯೋಜನೆಯಡಿ, ತಮಿಳುನಾಡಿನಲ್ಲಿ ಈಗಾಗಲೇ 1 ಕೋಟಿಗೂ ಹೆಚ್ಚು ಚಿಕಿತ್ಸೆಗಳನ್ನು ನೀಡಲಾಗಿದೆ. ಇದರಿಂದಾಗಿ ತಮಿಳುನಾಡಿನ ಕುಟುಂಬಗಳಿಗೆ 8,000 ಕೋಟಿ ರೂಪಾಯಿ ಉಳಿತಾಯವಾಗಿದೆ – ಇಲ್ಲದಿದ್ದರೆ ಅವರ ಜೇಬಿನಿಂದ ಹಣ ಖರ್ಚು ಮಾಡಬೇಕಾಗಿತ್ತು. ನನ್ನ ತಮಿಳುನಾಡಿನ ಸಹೋದರ ಸಹೋದರಿಯರ ಜೇಬಿನಲ್ಲಿ 8,000 ಕೋಟಿ ರೂಪಾಯಿ ಉಳಿದಿರುವುದು ಒಂದು ದೊಡ್ಡ ಅಂಕಿಅಂಶವಾಗಿದೆ. ತಮಿಳುನಾಡಿನಲ್ಲಿ 1,400ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳಿವೆ. ಅಲ್ಲಿ ಔಷಧಿಗಳು 80% ರಿಯಾಯಿತಿಯಲ್ಲಿ ಲಭ್ಯವಿದೆ. ಈ ಕೈಗೆಟುಕುವ ಔಷಧಿಗಳಿಂದಾಗಿ, ತಮಿಳುನಾಡಿನಲ್ಲಿರುವ ನನ್ನ ಸಹೋದರ ಸಹೋದರಿಯರು ಆರೋಗ್ಯ ವೆಚ್ಚದಲ್ಲಿ 700 ಕೋಟಿ ರೂಪಾಯಿ ಉಳಿಸಿದ್ದಾರೆ. ಅದಕ್ಕಾಗಿಯೇ ನಾನು ನನ್ನ ತಮಿಳುನಾಡಿನ ಸಹೋದರ ಸಹೋದರಿಯರನ್ನು ಒತ್ತಾಯಿಸುತ್ತೇನೆ – ನೀವು ಔಷಧಿಗಳನ್ನು ಖರೀದಿಸಬೇಕಾದರೆ, ಯಾವಾಗಲೂ ಜನೌಷಧಿ ಕೇಂದ್ರಗಳಿಗೆ ಭೇಟಿ ನೀಡಿ. ಬೇರೆಡೆ ಮಾರಾಟವಾಗುವ 1 ರೂಪಾಯಿ ಬೆಲೆಯ ಔಷಧಿಗಳನ್ನು ಇಲ್ಲಿ ಕೇವಲ 20, 25 ಅಥವಾ 30 ಪೈಸೆಗೆ ಖರೀದಿಸಬಹುದು.
ಸ್ನೇಹಿತರೆ,
ಯುವ ಭಾರತೀಯರು ಇನ್ನು ಮುಂದೆ ವೈದ್ಯರಾಗಲು ವಿದೇಶಗಳಿಗೆ ಹೋಗಬೇಕಾಗಿಲ್ಲ ಎಂಬುದನ್ನು ಖಚಿತಪಡಿಸುವುದು ನಮ್ಮ ಗುರಿಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ತಮಿಳುನಾಡು 11 ಹೊಸ ವೈದ್ಯಕೀಯ ಕಾಲೇಜುಗಳನ್ನು ಪಡೆದುಕೊಂಡಿದೆ.
ಸ್ನೇಹಿತರೆ,
ದೇಶಾದ್ಯಂತ ಹಲವಾರು ರಾಜ್ಯಗಳು ಪ್ರಾದೇಶಿಕ ಭಾಷೆಗಳಲ್ಲಿ ವೈದ್ಯಕೀಯ ಶಿಕ್ಷಣ ನೀಡಲು ಪ್ರಾರಂಭಿಸಿವೆ. ಈಗ, ಇಂಗ್ಲಿಷ್ ಓದದೇ ಇರುವ ಬಡ ತಾಯಂದಿರ ಮಕ್ಕಳು ಸಹ ವೈದ್ಯರಾಗಬಹುದು. ತಮಿಳುನಾಡು ಸರ್ಕಾರವು ತಮಿಳಿನಲ್ಲಿ ವೈದ್ಯಕೀಯ ಕೋರ್ಸ್‌ಗಳನ್ನು ಪರಿಚಯಿಸಬೇಕೆಂದು ನಾನು ಒತ್ತಾಯಿಸುತ್ತೇನೆ, ಇದರಿಂದ ಹಿಂದುಳಿದ ಕುಟುಂಬಗಳ ಮಕ್ಕಳು ಸಹ ವೈದ್ಯರಾಗುವ ತಮ್ಮ ಕನಸನ್ನು ನನಸಾಗಿಸಬಹುದು.
ಸ್ನೇಹಿತರೆ,
ತೆರಿಗೆದಾರರ ಪ್ರತಿ ರೂಪಾಯಿ ಹಣ ಬಡ ನಾಗರಿಕರಿಗೆ ಪ್ರಯೋಜನ ನೀಡುತ್ತದೆ ಎಂಬುದನ್ನು ಖಚಿತಪಡಿಸುವುದು ಉತ್ತಮ ಆಡಳಿತದ ಸಾರ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಅಡಿ, ತಮಿಳುನಾಡಿನ ಸಣ್ಣ ರೈತರು ಸುಮಾರು 12,000 ಕೋಟಿ ರೂಪಾಯಿ ಪಡೆದಿದ್ದಾರೆ. ಹೆಚ್ಚುವರಿಯಾಗಿ, ತಮಿಳುನಾಡಿನ ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ, 14,800 ಕೋಟಿ ರೂಪಾಯಿ ಕ್ಲೈಮ್‌ಗಳನ್ನು ಪಡೆದಿದ್ದಾರೆ.
ಸ್ನೇಹಿತರೆ,
ಭಾರತದ ಬೆಳವಣಿಗೆಯನ್ನು ನಮ್ಮ ನೀಲಿ ಆರ್ಥಿಕತೆಯು ಗಮನಾರ್ಹವಾಗಿ ನಡೆಸುತ್ತದೆ, ಈ ವಲಯದಲ್ಲಿ ತಮಿಳುನಾಡಿನ ಶಕ್ತಿಯನ್ನು ಜಗತ್ತು ನೋಡಬಹುದು. ತಮಿಳುನಾಡಿನ ಮೀನುಗಾರಿಕೆ ಸಮುದಾಯವು ನಂಬಲಾಗದಷ್ಟು ಶ್ರಮಶೀಲವಾಗಿದೆ. ತಮಿಳುನಾಡಿನ ಮೀನುಗಾರಿಕೆ ಮೂಲಸೌಕರ್ಯ ಬಲಪಡಿಸಲು ಕೇಂದ್ರ ಸರ್ಕಾರವು ರಾಜ್ಯಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದೆ. ಕಳೆದ 5 ವರ್ಷಗಳಲ್ಲಿ, ತಮಿಳುನಾಡು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ, ನೂರಾರು ಕೋಟಿಗಳನ್ನು ಪಡೆದಿದೆ. ಮೀನುಗಾರರಿಗೆ ಗರಿಷ್ಠ ಮತ್ತು ಆಧುನಿಕ ಸೌಲಭ್ಯಗಳು ಸಿಗುವುದನ್ನು ಖಚಿತಪಡಿಸಲು ನಾವು ಬಯಸುತ್ತೇವೆ. ಅದು ಸಮುದ್ರ ತೀರದ ಉದ್ಯಾನವನಗಳಾಗಲಿ, ಮೀನುಗಾರಿಕೆ ಬಂದರುಗಳಾಗಲಿ ಅಥವಾ ಇಳಿಯುವ ಕೇಂದ್ರಗಳಾಗಲಿ, ಕೇಂದ್ರ ಸರ್ಕಾರವು ಕೋಟ್ಯಂತರ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದೆ. ನಿಮ್ಮ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆಯೂ ನಾವು ಕಾಳಜಿ ವಹಿಸುತ್ತೇವೆ. ಬಿಕ್ಕಟ್ಟಿನ ಸಮಯದಲ್ಲಿ ಭಾರತ ಸರ್ಕಾರ ಮೀನುಗಾರರೊಂದಿಗೆ ದೃಢವಾಗಿ ನಿಲ್ಲುತ್ತದೆ. ಭಾರತ ಸರ್ಕಾರದ ಪ್ರಯತ್ನಗಳಿಂದಾಗಿ, ಕಳೆದ 10 ವರ್ಷಗಳಲ್ಲಿ 3,700ಕ್ಕೂ ಹೆಚ್ಚು ಮೀನುಗಾರರನ್ನು ಶ್ರೀಲಂಕಾದಿಂದ ಸುರಕ್ಷಿತವಾಗಿ ಮರಳಿ ಕರೆತರಲಾಗಿದೆ. ಇವರಲ್ಲಿ, ಕಳೆದ ವರ್ಷವಷ್ಟೇ 600ಕ್ಕೂ ಹೆಚ್ಚು ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ. ನಮ್ಮ ಕೆಲವು ಮೀನುಗಾರರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು ಎಂಬುದು ನಿಮಗೆಲ್ಲಾ ನೆನಪಿರಬಹುದು. ಆದರೆ ಅವರನ್ನು ಜೀವಂತವಾಗಿ ಮರಳಿ ಕರೆತರಲು ಮತ್ತು ಭಾರತದಲ್ಲಿರುವ ಅವರ ಕುಟುಂಬಗಳೊಂದಿಗೆ ಅವರನ್ನು ಮತ್ತೆ ಒಂದುಗೂಡಿಸಲು ನಾವು ಅವಿಶ್ರಾಂತವಾಗಿ ಕೆಲಸ ಮಾಡಿದ್ದೇವೆ.
ಸ್ನೇಹಿತರೆ,
ಇಂದು ಭಾರತದ ಬಗ್ಗೆ ಇಡೀ ವಿಶ್ವದ ಆಕರ್ಷಣೆ ಹೆಚ್ಚುತ್ತಿದೆ. ಜನರು ಭಾರತವನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ತಿಳಿದುಕೊಳ್ಳಲು ಮತ್ತು ಅರ್ಥ ಮಾಡಿಕೊಳ್ಳಲು ಬಯಸುತ್ತಾರೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಮೃದು ಶಕ್ತಿ. ತಮಿಳು ಭಾಷೆ ಮತ್ತು ಪರಂಪರೆ ಪ್ರಪಂಚದ ಮೂಲೆ ಮೂಲೆಗೂ ತಲುಪುವಂತೆ ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಕೆಲವೊಮ್ಮೆ, ತಮಿಳುನಾಡಿನ ಕೆಲವು ನಾಯಕರಿಂದ ನನಗೆ ಬಂದ ಪತ್ರಗಳನ್ನು ನೋಡಿದಾಗ ನನಗೆ ಆಶ್ಚರ್ಯವಾಗುತ್ತದೆ – ಒಬ್ಬರೂ ತಮಿಳಿನಲ್ಲಿ ತಮ್ಮ ಹೆಸರನ್ನು ಸಹಿ ಮಾಡುವುದಿಲ್ಲ! ತಮಿಳು ಹೆಮ್ಮೆಯ ವಿಷಯವಾಗಿದೆ, ಮತ್ತು ಈ ಅದ್ಭುತ ಭಾಷೆಯನ್ನು ಗೌರವಿಸಲು ಪ್ರತಿಯೊಬ್ಬರೂ ಕನಿಷ್ಠ ತಮಿಳಿನಲ್ಲಿ ತಮ್ಮ ಹೆಸರನ್ನು ಸಹಿ ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ. 21ನೇ ಶತಮಾನದಲ್ಲಿ ನಾವು ಈ ಮಹಾನ್ ಸಂಪ್ರದಾಯವನ್ನು ಮುಂದಕ್ಕೆ ಕೊಂಡೊಯ್ಯಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ. ರಾಮೇಶ್ವರಂ ಮತ್ತು ತಮಿಳುನಾಡಿನ ಪವಿತ್ರ ಭೂಮಿ ನಮಗೆ ಸ್ಫೂರ್ತಿ ಮತ್ತು ಚೈತನ್ಯ ನೀಡುತ್ತದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಇಂದು ಅದ್ಭುತ ಕಾಕತಾಳೀಯವನ್ನು ನೋಡಿ. ಇದು ರಾಮನವಮಿಯ ಶುಭ ಸಂದರ್ಭ. ನಾವು ರಾಮೇಶ್ವರಂನ ಪವಿತ್ರ ಭೂಮಿಯಲ್ಲಿದ್ದೇವೆ. ಇಂದು ಹೊಸ ಪಂಬನ್ ಸೇತುವೆ ಉದ್ಘಾಟಿಸಲಾಗಿದೆ. 100 ವರ್ಷಗಳ ಹಿಂದೆ ಹಳೆಯ ಪಂಬನ್ ಸೇತುವೆಯನ್ನು ಗುಜರಾತ್‌ನಲ್ಲಿ ಜನಿಸಿದ ವ್ಯಕ್ತಿಯೊಬ್ಬರು ನಿರ್ಮಿಸಿದರು. ಇಂದು 100 ವರ್ಷಗಳ ನಂತರ, ಗುಜರಾತ್‌ನಲ್ಲಿ ಜನಿಸಿದ ವ್ಯಕ್ತಿಯೇ ಹೊಸ ಪಂಬನ್ ಸೇತುವೆಯನ್ನು ಮತ್ತೊಮ್ಮೆ ಉದ್ಘಾಟಿಸಿದ್ದಾರೆ.
ಸ್ನೇಹಿತರೆ,
ರಾಮನವಮಿಯ ಈ ಶುಭ ಸಂದರ್ಭದಲ್ಲಿ, ನಾವು ರಾಮೇಶ್ವರಂನ ಪವಿತ್ರ ಭೂಮಿಯಲ್ಲಿ ನಿಂತಿರುವಾಗ, ನಾನು ತುಂಬಾ ಭಾವುಕನಾಗಿದ್ದೇನೆ. ಇಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸ್ಥಾಪನಾ ದಿನವೂ ಆಗಿದೆ. ನಾವು ಶ್ರಮಿಸುತ್ತಿರುವ ಬಲವಾದ, ಸಮೃದ್ಧ ಮತ್ತು ವಿಕಸಿತ ಭಾರತದ ದೃಷ್ಟಿಕೋನವು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರ ಅವಿಶ್ರಾಂತ ಪ್ರಯತ್ನಗಳಿಂದ ನಡೆಸಲ್ಪಡುತ್ತದೆ. 3-4 ತಲೆಮಾರುಗಳು ಭಾರತ ಮಾತೆಯ ಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟಿವೆ. ಬಿಜೆಪಿಯ ಆದರ್ಶಗಳು ಮತ್ತು ಲಕ್ಷಾಂತರ ಬಿಜೆಪಿ ಕಾರ್ಯಕರ್ತರ ಕಠಿಣ ಪರಿಶ್ರಮವು ಇಂದು ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ನಮಗೆ ಅವಕಾಶ ನೀಡಿದೆ ಎಂಬುದು ನನಗೆ ತುಂಬಾ ಹೆಮ್ಮೆಯ ವಿಷಯವಾಗಿದೆ. ದೇಶದ ಜನರು ಬಿಜೆಪಿ ನೇತೃತ್ವದ ಸರ್ಕಾರಗಳ ಉತ್ತಮ ಆಡಳಿತವನ್ನು ನೋಡುತ್ತಿದ್ದಾರೆ. ಅವರು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರಗಳಿಗೆ ಸಾಕ್ಷಿಯಾಗುತ್ತಾರೆ ಮತ್ತು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯ ಭಾವನೆ ಅನುಭವಿಸುತ್ತಾನೆ. ಪ್ರತಿಯೊಂದು ರಾಜ್ಯದಲ್ಲೂ, ದೇಶದ ಪ್ರತಿಯೊಂದು ಮೂಲೆಯಲ್ಲೂ, ಬಿಜೆಪಿ ಕಾರ್ಯಕರ್ತರು ಜನರೊಂದಿಗೆ ಆಳವಾಗಿ ಸಂಪರ್ಕ ಹೊಂದಿದ್ದಾರೆ, ನೆಲದ ಮೇಲೆ ಕೆಲಸ ಮಾಡುತ್ತಾರೆ ಮತ್ತು ಬಡವರಿಗೆ ಸೇವೆ ಸಲ್ಲಿಸುತ್ತಾರೆ. ಅವರ ಸಮರ್ಪಣೆಯನ್ನು ನೋಡುವುದು ನನಗೆ ಅಪಾರ ಹೆಮ್ಮೆಯನ್ನು ತುಂಬುತ್ತದೆ. ಲಕ್ಷಾಂತರ ಬಿಜೆಪಿ ಕಾರ್ಯಕರ್ತರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ, ಅವರಿಗೆ ನನ್ನ ಶುಭಾಶಯಗಳನ್ನು ಅರ್ಪಿಸುತ್ತೇನೆ. ಮತ್ತೊಮ್ಮೆ, ತಮಿಳುನಾಡಿನಲ್ಲಿ ಈ ಅಭಿವೃದ್ಧಿ ಯೋಜನೆಗಳಿಗಾಗಿ ನಿಮ್ಮೆಲ್ಲರನ್ನೂ ನಾನು ಅಭಿನಂದಿಸುತ್ತೇನೆ!
ನಂದ್ರಿ! ವಣಕ್ಕಂ! ಮೀಂಡಮ್ ಸಂಧಿಪ್ಪೊಂ!
ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
Delighted to be in Rameswaram on the very special day of Ram Navami. Speaking at the launch of development works aimed at strengthening connectivity and improving 'Ease of Living' for the people of Tamil Nadu. https://t.co/pWgStNEhYD
— Narendra Modi (@narendramodi) April 6, 2025
Greetings on the occasion of Ram Navami. pic.twitter.com/qoon91uaO3
— PMO India (@PMOIndia) April 6, 2025
I feel blessed that I could pray at the Ramanathaswamy Temple today: PM @narendramodi pic.twitter.com/kxfmiU5wlS
— PMO India (@PMOIndia) April 6, 2025
The new Pamban Bridge to Rameswaram brings technology and tradition together: PM @narendramodi pic.twitter.com/KAGULgABp3
— PMO India (@PMOIndia) April 6, 2025
Today, mega projects are progressing rapidly across the country: PM @narendramodi pic.twitter.com/QD5ezSWefW
— PMO India (@PMOIndia) April 6, 2025
India's growth will be significantly driven by our Blue Economy. The world can see Tamil Nadu's strength in this domain: PM @narendramodi pic.twitter.com/MXyPcIGPFk
— PMO India (@PMOIndia) April 6, 2025
The government is continuously working to ensure that the Tamil language and heritage reach every corner of the world: PM @narendramodi pic.twitter.com/QwSKlV8ZBG
— PMO India (@PMOIndia) April 6, 2025
The new Pamban bridge boosts ‘Ease of Doing Business’ and ‘Ease of Travel.’ pic.twitter.com/JwPZTe61L6
— Narendra Modi (@narendramodi) April 6, 2025
In all parts of India, futuristic infrastructure projects are adding pace to our growth journey. pic.twitter.com/y8MDfb0TTK
— Narendra Modi (@narendramodi) April 6, 2025
Tamil Nadu will always play an important role in building a Viksit Bharat! pic.twitter.com/TKEExJwouj
— Narendra Modi (@narendramodi) April 6, 2025