Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ಗಾಂಧಿಗ್ರಾಮ ಗ್ರಾಮೀಣ ಸಂಸ್ಥೆಯ 36ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ

ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ಗಾಂಧಿಗ್ರಾಮ ಗ್ರಾಮೀಣ ಸಂಸ್ಥೆಯ 36ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ಗಾಂಧಿಗ್ರಾಮ ಗ್ರಾಮೀಣ ಸಂಸ್ಥೆಯ 36 ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದರು. ಘಟಿಕೋತ್ಸವ ಸಮಾರಂಭದಲ್ಲಿ 2018-19 ಮತ್ತು 2019-20 ನೇ ತಂಡಗಳ 2300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಪಡೆದರು. ಇದರ ನಂತರ ಪ್ರಧಾನಮಂತ್ರಿಯವರು ವಿಜೇತರಿಗೆ ಚಿನ್ನದ ಪದಕಗಳನ್ನು ಮತ್ತು ಅರ್ಹ ಅಭ್ಯರ್ಥಿಗಳಿಗೆ ಗೌರವ ಪದವಿ ಪ್ರದಾನ ಮಾಡಿದರು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಮಹಾತ್ಮ ಗಾಂಧಿಯವರು ಉದ್ಘಾಟಿಸಿದ ಗಾಂಧಿಗ್ರಾಮ ಸಂಸ್ಥೆಗೆ ಬಂದಿರುವುದು ನನಗೆ ಬಹಳ ಸ್ಫೂರ್ತಿದಾಯಕ ಅನುಭವವಾಗಿದೆ ಎಂದರು. ಸಂಸ್ಥೆಯಲ್ಲಿ ಮಹಾತ್ಮರ ಆದರ್ಶಗಳು ಮತ್ತು ಗ್ರಾಮೀಣ ಅಭಿವೃದ್ಧಿಯ ತತ್ವಗಳ ಚೈತನ್ಯವನ್ನು ಕಾಣಬಹುದು ಎಂದು ಅವರು ಹೇಳಿದರು. ಮಹಾತ್ಮಾ ಗಾಂಧಿಯವರ ಆದರ್ಶಗಳು ಇಂದಿಗೆ ಅತ್ಯಂತ ಪ್ರಸ್ತುತವಾಗಿವೆ, ಸಂಘರ್ಷಗಳು ಅಥವಾ ಹವಾಮಾನ ಬಿಕ್ಕಟ್ಟುಗಳಂತಹ ಇಂದು ಜಗತ್ತು ಎದುರಿಸುತ್ತಿರುವ ಅನೇಕ ಸವಾಲುಗಳು ಮತ್ತು ಜ್ವಲಂತ ಸಮಸ್ಯೆಗಳಿಗೆ ಅವರ ಸಿದ್ಥಾಂತಗಳಲ್ಲಿ ಉತ್ತರಗಳಿವೆ ಎಂದು ಪ್ರಧಾನಿ ಹೇಳಿದರು.

ಗಾಂಧೀಜಿಯವರ ಜೀವನ ವಿಧಾನವು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರಲು ಉತ್ತಮ ಅವಕಾಶವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು ಮತ್ತು ಮಹಾತ್ಮ ಗಾಂಧಿಯವರ ಹೃದಯಕ್ಕೆ ಹತ್ತಿರವಾದ ವಿಚಾರಗಳ ಮೇಲೆ ಕೆಲಸ ಮಾಡುವುದು ಅವರಿಗೆ ನೀಡುವ ಅತ್ಯುತ್ತಮ ಗೌರವವಾಗಿದೆ ಎಂದು ತಿಳಿಸಿದರು. ಬಹಳ ಸಮಯದ ನಂತರ ನಿರ್ಲಕ್ಷಿಸಲ್ಪಟ್ಟ ಮತ್ತು ಮರೆತುಹೋದ ಖಾದಿ ಬಟ್ಟೆಯನ್ನು ಪುನರುಜ್ಜೀವಗೊಳಿಸಿದ ‘ದೇಶಕ್ಕಾಗಿ ಖಾದಿ, ಫ್ಯಾಷನ್‌ ಗಾಗಿ ಖಾದಿ’ಎಂಬ ಉದಾಹರಣೆಗಳನ್ನು ಪ್ರಧಾನಿ ನೀಡಿದರು. ಕಳೆದ 8 ವರ್ಷಗಳಲ್ಲಿ ಖಾದಿ ಕ್ಷೇತ್ರದ ಮಾರಾಟ ಶೇ.300ಕ್ಕೂ ಅಧಿಕ ಏರಿಕೆ ಕಂಡಿದೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಕಳೆದ ವರ್ಷ 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸಿದೆ ಎಂದು ಅವರು ಹೇಳಿದರು. ಈಗ, ಜಾಗತಿಕ ಫ್ಯಾಷನ್ ಬ್ರ್ಯಾಂಡ್‌ಗಳು ಸಹ ಅದರ ಪರಿಸರ ಸ್ನೇಹಿ ಗುಣಲಕ್ಷಣಗಳಿಂದಾಗಿ ಖಾದಿಯನ್ನು ತೆಗೆದುಕೊಳ್ಳುತ್ತಿವೆ ಎಂದರು. ಇದು ಸಾಮೂಹಿಕ ಉತ್ಪಾದನೆಯ ಕ್ರಾಂತಿಯಲ್ಲ, ಜನಸಾಮಾನ್ಯರಿಂದ ಉತ್ಪಾದನೆಯ ಕ್ರಾಂತಿ ಯಾಗಿದೆ ಎಂದು ಅವರು ಹೇಳಿದರು. ಮಹಾತ್ಮ ಗಾಂಧಿಯವರು ಖಾದಿಯನ್ನು ಹಳ್ಳಿಗಳ ಸ್ವಾವಲಂಬನೆಯ ಸಾಧನವಾಗಿ ಹೇಗೆ ನೋಡಿದ್ದರೆಂದು ನೆನಪಿಸಿಕೊಂಡ ಪ್ರಧಾನಿ, ಆತ್ಮನಿರ್ಭರ ಭಾರತಕ್ಕಾಗಿ ಕೆಲಸ ಮಾಡುತ್ತಿರುವ ಸರ್ಕಾರವು ಅವರಿಂದ ಪ್ರೇರಿತವಾಗಿದೆ ಎಂದು ಹೇಳಿದರು. ತಮಿಳುನಾಡು ಸ್ವದೇಶಿ ಚಳವಳಿಯ ಪ್ರಮುಖ ಕೇಂದ್ರವಾಗಿತ್ತು. ಇದು ಮತ್ತೊಮ್ಮೆ ಆತ್ಮನಿರ್ಭರ ಭಾರತದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಮಹಾತ್ಮ ಗಾಂಧೀಜಿಯವರ ಗ್ರಾಮೀಣ ಅಭಿವೃದ್ಧಿಯ ದೂರದೃಷ್ಟಿಯನ್ನು ಅರ್ಥಮಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು ಗ್ರಾಮೀಣ ಜೀವನದ ಮೌಲ್ಯಗಳನ್ನು ಸಂರಕ್ಷಿಸುವ ಮೂಲಕ ಹಳ್ಳಿಗಳು ಪ್ರಗತಿಯಾಗಬೇಕೆಂದು ಅವರು ಬಯಸಿದ್ದರು ಎಂದು ಹೇಳಿದರು. ಗ್ರಾಮೀಣಾಭಿವೃದ್ಧಿಯತ್ತ ಸರ್ಕಾರದ ದೃಷ್ಟಿಕೋನವು ಮಹಾತ್ಮ ಗಾಂಧಿಯವರ ಆದರ್ಶಗಳಿಂದ ಸ್ಫೂರ್ತಿ ಪಡೆದಿದೆ ಎಂದು ಶ್ರೀ ಮೋದಿ ಹೇಳಿದರು. ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ  ಎಲ್ಲಿಯವರೆಗೆ ಅಸಮಾನತೆ ಇರುವುದಿಲ್ಲವೋ ಅಲ್ಲಿಯವರೆಗೆ ಅವುಗಳ ನಡುವಿನ ವ್ಯತ್ಯಾಸವು ಸ್ವೀಕಾರಾರ್ಹ ಎಂದು ಅವರು ಹೇಳಿದರು. ಸಂಪೂರ್ಣ ಗ್ರಾಮೀಣ ನೈರ್ಮಲ್ಯ ವ್ಯಾಪ್ತಿ, 6 ಕೋಟಿ ಮನೆಗಳಿಗೆ ನಲ್ಲಿ ನೀರು, 2.5 ಕೋಟಿ ವಿದ್ಯುತ್ ಸಂಪರ್ಕ, ರಸ್ತೆಗಳ ಮೂಲಕ ಗ್ರಾಮೀಣ ಸಂಪರ್ಕವನ್ನು ಹೆಚ್ಚಿಸಿದ ಉದಾಹರಣೆಗಳನ್ನು ನೀಡಿದ ಪ್ರಧಾನಿಯವರು, ಸರ್ಕಾರವು ಅಭಿವೃದ್ಧಿಯನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದ್ದು ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ಇದ್ದ ಅಸಮಾನತೆಯನ್ನು ಸರಿಪಡಿಸುತ್ತಿದೆ ಎಂದರು.

ನೈರ್ಮಲ್ಯವು ಮಹಾತ್ಮ ಗಾಂಧಿ ಅವರಿಗೆ ಅತ್ಯಂತ ಪ್ರಿಯವಾದ ಪರಿಕಲ್ಪನೆಯಾಗಿತ್ತು ಎಂದು ಸ್ಮರಿಸಿದ ಪ್ರಧಾನಿಯವರು, ಸ್ವಚ್ಛ ಭಾರತದ ಉದಾಹರಣೆಯನ್ನು ನೀಡಿದರು. ಸರ್ಕಾರ ಮೂಲಭೂತ ಸೌಲಭ್ಯಗಳನ್ನು ತಲುಪಿಸುವುದನ್ನು ನಿಲ್ಲಿಸದೆ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಯೋಜನಗಳೊಂದಿಗೆ ಹಳ್ಳಿಗಳನ್ನು ಸಂಪರ್ಕಿಸುತ್ತಿದೆ ಎಂದು ಅವರು ಹೇಳಿದರು. ಸುಮಾರು 2 ಲಕ್ಷ ಗ್ರಾಮ ಪಂಚಾಯತ್ ಗಳಿಗೆ ಸಂಪರ್ಕ ಕಲ್ಪಿಸಲು 6 ಲಕ್ಷ ಕಿಲೋಮೀಟರ್ ಆಪ್ಟಿಕ್ ಫೈಬರ್ ಕೇಬಲ್ ಹಾಕಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

ಗ್ರಾಮೀಣಾಭಿವೃದ್ಧಿಯಲ್ಲಿ ಸುಸ್ಥಿರತೆಯ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ, ಯುವಜನರು ಅಂತಹ ಕ್ಷೇತ್ರಗಳಲ್ಲಿ ನಾಯಕತ್ವವನ್ನು ವಹಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳ ಭವಿಷ್ಯಕ್ಕಾಗಿ ಸುಸ್ಥಿರ ಕೃಷಿಯು ಪ್ರಮುಖವಾಗಿದೆ ಎಂದು ಅವರು ಹೇಳಿದರು ಮತ್ತು ಸಹಜ ಕೃಷಿಗೆ ಹೆಚ್ಚಿನ ಉತ್ಸಾಹ ದೊರೆಯುತ್ತಿದೆ ಎಂದರು. ನಮ್ಮ ಸಾವಯವ ಕೃಷಿ ಯೋಜನೆಯು ವಿಶೇಷವಾಗಿ ಈಶಾನ್ಯದಲ್ಲಿ ಅದ್ಭುತಗಳನ್ನು ಮಾಡುತ್ತಿದೆ ಎಂದರು. ಕಳೆದ ವರ್ಷದ ಬಜೆಟ್‌ನಲ್ಲಿ ಸಹಜ ಕೃಷಿಗೆ ಸಂಬಂಧಿಸಿದ ನೀತಿಯನ್ನು ಸರ್ಕಾರ ಹೊರತಂದಿದೆ ಎಂದು ಅವರು ಮಾಹಿತಿ ನೀಡಿದರು. ಏಕ-ಸಂಸ್ಕೃತಿಯಿಂದ ಕೃಷಿಯನ್ನು ಉಳಿಸುವ ಮತ್ತು ಸ್ಥಳೀಯ ತಳಿಗಳ ಧಾನ್ಯಗಳು, ಸಿರಿಧಾನ್ಯಗಳು ಮತ್ತು ಇತರ ಬೆಳೆಗಳನ್ನು ಪುನರುಜ್ಜೀವಗೊಳಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಆಚಾರ್ಯ ವಿನೋಬಾ ಭಾವೆಯವರ ಅಭಿಪ್ರಾಯವನ್ನು ಸ್ಮರಿಸಿದ ಶ್ರೀ ಮೋದಿ, ಗ್ರಾಮ ಮಟ್ಟದ ಸಂಸ್ಥೆಗಳ ಚುನಾವಣೆಗಳು ವಿಭಜನೆಯ ಪ್ರವೃತ್ತಿಯನ್ನು ಹೊಂದಿವೆ ಎಂದು ಹೇಳಿದರು, ಗುಜರಾತ್‌ನಲ್ಲಿ ಪ್ರಾರಂಭವಾದ ಸಮರಸ ಗ್ರಾಮ ಯೋಜನೆಯ ಉದಾಹರಣೆಯನ್ನು ಅವರು ನೀಡಿದರು. ಒಮ್ಮತದ ಮೂಲಕ ನಾಯಕರನ್ನು ಆಯ್ಕೆ ಮಾಡಿದ ಗ್ರಾಮಗಳಿಗೆ ಕೆಲವು ಪ್ರೋತ್ಸಾಹಗಳನ್ನು ನೀಡಲಾಯಿತು, ಇದರಿಂದಾಗಿ ಸಾಮಾಜಿಕ ಸಂಘರ್ಷಗಳು ಕಡಿಮೆಯಾದವು ಎಂದು ಅವರು ತಿಳಿಸಿದರು.

ಗಾಂಧೀಜಿಯವರ ದರ್ಶನ ಪಡೆಯಲು ಸಾವಿರಾರು ಗ್ರಾಮಸ್ಥರು ರೈಲಿನ ಬಳಿಗೆ ಬಂದ ಸಂದರ್ಭವನ್ನು ಸ್ಮರಿಸಿದ ಪ್ರಧಾನಿ, ಮಹಾತ್ಮ ಗಾಂಧಿಯವರು ಅಖಂಡ ಮತ್ತು ಸ್ವತಂತ್ರ ಭಾರತಕ್ಕಾಗಿ ಹೋರಾಡಿದರು ಮತ್ತು ಗಾಂಧಿಗ್ರಾಮವೇ ಭಾರತದ ಏಕತೆಯ ಒಂದು ಕಥೆಯಾಗಿದೆ ಎಂದು ಹೇಳಿದರು. ತಮಿಳುನಾಡು ಯಾವಾಗಲೂ ರಾಷ್ಟ್ರೀಯ ಪ್ರಜ್ಞೆಯ ತವರು ಎಂದು ಅವರು ಹೇಳಿದರು. ಸ್ವಾಮಿ ವಿವೇಕಾನಂದ ಅವರು ಪಶ್ಚಿಮದಿಂದ ಹಿಂದಿರುಗಿದಾಗ ಪಡೆದ ವೀರೋಚಿತ ಸ್ವಾಗತವನ್ನು ನೆನಪಿಸಿಕೊಂಡರು. ದಿವಂಗತ ಜನರಲ್ ಬಿಪಿನ್ ರಾವತ್ ಅವರನ್ನು ಪ್ರಸ್ತಾಪಿಸಿ, ‘ವೀರ ವಣಕ್ಕಂ’ಘೋಷಣೆಗಳನ್ನು ಪ್ರಧಾನಿ ನೆನಪಿಸಿಕೊಂಡರು.

ಕಾಶಿಯಲ್ಲಿ ಸದ್ಯದಲ್ಲೇ ನಡೆಯಲಿರುವ ಕಾಶಿ ತಮಿಳು ಸಂಗಮಂ ಬಗ್ಗೆ ಎಲ್ಲರ ಗಮನ ಸೆಳೆದ ಪ್ರಧಾನಿ, ಕಾಶಿ ಮತ್ತು ತಮಿಳುನಾಡು ನಡುವಿನ ಬಾಂಧವ್ಯವನ್ನು ಆಚರಿಸುವುದಾಗಿ ಹೇಳಿದರು. ಇದು ಏಕ್ ಭಾರತ ಶ್ರೇಷ್ಠ ಭಾರತದ ಸಂಕೇತವಾಗಿದೆ. ಪರಸ್ಪರರ ಮೇಲಿನ ಈ ಪ್ರೀತಿ ಮತ್ತು ಗೌರವವೇ ನಮ್ಮ ಒಗ್ಗಟ್ಟಿನ ಆಧಾರವಾಗಿದೆ ಎಂದು ಅವರು ಹೇಳಿದರು.

ರಾಣಿ ವೇಲು ನಾಚಿಯಾರ್ ಅವರ ತ್ಯಾಗವನ್ನು ಸ್ಮರಿಸಿದ ಪ್ರಧಾನಿ, ಅವರು ಬ್ರಿಟಿಷರ ವಿರುದ್ಧ ಹೋರಾಡಲು ತಯಾರಿ ನಡೆಸುತ್ತಿದ್ದಾಗ ಇಲ್ಲಿಯೇ ಉಳಿದುಕೊಂಡಿದ್ದರು ಎಂದು ಉಲ್ಲೇಖಿಸಿದರು. ನಾರಿ ಶಕ್ತಿಯ ಬಲವನ್ನು ಕಂಡ ಪ್ರದೇಶದಲ್ಲಿ ಇಂದು ಇದ್ದೇನೆ. ಇಲ್ಲಿ ಪದವಿ ಪಡೆಯುತ್ತಿರುವ ಯುವತಿಯರು ದೊಡ್ಡ ಬದಲಾವಣೆ ತರುತ್ತೀರಿ ನೀವು ಗ್ರಾಮೀಣ ಮಹಿಳೆಯರಿಗೆ ಯಶಸ್ವಿಯಾಗಲು ಸಹಾಯ ಮಾಡುತ್ತೀರಿ. ಅವರ ಯಶಸ್ಸು ದೇಶದ ಯಶಸ್ಸು ಎಂದು ಪ್ರಧಾನಿ ಹೇಳಿದರು.

ಅದು ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನವಾಗಲಿ, ಬಡವರಿಗೆ ಆಹಾರ ಭದ್ರತೆಯಾಗಿರಲಿ ಅಥವಾ ವಿಶ್ವದ ಬೆಳವಣಿಗೆಯ ಎಂಜಿನ್ ಆಗಿರಲಿ, ಜಗತ್ತು ಒಂದು ಶತಮಾನದ ಅತ್ಯಂತ ಕೆಟ್ಟ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿಯೂ ಭಾರತವು ಉಜ್ವಲ ತಾಣವಾಗಿದೆ ಎಂದು ಪ್ರಧಾನಿ ಹೇಳಿದರು. ಭಾರತವು ಮಹತ್ತರವಾದ ಕೆಲಸಗಳನ್ನು ಮಾಡಬೇಕೆಂದು ಜಗತ್ತು ನಿರೀಕ್ಷಿಸುತ್ತದೆ. ಏಕೆಂದರೆ ಭಾರತದ ಭವಿಷ್ಯವು ‘ಮಾಡಬಲ್ಲೆ’ಎಂಬ ಪೀಳಿಗೆಯ ಯುವಜನರ ಕೈಯಲ್ಲಿದೆ. ಯುವಜನರು, ಸವಾಲುಗಳನ್ನು ಸ್ವೀಕರಿಸುವುದು ಮಾತ್ರವಲ್ಲದೆ ಅವುಗಳನ್ನು ಆನಂದಿಸುತ್ತಾರೆ, ಪ್ರಶ್ನಿಸುವುದು ಮಾತ್ರವಲ್ಲದೆ ಉತ್ತರಗಳನ್ನು ಸಹ ಕಂಡುಕೊಳ್ಳುತ್ತಾರೆ, ಅವರು ನಿರ್ಭೀತರು ಮಾತ್ರವಲ್ಲ ದಣಿವರಿಯದವರು, ಆಕಾಂಕ್ಷಿಗಳಷ್ಟೇ ಅಲ್ಲ ಸಾಧನೆಯನ್ನೂ ಮಾಡುತ್ತಾರೆ ಎಂದು ಪ್ರಧಾನಿ ಹೇಳಿದರು. ಇಂದು ಪದವೀಧರರಾಗುತ್ತಿರುವ ಯುವಜನರಿಗೆ ನನ್ನ ಸಂದೇಶವೆಂದರೆ, ನೀವು ನವಭಾರತದ ನಿರ್ಮಾತೃಗಳು. ಭಾರತವನ್ನು ಮುಂದಿನ 25 ವರ್ಷಗಳ ಕಾಲ ಅದರ ಅಮೃತ ಕಾಲದಲ್ಲಿ ಮುನ್ನಡೆಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಪ್ರಧಾನಿಯವರು ತಮ್ಮ ಭಾಷಣವನ್ನು ಮುಕ್ತಾಯ ಮಾಡಿದರು.

ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಶ್ರೀ ಎಂ. ಕೆ. ಸ್ಟಾಲಿನ್, ತಮಿಳುನಾಡು ರಾಜ್ಯಪಾಲ ಶ್ರೀ ಆರ್. ಎನ್. ರವಿ, ಕೇಂದ್ರದ ಸಹಾಯಕ ಸಚಿವ ಡಾ. ಎಲ್. ಮುರುಗನ್, ಕುಲಪತಿ ಡಾ. ಕೆ. ಎಂ. ಅಣ್ಣಾಮಲೈ ಮತ್ತು ಉಪಕುಲಪತಿ ಪ್ರೊ. ಗುರ್ಮೀತ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

 

*****